
ನಮ್ಮ ಭಾರತದ ರಾಷ್ಟ್ರೀಯ ಹೂವು ಕಮಲ. ನೀರು ಹಾಗೂ ಕೆಸರಿನ ನಡುವೆ ಉತ್ತಮವಾಗಿ ಬೆಳೆಯುವ ಅತ್ಯಂತ ಸುಂದರ ಹೂವು ಇದಾಗಿದೆ. ಹೆಚ್ಚಾಗಿ ಬಿಳಿ ಹಾಗೂ ನಸು ಕೆಂಪು ಬಣ್ಣದಲ್ಲಿ ಹುಟ್ಟುವ ಈ ಕಮಲ, ಸೂರ್ಯೋದಯದ ಜೊತೆಗೆ ಅರಳಿ, ಸೂರ್ಯಾಸ್ತದ ವೇಳೆಗೆ ಮುದುಡುತ್ತದೆ. ಕಮಲದ ಧಾರ್ಮಿಕ ಪರಿಚಯ, ವೈಜ್ಞಾನಿಕ ಹಿನ್ನಲೆ ಹಾಗೂ ಆರೋಗ್ಯಕರ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ನಾವು ಇಂದಿನ ಲೇಖನದಲ್ಲಿ ವಿಶ್ಲೇಷಿಸೋಣ.
ಕೆಲವು ಧಾರ್ಮಿಕ ವಿಚಾರಗಳು
ಸರ್ವ ದೇವರ ಅತ್ಯಂತ ಪ್ರೀತಿಯ ಹೂವು ಇದಾಗಿದ್ದು, ಮಹಾಲಕ್ಷ್ಮಿ ದೇವಿಯ ಪೂಜೆಯಲ್ಲಿ ಇದು ಅತ್ಯಂತ ಅವಶ್ಯಕವಾಗಿದೆ. ಇನ್ನೂ ಕಮಲವನ್ನು ಪದ್ಮ, ಪಂಕಜ, ಸರೋಜ, ತಾವರೆ, ಶತಪತ್ರ, ಇನ್ನೂ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ಹಾಗೆಯೇ ತ್ರಿಮೂರ್ತಿಗಳಲ್ಲಿ ಒಬ್ಬರಾದ ಬ್ರಹ್ಮ ದೇವನು, ವಿಷ್ಣು ದೇವರ ನಾಭಿ ಕಮಲದಲ್ಲಿ ಹುಟ್ಟಿದರು ಎಂಬ ಉಲ್ಲೇಖವಿದೆ. ಬೌದ್ಧ ಧರ್ಮದಲ್ಲೂ ಕೂಡ ಕಮಲವು ಜಾಗೃತಿಯ ಸಂಕೇತವಾಗಿದೆ. ಹೀಗೆ ಕಮಲವು ಅನೇಕ ಧಾರ್ಮಿಕ ಹಿನ್ನಲೆಗಳನ್ನು ಒಳಗೊಂಡಿದೆ.
ಕೆಲವು ವೈಜ್ಞಾನಿಕ ವಿಚಾರಗಳು
ವೈಜ್ಞಾನಿಕ ಹೆಸರು – ನೆಲುಂಬೊ ನ್ಯುಸಿಫೆರಾ (Nelumbo Nucifera)
ಆಂಗ್ಲ ಹೆಸರು – ಲೋಟಸ್ ( lotus )
ಕಮಲವು ಕೆಸರು ಹಾಗೂ ನೀರಿನಲ್ಲಿ ಬೆಳೆಯುವ ಸಸಿಯಾಗಿದ್ದು, ಎಲೆಗಳು ವಿಶಿಷ್ಟ ರಚನೆಯನ್ನು ಹೊಂದಿದೆ. ಈ ಎಲೆಗಳು ನೀರು ಹಾಗೂ ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು, ಜಾಸ್ತಿ ನೀರಿನಲ್ಲಿದ್ದರೂ ಕೊಳೆಯುವ ಪರಿಸ್ಥಿತಿ ಇರುವುದಿಲ್ಲ. ಇನ್ನೂ ಕಮಲದ ಹೂವು, ಎಲೆ, ಬೀಜ, ಬೇರು ಹಾಗೂ ಗಡ್ಡೆ ಎಲ್ಲವೂ ಕೂಡ ಆರೋಗ್ಯಕ್ಕೆ ಉತ್ತಮವಾಗಿದ್ದು, ಪ್ರೊಟೀನ್, ಕ್ಯಾಲ್ಸಿಯಂ, ಶರ್ಕರ, ಥಯಾಮಿನ್, ರೈಬೋಪ್ಲೆವಿನ್, ನಿಯಾಸಿನ್, ಕೊಬ್ಬಿನ ಅಂಶಗಳು ಇನ್ನೂ ಅನೇಕ ಅವಶ್ಯಕ ಖನಿಜಗಳು ಹೇರಳವಾಗಿದೆ.
