
ಇಂದಿನ ಆಧುನಿಕ ಜನರ ಬಾಯಲ್ಲಿ ಕೇಳುವ ಅತಿ ರೂಢಿ ಮಾತು ಎಂದರೆ ವಿಟಮಿನ್ ಸಿ ಅವಶ್ಯಕತೆ. ಎಲ್ಲರೂ ತಮ್ಮ ದೇಹದ ಅರೋಗ್ಯಕ್ಕಾಗಿ ವಿಟಮಿನ್ ಸಿ ಯ ಹುಡುಕಾಟದಲ್ಲಿ ತೊಡಗಿದ್ದಾರೆ. ಅಂತಹ ವಿಟಮಿನ್ ಸಿ ಯ ಗಣಿ ನಮ್ಮ ಕಿತ್ತಳೆ ಹಣ್ಣು. ಹಣ್ಣುಗಳ ಪೈಕಿ ಅತಿ ಉತ್ತಮವಾದ, ಆರೋಗ್ಯಕ್ಕೆ ಬಹಳ ಒಳ್ಳೆಯದಾಗಿರುವ ಹಣ್ಣು ಎಂದರೆ ಕಿತ್ತಳೆ ಹಣ್ಣು.
ಈ ಬೇಸಿಗೆಯ ದಾಹ ಹಾಗೂ ಬಾಯಾರಿಕೆಯನ್ನು ನೀಗಿಸಲು ಕಿತ್ತಳೆ ಸೂಕ್ತವಾಗಿದೆ. ಅನೇಕ ಬಾರಿ ಗ್ಲುಕೋಸ್ ನಂತೆ ವರ್ತಿಸುವ ಈ ಹಣ್ಣು ಎಲ್ಲರ ಪ್ರಿಯವಾದ ಹಣ್ಣು ಎಂದರೆ ತಪ್ಪಾಗಲಾರದು.
ಕಿತ್ತಳೆಯ ವೈಜ್ಞಾನಿಕ ವಿಚಾರಗಳು
ವೈಜ್ಞಾನಿಕ ಹೆಸರು – ಸಿಟ್ರಸ್ ಸಿನೆನ್ಸಿಸ್ ( Citrus sinensis )
ಆಂಗ್ಲ ಹೆಸರು – ಆರೆಂಜ್ ( orange )
ವಿಟಮಿನ್ ಸಿ ಯ ಗಣಿಯಾಗಿರುವ ಈ ಹಣ್ಣು, ಜೊತೆಗೆ ಅನೇಕ ಖನಿಜಾಂಶಗಳಾದ ಪ್ರೊಟೀನ್, ಮೆಗ್ನಿಶಿಯಂ, ಕಬ್ಬಿಣ, ತಾಮ್ರ, ಪೊಟ್ಯಾಸ್ಸಿಯಂ, ಕಾರಬೋಹೈಡ್ರೈಟ್, ವಿಟಮಿನ್ ಎ, ಬಿ, ಬಿ5, ಬಿ6 ಗಳನ್ನು ಕೂಡ ಹೊಂದಿದೆ.
ಕಿತ್ತಳೆಯ ಕೆಲವು ಆರೋಗ್ಯಕರ ಮನೆಮದ್ದುಗಳು
ಹೃದಯದ ಉತ್ತಮ ಆರೋಗ್ಯಕ್ಕೆ ಕಿತ್ತಳೆ ಹಣ್ಣಿನ ಕೊಡುಗೆಗಳು
- ಹೃದಯದ ಅನೇಕ ಸಮಸ್ಯೆಗಳಿಗೆ ಕಿತ್ತಳೆಯು ಉತ್ತಮ ಪರಿಹಾರವನ್ನು ನೀಡುತ್ತದೆ. ಹೃದಯ ಸಮಸ್ಯೆ ಇರುವವರು ನಿತ್ಯವೂ ಕಿತ್ತಳೆ ಹಣ್ಣನ್ನು ತಿನ್ನುವುದು ಉತ್ತಮವಾಗಿದೆ. ಇದು ಹೃದಯಕ್ಕೆ ಹೊಸ ಚೈತನ್ಯವನ್ನು ಒದಗಿಸಿ, ಶಕ್ತಿಯನ್ನು ನೀಡುತ್ತದೆ. ಕಿತ್ತಳೆ ರಸವನ್ನು ಜೇನುತುಪ್ಪಡೊಡನೆ ಸೇವಿಸುವುದು ಹೃದಯದ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಕಿತ್ತಳೆ ರಸವು ಅನೇಕ ಹೃದಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯಕವಾಗಿದೆ.
ಸೌಂದರ್ಯವರ್ಧನೆಗೆ ಕಿತ್ತಳೆ ಹಣ್ಣು ಬಹಳ ಉಪಯುಕ್ತವಾಗಿದೆ.
- ಮುಖದ ಮೇಲಿನ ಕಲೆಗಳಿಗೆ, ಅಥವಾ ಮುಖದ ಕಾಂತಿ ವರ್ಧನೆಗೆ ಕಿತ್ತಳೆಯ ಸಿಪ್ಪೆ ಬಹಳ ಉಪಯುಕ್ತವಾಗುತ್ತದೆ. ಕಿತ್ತಳೆಯ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ನೀರಿನಲ್ಲಿ ಕಲಸಿ ಕಲೆ ಇರುವ ಕಡೆ ಹಚ್ಚಿಕೊಳ್ಳಬೇಕು. ಇದನ್ನು ನಿತ್ಯ ಹಚ್ಚುವುದರಿಂದ ಕಲೆಗಳು ಕ್ರಮೇಣ ಕಡಿಮೆಯಾಗುತ್ತದೆ. ಮುಖದ ಕಾಂತಿ ಕೂಡ ವೃದ್ಧಿಸುತ್ತದೆ.
- ಮುಖದಲ್ಲಿರುವ ಮೊಡವೆ, ಗುಳ್ಳೆಗಳ ನಿವಾರಣೆಗೆ ಕೂಡ ಕಿತ್ತಳೆ ಹಣ್ಣಿನ ಸಿಪ್ಪೆ ಉತ್ತಮ ಮದ್ದಾಗಿದೆ. ಕಿತ್ತಳೆ ಹಣ್ಣಿನ ಹಸಿ ಸಿಪ್ಪೆಯನ್ನು ಮುಖದ ಮೇಲೆ ಉಜ್ಜಿಕೊಳ್ಳುವುದರಿಂದ ಮುಖದ ಮೇಲಿನ ಮೊಡವೆ, ಗುಳ್ಳೆಗಳು ಕಡಿಮೆಯಾಗುತ್ತದೆ. ಹಾಗೆಯೇ ಆ ಮೊಡವೆಗಳ ಕಲೆಗಳು ಕೂಡ ಕ್ರಮೇಣ ಕಡಿಮೆಯಾಗುತ್ತದೆ. ಹಾಗೆಯೇ ಮುಖದ ಕಾಂತಿಯು ಕೂಡ ಹೆಚ್ಚಾಗುತ್ತದೆ.
- ಮುಖದಲ್ಲಿನ ಕಪ್ಪು ಕಲೆಗಳನ್ನು ಕಡಿಮೆಗೊಳಿಸಲು ಮತ್ತೊಂದು ಮನೆಮದ್ದು ಎಂದರೆ ಕಿತ್ತಳೆ ಹಣ್ಣಿನ ರಸಕ್ಕೆ ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಬೇಕು. ಪ್ರತಿದಿನ ಹಚ್ಚುವುದರಿಂದ ಕ್ರಮೇಣ ಮುಖದ ಕಲೆಗಳು ಕಡಿಮೆಯಾಗಿ, ಮುಖದ ಕಾಂತಿ ವೃದ್ಧಿಯಾಗುತ್ತದೆ.
ಚರ್ಮದ ಆರೋಗ್ಯಕ್ಕೆ ಕಿತ್ತಳೆ ಹಣ್ಣಿನ ಉಪಯೋಗಗಳು.
