
ನಮ್ಮ ದೇಹದ ಒಂದು ಮುಖ್ಯ ಭಾಗ ಎಂದರೆ ರಕ್ತ. ಕೆಂಪು ಬಣ್ಣದ ದ್ರವ, ನಮ್ಮ ಎಲ್ಲಾ ದೇಹದ ಎಲ್ಲಾ ಅಂಗಗಳಿಗೂ ಪೋಷಕಾಂಶಗಳನ್ನು ಒದಗಿಸುವ ಒಂದು ಉತ್ತಮ ಭಾಗವಾಗಿದೆ.
ರಕ್ತದ ಬಗೆಗಿನ ವೈಜ್ಞಾನಿಕ ವಿಚಾರಗಳು
ದೇಹದಲ್ಲಿನ ಹಲವು ಸಮಸ್ಯೆಗಳನ್ನು ಪತ್ತೆ ಹಚ್ಚಲು ನಾವು ಮೊದಲು ಮಾಡುವುದೇ ರಕ್ತ ಪರೀಕ್ಷೆ. ರಕ್ತ ಪರೀಕ್ಷೆ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ರಕ್ತವು ದೇಹದಲ್ಲಿ ಆಮ್ಲಜನಕವನ್ನು ಎಲ್ಲಾ ಅಂಗಗಳಿಗೆ ತಲುಪಿಸುವ ಮಾಡಿ, ಎಲ್ಲಾ ಅಂಗಗಳಿಂದ ಇಂಗಾಲದ ಡೈ ಆಕ್ಸೈಡ್ ನ್ನು ಮತ್ತೆ ಹೃದಯಕ್ಕೆ ತಲುಪಿಸುವ ಕೆಲಸವನ್ನು ಮಾಡುತ್ತದೆ. ಇಷ್ಟೇ ಅಲ್ಲದೆ ಮೊದಲೇ ಹೇಳಿದಂತೆ ದೇಹದ ಎಲ್ಲಾ ಭಾಗಗಳಿಗೆ ಪೋಷಕಾಂಶಗಳನ್ನು ತಲುಪಿಸುವ ಕೆಲಸವನ್ನು ಮಾಡುತ್ತದೆ. ದೇಹದ ತಾಪಮಾನವನ್ನು ನಿಯಂತ್ರಿಸುವ ಸಾಮರ್ಥ್ಯ ಕೂಡ ರಕ್ತಕ್ಕಿದೆ.
ಇನ್ನೂ ರಕ್ತದಲ್ಲಿ ನಾಲ್ಕು ಅಂಶಗಳು ಕೂಡಿದ್ದು, ಅವುಗಳು ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು, ಪ್ಲೇಟ್ ಲೆಟ್ ಗಳು ಹಾಗೂ ಪ್ಲಾಸ್ಮಾ.
- ಕೆಂಪು ರಕ್ತ ಕಣಗಳು ಆಮ್ಲಜನಕವನ್ನು ಪೂರೈಸುವ ಕೆಲಸವನ್ನು ಮಾಡುತ್ತದೆ. ಕೆಂಪು ರಕ್ತ ಕಣಗಳಲ್ಲಿ ಹಿಮೋಗ್ಲೋಬಿನ್ ಅಂಶವಿದ್ದು, ಇದು ರಕ್ತದ ಕೆಂಪು ಬಣ್ಣಕ್ಕೆ ಕಾರಣವಾಗಿದೆ.
- ಬಿಳಿ ರಕ್ತ ಕಣಗಳು ದೇಹದಲ್ಲಿನ ರೋಗ ನಿರೋಧಕ ಗುಣಗಳನ್ನು ವೃದ್ಧಿಸುತ್ತದೆ.
- ಪ್ಲೇಟ್ ಲೆಟ್ ಗಳು ರಕ್ತದ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸುವಲ್ಲಿ ಉತ್ತಮವಾಗಿದೆ.
- ಪ್ಲಾಸ್ಮಾ ಎಂಬುವುದು ರಕ್ತದಲ್ಲಿನ ನೀರು, ಪ್ರೊಟೀನ್ ಹಾಗೂ ಖನಿಜಗಳನ್ನು ಇನ್ನೂ ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ.
