
ಹೂವುಗಳು ಗಿಡದ ಅಂದವನ್ನು ಹೆಚ್ಚಿಸುವ ಸುಂದರ ಭಾಗವಾಗಿದೆ. ಗಿಡ ಮರದ ಆಕರ್ಷಣಿಯ ಅಂಗವಾದ ಹೂವು, ಬರಿ ಅಲಂಕಾರಕ್ಕೆ ಅಷ್ಟೇ ಸೀಮಿತವಾಗಿರದೆ ಅರೋಗ್ಯಕ್ಕೂ ಉತ್ತಮವಾಗಿದೆ. ಹೂವುಗಳಿಂದ ಅನೇಕ ಆರೋಗ್ಯಕರ ಅಡುಗೆಗಳನ್ನು ನಾವು ತಯಾರಿಸಬಹುದು. ಅದರಲ್ಲಿ ಕೆಲವನ್ನು ನಾವು ಈ ಲೇಖನದಲ್ಲಿ ತಿಳಿಯೋಣ.
1. ಅಗಸೆ ಹೂವಿನ ತಂಬುಳಿ
ಬೇಕಾಗುವ ಪದಾರ್ಥಗಳು:
- ಅಗಸೆ ಹೂವು 1 ಕಪ್
- ಜೀರಿಗೆ 1 ಚಮಚ
- ಕರಿಮೆಣಸು 4
- ಕಾಯಿ ತುರಿ 1 ಕಪ್
- ಚಿಟಿಕೆ ಅರಿಶಿನ
- ಮೊಸರು 1 ಕಪ್
- ಸಾಸಿವೆ
- ಕರಿಬೇವು
- ತುಪ್ಪ
- ಹಿಂಗು
- ಉಪ್ಪು
ಮಾಡುವ ವಿಧಾನ:
ಅಗಸೆ ಹೂವನ್ನು ಮೊದಲಿಗೆ ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ಹುರಿದ ಅಗಸೆ ಹೂವಿನ ಜೊತೆ ಕಾಯಿ ತುರಿ, ಅರಿಶಿಣ, ಜೀರಿಗೆ, ಕರಿ ಮೆಣಸು ಹಾಗೂ ಉಪ್ಪು ಹಾಕಿಕೊಂಡು ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣಕ್ಕೆ ಮೊಸರು ಮತ್ತು ಹಿಂಗು ಸೇರಿಸಿ ಸ್ವಲ್ಪ ನೀರು ಸೇರಿಸಿ ತಂಬುಳಿ ಹದ ಬರುವಂತೆ ನೋಡಿಕೊಳ್ಳಬೇಕು. ನಂತರ ಸಾಸಿವೆ ಕರಿಬೇವಿನ ಒಗ್ಗರಣೆ ಹಾಕಿದರೆ ಅಗಸೆ ಹೂವಿನ ತಂಬುಳಿ ಸಿದ್ಧವಾಗುತ್ತದೆ.
2. ಅಗಸೆ ಹೂವಿನ ಗೊಜ್ಜು
ಬೇಕಾಗುವ ಪದಾರ್ಥಗಳು:
- ಅಗಸೆ ಹೂವು 1 ಕಪ್
- ಈರುಳ್ಳಿ 1ಕಪ್
- ಟೊಮೆಟೊ 1 ಸಣ್ಣದು
- ಮೆಂತ್ಯ 10 ಕಾಳು
- ಜೀರಿಗೆ 1/2 ಚಮಚ
- ಎಳ್ಳು 1/2 ಚಮಚ
- ಉದ್ದಿನ ಬೇಳೆ 1/2 ಚಮಚ
- ಕಾಯಿ ತುರಿ 1 ಕಪ್
- ಒಣಮೆಣಸಿನ ಕಾಯಿ 5 ಖಾರಕ್ಕೆ ಅನುಗುಣವಾಗಿ
- ಇಂಗು
- ಕಡಲೆ ಬೆಳೆ 1 ಚಮಚ
- ಹುಣಸೆ ರಸ 1 ಚಮಚ
- ಬೆಲ್ಲ 1 ಚಮಚ
- ಕರಿಬೇವು
- ಉಪ್ಪು
- ಎಣ್ಣೆ
ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಒಣಮೆಣಸು, ಜೀರಿಗೆ, ಮೆಂತ್ಯೆ, ಉದ್ದಿನಬೇಳೆ, ಎಳ್ಳು ಎಲ್ಲವನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಕಾಯಿ ತುರಿಯನ್ನು ಸ್ವಲ್ಪ ಬೆಚ್ಚಗೆ ಹುರಿದುಕೊಳ್ಳಬೇಕು. ಹುರಿದಕೊಂಡ ಎಲ್ಲವನ್ನು ಹಾಕಿ ರುಬ್ಬಿಕೊಳ್ಳಬೇಕು. ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ನಂತರ ಸ್ವಲ್ಪ ಉದ್ದಿನಬೇಳೆ, ಕಡ್ಲೆ ಬೇಳೆ, ಸಾಸಿವೆ ಹಾಕಿ ಕರಿಬೇವನ್ನು ಸೇರಿಸಿ, ನಂತರ ಅಗಸೆಹೂವು ಹಾಗೂ ಟೊಮೆಟೊವನ್ನು ಸೇರಿಸಿ ಚೆನ್ನಾಗಿ 3 ನಿಮಿಷ ಬಾಡಿಸಿಕೊಳ್ಳಬೇಕು. ಚಿಟಿಕೆ ಹಿಂಗನ್ನು ಸೇರಿಸಬೇಕು. ನಂತರ ರುಬ್ಬಿಟ್ಟ ಮಿಶ್ರಣ ಹಾಕಿ ತಳ ತಾಕದಂತೆ ಕೈ ಆಡಿಸಬೇಕು. ಅದಕ್ಕೆ ಬೆಲ್ಲ, ಹುಣಸೆ ರಸ ಹಾಗೂ ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು. ಅಲ್ಲಿಗೆ ಅಗಸೆ ಹೂವಿನ ಗೊಜ್ಜು ಸಿದ್ದವಾಗುತ್ತದೆ.
