
ಪ್ರತಿ ಮನೆಗಳಲ್ಲಿ ಎಲ್ಲಾ ತರಕಾರಿ ಜೊತೆಗೆ ಇರುವ ಒಂದು ಮುಖ್ಯ ತರಕಾರಿ ಎಂದರೆ ಶುಂಠಿ. ಹಸಿ ಶುಂಠಿ ಹಾಗೂ ಒಣ ಶುಂಠಿ ಎರಡರ ಬಳಕೆಯು ಮನೆಗಳಲ್ಲಿ ಇದ್ದೇ ಇರುತ್ತದೆ. ಶುಂಠಿಯ ಸ್ವಾದವು ಕಟುವಾಗಿದ್ದು, ದೇಹಕ್ಕೆ ಉಷ್ಣ ಅಂಶವನ್ನು ನೀಡುತ್ತದೆ. ನಿತ್ಯ ಮನೆಗಳಲ್ಲಿ ಶುಂಠಿ ಚಟ್ನಿ, ಶುಂಠಿ ತಂಬುಳಿ, ಶುಂಠಿ ಚಹಾ, ಶುಂಠಿ ಕಷಾಯ, ಎಲ್ಲಾ ಅಡುಗೆಯಲ್ಲೂ ಹೆಚ್ಚಾಗಿ ಶುಂಠಿಯ ಬಳಕೆ ಇದ್ದೇ ಇರುತ್ತದೆ. ಅಷ್ಟೇ ಅಲ್ಲದೆ ಶುಂಠಿಯ ವಿವಿಧ ಉತ್ತಮ ಔಷಧಿ ಗುಣಗಳಿಂದ ಅದು ಗುಳಿಗೆ, ಚೂರ್ಣ, ಕಷಾಯ, ಲೇಹ್ಯಗಳ ತಯಾರಿಕೆಯಲ್ಲೂ ಅಗ್ರಸ್ಥಾನವನ್ನು ಹೊಂದಿದೆ. ಇಂತಹ ಶುಂಠಿ ಮಣ್ಣಿನ ಒಳಭಾಗದಲ್ಲಿ ಹುಟ್ಟಿ, ಅನೇಕ ಪ್ರಯೋಜನಗಳನ್ನು ನಮಗೆ ನೀಡುವ ಸಂಜೀವಿನಿಯಾಗಿದೆ.
ಶುಂಠಿಯ ವೈಜ್ಞಾನಿಕ ವಿಚಾರಗಳು
ವೈಜ್ಞಾನಿಕ ಹೆಸರು – ಜಿಂಗಿಬರ್ ಅಫಿಷಿನೇಲ್ (Zingiber officinale)
ಆಂಗ್ಲ ಹೆಸರು – ಜಿಂಜರ್ (Ginger)
ಶುಂಠಿಯಲ್ಲಿ ಜಿಂಜರಾಲ್ (gingerol) ಎಂಬ ಮುಖ್ಯ ಅಂಶವಿದ್ದು, ಅದು ಶುಂಠಿಯ ವಿಶಿಷ್ಟವಾದ ರುಚಿಗೆ ಕಾರಣವಾಗಿರುತ್ತದೆ. ಹಾಗೆಯೇ ಜೊತೆಗೆ ಶುಂಠಿಯು ವಿಟಮಿನ್ ಸಿ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ಗಳನ್ನು ಹೊಂದಿದ್ದು, ಕಡಿಮೆ ಕ್ಯಾಲೋರಿಗಳನ್ನು ಒಳಗೊಂಡಂತಹ ಆಹಾರವಾಗಿದೆ.
