
ಬೇಸಿಗೆ ಬಂತು ಎಂದರೆ ಗೃಹಿಣಿಯರ ಪಾಕಶಾಲೆಯ ಕೆಲಸ ಚುರುಕಾಗುತ್ತದೆ. ದವಸ, ಧಾನ್ಯಗಳನ್ನು ಬಿಸಿಲಿಗೆ ಹಾಕಿ ತೆಗೆದಿಡುವುದು, ಉಪ್ಪಿನ ಕಾಯಿ ಮಾಡುವುದು, ಹಪ್ಪಳ ಹಾಗೂ ಸೆಂಡಿಗೆಗಳನ್ನು ತಯಾರಿಸಿವುದು, ಇವೆಲ್ಲವೂ ಬಹು ಮುಖ್ಯವಾದದ್ದು. ಹಾಗಾಗಿ ಇಂದಿನ ಲೇಖನದಲ್ಲಿ ಹಪ್ಪಳಗಳ ವಿವಿಧ ಬಗೆಗಳನ್ನು ವಿವರಿಸಲಾಗಿದೆ. ಮಳೆಗಾಲಕ್ಕೆ ತಿನ್ನಲು ರುಚಿ ರುಚಿಯಾದ ಹಪ್ಪಳಗಳ ಮಾಡುವ ಪರಿಯನ್ನು ತಿಳಿಯೋಣ.
ಹಲಸಿನ ಹಪ್ಪಳ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು
- ಹಲಸಿನಕಾಯಿ ತೊಳೆಗಳು 250 ಗ್ರಾಂ ( ಬೀಜ ತೆಗೆದು )
- ಒಣ ಮೆಣಸಿನಪುಡಿ 5 ದೊಡ್ಡ ಚಮಚ
- ಬಿಳಿ ಎಳ್ಳು ಸ್ವಲ್ಪ
- ಉಪ್ಪು
- ಹಿಂಗು
ಮಾಡುವ ವಿಧಾನ:
ಹಲಸಿನ ತೊಳೆಗಳನ್ನು ಬೇಯಿಸಲು ಇಡಬೇಕು. ಚೆನ್ನಾಗಿ ಬೆಂದ ಹಲಸಿನ ತೊಳೆಗಳು, ಒಣ ಮೆಣಸಿನಪುಡಿ, ಹಿಂಗು, ಉಪ್ಪು ರುಚಿಗೆ ತಕ್ಕಸ್ಟು ಸೇರಿಸಿ ನೀರು ಹಾಕದೆ ನುಣ್ಣಗೆ ರುಬ್ಬಬೇಕು. ಕೊನೆಯಲ್ಲಿ ಎಳ್ಳು ಹಾಕಿ ಮತ್ತೊಮ್ಮೆ ರುಬ್ಬಿದರೆ ಹಿಟ್ಟು ಸಿದ್ದವಾಗುತ್ತದೆ. ಈ ಹಿಟ್ಟು ಸ್ವಲ್ಪ ತೆಳ್ಳಗೆ ಇರುವುದರಿಂದ ಲಟ್ಟಿಸಲು ಆಗುವುದಿಲ್ಲ. ಆದುದರಿಂದ ಬಾಳೆಎಲೆಗೆ ಎಣ್ಣೆ ಸವರಿ. ಅದರ ಮೇಲೆ ಸ್ವಲ್ಪ ಹಿಟ್ಟು ಇಟ್ಟು, ಎಣ್ಣೆ ಸವರಿದ ಇನ್ನೊಂದು ಬಾಳೆ ಎಲೆ ಅದರ ಮೇಲಿಟ್ಟು ಲಟ್ಟಿಸುವ ಮಣೆಯಿಂದಲೇ ಒತ್ತಬೇಕು. ನಂತರ ಎಲೆಯಿಂದ ಬೇರ್ಪಡಿಸಿ ಬಿಸಿಲಿನಲ್ಲಿ ಒಣಗಿಸಬೇಕು. ಮಳೆಗಾಲದ ಸಂಜೆ ಈ ಹಪ್ಪಳ ತಿನ್ನುವುದೇ ಖುಷಿ.
