ಮಳೆಗಾಲದಲ್ಲಿ ಬೆಚ್ಚನೆಯ ಅನುಭವ ನೀಡಲು ಸೇವಿಸಿ ಬಿಸಿ ಬಿಸಿ ಆರೋಗ್ಯಕರ ಈ ಏಳು ವೆರೈಟಿ ಸೂಪ್ ಗಳು (Seven Healthy Hot Soup Varieties)

Spread the love

ಮಳೆಗಾಲದಲ್ಲಿ ಬೆಚ್ಚನೆಯ ಅನುಭವ ನೀಡಲು ಸೇವಿಸಿ ಬಿಸಿ ಬಿಸಿ ಆರೋಗ್ಯಕರ ಈ ಏಳು ವೆರೈಟಿ ಸೂಪ್ ಗಳು (Seven Healthy Hot Soup Varieties). AI Image

ದೇಹಕ್ಕೆ ಬೇಕಾಗುವ ಉತ್ತಮ ಪೋಷಕಾಂಶಗಳನ್ನು ಒದಗಿಸುವ ತರಕಾರಿ, ಸೊಪ್ಪು ಹಾಗೂ ಕಾಳು-ಬೇಳೆಗಳನ್ನು ಉಪಯೋಗಿಸಿಕೊಂಡು ತಯಾರಿಸಬಹುದಾದ ಉತ್ತಮ ಹಾಗೂ ರುಚಿಕರ ಸೂಪ್ ಗಳ ತಯಾರಿಕಾ ವಿಧಾನಗಳನ್ನು ಇಂದಿನ ಲೇಖನದಲ್ಲಿ ವಿಶ್ಲೇಷಿಸೋಣ.

ಸಿಹಿಕುಂಬಳಕಾಯಿ ಸೂಪ್

ಬೇಕಾಗುವ ಪದಾರ್ಥಗಳು

  • ತುರಿದ ಸಿಹಿಕುಂಬಳಕಾಯಿ 1 ಕಪ್
  • ತುರಿದ ಕ್ಯಾರೆಟ್ ½ ಕಪ್
  • ಬೆಣ್ಣೆ 2 ಚಮಚ
  • ಕಾರ್ನ್ ಫ್ಲೋರ್ 2 ಚಮಚ
  • ಏಲಕ್ಕಿ ಪುಡಿ ½ ಚಮಚ
  • ಕರಿಮೆಣಸಿನ ಪುಡಿ ½ ಚಮಚ
  • ಉಪ್ಪು

ಮಾಡುವ ವಿಧಾನ
ಮೊದಲಿಗೆ ಸಿಹಿಕುಂಬಳಕಾಯಿ ಹಾಗೂ ಕ್ಯಾರೆಟ್ ಅನ್ನು ತುರಿದುಕೊಳ್ಳಬೇಕು. ಒಂದು ಬಾಣಲೆಗೆ ಬೆಣ್ಣೆ ಸೇರಿಸಿಕೊಂಡು, ತುರಿದುಕೊಂಡ ಸಿಹಿಕುಂಬಳಕಾಯಿ ಹಾಗೂ ಕ್ಯಾರೆಟ್ ಅನ್ನು ನೀರು ಇಂಗಿ ಹೋಗುವ ತನಕ ಹುರಿದುಕೊಳ್ಳಬೇಕು. ನಂತರ ಈ ಹುರಿದ ಮಿಶ್ರಣಕ್ಕೆ ಮೂರು ಕಪ್ ನೀರನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಕುದಿಸಬೇಕು. ನಂತರ ಕಾರ್ನ್ ಫ್ಲೋರ್ ಅನ್ನು ನೀರಿನಲ್ಲಿ ಗಂಟಾಗದಂತೆ ಕಲಸಿಕೊಂಡು ಸೂಪ್ ನ ಮಿಶ್ರಣಕ್ಕೆ ಸೇರಿಸಿಕೊಳ್ಳಬೇಕು. ಕೊನೆಯಲ್ಲಿ ಏಲಕ್ಕಿ ಪುಡಿ ಹಾಗೂ ಕರಿಮೆಣಸಿನ ಪುಡಿ ಎರಡನ್ನು ಸೇರಿಸಿಕೊಂಡು ಕೈ ಆಡಿಸಿಕೊಳ್ಳಬೇಕು. ಈಗ ಓಲೆ ಆರಿಸಿ, ಬಿಸಿ ಬಿಸಿ ಸೂಪ್ ಅನ್ನು ಸೇವಿಸಬೇಕು. ಸಿಹಿಕುಂಬಳಕಾಯಿ ಆರೋಗ್ಯಕ್ಕೆ ಬಹು ಉತ್ತಮವಾಗಿದ್ದು, ಇದರ ಸೇವನೆಯು ಅರೋಗ್ಯವರ್ಧಕವಾಗಿದೆ.

