
ಈ ಲೇಖನದಲ್ಲಿ ನಾವು ನಮ್ಮ ಮನೆಯಲ್ಲಿ ತ್ಯಾಜ್ಯವೆಂದು ಭಾವಿಸುವ ತರಕಾರಿ ಮತ್ತು ಹಣ್ಣುಗಳ ಸಿಪ್ಪೆಗಳ ಮೂಲಕ ರುಚಿಕರವಾದ, ಆರೋಗ್ಯಕರ ಹಾಗೂ ಪರಿಸರ ಸ್ನೇಹಿ ಅಡುಗೆಗಳ ವಿಧಾನವನ್ನು ಪರಿಚಯಿಸುತ್ತಿದ್ದೇವೆ.
ನಮ್ಮ ದಿನ ನಿತ್ಯದ ಅಡುಗೆಗಳಲ್ಲಿ ಹಲವಾರು ತರಕಾರಿ ಮತ್ತು ಹಣ್ಣುಗಳನ್ನು ಬಳಸುತ್ತೇವೆ ಹಾಗೆಯೇ ಅವುಗಳ ಸಿಪ್ಪೆಗಳು ಕೂಡ ಪೋಷಕಾಂಶಗಳಿಂದ ಕೂಡಿವೆ ಎಂಬುದನ್ನು ಮರೆತು, ಅವುಗಳಲ್ಲಿ ಇರುವ ಪೌಷ್ಟಿಕಾಂಶವನ್ನು ಗುರುತಿಸದೆ, ತ್ಯಾಜ್ಯವನ್ನಾಗಿ ಮಾಡಿ ಬಿಸಾಕಲಾಗುತ್ತದೆ. ಇಂತಹ ಸಿಪ್ಪೆಗಳು ಕೇವಲ ತ್ಯಾಜ್ಯವಲ್ಲ, ಬದಲಾಗಿ ಹೊಸ ರುಚಿಗಳನ್ನು ಸೃಷ್ಟಿ ಮಾಡುವ, ಖಾದ್ಯಗಳಿಗೆ ವಿಶಿಷ್ಟವಾದ ರುಚಿ ಮತ್ತು ಪೌಷ್ಟಿಕಾಂಶಗಳನ್ನು ನೀಡುವ ಪದಾರ್ಥಗಳಾಗಿವೆ.
ಈ ಲೇಖನದ ಮೂಲಕ ನೀವು ಸಿಪ್ಪೆಗಳ ಉಪಯೋಗದಿಂದ ಹೇಗೆ ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ಮತ್ತು ಶೂನ್ಯ-ತ್ಯಾಜ್ಯದ ಅಡುಗೆಗಳನ್ನು ತಯಾರಿಸಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಿ. ಪರಿಸರವನ್ನು ರಕ್ಷಿಸುವುದು ಮತ್ತು ಆರೋಗ್ಯಕರ ಆಯ್ಕೆಯನ್ನು ಬೆಳೆಸಿಕೊಳ್ಳುವುದರ ಜೊತೆಗೆ, ಇದು ನಿಮ್ಮ ಅಡುಗೆಮನೆಯಲ್ಲಿ ಹೊಸ ಸೃಜನಶೀಲ ಆಲೋಚನೆಗಳನ್ನು ಹುಟ್ಟಿಸಲು ಪ್ರೇರಣೆಯಾಗುತ್ತದೆ.
ಹೀರೇಕಾಯಿ ಸಿಪ್ಪೆ ಚಟ್ನಿ

ಬೇಕಾಗುವ ಪದಾರ್ಥಗಳು:
- ಹೀರೇಕಾಯಿ ಸಿಪ್ಪೆ ಒಂದು ಕಪ್
- ಕಾಯಿ ತುರಿ ಒಂದು ಕಪ್
- ಹುಣಸೆ ಹಣ್ಣು ಸ್ವಲ್ಪ
- ಹಸಿ ಮೆಣಸು ಖಾರಕ್ಕೆ ಅನುಗುಣವಾಗಿ
- ಶುಂಠಿ ಸಣ್ಣ ಚೂರು
- ಉಪ್ಪು
- ಒಗ್ಗರಣೆಗೆ ಸಾಸಿವೆ,ಎಣ್ಣೆ,ಬ್ಯಾಡಗಿ ಮೆಣಸು ಹಾಗು ಕರಿಬೇವು
ಮಾಡುವ ವಿಧಾನ
ಹೀರೇಕಾಯಿ ಸಿಪ್ಪೆ, ಕಾಯಿ ತುರಿ,ಹುಣಸೆ ಹಣ್ಣು, 2 ಹಸಿ ಮೆಣಸು ಹಾಗು ಸಣ್ಣ ಶುಂಠಿ ಚೂರು, ಉಪ್ಪು ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣಕ್ಕೆ ಒಗ್ಗರಣೆ ಕೊಟ್ಟರೆ ರುಚಿಯಾದ ಚಟ್ನಿ ಊಟಕ್ಕೆ ರುಚಿಯಾಗಿರುತ್ತದೆ. ಸ್ವಲ್ಪ ನೀರನ್ನು ಸೇರಿಸಿಕೊಂಡರೆ ಅನ್ನಕ್ಕೆ ಕಾಯಿ ತಂಬುಳಿಯಾಗು ಬಳಸಬಹುದು.
