
ಅನ್ನ,ದೋಸೆ,ಇಡ್ಲಿ,ಚಪಾತಿ ಹಾಗು ರೊಟ್ಟಿಯ ಬದಿಯಲ್ಲಿ ಪಲ್ಯದ ಬದಲು ವಿವಿಧ ರೀತಿಯ ಚಟ್ನಿ ಪುಡಿಗಳಿದ್ದರೆ ಎಷ್ಟು ಸೊಗಸು ಅಲ್ಲವೇ?!! ಚಟ್ನಿ ಪುಡಿ ಮತ್ತು ಎಣ್ಣೆ ಅಥವಾ ತುಪ್ಪ ಕಲಸಿ ತಿಂದರೆ ರುಚಿಯೋ ರುಚಿ. ಅಂತಹ ಚಟ್ನಿ ಪುಡಿಗಳನ್ನು ತಯಾರಿಸುವ ವಿಧಾನವನ್ನು ಈ ಲೇಖನದಲ್ಲಿ ಪ್ರಸ್ತುತ ಪಡಿಸಲಾಗಿದೆ.
ನೆಲಗಡಲೆ ಚಟ್ನಿ ಪುಡಿ
ಬೇಕಾಗುವ ಸಾಮಗ್ರಿಗಳು
- ನೆಲಗಡಲೆ – 1ಕಪ್
- ಮೆಣಸಿನ ಪುಡಿ – 1/2 ಕಪ್ ( ಖಾರಕ್ಕೆ ಅನುಗುಣವಾಗಿ)
- ಹುಣಸೆ ಹಣ್ಣು – 1/4 ಲಿಂಬೆ ಗಾತ್ರದಷ್ಟು
- ಬೆಲ್ಲ – ಒಂದು ಚಮಚ
- ಹಿಂಗು – 1/2 ಚಮಚ
- ಎಣ್ಣೆ
- ಉಪ್ಪು
ಮಾಡುವ ವಿಧಾನ
ನೆಲಗಡಲೆ ಬೀಜಗಳನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಹಾಗೆ ಸ್ವಲ್ಪ ಆರಲು ಬಿಟ್ಟು ನಂತರ ಒಂದು ಮಿಕ್ಸಿ ಜಾರಿಗೆ ಹುರಿದ ನೆಲಗಡಲೆ, ಮೆಣಸಿನ ಮುಡಿ, ಹುಣಸೆ, ಬೆಲ್ಲ , ಹಿಂಗು ಹಾಗು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಪುಡಿ ಮಾಡಿಕೊಳ್ಳಬೇಕು. ನುಣ್ಣಗೆ ಪುಡಿಯಾದ ನಂತರ ಒಂದು ಪಾತ್ರೆಗೆ ವರ್ಗಾಯಿಸಬೇಕು. ಚಪಾತಿ, ದೋಸೆಯೊಂದಿಗೆ ಈ ಪುಡಿಯನ್ನು ಎಣ್ಣೆ ಅಥವಾ ತುಪ್ಪದೊಂದಿಗೆ ಸೇರಿಸಿ ತಿಂದರೆ ಎಂಥ ರುಚಿ!