ಮೂಲಂಗಿ ಸೂಪ್

ಬೇಕಾಗುವ ಪದಾರ್ಥಗಳು

  • ಮೂಲಂಗಿ 1
  • ಕಾರ್ನಫ್ಲೋರ್ 2 ಚಮಚ
  • ಕರಿಮೆಣಸಿನ ಪುಡಿ ½ ಚಮಚ
  • ಬೆಣ್ಣೆ 1 ಚಮಚ
  • ಬೆಲ್ಲ ರುಚಿಗೆ ತಕ್ಕಷ್ಟು
  • ಉಪ್ಪು

ಮಾಡುವ ವಿಧಾನ
ಮೊದಲಿಗೆ ಮೂಲಂಗಿಯನ್ನು ಚೆನ್ನಾಗಿ ತುರಿದುಕೊಂಡು, ಅದರ ರಸವನ್ನು ಹಿಂಡಿಕೊಳ್ಳಬೇಕು. ಈಗ ಒಂದು ಬಾಣಲೆಯಲ್ಲಿ ತುರಿದ ಮೂಲಂಗಿಯನ್ನು ಒಂದೆರಡು ನಿಮಿಷ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಎರಡು ಕಪ್ ನೀರು, ಹಿಂಡಿಕೊಂಡ ಮೂಲಂಗಿ ರಸ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ, ಕುದಿಸಿಕೊಳ್ಳಬೇಕು. ಇನ್ನೊಂದೆಡೆ ಕಾರ್ನಫ್ಲೋರ್ ಅನ್ನು ನೀರಿನಲ್ಲಿ ಕರಗಿಸಿಕೊಂಡು ಸೂಪ್ ನ ಮಿಶ್ರಣಕ್ಕೆ ಸೇರಿಸಿ, ಕಲಸಬೇಕು. ಕೊನೆಯಲ್ಲಿ ಕರಿಮೆಣಸಿನ ಪುಡಿಯನ್ನು ಸೇರಿಸಿ, ಕುದಿಸಿಕೊಂಡು ಒಲೆಯನ್ನು ಆರಿಸಿಕೊಳ್ಳಬೇಕು. ಅಲ್ಲಿಗೆ ಬಿಸಿಬಿಸಿಯಾದ ಮೂಲಂಗಿ ಸೂಪ್ ಸವಿಯಲು ಸಿದ್ದವಾಗುತ್ತದೆ.

ಕಾಬುಲ್ ಕಡ್ಲೆ ಸೂಪ್

ಬೇಕಾಗುವ ಪದಾರ್ಥಗಳು

  • ಕಾಬುಲ್ ಕಡ್ಲೆ ¼ ಕಪ್
  • ಟೊಮೆಟೊ 2
  • ಬಟಾಟೆ 1
  • ಬಸಳೆ ಸೊಪ್ಪು 2 ಎಲೆಗಳು
  • ಕ್ಯಾರೆಟ್ 1
  • ಎಣ್ಣೆ
  • ಬೆಳ್ಳುಳ್ಳಿ ಪೇಸ್ಟ್ 1 ಚಮಚ
  • ಕರಿಮೆಣಸಿನ ಪುಡಿ ½ ಚಮಚ
  • ಪಲಾವ್ ಎಲೆ 1
  • ಬೆಣ್ಣೆ 2 ಚಮಚ
  • ಉಪ್ಪು

