ಉತ್ತಮ ಆರೋಗ್ಯಕ್ಕೆ ಉಪಯುಕ್ತವಾಗಿರುವ ಸಾಂಪ್ರದಾಯಿಕ ವಿಶೇಷ ಟೀಗಳು (Traditional Special Tea)

Spread the love

ಉತ್ತಮ ಆರೋಗ್ಯಕ್ಕೆ ಉಪಯುಕ್ತವಾಗಿರುವ ಸಾಂಪ್ರದಾಯಿಕ ವಿಶೇಷ ಟೀಗಳು (Traditional Special Tea)
ಉತ್ತಮ ಆರೋಗ್ಯಕ್ಕೆ ಉಪಯುಕ್ತವಾಗಿರುವ ಸಾಂಪ್ರದಾಯಿಕ ವಿಶೇಷ ಟೀಗಳು (Traditional Special Tea)

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಮಗೆ ನೈಸರ್ಗಿಕ ಶಕ್ತಿಯ ಅವಶ್ಯಕತೆ ಇದ್ದೇ ಇರುತ್ತದೆ. ಅಂತಹ ನೈಸರ್ಗಿಕವಾಗಿ ಸಿಗುವ ಶ್ರೇಷ್ಠ ವಸ್ತುಗಳನ್ನು ಬಳಸಿ, ಆರೋಗ್ಯಕ್ಕೆ ಉಪಯುಕ್ತವಾಗುವಂತಹ ಟೀಗಳನ್ನು ತಯಾರಿಸುವ ವಿಧಾನಗಳನ್ನು ನಾವು ಇಂದಿನ ಲೇಖನದಲ್ಲಿ ವಿಶ್ಲೇಷಿಸೋಣ.

ಗರಿಕೆಯ ಟೀ

ಬೇಕಾಗುವ ಪದಾರ್ಥಗಳು

  • ಗರಿಕೆ ಹುಲ್ಲು 1 ಕಪ್
  • ಸೋಂಪು ಕಾಳು ½ ಚಮಚ
  • ಹಸಿ ಶುಂಠಿ 1 ಇಂಚು
  • ಏಲಕ್ಕಿ 2
  • ನಿಂಬೆ ರಸ 2 ಚಮಚ
  • ಜೇನುತುಪ್ಪ 1 ಚಮಚ

ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ತೆಗೆದುಕೊಂಡು, ಅದಕ್ಕೆ ಗರಿಕೆ ಹುಲ್ಲು, ಸೋಂಪು ಕಾಳು, ಹಸಿ ಶುಂಠಿ, ಏಲಕ್ಕಿ ಹಾಕಿ ಐದು ನಿಮಿಷಗಳ ಕಾಲ ಕುದಿಸಬೇಕು. ನಂತರ ಶೋಧಿಸಿಕೊಂಡು ಜೇನುತುಪ್ಪ ಹಾಗೂ ಲಿಂಬೆರಸವನ್ನು ಬೆರೆಸಿ ಕುಡಿಯಬೇಕು. ಅಲ್ಲಿಗೆ ಆರೋಗ್ಯಕರ ಗರಿಕೆ ಹುಲ್ಲಿನ ಟೀ ಸವಿಯಲು ಸಿದ್ದವಾಗುತ್ತದೆ.

