
ಹಲಸು ಎಂದೊಡನೆ ಬಾಯಲ್ಲಿ ಒಮ್ಮೆ ನೀರೂರುವುದು ಖಂಡಿತ. ಹಲಸಿನ ಹಣ್ಣಿನ ಬಗ್ಗೆ ತಿಳಿಯುವುದಕ್ಕಿಂತ ಮುಂಚೆ ಹಲಸಿನ ಕಾಯಿಗಳ ಬಗ್ಗೆ ತಿಳಿಯಬೇಕು. ಈ ಲೇಖನದಲ್ಲಿ ಹಲಸಿನ ಕಾಯಿಯ ವಿವಿಧ ರುಚಿಕರ ಖಾದ್ಯಗಳು, ಹಾಗೂ ಅದನ್ನು ತಯಾರಿಸುವ ವಿಧಾನಗಳ ಬಗ್ಗೆ ವಿಶ್ಲೇಷಿಸೋಣ.
ಹಲಸಿನ ಕಾಯಿಯಿಂದ ಅನೇಕ ಖಾದ್ಯಗಳನ್ನು ನಾವು ತಯಾರಿಸಬಹುದು, ಉದಾಹರಣೆಗೆ ಹಲಸಿನ ಕಾಯಿ ಸಾರು, ಹಲಸಿನ ಕಾಯಿ ಪಲ್ಯ, ಹಲಸಿನ ಕಾಯಿ ಸುಕ್ಕ, ಹಲಸಿನ ಕಾಯಿ ಚಿಪ್ಸ್, ಹಲಸಿನ ಕಾಯಿ ಕಬಾಬ್ ಹಾಗೂ ಹಲಸಿನ ಕಾಯಿ ಫ್ರೈ. ಎಲ್ಲವೂ ಬಹಳ ರುಚಿಕರವಾಗಿರುತ್ತದೆ.
ಹಲಸಿನಕಾಯಿ ಸಾರು
ಬೇಕಾಗುವ ಪದಾರ್ಥಗಳು
- ಹಲಸಿನ ಕಾಯಿ
- ಕಾರು ತುರಿ 2 ಕಪ್
- ಬ್ಯಾಡಗಿ ಮೆಣಸಿನಕಾಯಿ 8
- ಹುಣಸೆ ಹಣ್ಣು ಸ್ವಲ್ಪ
- ಅರಿಶಿನ ಪುಡಿ ½ ಚಮಚ
- ಕೊತ್ತಂಬರಿ ಬೀಜ 2 ಚಮಚ
- ತೊಗರಿ ಬೇಳೆ 4 ಚಮಚ
- ಬೆಳ್ಳುಳ್ಳಿ 15 ಎಸಳು
ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ಮೊದಲಿಗೆ ಬ್ಯಾಡಗಿ ಮೆಣಸಿನಕಾಯಿಯನ್ನು ಸ್ವಲ್ಪ ಎಣ್ಣೆಯೊಂದಿಗೆ ಹುರಿದುಕೊಳ್ಳಬೇಕು. ನಂತರ ಕೊತ್ತಂಬರಿ ಬೀಜವನ್ನು ಸಹ ಹುರಿದುಕೊಳ್ಳಬೇಕು. ಹುರಿದ ವಸ್ತುಗಳು ತಣಿದ ಮೇಲೆ ಮಿಕ್ಸಿ ಜಾರಿಗೆ ಕಾಯಿ ತುರಿ, ಬ್ಯಾಡಗಿ ಮೆಣಸು, ಕೊತ್ತಂಬರಿ ಬೀಜ, ಹುಣಸೆಹಣ್ಣು ಹಾಗೂ ಅರಿಶಿನ ಪುಡಿಯನ್ನು ಮೇಲೆ ಹೇಳಿದ ಪ್ರಮಾಣದಲ್ಲಿ ಹಾಕಿ ಒಂದು ಸುತ್ತು ಚೆನ್ನಾಗಿ ರುಬ್ಬಿಕೊಳ್ಳಬೇಕು. ಅದೇ ಮಿಶ್ರಣಕ್ಕೆ 5 ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅಲ್ಲಿಗೆ ಸಾರಿನ ಮಸಾಲೆ ಸಿದ್ದವಾಗುತ್ತದೆ. ಇನ್ನೊಂದು