
ಹಬ್ಬ ಎಂದ ಕೂಡಲೇ ಮೊದಲು ನೆನಪಾಗುವುದು ಸಿಹಿ ಊಟ. ಅದರಲ್ಲಿ ಮೊದಲಿಗೆ ಪಾಯಸ!!!! ಇನ್ನೇನು ಸ್ವಲ್ಪ ದಿನಗಳಲ್ಲೇ ವಿವಿಧ ಹಬ್ಬಗಳು ಒಂದರ ಹಿಂದೆ ಒಂದು ಬಂದೆ ಬಿಡುತ್ತದೆ. ಹಬ್ಬಕ್ಕೆ ರುಚಿಯಾದ, ಬಗೆ ಬಗೆಯ ಅಡುಗೆಗಳನ್ನು ತಯಾರಿಸುವುದು ಇದ್ದೇ ಇರುತ್ತದೆ. ಈ ಹಬ್ಬದ ಭೋಜನದಲ್ಲಿ ಇರಲೇಬೇಕಾದ ಸಿಹಿ ಎಂದರೆ ಪಾಯಸ. ನಾವು ಇಂದಿನ ಲೇಖನದಲ್ಲಿ ವಿವಿಧ ರುಚಿಕರ ಪಾಯಸಗಳ ತಯಾರಿಕಾ ವಿಧಾನಗಳನ್ನು ಅರಿಯೋಣ.
ಅವಲಕ್ಕಿ ಪಾಯಸ
ಬೇಕಾಗುವ ಪದಾರ್ಥಗಳು
- ದಪ್ಪ ಅವಲಕ್ಕಿ 2 ಕಪ್
- ಅಕ್ಕಿ ಹಿಟ್ಟು ½ ಕಪ್
- ತೆಂಗಿನಕಾಯಿ ತುರಿ 2 ಕಪ್
- ಬೆಲ್ಲ 1 ಕಪ್
- ಏಲಕ್ಕಿ ಪುಡಿ ½ ಚಮಚ
- ತುಪ್ಪ ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ತೆಂಗಿನಕಾಯಿ ತುರಿಯನ್ನು ರುಬ್ಬಿಕೊಂಡು, ತೆಂಗಿನಕಾಯಿ ಹಾಲನ್ನು ಹಿಂಡಿಕೊಳ್ಳಬೇಕು. ಈ ತೆಂಗಿನಕಾಯಿ ಹಾಲಿಗೆ ಮೇಲೆ ಹೇಳಿದ ಪ್ರಮಾಣದಲ್ಲಿ ಅಕ್ಕಿ ಹಿಟ್ಟನ್ನು ಸೇರಿಸಿಕೊಂಡು ಗಂಟಾಗದಂತೆ ಕಲಸಿಕೊಳ್ಳಬೇಕು. ಈಗ ಒಂದು ಬಾಣಲೆಗೆ ಒಂದು ಕಪ್ ನೀರನ್ನು ಹಾಗೂ ಒಂದು ಕಪ್ ಬೆಲ್ಲವನ್ನು ಸೇರಿಸಿ, ಕುದಿಸಿಕೊಳ್ಳಬೇಕು. ಈಗ ಕುದಿಯುತ್ತಿರುವ ಬೆಲ್ಲದ ಪಾಕಕ್ಕೆ ತೊಳೆದು, ಹಿಂಡಿಕೊಂಡ ಅವಲಕ್ಕಿಯನ್ನು ಸೇರಿಸಬೇಕು. ನಂತರ ಅಕ್ಕಿ ಹಿಟ್ಟು ಹಾಗೂ ತೆಂಗಿನ ಹಾಲಿನ ಮಿಶ್ರಣವನ್ನು ಸೇರಿಸಿ, ತಳ ಹಿಡಿಯದಂತೆ ಕೈ ಆಡಿಸಬೇಕು. ಚೆನ್ನಾಗಿ ಕುದಿ ಬಂದ ನಂತರ ಓಲೆಯನ್ನು ಆರಿಸಬೇಕು. ಕೊನೆಯಲ್ಲಿ ಮೇಲಿಂದ ಸ್ವಲ್ಪ ತುಪ್ಪ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಕಲಸಿದರೆ, ರುಚಿಯಾದ ಅವಲಕ್ಕಿ ಪಾಯಸ ಸವಿಯಲು ಸಿದ್ದವಾಗುತ್ತದೆ.