ಗರಿಕೆಯ ಆರೋಗ್ಯಕರ ಉಪಯೋಗಗಳು

  • ಜ್ವರ ಬಂದಾಗ ಹಾಗೂ ಕಫ ಉತ್ಪತ್ತಿ ಜಾಸ್ತಿಯಾದಾಗ ಗರಿಕೆಯ ಟೀ ಉತ್ತಮವಾಗಿದೆ. ಈ ಟೀ ಕಫವನ್ನು ಕರಗಿಸಿ, ಜ್ವರದ ಸಮಯದ ಬಾಯಾರಿಕೆಯನ್ನು ನಿವಾರಿಸುತ್ತದೆ.
  • ಕೆಳಹೊಟ್ಟೆಯ ನೋವಿಗೆ ಕೂಡ ಈ ಟೀ ಉತ್ತಮವಾಗಿದೆ.
  • ಚರ್ಮದ ಸಮಸ್ಯೆಗಳಿಗೆ ಉತ್ತಮ ನಿವಾರಣೆಯನ್ನು ನೀಡುತ್ತದೆ.
  • ರಕ್ತದ ಶುದ್ಧತೆಯನ್ನು ಕಾಪಾಡಲು ಗರಿಕೆಯ ಸೇವನೆ ಅತಿ ಉತ್ತಮವಾಗಿದ್ದು, ಆರೋಗ್ಯಕ್ಕೆ ಉಪಯುಕ್ತವಾಗಿದೆ.
  • ಮೂಲವ್ಯಾಧಿ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡಿಸಲು ಉತ್ತಮವಾಗಿದ್ದು, ಮಲಬದ್ಧತೆಯ ಸಮಸ್ಯೆಗಳನ್ನು ಕಡಿಮೆಗೊಳಿಸುತ್ತದೆ.
  • ಹೆಣ್ಣು ಮಕ್ಕಳ ಋತುಚಕ್ರದ ಸಮಸ್ಯೆಗಳನ್ನು ಕ್ರಮಬದ್ಧವಾಗಿರಿಸಲು ಗರಿಕೆ ಟೀಯ ಸೇವನೆ ಉತ್ತಮವಾಗಿದೆ.
  • ಕೆಲವೊಮ್ಮೆ ಮೂತ್ರದಲ್ಲಿ ರಕ್ತ ಬೀಳುವ ಸಾಧ್ಯತೆಗಳು ಇರುತ್ತವೆ, ಅನೇಕ ಮೂತ್ರಕೋಶದ ಸೋಂಕುಗಳ ನಿವಾರಣೆಗೂ ಕೂಡ ಗರಿಕೆ ಉತ್ತಮ ಔಷಧವಾಗಿದೆ.

ಬ್ರಹ್ಮಕಮಲ ಹೂವಿನ ಟೀ

ಬೇಕಾಗುವ ಪದಾರ್ಥಗಳು

  • ಬ್ರಹ್ಮಕಮಲ ಹೂವು 1
  • ನಿಂಬೆ ರಸ 2 ಚಮಚ
  • ಜೇನುತುಪ್ಪ 1 ಚಮಚ
  • ಏಲಕ್ಕಿ ಪುಡಿ ಸ್ವಲ್ಪ

ಮಾಡುವ ವಿಧಾನ
ಮೊದಲಿಗೆ ಒಂದು ಲೋಟ ನೀರಿಗೆ ಬ್ರಹ್ಮಕಮಲ ಹೂವಿನ ದಳಗಳನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ನೀರು ಅರ್ಧದಷ್ಟು ಇಂಗಿದ ಮೇಲೆ ಓಲೆ ಆರಿಸಬೇಕು. ನಂತರ ಶೋಧಿಸಿಕೊಂಡು, ನಿಂಬೆರಸ ಹಾಗೂ ಜೇನುತುಪ್ಪವನ್ನು ಬೆರೆಸಿ ಕುಡಿಯಬೇಕು. ಅಲ್ಲಿಗೆ ಆರೋಗ್ಯಕ್ಕೆ ಅತಿ ಉತ್ತಮವಾಗಿರುವ ಬ್ರಹ್ಮಕಮಲ ಟೀ ಕುಡಿಯಲು ಸಿದ್ದವಾಗುತ್ತದೆ.

