
ಅರೋಗ್ಯವರ್ಧನೆಗಾಗಿ ಬರಿ ತರಕಾರಿ, ಸೊಪ್ಪಿನ ರಸವನ್ನು ಸ್ವೀಕರಿಸುವ ಬದಲು ಸ್ವಲ್ಪ ರುಚಿಕರವಾದ ಖಾದ್ಯಗಳಾಗಿ ಸ್ವೀಕರಿಸಿದರೆ ನಾಲಿಗೆಗು ರುಚಿ, ಅರೋಗ್ಯಕ್ಕೂ ಉತ್ತಮ ಅಲ್ಲವೇ?? ಅಂತಹ ಕೆಲವು ಸೊಪ್ಪು, ತರಕಾರಿಗಳ ಸೂಪ್ ಗಳನ್ನು ತಯಾರಿಸುವ ವಿಧಾನ ಹಾಗೂ ಉಪಯೋಗಗಳನ್ನು ಈ ಲೇಖನದಲ್ಲಿ ಪ್ರಸ್ತುತ ಪಡಿಸಲಾಗಿದೆ.
ಪಾಲಕ್ ಸೂಪ್
ಬೇಕಾಗುವ ಪದಾರ್ಥಗಳು –
- ಪಾಲಕ್ 2 ಕಟ್ಟು
- ಈರುಳ್ಳಿ 1
- ಬೆಣ್ಣೆ 2 ಚಮಚ
- ಕರಿ ಮೆಣಸಿನ ಪುಡಿ 1/4 ಚಮಚ
- ಕಾರ್ನ್ ಫ್ಲೋರ್ 2 ಚಮಚ
- ಉಪ್ಪು
ಮಾಡುವ ವಿಧಾನ –
ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದುಕೊಂಡು, ಚೆನ್ನಾಗಿ ಬೇಯಿಸಿಕೊಳ್ಳಬೇಕು. ತಣಿದ ನಂತರ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಒಂದು ಬಾಣಲೆಯಲ್ಲಿ ಬೆಣ್ಣೆ ಹಾಕಿ ಕರಗಿದ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹುರಿದು, ರುಬ್ಬಿಕೊಂಡ ಪಾಲಕ್ ಮಿಶ್ರಣ ಹಾಕಿ ಕುದಿಸಿಬೇಕು. ಕಾರ್ನ್ ಫ್ಲೋರ್ ನ್ನು ನೀರಲ್ಲಿ ಗಂಟಾಗದಂತೆ ಕರಗಿಸಿ, ಕುದಿಯುತ್ತಿರುವ ಪಾಲಕ್ ಮಿಶ್ರಣಕ್ಕೆ ಹಾಕಿ, ಅಗತ್ಯ ಇದ್ದಲ್ಲಿ ನೀರು ಹಾಕಿ ಒಂದು ನಿಮಿಷ ಕುದಿಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಹಾಕಿದ ನಂತರ ಓಲೆ ಆರಿಸಿ, ಸೂಪ್ ಬಟ್ಟಲಿಗೆ ಹಾಕಿ ಸವಿಯಬೇಕು.
ಉಪಯೋಗಗಳು –
- ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ, ಸಿ, ಕೆ ಇದ್ದು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಇತ್ಯಾದಿ ಖನಿಜಗಳನ್ನು ಹೊಂದಿದೆ.
- ಪಾಲಕ್ ಸೂಪ್ ಮೂಳೆಯ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ.
- ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮ.
- ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ಈ ಸೂಪ್ ಸಹಕಾರಿಯಾಗಿದೆ.
- ತೂಕವನ್ನು ನಿಯಂತ್ರಿಸಲು ಕೂಡ ಈ ಸೂಪ್ ಒಳ್ಳೆಯ ಆಹಾರ.