ಸಾಬಕ್ಕಿ ಪಾಯಸ
ಬೇಕಾಗುವ ಪದಾರ್ಥಗಳು
- ಸಾಬಕ್ಕಿ ½ ಕಪ್
- ಹಾಲು 2 ಕಪ್
- ಸಕ್ಕರೆ ½ ಕಪ್
- ದ್ರಾಕ್ಷಿ
- ಗೋಡಂಬಿ
- ತುಪ್ಪ
- ಏಲಕ್ಕಿ ಪುಡಿ ½ ಚಮಚ
ಮಾಡುವ ವಿಧಾನ
ಮೊದಲಿಗೆ ಸಾಬಕ್ಕಿಯನ್ನು ಎರಡರಿಂದ ಮೂರು ಗಂಟೆಗಳ ಕಾಲ ನೆನೆಸಬೇಕು. ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ನೀರಿನೊಂದಿಗೆ ಸಾಬಕ್ಕಿಯನ್ನು ಬೇಯಲು ಇಡಬೇಕು. ಸಾಬಕ್ಕಿ ಬೇಯುತ್ತಿರುವಾಗ ಮೇಲೆ ಹೇಳಿದ ಪ್ರಮಾಣದಲ್ಲಿ ಹಾಲು ಹಾಗೂ ಸಕ್ಕರೆಯನ್ನು ಬೆರೆಸಿ, ಕುದಿಸಬೇಕು. ಚೆನ್ನಾಗಿ ಕುದಿ ಬಂದ ನಂತರ ಒಲೆಯನ್ನು ಆರಿಸಬೇಕು. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಸೇರಿಸಿ, ಏಲಕ್ಕಿ ಪುಡಿಯನ್ನು ಕೂಡ ಬೆರೆಸಿ ಕಲಸಿದರೆ, ರುಚಿಯಾದ ಸಾಬಕ್ಕಿ ಪಾಯಸ ಸವಿಯಲು ಸಿದ್ದವಾಗುತ್ತದೆ.
ಸಾಬಕ್ಕಿಯನ್ನು ನೀರನ್ನು ಬಳಸದೆ ಬರಿ ಹಾಲಿನಿಂದಲೂ ಕೂಡ ಬೇಯಿಸಬಹುದು.
ಕಡ್ಲೆಬೇಳೆ ಪಾಯಸ
ಬೇಕಾಗುವ ಪದಾರ್ಥಗಳು
- ಕಡ್ಲೆಬೇಳೆ 1 ಕಪ್
- ತೆಂಗಿನಕಾಯಿ ತುರಿ 3 ಕಪ್
- ಬೆಲ್ಲ ½ ಕಪ್
- ತುಪ್ಪ 2 ಚಮಚ
- ಗೋಡಂಬಿ
- ನೆನೆಸಿದ ಅಕ್ಕಿ 3 ಚಮಚ
- ದ್ರಾಕ್ಷಿ
- ಏಲಕ್ಕಿ ಪುಡಿ ½ ಚಮಚ
ಮಾಡುವ ವಿಧಾನ
ಮೊದಲಿಗೆ ಕಡ್ಲೆಬೇಳೆಯನ್ನು ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಬೇಕು. ನಂತರ ಒಂದು ಕುಕ್ಕರ್ ನಲ್ಲಿ ಕಡ್ಲೆಬೇಳೆಯನ್ನು ನೀರಿನ ಜೊತೆಯಲ್ಲಿ ಬೇಯಿಸಿಕೊಳ್ಳಬೇಕು. ಕಾಯಿತುರಿಯನ್ನು ರುಬ್ಬಿಕೊಂಡು ಹಾಲನ್ನು ಹಿಂಡಿಕೊಳ್ಳಬೇಕು. ಹಾಗೆಯೇ ಅಕ್ಕಿಯನ್ನು ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಈಗ ಒಂದು ಬಾಣಲೆಗೆ ಬೇಯಿಸಿದ ಕಡ್ಲೆಬೇಳೆ, ಹಿಂಡಿಕೊಂಡ ತೆಂಗಿನ ಹಾಲು ಹಾಗೂ ಬೆಲ್ಲವನ್ನು ಹಾಕಿ ಕುದಿಸಬೇಕು. ಜೊತೆಗೆ ತರಿ ತರಿಯಾಗಿ ರುಬ್ಬಿಕೊಂಡ ಅಕ್ಕಿಯನ್ನು ಕೂಡ ಸೇರಿಸಿಕೊಳ್ಳಬೇಕು. ಎಲ್ಲವನ್ನು ಕೂಡ ಸೇರಿಸಿ, ಕಲಸಿ ಚೆನ್ನಾಗಿ ಕುದಿಸಬೇಕು. ಕೊನೆಯಲ್ಲಿ ಏಲಕ್ಕಿ ಪುಡಿ ಹಾಗೂ ತುಪ್ಪದಲ್ಲಿ ಹುರಿದ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಸೇರಿಸಿಕೊಳ್ಳಬೇಕು. ಅಲ್ಲಿಗೆ ರುಚಿಕರ ಕಡ್ಲೆಬೇಳೆ ಪಾಯಸ ಸವಿಯಲು ಸಿದ್ದವಾಗುತ್ತದೆ.