ಬ್ರಹ್ಮಕಮಲದ ಕೆಲವು ಆರೋಗ್ಯಕರ ಉಪಯೋಗಗಳು

  • ಅದ್ಭುತ ಪರಿಮಳವನ್ನು ಹೊಂದಿರುವ ಈ ಬ್ರಹ್ಮಕಮಲದ ಹೂವು ರಾತ್ರಿ ಸಮಯದಲ್ಲಿ ಅರಳುತ್ತದೆ. ವರ್ಷದಲ್ಲಿ ಒಮ್ಮೆ ಅಂದಾಜು ಜೂನ್ ತಿಂಗಳಿಂದ ಸಪ್ಟೆಂಬರ್ ತನಕ ಮಾತ್ರ ಅರಳುತ್ತದೆ.
  • ಈ ಬ್ರಹ್ಮಕಮಲದ ಟೀ ಕುಡಿಯುವುದರಿಂದ ಮೂತ್ರಜನಕಾಂಗಗಳ ಸೋಂಕುಗಳು ಕಡಿಮೆಯಾಗುತ್ತದೆ. ಹಾಗೆಯೇ ಮೂತ್ರದಲ್ಲಿನ ಇನ್ಫೆಕ್ಷನ್ ಗಳನ್ನು ಕೂಡ ನಿವಾರಿಸುತ್ತದೆ.
  • ನೆಗಡಿ, ಕೆಮ್ಮು ಹಾಗೂ ಜ್ವರದಂತಹ ಸಮಸ್ಯೆಗಳು ಎದುರಾದಾಗ ಈ ಬ್ರಹ್ಮಕಮಲದ ಟೀಯನ್ನು ಕುಡಿಯುವುದು ಅತಿ ಉತ್ತಮವಾಗಿದೆ.
  • ಮೂಳೆಗಳ ಉತ್ತಮ ಅರೋಗ್ಯಕ್ಕೂ ಕೂಡ ಈ ಟೀ ಉತ್ತಮವಾಗಿದೆ. ಈ ಟೀಯ ಸೇವನೆ ಕೀಲುಗಳ ಆರೋಗ್ಯಕ್ಕೆ ಕೂಡ ಒಳ್ಳೆಯದಾಗಿದೆ.
  • ಹೊಟ್ಟೆಗೆ ಹಸಿವು ಇಲ್ಲದಿರುವ ಸಮಯದಲ್ಲಿ ಈ ಟೀ ಉತ್ತಮವಾಗಿದ್ದು, ಹೊಟ್ಟೆ ಹಸಿವನ್ನು ಹೆಚ್ಚಿಸುತ್ತದೆ.
  • ಅನೇಕ ರೀತಿಯ ಲೈಂಗಿಕ ಸಮಸ್ಯೆಗಳಿಗೂ ಕೂಡ ಉತ್ತಮ ಪರಿಹಾರಗಳನ್ನು ನೀಡುತ್ತದೆ.
  • ಜೀರ್ಣಕ್ರಿಯೆಗೆ ಅತಿ ಉತ್ತಮವಾಗಿದ್ದು, ಯಕೃತ್ತಿನಲ್ಲಿನ ಸಮಸ್ಯೆಗಳನ್ನು ದೂರಗೊಳಿಸಿ, ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.

ಪುದೀನ ಟೀ

ಬೇಕಾಗುವ ಪದಾರ್ಥಗಳು

  • ಪುದೀನ ಸೊಪ್ಪು 4 ಎಲೆಗಳು
  • ಹಸಿ ಶುಂಠಿ 1 ಇಂಚು
  • ನಿಂಬೆರಸ 2 ಚಮಚ
  • ಜೇನುತುಪ್ಪ 1 ಚಮಚ

