ಮನೆಯಲ್ಲೇ ಮಾಡಿ ವಿವಿಧ ಶೈಲಿಯ ಸಾಂಬಾರು ಪುಡಿಗಳು (Tasty Sambar Powder Recipes)

Spread the love

ಮನೆಯಲ್ಲೇ ಮಾಡಿ ವಿವಿಧ ಶೈಲಿಯ ಸಾಂಬಾರು ಪುಡಿಗಳು
ಮನೆಯಲ್ಲೇ ಮಾಡಿ ವಿವಿಧ ಶೈಲಿಯ ಸಾಂಬಾರು ಪುಡಿಗಳು. AI Image

ಇಂದಿನ ದಿನಮಾನಗಳಲ್ಲಿ ಸಾಂಬಾರ್ ಪುಡಿಗಳನ್ನು ತಯಾರಿಸಿ ಸಾಂಬಾರನ್ನು ತಯಾರಿಸುವ ಸಂಯಮ ಕಡಿಮೆ, ಅಂಗಡಿ ಇಂದ ತಂದ ಪುಡಿಗೆ ಜಾಸ್ತಿ ಪ್ರಾಮುಖ್ಯತೆ. ಆದರೂ ಒಮ್ಮೆ ಮನೆಯಲ್ಲೇ ಪುಡಿ ತಯಾರಿಸಿ ಸಾಂಬಾರ್ ಮಾಡಿ ನೋಡಿ ಅದರ ರುಚಿಯೇ ಬೇರೆ. ಸ್ವತಃ ಪುಡಿ ತಯಾರಿಸಿ ಮಾಡಿದ ಸಾಂಬಾರ್ ಅತ್ಯುತ್ತಮ ಹಾಗು ವಿಭಿನ್ನ ರುಚಿಯನ್ನು ಹೊಂದಿರುತ್ತದೆ. ಅಂತಹ ವಿವಿಧ ಶೈಲಿಗಳ ಸಾಂಬಾರ್ ಪುಡಿಗಳನ್ನು ಮಾಡುವ ವಿಧಾನವನ್ನು ಈ ಲೇಖನದಲ್ಲಿ ಪ್ರಸ್ತುತ ಪಡಿಸಲಾಗಿದೆ.

ಸಾಂಬಾರ್ ಪುಡಿ ವಿಧಾನ 1 (ಮನೆ ಸಾಂಬಾರು ಪುಡಿ)

ಬೇಕಾಗುವ ಪದಾರ್ಥಗಳು 

  • ಉದ್ದಿನ ಬೇಳೆ- 2 ದೊಡ್ಡ ಚಮಚ
  • ಕಡಲೆ ಬೇಳೆ – 1 ದೊಡ್ಡ ಚಮಚ
  • ಕೊತ್ತಂಬರಿ – 3 ದೊಡ್ಡ ಚಮಚ
  • ಜೀರಿಗೆ -1 ದೊಡ್ಡ ಚಮಚ 
  • ಮೆಂತೆ – 1 ದೊಡ್ಡ ಚಮಚ
  • ಅರಿಶಿನ ಪುಡಿ – 1 ದೊಡ್ಡ ಚಮಚ
  • ಕಲ್ಲು ಉಪ್ಪು – 2 ದೊಡ್ಡ ಚಮಚ
  • ಒಣಮೆಣಸು – 15 ಖಾರಕ್ಕೆ ಅನುಗುಣವಾಗಿ
  • ಕರಿಬೇವು – ಒಂದು ಮುಷ್ಠಿ 
  • ಎಣ್ಣೆ
  • ಹಿಂಗು ಪುಡಿ