ಕಡೆ ಒಂದು ಕೂಕ್ಕರ್ ನಲ್ಲಿ ತೊಗರಿಬೇಳೆ ಜೊತೆಗೆ ಹೆಚ್ಚಿಕೊಂಡ ಹಲಸಿನ ಕಾಯಿಯನ್ನು, 5 ಹನಿ ಎಣ್ಣೆಯನ್ನು ಸೇರಿಸಿ ಲಿಡ್ ಮುಚ್ಚಿ ಬೇಯಲು ಇಡಬೇಕು. ಒಂದು 4 ವಿಸೇಲ್ ಬಂದ ಮೇಲೆ ಓಲೆ ಆರಿಸಬೇಕು. ಕೊನೆಯಲ್ಲಿ ರುಬ್ಬಿದ ಮಸಾಲೆಯನ್ನು ಬೇಯಿಸಿದ ಹಲಸಿನ ಕಾಯಿ ಹಾಗೂ ತೊಗರಿ ಬೇಳೆಯ ಮಿಶ್ರಣಕ್ಕೆ ಸೇರಿಸಿ, ರುಚಿಗೆ ತಕಷ್ಟು ಉಪ್ಪನ್ನು ಬೆರೆಸಿ ಕುದಿಸಬೇಕು. ಕೊನೆಯಲ್ಲಿ ಬೆಳ್ಳುಳಿಯನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿದು ಬೆಳ್ಳುಳ್ಳಿ ಒಗ್ಗರಣೆಯನ್ನು ಹಾಕಬೇಕು. ಅಲ್ಲಿಗೆ ರುಚಿಯಾದ ಹಲಸಿನ ಕಾಯಿ ಸಾರು ಸವಿಯಲು ಸಿದ್ದವಾಗುತ್ತದೆ. ಅನ್ನದ ಜೊತೆ ಇದು ಉತ್ತಮ ರುಚಿಯನ್ನು ನೀಡುತ್ತದೆ.
ಹಲಸಿನ ಕಾಯಿ ಸುಕ್ಕ
ಬೇಕಾಗುವ ಪದಾರ್ಥಗಳು
- ಎಳೆಯ ಹಲಸಿನ ಕಾಯಿ 2 ಕಪ್
- ತೆಂಗಿನ ತುರಿ 1 ಕಪ್
- ಸಾಸಿವೆ ¼ ಚಮಚ
- ಬ್ಯಾಡಗಿ ಮೆಣಸು 7
- ಹಸಿ ಮೆಣಸಿನ ಕಾಯಿ 2
- ಬೆಲ್ಲ 2 ಚಮಚ
- ಅರಿಶಿಣ ಪುಡಿ ¼ ಚಮಚ
- ಹುಣಸೆಹಣ್ಣು ಸ್ವಲ್ಪ
- ಕರಿಬೇವು
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ
ಮಾಡುವ ವಿಧಾನ
ಮೊದಲಿಗೆ ಬ್ಯಾಡಗಿ ಮೆಣಸನ್ನು ಸ್ವಲ್ಪ ಎಣ್ಣೆಯೊಂದಿಗೆ ಹುರಿದುಕೊಳ್ಳಬೇಕು. ಮೇಲೆ ಹೇಳಿದ ಪ್ರಮಾಣದಲ್ಲಿ ಎಲ್ಲಾ ಪದಾರ್ಥಗಳನ್ನು ತೆಗೆದುಕೊಳ್ಳಬೇಕು. ಮೊದಲಿಗೆ ಮಿಕ್ಸಿ ಜಾರಿಗೆ ಬ್ಯಾಡಗಿ ಮೆಣಸಿನಕಾಯಿ ಹಾಗೂ ಸಾಸಿವೆಯನ್ನು ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ನಂತರ ಒಂದು ಚಮಚ ಬೆಲ್ಲ ಹಾಗೂ ತೆಂಗಿನ ತುರಿಯನ್ನು ಸೇರಿಸಿ ಒಂದು ಸುತ್ತು ತಿರುಗಿಸಬೇಕು.
