ಹುರುಳಿ (Horsegram): ಆರೋಗ್ಯ ಲಾಭಗಳು ಮತ್ತು ಮನೆಮದ್ದುಗಳು

Spread the love

ಹುರುಳಿ (Horsegram): ಆರೋಗ್ಯ ಲಾಭಗಳು ಮತ್ತು ಮನೆಮದ್ದುಗಳು. AI Image

ದ್ವಿದಳ ಧಾನ್ಯಗಳಲ್ಲಿ ಒಂದಾದ ಹುರುಳಿ ಬಹು ಪೌಷ್ಠಿಕಯುಕ್ತ ಆಹಾರವಾಗಿದೆ. ಹುರುಳಿಯು ಬಿಳಿ, ಕಪ್ಪು, ಕಂದು ಮತ್ತು ಕೆಂಪು ಬಣ್ಣದಲ್ಲಿ ಇದ್ದು, ಒಗರು ಮತ್ತು ಮಧುರ ರಸದ ಸ್ವಾದವನ್ನು ನೀಡುತ್ತದೆ. ಹುರುಳಿಯನ್ನು ಕುದುರೆಗಳ ಆಹಾರ ಎಂದೂ ಹೇಳುತ್ತಾರೆ. ಕುದುರೆಗಳಿಗೆ ಹಾಗೂ ಎತ್ತುಗಳಿಗೆ ಹುರುಳಿಯನ್ನು ಬೇಯಿಸಿ ಆಹಾರವಾಗಿ ನೀಡುತ್ತಿದ್ದರು. ಶ್ರಮಜೀವಿಗಳಾದ ಎತ್ತು ಹಾಗೂ ಕುದುರೆಗೆ ಆಹಾರವಾಗಿ ನೀಡುತ್ತಾರೆ ಎಂದರೆ ನಾವು ಹುರುಳಿ ಎಷ್ಟು ಶಕ್ತಿವರ್ಧಕವಾಗಿದೆ ಎಂಬುದನ್ನು ಅರಿಯಬೇಕು.

ಮನುಷ್ಯರಿಗೂ ಇದು ಆಹಾರವಾಗಿ ಬಳಸುವುದು ಬಹಳ ಉತ್ತಮವಾಗಿದೆ. ಇಂದಿನ ಲೇಖನದಲ್ಲಿ ನಾವು ಹುರುಳಿಯ ವೈಜ್ಞಾನಿಕ ವಿಚಾರಗಳು, ಹಾಗೂ ಆರೋಗ್ಯಕರ ವಿಚಾರಗಳ ಬಗ್ಗೆ ವಿಶ್ಲೇಷಿಸೋಣ.

ಹುರುಳಿಯ ವೈಜ್ಞಾನಿಕ ವಿಚಾರಗಳು

ವೈಜ್ಞಾನಿಕ ಹೆಸರು – ಮ್ಯಾಕ್ರೋಟೈಲೋಮಾ ಯೂನಿಫ್ಲೋರಮ್ (Macrotyloma Uniflorum)
ಆಂಗ್ಲ ಹೆಸರು – ಹಾರ್ಸ್ ಗ್ರಾಮ್ (Horsegram)

ಹುರುಳಿಯಲ್ಲಿ ಪ್ರೋಟೀನ್, ನಾರು, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಇತರ ಉಪಯುಕ್ತ ಅಂಶಗಳು ಹೇರಳವಾಗಿದೆ.

ಹುರುಳಿಯು ಬಹು ಉಷ್ಣಯುತ ಆಹಾರವಾಗಿದ್ದು, ದೇಹದಲ್ಲಿನ ತಾಪಮಾನವನ್ನು ನಿಯಂತ್ರಿಸಲು ಉತ್ತಮ ಆಹಾರವಾಗಿದೆ. ಹುರುಳಿಯು ದೇಹದಲ್ಲಿನ ವಾತವನ್ನು ಸಮಗೊಳಿಸಿ, ದಮ್ಮು, ಕೆಮ್ಮು, ಉಬ್ಬಸ, ಮೂಲವ್ಯಾಧಿ, ಮಲ-ಮೂತ್ರದ ಸಮಸ್ಯೆಗಳಿಗೆ ಕೂಡ ಉತ್ತಮ ಪರಿಹಾರವನ್ನು ನೀಡುತ್ತದೆ. ಮೂತ್ರಕೋಶದಲ್ಲಿನ ಕಲ್ಲುಗಳನ್ನು ಕರಗಿಸಲು ಹುರುಳಿ ಅತಿ ಉತ್ತಮ ಆಹಾರವಾಗಿದೆ. ಹುರುಳಿಯ ಆರೋಗ್ಯಕರ ಮನೆಮದ್ದುಗಳ ಬಗ್ಗೆ ಈಗ ತಿಳಿಯೋಣ.

