
ಹೆಸರುಕಾಳು ಅಥವಾ ಹೆಸರುಬೇಳೆ ಇದು ನಮ್ಮ ಅಡುಗೆ ಮನೆಯಲ್ಲಿ ಹೆಚ್ಚಾಗಿ ಬಳಸುವಂತಹ ದ್ವಿದಳ ಧನ್ಯವಾಗಿದೆ. ಸಿಹಿ ರುಚಿಯುಳ್ಳ, ದೇಹಕ್ಕೆ ತಂಪನ್ನು ನೀಡುವ ಉತ್ತಮ ಧಾನ್ಯ ಇದಾಗಿದೆ. ಇದರಲ್ಲಿ ಅನೇಕ ರೀತಿಯ ಬಣ್ಣಗಳು ಹಾಗೂ ವಿಧಗಳಿದ್ದು, ನಾವು ಹೆಚ್ಚಾಗಿ ಹಸಿರು ಬಣ್ಣದ ಹೆಸರುಕಾಳನ್ನು ಬಳಸುತ್ತೇವೆ. ಇದು ಅತ್ಯಂತ ಆರೋಗ್ಯಯುಕ್ತ ಗುಣಗಳನ್ನು ಸಹ ಹೊಂದಿದೆ. ಇಂದಿನ ಲೇಖನದಲ್ಲಿ ನಾವು ಹೆಸರುಕಾಳಿನ ಪರಿಚಯ, ವೈಜ್ಞಾನಿಕ ವಿಚಾರಗಳು, ಆರೋಗ್ಯಕರ ಮನೆಮದ್ದುಗಳು ಹಾಗೂ ಕೆಲವು ಅರೋಗ್ಯವರ್ಧಕ ಖಾದ್ಯಗಳ ಬಗೆಗಿನ ಮಾಹಿತಿಗಳನ್ನು ವಿಶ್ಲೇಷಿಸೋಣ.
ಹೆಸರುಕಾಳಿನ ಕೆಲವು ವೈಜ್ಞಾನಿಕ ವಿಚಾರಗಳು
ವೈಜ್ಞಾನಿಕ ಹೆಸರು – ವಿಗ್ನಾ ರೇಡಿಯೇಟಾ (Vigna Radiata)
ಆಂಗ್ಲ ಹೆಸರು – ಮುಂಗ್ ಬೀನ್ (Mung Bean)
ಹೆಸರುಕಾಳಿನಲ್ಲಿ ಪ್ರೊಟೀನ್, ಕಬ್ಬಿಣ, ಫೈಬರ್, ಮ್ಯಾಗ್ನಿಸಿಯಂ, ರಂಜಕ ಹಾಗೂ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಹಾಗೂ ವಿಟಮಿನ್ ಬಿ9 ನಂತಹ ಹಲವು ಅಂಶಗಳಿವೆ.
ಹೆಸರುಕಾಳಿನ ಈ ಎಲ್ಲಾ ಅಂಶಗಳಿಂದ ನಮ್ಮ ಶರೀರದ ಉತ್ತಮ ಆರೋಗ್ಯಕ್ಕೆ ಹಲವು ಉಪಯೋಗಗಳನ್ನು ನಾವು ಪಡೆಯಬಹುದು. ಈಗ ಅಂತಹ ಹಲವು ಆರೋಗ್ಯಕರ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ನಾವು ಅರಿಯೋಣ.
ಹೆಸರುಕಾಳಿನ ಕೆಲವು ಆರೋಗ್ಯಕರ ಮನೆಮದ್ದುಗಳು
ಚರ್ಮದ ಉತ್ತಮ ಆರೋಗ್ಯಕ್ಕಾಗಿ ಹೆಸರುಕಾಳಿನ ಸೇವನೆಯು ಉತ್ತಮವಾಗಿದೆ.