ಮಾಡುವ ವಿಧಾನ
ಮೊದಲಿಗೆ ಕಾಬುಲ್ ಕಡ್ಲೆಯನ್ನು ರಾತ್ರಿಯೆ ನೆನೆಸಬೇಕು. ಮರುದಿನ ಒಂದು ಕುಕ್ಕರ್ ನಲ್ಲಿ ನೆನೆಸಿದ ಕಾಬುಲ್ ಕಡ್ಲೆ, ಕ್ಯಾರೆಟ್ ಹಾಗೂ ಬಟಾಟೆಯನ್ನು ಹಾಕಿ ಬೇಯಿಸಿಕೊಳ್ಳಬೇಕು. ಈಗ ಬೇಯಿಸಿದ ಕಾಬುಲ್ ಕಡ್ಲೆ, ಕ್ಯಾರೆಟ್ ಹಾಗೂ ಬಟಾಟೆಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು, ನುಣ್ಣಗೆ ರುಬ್ಬಿಕೊಳ್ಳಬೇಕು. ಜೊತೆಗೆ ಒಂದು ಟೊಮೆಟೊವನ್ನು ಕೂಡ ಮಿಕ್ಸಿ ಜಾರಿಗೆ ಹಾಕಿ, ರುಬ್ಬಿಕೊಳ್ಳಬೇಕು. ಈಗ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಂಡು ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ರುಬ್ಬಿಕೊಂಡ ಕಾಬುಲ್ ಕಡ್ಲೆ, ಬಟಾಟೆ, ಕ್ಯಾರೆಟ್ ಮಿಶ್ರಣವನ್ನು ಸೇರಿಸಿಕೊಂಡು ಹುರಿಯಬೇಕು. ಬಸಳೆ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಂಡು ಸೇರಿಸಿಕೊಳ್ಳಬೇಕು. ಜೊತೆಗೆ ಪಲಾವ್ ಎಲೆಯನ್ನು ಕೂಡ ಸೇರಿಸಿಕೊಂಡು ಚೆನ್ನಾಗಿ ಕುದಿಸಿಕೊಳ್ಳಬೇಕು. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸಿನ ಪುಡಿ ಹಾಗೂ ರುಬ್ಬಿದ ಟೊಮೆಟೊವನ್ನು ಸೇರಿಸಿಕೊಂಡು ಕುದಿಸಿಕೊಳ್ಳಬೇಕು. ಬೇಕಾದಲ್ಲಿ ಸ್ವಲ್ಪ ನೀರನ್ನು ಸೇರಿಸಿಕೊಳ್ಳಬಹುದು. ಈಗ ಓಲೆ ಆರಿಸಿ ಬೆಣ್ಣೆಯನ್ನು ಸೇರಿಸಿಕೊಂಡು ಬಿಸಿ ಬಿಸಿ ಕಾಬುಲ್ ಕಡ್ಲೆ ಸೂಪ್ ಅನ್ನು ಸವಿಯಬೇಕು. ಇದು ದೇಹಕ್ಕೆ ಬೇಕಾದ ಸಕಲ ರೀತಿಯ ಪೋಷಕಾಂಶಗಳನ್ನು ಒದಗಿಸಿ, ಉತ್ತಮ ಅರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ.

ಕ್ಯಾರೆಟ್ ಸೂಪ್

ಬೇಕಾಗುವ ಪದಾರ್ಥಗಳು

  • ಕ್ಯಾರೆಟ್ 2
  • ಬೆಣ್ಣೆ ½ ಕಪ್
  • ಈರುಳ್ಳಿ 1
  • ಕೊತ್ತಂಬರಿ ಪುಡಿ 1 ಚಮಚ
  • ಮೈದಾ ಹಿಟ್ಟು 3 ಚಮಚ
  • ಕೊತ್ತಂಬರಿ ಸೊಪ್ಪು
  • ಉಪ್ಪು
  • ಕಾಳುಮೆಣಸಿನ ಪುಡಿ ½ ಚಮಚ
  • ಹಾಲು 1 ಕಪ್