ಹುರುಳಿಯ ಆರೋಗ್ಯಕರ ಮನೆಮದ್ದುಗಳು

ಮೂತ್ರದ ಕಲ್ಲನ್ನು ಕರಗಿಸಲು ಹುರುಳಿ ಉತ್ತಮ ಆಹಾರವಾಗಿದೆ.

  • ನೀರು ಕಡಿಮೆ ಕುಡಿಯುವುದು, ದ್ರವ ಪದಾರ್ಥಗಳ ಸೇವನೆಯು ಕಡಿಮೆಯಾಗಿದ್ದರೆ, ಇಲ್ಲವೇ ಮೂತ್ರನಾಳದಲ್ಲಿ ವೀರ್ಯವು ಒಟ್ಟಾಗಿ ಕಲ್ಲಿನಂತಾಗಿ ಮೂತ್ರ ವಿಸರ್ಜನೆಗೆ ತೊಂದರೆ ಉಂಟಾಗುತ್ತದೆ. ಅಷ್ಟೇ ಅಲ್ಲದೇ ಮೂತ್ರದ ಕಲ್ಲಿನಿಂದ ಕಿಬ್ಬೊಟ್ಟೆಯ ನೋವು, ಹೊಕ್ಕಳ ಸುತ್ತ ನೋವು, ಇವೆಲ್ಲದರಿಂದ ಮೂತ್ರ ವಿಸರ್ಜನೆಗೆ ತೊಂದರೆ ಉಂಟಾಗುತ್ತದೆ. ಇವೆಲ್ಲದಕ್ಕೂ ಹುರುಳಿ ಅತಿ ಉತ್ತಮವಾದ ಔಷಧಿಯಾಗಿದೆ. ಹುರುಳಿಯನ್ನು ಒಂದು ರಾತ್ರಿ ನೆನೆಸಿ ಇಡಬೇಕು. ನಂತರ ಬೆಳಿಗ್ಗೆ ಚೆನ್ನಾಗಿ ಹುರುಳಿಯನ್ನು ತೊಳೆದು, ಬೇಯಿಸಬೇಕು. ಒಂದು ಲೋಟ ಹುರುಳಿಗೆ ನಾಲ್ಕು ಲೋಟ ನೀರು ಹಾಕಿ ಚೆನ್ನಾಗಿ ಬೇಯಿಸಿ, ಕುಡಿಯಬೇಕು. ಇದನ್ನು ಸ್ವಲ್ಪ ದಿನಗಳ ಕಾಲ ಕುಡಿಯುವುದರಿಂದ ಮೂತ್ರಜನಕಾಂಗದ ಕಾರ್ಯಗಳು ಸುಲಭವಾಗಿ ಆಗುತ್ತದೆ. ಕಲ್ಲಿನಿಂದ ಉಂಟಾಗುವ ಹೊಟ್ಟೆ ನೋವು ಕೂಡ ಕಡಿಮೆಯಾಗುತ್ತದೆ.