- ಹೆಸರುಕಾಳಿನ ಸಹಾಯದಿಂದ ನಾವು ಉತ್ತಮ ಫೇಸ್ ಪ್ಯಾಕ್ ಅನ್ನು ತಯಾರಿಸಬಹುದು. ಮುಖದ ಉತ್ತಮ ಕಾಂತಿಗೆ ಹಾಗೂ ಚರ್ಮದಲ್ಲಿನ ಕಲೆಗಳ ನಿವಾರಣೆಗೆ ಈ ಹೆಸರುಕಾಳಿನ ಫೇಸ್ ಪ್ಯಾಕ್ ಉತ್ತಮವಾಗಿದೆ. ಈ ಹೆಸರುಕಾಳಿನ ಫೇಸ್ ಪ್ಯಾಕ್ ತಯಾರಿಕಾ ವಿಧಾನವನ್ನು ಈಗ ಅರಿಯೋಣ. ಮೊದಲಿಗೆ ಹೆಸರುಕಾಳನ್ನು ನುಣ್ಣಗೆ ಪುಡಿಮಾಡಿಕೊಳ್ಳಬೇಕು. ಈಗ ಮೂರು ಚಮಚ ಹೆಸರುಕಾಳಿನ ಪುಡಿಗೆ ಸ್ವಲ್ಪ ಲಿಂಬೆ ಹಣ್ಣಿನ ರಸ ಹಾಗೂ ಕಿತ್ತಳೆ ಹಣ್ಣಿನ ರಸವನ್ನು ಹಾಕಿ ಕಲಸಿಕೊಂಡು ಮುಖಕ್ಕೆ ಲೇಪಿಸಿಕೊಳ್ಳಬೇಕು. ಅರ್ಧ ಗಂಟೆಯ ನಂತರ ಮುಖವನ್ನು ಸ್ವಚ್ಛಗೊಳಿಸಬೇಕು. ಇದು ಮುಖದ ಕಾಂತಿಯನ್ನು ಹೆಚ್ಚಿಸಿ, ಮುಖದಲ್ಲಿನ ಜಿಡ್ಡಿನ ಅಂಶವನ್ನು ನಿವಾರಿಸುತ್ತದೆ. ಇದು ಚರ್ಮದ ಆರೋಗ್ಯಕ್ಕೂ ಕೂಡ ಅತಿ ಉತ್ತಮವಾಗಿದೆ.
- ಸ್ನಾನ ಮಾಡುವಾಗ ಹಚ್ಚಿಕೊಳ್ಳಬೇಕಾದ ಹೆಸರುಕಾಳಿನ ಸ್ನಾನದ ಚೂರ್ಣದ ಬಗ್ಗೆ ಈಗ ಅರಿಯೋಣ. ಚರ್ಮದ ಯಾವುದೇ ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಈ ಹೆಸರುಕಾಳಿನ ಚೂರ್ಣದ ಲೇಪನೆಯು ಉತ್ತಮವಾಗಿದೆ. ಈ ಹೆಸರುಕಾಳಿನ ಚೂರ್ಣವನ್ನು ತಯಾರಿಸಲು ಹೆಸರುಕಾಳು ಅರ್ಧ ಕಿಲೋಗ್ರಾಮ್, ಸೀಗೆಕಾಯಿ ಪುಡಿ 50 ಗ್ರಾಂ, ಕಚೋರ 50 ಗ್ರಾಂ, ಶ್ರೀಗಂಧದ ಪುಡಿ 25 ಗ್ರಾಂ, ಕಸ್ತೂರಿ ಅರಿಶಿಣ ಪುಡಿ 50 ಗ್ರಾಂ ಇವೆಲ್ಲವನ್ನೂ ನುಣ್ಣಗೆ ಪುಡಿಮಾಡಿ ಬೆರೆಸಿಕೊಳ್ಳಬೇಕು. ಈ ಪುಡಿಯನ್ನು ಸ್ನಾನ ಮಾಡುವ ಮುನ್ನ ದೇಹಕ್ಕೆ ಹಚ್ಚಿಕೊಂಡು, ಸ್ನಾನ ಮಾಡಬೇಕು. ಇದು ಚರ್ಮದ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಮುಂದೆ ಬರಬಹುದಾದ ಹಲವು ಚರ್ಮ ಸಂಬಂಧಿ ಸಮಸ್ಯೆಗಳಿಂದ ನಾವು ಮುಕ್ತಿಯನ್ನು ಪಡೆಯಬಹುದು.
ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಹೆಸರುಕಾಳು ಸೇವನೆಯು ಉತ್ತಮವಾಗಿದೆ.
- ಹೆಸರುಕಾಳನ್ನು ನೆನೆಸಿ, ಮೊಳಕೆ ಬರಸಿ ತಿನ್ನುವುದು ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಗರ್ಭಿಣಿ ಸ್ತ್ರೀಯರು ಹೆಸರುಕಾಳನ್ನು ಆಹಾರವಾಗಿ ಸ್ವೀಕರಿಸುವುದರಿಂದ ದೇಹವು ತಂಪಾಗಿರುತ್ತದೆ, ಹಾಗೆಯೇ ಹೊಟ್ಟೆಯೊಳಗಿನ ಮಗುವು ಕೂಡ ಆರೋಗ್ಯಯುತವಾಗಿ ಬೆಳೆಯುತ್ತದೆ. ಹಾಗೆಯೇ ಬೆಳೆಯುವ ಮಕ್ಕಳಿಗೂ ಸಹ ಹೆಸರುಕಾಳನ್ನು ಆಹಾರವಾಗಿ ನೀಡಬೇಕು. ಹೆಸರುಕಾಳು ದೇಹಕ್ಕೆ ಬೇಕಾದ ಸಕಲ ಪೋಷಕಾಂಶಗಳನ್ನು ಒದಗಿಸಿ, ದೇಹಕ್ಕೆ ಬೇಕಾದ ಸಕಲ ರೋಗನಿರೋಧಕ ಶಕ್ತಿಯನ್ನು ಪೊರೈಸುತ್ತದೆ. ವೃದ್ಧರು ಹಾಗೂ ಆಶಕ್ತರು ಸಹ ಹೆಸರುಕಾಳಿನ ಸೇವನೆ ಮಾಡುವುದು ಉತ್ತಮವಾಗಿದೆ.
ಮೂಲವ್ಯಾಧಿ ಸಮಸ್ಯೆಗಳನ್ನು ಹೊಂದಿರುವವರು ಕೂಡ ಹೆಸರುಕಾಳನ್ನು ಸೇವಿಸಬೇಕು.
- ಮೂಲವ್ಯಾಧಿ ಸಮಸ್ಯೆವುಳ್ಳವರು ಪ್ರತಿನಿತ್ಯ ನೆನೆಸಿದ ಹೆಸರುಕಾಳಿನ ನೀರನ್ನು ಕುಡಿಯಬೇಕು. ಇದು ಮೂಲವ್ಯಾಧಿ ನಿವಾರಣೆಗೆ ಉತ್ತಮವಾಗಿದೆ. ಹಾಗೆಯೇ ಮೊಳಕೆ ಹೆಸರುಕಾಳು ಸಲಾಡ್ ಗಳನ್ನು ಸೇವಿಸುವುದು ಕೂಡ ಉತ್ತಮವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ, ಮೂಲವ್ಯಾಧಿ ಸಮಸ್ಯೆಗಳನ್ನು ನಿವಾರಿಸುತ್ತದೆ.
ವಾಂತಿ ಹಾಗೂ ಭೇದಿ ಸಮಸ್ಯೆಗಳ ನಿವಾರಣೆಗೆ ಹೆಸರುಕಾಳು ಉಪಯುಕ್ತವಾಗಿದೆ.
- ವಾಂತಿ ಭೇದಿಯ ನಿವಾರಣೆಗೆ ಹೆಸರುಕಾಳಿನ ಸಹಾಯವನ್ನು ನಾವು ಪಡೆದುಕೊಳ್ಳಬಹುದು. ಅರ್ಧ ಕಪ್ ಹೆಸರುಕಾಳನ್ನು 2 ಕಪ್ ನೀರಿನಲ್ಲಿ ಕುದಿಸಬೇಕು. ಹೆಸರುಕಾಳು ಪೂರ್ಣ ಬೆಂದ ನಂತರ ಕಾಳನ್ನು ಕಿವುಚಿ, ಶೋಧಿಸಿಕೊಳ್ಳಬೇಕು. ಈ ಕಿವುಚಿದ ನೀರಿಗೆ ಭತ್ತದ ಅರಳಿನ ಪುಡಿ ಹಾಗೂ ಜೇನುತುಪ್ಪವನ್ನು ಸೇರಿಸಿ ಕುಡಿಯಬೇಕು. ಇದು ವಾಂತಿ, ಭೇದಿಯನ್ನು ತ್ವರಿತವಾಗಿ ನಿವಾರಿಸುತ್ತದೆ.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಕೂಡ ಹೆಸರುಕಾಳು ಉತ್ತಮ ಪರಿಹಾರಗಳನ್ನು ನೀಡುತ್ತದೆ.
- ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಾದ ಹೊಟ್ಟೆಉರಿ, ಅಜೀರ್ಣ, ಇನ್ನೂ ಅನೇಕ ಸಮಸ್ಯೆಗಳಿಗೆ ಹೆಸರುಕಾಳು ಉತ್ತಮ ಪರಿಹಾರವನ್ನು ನೀಡುತ್ತದೆ. ಹೆಸರುಕಾಳು ಹಾಗೂ ಅಕ್ಕಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಪ್ರತ್ಯೇಕವಾಗಿ ಹುರಿದುಕೊಳ್ಳಬೇಕು. ನಂತರ ಹುರಿದ ಅಕ್ಕಿ ಹಾಗೂ ಹೆಸರುಕಾಳನ್ನು ನೀರಿನಲ್ಲಿ ಹಾಕಿ ಬೇಯಿಸಬೇಕು. ಚೆನ್ನಾಗಿ ಬೆಂದ ನಂತರ ಓಲೆ ಆರಿಸಿಕೊಂಡು, ಕಿವುಚಿಕೊಳ್ಳಬೇಕು. ಅನಂತರ ಶೋಧಿಸಿಕೊಂಡು ಜೇನುತುಪ್ಪ ಹಾಗೂ ಸಕ್ಕರೆಯನ್ನು ಬೆರೆಸಿ ಕುಡಿಯಬೇಕು. ಇದು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರಗಳನ್ನು ನೀಡುತ್ತದೆ.
ಜ್ವರದ ಆಯಾಸವನ್ನು ನಿವಾರಿಸಲು ಕೂಡ ಹೆಸರುಕಾಳು ಉತ್ತಮ ಆಹಾರವಾಗಿದೆ.
- ಜ್ವರ ಬಂದ ಸಂದರ್ಭದಲ್ಲಿ ತಿಂದ ಅನ್ನವು ರುಚಿಸುವುದಿಲ್ಲ, ಕೆಲವೊಮ್ಮೆ ತಿನ್ನಲು ಕೂಡ ಅಸಾಧ್ಯವಾಗುತ್ತದೆ. ಹಾಗೆಯೇ ದೇಹಕ್ಕೆ ಆಶಕ್ತಿ ಕೂಡ ಆಗಿರುತ್ತದೆ. ಅಂತಹ ಸಂದರ್ಭದಲ್ಲಿ ಹೆಸರುಕಾಳು ಹಾಗೂ ಅಕ್ಕಿಯನ್ನು ಸಮಪ್ರಮಾಣದಲ್ಲಿ ಬೆರೆಸಿ, ನೀರಿನಲ್ಲಿ ಕುದಿಸಿ, ಬೇಯಿಸಿ, ಗಂಜಿಯನ್ನು ಸಿದ್ದಪಡಿಸಬೇಕು. ಈ ಗಂಜಿಯನ್ನು ಸೇವಿಸುವುದರಿಂದ ದೇಹಕ್ಕೆ ಶಕ್ತಿ ಒದಗುತ್ತದೆ. ಇದು ಜ್ವರದ ವಿರುದ್ಧ ಹೋರಾಡುಲು ಬೇಕಾದ ರೋಗನಿರೋಧಕ ಶಕ್ತಿಗಳನ್ನು ಕೂಡ ಪೂರೈಸುತ್ತದೆ.
