
ಮನುಷ್ಯನ ದೇಹವು ತುಂಬಾ ಸೂಕ್ಷ್ಮವಾಗಿದ್ದು, ಒಂದು ಸಮಸ್ಯೆಯಿಂದ ಇನ್ನೊಂದು ಸಮಸ್ಯೆಗೆ ಕೊಂಡಿಯನ್ನು ಬೇಗ ಹೆಣೆದುಕೊಳ್ಳುತ್ತದೆ. ಉದಾಹರಣೆಗೆ ಮೊದಲು ಸಣ್ಣ ತಲೆ ಭಾರ ಉಂಟಾಗಿ ಅದೇ ಗಂಟಲು ಕೆರತಕ್ಕೆ ನಾಂದಿಯಾಗಿ, ಮೂಗು ಸೋರಲು ಆರಂಭವಾಗಿ ನೆಗಡಿಯಾಗುತ್ತದೆ. ನೆಗಡಿಯಿಂದ ಕೆಲವೊಮ್ಮೆ ಮೂಗಿನಿಂದ ಕಫ ಹೊರಬಂದರು, ಇನ್ನೂ ಉಳಿದ ಕಫ ಎದೆಯಲ್ಲೇ ಗಟ್ಟಿಯಾಗಿ ಉಳಿದುಕೊಳ್ಳುತ್ತದೆ. ಈ ಗಟ್ಟಿಯಾದ ಕಫ ಕೆಮ್ಮು ಹಾಗು ಹಲವು ಶ್ವಾಸ ಸಂಬಂಧಿ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತದೆ. ಹಾಗಾಗಿ ಈ ಗಟ್ಟಿಯಾದ ಕಫವನ್ನು ಕರಗಿಸುವ ಬಗೆಯನ್ನು ತಿಳಿಯಬೇಕು. ಹಲವಾರು ವಿಧಾನಗಳಿದ್ದು ಸುಲಭವಾದ, ಚುಟುಕಾದ ಹಾಗು ತ್ವರಿತ ಪರಿಹಾರ ನೀಡಬಲ್ಲ ಕೆಲವು ಪರಿಹಾರಗಳನ್ನು ಈಗ ಕಂಡುಕೊಳ್ಳೋಣ.
ನೆಗಡಿಗೆ ಅತ್ಯುತ್ತಮ ಮನೆಮದ್ದುಗಳು
- ಮಜ್ಜಿಗೆ ಹುಲ್ಲನ್ನು ಹೆಚ್ಚಿಕೊಂಡು ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಿ ಅದಕ್ಕೆ ಕರಿ ಮೆಣಸನ್ನು ಒಂದು 5 ಕಾಳು ಹಾಕಿ ಕುದಿಸಬೇಕು. ನಂತರ ಶೋಧಿಸಿಕೊಂಡು ಕುಡಿಯುವುದರಿಂದ ನೆಗಡಿ ಕಡಿಮೆಯಾಗುತ್ತದೆ.
- ಇದೇ ರೀತಿ ಒಂದೆಲಗದ ಸೊಪ್ಪನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಅದಕ್ಕೆ ಕರಿ ಮೆಣಸಿನ ಪುಡಿ ಸೇರಿಸಿ ಮತ್ತೆ ಕುದಿಸಿ ಶೋಧಿಸಿ ಕುಡಿಯುದು ಕೂಡ ನೆಗಡಿಗೆ ಪರಿಹಾರವಾಗಿದೆ.
- ತುಳಸಿ ಎಲೆಯ ಕಷಾಯ ತಯಾರಿಸಿ ಕುಡಿಯುವುದು. ತುಳಸಿ ಎಲೆಯನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಿ ಅದು ಅರ್ಧದಷ್ಟು ನೀರು ಇಂಗುವವರೆಗೂ ಕುದಿಸಿ ನಂತರ ಶೋಧಿಸಿ ಕುಡಿಯುವುದರಿಂದ ನೆಗಡಿ ಕಡಿಮೆಯಾಗಿ ಮುಂದೆ ಬರಬಹುದಾದ ಕೆಮ್ಮನ್ನು ತಡೆಗಟ್ಟುತ್ತದೆ.
- ನೆಗಡಿಯ ಸಮಯದಲ್ಲಿ ಹಸಿ ಈರುಳ್ಳಿ ತಿನ್ನುವುದರಿಂದ ಕೂಡ ಶೀತಕ್ಕೆ ಉಪಶಮನ ಸಿಗುತ್ತದೆ.