ಮಾಡುವ ವಿಧಾನ
ಒಂದು ಲೋಟ ನೀರಿಗೆ ಪುದೀನ ಎಲೆಗಳು ಹಾಗೂ ಹಸಿ ಶುಂಠಿಯನ್ನು ಸ್ವಲ್ಪ ಜಜ್ಜಿಕೊಂಡು ಹಾಕಿ, ಕುದಿಸಿಕೊಳ್ಳಬೇಕು. ಕುದಿಯುವ ನೀರು ಅರ್ಧದಷ್ಟು ಇಂಗಿದ ಮೇಲೆ ಒಲೆಯನ್ನು ಆರಿಸಿ, ಶೋಧಿಸಿಕೊಳ್ಳಬೇಕು. ಶೋಧಿಸಿದ ನಂತರ ಲಿಂಬೆರಸ ಹಾಗೂ ಜೇನುತುಪ್ಪವನ್ನು ಬೆರೆಸಿ ಕುಡಿಯಬೇಕು. ಇದು ಆರೋಗ್ಯಕ್ಕೆ ಅತಿ ಉತ್ತಮವಾಗಿದ್ದು, ನಿತ್ಯವೂ ಕುಡಿಯಲೇ ಬೇಕಾದ ಒಂದು ಪಾನೀಯವಾಗಿದೆ.

ಪುದೀನದ ಆರೋಗ್ಯಕರ ಉಪಯೋಗಗಳು

  • ಹೊಟ್ಟೆಯ ಆರೋಗ್ಯಕ್ಕೆ ಪುದೀನ ಅತಿ ಉತ್ತಮವಾಗಿದ್ದು, ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರಗೊಳಿಸುತ್ತದೆ.
  • ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
  • ದೇಹದಲ್ಲಿ ಉಂಟಾಗುವ ಅನೇಕ ಸಾಮಾನ್ಯ ನೋವುಗಳಾದ ಸೊಂಟ ನೋವು, ಬೆನ್ನು ನೋವು ಹಾಗೂ ಕಾಲು ನೋವುಗಳನ್ನು ನಿವಾರಿಸುತ್ತದೆ.
  • ದಮ್ಮಿನ ಸಮಸ್ಯೆ ಇದ್ದವರು ಈ ಪುದೀನ ಟೀ ಕುಡಿಯುವುದು ಅತಿ ಉತ್ತಮವಾಗಿದೆ. 
  • ಸರಾಗ ಉಸಿರಾಟಕ್ಕೆ ಉತ್ತಮ ಮದ್ದಾಗಿದೆ.
  • ಪಿತ್ತದ ಸಮಸ್ಯೆಗಳಿಂದ ಬರುವ ವಾಕರಿಕೆ, ವಾಂತಿಗಳನ್ನು ಕೂಡ ಕಡಿಮೆಗೊಳಿಸುತ್ತದೆ.
  • ಅರೋಗ್ಯವರ್ಧಕ ಗುಣಗಳನ್ನು ಕೂಡ ಹೊಂದಿದೆ.

ಕೊತ್ತಂಬರಿ ಕಾಳಿನ ಟೀ

ಬೇಕಾಗುವ ಪದಾರ್ಥಗಳು

  • ಕೊತ್ತಂಬರಿ ಕಾಳು 2 ಚಮಚ
  • ಜೀರಿಗೆ ½ ಚಮಚ
  • ಶುಂಠಿ 1 ಇಂಚು
  • ಬೆಲ್ಲ 1 ಚಮಚ
  • ಸೈಂಧವ ಲವಣ ¼ ಚಮಚ
  • ಜೇನುತುಪ್ಪ 1 ಚಮಚ
  • ನಿಂಬೆ ರಸ 2 ಚಮಚ

ಮಾಡುವ ವಿಧಾನ
ಕೊತ್ತಂಬರಿ ಕಾಳು, ಜೀರಿಗೆ, ಶುಂಠಿ, ಬೆಲ್ಲ ಇವು ನಾಲ್ಕನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು. ಚೆನ್ನಾಗಿ ಕುದಿ ಬಂದ ನಂತರ ಒಲೆಯನ್ನು ಆರಿಸಿ, ಶೋಧಿಸಿಕೊಳ್ಳಬೇಕು. ನಂತರ ಸೈಂಧವ ಲವಣ, ಜೇನುತುಪ್ಪ, ನಿಂಬೆ ರಸ ಇವು ಮೂರನ್ನು ಸೇರಿಸಿ, ಕುಡಿಯಬೇಕು. ಅಲ್ಲಿಗೆ ಕೊತ್ತಂಬರಿ ಕಾಳಿನ ಟೀ ಸಿದ್ದವಾಗುತ್ತದೆ.