ಹೆಣ್ಣು ಮಕ್ಕಳ ಆರೋಗ್ಯಕ್ಕೆ ಹುರುಳಿಯ ಉಪಯೋಗಗಳು

  • ಹೆಣ್ಣು ಮಕ್ಕಳ ಋತುಚಕ್ರದಲ್ಲಿನ ಸಮಸ್ಯೆಗಳಾದ ಅನಿಯಮಿತ ಋತುಚಕ್ರ, ಬೇಗ ಬೇಗ ಮುಟ್ಟಾಗುವುದು, ಸರಿಯಾಗಿ ರಕ್ತಸ್ರಾವ ಆಗುತ್ತಿಲ್ಲವಾದರೆ, ಇಂತಹ ಅನೇಕ ಸಮಸ್ಯೆಗಳಿಗೆ ಹುರುಳಿ ಉತ್ತಮ ಆಹಾರವಾಗಿದೆ. ಒಂದು ತಿಂಗಳು ಸಂಪೂರ್ಣವಾಗಿ ಹುರುಳಿಯನ್ನು ಬೇಯಿಸಿ ಸಾರನ್ನು ಸಿದ್ದಪಡಿಸಿಕೊಳ್ಳಬೇಕು. ಹುರುಳಿ ಕಟ್ಟಿನ ಸಾರು ಬಳಸುವುದರಿಂದ ಋತುಕಾಲದ ತೊಂದರೆಗಳಿಗೆ ಪರಿಹಾರ ದೊರೆಯುತ್ತದೆ. ಇದು ದೇಹಕ್ಕೆ ಉಷ್ಣವು ಕೂಡ ಹೌದು, ಬಳಸುವ ಮುನ್ನ ಉಷ್ಣತೆಯ ಬಗ್ಗೆಯೂ ಕೂಡ ಆಲೋಚಿಸಬೇಕು.
  • ಹೆಂಗಸರ ಮಾಸಿಕ ಧರ್ಮವು ಮಧ್ಯದಲ್ಲಿ ನಿಂತು ಹೋಗಿದ್ದರೆ ಇಲ್ಲವೇ ಸಮಯಕ್ಕೆ ಸರಿಯಾಗಿ ಆಗದಿದ್ದರೆ, ಅದನ್ನು ಮತ್ತೆ ಪ್ರಾರಂಭಿಸಲು, ಹುರುಳಿ ಸಹಾಯಕವಾಗಿದೆ. ಹುರುಳಿ, ಪರಂಗಿ ಗಿಡದ ಚಕ್ಕೆ ಹಾಗೂ ಜಡೆ ಹತ್ತಿ ಎಲೆಗಳು, ಇವು ಮೂರನ್ನು ಚೆನ್ನಾಗಿ ಕುಟ್ಟಿ, ಪುಡಿ ಮಾಡಿಕೊಳ್ಳಬೇಕು. ಒಂದು ಲೋಟ ನೀರಿನಲ್ಲಿ 2 ಚಮಚ ಕುಟ್ಟಿದ ಪುಡಿಯನ್ನು ಬೆರೆಸಿ ಕುದಿಸಬೇಕು. ನೀರು ಅರ್ಧದಷ್ಟು  ಇಂಗಿದ ಮೇಲೆ ಸ್ವಲ್ಪ ಬೆಲ್ಲವನ್ನು ಬೆರೆಸಿ, ಕುಡಿಯಬೇಕು. ಇದು ಮಧ್ಯದಲ್ಲಿ ನಿಂತ ಮುಟ್ಟಿನ ದಿನಗಳನ್ನು ಮತ್ತೆ ಪ್ರಾರಂಭಿಸಿ, ಕ್ರಮಬದ್ಧವಾಗಿರುವಂತೆ ನೋಡಿಕೊಳ್ಳುತ್ತದೆ.

ಬಾಣಂತಿಯರ ಆರೋಗ್ಯಕ್ಕೆ ಕೂಡ ಹುರಳಿ ಉತ್ತಮ ಆಹಾರವಾಗಿದೆ.

  • ಬಾಣಂತಿಯರ ದೇಹದ ಉಷ್ಣವನ್ನು ಕಾಪಾಡಲು ಹುರುಳಿಯು ಅತ್ಯಂತ ಸಹಾಯಕವಾಗಿದೆ. ಗರ್ಭಿಣಿಯರು ಮಗುವಿನ ಜನನದ ನಂತರ ಗರ್ಭಾಶಯದಲ್ಲಿರುವ ಪಳೆಯುಳಿಕೆಯು ಹೊರ ಬರಲು ಹುರುಳಿಯ ಕಷಾಯ ಉತ್ತಮ ಔಷಧಿಯಾಗಿದೆ. ಈ ಹುರಳಿ ಕಷಾಯದ ಸೇವನೆಯಿಂದ ಗರ್ಭಾಶಯದಲ್ಲಿರುವ ಅಂತರ್ಮಲವನ್ನು ಸಂಪೂರ್ಣವಾಗಿ ಹೊರಗೆ ಬರಲು ಹಾಗೂ ಗರ್ಭಾಶಯದ ನೋವನ್ನು ಕೂಡ ಕಡಿಮೆ ಮಾಡಿಸುತ್ತದೆ. ಬಾಣಂತಿಯರಿಗೆ ಹುರುಳಿಯನ್ನು ಆಹಾರದಲ್ಲಿ ಬಳಸುವುದು ಕೂಡ ಅತಿ ಉತ್ತಮವಾಗಿದೆ.