ಕಮಲದ ಆರೋಗ್ಯಕರ ಮನೆಮದ್ದುಗಳು
ಹೃದಯದ ಉತ್ತಮ ಆರೋಗ್ಯಕ್ಕೆ ಕಮಲದ ಹೂವಿನ ಪರಿಹಾರಗಳು.
- ಹೃದಯದ ಉತ್ತಮ ಆರೋಗ್ಯಕ್ಕೆ ಹಾಗೂ ಹೃದಯ ದೌರ್ಬಲ್ಯ ಸಮಸ್ಯೆಗಳು ಇರುವವರು ಕಮಲದ ಹೂವಿನ ಉಪಯೋಗಗಳನ್ನು ಪಡೆದುಕೊಳ್ಳಬೇಕು. ಕಮಲ ಹೂವಿನ ಎಸಳನ್ನು ಚೆನ್ನಾಗಿ ಒಣಗಿಸಿಕೊಂಡು, ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ, ಸಣ್ಣ ಉರಿಯಲ್ಲಿ ಕುದಿಸಬೇಕು. ಅರ್ಧ ನೀರು ಇಂಗಿದ ಮೇಲೆ ಒಲೆಯನ್ನು ಆರಿಸಿ, ಸೋಸಿಕೊಂಡು ಕುಡಿಯಬೇಕು. ಈ ಕಮಲದ ಹೂವಿನ ದಳಗಳ ಕಷಾಯವನ್ನು ಸತತವಾಗಿ ಎರಡು ತಿಂಗಳುಗಳ ಕಾಲ ದಿನಕ್ಕೊಮ್ಮೆ ಕುಡಿಯಬೇಕು. ಇದು ಹೃದಯದ ಆರೋಗ್ಯವನ್ನು ಉತ್ತಮವಾಗಿರಿಸಿ, ಹೃದಯ ದೌರ್ಬಲ್ಯ ಸಮಸ್ಯೆಗಳನ್ನು ಕಡಿಮೆಯಾಗಿಸುತ್ತದೆ.
ಯಕೃತ್ತಿನ ಆರೋಗ್ಯಕ್ಕೆ ಕಮಲದ ಉತ್ತಮ ಉಪಯೋಗಗಳು.
