ಬೇಸಿಗೆಯ ತಂಪನ್ನು ತಣಿಸಲು ಉತ್ತಮವಾಗಿರುವ ರುಚಿ ರುಚಿಯಾದ ತಂಬುಳಿಗಳು

Spread the love

ಹುರುಳಿ (Horsegram): ಆರೋಗ್ಯ ಲಾಭಗಳು ಮತ್ತು ಮನೆಮದ್ದುಗಳು
ಬೇಸಿಗೆಯ ತಂಪನ್ನು ತಣಿಸಲು ಉತ್ತಮವಾಗಿರುವ ರುಚಿ ರುಚಿಯಾದ ತಂಬುಳಿಗಳು. AI Image

ಸೊಪ್ಪು ಹಾಗೂ ತರಕಾರಿಗಳ ಉಪಯುಕ್ತ ಅಂಶಗಳು ನೇರವಾಗಿ ನಮ್ಮ ದೇಹವನ್ನು ಸೇರಲು ಈ ತಂಬುಳಿಗಳು ಸಹಾಯಕವಾಗಿದೆ. ತಂಬುಳಿಗಳು ಬೇಸಿಗೆಯಲ್ಲಿ ನಮ್ಮ ದೇಹವನ್ನು ತಂಪಾಗಿರಿಸಲು ಉತ್ತಮವಾಗಿರುತ್ತದೆ. ಇಂದಿನ ಲೇಖನದಲ್ಲಿ ವಿವಿಧ ತಂಬುಳಿಗಳ ತಯಾರಿಕಾ ವಿಧಾನದ ಬಗೆಗಿನ ಮಾಹಿತಿಗಳನ್ನು ವಿಶ್ಲೇಷಿಸೋಣ.

ಬಲಿತ ಮಾವಿನಕಾಯಿಯ ತಂಬುಳಿ

ಬೇಕಾಗುವ ಪದಾರ್ಥಗಳು

  • ಬಲಿತ ಮಾವಿನ ಕಾಯಿ 2
  • ಹಸಿಮೆಣಸು 2
  • ತೆಂಗಿನಕಾಯಿ ತುರಿ ½ ಕಪ್
  • ಎಣ್ಣೆ
  • ಸಾಸಿವೆ ½ ಚಮಚ
  • ಹಿಂಗು ಚಿಟಿಕೆ
  • ಜೀರಿಗೆ ½ ಚಮಚ
  • ಕರಿಬೇವು
  • ಉಪ್ಪು

ಮಾಡುವ ವಿಧಾನ
ಮಾವಿನಕಾಯಿಯ ಸಿಪ್ಪೆಯನ್ನು ತೆಗೆದು ತುರಿದುಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ಮೇಲೆ ಹೇಳಿದ ಪ್ರಮಾಣದಲ್ಲಿ ಕಾಯಿತುರಿ, ಹಸಿಮೆಣಸಿನಕಾಯಿ ಹಾಗೂ ಮಾವಿನ ಕಾಯಿಯ ತುರಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಬೇರೆ ಪಾತ್ರೆಗೆ ವರ್ಗಾಯಿಸಿ, ನೀರನ್ನು ಸೇರಿಸಿಕೊಂಡು ತಿಳಿ ಮಾಡಿಕೊಳ್ಳಬೇಕು. ನಂತರ ಒಗ್ಗರಣೆಗೆ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಹಿಂಗು ಮತ್ತು ಕರಿಬೇವನ್ನು ಹಾಕಿ, ಒಗ್ಗರಣೆಗೆ ನೀಡಬೇಕು. ಅಲ್ಲಿಗೆ ರುಚಿಯಾದ ಮಾವಿನಕಾಯಿಯ ತಂಬುಳಿ ಸವಿಯಲು ಸಿದ್ದವಾಗುತ್ತದೆ.

-> ಮಾವಿನ ಕಾಯಿಯ ಬಗೆಗಿನ ನಮ್ಮ ಹಿಂದಿನ ಲೇಖನಗಳನ್ನು ಒಮ್ಮೆ ಓದಿರಿ.