ಇನ್ನೊಂದು ಕಡೆ ಹಲಸಿನ ಕಾಯಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಒಂದು ಕುಕ್ಕರ್ ನಲ್ಲಿ ಹಲಸಿನ ಕಾಯಿ, ಸ್ವಲ್ಪ ಉಪ್ಪು, ಅರಿಶಿಣ ಪುಡಿ ಹಾಗೂ ಬೆಲ್ಲವನ್ನು ಸೇರಿಸಿ, ಬೇಯಲು ಬೇಕಾದಷ್ಟು ನೀರು ಹಾಕಿ ಬೇಯಲು ಬಿಡಬೇಕು. ನಾಲ್ಕು ವಿಸಿಲ್ ಕೂಗಿದ ನಂತರ ಒಲೆಯನ್ನು ಆರಿಸಬೇಕು. ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ, ಕರಿಬೇವು ಹಾಗೂ ಹಸಿ ಮೆಣಸನ್ನು ಸೇರಿಸಿ, ರುಬ್ಬಿದ ಮಿಶ್ರಣವನ್ನು ಸೇರಿಸಿಕೊಂಡು, ಐದು ನಿಮಿಷಗಳ ಕಾಲ ಚೆನ್ನಾಗಿ ಕೈ ಆಡಿಸಬೇಕು. ನಂತರ ಬೇಯಿಸಿದ ಹಲಸಿನ ಕಾಯಿಯ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ತಿರುವಬೇಕು. ಬೇಯಿಸುವಾಗ ಉಪ್ಪು ಹಾಕಿರುವುದರಿಂದ ಮತ್ತೆ ರುಚಿಗೆ ಉಪ್ಪು ಬೇಕೆನಿಸಿದರೆ ಉಪ್ಪು ಸೇರಿಸಿಕೊಳ್ಳಬೇಕು. ನೀರಿನ ಅಂಶ ಇಂಗಿ ಸುಕ್ಕದ ಹದ ಬಂದ ಮೇಲೆ ಓಲೆ ಅರಿಸಬೇಕು. ಅಲ್ಲಿಗೆ ರುಚಿಯಾದ ಹಲಸಿನ ಕಾಯಿ ಸುಕ್ಕ ಸವಿಯಲು ಸಿದ್ದವಾಗುತ್ತದೆ.