- ಲಿವರ್ ಅಥವಾ ಯಕೃತ್ತಿನ ಅರೋಗ್ಯವನ್ನು ಕಾಪಾಡುವಲ್ಲಿ ಕಮಲದ ಹೂವು ಉತ್ತಮ ಕೊಡುಗೆಯನ್ನು ನೀಡುತ್ತದೆ. ಮಕ್ಕಳಿಗೆ ಬಹುಬೇಗ ಈ ಯಕೃತ್ತಿನ ಸಮಸ್ಯೆಗಳು ಕಂಡುಬರುತ್ತದೆ. ಹಾಗಾಗಿ ನಾವು ಕಮಲದ ಹೂವನ್ನು ಬಳಸಿ ಮನೆಯಲ್ಲೇ ಈ ಸಮಸ್ಯೆಗಳಿಗೆ ಉತ್ತಮ ಮದ್ದನ್ನು ತಯಾರಿಸಬಹುದು. ಮೊದಲಿಗೆ ಕಮಲದ ಹೂವಿನ ದಳಗಳನ್ನು ಒಣಗಿಸಿ, ಪುಡಿ ಮಾಡಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಕಮಲದ ಹೂವಿನ ಪುಡಿ, ಸ್ವಲ್ಪ ಗಂಧದ ಪುಡಿ, ಭತ್ತದ ಅರಳಿನ ಪುಡಿ, ಹಾಗೂ ದ್ರಾಕ್ಷಿ ಹಣ್ಣನ್ನು ನೀರಿನಲ್ಲಿ ರಾತ್ರಿಯೆ ನೆನೆಸಿ ಇಡಬೇಕು. ಬೆಳಿಗ್ಗೆ ಈ ಮಿಶ್ರಣವನ್ನು ಸೋಸಿಕೊಂಡು ನೀರನ್ನು ಮಾತ್ರ ಕುಡಿಯಬೇಕು. ಹೀಗೆ ಪ್ರತಿದಿನ ಕುಡಿಯುತ್ತಾ ಬಂದರೆ ಲಿವರ್ ಸಮಸ್ಯೆಗಳು ಎಂದು ಬರುವುದಿಲ್ಲ ಹಾಗೂ ಇದು ಹಸಿವನ್ನು ಹೆಚ್ಚಿಸುತ್ತದೆ. ಹಾಗೆಯೇ ಆಹಾರದ ಸುಲಭ ಜೀರ್ಣಕ್ರಿಯೆಯಲ್ಲಿ ಇದು ಉತ್ತಮವಾಗಿದೆ.
(->ಶ್ರೀಗಂಧದ ಬಗೆಗಿನ ಹೆಚ್ಚಿನ ಮಾಹಿತಿಗಳನ್ನು ಅರಿಯಲು ಒಮ್ಮೆ ನಮ್ಮ ಹಿಂದಿನ ಲೇಖನವನ್ನು ಓದಿರಿ.)
ಪಿತ್ತ ಹಾಗೂ ಉಷ್ಣದ ಕಾರಣದಿಂದ ಬರುವ ಸಮಸ್ಯೆಗಳಿಗೆ ಕಮಲದ ಹೂವು ಉತ್ತಮ ಪರಿಹಾರಗಳನ್ನು ನೀಡುತ್ತದೆ.
- ಪಿತ್ತದೋಷ ಹಾಗೂ ಉಷ್ಣದ ಕಾರಣದಿಂದ ಬರುವ ಸಮಸ್ಯೆಗಳನ್ನು ನಾವು ಕಮಲದ ದಳಗಳ ಸಹಾಯದಿಂದ ತ್ವರಿತವಾಗಿ ಕಡಿಮೆಗೊಳಿಸಬಹುದು. ಪಿತ್ತ ಹಾಗೂ ಉಷ್ಣದಿಂದ ಉಂಟಾಗುವ ತಲೆ ತಿರುಗುವಿಕೆ, ಮೈಯಲ್ಲಿ ಉರಿತ ಹಾಗೂ ಬಾಯಾರಿಕೆ ಸಮಸ್ಯೆಗಳನ್ನು ದೂರಗೊಳಿಸಲು ಕಮಲದ ದಳಗಳನ್ನು ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುತ್ತಾ ಬಂದರೆ ಪಿತ್ತದ ಸಮಸ್ಯೆಗಳು ಹಾಗೂ ಉಷ್ಣದ ಕಾರಣದಿಂದ ಬರುವ ಸಮಸ್ಯೆಗಳು ಬೇಗನೆ ಕಡಿಮೆಯಾಗುತ್ತದೆ.
- ಪಿತ್ತದ ಕಾರಣದಿಂದ ಬರುವ ತಲೆನೋವಿಗೆ ಕಮಲದ ಹೂವಿನ ರೇಕುಗಳನ್ನು ಅರೆದು ಹಣೆಗೆ ಹಚ್ಚಿಕೊಂಡು ಪಟ್ಟಿ ಕಟ್ಟುವುದರಿಂದ ತಲೆನೋವು ಬೇಗನೆ ಕಡಿಮೆಯಾಗುತ್ತದೆ.