ಶುಂಠಿಯನ್ನು ಎಲ್ಲಾ ರೀತಿಯ ವೈದ್ಯಕೀಯ ಕ್ಷೇತ್ರದಲ್ಲಿ ಔಷಧಕ್ಕಾಗಿ ಬಳಸಲಾಗುತ್ತದೆ. ಅಲ್ಲದೇ ಶುಂಠಿಯಿಂದ ಟಿಂಚರ್ ಕೂಡ ತಯಾರಿಸಲಾಗುತ್ತದೆ. ಅಲ್ಲದೇ ಜಿಂಜರ್ ಎಸೆನ್ಸ್ ಕೂಡ ತಯಾರಿಸಲಾಗುತ್ತದೆ. ಇದು ಗಂಟಲು ಹಾಗೂ ಹೃದಯಕ್ಕೆ ಅತಿ ಹಿತಕರವಾಗಿದೆ. ಶುಂಠಿಯು ವಾತ, ಪಿತ್ತ, ಕಫ, ವಾಂತಿ, ಕೆಮ್ಮು, ಮಲಬದ್ಧತೆ, ಇನ್ನೂ ಅನೇಕ ಸಮಸ್ಯೆಗಳನ್ನು ದೂರಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಈಗ ನಾವು ಶುಂಠಿಯ ಆರೋಗ್ಯಕರ ಮನೆಮದ್ದುಗಳ ಬಗ್ಗೆ ತಿಳಿಯೋಣ.
ಶುಂಠಿಯ ಆರೋಗ್ಯಕರ ಮನೆಮದ್ದುಗಳು
ಸುಲಭ ಜೀರ್ಣಕ್ರಿಯೆಗೆ ಶುಂಠಿಯ ಉಪಯುಕ್ತ ಮನೆಮದ್ದುಗಳು
- ಸುಲಭ ಜೀರ್ಣಕ್ರಿಯೆಗೆ ಶುಂಠಿಯಿಂದ ಅನೇಕ ಪರಿಹಾರಗಳನ್ನು ನಾವು ಪಡೆಯಬಹುದು. ಮೊದಲೆನೆಯದಾಗಿ ಊಟಕ್ಕೆ ಮುನ್ನ ಸಣ್ಣ ಶುಂಠಿಯ ಚೂರನ್ನು ಒಂದೆರಡು ಕಾಳು ಉಪ್ಪಿನ ಜೊತೆ ಅಗೆದು ತಿನ್ನುವುದರಿಂದ ಆಜೀರ್ಣ ಸಮಸ್ಯೆಗಳು ಎದುರಾಗುವುದಿಲ್ಲ. ನಂತರ ತಿಂದ ಆಹಾರವು ಉತ್ತಮವಾಗಿ ಜೀರ್ಣವಾಗುತ್ತದೆ.
- ಅಜೀರ್ಣಕ್ಕೆ ಶುಂಠಿಯ ಕಷಾಯ ಕೂಡ ಬಲು ಉತ್ತಮವಾಗಿದೆ. ಒಂದು ಲೋಟ ನೀರಿಗೆ ಒಂದೆರಡು ಶುಂಠಿಯ ತುಂಡುಗಳನ್ನು ಜಜ್ಜಿ ಹಾಕಬೇಕು. ಹಾಗೆಯೇ ಒಂದು ಚಮಚ ಜೀರಿಗೆಯನ್ನು ಸೇರಿಸಿ ಕುದಿಸಬೇಕು. ಇಟ್ಟ ನೀರು ಅರ್ಧದಷ್ಟು ಇಂಗಿದ ನಂತರ ಓಲೆ ಆರಿಸಿ, ಕಷಾಯವನ್ನು ಶೋಧಿಸಿಕೊಂಡು ಕುಡಿಯಬೇಕು. ಈ ಕಷಾಯವನ್ನು ದಿನಕ್ಕೆ ಎರಡು ಬಾರಿಯಂತೆ ಕುಡಿದರೆ ಆಜೀರ್ಣ ಸಮಸ್ಯೆಯು ದೂರವಾಗುತ್ತದೆ.