ಹಲಸಿನ ಕಾಯಿ ಪಲ್ಯ
ಬೇಕಾಗುವ ಪದಾರ್ಥಗಳು
- ಸಣ್ಣಗೆ ಹೆಚ್ಚಿದ ಹಲಸಿನ ಕಾಯಿ 2 ಕಪ್
- ಬ್ಯಾಡಗಿ ಮೆಣಸಿನಕಾಯಿ 6
- ಕೊತ್ತಂಬರಿ ಬೀಜ 3 ಚಮಚ
- ಜೀರಿಗೆ 1 ಚಮಚ
- ಕಾಯಿ ತುರಿ 1 ಕಪ್
- ಬೆಳ್ಳುಳ್ಳಿ 2 ಎಸಳು
- ಅರಿಶಿಣ ಪುಡಿ ¼ ಚಮಚ
- ಸಾಸಿವೆ ½ ಚಮಚ
- ಕರಿಬೇವು
- ಉಪ್ಪು
- ಎಣ್ಣೆ
ಮಾಡುವ ವಿಧಾನ
ಮೊದಲಿಗೆ ಹಲಸಿನ ಕಾಯಿಯನ್ನು ಸಣ್ಣಗೆ ಹೆಚ್ಚಿಕೊಂಡು, ಸ್ವಲ್ಪ ಉಪ್ಪನ್ನು ಸೇರಿಸಿ, ಸ್ವಲ್ಪ ನೀರಿನೊಂದಿಗೆ ಬೇಯಿಸಬೇಕು. ಇನ್ನೊಂದೆಡೆ ಒಂದು ಬಾಣಲೆಯಲ್ಲಿ ಬ್ಯಾಡಗಿ ಮೆಣಸು ಹಾಗೂ ಕೊತ್ತಂಬರಿ ಬೀಜವನ್ನು ಸ್ವಲ್ಪ ಎಣ್ಣೆಯೊಂದಿಗೆ ಹುರಿದುಕೊಳ್ಳಬೇಕು. ಹಾಗೆಯೇ ಸಾಸಿವೆ ಹಾಗೂ ಜೀರಿಗೆಯನ್ನು ಸಹ ಸ್ವಲ್ಪ ಬೆಚ್ಚಗೆ ಆಗುವಂತೆ ಹುರಿಯಬೇಕು. ನಂತರ ಮಿಕ್ಸಿ ಜಾರಿಗೆ ಕಾಯಿ ತುರಿ, ಹುರಿದ ಬ್ಯಾಡಗಿ ಮೆಣಸು ಹಾಗೂ ಕೊತ್ತಂಬರಿ ಬೀಜವನ್ನು ಸೇರಿಸಬೇಕು. ನಂತರ ಹುರಿದ ಸಾಸಿವೆ ಹಾಗೂ ಜೇರಿಗೆಯನ್ನು ಕೂಡ ಸೇರಿಸಬೇಕು. ನಂತರ ಅರಿಶಿಣ ಪುಡಿಯನ್ನು ಸೇರಿಸಿ ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಬೇಕು. ನಂತರ ರುಬ್ಬಿದ ಮಿಶ್ರಣವನ್ನು ಬೇಯಿಸಿದ ಹಲಸಿನ ಕಾಯಿಗೆ ಸೇರಿಸಿ, ಕರಿಬೇವನ್ನು ಸೇರಿಸಿ ಕೈ ಆಡಿಸುತ್ತಾ ಇರಬೇಕು. ರುಚಿಗೆ ಬೇಕಾದರೆ ಸ್ವಲ್ಪ ಉಪ್ಪನ್ನು ಸೇರಿಸಿಕೊಳ್ಳಿ. ನೀರಿನ ಅಂಶ ಇಂಗಿದ ಮೇಲೆ ಓಲೆ ಆರಿಸಬೇಕು. ಬೆಳ್ಳುಳ್ಳಿ ಎಸಳನ್ನು ಜಜ್ಜಿ, ಎಣ್ಣೆಯಲ್ಲಿ ಹುರಿದು ಒಗ್ಗರಣೆ ನೀಡಿದರೆ ಹಲಸಿನ ಕಾಯಿ ಪಲ್ಯ ಸವಿಯಲು ಸಿದ್ದವಾಗುತ್ತದೆ. ಅನ್ನ, ರೊಟ್ಟಿ ಹಾಗೂ ಚಪಾತಿಯ ಜೊತೆ ಇದು ಉತ್ತಮವಾಗಿರುತ್ತದೆ.