ಅಮಟೆಕಾಯಿ ತಂಬುಳಿ

ಬೇಕಾಗುವ ಪದಾರ್ಥಗಳು

  • ಅಮಟೆಕಾಯಿ 2
  • ತೆಂಗಿನಕಾಯಿ ತುರಿ ½ ಕಪ್
  • ಕಾಳುಮೆಣಸು 9
  • ಜೀರಿಗೆ ½ ಚಮಚ
  • ಮಜ್ಜಿಗೆ 2 ಕಪ್
  • ಉಪ್ಪು
  • ಬೆಲ್ಲ ಸ್ವಲ್ಪ
  • ಎಣ್ಣೆ
  • ಸಾಸಿವೆ
  • ಕರಿಬೇವು
  • ಒಣಮೆಣಸಿನ ಕಾಯಿ 1

ಮಾಡುವ ವಿಧಾನ
ಅಮಟೆಕಾಯಿಯನ್ನು ಸಣ್ಣಗೆ ಹೆಚ್ಚಿಕೊಂಡು ಬೇಯಿಸಿಕೊಳ್ಳಬೇಕು. ಬೇಯಿಸಿದ ಅಮಟೆಕಾಯಿಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ, ತೆಂಗಿನಕಾಯಿ ತುರಿ, ಕಾಳುಮೆಣಸು, ಜೀರಿಗೆ, ಸ್ವಲ್ಪ ಮಜ್ಜಿಗೆ, ರುಚಿಗೆ ತಕ್ಕಷ್ಟು ಬೆಲ್ಲ ಹಾಗೂ ಉಪ್ಪನ್ನು ಸೇರಿಸಿ ರುಬ್ಬಿಕೊಳ್ಳಬೇಕು. ಈ ಮಿಶ್ರಣವನ್ನು ಪಾತ್ರೆಗೆ ವರ್ಗಾಯಿಸಿಕೊಂಡು ಉಳಿದ ಮಜ್ಜಿಗೆಯನ್ನು ಸೇರಿಸಿಕೊಂಡು ತಿಳಿ ಮಾಡಿಕೊಳ್ಳಬೇಕು. ನಂತರ ಎಣ್ಣೆ, ಸಾಸಿವೆ, ಒಣಮೆಣಸು ಹಾಗೂ ಕರಿಬೇವಿನ ಒಗ್ಗರಣೆಯನ್ನು ನೀಡಬೇಕು. ಅಲ್ಲಿಗೆ ಅಮಟೆಕಾಯಿ ತಂಬುಳಿ ಸವಿಯಲು ಸಿದ್ದವಾಗುತ್ತದೆ.

ಬೆಟ್ಟದ ನೆಲ್ಲಿಕಾಯಿ ತಂಬುಳಿ

ಬೇಕಾಗುವ ಪದಾರ್ಥಗಳು

  • ಬೆಟ್ಟದ ನೆಲ್ಲಿಕಾಯಿ 10
  • ಕಾಳುಮೆಣಸು 10
  • ತೆಂಗಿನ ತುರಿ ½ ಕಪ್
  • ಜೀರಿಗೆ ½ ಚಮಚ
  • ಮಜ್ಜಿಗೆ 2 ಕಪ್
  • ಉಪ್ಪು 
  • ಎಣ್ಣೆ
  • ಸಾಸಿವೆ
  • ಒಣಮೆಣಸು
  • ಕರಿಬೇವು