ಅಗಸೆ ಹೂವಿನ ಪ್ರಯೋಜನಗಳು:
- ಅಜೀರ್ಣ ಆಗದಂತೆ ಮಾಡಿ ಮಲಬದ್ಧತೆಯನ್ನು ನಿವಾರಿಸುತ್ತದೆ.
- ಕ್ಯಾಲ್ಸಿಯಂ ಹಾಗು ಕಬ್ಬಿಣದ ಅಂಶ ಇರುವುದರಿಂದ ದೇಹಕ್ಕೆ ಆರೋಗ್ಯಕರ.
- ಬಿಳಿ ಮುಟ್ಟು ಸಮಸ್ಯೆ ಇದ್ದರೆ ಇದು ರಾಮಬಾಣವಾಗಿದೆ.
- ಗ್ಯಾಸ್ಟ್ರಿಕ್ ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ.
- ಶರೀರದಲ್ಲಿನ ಕಲ್ಮಶವನ್ನು ಹೊರಕಳಿಸಿ ಶರೀರವನ್ನು ಶುದ್ಧವಾಗಿಸುತ್ತದೆ.
- ಹೊಟ್ಟೆಯೊಳಗಿನ ಹುಣ್ಣುಗಳನ್ನು ನಿವಾರಿಸುತ್ತದೆ.
- ಕಬ್ಬಿಣ ಹಾಗೂ ಕ್ಯಾಲ್ಸಿಯಂ ಅಂಶವು ದೇಹಕ್ಕೆ ಈ ಆಹಾರದಿಂದ ದೊರಕುತ್ತದೆ.
3. ಬಾಳೆ ಹೂವಿನ ತಂಬುಳಿ
ಬೇಕಾಗುವ ಪದಾರ್ಥಗಳು:
- ಬಾಳೆ ಹೂವು 1 ಕಪ್
- ಹುಣಸೆ ಹಣ್ಣು
- ಜೀರಿಗೆ 1 ಚಮಚ
- ಕಾಯಿ ತುರಿ 1 ಕಪ್
- ಮೊಸರು
- ಒಣ ಮೆಣಸಿನ ಕಾಯಿ
- ಉಪ್ಪು
ಮಾಡುವ ವಿಧಾನ:
ಬಾಳೆ ಹೂವನ್ನು ಚೆನ್ನಾಗಿ ತೊಳೆದುಕೊಂಡು ಹುಣಸೆ ರಸದಲ್ಲಿ ಬೇಯಿಸಿಕೊಳ್ಳಬೇಕು. ತಣ್ಣಗಾದ ಮೇಲೆ ಬಾಳೆ ಹೂವಿನ ಜೊತೆ ಕಾಯಿತುರಿ, ಜೀರಿಗೆ ಹಾಗೂ ಒಂದು ನಾಲ್ಕು ಒಣ ಮೆಣಸು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಮಿಶ್ರಣಕ್ಕೆ ಮೊಸರು ಹಾಗು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ ಒಗ್ಗರಣೆ ಕೊಟ್ಟರೆ ಬಾಳೆ ಹೂವಿನ ತಂಬುಳಿ ಸಿದ್ಧವಾಗುತ್ತದೆ.
ಬಾಳೆ ಹೂವಿನ ಪ್ರಯೋಜನಗಳು:
- ಬಾಳೆ ಹೂವಿನಲ್ಲಿ ಹೇರಳವಾದ ವಿಟಮಿನ್ ಎ ಮತ್ತು ವಿಟಮಿನ್ ಸಿ , ಕ್ಯಾಲ್ಸಿಯಂ, ಕಬ್ಬಿಣ, ನಾರಿನಂಶ ಹಾಗು ಪೊಟ್ಯಾಷಿಯಂ ಸಹ ಇದ್ದು ದೇಹಕ್ಕೆ ಉತ್ತಮ ವಾಗಿದೆ.