ಚರ್ಮದ ಅನೇಕ ಸಮಸ್ಯೆಗಳಿಗೆ ಕಿತ್ತಳೆ ಹಣ್ಣು ಉತ್ತಮ ಮದ್ದಾಗಿದೆ. ಚರ್ಮದ ಸಮಸ್ಯೆಗಳಾದ ಹುಳಕಡ್ಡಿ, ಕಜ್ಜಿ, ತುರಿಕೆ, ಇಸುಬುಗಳಿಗೆ ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಉತ್ತಮ ಪರಿಹಾರ ಸಿಗುತ್ತದೆ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ನೆರಳಿನಲ್ಲಿ ಒಣಗಿಸಿ ಪುಡಿಮಾಡಿಕೊಳ್ಳಬೇಕು. ಈ ಪುಡಿಯನ್ನು ಒಂದು ಗಾಜಿನ ಪಾತ್ರೆಯಲ್ಲಿ ಶೇಖರಿಸಿ ಇಡಬೇಕು.
a) ಈ ಪುಡಿಯನ್ನು ಹೊಂಗೆ ಎಣ್ಣೆಯಲ್ಲಿ ಅಥವಾ ಬೇವಿನ ಎಣ್ಣೆಯಲ್ಲಿ ಕಲಸಿ ಹಚ್ಚಿದರೆ ಚರ್ಮದ ಎಲ್ಲಾ ಸಮಸ್ಯೆಗಳು ತ್ವರಿತವಾಗಿ ಪರಿಹಾರವಾಗುತ್ತದೆ.
b) ಈ ಪುಡಿಯನ್ನು ಒಂದು ಚಮಚ ತೆಗೆದುಕೊಂಡು ಒಂದು ಲೋಟ ನೀರಿನಲ್ಲಿ ಬೆರೆಸಿ ಕುದಿಸಿ, ಕುಡಿಯುವುದರಿಂದ ಕಿತ್ತಳೆ ಹಣ್ಣಿನ ಎಲ್ಲಾ ಅಂಶಗಳು ಸಿಗುತ್ತದೆ. ಮುಂಚೆ ಹಣ್ಣು ಸಿಗದೇ ಇರುವ ಕಾಲದಲ್ಲಿ ಕಿತ್ತಳೆ ಸಿಪ್ಪೆಯ ಪಾನೀಯವನ್ನು ಕುಡಿಯುತ್ತಿದ್ದರು, ಈಗ ಕಿತ್ತಳೆ ಹಣ್ಣು ಎಲ್ಲಾ ಸಮಯದಲ್ಲೂ ಸಿಗುವುದರಿಂದ ಸಿಪ್ಪೆಯ ಪ್ರಯೋಜನಗಳ ಅರಿವು ನಮಗಿಲ್ಲ.
ಮಕ್ಕಳಿಗೆ ಹಸಿವು ಇಲ್ಲದಿರುವಿಕೆಯನ್ನು ಹೋಗಲಾಡಿಸಲು ಕಿತ್ತಳೆ ಸಹಾಯಕವಾಗಿದೆ.
ಮಕ್ಕಳಿಗೆ ಊಟ ಮಾಡಿಸುವುದೇ ಒಂದು ದೊಡ್ಡ ಕೆಲಸ. ಅಂತಹುದರಲ್ಲಿ ಮಕ್ಕಳಿಗೆ ಹಸಿವೆ ಇಲ್ಲದಿದ್ದರೆ ಕಷ್ಟವಾಗುತ್ತದೆ. ಆದ್ದರಿಂದ ಮಕ್ಕಳ ಹಸಿವನ್ನು ಹೆಚ್ಚಿಸಲು ಬೆಳಿಗ್ಗೆ ಆಹಾರದ ಮುಂಚೆ ಒಂದು ಕಿತ್ತಳೆಯನ್ನು ತಿನ್ನಿಸಿ, ಹತ್ತು ನಿಮಿಷದ ನಂತರ ಆಹಾರವನ್ನು ನೀಡಬೇಕು. ಇದು ಮಕ್ಕಳ ಹಸಿವನ್ನು ಜಾಸ್ತಿ ಮಾಡಿಸಿ, ಊಟವನ್ನು ಸೇರುವಂತೆ ಮಾಡುತ್ತದೆ.
ಕಣ್ಣಿನ ಉತ್ತಮ ಆರೋಗ್ಯಕ್ಕೆ ಕಿತ್ತಳೆ ಸಹಕಾರಿಯಾಗಿದೆ.