ಹೆಸರುಬೇಳೆ ಪಾಯಸ
ಬೇಕಾಗುವ ಪದಾರ್ಥಗಳು
- ಹೆಸರುಬೇಳೆ 1 ಕಪ್
- ಸಾಬಕ್ಕಿ ½ ಕಪ್
- ಬೆಲ್ಲ ¾ ಕಪ್
- ನೆನೆಸಿದ ಅಕ್ಕಿ ½ ಕಪ್
- ತೆಂಗಿನ ಕಾಯಿ ತುರಿ 3 ಕಪ್
- ಏಲಕ್ಕಿ ಪುಡಿ ½ ಚಮಚ
- ಒಣದ್ರಾಕ್ಷಿ
- ಗೋಡಂಬಿ
- ತುಪ್ಪ
ಮಾಡುವ ವಿಧಾನ
ಮೊದಲಿಗೆ ಸ್ವಲ್ಪ ಹೊತ್ತು ಹೆಸರುಬೇಳೆಯನ್ನು ಹಾಗೂ ಸಾಬಕ್ಕಿಯನ್ನು ನೆನೆಸಬೇಕು. ಅನಂತರ ನೆನೆಸಿದ ಅಕ್ಕಿಯನ್ನು ತರಿತರಿಯಾಗಿ ರುಬ್ಬಿಕೊಳ್ಳಬೇಕು. ಹಾಗೆಯೇ ತೆಂಗಿನಕಾಯಿ ತುರಿಯನ್ನು ರುಬ್ಬಿಕೊಂಡು, ತೆಂಗಿನ ಹಾಲನ್ನು ಹಿಂಡಿಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರಿನೊಂದಿಗೆ ಹೆಸರುಬೇಳೆಯನ್ನು ಬೇಯಲು ಇಡಬೇಕು. ಹೆಸರುಬೇಳೆ ಅರ್ಧ ಬೆಂದ ನಂತರ ಸಾಬಕ್ಕಿಯನ್ನು ಸೇರಿಸಿಕೊಂಡು ಬೇಯಿಸಬೇಕು. ನಂತರ ಬೆಲ್ಲವನ್ನು ಸೇರಿಸಿ, ಕುದಿಸಿಕೊಳ್ಳಬೇಕು. ನಂತರ ರುಬ್ಬಿಕೊಂಡ ಅಕ್ಕಿ ಹಾಗೂ ಕಾಯಿಹಾಲನ್ನು ಸೇರಿಸಿಕೊಂಡು ಸಣ್ಣ ಉರಿಯಲ್ಲಿ ಕುದಿಸಬೇಕು. ಚೆನ್ನಾಗಿ ಕುದಿ ಬಂದ ನಂತರ ಒಲೆಯನ್ನು ಆರಿಸಬೇಕು. ಕೊನೆಯಲ್ಲಿ ಏಲಕ್ಕಿ ಪುಡಿ ಹಾಗೂ ತುಪ್ಪದಲ್ಲಿ ಹುರಿದ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಸೇರಿಸಬೇಕು. ಅಲ್ಲಿಗೆ ರುಚಿಕರ ಹೆಸರುಬೇಳೆ ಪಾಯಸ ಸವಿಯಲು ಸಿದ್ದವಾಗುತ್ತದೆ.