ಹೆಣ್ಣು ಮಕ್ಕಳಲ್ಲಿ ಋತುಸ್ರಾವವು ಅಧಿಕವಾಗಿದ್ದರೆ, ಅದಕ್ಕೆ ಕಮಲದ ಹೂವಿನ ಪ್ರಯೋಜನಗಳು.
- ಮುಟ್ಟಿನ ಸಮಯದಲ್ಲಿ ಹೆಂಗಸರಲ್ಲಿ ಅತಿಯಾಗಿ ರಕ್ತಸ್ರಾವವಾಗುತ್ತಿದ್ದರೆ, ಒಂದು ಮಿಕ್ಸಿ ಜಾರಿಗೆ 5 ಕಮಲದ ದಳಗಳು, ದ್ರಾಕ್ಷಿ ಹಣ್ಣುಗಳು 5, ಸ್ವಲ್ಪ ಸಕ್ಕರೆ, ಒಂದು ಚಮಚ ಜೇನುತುಪ್ಪ ಹಾಗೂ ಅಕ್ಕಿ ತೊಳೆದ ನೀರನ್ನು ಹಾಕಿ ರುಬ್ಬಿಕೊಳ್ಳಬೇಕು. ನಂತರ ಸೋಸಿಕೊಂಡು ಕುಡಿಯಬೇಕು. ಇದು ಹೆಂಗಸರ ಆರೋಗ್ಯಕ್ಕೆ ಅತಿ ಉತ್ತಮವಾಗಿದ್ದು, ಮುಟ್ಟಿನ ಸಮಯದ ಅಧಿಕ ರಕ್ತಸ್ರಾವವನ್ನು ಕೂಡ ಕಡಿಮೆಗೊಳಿಸುತ್ತದೆ.
ನರಗಳ ಉತ್ತಮ ಆರೋಗ್ಯಕ್ಕೆ ಕಮಲದ ಉಪಯೋಗಗಳು.
- ನರಗಳ ಉತ್ತಮ ಆರೋಗ್ಯ ಹಾಗೂ ನರ ದೌರ್ಬಲ್ಯವನ್ನು ಕಡಿಮೆ ಮಾಡಲು ಬಿಳಿ ತಾವರೆಯು ಸಹಾಯಕವಾಗಿದೆ. ಬಿಳಿ ತಾವರೆಯ ಸ್ವಲ್ಪ ದಳಗಳನ್ನು, ಸ್ವಲ್ಪ ಸಕ್ಕರೆ ಹಾಗೂ ಜೇನುತುಪ್ಪವನ್ನು ಬೆರೆಸಿ, ಸೇವಿಸುವುದರಿಂದ ನರಗಳ ಆರೋಗ್ಯ ಸಬಲವಾಗುತ್ತದೆ. ಹಾಗೂ ನರ ದೌರ್ಬಲ್ಯದ ಸಮಸ್ಯೆಗಳು ದೂರವಾಗುತ್ತದೆ.
ಸಂಧಿವಾತದ ಸಮಸ್ಯೆಗಳಿಗೆ ಕಮಲದ ಉತ್ತಮ ಪರಿಹಾರಗಳು
- ಸಂಧಿವಾತ ಹಾಗೂ ಕೀಲು ನೋವಿನ ಸಮಸ್ಯೆಗಳಿಗೆ ಕಮಲದ ಹೂವಿನಿಂದ ಉತ್ತಮ ಪರಿಹಾರಗಳನ್ನು ನಾವು ಪಡೆದುಕೊಳ್ಳಬಹುದು. ಹಾಗೆಯೇ ಈ ನೋವಿನಿಂದ ಬರುವ ಜ್ವರಕ್ಕೂ ಕೂಡ ಕಮಲದ ಹೂವು ಪರಿಹಾರಗಳನ್ನು ನೀಡುತ್ತದೆ. ಈ ಸಮಯದಲ್ಲಿ ಕಮಲದ ಚಹಾ ಮಾಡಿ ಕುಡಿಯುವುದು ಉತ್ತಮವಾಗಿದೆ. ಕಮಲದ ಹೂವಿನ ದಳಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಿ, ಅರ್ಧದಷ್ಟು ಇಂಗಿದ ಮೇಲೆ ಸೋಸಿಕೊಂಡು, ಸ್ವಲ್ಪ ಜೇನುತುಪ್ಪ ಹಾಗೂ ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿಯಬೇಕು. ಇದು ಆರೋಗ್ಯಕ್ಕೆ ಅತಿ ಉತ್ತಮವಾಗಿದೆ, ಹಾಗೆಯೇ ಸಂಧಿವಾತ ಹಾಗೂ ಕೀಲು ನೋವುಗಳಿಗೆ ಉತ್ತಮ ಪರಿಹಾರಗಳನ್ನು ನೀಡುತ್ತದೆ.