ಮಾಡುವ ವಿಧಾನ
ನೆಲ್ಲಿಕಾಯಿಯ ಬೀಜವನ್ನು ತೆಗೆದು ಹೆಚ್ಚಿಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ಕಾಯಿತುರಿ, ಕಾಳುಮೆಣಸು, ಜೀರಿಗೆ, ಬೆಟ್ಟದ ನೆಲ್ಲಿಕಾಯಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ರುಬ್ಬಿಕೊಳ್ಳಬೇಕು. ನಂತರ ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿಕೊಂಡು ಮಜ್ಜಿಗೆಯನ್ನು ಸೇರಿಸಿ, ತಿಳಿ ಮಾಡಿಕೊಳ್ಳಬೇಕು. ನಂತರ ಎಣ್ಣೆ, ಸಾಸಿವೆ, ಒಣಮೆಣಸು ಹಾಗೂ ಕರಿಬೇವಿನ ಒಗ್ಗರಣೆಯನ್ನು ನೀಡಬೇಕು. ಅಲ್ಲಿಗೆ ಬೆಟ್ಟದ ನೆಲ್ಲಿಕಾಯಿ ತಂಬುಳಿ ಸವಿಯಲು ಸಿದ್ದವಾಗುತ್ತದೆ.

ಹಸಿ ಶುಂಠಿಯ ತಂಬುಳಿ

ಬೇಕಾಗುವ ಪದಾರ್ಥಗಳು

  • ಶುಂಠಿ 3 ಇಂಚು
  • ಜೀರಿಗೆ ½  ಚಮಚ
  • ಕರಿಮೆಣಸು ½ ಚಮಚ
  • ತೆಂಗಿನಕಾಯಿ ತುರಿ ½ ಕಪ್
  • ಮಜ್ಜಿಗೆ 4 ಕಪ್
  • ಉಪ್ಪು
  • ಎಣ್ಣೆ
  • ಸಾಸಿವೆ
  • ಒಣಮೆಣಸು
  • ಕರಿಬೇವು

ಮಾಡುವ ವಿಧಾನ
ಮೊದಲು ಶುಂಠಿಯ ಸಿಪ್ಪೆಯನ್ನು ತೆಗೆದುಕೊಂಡು ಸಣ್ಣಗೆ ಹೆಚ್ಚಿಕೊಳ್ಳಬೇಕು. ಒಂದು ಕಾವಲಿಗೆಯಲ್ಲಿ ಜೀರಿಗೆ, ಕರಿಮೆಣಸು ಹಾಕಿ ಹುರಿದುಕೊಳ್ಳಬೇಕು. ನಂತರ ಒಂದು ಮಿಕ್ಸಿ ಜಾರಿಗೆ ಶುಂಠಿ, ಕಾಯಿತುರಿ, ಹುರಿದ ಜೀರಿಗೆ ಹಾಗೂ ಕರಿಮೆಣಸು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ರುಬ್ಬಿಕೊಳ್ಳಬೇಕು. ನಂತರ ರುಬ್ಬಿದ ಮಿಶ್ರಣಕ್ಕೆ ಮಜ್ಜಿಗೆಯನ್ನು ಬೆರೆಸಿ ತಿಳಿ ಮಾಡಿಕೊಳ್ಳಬೇಕು. ನಂತರ ಕೊನೆಯಲ್ಲಿ ಎಣ್ಣೆ, ಸಾಸಿವೆ, ಒಣಮೆಣಸು ಹಾಗೂ ಕರಿಬೇವಿನ ಒಗ್ಗರಣೆಯನ್ನು ನೀಡಬೇಕು. ಅಲ್ಲಿಗೆ ಹಸಿಶುಂಠಿ ತಂಬುಳಿ ಸಿದ್ದವಾಗುತ್ತದೆ.

ಈರುಳ್ಳಿ ಸೊಪ್ಪಿನ ತಂಬುಳಿ

ಬೇಕಾಗುವ ಪದಾರ್ಥಗಳು

  • ಈರುಳ್ಳಿ ಸೊಪ್ಪು 1 ಕಟ್ಟು
  • ಕಾಳುಮೆಣಸು 6
  • ತೆಂಗಿನಕಾಯಿ ತುರಿ ½ ಕಪ್
  • ಮಜ್ಜಿಗೆ 3 ಕಪ್
  • ಒಣ ಮೆಣಸು 1
  • ಜೀರಿಗೆ ¼ ಚಮಚ
  • ಸಾಸಿವೆ ¼ ಚಮಚ
  • ಎಣ್ಣೆ
  • ಉಪ್ಪು
  • ಕರಿಬೇವು