ಪ್ರಯೋಜನಗಳು
ಹೀರೇಕಾಯಿ ನಾರಿನ ಅಂಶ ಜಾಸ್ತಿ ಇರುವುದರಿಂದ ಇದು ದೇಹದ ಆರೋಗ್ಯಕ್ಕೆ ತುಂಬಾ ತಂಪು ಹಾಗು ಉತ್ತಮ.
ಬಾಳೆ ಹಣ್ಣಿನ ಸಿಪ್ಪೆ ತಂಬುಳಿ

ಬೇಕಾಗುವ ಪದಾರ್ಥಗಳು:
- ಒಂದು ಬಾಳೆ ಹಣ್ಣಿನ ಸಿಪ್ಪೆ
- ಜೀರಿಗೆ 1/2 ಚಮಚ
- ಕರಿ ಮೆಣಸು 1/4 ಚಮಚ
- ಕಾಯಿತುರಿ ಒಂದು ಕಪ್
- ಮೊಸರು
- ಒಗ್ಗರಣೆಗೆ ಸಾಸಿವೆ, ತುಪ್ಪ, ಬ್ಯಾಡಗಿ ಮೆಣಸಿನ ಕಾಯಿ ಮತ್ತು ಕರಿಬೇವು.
ಮಾಡುವ ವಿಧಾನ
ಬಾಳೆ ಹಣ್ಣಿನ ಸಿಪ್ಪೆಯನ್ನು ಸಣ್ಣದಾಗಿ ಕತ್ತರಿಸಿ ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ತಣಿದ ನಂತರ ಸಿಪ್ಪೆ ಜೊತೆಗೆ ಜೀರಿಗೆ, ಕರಿ ಮೆಣಸು, ಕಾಯಿ ತುರಿ ಹಾಕಿ ನುಣ್ಣನೆ ರುಬ್ಬಿಕೊಂಡು ಒಂದು ಪಾತ್ರೆಗೆ ವರ್ಗಾಯಿಸಬೇಕು. ಮೊಸರು ಹಾಕಿ ಹಾಗೆಯೇ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ಸಾಸಿವೆ,ಮೆಣಸು ಹಾಗು ಕರಿಬೇವಿನ ಒಗ್ಗರಣೆ ಕೊಟ್ಟರೆ ಬಾಳೆ ಸಿಪ್ಪೆ ತಂಬುಳಿ ಸವಿಯಲು ಸಿದ್ಧ.
ಪ್ರಯೋಜನಗಳು
- ವಿಟಮಿನ್ ಎ ಇರುವಿಕೆಯೂ ಕಣ್ಣಿನ ರಕ್ಷಣೆಗೆ ಹಾಗು ಆರೋಗ್ಯಕ್ಕೆ ಉತ್ತಮವಾಗಿದೆ.
- ಪಾಲಿಫಿನಲ್ ಹಾಗು ಆಂಟಿ ಆಕ್ಸಿಡೆಂಟ್ ಗಳ ಇರುವಿಕೆಯ್ಯಿಂದ ಕ್ಯಾನ್ಸರ್ ಕಾರಕ ಅಂಶಗಳನ್ನು ನಾಶಗೊಳಿಸುತ್ತದೆ.
- ಚರ್ಮದ ಸುರಕ್ಷತೆಗೆ ಹಾಗು ಕೂದಲ ಬೆಳವಣಿಗೆಗೆ ಸಹಾಯಕವಾಗಿದೆ.