ಕಣ್ಣಿನ ಅರೋಗ್ಯವು ಬಹಳ ಮುಖ್ಯವಾದ್ದದ್ದು. ಇಂದಿನ ಆಧುನಿಕ ದಿನಮಾನದಲ್ಲಿ ಕಂಪ್ಯೂಟರ್, ಮೊಬೈಲ್ ಗಳ ಬಳಕೆಯಿಂದ ಕಣ್ಣು ದಣಿಯುತ್ತದೆ. ಅಂತಹ ಸಮಯದಲ್ಲಿ ಕಣ್ಣಿನ ರಕ್ಷಣೆ ಅವಶ್ಯಕವಾಗಿದೆ. ಕಣ್ಣಿನ ರಕ್ಷಣೆಗೆ ಅಗತ್ಯವಾಗಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಕಿತ್ತಲೆಯಲ್ಲಿ ಅಧಿಕವಾಗಿ ಲಭ್ಯವಿದೆ. ಆದ್ದರಿಂದ ಕಿತ್ತಳೆ ಹಣ್ಣಿನ ಸೇವನೆ ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ.
ಮೂತ್ರಪಿಂಡದ ರಕ್ಷಣೆಯಲ್ಲಿ ಕಿತ್ತಳೆಯ ಪಾತ್ರ.
ಮೂತ್ರಪಿಂಡದ ರಕ್ಷಣೆಯಲ್ಲಿ ಕಿತ್ತಳೆ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚು ಕಿತ್ತಳೆ ಸೇವನೆಯು ಮೂತ್ರಪಿಂಡದ ಆರೋಗ್ಯದ ರಕ್ಷಣೆ ಮಾಡುತ್ತದೆ. ಅಷ್ಟೇ ಅಲ್ಲದೇ ಕೊಲೆಸ್ಟ್ರೋಲ್ ಕಡಿಮೆಗೊಳಿಸಿ, ಉತ್ತಮ ರಕ್ತಶುದ್ಧಿಗೆ ಸಹಾಯಕವಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಮೂತ್ರಪಿಂಡಕ್ಕೆ ರಕ್ತ ಶೋಧಿಸುವ ಕಾರ್ಯವು ಸುಲಭವಾಗಿ, ಮೂತ್ರ ಪಿಂಡದ ಅರೋಗ್ಯವು ಉತ್ತಮವಾಗಿರುತ್ತದೆ.
ರಕ್ತದ ಒತ್ತಡವನ್ನು ನಿಯಂತ್ರಿಸುವ ಗುಣವು ಕಿತ್ತಳೆಯಲ್ಲಿದೆ.
ದೇಹದಲ್ಲಿ ರಕ್ತ ಸಂಚಾರ ಸುಲಭಗೊಳಿಸಲು ಕಿತ್ತಳೆಯ ರಸ ಸೇವನೆಯು ಅತಿ ಉತ್ತಮವಾಗಿದೆ. ಮೂತ್ರ ಪಿಂಡದ ಉತ್ತಮ ಅರೋಗ್ಯಕ್ಕೂ, ಹಾಗೂ ರಕ್ತ ಶುದ್ಧಿಗೂ ಕಿತ್ತಳೆ ಹಣ್ಣು ಸಹಕರಿಯಾಗಿರುವುದರಿಂದ ಇದು ರಕ್ತದ ಚಲನೆಯನ್ನು ಸುಲಭಗೊಳಿಸಿ, ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ.
ಮಲೇರಿಯಾ ಜ್ವರದ ಆರೈಕೆಯಲ್ಲೂ ಕಿತ್ತಳೆ ಹಣ್ಣು ಸಹಕಾರಿಯಾಗಿದೆ.