ಮಾಡುವ ವಿಧಾನ

ಈರುಳ್ಳಿ ಸೊಪ್ಪನ್ನು ಸಣ್ಣಗೆ ಕತ್ತರಿಸಿಕೊಂಡು, ಕರಿಮೆಣಸು ಹಾಗೂ ಕಾಯಿತುರಿಯನ್ನು ನಯವಾಗಿ ರುಬ್ಬಿಕೊಳ್ಳಬೇಕು. ನಂತರ ರುಬ್ಬಿದ ಮಿಶ್ರಣವನ್ನು ಪಾತ್ರೆಗೆ ವರ್ಗಾಯಿಸಿಕೊಂಡು ಮಜ್ಜಿಗೆಯನ್ನು ಬೆರೆಸಿ ತಿಳಿ ಮಾಡಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಬೇಕು. ಕೊನೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಒಣಮೆಣಸು ಹಾಗೂ ಕರಿಬೇವಿನ ಒಗ್ಗರಣೆಯನ್ನು ನೀಡಬೇಕು. ಅಲ್ಲಿಗೆ ಈರುಳ್ಳಿ ಸೊಪ್ಪಿನ ತಂಬುಳಿ ಸಿದ್ದವಾಗುತ್ತದೆ.

ಕಾಳುಮೆಣಸಿನ ತಂಬುಳಿ

ಬೇಕಾಗುವ ಪದಾರ್ಥಗಳು

  • ಕಾಳು ಮೆಣಸು 1 ½ ಚಮಚ
  • ಜೀರಿಗೆ ½ ಚಮಚ
  • ತುಪ್ಪ 1 ಚಮಚ
  • ಮೊಸರು 1 ಕಪ್
  • ಸಾಸಿವೆ 
  • ಕರಿಬೇವು
  • ಎಣ್ಣೆ
  • ಉಪ್ಪು
  • ಬೆಲ್ಲ ಸ್ವಲ್ಪ

ಮಾಡುವ ವಿಧಾನ
ಮೊದಲಿಗೆ ಒಂದು ಕಾವಲಿಗೆಯಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ಕಾಳುಮೆಣಸನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಹುರಿದ ಕಾಳುಮೆಣಸನ್ನು ಜೀರಿಗೆಯ ಜೊತೆ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಬೇಕು. ಇನ್ನೊಂದು ಕಡೆ ಮೊಸರಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ, ಮಿಕ್ಸಿಯಲ್ಲಿ ಮಾಡಿಕೊಂಡ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಬೇಕು. ನಂತರ ಎಣ್ಣೆ, ಸಾಸಿವೆ, ಕರಿಬೇವಿನ ಒಗ್ಗರಣೆಯನ್ನು ನೀಡಬೇಕು. ಅಲ್ಲಿಗೆ ಕಾಳುಮೆಣಸಿನ ತಂಬುಳಿ ಸವಿಯಲು ಸಿದ್ದವಾಗುತ್ತದೆ.

ಬೆಳ್ಳುಳ್ಳಿ ತಂಬುಳಿ

ಬೇಕಾಗುವ ಪದಾರ್ಥಗಳು

  • ಬೆಳ್ಳುಳ್ಳಿ ಎಸಳು 10
  • ಕಾಯಿ ತುರಿ ½ ಕಪ್
  • ಮಜ್ಜಿಗೆ ½ ಕಪ್
  • ಜೀರಿಗೆ 1 ಚಮಚ
  • ಉಪ್ಪು
  • ಸಾಸಿವೆ ½ ಚಮಚ
  • ಒಣಮೆಣಸಿನ ಕಾಯಿ 1 
  • ಎಣ್ಣೆ
  • ಕರಿಬೇವು