ಕೊತ್ತಂಬರಿ ಕಾಳಿನ ಟೀಯ ಆರೋಗ್ಯಕರ ಉಪಯೋಗಗಳು

  • ಕೊತ್ತಂಬರಿ ಟೀಯಲ್ಲಿ ವಿಟಮಿನ್ ಎ, ಬಿ, ಬಿ2, ಸಿ ಇದ್ದು, ಕಾರ್ಬೋಹೈಡ್ರೆಟ್, ಕ್ಯಾಲ್ಸಿಯಂ, ಫಾಸ್ಪರಸ್, ಪ್ರೊಟೀನ್ ಗಳು ಹೇರಳವಾಗಿದೆ.
  • ದೇಹದಲ್ಲಿನ ಉಷ್ಣವನ್ನು ತಗ್ಗಿಸಲು ಈ ಟೀ ಉತ್ತಮವಾಗಿದೆ.
  • ಹೊಟ್ಟೆನೋವಿಗೆ ಉತ್ತಮ ಮದ್ದು ಕೊತ್ತಂಬರಿ ಟೀ.
  • ಜ್ವರ ಬಂದ ನಂತರದ ಸುಸ್ತು, ಆಯಾಸ ಹಾಗೂ ಬಾಯಾರಿಕೆಯನ್ನು ತಣಿಸಲು ಉಪಯುಕ್ತವಾಗಿದೆ.
  • ನಾಲಿಗೆಯನ್ನು ರುಚಿಯನ್ನು ಕಳೆದುಕೊಂಡಾಗ ಈ ಟೀಯನ್ನು ಕುಡಿಯುವುದು ಒಳ್ಳೆಯದು. ಇದು ನಾಲಿಗೆಯ ರುಚಿಯನ್ನು ಮರಳಿಸಲು ಉತ್ತಮವಾಗಿದೆ.
  • ಪಿತ್ತದಿಂದ ಬರುವ ಸಮಸ್ಯೆಗಳಾದ ವಾಂತಿ, ತಲೆ ತಿರುಗುವಿಕೆ ಹಾಗೂ ವಾಕರಿಕೆಯನ್ನು ಕಡಿಮೆಗೊಳಿಸುತ್ತದೆ.
  • ಗರ್ಭಿಣಿಯರು ಕೂಡ ಈ ಟೀಯನ್ನು ಸೇವಿಸಬಹುದು, ಇದು ಆರೋಗ್ಯಕ್ಕೆ ಉತ್ತಮವಾಗಿದೆ.
  • ಸುಲಭ ಜೀರ್ಣಕ್ರಿಯೆಗೆ ಉತ್ತಮ ಪರಿಹಾರಗಳನ್ನು ನೀಡುತ್ತದೆ.

ಅರಿಶಿಣದ ಟೀ

ಬೇಕಾಗುವ ಪದಾರ್ಥಗಳು

  • ಅರಿಶಿಣ ಕೊಂಬು 1 ತುಂಡು
  • ಚಕ್ಕೆ 1 ತುಂಡು
  • ಕಾಳು ಮೆಣಸು 6
  • ಶುಂಠಿ 1 ತುಂಡು
  • ಹಾಲು ಸ್ವಲ್ಪ
  • ಬೆಲ್ಲ 1 ಚಮಚ