ಹಲಸಿನ ಕಾಯಿಯ ಕಬಾಬ್
ಬೇಕಾಗುವ ಪದಾರ್ಥಗಳು
- ಹಲಸಿನ ಕಾಯಿ
- ಕಾರ್ನ್ ಫ್ಲೋರ್ 3 ಚಮಚ
- ಮೈದಾ ಹಿಟ್ಟು 4 ಚಮಚ
- ಜಜ್ಜಿದ ಶುಂಠಿ ಬೆಳ್ಳುಳ್ಳಿ ಮಿಶ್ರಣ 1 ಚಮಚ
- ಖಾರದ ಪುಡಿ 1 ಚಮಚ
- ಉಪ್ಪು
- ಎಣ್ಣೆ
ಮಾಡುವ ವಿಧಾನ
ಹಲಸಿನ ಕಾಯಿಯನ್ನು ಮಧ್ಯಮ ಗಾತ್ರದಲ್ಲಿ ಕತ್ತರಿಸಿ, ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಕತ್ತರಿಸಿದ ಹಲಸಿನ ಕಾಯಿಯ ಹೋಳುಗಳನ್ನು ಹಬೆಯಲ್ಲಿ ಚೆನ್ನಾಗಿ ಬೇಯಿಸಬೇಕು. ಇನ್ನೊಂದು ಕಡೆಯಲ್ಲಿ ಒಂದು ಪಾತ್ರೆಗೆ ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಜಜ್ಜಿದ ಶುಂಠಿ ಬೆಳ್ಳುಳ್ಳಿ, ಖಾರದ ಪುಡಿ, ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು. ಸ್ವಲ್ಪ ನೀರಿನೊಂದಿಗೆ ಚೆನ್ನಾಗಿ ಕಲಸಿಕೊಂಡು, ಮಿಶ್ರಣವನ್ನು ತಯಾರಿಸಬೇಕು. ಈ ಮಿಶ್ರಣಕ್ಕೆ ಬೇಯಿಸಿದ ಹಲಸಿನ ಕಾಯಿಯನ್ನು ಕಲಸಿ, ಕಾದ ಬಿಸಿ ಎಣ್ಣೆಯಲ್ಲಿ ಕರಿಯಬೇಕು. ಅಲ್ಲಿಗೆ ಬಿಸಿ ಬಿಸಿ ಹಲಸಿನ ಕಾಯಿ ಕಬಾಬ್ ಸವಿಯಲು ಸಿದ್ದವಾಗುತ್ತದೆ.
ಹಲಸಿನ ಕಾಯಿಯ ಫ್ರೈ
ಬೇಕಾಗುವ ಪದಾರ್ಥಗಳು
- ಎಳೆಯ ಹಲಸಿನ ಕಾಯಿ 1
- ರವೆ 1 ಕಪ್
- ಮೆಣಸಿನ ಪುಡಿ 2 ಚಮಚ ( ಖಾರಕ್ಕೆ ಅನುಗುಣವಾಗಿ )
- ಉಪ್ಪು
- ಹಿಂಗು ಸ್ವಲ್ಪ
- ಅರಿಶಿಣ ಪುಡಿ ¼ ಚಮಚ
- ಎಣ್ಣೆ
ಮಾಡುವ ವಿಧಾನ
ಹಲಸಿನ ಕಾಯಿಯನ್ನು ತೆಳುವಾಗಿ ಉದ್ದಗೆ ಕತ್ತರಿಸಿಕೊಂಡು, ನೀರಿನ ಹಬೆಯಲ್ಲಿ 90 ಪ್ರತಿಶತ ಗಳಷ್ಟು ಬೇಯಿಸಿಕೊಳ್ಳಬೇಕು. ನಂತರ ಇನ್ನೊಂದು ಪಾತ್ರೆಯಲ್ಲಿ ಮೇಲೆ ಹೇಳಿದ ಪ್ರಮಾಣದಲ್ಲಿ ರವೆ, ಮೆಣಸಿನ ಪುಡಿ, ಅರಿಶಿಣ ಪುಡಿ, ಹಿಂಗು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಮಿಶ್ರಣವನ್ನು ಸಿದ್ದಪಡಿಸಿಕೊಳ್ಳಬೇಕು. ಕಾವಲಿಗೆಯನ್ನು ಓಲೆಯ ಮೇಲೆ ಇಟ್ಟು ಎಣ್ಣೆ ಸವರಬೇಕು. ತೆಳುವಾಗಿ ಕತ್ತರಿಸಿ, ಬೇಯಿಸಿದ ಹಲಸಿನ ಕಾಯಿಯನ್ನು ರವೆಯಲ್ಲಿ ಹೊರಳಿಸಿ ಕಾವಲಿಗೆಯಲ್ಲಿ ಹುರಿಯಬೇಕು. ಚೆನ್ನಾಗಿ ಹುರಿದು ಬಂಗಾರದ ಬಣ್ಣ ಬಂದ ಮೇಲೆ ಒಲೆಯನ್ನು ಆರಿಸಿ ಹಲಸಿನ ಫ್ರೈ ಗಳನ್ನು ತಟ್ಟೆಗೆ ಹಾಕಿಕೊಂಡು, ರುಚಿ ರುಚಿಯಾದ ಹಲಸಿನ ಕಾಯಿ ಫ್ರೈ ಯನ್ನು ಸವಿಯಬೇಕು.