ಮಾಡುವ ವಿಧಾನ
ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಲಿದುಕೊಂಡು, ಒಂದು ಮಿಕ್ಸಿ ಜಾರಿಗೆ ಬೆಳ್ಳುಳ್ಳಿ ಎಸಳುಗಳು, ಜೀರಿಗೆ, ಕಾಯಿತುರಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿಕೊಂಡು ಮಜ್ಜಿಗೆಯನ್ನು ಸೇರಿಸಬೇಕು. ನಂತರ ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ ಹಾಗೂ ಕರಿಬೇವಿನ ಒಗ್ಗರಣೆಯನ್ನು ನೀಡಿದರೆ ಬೆಳ್ಳುಳ್ಳಿ ತಂಬುಳಿ ಸವಿಯಲು ಸಿದ್ದವಾಗುತ್ತದೆ.

ಒಂದೆಲಗದ ತಂಬುಳಿ

ಬೇಕಾಗುವ ಪದಾರ್ಥಗಳು

  • ಒಂದೆಲಗದ ಸೊಪ್ಪು 2 ಕಪ್
  • ತೆಂಗಿನಕಾಯಿ ತುರಿ ½ ಕಪ್
  • ಜೀರಿಗೆ ½ ಚಮಚ
  • ಸಾಸಿವೆ ½ ಚಮಚ
  • ಕಾಳುಮೆಣಸು 5
  • ಮಜ್ಜಿಗೆ 2 ಕಪ್
  • ತುಪ್ಪ 1 ಚಮಚ
  • ಉಪ್ಪು

ಮಾಡುವ ವಿಧಾನ
ಒಂದೆಲಗದ ಸೊಪ್ಪನ್ನು ಶುದ್ಧಗೊಳಿಸಿ, ಸಣ್ಣಗೆ ಕತ್ತರಿಸಿಕೊಳ್ಳಬೇಕು. ಇನ್ನೊಂದು ಕಡೆ ಬಾಣಲೆಗೆ ತುಪ್ಪವನ್ನು ಹಾಕಿ, ಸಾಸಿವೆ, ಜೀರಿಗೆ, ಕಾಳುಮೆಣಸು, ಕಾಯಿತುರಿ, ಜೊತೆಗೆ ಒಂದೆಲಗದ ಸೊಪ್ಪು ಎಲ್ಲವನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಹುರಿದ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿಕೊಂಡು ಮಜ್ಜಿಗೆಯನ್ನು ಸೇರಿಸಬೇಕು. ಕೊನೆಯಲ್ಲಿ ಉಪ್ಪನ್ನು ಬೆರೆಸಿ ಕಲಸಿದರೆ ಒಂದೆಲಗದ ತಂಬುಳಿ ಸವಿಯಲು ಸಿದ್ದವಾಗುತ್ತದೆ.

ಕರಿಬೇವು ಹೂವಿನ ತಂಬುಳಿ

ಬೇಕಾಗುವ ಪದಾರ್ಥಗಳು

  • ಕರಿಬೇವು ಹೂವುಗಳು ½ ಕಪ್
  • ಕಾಳುಮೆಣಸು 4
  • ಜೀರಿಗೆ ¼ ಚಮಚ
  • ತೆಂಗಿನ ತುರಿ ½ ಕಪ್
  • ಮಜ್ಜಿಗೆ 2 ಕಪ್
  • ಎಣ್ಣೆ
  • ಸಾಸಿವೆ ½ ಚಮಚ
  • ಒಣ ಮೆಣಸು 1
  • ಕರಿಬೇವು
  • ಉಪ್ಪು

ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾಳುಮೆಣಸು, ಜೀರಿಗೆ ಹಾಗೂ ಕರಿಬೇವಿನ ಹೂವನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಹುರಿದ ಪದಾರ್ಥವನ್ನು ಮಿಕ್ಸಿ ಜಾರಿಗೆ ಹಾಕಿ, ತೆಂಗಿನಕಾಯಿ ತುರಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ತುಬ್ಬಿದ ಮಿಶ್ರಣವನ್ನು ಪಾತ್ರೆಗೆ ವರ್ಗಾಯಿಸಿ, ಮಜ್ಜಿಗೆಯನ್ನು ಸೇರಿಸಬೇಕು. ಕೊನೆಯಲ್ಲಿ ಎಣ್ಣೆ, ಸಾಸಿವೆ, ಒಣಮೆಣಸು ಹಾಗೂ ಕರಿಬೇವಿನ ಒಗ್ಗರಣೆಯನ್ನು ನೀಡಬೇಕು. ಅಲ್ಲಿಗೆ ಕರಿಬೇವಿನ ಹೂವಿನ ತಂಬುಳಿ ಸವಿಯಲು ಸಿದ್ದವಾಗುತ್ತದೆ. ಇದು ಆರೋಗ್ಯಕ್ಕೆ ಅತಿ ಉತ್ತಮವಾಗಿದೆ.

ಬಿಳಿ ದಾಸವಾಳ ಹೂವಿನ ತಂಬುಳಿ

ಬೇಕಾಗುವ ಪದಾರ್ಥಗಳು

  • ಬಿಳಿ ದಾಸವಾಳದ ಹೂವುಗಳು 10
  • ತೆಂಗಿನಕಾಯಿ ತುರಿ ½ ಕಪ್
  • ಕಾಳುಮೆಣಸು 5
  • ಮಜ್ಜಿಗೆ 2 ಕಪ್
  • ಜೀರಿಗೆ ½ ಚಮಚ
  • ಉಪ್ಪು

ಮಾಡುವ ವಿಧಾನ
ಬಿಳಿ ದಾಸವಾಳದ ಹೂವುಗಳ ದಳಗಳನ್ನು ಚೆನ್ನಾಗಿ ಒಣಗಿಸಿಕೊಳ್ಳಬೇಕು. ನಂತರ ಒಂದು ಮಿಕ್ಸಿ ಜಾರಿಗೆ ಒಣಗಿಸಿದ ದಾಸವಾಳದ ಹೂವಿನ ದಳಗಳು, ಕಾಳುಮೆಣಸು, ಜೀರಿಗೆ, ತೆಂಗಿನಕಾಯಿ ತುರಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣಕ್ಕೆ ಮಜ್ಜಿಗೆಯನ್ನು ಸೇರಿಸಿ, ಕಲಸಿದರೆ ಬಿಳಿ ದಾಸವಾಳ ಹೂವಿನ ತಂಬುಳಿ ಸವಿಯಲು ಸಿದ್ದವಾಗುತ್ತದೆ.

ಗಸಗಸೆ ತಂಬುಳಿ

ಬೇಕಾಗುವ ಪದಾರ್ಥಗಳು

  • ಗಸಗಸೆ  3 ಚಮಚ
  • ಬಿಳಿ ಎಳ್ಳು 2 ಚಮಚ
  • ಕಾಯಿತುರಿ ½ ಕಪ್
  • ಜೀರಿಗೆ ½ ಚಮಚ
  • ಮಜ್ಜಿಗೆ 2 ಕಪ್
  • ಬೆಲ್ಲ ಸ್ವಲ್ಪ
  • ಉಪ್ಪು
  • ಸಾಸಿವೆ ½ ಚಮಚ
  • ಒಣಮೆಣಸು 1
  • ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲೆಯಲ್ಲಿ ಗಸಗಸೆ ಹಾಗೂ ಬಿಳಿ ಎಳ್ಳನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ಹುರಿದ ಗಸಗಸೆ, ಬಿಳಿ ಎಳ್ಳು, ಕಾಯಿತುರಿ, ಜೀರಿಗೆ, ಸ್ವಲ್ಪ ಬೆಲ್ಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ರುಬ್ಬಿದ ಮಿಶ್ರಣವನ್ನು ಪಾತ್ರೆಗೆ ವರ್ಗಾಯಿಸಿಕೊಂಡು ಮಜ್ಜಿಗೆಯನ್ನು ಸೇರಿಸಿ ಕಲಸಬೇಕು. ಕೊನೆಯಲ್ಲಿ ಎಣ್ಣೆ, ಸಾಸಿವೆ, ಒಣಮೆಣಸು ಹಾಗೂ ಕರಿಬೇವಿನ ಒಗ್ಗರಣೆ ನೀಡಿದರೆ ರುಚಿಯಾದ ಗಸಗಸೆ ತಂಬುಳಿ ಸವಿಯಲು ಸಿದ್ದವಾಗುತ್ತದೆ.