- ಹಸಿ ಈರುಳ್ಳಿಯನ್ನು ತಿನ್ನಲು ಕಷ್ಟ ವಾದರೆ, ಈರುಳ್ಳಿಯನ್ನು ಸ್ವಲ್ಪ ಹಬೆಯಲ್ಲಿ ಬೇಯಿಸಿ, ಈರುಳ್ಳಿಯ ಒಳ ಪದರವನ್ನು ಜೇನುತುಪ್ಪದೊಂದಿಗೆ ಸೇವಿಸಬೇಕು.
- ನುಗ್ಗೆಸೊಪ್ಪು ಕೂಡ ಒಳ್ಳೆಯ ಮೂಲಿಕೆಯಾಗಿದೆ. ನುಗ್ಗೆಸೊಪ್ಪನ್ನು ಚೆನ್ನಾಗಿ ಬೇಯಿಸಿ ನಂತರ ಶೋಧಿಸಿಕೊಳ್ಳಬೇಕು. ಶೋಧಿಸಿದ ರಸಕ್ಕೆ ಸ್ವಲ್ಪ ಉಪ್ಪು ಬೆರೆಸಿ ಕುಡಿಯುವುದರಿಂದ ನೆಗಡಿಗೆ ಉತ್ತಮವಾಗಿದೆ. ಇದನ್ನು ನುಗ್ಗೆಸೊಪ್ಪಿನ ಸೂಪ್ ಕೂಡ ಎನ್ನಬಹುದು.
- ಹಸಿ ಶುಂಠಿಯನ್ನು ಜಜ್ಜಿ ರಸ ತೆಗೆದು ಆ ರಸದೊಂದಿಗೆ ಜೇನುತುಪ್ಪ ಸೇರಿಸಿ ಕುಡಿದರೆ ನೆಗಡಿಯ ಜೊತೆ ತಲೆ ಸುತ್ತುವಿಕೆ ಕೂಡ ಕಡಿಮೆ ಆಗುತ್ತದೆ.
- ಮೂಗಿನ ಮೂಲಕ ಸ್ಟೀಮ್ ತೆಗೆದುಕೊಳ್ಳುವುದು ಕೂಡ ನೆಗಡಿಗೆ ಉತ್ತಮವಾಗಿದೆ. ನೀರಿಗೆ ಎನ್ನನ್ನು ಸೇರಿಸದೆ ಶುದ್ಧ ನೀರಿನ ಸ್ಟೀಮ್ ನ್ನೂ ತೆಗೆದುಕೊಳ್ಳುವುದು ಸೂಕ್ತ.
- ಬೆಳ್ಳುಳ್ಳಿಯನ್ನು ಹಸಿಯಾಗಿ ಕಚ್ಚಿ ತಿನ್ನುವುದರಿಂದ ಕೂಡ ನೆಗಡಿ ಕಡಿಮೆಯಾಗುತ್ತದೆ.
ನೆಗಡಿಗೆ ಅಮೃತಬಳ್ಳಿಯ ಉತ್ತಮ ಪರಿಣಾಮಕಾರಿ ಮನೆ ಕಷಾಯ
ಬೇಕಾಗುವ ಪದಾರ್ಥಗಳು-
- ಅಮೃತಬಳ್ಳಿ ಎಲೆ 5
- ಲವಂಗ 4
- ಜ್ಯೇಷ್ಠ ಮಧು 1 ತುಂಡು
- ಕಾಳು ಮೆಣಸು 10 ಕಾಳು
- ಒಣ ಶುಂಠಿ ಒಂದು ಇಂಚು
- ಸ್ವಲ್ಪ ಬೆಲ್ಲ
- ಹಿಪ್ಪಲಿ ಒಂದು
- ಈರುಳ್ಳಿ ಅರ್ಧ
- ಚಕ್ಕೆ ಒಂದು ಸಣ್ಣ ಚೂರು
ಮಾಡುವ ವಿಧಾನ-
ಎರಡು ದೊಡ್ಡ ಲೋಟ ನೀರಿಗೆ ಸ್ವಲ್ಪ ಜಜ್ಜಿದ ಅಮೃತಬಳ್ಳಿ ಎಲೆ, ಲವಂಗ, ಜ್ಯೇಷ್ಠ ಮಧು, ಕಾಳು ಮೆಣಸು, ಒಣ ಶುಂಠಿ, ಹಿಪ್ಪಲಿ, ಈರುಳ್ಳಿ, ಚಕ್ಕೆ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ನೀರು ಒಂದು ಲೋಟದಷ್ಟು ಆಗಬೇಕು. ನಂತರ ಕೊನೆಯಲ್ಲಿ ಸ್ವಲ್ಪ ಬೆಲ್ಲ ಸೇರಿಸಬೇಕು. ನಂತರ ಒಲೆ ಆರಿಸಿ ಮಿಶ್ರಣವನ್ನು ಶೋದಿಸಿಕೊಂಡು ಕುಡಿಯಬೇಕು. ಇದು ನೆಗಡಿಗೆ ರಾಮಬಾಣ ಎಂದರೆ ತಪ್ಪಾಗಲಾರದು.