ಮಾಡುವ ವಿಧಾನ

ಉದ್ದಿನ ಬೇಳೆ, ಕಡಲೆ ಬೇಳೆ, ಕೊತ್ತಂಬರಿ, ಜೀರಿಗೆ, ಮೆಂತೆ, ಒಣಮೆಣಸು ಇವೆಲ್ಲವನ್ನೂ ಬೇರೆ ಬೇರೆಯಾಗಿ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯೊಂದಿಗೆ ಚೆನ್ನಾಗಿ ಹುರಿದುಕೊಳ್ಳಬೇಕು. ಕೊನೆಯಲ್ಲಿ ಕರಿಬೇವನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಎಲ್ಲವೂ ಬಿಸಿ ಆರಿದ ನಂತರ ಮಿಕ್ಸಿ ಜಾರಿಗೆ ಹಾಕಿ ಒಂದು ಸುತ್ತು ಪುಡಿ ಮಾಡಿಕೊಳ್ಳಬೇಕು. ನಂತರ ಮತ್ತೆ ಮಿಕ್ಸಿ ಜಾರಿಗೆ ಅರಿಶಿನ, ಹಿಂಗು, ಉಪ್ಪು ಸೇರಿಸಿ ಮತ್ತೆ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಅನಂತರ ಪುಡಿಯನ್ನು ಗಾಳಿ, ನೀರು ತಗಲದಂತೆ ಚೆನ್ನಾಗಿ ಗಟ್ಟಿಯಾಗಿ ಒಂದು ಡಬ್ಬದಲ್ಲಿ ಶೇಖರಿಸಡಬೇಕು. ಸುವಾಸನೆ ಭರಿತ ಮನೆ ಸಾಂಬಾರು ಪುಡಿ ಅಲ್ಲಿಗೆ ಸಿದ್ಧವಾಗುತ್ತದೆ.

ಸಾಂಬಾರ್ ಪುಡಿ ವಿಧಾನ 2 (ಉಡುಪಿ ಸಾಂಬಾರು ಪುಡಿ)

ಬೇಕಾಗುವ ಪದಾರ್ಥಗಳು 

  • ತೊಗರಿಬೇಳೆ – 1 ಚಿಕ್ಕ ಚಮಚ
  • ಉದ್ದಿನಬೇಳೆ – 1 ದೊಡ್ಡ ಚಮಚ
  • ಕಡ್ಲೆ ಬೇಳೆ – 1 ದೊಡ್ಡ ಚಮಚ
  • ಜೀರಿಗೆ – 2 ದೊಡ್ಡ ಚಮಚ
  • ಮೆಂತೆ – 1 ದೊಡ್ಡ ಚಮಚ
  • ಕೊತ್ತಂಬರಿ – 2 ದೊಡ್ಡ ಚಮಚ
  • ಒಣಮೆಣಸು – 10 ಖಾರಕ್ಕೆ ಅನುಗುಣವಾಗಿ
  • ಕರಿಬೇವಿನ ಎಲೆ – ಒಂದು ಮುಷ್ಠಿ 
  • ಇಂಗು ಪುಡಿ – ¼ ಚಮಚ
  • ತೆಂಗಿನ ಎಣ್ಣೆ

ಮಾಡುವ ವಿಧಾನ

ಒಂದು ಬಾಣಲೆಗೆ ಎರಡು ಚಮಚ ತೆಂಗಿನ ಎಣ್ಣೆ ಹಾಕಿ ಮೆಣಸನ್ನು ಹುರಿದು ತೆಗೆದಿಟ್ಟುಕೊಳ್ಳಬೇಕು. ನಂತರ ಕರಿಬೇವು, ತೊಗರಿ ಬೇಳೆ, ಉದ್ದಿನಬೇಳೆ, ಕಡ್ಲೆ ಬೇಳೆ, ಜೀರಿಗೆ, ಮೆಂತೆ, ಕೊತ್ತಂಬರಿ ಎಲ್ಲವನ್ನು ಒಂದಾದ ಮೇಲೆ ಒಂದನ್ನು ಸ್ವಲ್ಪ ಸ್ವಲ್ಪ ಎಣ್ಣೆಯೊಂದಿಗೆ ಚೆನ್ನಾಗಿ ಹುರಿದುಕೊಂಡು ಆರಲು ಬಿಡಬೇಕು. ನಂತರ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ಇಂಗು ಪುಡಿಯನ್ನು ಸೇರಿಸಿ ನುಣ್ಣಗೆ ಪುಡಿ ಮಾಡಿದರೆ ಉಡುಪಿ ಸಾಂಬಾರ್ ಪುಡಿ ಸಿದ್ಧವಾಗುತ್ತದೆ.