ಹೊಟ್ಟೆಯ ನೋವಿಗೆ ಹುರುಳಿಯ ಮನೆಮದ್ದುಗಳು

  • ಜೀರ್ಣಕ್ರಿಯೆ ಸುಲಭವಾಗಿ ಸಾಗಲು ಹುರುಳಿಯ ಸೇವನೆಯು ಉಪಯುಕ್ತವಾಗಿದೆ. ಅಜೀರ್ಣದಿಂದ ಸಮಸ್ಯೆಯಿಂದ ಹೊಟ್ಟೆ ನೋವು ಬರುತ್ತಿದ್ದರೆ, ಬೇಯಿಸಿದ ಹುರುಳಿಗೆ ಅಥವಾ ಹುರುಳಿ ಕಟ್ಟಿಗೆ ಸ್ವಲ್ಪ ತುಪ್ಪವನ್ನು ಬೆರೆಸಿ, ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ.

ಗಟ್ಟಿಯಾದ ಕಫವನ್ನು ಕರಗಿಸಲು ಕೂಡ ಹುರುಳಿ ಸಹಾಯಕವಾಗಿದೆ.

  • ಗಟ್ಟಿಯಾದ ಕಫವನ್ನು ಕರಗಿಸಲು ಹುರುಳಿಯ ಈ ಮನೆಮದ್ದು ಉಪಯುಕ್ತವಾಗಿದೆ. ಹುರುಳಿ, ಎಲಚಿ ಹಣ್ಣು, ಶುಂಠಿ, ದಾಳಿಂಬೆ ಸಿಪ್ಪೆ ಹಾಗೂ ಹಿಪ್ಪಲಿ ಎಲ್ಲವನ್ನು ಸಮಾನ ಅಳತೆಯಲ್ಲಿ ತೆಗೆದುಕೊಳ್ಳಬೇಕು. ಎರಡು ಲೋಟ ನೀರಿಗೆ ಈ ಎಲ್ಲಾ ವಸ್ತುಗಳನ್ನು ಹಾಕಿ ಕುದಿಸಬೇಕು. ಅರ್ಧದಷ್ಟು ನೀರು ಇಂಗಿದ ನಂತರ ಓಲೆ ಆರಿಸಿಕೊಂಡು, ಶೋಧಿಸಿಕೊಳ್ಳಬೇಕು. ಈ ಕಷಾಯವನ್ನು ಕುಡಿಯುವುದರಿಂದ ಕಫವು ಕರಗಿ, ಕೆಮ್ಮು ಕೂಡ ಕಡಿಮೆಯಾಗುತ್ತದೆ. ಕಫ ಕರಗಲು ಇದು ಅತಿ ಉತ್ತಮವಾದ ಮನೆಮದ್ದಾಗಿದೆ.

ಕೆಮ್ಮಿನ ನಿವಾರಣೆ ಹಾಗೂ ದಮ್ಮಿನ ಆರೈಕೆಯಲ್ಲಿ ಹುರುಳಿ ಉಪಯುಕ್ತವಾಗಿದೆ.

  • ಅನೇಕ ರೀತಿಯ ಕೆಮ್ಮುಗಳಿಗೂ ಹುರುಳಿ ಉತ್ತಮ ಔಷಧಿಯಾಗಿ ಕಾರ್ಯ ನಿರ್ವಹಿಸುತ್ತದೆ. ದಮ್ಮಿನ ಸಮಸ್ಯೆಗೂ ಕೂಡ ಹುರುಳಿ ಉಪಯುಕ್ತವಾಗಿದೆ. ಕೆಮ್ಮು ಹಾಗೂ ದಮ್ಮು ಎರಡನ್ನು ಕಡಿಮೆಗೊಳಿಸಲು ಉಪಯುಕ್ತವಾಗಿರುವ ಉತ್ತಮ ಮನೆಮದ್ದು ಎಂದರೆ ಹುರುಳಿ ನೆಲ್ಲಿಯ ಕಷಾಯ. ಇದನ್ನು ತಯಾರಿಸುವ ವಿಧಾನವೆಂದರೆ ಒಂದು ಭಾಗ ಹುರುಳಿ, ಅರ್ಧ ಭಾಗ ನೆಲ್ಲಿ ಚೆಟ್ಟು ಹಾಗೂ ಕಾಲು ಭಾಗ ಹಿಪ್ಪಲಿ ಇವು ಮೂರನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಚೆನ್ನಾಗಿ ಕುದಿಸಿದ ನಂತರ, ಶೋಧಿಸಿಕೊಂಡು ಕುಡಿಯಬೇಕು. ಇದು ಕೆಮ್ಮು, ದಮ್ಮು, ನೆಗಡಿ ಹಾಗೂ ಕಫ ಕರಗುವಿಕೆಗೆ ಅತಿ ಉತ್ತಮವಾದ ಕಷಾಯವಾಗಿದೆ. ಹಾಗೂ ಈ ಕಷಾಯವು ತ್ವರಿತ ಗತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುತ್ತದೆ.