- ಚೆನ್ನಾಗಿ ನಿದ್ರೆ ಹೊಂದಲು ಉತ್ತಮ ಪದಾರ್ಥವಾಗಿದೆ.
- ಬಾಳೆ ಹಣ್ಣು ಎಂದರೆ ಮಲಬದ್ಧತೆಗೆ ರಾಮಬಾಣ ಸರಿ, ಸಿಪ್ಪೆಯಲ್ಲಿ ಕೂಡ ಈ ಅಂಶ ವಿದ್ದು ಉತ್ತಮವಾಗಿದೆ.
ಸೀಮೆ ಬದನೆ ಸಿಪ್ಪೆ ತಂಬುಳಿ

ಬೇಕಾಗುವ ಪದಾರ್ಥಗಳು:
- ಸೀಮೆ ಬದನೇಕಾಯಿ ಸಿಪ್ಪೆ
- ಜೀರಿಗೆ ½ ಚಮಚ
- ಬ್ಯಾಡಗಿ ಮೆಣಸು 1
- ಕಾಯಿತುರಿ ಒಂದು ಕಪ್
- ಮೊಸರು
- ಒಗ್ಗರಣೆಗೆ ಸಾಸಿವೆ, ತುಪ್ಪ, ಬ್ಯಾಡಗಿ ಮೆಣಸಿನ ಕಾಯಿ ಮತ್ತು ಕರಿಬೇವು.
ಮಾಡುವ ವಿಧಾನ
ಸೀಮೆ ಬದನೆಕಾಯಿ ಸಿಪ್ಪೆಯನ್ನು ಎಣ್ಣೆ ಹಾಕಿ ಚೆನ್ನಾಗಿ ಹುರಿಯಬೇಕು. ಹುರಿದ ಸಿಪ್ಪೆಯೊಂದಿಗೆ ಜೀರಿಗೆ, ಕೆಂಪು ಮೆಣಸು, ತೆಂಗಿನ ತುರಿ ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿದ್ದಕ್ಕೆ ಮೊಸರು ಹಾಗು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಬೇಕು. ಸಾಸಿವೆ,ಮೆಣಸು ಹಾಗು ಕರಿಬೇವಿನ ಒಗ್ಗರಣೆ ಕೊಟ್ಟರೆ ಸೀಮೆ ಬದನೆಯ ತಂಬುಳಿ ಸವಿಯಲು ಸಿದ್ಧ.
ಪ್ರಯೋಜನಗಳು
ಸೀಮೆ ಬದನೇಕಾಯಿ ನಾರು, ಖನಿಜ,ಪೊಟ್ಯಾಷಿಯಂ ಹಾಗು ಕ್ಯಾಲ್ಸಿಯಂ ಅಂಶಗಳನ್ನು ಹೊಂದಿದ್ದು ಉತ್ತಮ ಶಕ್ತಿ ವರ್ಧಕವಾಗಿದೆ. ಮಕ್ಕಳು, ವಯೋ ವೃದ್ಧರು ಹಾಗು ಗರ್ಭಿಣಿ ಸ್ತ್ರೀಯರಿಗೆ ಉತ್ತಮವಾಗಿದೆ.