ಸಾಂಬಾರ್ ಪುಡಿ ವಿಧಾನ 3 (ಮದ್ರಾಸ್ ಸಾಂಬಾರ್ ಪುಡಿ)

ಬೇಕಾಗುವ ಪದಾರ್ಥಗಳು 

  • ತೊಗರಿಬೇಳೆ – 2 ದೊಡ್ಡ ಚಮಚ
  • ಕಡಲೆ ಬೇಳೆ – 2 ದೊಡ್ಡ ಚಮಚ
  • ಉದ್ದಿನ ಬೇಳೆ – 2 ದೊಡ್ಡ ಚಮಚ
  • ಕೊತ್ತಂಬರಿ – 2 ದೊಡ್ಡ ಚಮಚ
  • ಕಾಳು ಮೆಣಸು – 1 ದೊಡ್ಡ ಚಮಚ
  • ಒಣ ಮೆಣಸು – 10 ಖಾರಕ್ಕೆ ಅನುಗುಣವಾಗಿ
  • ಇಂಗು
  • ತೆಂಗಿನ ಎಣ್ಣೆ

ಮಾಡುವ ವಿಧಾನ

ತೊಗರಿಬೇಳೆ, ಕಡಲೆ ಬೇಳೆ, ಉದ್ದಿನ ಬೇಳೆ, ಕೊತ್ತಂಬರಿ, ಕರಿ ಮೆಣಸು ಎಲ್ಲವನ್ನು ಎಣ್ಣೆಯನ್ನು ಬಳಸದೆ ಹಾಗೆಯೇ ಹುರಿದುಕೊಳ್ಳಬೇಕು. ಒಣ ಮೆಣಸನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿದುಕೊಂಡು ಆರಲು ಬಿಡಬೇಕು. ನಂತರ ಎಲ್ಲವನ್ನು ಸೇರಿಸಿ ಕೊನೆಯಲ್ಲಿ ಚಿಟಿಕೆ ಹಿಂಗು ಹಾಕಿ ನುಣ್ಣನೆ ಪುಡಿ ಮಾಡಿಕೊಳ್ಳಬೇಕು. ಬೇರೆ ಪಾತ್ರೆಗೆ ವರ್ಗಾಯಿಸಿಕೊಂಡರೆ ಮದ್ರಾಸ್ ಸಾಂಬಾರ್ ಪುಡಿ ಸಿದ್ಧವಾಗುತ್ತದೆ.

ಸಾಂಬಾರ್ ಪುಡಿ ವಿಧಾನ 4

ಬೇಕಾಗುವ ಪದಾರ್ಥಗಳು 

  • ಕೊತ್ತಂಬರಿ – 2 ಕಪ್
  • ಒಣಮೆಣಸಿನ ಕಾಯಿ 200 ಗ್ರಾಂ
  • ಕಡ್ಲೆಬೇಳೆ – 250 ಗ್ರಾಂ
  • ತೊಗರಿ ಬೇಳೆ – 250 ಗ್ರಾಂ
  • ಉದ್ದಿನ ಬೇಳೆ -200 ಗ್ರಾಂ
  • ಅರಿಶಿಣ ಕೊಂಬು 5
  • ಜೀರಿಗೆ 200 ಗ್ರಾಂ
  • ಮೆಂತೆ 100 ಗ್ರಾಂ
  • ಸಾಸಿವೆ 100 ಗ್ರಾಂ
  • ಕಾಳು ಮೆಣಸು 100 ಗ್ರಾಂ
  • ಚಕ್ಕೆ 2 ತುಂಡು
  • ಹಿಂಗು 25 ಗ್ರಾಂ
  • ಎಣ್ಣೆ