ಇನ್ನೂ ರಕ್ತದಲ್ಲಿ A+, B+ AB+, O+, A-, B-, AB-, O- ಎಂಬ ಗುಂಪುಗಳಿದ್ದು, ಅಂಟಿಜೆನ್ ಆಧಾರದ ಮೇಲೆ ವರ್ಗಿಕರಿಸಲಾಗುತ್ತದೆ. ಹಾಗೆಯೇ +, – ಗಳು Rh ಅಂಶದ ಇರುವಿಕೆ, ಇಲ್ಲದಿರುವಿಕೆಯ ಮೇಲೆ ಆಧರಿತವಾಗಿರುತ್ತದೆ.
ರಕ್ತದ ಪ್ರಮಾಣ ಕಡಿಮೆಯಾಗಿದ್ದರೆ ಈ ರೆಸಿಪಿಗಳು ಹಾಗೂ ಸುಲಭ ಮನೆಮದ್ದುಗಳನ್ನು ಒಮ್ಮೆ ಟ್ರೈ ಮಾಡಿ…
ಮಾನವನ ದೇಹ ಮೂಳೆ ಮಾಂಸದ ಕುಡಿಕೆ ಆದರೆ ರಕ್ತದ ಪರಿಚಲನೆ ಅದರ ಸುತ್ತ ಸಾಗುತ್ತಿರುತ್ತದೆ. ಅಂತಹ ಪರಿಶುದ್ಧ ರಕ್ತವು ಮಾನವನ ಆರೋಗ್ಯದ ಎಲ್ಲ ರೀತಿಯ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಏನೇ ರೋಗವಿದ್ದರು ಒಂದು ರಕ್ತ ಪರೀಕ್ಷೆಯಿಂದ ಕಂಡು ಹಿಡಿಯಬಹುದು ಎನ್ನುತ್ತಾರೆ, ಅಂತಹ ರಕ್ತದ ಪ್ರಮಾಣವೇ ದೇಹದಲ್ಲಿ ಕಡಿಮೆ ಆದರೆ ಅನೇಕ ತೊಂದರೆಗಳನ್ನು ನಾವು ಅನುಭವಿಸಬೇಕಾಗುತ್ತದೆ. ಅಂತಹ ತೊಂದರೆಗಳಿಂದ ದೂರವಿರಲು ಕೆಲವು ರುಚಿಕರ ರೆಸಿಪಿಗಳು ಹಾಗೂ ಸುಲಭ ಮನೆಮದ್ದುಗಳ ಬಗ್ಗೆ ಒಮ್ಮೆ ತಿಳಿದು ಅದರ ಉಪಯೋಗಗಳನ್ನು ಪಡೆದುಕೊಳ್ಳೋಣಾ ಅಲ್ಲವೇ…?
ರಕ್ತವನ್ನು ವೃದ್ಧಿಸುವ ರುಚಿಕರ ರೆಸಿಪಿಗಳು
ಸ್ವೀಟ್ ಕಾರ್ನ್ ಮತ್ತು ರಾಗಿ ಸೂಪ್
ಬೇಕಾಗುವ ಪದಾರ್ಥಗಳು
- ರಾಗಿ ಹಿಟ್ಟು ½ ಕಪ್
- ಸ್ವೀಟ್ ಕಾರ್ನ್ 1 ಕಪ್
- ಕ್ಯಾರೆಟ್
- ಹುರಳಿ ಕಾಯಿ
- ಕೊತ್ತಂಬರಿ ಸೊಪ್ಪು
- ನಿಂಬೆ ರಸ
- ಬೆಣ್ಣೆ
- ಕರಿ ಮೆಣಸಿನ ಪುಡಿ ಸ್ವಲ್ಪ
ಮಾಡುವ ವಿಧಾನ
ಬಾಣಲೆಗೆ ಬೆಣ್ಣೆ ಹಾಕಿ ಸ್ವೀಟ್ ಕಾರ್ನ್, ಸಣ್ಣಗೆ ಹೆಚ್ಚಿದ ಕ್ಯಾರೆಟ್ ಹಾಗು ಹುರುಳಿಕಾಯಿಯನ್ನೂ ಹಾಕಿ ಹುರಿಯಬೇಕು. ನಂತರ ಸ್ವಲ್ಪ ನೀರು ಹಾಕಿ ಕುದಿಸಬೇಕು. ಮತ್ತೊಂದು ಪಾತ್ರೆಯಲ್ಲಿ ರಾಗಿ ಹಿಟ್ಟನ್ನು ನೀರನಲ್ಲಿ ಗಂಟಾಗದಂತೆ ಕಲಸಿ ಅದನ್ನು ಕುದಿಯುತ್ತಿರುವ ಸ್ವೀಟ್ ಕಾರ್ನ್ ಇರುವ ಬಾಣಲೆಗೆ ಹಾಕಿ ಮತ್ತೆ ಕುದಿಸಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನಿಂಬೆ ರಸ ಹಾಗು ಒಂದು ಕಾಲು ಚಮಚ ಕರಿಮೆಣಸಿನ ಪುಡಿ ಹಾಕಿ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿದರೆ ಸ್ವೀಟ್ ಕಾರ್ನ್ ರಾಗಿ ಸೂಪ್ ರೆಡಿ.