- ಜಠರದ ಆರೋಗ್ಯಕ್ಕೆ ಶುಂಠಿಯ ಸೇವನೆ ಉತ್ತಮವಾಗಿದೆ. ಶುಂಠಿಯ ಸೇವನೆಯಿಂದ ಜಠರ ರಸದ ಉತ್ಪಾದನೆ ಜಾಸ್ತಿಯಾಗಿ, ಜೀರ್ಣಕ್ರಿಯೆಯೂ ಉತ್ತಮವಾಗಿ ಸಾಗುತ್ತದೆ. ಪ್ರತಿದಿನ ಸಣ್ಣ ಶುಂಠಿಯನ್ನು ಜಗಿದು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಅಷ್ಟು ಸಮಸ್ಯೆಗಳಿಂದ ನಾವು ಮುಕ್ತಿಯನ್ನು ಪಡೆಯಬಹುದು, ಹಾಗೆಯೇ ಇದು ಅರೋಗ್ಯವರ್ಧಕವು ಕೂಡ ಆಗಿದೆ.
- ಆಜೀರ್ಣಕ್ಕೆ ಉಪಯುಕ್ತವಾಗಿರುವ ಇನ್ನೊಂದು ಮನೆಮದ್ದು ಎಂದರೆ 2 ಚಮಚ ಕೊತ್ತಂಬರಿ ಬೀಜ ಹಾಗೂ ಒಂದು ಇಂಚು ಒಣಶುಂಠಿ ಎರಡನ್ನು ಚೆನ್ನಾಗಿ ಹುರಿಯಬೇಕು. ನಂತರ ಎರಡನ್ನು ಸೇರಿಸಿ ಪುಡಿಮಾಡಿಕೊಳ್ಳಬೇಕು. ಒಂದು ಲೋಟ ನೀರಿಗೆ ಎರಡು ಚಮಚ ತಯಾರಿಸಿದ ಪುಡಿ ಹಾಗೂ ಒಂದು ಚಮಚ ಬೆಲ್ಲವನ್ನು ಸೇರಿಸಿ ಕುದಿಸಬೇಕು. ನಂತರ ಶೋಧಿಸಿಕೊಂಡು ಕುಡಿಯಬೇಕು. ಇದು ಅಜೀರ್ಣಕ್ಕೆ ಉತ್ತಮ ಔಷಧಿಯಾಗಿದ್ದು, ಪಿತ್ತದ ಸಮಸ್ಯೆಗಳಿಂದ ದೂರವಾಗಲು ಕೂಡ ಉತ್ತಮವಾಗಿದೆ.
ಪಿತ್ತದ ಸಮಸ್ಯೆಗಳಿಗೆ ಶುಂಠಿ ಅತಿ ಉಪಯುಕ್ತವಾಗಿದೆ.
- ಪಿತ್ತದ ನಿವಾರಣೆಗೆ ಹಾಗೂ ಪಿತ್ತದಿಂದ ಬರುವ ವಾಕರಿಕೆ, ವಾಂತಿ, ಹೊಟ್ಟೆ ಉಬ್ಬರ ಹಾಗೂ ತಲೆ ಸುತ್ತುವಿಕೆಯನ್ನು ಕಡಿಮೆಗೊಳಿಸಲು ಶುಂಠಿಯ ಸೇವನೆ ಉತ್ತಮವಾಗಿದೆ. ಶುಂಠಿಯನ್ನು ಚೆನ್ನಾಗಿ ಅಗೆದು ತಿನ್ನುವುದರಿಂದ ಪಿತ್ತ ಸಂಬಂಧಿ ಸಮಸ್ಯೆಗಳನ್ನು ನಾವು ದೂರಗೊಳಿಸಬಹುದು.
- ಕೊತ್ತಂಬರಿ ಬೀಜ ಹಾಗೂ ಒಣ ಶುಂಠಿಯನ್ನು ಹುರಿದು ಪುಡಿಮಾಡಿಕೊಂಡು, ಬೆಲ್ಲ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಪಿತ್ತದ ಸಮಸ್ಯೆಗಳು ದೂರವಾಗುತ್ತದೆ.