ಕಿತ್ತಳೆ ಹಣ್ಣು ಮಲೇರಿಯ ಜ್ವರಕ್ಕೆ ಒಳ್ಳೆಯ ಮದ್ದಾಗಿ ಕೆಲಸ ಮಾಡುತ್ತದೆ. ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಕ್ವಿನೈನ್ ಎಂಬ ಅಂಶವಿದ್ದು, ಇದು ಮಲೇರಿಯದ ಚಿಕಿತ್ಸೆಗೆ ಅತಿ ಉತ್ತಮವಾಗಿದೆ. ಕಿತ್ತಳೆ ಸಿಪ್ಪೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಅರ್ಧದಷ್ಟು ಇಂಗಿಸಿ ಕಿತ್ತಳೆ ಕಷಾಯವನ್ನು ಸಿದ್ದಪಡಿಸಬೇಕು. ಶೋಧಿಸಿಕೊಂಡು ಬಿಸಿ ಇರುವಾಗಲೇ ಕಷಾಯವನ್ನು ಕುಡಿಯಬೇಕು. ಇದು ಮಲೇರಿಯ ಜ್ವರಕ್ಕೆ ಅತಿ ಉತ್ತಮವಾಗಿದೆ.
ನೆಗಡಿ, ಕೆಮ್ಮಿನ ನಿವಾರಣೆಗೂ ಕಿತ್ತಳೆ ಉತ್ತಮವಾಗಿದೆ.
ಕಿತ್ತಳೆ ತಿಂದರೆ ಕಫ ಜಾಸ್ತಿ ಆಗುತ್ತದೆ. ಶೀತಕ್ಕೆ ಕಾರಣ ಎಂಬ ಮಾತುಗಳನ್ನು ನಾವು ಕೇಳಿದ್ದೇವೆ. ಆದರೆ ಕಿತ್ತಳೆ ನೆಗಡಿ, ಕೆಮ್ಮಿನ ನಿವಾರಣೆಗೂ ಉತ್ತಮವಾಗಿದೆ. ಪದೇ ಪದೇ ನೆಗಡಿ, ಕೆಮ್ಮು ಬರುತ್ತಿದ್ದರೆ, ಅಂಥವರು ನಿತ್ಯ ಕಿತ್ತಳೆ ಹಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಇದು ನಮ್ಮ ದೇಹದಲ್ಲಿ ಉತ್ತಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಮೇಲಿಂದ ಮೇಲೆ ಬರುವ ಕೆಮ್ಮಿಗೆ, ಕಿತ್ತಳೆ ರಸಕ್ಕೆ ಜೇನುತುಪ್ಪ ಹಾಗೂ ಉಪ್ಪು ಬೆರೆಸಿ ಸೇವಿಸಬೇಕು. ಇದು ನಮ್ಮಮ್ಮ ಚುರುಕಾಗಿಸುತ್ತದೆ.
ಗರ್ಭಿಣಿಯರು ಸೇವಿಸಲೇ ಬೇಕಾದ ಹಣ್ಣು.
ಗರ್ಭಿಣಿಯರು ತಮ್ಮ ಅರೋಗ್ಯವನ್ನು ಅತ್ಯಂತ ಜಾಗರೂಕರಾಗಿ ಇರಬೇಕು. ಸುಲಭ ಹೆರಿಗೆ ಹಾಗೂ ಉತ್ತಮ ಅರೋಗ್ಯಕ್ಕಾಗಿ ಕಿತ್ತಳೆಯನ್ನು ಸೇವಿಸಬೇಕು. ಇದು ಮಗುವಿನಲ್ಲೂ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸುತ್ತದೆ. ಅರೋಗ್ಯಕ್ಕೂ ಕೂಡ ತುಂಬಾ ಉತ್ತಮವಾಗಿದೆ.
ಮೂಳೆಗಳ ಉತ್ತಮ ಆರೋಗ್ಯಕ್ಕೆ ಕಿತ್ತಳೆಯ ಉಪಯೋಗಗಳು.
ಮೂಳೆಗಳು ಗಟ್ಟಿಯಾಗಿರಲು, ದೃಢವಾಗಿರಲು ಕಿತ್ತಳೆ ಅತಿ ಉತ್ತಮವಾಗಿದೆ. ಇದು ಮೂಳೆಗಳ ಮೃದುತ್ವವನ್ನು ಕಡಿಮೆಗೊಳಿಸಿ, ಮೂಳೆಗಳ ಉತ್ತಮ ಆರೋಗ್ಯಕ್ಕೆ ಸಹಾಯಕವಾಗಿದೆ. ದಿನನಿತ್ಯ ಕಿತ್ತಳೆಯನ್ನು ಸೇವಿಸುವುದು ಮೂಳೆಗಳ ಆರೋಗ್ಯಕ್ಕೆ ಉತ್ತಮವಾಗಿದೆ.