ಬಸಳೆ ಸೂಪ್
ಬೇಕಾಗುವ ಪದಾರ್ಥಗಳು –
- ಬಸಳೆ ಎಲೆಗಳು 10
- ಸೌತೆಕಾಯಿ 1/2 ಭಾಗ
- ಕ್ಯಾರೆಟ್ 1
- ಟೊಮೆಟೊ 1
- ಪುದೀನಾ 10 ಎಲೆಗಳು
- ತುಳಸಿ 5 ಎಲೆಗಳು
- ಕಲ್ಲು ಸಕ್ಕರೆ 1 ಚಮಚ
- ಕಾಳು ಮೆಣಸು 10 ಕಾಳು
- ಜೀರಿಗೆ 1 ಚಮಚ
- ಲವಂಗ 1
- ಉಪ್ಪು
- ಬೆಣ್ಣೆ
ಮಾಡುವ ವಿಧಾನ –
ಒಂದು ಬಾಣಲೆಗೆ ಬೆಣ್ಣೆ ಹಾಕಿ, ಕರಗಿದ ಮೇಲೆ ಜೀರಿಗೆ, ಕಾಳು ಮೆಣಸು, ಲವಂಗ ಹಾಕಿ ಕೈ ಆಡಿಸಿ, ನಂತರ ಬಸಳೆ ಎಲೆಗಳನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಇನ್ನೊಂದೆಡೆ ಟೊಮೆಟೊ, ಕ್ಯಾರೆಟ್, ಸೌತೆಕಾಯಿ ಎಲ್ಲವನ್ನು ಬೇಯಿಸಿಕೊಂಡು ರುಬ್ಬಿಕೊಳ್ಳಬೇಕು. ಮತ್ತೆ ಇನ್ನೊಂದೆಡೆ ಪುದೀನಾ, ತುಳಸಿ ಹಾಗೂ ಹುರಿದ ಬಸಳೆ ಸೊಪ್ಪಿನ ಮಿಶ್ರಣವನ್ನು ಮತ್ತೆ ರುಬ್ಬಿಕೊಳ್ಳಬೇಕು. ನಂತರ ಬಾಣಲೆಗೆ ಒಂದು ಚಮಚ ಬೆಣ್ಣೆ ಹಾಕಿ ರುಬ್ಬಿದ ಎರಡು ಮಿಶ್ರಣವನ್ನು ಸೇರಿಸಿ ಬೆರೆಸಬೇಕು. ನಂತರ ಕಲ್ಲುಸಕ್ಕರೆ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ, ಓಲೆ ಆರಿದ ಮೇಲೆ ಕೊತ್ತಂಬರಿ ಸೊಪ್ಪು ಸೇರಿಸಿ ಸವಿಯಬೇಕು.
ಉಪಯೋಗಗಳು –
- ಬಸಳೆಯು ವಿಟಮಿನ್ ಎ, ಬಿ, ಸಿ, ಕಬ್ಬಿಣ, ಕ್ಯಾಲ್ಸಿಯಂ, ನಾರಿನಾಂಶ, ಪ್ರೊಟೀನ್ ಇತ್ಯಾದಿ ಉತ್ತಮ ಗುಣವಾಹಕಗಳನ್ನು ಹೊಂದಿದೆ.
- ದೇಹಕ್ಕೆ ಬಹಳ ತಂಪಾಗಿದ್ದು, ಬೇಸಿಗೆಗೆ ಉತ್ತಮ ಆಹಾರ.
- ಸುಲಭ ಜೀರ್ಣ ಕ್ರಿಯೆಗೆ ಸಹಕಾರಿಯಾಗಿದೆ.
- ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮ, ಕಣ್ಣಿನ ಅಂಚಿನಲ್ಲಿ ಉಷ್ಣದಿಂದ ಹುಟ್ಟುವ ಗುಳ್ಳೆಗಳು ಕಡಿಮೆ ಮಾಡಲು ಇದು ಉತ್ತಮವಾಗಿದೆ.