ಕರುಳಿನ ಉತ್ತಮ ಆರೋಗ್ಯಕ್ಕೆ ಶುಂಠಿಯ ಸೇವನೆ ಉತ್ತಮವಾಗಿದೆ.
- ಪ್ರತಿದಿನ ಶುಂಠಿಯನ್ನು ತಿನ್ನುವುದರಿಂದ ಜಠರ ಹಾಗೂ ಕರುಳಿನಲ್ಲಿರುವ ಬೇಡವಾದ ಕ್ರಿಮಿಗಳನ್ನು ನಾಶಪಡಿಸಿ, ಕರುಳಿನ ಅರೋಗ್ಯವನ್ನು ಕಾಪಾಡುತ್ತದೆ.
- ಮಕ್ಕಳ ಉತ್ತಮ ಕರುಳಿನ ಆರೋಗ್ಯಕ್ಕೆ ಒಂದು ಚಮಚ ಶುಂಠಿ ರಸಡೊಡನೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಕೊಡಬೇಕು. ಇದು ಮಕ್ಕಳ ಜಠರ ಹಾಗೂ ಕರುಳಿನ ಅರೋಗ್ಯವನ್ನು ಉತ್ತಮವಾಗಿರಿಸುತ್ತದೆ.
- ಕೆಲವು ಸೊಪ್ಪುಗಳು ಹಾಗೂ ತರಕಾರಿಗಳನ್ನು ಬೇಯಿಸಿ ತಿನ್ನುವುದರಿಂದ ಅವುಗಳು ಕರುಳಲ್ಲಿ ವಾಯುವನ್ನು ಉಂಟುಮಾಡುತ್ತದೆ. ಈ ವಾಯುವಿನಿಂದ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಈ ಸಮಸ್ಯೆಗಳಿಂದ ಪಾರಾಗಲು ಹಸಿ ಶುಂಠಿಯನ್ನು ಆಹಾರದಲ್ಲಿ ಅಡುಗೆ ಮಾಡುವಾಗ ಬಳಸುವುದು ಉತ್ತಮವಾಗಿದೆ. ಅರೋಗ್ಯಕ್ಕೂ ಇದು ಬಹಳ ಒಳ್ಳೆಯದಾಗಿದೆ.
ಹಲ್ಲುನೋವಿಗೆ ಶುಂಠಿಯ ಪರಿಹಾರಗಳು
- ಹಲ್ಲುಗಳ ನೋವಿಗೆ ಮನೆಯಲ್ಲೇ ಒಂದು ಶುಂಠಿ ಪೇಸ್ಟ್ ಅನ್ನು ತಯಾರಿಸಬಹುದು. ಒಣ ಶುಂಠಿಯನ್ನು ಸುಡಬೇಕು. ಸುಟ್ಟು ಬಂದ ಭಸ್ಮಕ್ಕೆ ಅಡುಗೆ ಉಪ್ಪನ್ನು ಬೆರೆಸಿ ಹಲ್ಲನ್ನು ಉಜ್ಜಬೇಕು. ಇದರಿಂದ ಹಲ್ಲು ನೋವು ಕ್ರಮೇಣ ಕಡಿಮೆಯಾಗುತ್ತದೆ.