ತಪ್ಪದೆ ಓದಿ – ಅಮೃತಬಳ್ಳಿಯ ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಬಳಕೆಯ ವಿಧಾನ!
ಕೆಮ್ಮು ಮತ್ತು ಕಫಕ್ಕೆ ಮನೆಯಲ್ಲೇ ತಯಾರಿಸಿ ರಾಮಬಾಣದಂತ ಮನೆಮದ್ದು
- ಅರ್ಧ ಚಮಚ ತುಪ್ಪ, ಅರ್ಧ ಚಮಚ ಹರಳೆಣ್ಣೆ ಹಾಗು ಅರ್ಧ ಚಮಚ ಶುದ್ಧ ಎಳ್ಳೆಣ್ಣೆಯನ್ನೂ ಒಂದು ಒಗ್ಗರಣೆ ಪಾತ್ರೆಗೆ ಹಾಕಿ, ಅದಕ್ಕೆ ತರಿ ತರಿಯಾಗಿ ಪುಡಿ ಮಾಡಿದ ಕಾಳುಮೆಣಸು ಒಂದು 1/4 ಚಮಚ ಸೇರಿಸಿ ಸ್ವಲ್ಪ ಬಿಸಿ ಮಾಡಿ ಒಂದು ಕುದಿಯ ನಂತರ ಒಲೆಯನ್ನು ಆರಿಸಿ ಮಿಶ್ರಣವನ್ನು ಶೋಧಿಸಿ, ಕಾಳುಮೆಣಸನ್ನು ಬಾಯಿಂದ ತಿಂದು, ಉಳಿದ ಎಣ್ಣೆಯನ್ನು ಬೆನ್ನಿಗೆ, ಎದೆಗೆ ಹಾಗು ಗಂಟಲಿನ ಭಾಗಕ್ಕೆ ಚೆನ್ನಾಗಿ ಸವರಬೇಕು. ಇದರಿಂದ ಎದೆಯಲ್ಲಿ ಗಟ್ಟಿಯಾದ ಕಫ ಕರಗುತ್ತದೆ.
- ಬಿಲ್ವಪತ್ರೆಯನ್ನು ಚೆನ್ನಾಗಿ ಅರೆದು ಎದೆಯ ಭಾಗಕ್ಕೆ ಚೆನ್ನಾಗಿ ಹಚ್ಚಿ ಸವರುವುದರಿಂದ ಎದೆಯಲ್ಲಿ ಕಟ್ಟಿದ ಕಫ ಕಡಿಮೆ ಆಗುತ್ತದೆ.
- ಒಂದು ಕಪ್ ಅಳತೆಯ ತುಳಸಿ ಎಲೆಯನ್ನು ಹಾಗು ಅರ್ಧ ಚಮಚ ಕರಿ ಮೆಣಸನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಶೋಧಿಸಿಕೊಂಡು ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿದರೆ ಕಟ್ಟಿದ ಕಫ ತಿಳಿಯಾಗುತ್ತದೆ.
- 100ಗ್ರಾಂ ಕೆಂಪು ಕಲ್ಲುಸಕ್ಕರೆಯನ್ನು ಚೆನ್ನಾಗಿ ಪುಡಿ ಮಾಡಿ ಅದಕ್ಕೆ ಕಲ್ಲು ಸಕ್ಕರೆ ಪುಡಿ ಮುಳುಗುವಷ್ಟು ಅಂದರೆ 2 ಲಿಂಬುವಿನ ರಸವನ್ನು ಹಿಂಡಿ ಕುದಿಸಬೇಕು. ಕುದಿಯುವಾಗ ತಳ ಹಿಡಿಯದಂತೆ ಕೈ ಆಡಿಸುತ್ತಾ ಇರಬೇಕು. ಚೆನ್ನಾಗಿ ಕುದಿ ಬಂದ ನಂತರ ಒಲೆ ಆರಿಸಬೇಕು. ಇದನ್ನು ನಿತ್ಯ ಎರಡು ಭಾರಿ ತೆಗೆದುಕೊಂಡರೆ ಕಫ ಕರಗುತ್ತದೆ.