ಅವಲಕ್ಕಿ ಹಪ್ಪಳ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು
- ಅವಲಕ್ಕಿ ½ ಕೆಜಿ
- ಉಪ್ಪು
- ಹಸಿಮೆಣಸಿನ ಕಾಯಿ ಖಾರಕ್ಕೆ ಅನುಗುಣವಾಗಿ
ಮಾಡುವ ವಿಧಾನ:
ಅವಲಕ್ಕಿಯನ್ನು ರಾತ್ರಿ ನೆನೆಸಿ ಇಡಬೇಕು. ಮರುದಿನ ಅವಲಕ್ಕಿಯನ್ನು ಹಿಂಡಿ, ಹಸಿಮೆಣಸಿನಕಾಯಿ, ಉಪ್ಪು ಮೂರನ್ನು ಸೇರಿಸಿ ರುಬ್ಬಿಕೊಳ್ಳಬೇಕು. ಅವಶ್ಯಕತೆ ತಕ್ಕಷ್ಟು ಗಟ್ಟಿಯಾಗಲು ಸ್ವಲ್ಪ ಗೋಧಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಕುಟ್ಟಿಕೊಳ್ಳಬೇಕು. ಸಣ್ಣ ಗೋಲ ಉಂಡೆ ಮಾಡಿ ಹಪ್ಪಳ ಲಟ್ಟಿಸಿ ಬಿಸಿಲಲ್ಲಿ ಒಣಗಿಸಿಬೇಕು. ಬೇಕಾದಾಗ ಬೆಂಕಿಯ ಮೇಲೆ ಸುಟ್ಟು ಅಥವಾ ಎಣ್ಣೆಯಲ್ಲಿ ಕರೆಯಬೇಕು.
ಅಕ್ಕಿ ಹಪ್ಪಳ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು
- ಅಕ್ಕಿ 1/2 kg
- ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಅಕ್ಕಿ ತೊಳೆದು ಅದಕ್ಕೆ ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ದೋಸೆಯ ಕಣಕದಂತೆ ನುಣ್ಣಗೆ ರುಬ್ಬಬೇಕು. ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ಒಣ ಅಕ್ಕಿಹಿಟ್ಟನ್ನು ಸಿಂಪಡಿಸಬೇಕು. ಅದರ ಮೇಲೆ ರುಬ್ಬಿಟ್ಟ ಅಕ್ಕಿಯ ಹಿಟ್ಟಿನ ಕಣಕವನ್ನು ಸ್ವಲ್ಪ ಇಟ್ಟು ಹರಡಬೇಕು. ಅವುಗಳನ್ನು ಹಬೆಯಲ್ಲಿ 5 ನಿಮಿಷಗಳ ಕಾಲ ಬೇಯಿಸಬೇಕು. ತಕ್ಷಣವೇ ಬಟ್ಟಲಿನಲ್ಲಿ ಇದ್ದ ಹಪ್ಪಳವನ್ನು ತೆಗೆದು ಚಾಪೆಯಲ್ಲಿ ಒಂದೊಂದಾಗಿ ಬಿಡಿಸಿ ಪಸರಿಸಬೇಕು. ಒಂದು ಮೂರು ದಿವಸದ ಬಿಸಿಲಿನಲ್ಲಿ ಒಣಗಿಸಿ ತೆಗೆದಿಟ್ಟುಕೊಳ್ಳಬೇಕು.
ಗೆಣಸಿನ ಹಪ್ಪಳ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು
- ಗೆಣಸು
- ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಗೆಣಸನ್ನು ಚೆನ್ನಾಗಿ ಬೇಯಿಸಿ ಸಿಪ್ಪೆ ತೆಗೆದಿಟ್ಟುಕೊಳ್ಳಬೇಕು. ಅದಕ್ಕೆ ರುಚಿಗೆ ಬೇಕಾಗುವಷ್ಟು ಉಪ್ಪು ಸೇರಿಸಿ ನುಣ್ಣಗೆ ರುಬ್ಬಬೇಕು. ಕೈಗಳಿಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು ಗೆಣಸಿನ ಕಣಕದ ಉಂಡೆ ಮಾಡಿಕೊಂಡು ಮಣೆಯ ಮೇಲೆ ಪೊಲಿಥೀನ್ ಕಾಗದವನ್ನು ಬಿಡಿಸಿ ಅದರ ಮೇಲೆ ಗೆಣಸಿನ ಉಂಡೆಗಳನ್ನು ಇಟ್ಟು ಹಪ್ಪಳಗಳನ್ನು ಲಟ್ಟಿಸಬೇಕು. ಹಪ್ಪಳಗಳನ್ನು ತೆಗೆದು ಚಾಪೆಯಲ್ಲಿ ಒಂದೊಂದಾಗಿ ಬಿಡಿಸಿ ಪಸರಿಸಬೇಕು. ಒಂದು ಮೂರು ದಿವಸದ ಬಿಸಿಲಿನಲ್ಲಿ ಒಣಗಿಸಿ ತೆಗೆದಿಟ್ಟುಕೊಳ್ಳಬೇಕು. ಬಿಸಿಲು ಸರಿಯಾಗಿ ತಾಗುವಂತೆ ಒಣಗಿಸಬೇಕು.