ಮಾಡುವ ವಿಧಾನ
ಮೊದಲಿಗೆ ಅರಿಶಿಣದ ಕೊಂಬನ್ನು ಜಜ್ಜಿಕೊಳ್ಳಬೇಕು. ಒಂದು ಲೋಟ ನೀರಿಗೆ ಜಜ್ಜಿಕೊಂಡು ಅರಿಶಿಣ ಕೊಂಬು, ಜಜ್ಜಿದ ಚಕ್ಕೆ, ಶುಂಠಿ, ಕಾಳುಮೆಣಸು ಎಲ್ಲವನ್ನು ಸೇರಿಸಬೇಕು. ಚೆನ್ನಾಗಿ ಕುದಿ ಬಂದ ನಂತರ ಶೋಧಿಸಿಕೊಂಡು ಹಾಲಿಗೆ ಬೆರೆಸಿ, ಸ್ವಲ್ಪ ಬೆಲ್ಲವನ್ನು ಸೇರಿಸಿ ಕುಡಿಯಬೇಕು. ಅಲ್ಲಿಗೆ ಅರಿಶಿಣದ ಟೀ ಸಿದ್ಧವಾಗುತ್ತದೆ.

ಅರಿಶಿಣ ಟೀಯ ಉಪಯೋಗಗಳು

  • ಅರಿಶಿಣವು ಉತ್ತಮ ಕ್ರಿಮಿನಶಾಕವಾಗಿದ್ದು, ಈ ಅರಿಶಿಣ ಟೀ ಕೂಡ ಉತ್ತಮ ಕ್ರಿಮಿನಾಶಕವಾಗಿದೆ.
  • ರಕ್ತಶೋಧಕ ಗುಣಗಳನ್ನು ಕೂಡ ಹೊಂದಿದೆ.
  • ಕಫವನ್ನು ಕರಗಿಸಲು ಉತ್ತಮ ಟೀ ಇದಾಗಿದೆ.
  • ಮಧುಮೇಹಿಗಳು ಕೂಡ ಈ ಟೀಯನ್ನು ಸ್ವೀಕರಿಸಬಹುದು.
  • ತೂಕ ಇಳಿಸಲು ಕೂಡ ಅರಿಶಿಣದ ಟೀ ಉತ್ತಮವಾಗಿರುತ್ತದೆ.
  • ಅರಿಶಿಣವು ಸೌಂದರ್ಯವರ್ಧಕ ಗುಣಗಳನ್ನು ಹೊಂದಿರುವ ಕಾರಣ, ಅರಿಶಿಣ ಟೀಯ ಸೇವನೆಯು ಕೂಡ ಸೌಂದರ್ಯವರ್ಧಕ ಗುಣಗಳನ್ನು ನೀಡುತ್ತದೆ.

ಒಣ ದ್ರಾಕ್ಷಿ ಟೀ

ಬೇಕಾಗುವ ಪದಾರ್ಥಗಳು

  • ಒಣ ದ್ರಾಕ್ಷಿ 1 ಕಪ್
  • ನಿಂಬೆ ರಸ 2 ಚಮಚ
  • ಜೇನುತುಪ್ಪ 1 ಚಮಚ
  • ಏಲಕ್ಕಿ ಪುಡಿ ¼ ಚಮಚ

ಮಾಡುವ ವಿಧಾನ
ಮೊದಲಿಗೆ ಒಣ ದ್ರಾಕ್ಷಿಗಳನ್ನು ಚೆನ್ನಾಗಿ ಜಜ್ಜಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಕುದಿಸಲು ಇಡಬೇಕು. ಕುದಿಯುವ ನೀರಿಗೆ ಜಜ್ಜಿದ ದ್ರಾಕ್ಷಿಗಳನ್ನು ಸೇರಿಸಿ, ಅರ್ಧದಷ್ಟು ನೀರು ಇಂಗುವ ತನಕ ಕುದಿಸಬೇಕು. ನಂತರ ಶೋಧಿಸಿಕೊಂಡು ಜೇನುತುಪ್ಪ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಬೇಕು. ಈ ಟೀಯನ್ನು ಒಂದು ಗಾಜಿನ ಪಾತ್ರೆಯಲ್ಲಿ ಶೇಖರಿಸಿ ಇಡಬೇಕು. ಪ್ರತಿದಿನ ಬೆಳಿಗ್ಗೆ 2 ಚಮಚ ಒಣದ್ರಾಕ್ಷಿ ಟೀಯನ್ನು ಕುಡಿಯಬೇಕು.