ತೂಕವನ್ನು ಇಳಿಸಲು ಹುರುಳಿ ಉತ್ತಮ ಆಹಾರವಾಗಿದೆ.

  • ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುವ ಹುರುಳಿಯು ದೇಹದ ತೂಕವನ್ನು ಇಳಿಸಲು ಕೂಡ ಸಹಾಯಕವಾಗಿದೆ. ದೇಹವನ್ನು ದೃಢವಾಗಿಸಿ, ತೂಕದ ಸಮತೋಲನವನ್ನು ಕಾಪಾಡಲು ಹುರುಳಿ ಉಪಯುಕ್ತವಾಗಿದೆ. ಪ್ರತಿದಿನ ಆಹಾರದಲ್ಲಿ ಹುರುಳಿಯನ್ನು ಬಳಸುವುದರಿಂದ ಬೊಜ್ಜು ಅಥವಾ ಕೊಬ್ಬಿನ ಅಂಶವು ದೇಹದಲ್ಲಿ ಕರಗುತ್ತದೆ. ಹೀಗೆ ದೇಹದ ತೂಕದಲ್ಲಿ ಕೂಡ ನಾವು ಇಳಿಕೆಯನ್ನು ಕಾಣಬಹುದು. ಅಷ್ಟೇ ಅಲ್ಲದೇ ಹುರುಳಿಯನ್ನು ಆಹಾರ ರೂಪದಲ್ಲಿ ಸೇವಿಸುವುದರಿಂದ ನಮ್ಮ ದಿನನಿತ್ಯದ ಚಟುವಟಿಕೆಗಳನ್ನು ನೆರವೇರಿಸುವ ಶಕ್ತಿಯು ಕೂಡ ಚುರುಕಾಗುತ್ತದೆ. ಸ್ಥೂಲಕಾಯರಿಗೆ ಇದು ಉತ್ತಮ ಆಹಾರವಾಗಿದೆ.

ಗ್ಯಾಸ್ಟಿಕ್ ಸಮಸ್ಯೆಗೆ ಉತ್ತಮವಾಗಿರುವ ಹುರುಳಿ ಚಟ್ನಿಪುಡಿ.

  • ಈಗಿನ ಆಹಾರ ಪದ್ಧತಿಗಳಿಂದ ಹೊಟ್ಟೆಯಲ್ಲಿ ವಾಯು ಉತ್ಪತ್ತಿ ಜಾಸ್ತಿಯಾಗುತ್ತಿದೆ. ಇಂದು ನಾವು ಎಲ್ಲರಲ್ಲೂ ಕಾಣಬಹುದಾದ ಸಮಸ್ಯೆ ಎಂದರೆ ಅದು ವಾಯುದೋಷ ಅಥವಾ ಗ್ಯಾಸ್ಟಿಕ್ ಸಮಸ್ಯೆ. ಈ ಸಮಸ್ಯೆಗೆ ಹುರುಳಿಯ ಚಟ್ನಿಪುಡಿ ಪರಿಹಾರವನ್ನು ನೀಡುತ್ತದೆ. ಹುರುಳಿ ಕಾಳನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಒಣಮೆಣಸು, ಹುಣಸೆಹಣ್ಣು, ಬೆಲ್ಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ, ಎಲ್ಲವನ್ನು ಒಟ್ಟಿಗೆ ಪುಡಿ ಮಾಡಿಕೊಳ್ಳಬೇಕು. ಈ ಪುಡಿಗೆ ಹಿಂಗು, ಸಾಸಿವೆ, ಕರಿಬೇವಿನ ಒಗ್ಗರಣೆಯನ್ನು ಎಣ್ಣೆಯೊಂದಿಗೆ ನೀಡಿದರೆ ಚಟ್ನಿಪುಡಿ ಸಿದ್ದವಾಗುತ್ತದೆ. ಇದನ್ನು ನಿತ್ಯ ಸ್ವಲ್ಪ ಅನ್ನಕ್ಕೆ ಮೊದಲು ಕಲಸಿ ತಿನ್ನುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಗಳು ಎಂದಿಗೂ ಎದುರಾಗುವುದಿಲ್ಲ. ಹಾಗೆಯೇ ಇದು ತೂಕ ಇಳಿಸಲು ಕೂಡ ಉತ್ತಮವಾದ ಆಹಾರವಾಗಿದೆ.