ಉದ್ದಿನ ಹಪ್ಪಳ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು
- ಉದ್ದಿನಬೇಳೆ 1 ಕೆಜಿ
- ಒಣ ಮೆಣಸಿನಕಾಯಿ 100 ಗ್ರಾಂ
- ಉಪ್ಪು
- ಹಿಂಗು
ಮಾಡುವ ವಿಧಾನ:
1 ಕೆಜಿ ಉದ್ದಿನ ಬೇಳೆಯನ್ನು ನುಣ್ಣಗೆ ಬೀಸಿ ಹಿಟ್ಟು ಮಾಡಿ ಇಟ್ಟುಕೊಳ್ಳಬೇಕು. 100 ಗ್ರಾಂ ಒಣ ಮೆಣಸಿನಕಾಯಿ, ಉಪ್ಪು ರುಚಿಗೆ ತಕ್ಕಷ್ಟು, ಸ್ವಲ್ಪ ನೀರು, ಮತ್ತು ಸ್ವಲ್ಪ ಹಿಂಗನ್ನು ಕರಗಿಸಿದ ನೀರು (ಹಿಂಗಿನ ನೀರು) ಇವುಗಳನ್ನು ಒಟ್ಟಿಗೆ ಸೇರಿಸಿ ನುಣ್ಣಗೆ ರುಬ್ಬಬೇಕು. 1 ಕಪ್ ಉದ್ದಿನ ಹಿಟ್ಟನ್ನು ತೆಗೆದು ಬೇರೆ ಇಟ್ಟುಕೊಳ್ಳಬೇಕು. ಬಾಕಿ ಉಳಿದ ಉದ್ದಿನ ಹಿಟ್ಟನ್ನು ರುಬ್ಬಿಟ್ಟ ಕಣಕಕ್ಕೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಕುಟ್ಟಿ ಹದಮಾಡಬೇಕು. ಅದರಿಂದ ಸ್ವಲ್ಪ ಸ್ವಲ್ಪವಾಗಿ ತೆಗೆದು ಉದ್ದಿನ ಒಣ ಹಿಟ್ಟಿನಲ್ಲಿ ಉರುಳಿಸಿ ತೆಳ್ಳಗಾದ ಹಪ್ಪಳಗಳನ್ನು ಲಟ್ಟಿಸಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿಸಬೇಕು.
ಮನೆಯಲ್ಲೇ ಮಾಡಿದ ಹಪ್ಪಳಗಳ ರುಚಿ ಅತಿ ಉತ್ತಮವಾಗಿರುತ್ತದೆ. ಹಪ್ಪಳಗಳನ್ನು ಚೆನ್ನಾಗಿ ಒಣಗಿಸಿ, ಗಾಳಿ ಒಳಹೋಕ್ಕದಂತೆ ಗಟ್ಟಿಯಾಗಿ ಕಟ್ಟಿ, ಶೇಖರಿಸಿ ಇಡಬೇಕು. ಹಪ್ಪಳಗಳನ್ನು ಕುದಿಯುವ ಬಿಸಿ ಎಣ್ಣೆಯಲ್ಲೇ ಕರಿಯಬೇಕು, ಸ್ವಲ್ಪ ಬಿಸಿಯಾದ ಎಣ್ಣೆಯಲ್ಲೇ ಕರಿಯಲು ಹೋದರೆ ಹಪ್ಪಳ ಅರಳುವುದಿಲ್ಲ. ಮನೆಯಲ್ಲಿ ರುಚಿ ಶುಚಿಯಾಗಿ ತಯಾರಿಸುವ ಖಾದ್ಯವನ್ನು ನೀವು ಮಾಡಿ, ವಿಭಿನ್ನ ರುಚಿಯ ಆನಂದವನ್ನು ಪಡೆಯಿರಿ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.
Pingback: ಮನೆಯಲ್ಲೇ ತಯಾರಿಸಿ ವಿವಿಧ ಬಗೆಯ ಬಾಯಲ್ಲಿ ನೀರೂರಿಸುವ ಸ್ಪೆಷಲ್ ಉಪ್ಪಿನಕಾಯಿಗಳು - ಗೃಹಸ್ನೇಹಿ - ನಿಸರ್ಗದ ಮಡಿಲ