ಹಲಸಿನ ಕಾಯಿ ಚಿಪ್ಸ್
ಬೇಕಾಗುವ ಪದಾರ್ಥಗಳು
- ಬೆಳೆದ ಹಲಸಿನ ಕಾಯಿ 1
- ಎಣ್ಣೆ
- ಕಲ್ಲುಪ್ಪು
ಮಾಡುವ ವಿಧಾನ
ಹಲಸಿನ ಕಾಯಿಯನ್ನು ಕತ್ತರಿಸಿ, ಸೊಳೆಗಳನ್ನು ಬೇರ್ಪಡಿಸಿ, ಜೀಜಗಳನ್ನು ತೆಗೆದುಕೊಳ್ಳಬೇಕು. ನಂತರ ಸೊಳೆಗಳನ್ನು ಸಪುರ ಹಾಗೂ ಉದ್ದನೆಯ ಆಕಾರದಲ್ಲಿ ಕತ್ತರಿಸಿಕೊಳ್ಳಬೇಕು. ಎಣ್ಣೆಯನ್ನು ಓಲೆಯ ಮೇಲೆ ಕಾಯಲು ಇಡಬೇಕು. ಇನ್ನೊಂದೆಡೆ ಉಪ್ಪು ನೀರನ್ನು ತಯಾರಿಸಿಕೊಳ್ಳಬೇಕು. ಒಂದು ಲೋಟ ನೀರಿಗೆ ಒಂದು ಮುಷ್ಠಿ ಕಲ್ಲುಪ್ಪನ್ನು ಬೆರೆಸಿ, ಕರಗಿಸಿ ಉಪ್ಪು ನೀರನ್ನು ತಯಾರಿಸಿಕೊಳ್ಳಬೇಕು. ಈಗ ಚೆನ್ನಾಗಿ ಕಾದ ಎಣ್ಣೆಯಲ್ಲಿ ಹಲಸಿನ ಕಾಯಿಯ ಸೊಳೆಗಳನ್ನು ಹಗುರವಾಗಿ ಬಿಡಬೇಕು. ಅದು ಎಣ್ಣೆಯಲ್ಲಿ ಬೇಯುವಾಗ ನೊರೆಯನ್ನು ಉಂಟು ಮಾಡುತ್ತದೆ. ನೊರೆಯ ಅಂಶ ಕಡಿಮೆಯಾದ ಮೇಲೆ ತಯಾರಿಸಿದ ಉಪ್ಪು ನೀರನ್ನು ಮೂರು ಚಮಚ ಎಣ್ಣೆಯಲ್ಲಿ ಬೇಯುತ್ತಿರುವ ಹಲಸಿನ ಕಾಯಿ ಸೊಳೆಗಳ ಮೇಲೆ ಹಾಕಿ, ಬಂಗಾರದ ಬಣ್ಣ ಬರುವವಗೆ ಹುರಿಯಬೇಕು. ಚೆನ್ನಾಗಿ ಬೆಂದ ಮೇಲೆ ತಟ್ಟೆಗೆ ವರ್ಗಯಿಸಿಕೊಳ್ಳಬೇಕು. ಅಲ್ಲಿಗೆ ಹಲಸಿನ ಕಾಯಿ ಚಿಪ್ಸ್ ಸವಿಯಲು ಸಿದ್ದವಾಗುತ್ತದೆ.