- ತೂಕ ಇಳಿಸಲು ಕೂಡ ಸಹಕಾರಿಯಾಗಿದೆ.
- ಹೊಟ್ಟೆ ಹುಣ್ಣು, ಬಾಯಿ ಹುಣ್ಣುಗಳಿಗೂ ಉತ್ತಮ ಆಹಾರವಾಗಿದೆ.
ಬೀಟ್ ರೂಟ್ ಸೂಪ್
ಬೇಕಾಗುವ ಪದಾರ್ಥಗಳು –
- ಬೀಟ್ ರೂಟ್ 1
- ಬಟಾಟೆ 1
- ಕ್ಯಾರೆಟ್ 1
- ಟೊಮೆಟೊ 1
- ಕಾರ್ನ್ ಫ್ಲೋರ್ 2 ಚಮಚ
- ಶುಂಠಿ 1 ಇಂಚು
- ಜೀರಿಗೆ ಪುಡಿ 1/4 ಚಮಚ
- ಕಾಳು ಮೆಣಸಿನ ಪುಡಿ 1/4 ಚಮಚ
- ಬ್ಯಾಡಗಿ ಮೆಣಸಿನ ಪುಡಿ ಖಾರಕ್ಕೆ ಅನುಗುಣವಾಗಿ
- ಕೊತ್ತಂಬರಿ ಸೊಪ್ಪು
- ಬೆಣ್ಣೆ
- ಉಪ್ಪು,ಸಕ್ಕರೆ ರುಚಿಗೆ ತಕ್ಕಷ್ಟು
ಮಾಡುವ ವಿಧಾನ –
ಬೀಟ್ ರೂಟ್, ಕ್ಯಾರೆಟ್, ಟೊಮೆಟೊ, ಬಟಾಟೆ ಎಲ್ಲವನ್ನು ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ಮಿಕ್ಸಿಯಲ್ಲಿ ಬೆಂದ ತರಕಾರಿ ಹಾಗೂ ಶುಂಠಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಬಾಣಲೆಗೆ ಹಾಕಿ, ಅಗತ್ಯವಿದ್ದರೆ ನೀರನ್ನು ಸೇರಿಸಬೇಕು. ಕಾರ್ನ್ ಫ್ಲೋರ್ ನ್ನು ನೀರಲ್ಲಿ ಗಂಟಾಗದಂತೆ ಕರಗಿಸಿ, ಅದನ್ನು ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಿ, ಉಪ್ಪು, ಸಕ್ಕರೆ, ಜೀರಿಗೆ ಪುಡಿ, ಕರಿ ಮೆಣಸಿನ ಪುಡಿ, ಬ್ಯಾಡಗಿ ಮೆಣಸಿನ ಪುಡಿ, ಸ್ವಲ್ಪ ಬೆಣ್ಣೆ ಎಲ್ಲವನ್ನು ಹಾಕಿ ಕುದಿಸಬೇಕು, ನಂತರ ಓಲೆ ಆರಿಸಿ ಸೂಪ್ ಅನ್ನು ಕೊತ್ತಂಬರಿ ಸೊಪ್ಪು ಹಾಗೂ ಬೆಣ್ಣೆಯಿಂದ ಅಲಂಕರಿಸಿ ಸವಿಯಬೇಕು.
ಉಪಯೋಗಗಳು –
- ಕೊಲೆಸ್ಟ್ರೋಲ್ ನಿಯಂತ್ರಿಸಲು ಇದು ಉತ್ತಮ ಸೂಪ್ ಇದಾಗಿದೆ.
- ರಕ್ತದ ಒತ್ತಡವನ್ನು ಕೂಡ ನಿಯಂತ್ರಿಸುತ್ತದೆ.
- ಮರೆವಿನ ಖಾಯಿಲೆ ಜಾಸ್ತಿಯಾಗಿದ್ದರೆ ಈ ಸೂಪನ್ನು ಕುಡಿಯಲೇ ಬೇಕು.