ಮೂಲವ್ಯಾಧಿಗೆ ಕೂಡ ಕಮಲದ ಹೂವು ಉತ್ತಮ ಪರಿಹಾರಗಳನ್ನು ನೀಡುತ್ತದೆ.
- ಮೂಲವ್ಯಾಧಿ ಸಮಸ್ಯೆಗಳು ಎದುರಾದಾಗ ಕಮಲದ ಹೂವಿನ ಕೇಸರಗಳು ಪರಿಹಾರವನ್ನು ನೀಡುತ್ತದೆ. ಕಮಲದ ಹೂವಿನ ಮಧ್ಯಭಾಗದಲ್ಲಿ ಇರುವ ಕೇಸರಗಳನ್ನು ಸಂಗ್ರಹಿಸಿ, ನುಣ್ಣಗೆ ಅರೆದುಕೊಳ್ಳಬೇಕು. ಇದನ್ನು ಹಸುವಿನ ಬೆಣ್ಣೆಯಲ್ಲಿ ಬೆರೆಸಿ ಸೇವಿಸಬೇಕು. ಹೀಗೆ ನಿತ್ಯ ಸೇವಿಸುವುದರಿಂದ ಮೂಲವ್ಯಾಧಿ ಸಮಸ್ಯೆಗಳು ಗುಣವಾಗುತ್ತದೆ.
ಕೆಮ್ಮಿನ ನಿವಾರಣೆಗೆ ಉಪಯುಕ್ತವಾಗಿರುವ ಕಮಲದ ಮದ್ದುಗಳು
- ಕೆಮ್ಮನ್ನು ಕಡಿಮೆಗೊಳಿಸಲು ತಾವರೆ ಬೇರನ್ನು ಉಪಯೋಗಿಸಬಹುದು. ತಾವರೆ ಬೇರನ್ನು ಒಣಗಿಸಿ, ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು. ಹೀಗೆ ಪ್ರತಿದಿನ ಸೇವಿಸುತ್ತಾ ಬಂದರೆ ಕೆಮ್ಮು ಕಡಿಮೆಯಾಗುತ್ತದೆ.
ಕಣ್ಣಿನ ಉತ್ತಮ ಆರೋಗ್ಯಕ್ಕೆ ಕಮಲ ಹೂವಿನ ಕೊಡುಗೆಗಳು.
- ಕಣ್ಣಿನ ಉತ್ತಮ ಆರೋಗ್ಯಕ್ಕೆ ಹಾಗೂ ಕಣ್ಣು ಕೆಂಪಾದಾಗ ಕೂಡ ಕಮಲದ ಸಹಾಯವನ್ನು ನಾವು ಪಡೆದುಕೊಳ್ಳಬಹುದು. ಕಮಲದ ದಳಗಳನ್ನು ನೀರಿಗೆ ಹಾಕಿ, ಆ ನೀರಿನಿಂದ ಕಣ್ಣನ್ನು ತೊಳೆಯಬೇಕು. ಇದರಿಂದ ಕಣ್ಣು ಕೆಂಪಾಗಿದ್ದು, ಕಡಿಮೆಯಾಗುತ್ತದೆ. ಹಾಗೆಯೇ ಇದು ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ.