ಸ್ವಲ್ಪ ಜನರಿಗೆ ಖಾರ ಚಿಪ್ಸ್ ತಿನ್ನಲು ಇಷ್ಟವಾಗುತ್ತದೆ. ಅಂತವರು ಚಿಪ್ಸ್ ಗಳನ್ನು ಎಣ್ಣೆಯಿಂದ ತೆಗೆದ ಕೂಡಲೇ ಖಾರ ಪುಡಿಯನ್ನು ಚಿಪ್ಸ್ ಗಳ ಮೇಲೆ ಹಾಕಿ ಚೆನ್ನಾಗಿ ಕಲಸಬೇಕು. ಅಲ್ಲಿಗೆ ಹಲಸಿನ ಕಾಯಿ ಚಿಪ್ಸ್ ಸವಿಯಲು ಸಿದ್ದವಾಗುತ್ತದೆ.
ಸಂಜೆಯ ಚಹಾ, ಕಾಫಿಯೊಡನೆ ಹಲಸಿನ ಕಾಯಿ ಚಿಪ್ಸ್ ಇದ್ದರೆ, ತುಂಬಾ ರುಚಿಕರವಾಗಿರುತ್ತದೆ. ಸಂಜೆಯ ತಿಂಡಿಗೆ ಇದು ಅತಿ ಸೂಕ್ತವಾಗಿದೆ.
ಇನ್ನೂ ಅನೇಕ ರೀತಿಯಲ್ಲಿ ಖಾದ್ಯಗಳನ್ನು ತಯಾರಿಸಬಹುದು. ಹಲಸಿನ ಕಾಯಿಯ ಖಾದ್ಯಗಳ ರುಚಿಯು ಅತಿ ಉತ್ತಮವಾಗಿರುತ್ತದೆ. ಇಂದಿನ ದಿನಮಾನಗಳಲ್ಲಿ ಶುಭ ಸಮಾರಂಭಗಳಲ್ಲೂ ಹಲಸಿನಕಾಯಿಯ ಖಾದ್ಯಗಳು ಇದ್ದೇ ಇರುತ್ತದೆ. ಬೇಸಿಗೆಯ ಕಾಲ ಮಾರುಕಟ್ಟೆಯ ತುಂಬಾ ಹಲಸಿನ ಮೇಳ ಎಂಬ ಭಾವನೆ ಬರುವುದು ಸಹಜ.
ಹಲಸಿನ ಕಾಯಿಯನ್ನು ತಿನ್ನಲು ಮನಸ್ಸು ಹಂಬಲಿಸಿದರು, ಹಲಸಿನ ಕಾಯನ್ನು ಕತ್ತರಿಸುವ ಬಗೆಯನ್ನು ನೆನೆಸಿಕೊಂಡರೆ ತಿನ್ನುವ ಮನಸ್ಸು ಬದಲಾಗುವ ಸಾಧ್ಯತೆ ಇದೆ. ಆದರೆ ಚಿಂತೆ ಬಿಟ್ಟು ಹಲಸಿನ ಕಾಯಿಯನ್ನು ಕತ್ತರಿಸುವ ಬಗೆಯನ್ನು ಈಗ ಇಲ್ಲಿ ತಿಳಿಯೋಣ.