ಜ್ವರದ ನಿವಾರಣೆಗೆ ಶುಂಠಿಯ ಪರಿಹಾರಗಳು
- ದೇಹಕ್ಕೆ ಜ್ವರ ಬಂದಾಗ ಮುಖ್ಯವಾಗಿ ಚಳಿ ಜ್ವರಗಳು ಬಂದಾಗ, ಶುಂಠಿ ಕಷಾಯವನ್ನು ಕುಡಿಯುವುದು ಉತ್ತಮವಾಗಿದೆ. ಶುಂಠಿ ಹಾಗೂ ಕೊತ್ತಂಬರಿ ಬೀಜವನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಬೇಕು. ನಂತರ ಸ್ವಲ್ಪ ಬೆಲ್ಲದ ಪುಡಿಯನ್ನು ಸೇರಿಸಿ, ಕುದಿಸಿ, ಓಲೆ ಆರಿಸಬೇಕು. ನಂತರ ಶೋಧಿಸಿಕೊಂಡು ಬಿಸಿ ಇರುವಾಗಲೇ ಕುಡಿಯಬೇಕು. ಇದನ್ನು ದಿನಕ್ಕೆ ಮೂರು ಬಾರಿಯಂತೆ ಕುಡಿಯಬೇಕು. ಇದು ಜ್ವರದ ತಾಪವನ್ನು ತಗ್ಗಿಸಿ, ಕ್ರಮೇಣ ಜ್ವರವನ್ನು ಕಡಿಮೆಗೊಳಿಸುತ್ತದೆ. ದೇಹದ ಆಯಾಸವನ್ನು ಕೂಡ ಇದು ನಿವಾರಿಸಲು ಉತ್ತಮವಾಗಿರುತ್ತದೆ.
ಕೆಮ್ಮು ಹಾಗೂ ದಮ್ಮಿನ ಸಮಸ್ಯೆಗಳನ್ನು ನಿವಾರಿಸಲು ಶುಂಠಿ ಉಪಯುಕ್ತವಾಗಿದೆ.
- ಶುಂಠಿಗೆ ಕಫವನ್ನು ಕರಗಿಸುವ ಶಕ್ತಿ ಇದೆ. ಕೆಮ್ಮು ಬಂದಾಗ ಶುಂಠಿಯನ್ನು ಜಗಿದು ತಿಂದರು ಕೂಡ ಉತ್ತಮವಾಗಿದೆ. ಹಸಿ ಶುಂಠಿಯನ್ನು ಜಜ್ಜಿಕೊಂಡು ಮೆಂತ್ಯದ ಸೊಪ್ಪಿನ ಜೊತೆಗೆ ಸೇರಿಸಿ ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಿ, ಕಷಾಯವನ್ನು ಸಿದ್ದಪಡಿಸಿಕೊಳ್ಳಬೇಕು. ನಂತರ ಶೋಧಿಸಿಕೊಂಡು ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿದರೆ ಕೆಮ್ಮು ಕಡಿಮೆಯಾಗುತ್ತದೆ. ಕಫ ಕೂಡ ಕರಗುತ್ತದೆ. ಹಾಗೆಯೇ ದಮ್ಮಿಗೂ ಉತ್ತಮ ಪರಿಹಾರವಾಗುತ್ತದೆ.
ಹೊಟ್ಟೆ ಹಸಿವಿಲ್ಲದಾಗ, ನಾಲಿಗೆ ರುಚಿ ಕಳೆದುಕೊಂಡಾಗ ಶುಂಠಿಯ ಸೇವನೆ ಉತ್ತಮವಾಗಿರುತ್ತದೆ.
- ಒಂದು ಇಂಚು ಶುಂಠಿ, ಒಂದು ಚಮಚ ಜೀರಿಗೆ ಹಾಗೂ ಸ್ವಲ್ಪ ಕಲ್ಲುಸಕ್ಕರೆ ಇವು ಮೂರನ್ನು ಸೇರಿಸಿ ಚೆನ್ನಾಗಿ ಅಗೆದು ತಿನ್ನುವುದರಿಂದ ನಾಲಿಗೆಯ ರುಚಿ ಗ್ರಹಿಸುವ ಶಕ್ತಿ ಮರಳಿ ಬರುತ್ತದೆ. ಹಾಗೆಯೇ ಹೊಟ್ಟೆ ಹಸಿವು ಮರಳಿ, ಊಟ ಸೇರುತ್ತದೆ. ಇದು ಜೀರ್ಣಕ್ರಿಯೆಗೂ ಉತ್ತಮವಾಗಿದೆ.