ಮಲಬದ್ಧತೆಗೆ ಕಿತ್ತಳೆಯ ಪರಿಹಾರಗಳು
ಕಿತ್ತಳೆಯಲ್ಲಿ ಅಧಿಕ ನಾರಿನ ಅಂಶವು ಇರುವ ಕಾರಣ ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ ಮಲಬದ್ಧತೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.
ಕಿತ್ತಳೆಯು ನಮ್ಮ ದೈನಂದಿನ ಜೀವನದಲ್ಲಿ ಅತಿ ಉಪಯುಕ್ತವಾಗಿರುವ ಹಣ್ಣು. ಶ್ವಾಸಕೋಶಗಳ ಸಮಸ್ಯೆಗಳು ಇರುವವರು ಕಿತ್ತಳೆ ಹಣ್ಣನ್ನು ಜಾಸ್ತಿಯಾಗಿ ತಿನ್ನುವುದು ಉತ್ತಮವಾಗಿದೆ. ಅನೇಕ ಚರ್ಮದ ಸಮಸ್ಯೆಗಳಿಗೆ ಕಿತ್ತಳೆ ಹಣ್ಣಿನ ರಸವನ್ನು ಕುಡಿಯುವುದು ಅತಿ ಉತ್ತಮವಾಗಿದೆ. ಪ್ರಯಾಣದ ಸಮಯದಲ್ಲಿ ಆಗುವ ಸುಸ್ತು, ಆಯಾಸಗಳನ್ನು ನಿವಾರಿಸಲು ಕೂಡ ಕಿತ್ತಳೆ ಹಣ್ಣು ಬಲು ಉತ್ತಮವಾಗಿದೆ. ಇದು ದೇಹಕ್ಕೆ ಅತಿ ಶೀಘ್ರವಾಗಿ ಶಕ್ತಿಯನ್ನು ನೀಡುತ್ತದೆ. ಗ್ಲೋಕೋಸ್ ನಂತೆ ದೇಹದ ಮೇಲೆ ಪರಿಣಾಮ ಬೀರುವ ಹಣ್ಣು ಇದಾಗಿದೆ. ಇನ್ನೂ ಕಿತ್ತಳೆ ಹಣ್ಣಿನ ಸಿಪ್ಪೆಗಳು ಕೂಡ ಅಷ್ಟೇ ಪ್ರಯೋಜನಗಳನ್ನು ನೀಡುತ್ತದೆ. ಹಣ್ಣಿನಲ್ಲಿ ಇರುವಷ್ಟೇ ಶಕ್ತಿ ಸಿಪ್ಪೆಯಲ್ಲಿ ಇರುವುದು ಆಶ್ಚರ್ಯಕರವಾಗಿದೆ. ಇಂತಹ ಕಿತ್ತಳೆಯನ್ನು ನಾವು ನಿತ್ಯ ತಿನ್ನುವ ಅಭ್ಯಾಸ ಮಾಡಿಕೊಳ್ಳುವುದು ಅತಿ ಉತ್ತಮವಾಗಿದೆ. ಅನೇಕ ಸಮಸ್ಯೆಗಳಿಗೆ ಒಂದೇ ಉತ್ತರ ಎಂಬಂತೆ ಇಂದಿನ ಲೇಖನದಲ್ಲಿ ನಾವು ಕಿತ್ತಳೆ ಹಣ್ಣಿನ ನವೀನ ಚಿತ್ರಣದ ಮಾಹಿತಿಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಿದ್ದೇವೆ. ಕಿತ್ತಳೆಯ ಪ್ರಯೋಜನಗಳನ್ನು ಪಡೆದು ಉತ್ತಮ ಅರೋಗ್ಯವನ್ನು ಹೊಂದಿರಿ ಎಂಬುದು ನಮ್ಮ ಆಶಯ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.