- ಹಲಸಿನ ಕಾಯಿಯನ್ನು ಕತ್ತರಿಸುವ ಮುನ್ನ ನೆಲದ ಮೇಲೆ ಪೇಪರ್ ಅಥವಾ ಬಾಳೆ ಎಲೆಯನ್ನು ಹಾಕಿಕೊಂಡು ಅದರ ಮೇಲೆ ಕತ್ತರಿಸುವುದು ಉತ್ತಮ. ಇದು ಹಲಸಿನ ಮೇಣವನ್ನು ಅಥವಾ ಅಂಟನ್ನು ನೆಲಕ್ಕೆ ತಾಗದಂತೆ ನೋಡಿಕೊಳ್ಳುತ್ತದೆ.
- ಮೇಣದ ಕಾರಣಕ್ಕೆ ಹಲಸಿನ ಕಾಯಿಯನ್ನು ಕತ್ತರಿಸುವ ಕತ್ತಿ ಅಥವಾ ಚಾಕುವಿಕೆ ತೆಂಗಿನ ಎಣ್ಣೆಯನ್ನು ಸವರಬೇಕು, ಹಾಗೂ ನಮ್ಮ ಕೈಗಳಿಗೂ ಎಣ್ಣೆಯನ್ನು ಸವರಿಕೊಳ್ಳಬೇಕು.
- ಕತ್ತರಿಸಿದ ಹಲಸಿನ ಕಾಯಿಗಳನ್ನು ನೀರಿಗೆ ಹಾಕಬೇಕು, ಇಲ್ಲವಾದರೆ ಅದರ ಬಣ್ಣ ಕ್ರಮೇಣ ಕಪ್ಪಾಗುತ್ತದೆ.
- ಕತ್ತರಿಸಿದ ನಂತರ ಕತ್ತಿ ಅಥವಾ ಚಾಕುವನ್ನು ಬೆಂಕಿಯ ಮೇಲೆ ಸುಟ್ಟು, ಒಂದು ಪೇಪರ್ ಅಥವಾ ಬಟ್ಟೆಯ ಸಹಾಯದಿಂದ ಮೇಣವನ್ನು ಶುದ್ಧಗೊಳಿಸಬೇಕು. ಬಿಸಿಗೆ ಮೇಣವು ಕತ್ತಿಯಿಂದ ಬೇಗ ದೂರವಾಗುತ್ತದೆ.
- ಕೈಗೆ ತಾಗಿದ ಮೇಣವನ್ನು ಸಹ ಮೊದಲು ತೆಂಗಿನ ಎಣ್ಣೆಯಲ್ಲಿ ಉಜ್ಜಿ ನಂತರ ಸೋಪಿನ ಮೂಲಕ ತೊಳೆದುಕೊಳ್ಳಬೇಕು.
- ಪಾತ್ರೆಗೆ ತಗುಲಿದ ಮೇಣವನ್ನು ಸಹ ಸ್ವಲ್ಪ ಬಿಸಿ ಮಾಡಿ, ಇಲ್ಲವೇ ಎಣ್ಣೆ ಹಚ್ಚಿ, ಅನಂತರ ಸೋಪಿನಿಂದ ಶುಚಿಗೊಳಿಸಬಹುದು.
ಹಲಸಿನ ಕಾಯಿಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಹಲಸಿನ ಹಣ್ಣು ಹಾಗೂ ಹಲಸಿನ ಬೀಜದ ಬಗ್ಗೆ, ಅದರ ಅನೇಕ ರುಚಿಕರ ಖಾದ್ಯಗಳ ಬಗೆಗಿನ ಅನೇಕ ಮಾಹಿತಿಗಳನ್ನು ಮುಂದಿನ ಲೇಖನಗಳಲ್ಲಿ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತೇವೆ. ಇಂದಿನ ಲೇಖನದಲ್ಲಿ ವಿಶ್ಲೇಷಿಸಿದ ಹಲಸಿನ ಕಾಯಿ ಖಾದ್ಯಗಳನ್ನು ಒಮ್ಮೆ ತಯಾರಿಸಿ, ಸವಿಯಿರಿ ಎಂಬುದು ನಮ್ಮ ಆಶಯ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.