ಬಿಂಬಳಕಾಯಿ ತಂಬುಳಿ

ಬೇಕಾಗುವ ಪದಾರ್ಥಗಳು

  • ಬಿಂಬಳಕಾಯಿ 5
  • ತೆಂಗಿನಕಾಯಿ ತುರಿ ½ ಕಪ್
  • ಹಸಿಮೆಣಸು 2 
  • ಜೀರಿಗೆ ½ ಚಮಚ
  • ಉಪ್ಪು
  • ಎಣ್ಣೆ 
  • ಸಾಸಿವೆ ½ ಚಮಚ
  • ಕರಿಬೇವು

ಮಾಡುವ ವಿಧಾನ

ಬಿಂಬಳಕಾಯಿಯನ್ನು ಸಣ್ಣಗೆ ಹೆಚ್ಚಿಕೊಂಡು, ಒಂದು ಮಿಕ್ಸಿ ಜಾರಿಗೆ ಹಾಕಬೇಕು. ಜೊತೆಗೆ ತೆಂಗಿನಕಾಯಿ ತುರಿದು, ಮೆಣಸು, ಜೀರಿಗೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ರುಬ್ಬಿದ ಮಿಶ್ರಣವನ್ನು ಪಾತ್ರೆಗೆ ವರ್ಗಾಯಿಸಿಕೊಂಡು ನೀರನ್ನು ಸೇರಿಸಿ ತಿಳಿ ಮಾಡಿಕೊಳ್ಳಬೇಕು. ಕೊನೆಯಲ್ಲಿ ಎಣ್ಣೆ, ಸಾಸಿವೆ ಹಾಗೂ ಕರಿಬೇವಿನ ಒಗ್ಗರಣೆಯನ್ನು ನೀಡಿದರೆ ಬಿಂಬಳಕಾಯಿ ತಂಬುಳಿ ಸವಿಯಲು ಸಿದ್ದವಾಗುತ್ತದೆ.

ಹಸಿ ಅರಿಶಿಣದ ತಂಬುಳಿ

ಬೇಕಾಗುವ ಪದಾರ್ಥಗಳು

  • ಹಸಿ ಅರಿಶಿಣದ ತುಂಡು 2
  • ಕಾಳುಮೆಣಸು 5
  • ತೆಂಗಿನಕಾಯಿ ತುರಿ ½ ಕಪ್
  • ಮಜ್ಜಿಗೆ 3 ಕಪ್
  • ಜೀರಿಗೆ ¼ ಚಮಚ
  • ಸಾಸಿವೆ ¼ ಚಮಚ
  • ಒಣಮೆಣಸು 1
  • ಎಣ್ಣೆ
  • ಉಪ್ಪು

ಮಾಡುವ ವಿಧಾನ
ಮೊದಲಿಗೆ ಹಸಿ ಅರಿಶಿಣವನ್ನು ಬೇಯಿಸಿಕೊಂಡು, ಸಿಪ್ಪೆ ತೆಗೆದು, ಸಣ್ಣಗೆ ಹೆಚ್ಚಿಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ಬೇಯಿಸಿದ ಅರಿಶಿಣ, ಕಾಳುಮೆಣಸು ಹಾಗೂ ಕಾಯಿತುರಿ ಹಾಕಿ ರುಬ್ಬಿಕೊಳ್ಳಬೇಕು. ನಂತರ ಮಿಶ್ರಣಕ್ಕೆ ಮಜ್ಜಿಗೆಯನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಕಲಸಬೇಕು. ಕೊನೆಯಲ್ಲಿ ಎಣ್ಣೆ, ಸಾಸಿವೆ, ಒಣಮೆಣಸು ಹಾಗೂ ಕರಿಬೇವಿನ ಒಗ್ಗರಣೆ ನೀಡಿದರೆ ಹಸಿ ಅರಿಶಿಣದ ತಂಬುಳಿ ಸವಿಯಲು ಸಿದ್ದವಾಗುತ್ತದೆ.