ಮಾಡುವ ವಿಧಾನ
ಮೊದಲಿಗೆ ಕ್ಯಾರೆಟ್ ಅನ್ನು ತುರಿದುಕೊಳ್ಳಬೇಕು, ಜೊತೆಗೆ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ 2 ಚಮಚ ಬೆಣ್ಣೆಯನ್ನು ಸೇರಿಸಿ, ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಹುರಿದುಕೊಳ್ಳಬೇಕು. ನಂತರ ತುರಿದ ಕ್ಯಾರೆಟ್ ಅನ್ನು ಸೇರಿಸಿಕೊಳ್ಳಬೇಕು. ಇದನ್ನು ಕೂಡ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಕೊತ್ತಂಬರಿ ಪುಡಿಯನ್ನು ಸೇರಿಸಿಕೊಳ್ಳಬೇಕು. ಒಂದು ಐದು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಬೇಕು. ಚೆನ್ನಾಗಿ ಕ್ಯಾರೆಟ್ ಬೆಂದ ನಂತರ ಒಲೆಯನ್ನು ಆರಿಸಿ, ತಣಿಸಿಕೊಳ್ಳಬೇಕು. ನಂತರ ಒಂದು ಮಿಕ್ಸಿ ಜಾರಿಗೆ ಹುರಿದ ಮಿಶ್ರಣವನ್ನು ಸೇರಿಸಿಕೊಂಡು ರುಬ್ಬಿಕೊಳ್ಳಬೇಕು. ಈಗ ಒಂದು ಬಾಣಲೆಗೆ ಮೈದಾ ಹಿಟ್ಟನ್ನು ಹಾಕಿ ಕೆಂಪಗುವವರೆಗೂ, ತಳ ತಾಕದಂತೆ ಹುರಿದುಕೊಳ್ಳಬೇಕು. ಈಗ ಅದೇ ಬಾಣಲೆಗೆ ರುಬ್ಬಿದ ಮಿಶ್ರಣವನ್ನು ಸೇರಿಸಿಕೊಂಡು ಕುದಿಸಬೇಕು. ನಂತರ ಹಾಲನ್ನು ಸೇರಿಸಿ ಬೇಯಿಸಿಕೊಳ್ಳಬೇಕು. ಕೊನೆಯಲ್ಲಿ ಕಾಳುಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಕಲಸಬೇಕು. ಅಲ್ಲಿಗೆ ಬಿಸಿ ಬಿಸಿಯಾದ ಕ್ಯಾರೆಟ್ ಸೂಪ್ ಸವಿಯಲು ಸಿದ್ದವಾಗುತ್ತದೆ.

ಹೂಕೋಸಿನ ಸೂಪ್

ಬೇಕಾಗುವ ಪದಾರ್ಥಗಳು

  • ಹೂಕೋಸು ½
  • ಬಟಾಟೆ 1
  • ಈರುಳ್ಳಿ 1
  • ಬೆಣ್ಣೆ 2 ಚಮಚ
  • ಜಾಯಿಕಾಯಿ ಪುಡಿ ¼ ಚಮಚ
  • ಉಪ್ಪು
  • ಕಾಳುಮೆಣಸಿನ ಪುಡಿ ¼ ಚಮಚ
  • ಫ್ರೆಶ್ ಕ್ರೀಮ್ ¼ ಕಪ್

ಮಾಡುವ ವಿಧಾನ
ಮೊದಲಿಗೆ ಹೂಕೋಸು, ಬಟಾಟೆ ಹಾಗೂ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಒಂದು ಬಾಣಲೆಗೆ ಬೆಣ್ಣೆಯನ್ನು ಸೇರಿಸಿಕೊಂಡು ಹೆಚ್ಚಿದ ತರಕಾರಿಗಳನ್ನು ಸೇರಿಸಿಕೊಂಡು ಹುರಿಯಬೇಕು. ನಂತರ ಅರ್ಧ ಲೀಟರ್ ನೀರನ್ನು ಸೇರಿಸಿಕೊಂಡು ಚೆನ್ನಾಗಿ ತರಕಾರಿಗಳು ಬೇಯುವ ತನಕ ಕುದಿಸಬೇಕು. ಅಂದಾಜು ಇಪ್ಪತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ಅನಂತರ ಒಲೆಯನ್ನು ಆರಿಸಿ, ತಣಿಯಲು ಬಿಡಬೇಕು. ನಂತರ ಒಂದು ಮಿಕ್ಸಿ ಜಾರಿಗೆ ತಣಿದ ಮಿಶ್ರಣವನ್ನು ಸೇರಿಸಿಕೊಂಡು ರುಬ್ಬಿಕೊಳ್ಳಬೇಕು. ಈಗ ಮತ್ತೆ ಒಂದು ಬಾಣಲೆಗೆ ರುಬ್ಬಿದ ಮಿಶ್ರಣವನ್ನು ಸೇರಿಸಿ, ಫ್ರೆಶ್ ಕ್ರೀಮ್ ಅನ್ನು ಸೇರಿಸಿಕೊಂಡು, ಕುದಿಸಬೇಕು. ಕೊನೆಯಲ್ಲಿ ಕಾಳುಮೆಣಸಿನ ಪುಡಿ, ಜಾಯಿಕಾಯಿ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು, ಕಲಸಬೇಕು. ಅಲ್ಲಿಗೆ ಬಿಸಿ ಬಿಸಿಯಾದ ಹೂಕೋಸಿನ ಸೂಪ್ ಸವಿಯಲು ಸಿದ್ದವಾಗುತ್ತದೆ.