ಮನಸ್ಸು ಸಮಾಧಾನ ಹೊಂದಲು ಕೂಡ ಕಮಲದ ಹೂವು ಸಹಾಯಕವಾಗಿದೆ!
- ಅನೇಕ ಚಿಂತೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಖಿನ್ನತೆಗೆ ಒಳಗಾಗಿದ್ದಾರೆ, ಪ್ರತಿದಿನ ಕಮಲದ ಹೂವಿನ ತೈಲವನ್ನು ಬಳಸಿ ಸ್ನಾನ ಮಾಡಬೇಕು. ಹೀಗೆ ಸ್ನಾನ ಮಾಡುವುದರಿಂದ ಮನಸ್ಸಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ನಮ್ಮ ಬಳಿ ಸುಳಿಯುವುದಿಲ್ಲ.
ಚರ್ಮದ ಉತ್ತಮ ಆರೋಗ್ಯಕ್ಕೆ ಕಮಲ ಹೂವಿನ ಪರಿಹಾರಗಳು.
- ಚರ್ಮದ ಉತ್ತಮ ಆರೋಗ್ಯ ಹಾಗೂ ಅನೇಕ ಚರ್ಮವ್ಯಾಧಿಗಳಾದ ಕಜ್ಜಿ, ತುರಿಕೆ ಹಾಗೂ ಹುಳಕಡ್ಡಿ ಸಮಸ್ಯೆಗಳಿಗೆ ಕಮಲದ ಹೂವು ಉತ್ತಮ ಪರಿಹಾರಗಳನ್ನು ನೀಡುತ್ತದೆ. ಕಮಲದ ಹೂವಿನ ದಳಗಳು, ಚಂದನದ ತುಂಡು, ಸೊಗದೆ ಬೇರು ಹಾಗೂ ಲಾವಂಚ ಇವೆಲ್ಲವನ್ನೂ ನೀರಿನಲ್ಲಿ ಹಾಕಿ, ಕುದಿಸಬೇಕು. ಅರ್ಧದಷ್ಟು ನೀರು ಇಂಗಿದ ಮೇಲೆ ಓಲೆ ಆರಿಸಿ, ಸೋಸಿಕೊಂಡು ಕುಡಿಯಬೇಕು. ಹಾಗೆಯೇ ಈ ಕಷಾಯವನ್ನು ಸ್ನಾನ ಮಾಡುವ ನೀರಿಗೆ ಬೆರೆಸಿ ಸ್ನಾನ ಮಾಡಬೇಕು. ಇದರಿಂದ ಚರ್ಮದ ಸಕಲ ವ್ಯಾಧಿಗಳು ನಿವಾರಣೆಯಾಗುತ್ತದೆ. ಹಾಗೆಯೇ ಚರ್ಮವು ಅರೋಗ್ಯಯುತವಾಗಿರುತ್ತದೆ.
ಕಮಲದ ಸೌಂದರ್ಯವರ್ಧಕ ಗುಣಗಳು
- ಮುಖದ ಉತ್ತಮ ಕಾಂತಿಗೆ ಕಮಲದ ಹೂವು ಉತ್ತಮವಾಗಿದೆ. ನೀರನ್ನು ಕುದಿಸಿ, ಆ ನೀರಿಗೆ ಎರಡು ಹನಿ ಕಮಲದ ತೈಲವನ್ನು ಸೇರಿಸಿ ಆವಿಯನ್ನು ತೆಗೆದುಕೊಳ್ಳಬೇಕು. ಇಲ್ಲವೇ ಕಮಲದ ದಳಗಳನ್ನು ಬಿಸಿ ನೀರಿಗೆ ಹಾಕಿ ಆವಿಯನ್ನು ತೆಗೆದುಕೊಳ್ಳಬೇಕು. ಇದು ಕಣ್ಣಿನ ಅರೋಗ್ಯಕ್ಕೂ ಉತ್ತಮವಾಗಿದ್ದು, ಮುಖದ ಚರ್ಮಕ್ಕೆ ಕೋಮಲತೆಯನ್ನು ಒದಗಿಸಿ, ಉತ್ತಮ ಕಾಂತಿಯನ್ನು ನೀಡುತ್ತದೆ.