ಕೈ ಕಾಲುಗಳು ಹೆಚ್ಚಾಗಿ ಬೆವರುತ್ತಿದ್ದರೆ ಹುರುಳಿಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

  • ಕೈ ಕಾಲುಗಳು ಸದಾ ಬೆವರುವುದನ್ನು ಕಡಿಮೆ ಮಾಡಲು ಹುರುಳಿಯನ್ನು ಉಪಯೋಗಿಸಬಹುದು. ಮೊದಲಿಗೆ ಹುರುಳಿಯನ್ನು ಸುಟ್ಟು ಬೂದಿ ಮಾಡಬೇಕು. ನಂತರ ಹಳದಿ ಬಣ್ಣದ ಕವಡೆಯನ್ನು ಕೂಡ ಸುಟ್ಟು ಬೂದಿ ಮಾಡಿಕೊಳ್ಳಬೇಕು. ಎರಡು ಬೂದಿಯನ್ನು ಜೊತೆಗೆ ಕೈ ಕಾಲುಗಳಿಗೆ ಹಚ್ಚಿಕೊಳ್ಳಬೇಕು. ಇದರಿಂದ ಕೈ ಕಾಲುಗಳಿಂದ ಜಾಸ್ತಿ ಬೆವರುವುದು ಕಡಿಮೆಯಾಗುತ್ತದೆ.

ಮೈ ಕೈ ನೋವಿಗೆ ಕೂಡ ಹುರುಳಿ ಉತ್ತಮ ಔಷಧವಾಗಿದೆ.

  • ದೇಹಕ್ಕೆ ಶಕ್ತಿಯನ್ನು ನೀಡುವ ಈ ಅರೋಗ್ಯಯುತ ಹುರುಳಿಯು ನಮ್ಮ ದೇಹದಲ್ಲಿನ ನೋವಿಗೂ ಕೂಡ ಸ್ಪಂದಿಸುತ್ತದೆ. ಇತ್ತೀಚಿಗೆ ಎಲ್ಲರನ್ನೂ ಸಾಮನ್ಯವಾಗಿ ಭಾದಿಸುವ ಸೊಂಟ ನೋವು, ಹಾಗೆಯೇ ಜೊತೆಗೆ ಕಿಬ್ಬೊಟ್ಟೆ ನೋವು ಎಲ್ಲದಕ್ಕೂ ಹುರುಳಿ ಉತ್ತಮವಾಗಿದೆ. ಹುರುಳಿ, ಶುಂಠಿ ಹಾಗೂ ವಾಯು ವಿಳಂಗ ಇವು ಮೂರನ್ನು ಚೆನ್ನಾಗಿ ಕುಟ್ಟಿ ಪುಡಿಮಾಡಿಕೊಳ್ಳಬೇಕು. ನಂತರ ಒಂದು ಲೋಟ ನೀರಿಗೆ ಒಂದು ದೊಡ್ಡ ಚಮಚ ಪುಡಿಯನ್ನು ಬೆರೆಸಿ ಕುದಿಸಬೇಕು. ಅರ್ಧದಷ್ಟು ನೀರು ಇಂಗಿದ ನಂತರ ಓಲೆ ಆರಿಸಿ, ಕಷಾಯವನ್ನು ಸೋಸಿಕೊಳ್ಳಬೇಕು. ನಂತರ ಕೊನೆಯಲ್ಲಿ ಸ್ವಲ್ಪ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ ಮೈ ಕೈ ನೋವುಗಳು ಕಡಿಮೆಯಾಗುತ್ತದೆ. ಇದನ್ನು ನೋವು ಕಡಿಮೆಯಾಗುವವರಿಗೂ ಕುಡಿಯಬೇಕು, ಅಂದರೆ ಮಾತ್ರ ನಾವು ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ.