ಪ್ರಯೋಜನಗಳು
- ಸ್ವೀಟ್ ಕಾರ್ನ್ ನಲ್ಲಿರುವ ಹೇರಳವಾದ ವಿಟಮಿನ್ ಗಳಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಯಾಗಿ, ರಕ್ತವನ್ನು ವೃದ್ಧಿಯಾಗಿಸುತ್ತದೆ. ಅಲ್ಲದೆ ಮೆದುಳಿನಲ್ಲಿ ರಕ್ತ ಸಂಚಾರವನ್ನು ಉತ್ತಮವಾಗಿ ನಡೆಯುವಲ್ಲಿ ಸಹಕಾರಿ ಆಗುತ್ತದೆ.
- ಕಣ್ಣಿನ ಆರೋಗ್ಯಕ್ಕೆ, ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.
- ರಾಗಿ ಸ್ವೀಟ್ ಕಾರ್ನ್ ಎರಡು ಮಧುಮೇಹಿಗಳಿಗೆ ಉತ್ತಮವಾಗಿದೆ.
- ರಾಗಿಯಲ್ಲಿನ ಕಬ್ಬಿಣದ ಅಂಶವು ಶಕ್ತಿವರ್ಧಕವಾಗಿದೆ.
ಗೋಧಿ ಹುಲ್ಲಿನ ಶರಬತ್ತು
ಬೇಕಾಗುವ ಪದಾರ್ಥಗಳು
- ತಾಜಾ ಗೋಧಿ ಹುಲ್ಲು
- ನಿಂಬೆ ರಸ
- ಜೇನುತುಪ್ಪ
- ಏಲಕ್ಕಿ ಪುಡಿ
ಮಾಡುವ ವಿಧಾನ
ಗೋಧಿ ಹುಲ್ಲನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಬೇಕು. ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಂಡು ಒಂದು ಪಾತ್ರೆಗೆ ಶೋಧಿಸಿಕೊಳ್ಳಬೇಕು. ನಂತರ ಒಂದು ಲೋಟ ಹುಲ್ಲಿನ ರಸಕ್ಕೆ ಒಂದು ಚಮಚೆ ಜೇನುತುಪ್ಪ, ಸ್ವಲ್ಪ ನಿಂಬೆ ರಸ ಹಾಗು ಏಲಕ್ಕಿ ಪುಡಿಯನ್ನು ಹಾಕಿ ಬೆರೆಸಿ ಕುಡಿಯಬೇಕು.
ಪ್ರಯೋಜನಗಳು
- ಗೋಧಿ ಹುಲ್ಲಿನಲ್ಲಿ ಹೇರಳವಾದ ಸುಮಾರು 70 ಪ್ರತಿಶತ ಕ್ಲೋರೊಫಿಲ್ ಇದ್ದು ಜೊತೆಗೆ ನಾರಿನಂಶ, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ ಕೂಡ ಇವೆ. ಮತ್ತು ವಿಟಮಿನ್ ಎ, ಬಿ, ಸಿ, ಕೆ ಇದ್ದು , ಬಿ-ಕಾಂಪ್ಲೆಕ್ಸ್ ಪ್ರೋಟಿನಗಳು ಕೂಡ ಜಾಸ್ತಿ ಪ್ರಮಾಣದಲ್ಲಿ ಇದೆ. 17 ತರಹದ ಅಮೈನೋ ಆ್ಯಸಿಡ್ ಗಳು ಕೂಡ ಇವೆ.