ಬಟಾಣಿ ಸೂಪ್

ಬೇಕಾಗುವ ಪದಾರ್ಥಗಳು

  • ಹಸಿರು ಬಟಾಣಿ 1 ಕಪ್
  • ಬಟಾಟೆ 1
  • ಕಾಳುಮೆಣಸು 6
  • ಬೆಣ್ಣೆ 2 ಚಮಚ
  • ಉಪ್ಪು

ಮಾಡುವ ವಿಧಾನ
ಹಸಿರು ಬಟಾಣಿಯನ್ನು ರಾತ್ರಿಯೆ ನೆನೆಸಿ ಇಡಬೇಕು. ಬಟಾಟೆಯನ್ನು ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು. ಈಗ ಒಂದು ಕುಕ್ಕರ್ ನಲ್ಲಿ ನೆನೆಸಿದ ಹಸಿರು ಬಟಾಣಿ, ಕತ್ತರಿಸಿಕೊಂಡ ಬಟಾಟೆ, ಕಾಳುಮೆಣಸು ಮೂರನ್ನು ಹಾಕಿ ಬೇಯಿಸಿಕೊಳ್ಳಬೇಕು. ಬೇಯಿಸಿಕೊಂಡ ಬಟಾಣಿ, ಬಟಾಟೆ ಹಾಗೂ ಕಾಳುಮೆಣಸನ್ನು ತಣಿದ ನಂತರ ಒಂದು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು. ಒಂದು ಪಾತ್ರೆಗೆ ರುಬ್ಬಿದ ಮಿಶ್ರಣವನ್ನು ಸೇರಿಸಿಕೊಂಡು 2 ಕಪ್ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕುದಿಸಬೇಕು. ಕೊನೆಯಲ್ಲಿ ಬೆಣ್ಣೆಯನ್ನು ಸೇರಿಸಿಕೊಂಡು ಓಲೆ ಆರಿಸಬೇಕು. ಅಲ್ಲಿಗೆ ಬಿಸಿ ಬಿಸಿಯಾದ ಬಟಾಣಿ ಸೂಪ್ ಸವಿಯಲು ಸಿದ್ದವಾಗುತ್ತದೆ.

ಅಣಬೆ ಸೂಪ್

ಬೇಕಾಗುವ ಪದಾರ್ಥಗಳು

  • ಅಣಬೆ – 200 ಗ್ರಾಂ
  • ಈರುಳ್ಳಿ 1
  • ಮೈದಾ ಹಿಟ್ಟು 3 ಚಮಚ
  • ಬೆಣ್ಣೆ 3 ಚಮಚ
  • ಕಾಳು ಮೆಣಸಿನ ಪುಡಿ ½ ಚಮಚ
  • ಹಾಲು ½ ಕಪ್
  • ಉಪ್ಪು