- ಯಕೃತ್ತಿನ ಆರೋಗ್ಯಕ್ಕೆ ಕೂಡ ಉತ್ತಮವಾಗಿದೆ.
- ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.
ಟೊಮೆಟೊ ಸೂಪ್
ಬೇಕಾಗುವ ಪದಾರ್ಥಗಳು –
- ಟೊಮೆಟೊ 3
- ಕಾರ್ನ್ ಫ್ಲೋರ್ 2 ಚಮಚ
- ತುಪ್ಪ 3 ಚಮಚ
- ಈರುಳ್ಳಿ 1
- ಕರಿ ಮೆಣಸಿನ ಪುಡಿ 1/4 ಚಮಚ
- ಉಪ್ಪು
ಮಾಡುವ ವಿಧಾನ –
ಟೊಮೆಟೊ ಹಣ್ಣುಗಳನ್ನು ಚೆನ್ನಾಗಿ ಬೇಯಿಸಿ, ಮಿಕ್ಸಿಯಲ್ಲಿ ನುಣ್ಣಗೆ ಕಡೆದುಕೊಳ್ಳಬೇಕು. ನಂತರ ಒಂದು ಬಾಣಲೆಗೆ ತುಪ್ಪ ಹಾಕಿ, ಬ್ರೆಡ್ ಗಳನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಬೇಕು. ಅದೇ ಬಾಣಲೆಗೆ ಈರುಳ್ಳಿ ಹಾಕಿ ಹುರಿದು, ರುಬ್ಬಿದ ಟೊಮೆಟೊ ಮಿಶ್ರಣವನ್ನು ಸೇರಿಸಿ ಕುದಿಸಬೇಕು. ಕಾರ್ನ್ ಫ್ಲೋರ್ ನ್ನು ನೀರಲ್ಲಿ ಗಂಟಾಗದಂತೆ ಕರಗಿಸಿ, ಕುದಿಯುತ್ತಿರುವ ಟೊಮೆಟೊ ಮಿಶ್ರಣಕ್ಕೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಹಾಕಿದ ನಂತರ ಓಲೆ ಆರಿಸಿ, ಸೂಪ್ ಬಟ್ಟಲಿಗೆ ಹಾಕಿ, ಮೇಲೆ ಹುರಿದ ಬ್ರೆಡ್ ಚುರುಗಳನ್ನು ಹಾಕಿ ಸವಿಯಬೇಕು.
ಉಪಯೋಗಗಳು –
- ಸೂಪ್ ಎಂದಾಕ್ಷಣ ಮೊದಲು ನೆನಪಾಗುವುದೇ ಟೊಮೆಟೊ ಸೂಪ್.
- ಚರ್ಮದ ಆರೋಗ್ಯಕ್ಕೆ ಉತ್ತಮವಾಗಿದ್ದು, ಜೀರ್ಣಕ್ರಿಯೆಗೂ ಸಹಕರಿಯಾಗಿದೆ.
ಸ್ವಾಸ್ತ್ಯಕ್ಕೆ ಹಿತವಾದ ಈ ಸೂಪಗಳನ್ನು ಸೇವಿಸಿ, ಉತ್ತಮ ಆರೋಗ್ಯವನ್ನು ರುಚಿಕರ ಸೂಪ್ ಗಳ ಸೇವನೆಯಿಂದ ಪಡೆದುಕೊಳ್ಳಬೇಕು. ಉತ್ತಮ ಸವಿಯ ಜೊತೆಗೆ ಅರೋಗ್ಯವನ್ನು ಹೊಂದಿರಿ ಎಂಬುದೊಂದು ಆಶಯ.
ಈ ಕೆಳಗಿನ ಲೇಖನಗಳು ನಿಮಗೆ ಉಪಯುಕ್ತವಾಗಬಹುದು
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.