- ಮೇಲಿನ ಎಲ್ಲ ಕಾರಣಗಳಿಂದ ರಕ್ತ ವೃದ್ಧಿಗೆ ಇದು ಅಮೃತದಂತೆ ಕೆಲಸ ಮಾಡುತ್ತದೆ.
- ಅಡಿಯಿಂದ ಮುಡಿಯವರೆಗೆ ಎಲ್ಲ ದೇಹದ ಭಾಗ ಗಳಿಗೂ ಉತ್ತಮ ಪೋಸ್ಟಿಕಾಂಶಗಳನ್ನು ನೀಡುತ್ತದೆ.
- ತೂಕ ನಿಯಂತ್ರಣಕ್ಕೂ ಉತ್ತಮ ಟ್ರಾನಿಕ ಇದಾಗಿದೆ.
- ಯಕೃತ್ತನ್ನು ಕ್ರಿಯಾಶೀಲ ವಾಗಿರಿಸಿ, ಜೀರ್ಣಕ್ರಿಯೆಗೆ ಕೂಡ ಸಹಕಾರಿ ಆಗಿದೆ.
- ಋತು ಚಕ್ರದ ಹೊಟ್ಟೆ ನೋವಿಗೂ ಉತ್ತಮ ಔಷಧಿ ಇದಾಗಿದೆ.
- ನೆಗಡಿ, ಕಫ, ಚರ್ಮದ ರಕ್ಷಣೆಗೆ ಕೂಡ ಉತ್ತಮವಾಗಿದೆ.
ರಕ್ತಹೀನತೆಯನ್ನು ನಿವಾರಿಸಲು ಉಪಯುಕ್ತವಾಗುವ ಕೆಲವು ಮನೆಮದ್ದುಗಳು
- ಎಳ್ಳನ್ನು ಚೆನ್ನಾಗಿ ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಬೆಲ್ಲಡೊಡನೆ ಸೇವಿಸುವುದರಿಂದ ರಕ್ತ ವೃದ್ಧಿಯಾಗುತ್ತದೆ. ಎಳ್ಳು ಮತ್ತು ಬೆಲ್ಲ ಇವೆರಡು ಕಬ್ಬಿಣ ಹಾಗೂ ಕ್ಯಾಲ್ಸಿಯಂ ಭರಿತವಾಗಿದ್ದು ಆರೋಗ್ಯಕ್ಕೆ ಉತ್ತಮವಾಗಿದೆ.
- ಅಂಜೂರ, ಒಣದ್ರಾಕ್ಷಿ ಹಾಗೂ ಖರ್ಜುರ ಮೂರನ್ನು ಒಂದು ತಿಂಗಳು ಸತತವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ತಿನ್ನುವುದರಿಂದ ರಕ್ತ ವೃದ್ಧಿಯಾಗುತ್ತದೆ.
- ಅನಾನಸ್ ಹಣ್ಣಿನ ರಸಕ್ಕೆ ಜೇನುತುಪ್ಪ ಬೆರೆಸಿ ಕುಡಿಯುದು ರಕ್ತ ವೃದ್ಧಿಗೆ ಉತ್ತಮವಾಗಿದೆ.
- ಪ್ರತಿದಿನ ಹಸಿ ಕ್ಯಾರೆಟ್ ತಿನ್ನುವುದು ರಕ್ತದ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ.
- ನುಗ್ಗೆಸೊಪ್ಪು ಹಾಗೂ ನುಗ್ಗೆಸೊಪ್ಪಿನ ಹೂವು ಎರಡನ್ನು ಚೆನ್ನಾಗಿ ಕುದಿಸಬೇಕು. ನಂತರ ಶೋಧಿಸಿಕೊಂಡು ಸ್ವಲ್ಪ ಉಪ್ಪು ಬೆರೆಸಿ ಕುಡಿಯುವುದರಿಂದ ರಕ್ತ ವೃದ್ಧಿಯಾಗುತ್ತದೆ.
- ಕಬ್ಬಿಣದ ಗಣಿಯಾಗಿರುವ ಬಸಳೆಯನ್ನು ಆಹಾರದಲ್ಲಿ ಸ್ವೀಕರಿಸುವುದು ರಕ್ತ ವೃದ್ಧಿಗೆ ಅತಿ ಉತ್ತಮವಾಗಿದೆ.