ಗಂಟಲಿನ ಸಮಸ್ಯೆಗೆ ಶುಂಠಿಯ ಪರಿಹಾರಗಳು
- ಗಂಟಲು ನೋವಿರುವಾಗ, ಇಲ್ಲವೇ ಗಂಟಲು ಬಿರಿದು ಮಾತನಾಡಲು ಕಷ್ಟವಾದಾಗ, ಗಂಟಲಿನಲ್ಲಿ ಸಣ್ಣ ಹುಣ್ಣುಗಳದಾಗ, ಈ ಎಲ್ಲಾ ಸಮಯದಲ್ಲಿ ಒಂದು ಇಂಚು ಹಸಿ ಶುಂಠಿ, ಒಂದು ಲವಂಗ ಹಾಗೂ ಸ್ವಲ್ಪ ಕಲ್ಲುಪ್ಪು, ಇವು ಮೂರನ್ನು ಚೆನ್ನಾಗಿ ಜಜ್ಜಿ, ಸೇವಿಸಬೇಕು. ಇದರಿಂದ ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಕಾಮಾಲೆ ಸಮಸ್ಯೆಯ ಪರಿಣಾಮಗಳನ್ನು ತಡೆಗಟ್ಟಲು ಶುಂಠಿಯು ಉತ್ತಮವಾಗಿದೆ.
- ಕಾಮಾಲೆ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವವರು ತಮ್ಮ ಆಹಾರದಲ್ಲಿ ಶುಂಠಿಯನ್ನು ಬಳಸುವುದು ಉತ್ತಮವಾಗಿದೆ. ಒಂದು ಚಮಚ ಶುಂಠಿ ರಸಕ್ಕೆ, ಒಂದು ಚಮಚ ಪುದೀನ ಸೊಪ್ಪಿನ ರಸ ಹಾಗೂ ಒಂದು ಚಮಚ ಜೇನುತುಪ್ಪ ಇವು ಮೂರನ್ನು ಬೆರೆಸಿ, ದಿನಕ್ಕೆ ಮೂರು ಬಾರಿ ಸೇವಿಸಬೇಕು. ಇದು ಕಾಮಾಲೆಗೆ ಉತ್ತಮವಾಗಿದೆ. ಹಾಗೆಯೇ ಇದು ಸಂಧಿವಾತಕ್ಕೂ ಉತ್ತಮವಾಗಿದೆ.
- ಅರಿಶಿಣ ಕಾಮಾಲೆ ಸಮಸ್ಯೆಗೆ ಒಣಶುಂಠಿಯನ್ನು ಬಳಸುವುದು ಉತ್ತಮವಾಗಿದೆ. ಒಂದು ಚಮಚ ಒಣಶುಂಠಿ ಪುಡಿಯನ್ನು, ತಾಜಾ ಹಸುವಿನ ಹಸಿ ಹಾಲಿಗೆ ಬೆರೆಸಿ ಕುಡಿಯಬೇಕು. ಇದನ್ನು ಒಂದು ವಾರಗಳ ಕಾಲ ಕುಡಿದರೆ ಅರಿಶಿಣ ಕಾಮಾಲೆ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ.
ತಲೆ ನೋವಿಗೆ ಶುಂಠಿಯ ಉತ್ತಮ ಪರಿಹಾರಗಳು
- ವಿಪರೀತ ತಲೆ ನೋವು ಇದ್ದಲ್ಲಿ ಹಸಿ ಶುಂಠಿಯನ್ನು ತೇಯ್ದು ಹಣೆಗೆ ಹಚ್ಚಿಕೊಳ್ಳಬೇಕು, ಅನಂತರ ಮಲಗಬೇಕು. ಸ್ವಲ್ಪ ಹೊತ್ತಿಗೆ ಬೆವರಿ, ತಲೆ ನೋವು ಕಡಿಮೆಯಾಗುತ್ತದೆ. ಇದು ಅತ್ಯಂತ ಉಪಕಾರಿ ಮನೆಮದ್ದಾಗಿದೆ.