ಒಣದ್ರಾಕ್ಷಿ ಟೀಯ ಪ್ರಯೋಜನಗಳು

  • ಹೊಟ್ಟೆ ಉಬ್ಬರ ಇಲ್ಲವೇ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಒಣದ್ರಾಕ್ಷಿ ಟೀ ಉತ್ತಮ ಪರಿಹಾರವನ್ನು ನೀಡುತ್ತದೆ.
  • ಮುಖದಲ್ಲಿನ ಮೊಡವೆ, ಗುಳ್ಳೆಗಳ ನಿವಾರಣೆಗೆ ಒಣದ್ರಾಕ್ಷಿ ಟೀಯನ್ನು ಪ್ರತಿನಿತ್ಯ 45 ದಿನಗಳ ಕಾಲ 2 ಚಮಚ ಕುಡಿಯಬೇಕು. ಇದು ಮೊಡವೆಗಳನ್ನು ಕಡಿಮೆಗೊಳಿಸಲು ಅತಿ ಉತ್ತಮವಾಗಿದೆ.
  • ಆಹಾರ ಪದಾರ್ಥಗಳು ಇಷ್ಟವಾಯಿತು ಎಂದು ಜಾಸ್ತಿ ತಿಂದರೆ, ಹೊಟ್ಟೆ ಭಾರವಾಗುತ್ತದೆ. ಹೊಟ್ಟೆ ಭಾರವಾದಗ ಈ ಟೀಯನ್ನು ಕುಡಿಯುವುದು ಉತ್ತಮವಾಗಿದೆ. ಇದರಿಂದ ಹೊಟ್ಟೆ ಭಾರ ತ್ವರಿತವಾಗಿ ಕಡಿಮೆಯಾಗುತ್ತದೆ.
  • ಶರೀರಕ್ಕೆ ಶಕ್ತಿಯನ್ನು ಒದಗಿಸುವ ಟಾನಿಕ್ ನಂತೆ ಈ ಒಣದ್ರಾಕ್ಷಿ ಟೀ ಕೆಲಸ ಮಾಡುತ್ತದೆ.

ನೆಲನೆಲ್ಲಿ ಟೀ

ಬೇಕಾಗುವ ಪದಾರ್ಥಗಳು

  • ನೆಲನೆಲ್ಲಿ ಗಿಡಗಳು 2
  • ಜೇನುತುಪ್ಪ 1 ಚಮಚ
  • ಏಲಕ್ಕಿ 2
  • ನಿಂಬೆರಸ 2 ಚಮಚ
  • ಅಮೃತಬಳ್ಳಿ ಸ್ವಲ್ಪ

ಮಾಡುವ ವಿಧಾನ

ನೆಲನೆಲ್ಲಿ ಗಿಡ ಹಾಗೂ ಅಮೃತಬಳ್ಳಿಯನ್ನು ಚೆನ್ನಾಗಿ ತೊಳೆದುಕೊಂಡು, ಸ್ವಲ್ಪ ಜಜ್ಜಿಕೊಂಡು, ಒಂದು ಲೋಟ ನೀರಿನಲ್ಲಿ ಎರಡನ್ನು ಹಾಕಿ ಹಾಗೂ ಜೊತೆಗೆ ಏಲಕ್ಕಿಯನ್ನು ಸೇರಿಸಿಕೊಂಡು ಚೆನ್ನಾಗಿ ಕುದಿಸಿಕೊಳ್ಳಬೇಕು. ಈಗ ಜೇನುತುಪ್ಪ ಹಾಗೂ ನಿಂಬೆರಸವನ್ನು ಸೇರಿಸಿಕೊಂಡು, ಕುಡಿಯಬೇಕು. ಆರೋಗ್ಯವರ್ಧಕ ಟೀ ಇದಾಗಿದೆ.