ಮಾಡುವ ವಿಧಾನ

ಕೊತ್ತಂಬರಿ, ಕಡ್ಲೆಬೇಳೆ, ತೊಗರಿ ಬೇಳೆ, ಉದ್ದಿನಬೇಳೆ, ಜೀರಿಗೆ, ಮೆಂತೆ, ಸಾಸಿವೆ, ಕಾಳು ಮೆಣಸು, ಚಕ್ಕೆ ಎಲ್ಲವನ್ನು ಎಣ್ಣೆ ಬಳಸದೆ ಚೆನ್ನಾಗಿ ಬೇರೆ ಬೇರೆಯಾಗಿ ಹುರಿದು ಪುಡಿ ಮಾಡಿಕೊಳ್ಳಬೇಕು. ನಂತರ ಎಣ್ಣೆಯಲ್ಲಿ ಹಿಂಗನ್ನು ಹಾಕಿ, ಮತ್ತೆ ಉಳಿದ ಎಣ್ಣೆಯಲ್ಲಿ ಮೆಣಸಿನಕಾಯಿಯನ್ನು ಹುರಿದು, ಅದನ್ನು ಸಹ ಅರಿಶಿಣದ ಕೊಂಬಿನೊಡನೆ ಪುಡಿ ಮಾಡಿಕೊಳ್ಳಬೇಕು. ಎಲ್ಲ ಪುಡಿಗಳನ್ನು ಮಿಶ್ರಣ ಮಾಡಿ ಒಂದು ಗಾಜಿನ ಬಾಟಲಿಯಲ್ಲಿ ಶೇಖರಿಸಿದರೆ ಸಾಂಬಾರ್ ಪುಡಿ ಸಿದ್ದವಾಗುತ್ತದೆ.

ಸಾಂಬಾರ್ ಪುಡಿ ವಿಧಾನ 5

ಬೇಕಾಗುವ ಪದಾರ್ಥಗಳು 

  • ಕೊತ್ತಂಬರಿ – 1 ಕಪ್
  • ಮೆಂತೆ – 1/4 ಕಪ್
  • ಉದ್ದಿನಬೇಳೆ – 1/4 ಕಪ್
  • ಜೀರಿಗೆ – 1/4 ಕಪ್
  • ಬ್ಯಾಡಗಿ ಮೆಣಸು 100ಗ್ರಾಂ ( ಖಾರಕ್ಕೆ ಅನುಗುಣವಾಗಿ)
  • ಹಿಂಗು 10 ಗ್ರಾಂ
  • ಎಣ್ಣೆ 1/4 ಕಪ್

ಮಾಡುವ ವಿಧಾನ

ಬ್ಯಾಡಗಿ ಮೆಣಸನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ಅನಂತರ ಕ್ರಮವಾಗಿ ಕೊತ್ತಂಬರಿ ಬೀಜ, ಮೆಂತೆ, ಜೀರಿಗೆ ಹಾಗೂ ಉದ್ದಿನಬೇಳೆಯನ್ನು ಸ್ವಲ್ಪ ಎಣ್ಣೆಯಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ಉದ್ದಿನ ಬೇಳೆ ಕಂದು ಬಣ್ಣ ಬರುವವರೆಗೂ ಚೆನ್ನಾಗಿ ಹುರಿದುಕೊಳ್ಳಬೇಕು. ಈಗ ಹುರಿದ ಎಲ್ಲಾ ವಸ್ತುಗಳನ್ನು ಹಿಂಗಿನ ಜೊತೆ ಸೇರಿಸಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ಈಗ ಕುಟ್ಟುವುದು ಸ್ವಲ್ಪ ಕಡಿಮೆ ಅಲ್ಲವೇ?? ಮಿಕ್ಸಿ ಮುಖಾಂತರ ಪುಡಿ ಮಾಡಿಕೊಂಡು ಒಂದು ಗಾಜಿನ ಪಾತ್ರೆಯಲ್ಲಿ ಶೇಖರಿಸಿ ಇಡಬೇಕು.