ಶುಂಠಿಯು ಮನೆಯಲ್ಲಿ ಇದ್ದರೆ ಅನೇಕ ಸಮಸ್ಯೆಗಳಿಗೆ ಉಯುಕ್ತವಾಗಿರುತ್ತದೆ. ಅಚಾನಕ್ ಆಗಿ ಎದೆ ನೋವು, ಹೊಟ್ಟೆ ನೋವು ಇನ್ನಿತರೆ ವಾಯುವಿನಿಂದ ಉಂಟಾಗುವ ನೋವುಗಳು ಹಾಗೂ ವಾಂತಿ ಸಮಸ್ಯೆಗಳಿಗೆ ಶುಂಠಿ ಅತಿ ಉಪಯುಕ್ತವಾಗಿದೆ. ಅಂತಹ ಸಮಯದಲ್ಲಿ ಶುಂಠಿಯನ್ನು ಚೆನ್ನಾಗಿ ಜಜ್ಜಿಕೊಂಡು ರಸ ಹಿಂಡಿಕೊಂಡು ಜೇನುತುಪ್ಪ ಸೇರಿಸಿ ಸೇವಿಸಬೇಕು. ಇದು ಅತ್ಯಂತ ಪರಿಣಾಮಕಾರಿಯಾದಂತಹ ಮದ್ದಾಗಿದೆ. ಹಾಗೆಯೇ ದಿನನಿತ್ಯ ಶುಂಠಿಯ ಸೇವನೆಯು ಸಣ್ಣ ವಯಸ್ಸಿಗೆ ಬರುವ ಮುಪ್ಪನ್ನು ಮುಂದೂಡಬಹುದು. ಹಾಗೆಯೇ ಪ್ರತಿದಿನ ಶುಂಠಿಯನ್ನು ಆಹಾರ ರೂಪದಲ್ಲಿ ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಶುಂಠಿಯು ಸಕಲ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಮಜ್ಜಿಗೆಗೆ ಶುಂಠಿಯ ರಸವನ್ನು ಸೇರಿಸಿ ಕುಡಿಯುವುದು ಈ ಬೇಸಿಗೆಗೆ ಉತ್ತಮವಾಗಿದೆ.
ಶುಂಠಿಯ ವೈಜ್ಞಾನಿಕ ವಿಚಾರಗಳು ಹಾಗೂ ಆರೋಗ್ಯಕರ ಮನೆಮದ್ದುಗಳ ವಿಚಾರಗಳನ್ನು ನಾವು ಇಂದು ಈ ಲೇಖನದ ಮೂಲಕ ಅರಿತಿದ್ದೇವೆ. ಇಷ್ಟೆಲ್ಲ ಉತ್ತಮ ಗುಣಗಳನ್ನು ಹೊಂದಿರುವ ಶುಂಠಿಯ ಉಪಯೋಗಗಳನ್ನು ಪಡೆದುಕೊಂಡು ಅರೋಗ್ಯರಾಗಿರಿ ಎಂಬುದು ಈ ಲೇಖನದ ಆಶಯ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.
Pingback: 9 ಬಗೆಯ ಟೇಸ್ಟಿ ಸಾರು ಹಾಗೂ ರಸಂಗಳ ರೆಸಿಪಿಗಳು - ಗೃಹಸ್ನೇಹಿ - ನಿಸರ್ಗದ ಮಡಿಲಲ್ಲಿ ಅರಳಿದ ಆರೋಗ್ಯದ ಗುಟ್ಟು