ಆರೋಗ್ಯಯುಕ್ತ ಹೆಸರುಕಾಳಿನ ರೆಸಿಪಿಗಳು
ಹೆಸರುಬೇಳೆ ಖೀರು
ಬೇಕಾಗುವ ಪದಾರ್ಥಗಳು
- ಹೆಸರುಬೇಳೆ 1 ಕಪ್
- ಉದ್ದಿನಬೇಳೆ ½ ಕಪ್
- ಹಾಲು 2 ಕಪ್
- ಸಕ್ಕರೆ ½ ಕಪ್
- ಏಲಕ್ಕಿ ಪುಡಿ ಸ್ವಲ್ಪ
ಮಾಡುವ ವಿಧಾನ
ಹೆಸರುಬೇಳೆ ಹಾಗೂ ಉದ್ದಿನಬೇಳೆಯನ್ನು ರಾತ್ರಿಯೆ ನೆನೆಸಬೇಕು. ಮರುದಿನ ಬೆಳಿಗ್ಗೆ ನೆನೆಸಿದ ಹೆಸರುಬೇಳೆ ಹಾಗೂ ಉದ್ದಿನಬೇಳೆ ಎರಡನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ಒಂದು ಬಾಣಲೆಗೆ ತುಪ್ಪ ಹಾಕಿ, ರುಬ್ಬಿದ ಮಿಶ್ರಣವನ್ನು ಸೇರಿಸಿ, ಕೆಂಪಾಗುವ ತನಕ ಹುರಿದುಕೊಳ್ಳಬೇಕು. ನಂತರ ಹಾಲು ಹಾಗೂ ಸಕ್ಕರೆಯನ್ನು ಸೇರಿಸಿಕೊಂಡು ಕುದಿಸಬೇಕು. ಕೊನೆಯಲ್ಲಿ ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ, ಕಲಸಬೇಕು. ಅಲ್ಲಿಗೆ ಹೆಸರುಬೇಳೆ ಖೀರು ಸವಿಯಲು ಸಿದ್ದವಾಗುತ್ತದೆ.
ಈ ಹೆಸರುಬೇಳೆ ಖೀರಿನ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ. ದೇಹವು ತಂಪಾಗಿರುತ್ತದೆ, ಹಾಗೆಯೇ ದೇಹಕ್ಕೆ ಬಲವನ್ನು ಸಹ ನೀಡುತ್ತದೆ.
ಹೆಸರುಕಾಳಿನ ಕೋಸಂಬರಿ
ಬೇಕಾಗುವ ಪದಾರ್ಥಗಳು
- ಮೊಳಕೆ ಬಂದ ಹೆಸರುಕಾಳು 1 ಕಪ್
- ಕ್ಯಾರೆಟ್ 1
- ಕಾಳುಮೆಣಸಿನ ಪುಡಿ ಸ್ವಲ್ಪ
- ಉಪ್ಪು
ಮಾಡುವ ವಿಧಾನ
ಮೊದಲಿಗೆ ಒಂದು ಕ್ಯಾರೆಟ್ ಅನ್ನು ತುರಿದುಕೊಳ್ಳಬೇಕು. ನಂತರ ಒಂದು ಪಾತ್ರೆಗೆ ಮೊಳಕೆ ಬಂದ ಹೆಸರುಕಾಳು, ಕ್ಯಾರೆಟ್ ತುರಿ, ಕಾಳುಮೆಣಸಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕಲಸಬೇಕು. ಅಲ್ಲಿಗೆ ಹೆಸರುಕಾಳಿನ ಕೋಸಂಬರಿ ಸವಿಯಲು ಸಿದ್ದವಾಗುತ್ತದೆ. ಈ ರೀತಿ ಮೊಳಕೆ ಬಂದ ಹೆಸರುಕಾಳಿನ ಸೇವನೆಯಿಂದ ದೇಹಕ್ಕೆ ಅಗತ್ಯವಾಗಿರುವ ವಿಟಮಿನ್ ಸಿ ಹೇರಳವಾಗಿ ಸಿಗುತ್ತದೆ. ಉಷ್ಣ ವಾತಾವರಣದಲ್ಲಿ ದೇಹವನ್ನು ತಂಪಾಗಿರಿಸಲು ಇದು ಉತ್ತಮ ಆಹಾರವಾಗಿದೆ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.