ಇಷ್ಟೆಲ್ಲ ಅರೋಗ್ಯಯುತ ಪರಿಹಾರಗಳನ್ನು ನೀಡುವ ಈ ಕಮಲದ ಹೂವು ನೋಡಲು ಬಲು ಸುಂದರ. ಕೆಸರಲ್ಲಿ ಹುಟ್ಟಿ, ಬೆಳೆಯುವ ಕಮಲದ ಹೂವು, ಎಲ್ಲರಿಗೂ ಸಹಾಯಕವಾಗಿ ತನ್ನ ಹುಟ್ಟನ್ನು ಸಾರ್ಥಗೊಳಿಸುತ್ತದೆ. ಕಮಲದ ಹೂವು ಮನೆಮದ್ದುಗಳ ತಯಾರಿಕೆಯಲ್ಲಿ ಮಾತ್ರವಲ್ಲದೆ ಅಲಂಕಾರಿಕ ವಸ್ತುವಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಮದುವೆಯ ವಾರಮಾಲೆಯಲ್ಲಿ ಕೂಡ ನಾವು ಕಮಲವನ್ನು ಕಾಣಬಹುದು, ಹಾಗೆಯೇ ದೇವರ ಪೂಜೆಯಲ್ಲಿ ಕೂಡ ಕಮಲದ ಹೂವು ಬಳಸಲಾಗುತ್ತದೆ. ಕಮಲದ ಹೂವಿನ ತೈಲದ ತಯಾರಿಕೆಯಲ್ಲಿ ಹೆಚ್ಚಾಗಿ ಕಮಲದ ಹೂವನ್ನು ಬಳಸುತ್ತಾರೆ. ಕಮಲದ ಕಾಂಡದ ನಾರನ್ನು ಬಳಸಿ ಬಟ್ಟೆಯನ್ನು ಕೂಡ ತಯಾರಿಸುತ್ತಾರೆ. ಕಮಲವನ್ನು ಆಹಾರವಾಗಿಯೂ ಬಳಸುತ್ತಾರೆ. ಕಮಲದ ಬೀಜವನ್ನು ಮಖಾನಾಗಳಾಗಿ ತಯಾರಿಸುತ್ತಾರೆ, ಇದು ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಕಮಲದ ಕಾಂಡವನ್ನು ಕೂಡ ತರಕಾರಿಯಾಗಿ ಬಳಸಬಹುದು, ಇನ್ನೂ ಕಮಲದ ದಳಗಳನ್ನು ಸಲಾಡ್ ಹಾಗೂ ಚಹಾ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ಆಹಾರಗಳು ದೇಹದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಆರೋಗ್ಯಕ್ಕೆ ಅತಿ ಉತ್ತಮವಾಗಿರುವ ಈ ಕಮಲದ ಹೂವಿನ ಬಗೆಗಿನ ಸಂಪೂರ್ಣ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ಅರಿತಿದ್ದೇವೆ. ಉತ್ತಮ ಅರೋಗ್ಯವನ್ನು ಕಾಪಾಡುವಲ್ಲಿ ಉಪಯುಕ್ತವಾಗಿರುವ ಮನೆಮದ್ದುಗಳ ಬಳಕೆಯನ್ನು ಮಾಡಿ, ಅರೋಗ್ಯವಂತರಾಗಿರಿ ಎಂಬುದು ಈ ಲೇಖನದ ಉದ್ದೇಶವಾಗಿದೆ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.
Pingback: ಮುಖದ ಅನಾವಶ್ಯಕ ಕೂದಲು, ಕಪ್ಪು ಛಾಯೆ ಮತ್ತು ಹೊಳೆಯುವ ಚರ್ಮಗಾಗಿ ಸುಲಭ ಮನೆ ಪರಿಹಾರಗಳು (Simple Home Remedies for Facial Hair, Dark Patches &