ಸಪೋಟ ಕಾಯಿ ಟೀ - ಕೆಮ್ಮಿಗೆ ಸಂಜೀವಿನಿ
ಬೇಕಾಗುವ ಪದಾರ್ಥಗಳು-
- ಸಪೋಟ ಕಾಯಿ -2
- ಸಪೋಟ ಎಲೆ 2
- ಸಪೋಟ ಹೂವು 2
- ಜೇನುತುಪ್ಪ 1 ಚಮಚ
- ಲಿಂಬೆ ರಸ 1 ಚಮಚ
- ಏಲಕ್ಕಿ ಪುಡಿ 1/2 ಚಮಚ
ಮಾಡುವ ವಿಧಾನ-
ಸಪೋಟ ಕಾಯಿ, ಎಲೆ, ಹೂವುಗಳನ್ನು ಎರಡು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು. ಅರ್ಧದಷ್ಟು ನೀರು ಇಂಗಿದ ಮೇಲೆ ಒಲೆ ಆರಿಸಬೇಕು. ಶೋಧಿಸಿಕೊಂಡು ನಿಂಬೆರಸ, ಜೇನುತುಪ್ಪ, ಏಲಕ್ಕಿ ಪುಡಿ ಸೇರಿಸಿ ಬೆರೆಸಬೇಕು. ಅಲ್ಲಿಗೆ ಸಪೋಟ ಟೀ ಕುಡಿಯಲು ಸಿದ್ಧವಾಗುತ್ತದೆ. ಇದು ಎದೆಯಲ್ಲಿ ಗಟ್ಟಿಯಾಗಿರುವ ಹಳೆಯ ಕಫವನ್ನು ಕರಗಿಸಲು, ಕೆಮ್ಮು ನೆಗಡಿ ಹಾಗು ಫ್ಲೂ ಜ್ವರಕ್ಕೂ ಉತ್ತಮ ಮದ್ದಾಗಿದೆ.
(ಇನ್ನು ಸಪೋಟ ಬಗ್ಗೆ ಹೇಳುವುದಾದರೆ ಇದರಲ್ಲಿ ಅಧಿಕವಾದ ಕಬ್ಬಿಣ ಅಂಶವಿದ್ದು, ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇರುವವರು ದಿನಕ್ಕೆ ಒಂದು ಹಣ್ಣನ್ನು ತಿನ್ನಬೇಕು. ಹಾಗೆಯೇ ಗರ್ಭಿಣಿಯರು ಸಪೋಟ ಹಣ್ಣನ್ನು ತಿನ್ನುವುದರಿಂದ ಮಗುವಿಗೆ ರಕ್ತ ಹೀನತೆಯ ಸಮಸ್ಯೆ ಬರುವುದಿಲ್ಲ.)
ಎಲ್ಲ ಸಮಸ್ಯೆಗೂ ನಾವು ಮಾತ್ರೆಗಳ ಮೇಲೆ ಅವಲಂಬಿಸುವುದು ಈ ದಿನಮಾನದಲ್ಲಿ ಸಹಜವಾಗಿದೆ. ಕೆಲವು ಬಗೆಹರಿಯದ ಸಮಸ್ಯೆಗಳಿಗೆ ಮಾತ್ರೆಗಳು ಅತ್ಯವಶ್ಯಕ. ಆದರೆ ಸಣ್ಣ ಪ್ರಮಾಣದಲ್ಲಿ ನೆಗಡಿ, ಕೆಮ್ಮು ಮತ್ತು ಕಫಕ್ಕೆ ಮನೆಯಲ್ಲೇ ರಾಮಬಾಣದಂತಹ ಮನೆಮದ್ದುಗಳು ಇರುವಾಗ ಮಾತ್ರೆಗಳನ್ನು ಬಳಸಿ ಕಡಿಮೆ ಮಾಡಿಕೊಳ್ಳುವುದಕ್ಕಿಂತ ಪ್ರಕೃತಿದತ್ತ ವಸ್ತುಗಳ ಮೊರೆ ಹೋಗಿ ಕಡಿಮೆ ಮಾಡಿಕೊಂಡರೆ ಒಳ್ಳೆಯದಲ್ಲವೇ…? ಆನಂತರವೂ ಕಡಿಮೆ ಆಗದಿದ್ದಲ್ಲಿ ಮಾತ್ರೆಗಳ ಸಹಾಯ ಪಡೆದುಕೊಳ್ಳಬಹುದು.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.