ಮಾಡುವ ವಿಧಾನ
ಅಣಬೆ ಹಾಗೂ ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿಕೊಳ್ಳಬೇಕು. ಒಂದು ಬಾಣಲೆಗೆ ಬೆಣ್ಣೆ ಹಾಕಿ, ಈರುಳ್ಳಿಯನ್ನು ಹಾಕಿ ಹುರಿದುಕೊಳ್ಳಬೇಕು. ನಂತರ ಮೇಲೆ ಹೇಳಿದ ಪ್ರಮಾಣದಲ್ಲಿ ಮೈದಾ ಹಿಟ್ಟು ಹಾಗೂ ಅಣಬೆಯನ್ನು ಸೇರಿಸಿಕೊಂಡು ಹುರಿಯಬೇಕು. ನಂತರ 3 ಕಪ್ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕುದಿಸಿಕೊಳ್ಳಬೇಕು. ನಂತರ ಹಾಲು ಸೇರಿಸಿ ಕುದಿಸಿಕೊಳ್ಳಬೇಕು. ಕೊನೆಯಲ್ಲಿ ಕಾಳು ಮೆಣಸಿನ ಪುಡಿ ಸೇರಿಸಿ ಓಲೆ ಆರಿಸಬೇಕು. ಅಲ್ಲಿಗೆ ಬಿಸಿ ಬಿಸಿ ಅಣಬೆ ಸೂಪ್ ಸವಿಯಲು ಸಿದ್ದವಾಗುತ್ತದೆ.

ಮೇಲೆ ಹೇಳಿದ ಎಲ್ಲಾ ರೀತಿಯ ಸೂಪ್ ಗಳು ಆರೋಗ್ಯಕ್ಕೆ ಅತಿ ಉತ್ತಮವಾಗಿದ್ದು, ತಂಪಾದ ವಾತಾವರಣದಲ್ಲಿ ಸೇವಿಸಲು ಅತಿ ಉತ್ತಮವಾಗಿದೆ. ಹಾಗೆಯೇ ಈ ಸೂಪ್ ಗಳ ಸೇವನೆಯಿಂದ ತರಕಾರಿ ಹಾಗೂ ಬೇಳೆ ಕಾಳುಗಳ ಉತ್ತಮ ಸತ್ವಗಳು ನಮ್ಮ ದೇಹವನ್ನು ಸೇರಿ, ನಮ್ಮ ಉತ್ತಮ ಆರೋಗ್ಯಕ್ಕೆ ಉಪಯುಕ್ತವಾಗುತ್ತದೆ. ಊಟ ಸೇರದೆ ಇರುವ ಸಮಯ, ಹಾಗೆಯೇ ನಿತ್ಯ ಒಂದು ಹೊತ್ತು ಅಷ್ಟೇ ಊಟ ಮಾಡುವವರು ಕೂಡ ಇನ್ನೊಂದು ಹೊತ್ತಿನ ಊಟಕ್ಕೆ ಸೂಪ್ ಗಳನ್ನು ತಯಾರಿಸಿ ಕುಡಿಯಬಹುದು. ಇದು ದೇಹಕ್ಕೆ ಬೇಕಾದ ಸಕಲ ಶಕ್ತಿಯನ್ನು ಒದಗಿಸುತ್ತದೆ. ಪ್ರತಿಯೊಬ್ಬರ ಉಪ್ಪು, ಹುಳಿ ಹಾಗೂ ಖಾರ ಈ ರುಚಿಯ ಅಳತೆಯು ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ನಿಮಗೆ ಬೇಕಾದ ಅಳತೆಯಲ್ಲಿ ಉಪ್ಪು, ಖಾರವನ್ನು ಸೇರಿಸಿಕೊಂಡು ಉತ್ತಮ ಸೂಪ್ ಗಳನ್ನು ತಯಾರಿಸಿ, ಸವಿಯಿರಿ ಎಂಬುದು ಈ ಲೇಖನದ ಉದ್ದೇಶವಾಗಿದೆ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Share
Published by
GruhaSnehi

Recent Posts

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು. AI Image ಮನೆಮದ್ದುಗಳು ಹಾಗೂ ಕೆಲವು ಪ್ರಾಕೃತಿಕ ಔಷಧಿಗಳ…

1 month ago

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ. AI Image ಬಿಳಿಯ ಮೈ, ಹಸಿರು ಜುಟ್ಟು ಎಂಬಂತೆ ಮೂಲಂಗಿಯು ಕಾಣುತ್ತದೆ. ಬಿಳಿಯ…

1 month ago

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins)

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins). AI Image ಎಲ್ಲರಿಗೂ ಹೆಚ್ಚಾಗಿ…

1 month ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

1 month ago

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು ಮೂಲವ್ಯಾಧಿ ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಆಧುನಿಕ ಯುಗದ ಆಹಾರ ಪದ್ಧತಿ,…

1 month ago

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ – ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ - ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ - AI…

1 month ago

This website uses cookies.