- ಬೆಟ್ಟದ ನೆಲ್ಲಿಕಾಯಿಯನ್ನು ಚೆನ್ನಾಗಿ ರುಬ್ಬಿಕೊಂಡು, ಅದರ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುವುದರಿಂದ ರಕ್ತವು ಶುದ್ಧಿಯಾಗುತ್ತದೆ, ಹಾಗೆಯೇ ರಕ್ತವು ವೃದ್ಧಿಯಾಗುತ್ತದೆ.
ರಕ್ತದ ಶುದ್ಧತೆಗೆ ಉಪಯುಕ್ತವಾಗಿರುವ ಕೆಲವು ಟಿಪ್ಸ್ ಗಳು
- ದಾಳಿಂಬೆ ಹಣ್ಣಿನ ರಸವನ್ನು ಜೇನುತುಪ್ಪಡೊಡನೆ ನಿತ್ಯ ಸೇವಿಸಿದರೆ ರಕ್ತವು ಶುದ್ಧವಾಗುತ್ತದೆ.
- ಗರಿಕೆ ಹುಲ್ಲನ್ನು ಚೆನ್ನಾಗಿ ತೊಳೆದು ರುಬ್ಬಿಕೊಳ್ಳಬೇಕು. ನಂತರ ರಸವನ್ನು ಶೋಧಿಸಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ರಕ್ತವು ಶುದ್ಧವಾಗುತ್ತದೆ.
- ಬೀಟ್ ರೂಟ್ ಮತ್ತು ಕ್ಯಾರೆಟ್ ಜ್ಯೂಸ್ ನ್ನು ಕುಡಿಯುವುದು ಕೂಡ ರಕ್ತ ಶುದ್ಧತೆಗೆ ಉತ್ತಮ ಪರಿಹಾರವಾಗಿದೆ. ABC ಜ್ಯೂಸ್ ಕೂಡ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಸೇಬುಹಣ್ಣು, ಬೀಟ್ ರೂಟ್ ಮತ್ತು ಕ್ಯಾರೆಟ್ ನ್ನು ಹೋಳುಗಳಾಗಿ ಕತ್ತರಿಸಿ, ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಬೇಕು. ನಂತರ ಶೋಧಿಸಿ, ಸವಿಯಬೇಕು.
- ತುಳಸಿ ದಳಗಳನ್ನು ಜಜ್ಜಿ ರಸ ಹಿಂಡಿಕೊಳ್ಳಬೇಕು. ಅರ್ಧ ಲೋಟ ತುಳಸಿ ರಸವನ್ನು ಒಂದು ಲೋಟ ಮಜ್ಜಿಗೆಗೆ ಬೆರೆಸಿ, ಪ್ರತಿದಿನ ಬ್ರಾಹ್ಮೀ ಕಾಲದಲ್ಲಿ ಕುಡಿಯುವುದು ರಕ್ತ ಶುದ್ಧಿಗೆ ಉತ್ತಮವಾಗಿದೆ.
- ಕಬ್ಬಿಣ ಅಂಶವನ್ನು ಹೆಚ್ಚಿಸುವುದು ರಕ್ತದ ಆರೋಗ್ಯಕ್ಕೆ ಬಹಳ ಉತ್ತಮವಾಗಿದ್ದು, ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಕಬ್ಬಿಣದ ಅಂಶವು ದೇಹದಲ್ಲಿ ಜಾಸ್ತಿಯಾಗಿ, ರಕ್ತದ ಪ್ರಮಾಣ ಹೆಚ್ಚುತ್ತದೆ.
- ಒಂದು ಲೋಟ ಬಿಸಿ ನೀರಿಗೆ ನಿಂಬೆ ಹಣ್ಣು ಮತ್ತು ಜೇನುತುಪ್ಪವನ್ನು ಸೇರಿಸಿ ಪ್ರತಿದಿನ ಬೆಳಿಗ್ಗೆ ಕುಡಿಯುವುದು ಅತಿ ಉತ್ತಮವಾಗಿದ್ದು, ರಕ್ತವನ್ನು ಶುದ್ಧವಾಗಿಸಿ, ವೃದ್ಧಿಸುತ್ತದೆ.