ನೆಲನೆಲ್ಲಿಯ ಟೀಯ ಉತ್ತಮ ಉಪಯೋಗಗಳು

  • ಆಲ್ಕೋಹಾಲ್ ಸೇವನೆಯಿಂದ ಲಿವರ್ ಗಳಿಗೆ ಸಮಸ್ಯೆಗಳು ಉಂಟಾದರೆ ಈ ಟೀ ಸೇವನೆ ಉತ್ತಮ ಪರಿಹಾರಗಳನ್ನು ನೀಡುತ್ತದೆ.
  • ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ, ಅರೋಗ್ಯವನ್ನು ಉತ್ತಮವಾಗಿರಿಸುತ್ತದೆ.
  • ಕಫ ಹಾಗೂ ಪಿತ್ತಕ್ಕೂ ಈ ಟೀ ಉತ್ತಮವಾಗಿದೆ.
  • ಹೊಟ್ಟೆಯಲ್ಲಿನ ಹುಣ್ಣುಗಳಿಗೂ ಇದು ಉತ್ತಮ ಪರಿಹಾರಗಳನ್ನು ನೀಡುತ್ತದೆ.

ಈ ಮೇಲಿನ ಎಲ್ಲಾ ಟೀಗಳು ಆರೋಗ್ಯಕ್ಕೆ ಅತಿ ಉತ್ತಮವಾಗಿದ್ದು, ಪ್ರತಿದಿನ ಕುಡಿಯುವುದು ಕೂಡ ಒಳ್ಳೆಯದಾಗಿದೆ. ಈ ಮೇಲಿನ ಯಾವುದೇ ಟೀಗಳಲ್ಲಿ ಸಕ್ಕರೆಯನ್ನು ಎಲ್ಲಿಯೂ ಕೂಡ ಉಪಯೋಗಿಸಲಾಗುವುದಿಲ್ಲ. ಸಕ್ಕರೆಯು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಎಂಬ ಕಾರಣಕ್ಕೆ ಸಕ್ಕರೆಯ ಉಪಯೋಗ ಕಡಿಮೆ ಮಾಡಬೇಕು. ಮೇಲಿನ ಎಲ್ಲಾ ಟೀಗಳ ಉಪಯೋಗಗಳನ್ನು ಅರಿತು, ಸಮಸ್ಯೆಗಳಿಗೆ ಉತ್ತಮ ಪರಿಹಾರಗಳನ್ನು ಪಡೆದುಕೊಳ್ಳಬೇಕು ಎಂಬುದು ಈ ಲೇಖನದ ಮುಖ್ಯ ಉದ್ದೇಶ.

-> ಇನ್ನೂ ಹೆಚ್ಚಿನ ಎಲೆ ಹಾಗೂ ಬೇರು ಟೀಗಳಯ ಅನೇಕ ಮಾಹಿತಿಗಳನ್ನು ಅರಿಯಲು ನಮ್ಮ ಹಿಂದಿನ ಲೇಖನಗಳನ್ನು ಓದಿರಿ

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

1 thought on “ಉತ್ತಮ ಆರೋಗ್ಯಕ್ಕೆ ಉಪಯುಕ್ತವಾಗಿರುವ ಸಾಂಪ್ರದಾಯಿಕ ವಿಶೇಷ ಟೀಗಳು (Traditional Special Tea)”

  1. Pingback: ಪುದೀನಾ ಎಲೆಗಳ ಅದ್ಭುತ ಆರೋಗ್ಯಕರ ಮನೆಮದ್ದು ಮತ್ತು ಪ್ರಯೋಜನಗಳು (Mint amazing health benefits) - ಗೃಹಸ್ನೇಹಿ - ನಿಸರ್ಗದ ಮಡಿಲಲ್

Leave a Comment

Your email address will not be published. Required fields are marked *

Scroll to Top