ಗೋಧಿಕಡಿ ಪಾಯಸ
ಬೇಕಾಗುವ ಪದಾರ್ಥಗಳು
- ಗೋಧಿಕಡಿ 1 ಕಪ್
- ಬೆಲ್ಲ 1 ಕಪ್
- ತೆಂಗಿನಕಾಯಿ ತುರಿ 3 ಕಪ್
- ತುಪ್ಪ
- ಏಲಕ್ಕಿ ಪುಡಿ ½ ಚಮಚ
- ದ್ರಾಕ್ಷಿ
- ಗೋಡಂಬಿ
- ಸ್ವಲ್ಪ ಉಪ್ಪು
ಮಾಡುವ ವಿಧಾನ
ಗೋಧಿಕಡಿಯನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಬೇಕು. ಕಾಯಿತುರಿಯನ್ನು ರುಬ್ಬಿಕೊಂಡು ಹಾಲು ಹಿಂಡಿಕೊಳ್ಳಬೇಕು. ಒಂದು ಕುಕ್ಕರ್ ನಲ್ಲಿ ಗೋಧಿಕಡಿಯನ್ನು ನೀರಿನೊಂದಿಗೆ ಬೇಯಲು ಇಡಬೇಕು. ಒಂದು ಬಾಣಲೆಗೆ ಬೇಯಿಸಿದ ಗೋಧಿಕಡಿಯನ್ನು ಸೇರಿಸಿ, ಜೊತೆಗೆ ಮೇಲೆ ಹೇಳಿದ ಪ್ರಮಾಣದಲ್ಲಿ ಬೆಲ್ಲವನ್ನು ಸೇರಿಸಿಕೊಳ್ಳಬೇಕು. ಬೆಲ್ಲವು ಪಾಕವಾಗಿ ಕುದಿಯಲು ಆರಂಭವಾದಾಗ ಕಾಯಿಹಾಲನ್ನು ಸೇರಿಸಬೇಕು. ನಂತರ ಸ್ವಲ್ಪ ರುಚಿಗೆ ಉಪ್ಪನ್ನು ಕೂಡ ಸೇರಿಸಬೇಕು. ಚೆನ್ನಾಗಿ ಕುದಿ ಬಂದ ನಂತರ ಒಲೆಯನ್ನು ಆರಿಸಬೇಕು. ಕೊನೆಯಲ್ಲಿ ಏಲಕ್ಕಿ ಪುಡಿ ಹಾಗೂ ತುಪ್ಪದಲ್ಲಿ ಹುರಿದ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಸೇರಿಸಿದರೆ ಗೋಧಿಕಡಿ ಪಾಯಸ ಸವಿಯಲು ಸಿದ್ದವಾಗುತ್ತದೆ.
ರವೆ ಪಾಯಸ
ಬೇಕಾಗುವ ಪದಾರ್ಥಗಳು
- ರವೆ 1 ಕಪ್
- ತೆಂಗಿನಕಾಯಿ ತುರಿ 2 ಕಪ್
- ಸಕ್ಕರೆ ¾ ಕಪ್
- ತುಪ್ಪ
- ಗೋಡಂಬಿ
- ದ್ರಾಕ್ಷಿ
- ಏಲಕ್ಕಿ ಪುಡಿ ½ ಚಮಚ
- ಚಿಟಿಕೆ ಉಪ್ಪು
ಮಾಡುವ ವಿಧಾನ
ಮೊದಲಿಗೆ ತೆಂಗಿನಕಾಯಿ ತುರಿಯನ್ನು ರುಬ್ಬಿಕೊಂಡು ಕಾಯಿ ಹಾಲನ್ನು ಹಿಂಡಿಕೊಳ್ಳಬೇಕು. ಒಂದು ಬಾಣಲೆಗೆ ಸ್ವಲ್ಪ ತುಪ್ಪವನ್ನು ಸೇರಿಸಿ, ರವೆಯನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ನಂತರ ಮೂರು ಕಪ್ ನೀರನ್ನು ಕುದಿಸಿಕೊಳ್ಳಬೇಕು. ಈ ಕುದಿಯುವ ನೀರಿಗೆ, ಹುರಿದ ರವೆಯನ್ನು ಸೇರಿಸಿಕೊಳ್ಳಬೇಕು. ರವೆ ಬೇಯುವಾಗ, ಸಕ್ಕರೆ, ತೆಂಗಿನ ಹಾಲು ಹಾಗೂ ಚಿಟಿಕೆ ಉಪ್ಪನ್ನು ಸೇರಿಸಿಕೊಂಡು ಕುದಿಸಿಕೊಳ್ಳಬೇಕು. ಚೆನ್ನಾಗಿ ಕುದಿ ಬಂದ ನಂತರ ಒಲೆಯನ್ನು ಆರಿಸಿಕೊಳ್ಳಬೇಕು. ಕೊನೆಯಲ್ಲಿ ಏಲಕ್ಕಿ ಪುಡಿ ಹಾಗೂ ತುಪ್ಪದಲ್ಲಿ ಹುರಿದ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಸೇರಿಸಿದರೆ ರುಚಿಕರ ರವೆ ಪಾಯಸ ಸವಿಯಲು ಸಿದ್ದವಾಗುತ್ತದೆ.