ಸಾಂಬಾರ್ ಪುಡಿ ವಿಧಾನ 6

ಬೇಕಾಗುವ ಪದಾರ್ಥಗಳು 

  • ಕೊತ್ತಂಬರಿ – 15 ಚಮಚ
  • ಉದ್ದಿನಬೇಳೆ -1 ಚಮಚ
  • ಕಡ್ಲೆಬೇಳೆ – 2 ಚಮಚ
  • ಕೊಬ್ಬರಿ ತುರಿ – 1/2 ಗಿಟಕು
  • ಚಕ್ಕೆ  – 2 ತುಂಡು
  • ಮೆಂತೆ –  1/2 ಚಮಚ
  • ಬ್ಯಾಡಗಿ ಮೆಣಸಿನ ಕಾಯಿ – 200 ಗ್ರಾಂ

ಮಾಡುವ ವಿಧಾನ

ಕೊತ್ತಂಬರಿ, ಉದ್ದಿನಬೇಳೆ, ಕಡ್ಲೆಬೇಳೆ, ಮೆಂತೆ, ಚಕ್ಕೆ, ಕೊಬ್ಬರಿ ತುರಿ, ಹಾಗೂ ಬ್ಯಾಡಗಿ ಮೆಣಸನ್ನು ಎಣ್ಣೆ ಬಳಸದೆ ಚೆನ್ನಾಗಿ ಪ್ರತ್ಯೇಕವಾಗಿ ಹುರಿದುಕೊಳ್ಳಬೇಕು. ನಂತರ ಎಲ್ಲವನ್ನು ಒಟ್ಟಿಗೆ ಪುಡಿ ಮಾಡಿಕೊಂಡು ಗಾಜಿನ ಬಾಟಲಿಯಲ್ಲಿ ಶೇಖರಿಸಿ ಇಡಬೇಕು.

ಮೇಲೆ ವಿವಿಧ ಸಾಂಬಾರ್ ಪುಡಿಯನ್ನು ತಯಾರಿಸುವ ವಿಧಾನವನ್ನು ವಿವರಿಸಲಾಗಿದೆ. ಆಯಾ ಊರಿನ ಶೈಲಿಯನ್ನು ಹಾಗೂ ವಿವಿಧ ವಿಧಾನಗಳೊಂದಿಗೆ ಎತ್ತಿ ಹಿಡಿಯಲಾಗಿದೆ. ರುಚಿಯೂ ಕೂಡ ವಿಭಿನ್ನವಾಗಿ ಮುಡಿ ಬರುತ್ತದೆ. ಯಾವಾಗಲೋ ಮಾಡಿ ಪ್ಯಾಕ್ ಮಾಡಿದ ಅಂಗಡಿ ಪುಡಿಗಳ ಬಳಕೆಗಿಂತ ಮನೆಯಲ್ಲೇ ಶುದ್ಧವಾಗಿ ಮಾಡಿಟ್ಟ ಪುಡಿ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಯಾವುದೇ ರೀತಿಯ ರಾಸಾಯನಿಕಗಳ ಬಳಕೆ ಮಾಡದ ಈ ಸಾಂಬಾರ್ ಪುಡಿಗಳನ್ನು ಒಮ್ಮೆ ಮಾಡಿ, ತಿಂದು ಆನಂದಿಸಿರಿ ಮತ್ತು  ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿರಿ. 

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

1 thought on “ಮನೆಯಲ್ಲೇ ಮಾಡಿ ವಿವಿಧ ಶೈಲಿಯ ಸಾಂಬಾರು ಪುಡಿಗಳು (Tasty Sambar Powder Recipes)”

  1. Pingback: ಬೆಸ್ಟ ರಸಂ ಪುಡಿ ರೆಸಿಪಿ: ತಯಾರಿಸುವ ಸರಳ ವಿಧಾನ ಮತ್ತು ಉಪಯೋಗಗಳು! - ಗೃಹಸ್ನೇಹಿ - ನಿಸರ್ಗದ ಮಡಿಲಲ್ಲಿ ಅರಳಿದ ಆರ

Leave a Comment

Your email address will not be published. Required fields are marked *

Scroll to Top