ಕಿತ್ತಳೆ ಸಿಪ್ಪೆಯ ಚಟ್ನಿ

ಬೇಕಾಗುವ ಪದಾರ್ಥಗಳು:
- ಕಿತ್ತಳೆ ಸಿಪ್ಪೆ 1 ಕಪ್
- ಕಡ್ಲೆಬೇಳೆ 1 ಚಮಚ
- ಉದ್ದಿನಬೇಳೆ 1 ಚಮಚ
- ಒಣಮೆಣಸು 10
- ಶುಂಠಿ 1 ಇಂಚು
- ತೆಂಗಿನಕಾಯಿ ತುರಿ ½ ಕಪ್
- ಹುಣಸೆ ಹಣ್ಣು ಸ್ವಲ್ಪ
- ಬೆಲ್ಲ 1 ಚಮಚ
- ಕರಿಬೇವು
- ಸಾಸಿವೆ ½ ಚಮಚ
- ಹಿಂಗು ಸ್ವಲ್ಪ
- ಎಣ್ಣೆ
- ಉಪ್ಪು
ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ, ಕಾದ ನಂತರ ಒಂದು ಚಮಚ ಕಡ್ಲೆಬೇಳೆ, ಒಂದು ಚಮಚ ಉದ್ದಿನಬೇಳೆ ಹಾಕಿ ಕೆಂಪಾಗುವ ತನಕ ಹುರಿಯಬೇಕು. ನಂತರ ಒಣಮೆಣಸಿನಕಾಯನ್ನು ಸೇರಿಸಿ ಹುರಿಯಬೇಕು. ನಂತರ ಈ ಹುರಿದ ಪದಾರ್ಥಗಳನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು. ನಂತರ ಅದೇ ಬಾಣಲೆಗೆ ಮತ್ತೆ ಎರಡು ಚಮಚ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿದ ಶುಂಠಿ ಹಾಗೂ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಹಾಕಿ ಹಸಿ ವಾಸನೆ ಹೋಗಿ, ಕಿತ್ತಳೆಯ ಸಿಪ್ಪೆ ಕೆಂಪಾಗುವ ತನಕ ಹುರಿಯಬೇಕು. ಹುರಿದ ಶುಂಠಿ ಹಾಗೂ ಕಿತ್ತಳೆ ಸಿಪ್ಪೆಯನ್ನು ಕೂಡ ಅದೇ ಮಿಕ್ಸಿ ಜಾರಿಗೆ ಹಾಕಿ ಒಮ್ಮೆ ರುಬ್ಬಿಕೊಳ್ಳಬೇಕು. ನಂತರ ಅದೇ ಮಿಕ್ಸಿ ಜಾರಿಗೆ ಹುಣಸೆಹಣ್ಣು, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕಾಯಿತುರಿಯನ್ನು ಹಾಕಿ ಸ್ವಲ್ಪ ನೀರಿನೊಂದಿಗೆ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಹಾಗೆಯೇ ಒಂದು ಪಾತ್ರೆಗೆ ವರ್ಗಯಿಸಿಕೊಳ್ಳಬೇಕು. ಕೊನೆಯಲ್ಲಿ ಹಿಂಗು, ಸಾಸಿವೆ ಹಾಗೂ ಕರಿಬೇವಿನ ಒಗ್ಗರಣೆ ನೀಡಿದರೆ ಕಿತ್ತಳೆ ಸಿಪ್ಪೆಯ ಚಟ್ನಿ ಸವಿಯಲು ಸಿದ್ದವಾಗುತ್ತದೆ.
ಪ್ರಯೋಜನಗಳು
- ಕಿತ್ತಳೆ ಹಣ್ಣು ಉತ್ತಮ ವಿಟಮಿನ್ ಸಿ ಯ ಗಣಿಯಾಗಿದ್ದು, ಕಿತ್ತಳೆ ಸಿಪ್ಪೆ ಕೂಡ ಅದೇ ಆರೋಗ್ಯಕರ ಅಂಶಗಳನ್ನು ಹೊಂದಿದೆ.
- ಚರ್ಮದ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಇಂತಹ, ತರಕಾರಿ ಮತ್ತು ಹಣ್ಣಿನ ಸಿಪ್ಪೆಗಳ ಪುನರುಪಯೋಗದಿಂದ ನಾವು ಆರೋಗ್ಯಕರ, ಸೃಜನಶೀಲ ಹಾಗೂ ಪರಿಸರ ಸ್ನೇಹಿ ಅಡುಗೆ ಪದ್ಧತಿಗಳನ್ನು ರೂಪಿಸಬಹುದು. ಈ ಪರಿಕಲ್ಪನೆಯು ಶೂನ್ಯ-ತ್ಯಾಜ್ಯದ ತತ್ವವನ್ನು ಉತ್ತೇಜಿಸಿ, ನಿತ್ಯಜೀವನದಲ್ಲಿ ಹೊಸ ಚೈತನ್ಯ ಮತ್ತು ಅನ್ವೇಷಣೆಗೆ ದಾರಿ ಮಾಡಿಕೊಡಲಿ ಎಂಬುದೊಂದು ಆಶಯ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.
Pingback: ಆರೋಗ್ಯಕ್ಕೆ ಉಪಯುಕ್ತವಾಗಿರುವ ತರಕಾರಿ ಹಾಗೂ ಸೊಪ್ಪುಗಳ ಸೂಪ್ - ಗೃಹಸ್ನೇಹಿ - ನಿಸರ್ಗದ ಮಡಿಲಲ್ಲಿ ಅರಳಿದ ಆರೋಗ್