ಸಿಹಿ ಕುಂಬಳಕಾಯಿ ಪಾಯಸ
ಬೇಕಾಗುವ ಪದಾರ್ಥಗಳು
- ಸಿಹಿ ಕುಂಬಳಕಾಯಿ 2 ಕಪ್
- ಕಡ್ಲೆಬೇಳೆ ½ ಕಪ್
- ತೆಂಗಿನಕಾಯಿ ತುರಿ 1 ಕಪ್
- ಗಸಗಸೆ 3 ಚಮಚ
- ಬೆಲ್ಲ ½ ಕಪ್
- ತುಪ್ಪ
- ಏಲಕ್ಕಿ ಪುಡಿ ½ ಚಮಚ
ಮಾಡುವ ವಿಧಾನ
ಸಿಹಿ ಕುಂಬಳಕಾಯಿಯನ್ನು ಸಿಪ್ಪೆ ಹಾಗೂ ಬೀಜವನ್ನು ತೆಗೆದುಕೊಂಡು, ತುರಿದುಕೊಳ್ಳಬೇಕು. ಹಾಗೆಯೇ ಗಸಗಸೆಯನ್ನು ಸ್ವಲ್ಪ ಹುರಿದುಕೊಂಡು, ಕಾಯಿತುರಿಯೊಂದಿಗೆ ಸೇರಿಸಿಕೊಂಡು ರುಬ್ಬಿಕೊಳ್ಳಬೇಕು. ಇನ್ನೊಂದು ಕಡೆಯಲ್ಲಿ ಕಡ್ಲೆಬೇಳೆಯನ್ನು ಒಂದು ಕುಕ್ಕರ್ ನಲ್ಲಿ ಹಾಕಿ ನೀರಿನೊಂದಿಗೆ ಬೇಯಿಸಿಕೊಳ್ಳಬೇಕು. ಈಗ ಒಂದು ಬಾಣಲೆಗೆ ತುಪ್ಪವನ್ನು ಸೇರಿಸಿಕೊಂಡು, ತುರಿದ ಸಿಹಿ ಕುಂಬಳಕಾಯಿಯನ್ನು ಸೇರಿಸಿಕೊಂಡು ಹುರಿಯಬೇಕು. ಈಗ ಬೇಯಿಸಿದ ಕಡ್ಲೆಬೇಳೆಯನ್ನು ಸೇರಿಸಿಕೊಳ್ಳಬೇಕು. ಹಾಗೆಯೇ ರುಬ್ಬಿಕೊಂಡ ಕಾಯಿ ಹಾಗೂ ಗಸಗಸೆಯ ಮಿಶ್ರಣವನ್ನು ಸೇರಿಸಬೇಕು, ಜೊತೆಯಲ್ಲೇ ಬೆಲ್ಲವನ್ನು ಸೇರಿಸಿ ಕುದಿಸಿಕೊಳ್ಳಬೇಕು. ಬೇಕಾದರೆ ಮಾತ್ರ ಸ್ವಲ್ಪ ನೀರನ್ನು ಸೇರಿಸಿಕೊಳ್ಳಬೇಕು. ಚೆನ್ನಾಗಿ ಕುದಿ ಬಂದ ನಂತರ ಒಲೆಯನ್ನು ಆರಿಸಬೇಕು. ಕೊನೆಯಲ್ಲಿ ಏಲಕ್ಕಿ ಪುಡಿಯನ್ನು ಬೆರೆಸಿದರೆ ಬಿಸಿ ಬಿಸಿಯಾದ ಸಿಹಿ ಕುಂಬಳಕಾಯಿ ಪಾಯಸ ಸವಿಯಲು ಸಿದ್ದವಾಗುತ್ತದೆ.