- ಬೆಟ್ಟದ ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು, ಬೀಜವನ್ನು ಬೇರ್ಪಡಿಸಿ, ಜೇನುತುಪ್ಪದಲ್ಲಿ ಮುಳುಗಿಸಿ ಒಂದು ತಿಂಗಳ ಕಾಲ ಮುಚ್ಚಿಡಬೇಕು. ಒಂದು ತಿಂಗಳ ನಂತರ ನೆಲ್ಲಿಕಾಯನ್ನು ಹೊರ ತೆಗೆದು ಆ ಜೇನುತುಪ್ಪವನ್ನು ನಿತ್ಯ ಒಂದು ಚಮಚ ಸೇವಿಸಬೇಕು. ಇದರಿಂದ ರಕ್ತವು ಶುದ್ಧವಾಗುತ್ತದೆ.
- ಕೆಲವು ಹಣ್ಣುಗಳ ಸೇವನೆ ರಕ್ತ ಶುದ್ಧತೆಗೆ ಬಹಳ ಉತ್ತಮವಾಗಿದೆ. ಕರಬೂಜ ಹಣ್ಣು ರಕ್ತ ಶುದ್ಧತೆಗೆ ಬಹಳ ಉತ್ತಮವಾಗಿದ್ದು, ಕರಬೂಜ ಸೇವನೆ ಆರೋಗ್ಯಕರವಾಗಿದೆ.
- ಸೊಗದೆ ಬೇರನ್ನು ಚೆನ್ನಾಗಿ ತೊಳೆದು ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು, ಅರ್ಧದಷ್ಟು ನೀರು ಇಂಗಿದ ಮೇಲೆ ಓಲೆ ಆರಿಸಿ, ಶೋಧಿಸಿ ಕುಡಿಯಬೇಕು. ಈ ಕಷಾಯವನ್ನು ಕುಡಿಯುದರಿಂದ ರಕ್ತವು ಶುದ್ದಿಯಾಗುತ್ತದೆ.
- ರಕ್ತ ಶುದ್ಧಿ ಹಾಗೂ ರಕ್ತ ವೃದ್ಧಿಗೆ ಒಣ ದ್ರಾಕ್ಷಿಯ ಕೊಡುಗೆ ಬಹಳ ಮಹತ್ವದ್ದಾಗಿದೆ. ಒಣ ದ್ರಾಕ್ಷಿಯನ್ನು ರಾತ್ರಿ ನೆನೆಸಿ ಬೆಳಿಗ್ಗೆ ತಿನ್ನುವುದು ಆರೋಗ್ಯಕ್ಕೆ ಬಲು ಉತ್ತಮವಾಗಿದೆ. ಹಾಗೆಯೇ ನೆನೆಸಿದ ಒಣ ದ್ರಾಕ್ಷಿಯನ್ನು ರುಬ್ಬಿಕೊಂಡು ರಸವನ್ನು ಹಿಂಡಿಕೊಳ್ಳಬೇಕು. ಈ ರಸದ ಜೊತೆ ಜೇನುತುಪ್ಪ ಬೆರೆಸಿ ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ.
ಇಷ್ಟೇ ಅಲ್ಲದೇ ಕಬ್ಬಿಣ ಅಂಶ ಜಾಸ್ತಿ ಇರುವ ಆಹಾರ ಪದಾರ್ಥಗಳನ್ನು ಸ್ವೀಕರಿಸುವುದು ಅತಿ ಉತ್ತಮವಾಗಿದೆ. ವಿಟಮಿನ್ ಸಿ ಹೇರಳವಾಗಿರುವ ಕಿತ್ತಳೆ, ಮೂಸಂಬಿ ಹಾಗೂ ಲಿಂಬೆ ಹಣ್ಣು ರಕ್ತ ವೃದ್ಧಿಗೆ ಅತಿ ಉತ್ತಮವಾಗಿದೆ. ಹಾಗೂ ತರಕಾರಿಗಳಾದ ಕ್ಯಾರೆಟ್, ಮೂಲಂಗಿ, ನುಗ್ಗೆ ಕೂಡ ಉಪಯುಕ್ತವಾಗಿದೆ. ಹಾಗೆಯೇ ಪಾಲಕ್, ಬಸಳೆ ಸೊಪ್ಪುಗಳು ಕೂಡ ಉತ್ತಮವಾಗಿದೆ. ರಕ್ತ ವೃದ್ಧಿಗೆ ಇಂತಹ ವಸ್ತುಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಬಳಸುವುದು ಅತಿ ಸೂಕ್ತಕರ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.