ಕರಿಬೇವಿನ ಚಟ್ನಿ ಪುಡಿ
ಬೇಕಾಗುವ ಸಾಮಗ್ರಿಗಳು
- ಚೆನ್ನಾಗಿ ಒಣಗಿದ ಕರಿಬೇವಿನ ಎಲೆಗಳು – 2 ಕಪ್
- ಮೆಣಸಿನ ಪುಡಿ – 1/2 ಕಪ್
- ಕಡಲೆ ಬೇಳೆ – 1 ಕಪ್
- ಕೊಬ್ಬರಿ 1/2 ಕಪ್
- ಹುಣಸೆ – ಸ್ವಲ್ಪ
- ಹಿಂಗು – 1/4 ಚಮಚ
- ಉಪ್ಪು
- ಎಣ್ಣೆ
ಮಾಡುವ ವಿಧಾನ
ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕೊಬ್ಬರಿಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಹಾಗೆ ಕಡಲೆ ಬೆಳೆಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಕರಿಬೇವನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಬೇಕು. ನಂತರ ಕರಿಬೇವು, ಮೆಣಸಿನ ಪುಡಿ, ಹುರಿದ ಕಡಲೆ ಬೇಳೆ, ಹುರಿದ ಕೊಬ್ಬರಿ, ಹುಣಸೆ ಹುಳಿ, ಹಿಂಗು ಸ್ವಲ್ಪ ಹಾಗೆಯೇ ರುಚಿಗೆ ತಕ್ಕಸ್ಟು ಉಪ್ಪು ನ್ನೂ ಮಿಕ್ಸಿ ಜಾರ್ ಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಪುಡಿಯನ್ನು ಸ್ವಲ್ಪ ಆರಲು ಬಿಟ್ಟು ಬೇರೆ ಪಾತ್ರೆಗೆ ವರ್ಗಸಿದರೆ ಕರಿಬೇವಿನ ಚಟ್ನಿ ಪುಡಿ ಸವಿಯಲು ಸಿದ್ದವಾಗಿತ್ತದೆ.
ಉದ್ದು ಕಡಲೆ ಚಟ್ನಿ ಪುಡಿ
ಬೇಕಾಗುವ ಸಾಮಗ್ರಿಗಳು
- ಉದ್ದಿನ ಬೇಳೆ ½ ಕಪ್
- ಕಡಲೆ ಬೇಳೆ ½ ಕಪ್
- ಬ್ಯಾಡಗಿ ಮೆಣಸು 15
- ದನಿಯ 2 ಚಮಚ
- ಜೀರಿಗೆ 1 ಚಮಚ
- ಉಪ್ಪು
- ಎಣ್ಣೆ
ಮಾಡುವ ವಿಧಾನ
ಮೊದಲಿಗೆ ಉದ್ದಿನಬೇಳೆಯನ್ನು ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಹಾಗೆಯೇ ಕಡಲೆ ಬೆಳೆಯನ್ನು, ಮೆಣಸನ್ನು, ದನಿಯ, ಜೀರಿಗೆಯನ್ನು ಒಂದಾದ ಮೇಲೆ ಒಂದನ್ನು ಚೆನ್ನಾಗಿ ಹುರಿದು ಕೊಂಡು ಆರಲು ಬಿಡಬೇಕು. ನಂತರ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ಜೊತೆಗೆ ರುಚಿಗೆ ತಕ್ಕಸ್ಟು ಉಪ್ಪು ಸೇರಿಸಿ ನುಣ್ಣಗೆ ಪುಡಿ ಮಾಡಬೇಕು. ಮಾಡಿದ ಪುಡಿಯನ್ನು ಮತ್ತೆ ಬೇರೆ ಪಾತ್ರೆಗೆ ವರ್ಗಾಯಿಸಬೇಕು. ಅಲ್ಲಿಗೆ ಉದ್ದು ಕಡಲೆ ಚಟ್ನಿ ಪುಡಿ ಸವಿಯಲು ಸಿದ್ಧವಾಗುತ್ತದೆ.
ಪ್ರತಿ ದಿನದ ಊಟದಲ್ಲಿ ಚಟ್ನಿ ಪುಡಿಗಳು ಇದ್ದರೆ ಊಟದ ರುಚಿ ಇನ್ನು ಹೆಚ್ಚಾಗಿ ರುಚಿಕರವಾಗಿರುತ್ತದೆ. ಎಲ್ಲ ಚಟ್ನಿ ಪುಡಿಗಳನ್ನು ಒಮ್ಮೆ ಮಾಡಿ ಅದರ ಸವಿಯನ್ನು ಸವಿಯಿರಿ ಎಂಬುದೊಂದು ಆಶಯ.