ಸೋರೆಕಾಯಿ ಪಾಯಸ
ಬೇಕಾಗುವ ಪದಾರ್ಥಗಳು
- ಸೋರೆಕಾಯಿ 2 ಕಪ್
- ತೆಂಗಿನಕಾಯಿ ತುರಿ 2 ಕಪ್
- ನೆನೆಸಿದ ಅಕ್ಕಿ ½ ಕಪ್
- ಬೆಲ್ಲ ¾ ಕಪ್
- ಏಲಕ್ಕಿ ಪುಡಿ ½ ಚಮಚ
- ತುಪ್ಪ
ಮಾಡುವ ವಿಧಾನ
ಮೊದಲಿಗೆ ನೆನೆಸಿದ ಅಕ್ಕಿಯನ್ನು ರುಬ್ಬಿಕೊಳ್ಳಬೇಕು. ಹಾಗೆಯೇ ತೆಂಗಿನಕಾಯಿ ತುರಿಯನ್ನು ರುಬ್ಬಿಕೊಂಡು ಕಾಯಿಹಾಲನ್ನು ಹಿಂಡಿಕೊಳ್ಳಬೇಕು. ಈಗ ಸೋರೆಕಾಯಿಯ ಬೀಜಗಳು ಹಾಗೂ ಸಿಪ್ಪೆಗಳನ್ನು ತೆಗೆದು ತುರಿದುಕೊಳ್ಳಬೇಕು. ಒಂದು ಬಾಣಲೆಯಲ್ಲಿ ಸ್ವಲ್ಪ ನೀರು ಹಾಕಿ, ತುರಿದ ಸೋರೆಕಾಯಿಯನ್ನು ಸೇರಿಸಿಕೊಂಡು, ಬೇಯಿಸಿಕೊಳ್ಳಬೇಕು. ನಂತರ ಬೆಲ್ಲವನ್ನು ಸೇರಿಸಬೇಕು. ಚೆನ್ನಾಗಿ ಕುದಿ ಬಂದ ನಂತರ ತೆಂಗಿನಕಾಯಿ ಹಾಲು ಹಾಗೂ ರುಬ್ಬಿಕೊಂಡ ಅಕ್ಕಿಯನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ಚೆನ್ನಾಗಿ ಕುದಿ ಬಂದ ನಂತರ ಒಲೆಯನ್ನು ಆರಿಸಬೇಕು. ಕೊನೆಯಲ್ಲಿ ಮೇಲಿಂದ ತುಪ್ಪವನ್ನು ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿಕೊಳ್ಳಬೇಕು. ಅಲ್ಲಿಗೆ ರುಚಿಕರ ಸೋರೆಕಾಯಿ ಪಾಯಸ ಸವಿಯಲು ಸಿದ್ದವಾಗುತ್ತದೆ.
ಹಾಗೆಯೇ ಸೋರೆಕಾಯಿ ಎಳೆತಾಗಿದ್ದರೆ ಬೀಜ ಹಾಗೂ ಸಿಪ್ಪೆಯನ್ನು ತೆಗೆಯುವ ಅವಶ್ಯಕತೆ ಇರುವುದಿಲ್ಲ, ಹಾಗೆಯೇ ತುರಿದುಕೊಳ್ಳಬಹುದು.
ಇಂದಿನ ಲೇಖನದಲ್ಲಿ ಎಂಟು ರೀತಿಯ ವಿವಿಧ ಪಾಯಸಗಳನ್ನು ತಯಾರಿಸುವ ವಿಧಾನಗಳ ಬಗ್ಗೆ ಅರಿತಿದ್ದೇವೆ. ಈ ರೀತಿ ಮನೆಯಲ್ಲೇ ತಯಾರಿಸಿದ ಪಾಯಸಗಳು ಅರೋಗ್ಯಕ್ಕೂ ಕೂಡ ಹಿತವಾಗಿದೆ. ಬೇಳೆ ಕಾಳುಗಳು, ತರಕಾರಿಗಳಿಂದ ತಯಾರಿಸಬಹುದಾದ ಪಾಯಸಗಳು ಅತಿ ರುಚಿಯಾಗಿರುತ್ತವೆ, ಹಾಗೆಯೇ ಅರೋಗ್ಯವರ್ಧಕವು ಕೂಡ ಹೌದು. ಹಬ್ಬದ ಸಮಯದಲ್ಲಿ ವಿವಿಧ ರೀತಿಯ ಪಾಯಸಗಳನ್ನು ತಯಾರಿಸಿ, ಖುಷಿಯಿಂದ ಸವಿಯಿರಿ ಎಂಬುದು ಈ ಲೇಖನದ ಉದ್ದೇಶವಾಗಿದೆ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.