- ಮುಟ್ಟಿನ ಸಮಯದಲ್ಲಿನ ಹೆಚ್ಚಿನ ರಕ್ತ ಸ್ರಾವವನ್ನು ಕಡಿಮೆ ಮಾಡಿಸುತ್ತದೆ.
- ಗರ್ಭಕೋಶದ ಆರೋಗ್ಯಕ್ಕೆ ಅತ್ಯಂತ ಉತ್ತಮವಾಗಿದೆ
- ರಕ್ತವನ್ನು ವೃದ್ಧಿಸುತ್ತದೆ.
- ಮಾನಸಿಕ ಒತ್ತಡವನ್ನು ತಗ್ಗಿಸುತ್ತದೆ.
- ಬಾಣಂತಿಯರಿಗೆ ಉತ್ತಮ ಆಹಾರವಾಗಿದೆ.
3. ಕೆಂಪು ದಾಸವಾಳದ ಗೊಜ್ಜು
ಬೇಕಾಗುವ ಪದಾರ್ಥಗಳು:
- ಕೆಂಪು ದಾಸವಾಳದ ಹೂ 5 ( ದಳಗಳನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ)
- ಹುಣಸೆ ರಸ 3 ಚಮಚ
- ಬೆಲ್ಲ 3 ಚಮಚ
- ಒಣ ಮೆಣಸಿನಕಾಯಿ 5
- ಉದ್ದಿನ ಬೇಳೆ 1/2 ಚಮಚ
- ಮೆಂತ್ಯ 10 ಕಾಳು
- ಎಳ್ಳು 1/2 ಚಮಚ
- ಸಾಸಿವೆ
- ತುಪ್ಪ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಇಂಗು
ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಒಣ ಮೆಣಸಿನಕಾಯಿ, ಉದ್ದಿನ ಬೇಳೆ, ಮೆಂತ್ಯ, ಎಳ್ಳು ಹುರಿದುಕೊಳ್ಳಬೇಕು. ನಂತರ ಇದೆಲ್ಲದರ ಒಣ ಪುಡಿಯನ್ನು ತಯಾರಿಸಬೇಕು. ಈಗ ಬಾಣಲೆಗೆ ತುಪ್ಪ ಹಾಕಿ, ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಹಾಕಿಕೊಳ್ಳಬೇಕು. ಅದಕ್ಕೆ ದಾಸವಾಳದ ಹೂಗಳನ್ನು ಹಾಕಿ 2 ನಿಮಿಷ ಕೈ ಆಡಿಸಬೇಕು. ನಂತರ ಹುಣಸೆ ರಸ, ಬೆಲ್ಲ, ಮಾಡಿಟ್ಟಿರುವ ಪುಡಿ ಹಾಕಿ ಕುದಿಸಿಬೇಕು. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಬೆರೆಸಿದರೆ ಕೆಂಪು ದಾಸವಾಳದ ಗೊಜ್ಜು ಸವಿಯಲು ಸಿದ್ದವಾಗುತ್ತದೆ.
ಕೆಂಪು ದಾಸವಾಳ ಹೂವಿನ ಪ್ರಯೋಜನಗಳು:
- ಹೆಣ್ಣು ಮಕ್ಕಳಲ್ಲಿ ಋತುಚಕ್ರವು ಸಮಯಕ್ಕೆ ಸರಿಯಾಗಿ ಆಗದಿದ್ದರೆ ಈ ಗೊಜ್ಜು ಪರಿಣಾಮಕಾರಿಯಾಗಿದೆ.
- ಬಿಳಿ ಮುಟ್ಟಿನ ಸಮಸ್ಯೆಗೂ ಉತ್ತಮ ಪರಿಹಾರವಾಗಿದೆ.
- ಕೂದಲಿನ ಅರೋಗ್ಯಕ್ಕೂ ಉತ್ತಮವಾಗಿದೆ.
- ಮೊಡವೆಗಳಿಗೂ ಉತ್ತಮ ಪರಿಹಾರವಾಗಿದೆ.
- ಗರ್ಭಕೋಶದ ಅರೋಗ್ಯಕ್ಕೂ ಪುಷ್ಠಿ ನೀಡುತ್ತದೆ.
- ಒಟ್ಟಿನಲ್ಲಿ ಸ್ತ್ರೀ ಸ್ನೇಹಿ ಎನ್ನಬಹುದಾಗಿದೆ.
ಇಷ್ಟೆಲ್ಲ ಆರೋಗ್ಯಕರ, ರುಚಿಕರ ಖಾದ್ಯಗಳನ್ನು ಒಮ್ಮೆ ತಯಾರಿಸಿ ಸವಿಯೋಣ ಹಾಗೂ ಉತ್ತಮ ಫಲಿತಾಂಶವನ್ನು ಪಡೆಯೋಣ ಎಂಬುದೇ ಈ ಲೇಖನದ ಆಶಯ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.