-> ಅರಿಶಿಣದ ಬಗೆಗಿನ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಒಮ್ಮೆ ನಮ್ಮ ಹಿಂದಿನ ಲೇಖನವನ್ನು ಓದಿರಿ.

ಮುಳ್ಳು ಸೌತೆಕಾಯಿ ತಂಬುಳಿ

ಬೇಕಾಗುವ ಪದಾರ್ಥಗಳು

  • ಮುಳ್ಳು ಸೌತೆಕಾಯಿ 1
  • ತೆಂಗಿನಕಾಯಿ ತುರಿ ½ ಕಪ್
  • ಹಸಿಮೆಣಸು 2
  • ಕಾಳು ಮೆಣಸು 4
  • ಜೀರಿಗೆ ½ ಚಮಚ
  • ಮಜ್ಜಿಗೆ 3 ಕಪ್
  • ಉಪ್ಪು
  • ಒಣಮೆಣಸು 1
  • ಸಾಸಿವೆ ¼ ಚಮಚ
  • ಎಣ್ಣೆ
  • ಕರಿಬೇವು

ಮಾಡುವ ವಿಧಾನ
ಮೊದಲಿಗೆ ಮುಳ್ಳು ಸೌತೆಕಾಯಿಯ ಸಿಪ್ಪೆಯನ್ನು ತೆಗೆದು, ಸಣ್ಣಗೆ ಹೆಚ್ಚಿಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ಹೆಚ್ಚಿದ ಮುಳ್ಳು ಸೌತೆಕಾಯಿ, ಹಸಿಮೆಣಸು, ತೆಂಗಿನಕಾಯಿ ತುರಿ, ಕಾಳು ಮೆಣಸು, ಜೀರಿಗೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಮಜ್ಜಿಗೆಯೊಂದಿಗೆ ಬೆರೆಸಬೇಕು. ಕೊನೆಯಲ್ಲಿ ಎಣ್ಣೆ, ಸಾಸಿವೆ, ಒಣಮೆಣಸು ಹಾಗೂ ಕರಿಬೇವಿನ ಒಗ್ಗರಣೆ ನೀಡಿದರೆ ಮುಳ್ಳು ಸೌತೆಕಾಯಿ ತಂಬುಳಿ ಸವಿಯಲು ಸಿದ್ದವಾಗುತ್ತದೆ.

ಇಂದಿನ ಲೇಖನದಲ್ಲಿ ಸಾಕಷ್ಟು ಬಗೆಯ, ಸುಲಭ ವಿಧಾನದಲ್ಲಿ ರುಚಿಕರ ತಂಬುಳಿಗಳನ್ನು ಮಾಡುವ ಬಗೆಯನ್ನು ಅರಿತಿದ್ದೇವೆ. ಮೇಲಿನ ಎಲ್ಲಾ ತಂಬುಳಿಗಳು ಆರೋಗ್ಯಕ್ಕೆ ಅತಿ ಉತ್ತಮವಾಗಿದ್ದು, ಅನ್ನದ ಜೊತೆಗೆ ಸವಿಯಲು ರುಚಿಕರವಾಗುತ್ತದೆ. ನೀವು ಕೂಡ ಒಮ್ಮೆ ತಯಾರಿಸಿ, ಹೊಸ ರುಚಿಯನ್ನು ಒಮ್ಮೆ ಸವಿಯಿರಿ ಎಂಬುದು ನಮ್ಮ ಆಶಯ.

ತಂಬುಳಿಗಳ ಬಗೆಗಿನ ಇನ್ನೂ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಓದಿರಿ:

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

Leave a Comment

Your email address will not be published. Required fields are marked *

Scroll to Top