ಹುರುಳಿಯ ಬಗ್ಗೆ ಇನ್ನೂ ಹೇಳಬೇಕೆಂದರೆ ತುಂಬಾ ವಿಷಯಗಳ ಬುತ್ತಿ ಬಿಚ್ಚಿಕೊಳ್ಳುತ್ತದೆ. ಹುರುಳಿಯನ್ನು ಮಳೆಗಾಲದಲ್ಲಿ ಹೆಚ್ಚಾಗಿ ಆಹಾರ ಪದ್ಧತಿಯಲ್ಲಿ ಉಪಯೋಗಿಸುವ ರೂಢಿ ಇದ್ದು, ಇದು ದೇಹವನ್ನು ಬೆಚ್ಚಗಿಡುತ್ತದೆ. ಇನ್ನೂ ಮಳೆಗಾಲದಲ್ಲಿ ಬರುವ ನೆಗಡಿ, ಕೆಮ್ಮು, ಜ್ವರ ಇಂತಹ ಸಮಸ್ಯೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕೂಡ ವೃದ್ಧಿಸುತ್ತದೆ. ಹುರುಳಿಯು ಹೆಚ್ಚಿನ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ದೇಹದ ಶಕ್ತಿ ವರ್ಧನೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆಯುತ್ತದೆ.

ಇನ್ನೂ ಹುರುಳಿಯ ಅನೇಕ ಖಾದ್ಯಗಳನ್ನು ನಾವು ತಯಾರಿಸಬಹುದಾಗಿದೆ. ಹುರುಳಿ ಗಂಜಿ, ಹುರುಳಿ ಸೂಪ್, ಹುರುಳಿ ಸಾಂಬಾರ್, ಹುರುಳಿ ರಸಂ, ಹುರುಳಿ ಪಲ್ಯ, ಹುರುಳಿ ಚಟ್ನಿ, ಹುರುಳಿ ಚಟ್ನಿಪುಡಿ, ಹುರುಳಿ ಹಪ್ಪಳ ಹೀಗೆ ಅನೇಕ ರುಚಿಯಾದ ಖಾದ್ಯಗಳನ್ನು ತಯಾರಿಸಬಹುದು. ಹುರುಳಿಯು ದೇಹಕ್ಕೆ ತುಂಬಾ ಉಷ್ಣವಾಗಿದ್ದು, ಅವಶ್ಯಕತೆಗಿಂತ ಮೀರಿ ಉಪಯೋಗಿಸುವುದು ಅಷ್ಟು ಉತ್ತಮವಾಗಿರುವುದಿಲ್ಲ. 

ಇಂದಿನ ಲೇಖನದಲ್ಲಿ ಹುರುಳಿಯ ಪರಿಚಯ, ವೈಜ್ಞಾನಿಕ ವಿಚಾರಗಳು ಹಾಗೂ ಆರೋಗ್ಯಕರ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ಅರಿತಿದ್ದೀರಿ. ಹುರುಳಿಯ ಪ್ರಯೋಜನಗಳನ್ನು ಪಡೆದು ಉತ್ತಮ ಅರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬುದು ನಮ್ಮ ಆಶಯ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

View Comments

Recent Posts

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು. AI Image ಮನೆಮದ್ದುಗಳು ಹಾಗೂ ಕೆಲವು ಪ್ರಾಕೃತಿಕ ಔಷಧಿಗಳ…

1 month ago

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ. AI Image ಬಿಳಿಯ ಮೈ, ಹಸಿರು ಜುಟ್ಟು ಎಂಬಂತೆ ಮೂಲಂಗಿಯು ಕಾಣುತ್ತದೆ. ಬಿಳಿಯ…

1 month ago

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins)

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins). AI Image ಎಲ್ಲರಿಗೂ ಹೆಚ್ಚಾಗಿ…

1 month ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

1 month ago

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು ಮೂಲವ್ಯಾಧಿ ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಆಧುನಿಕ ಯುಗದ ಆಹಾರ ಪದ್ಧತಿ,…

1 month ago

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ – ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ - ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ - AI…

1 month ago

This website uses cookies.