
ಆಧುನಿಕ ಯುಗದಲ್ಲಿ ವಾತಾವರಣದ ಮಾಲಿನ್ಯ, ಶಬ್ದ ಮಾಲಿನ್ಯ, ಹಾಗೂ ನಾವು ಸೇವಿಸುವ ಆಹಾರ ಇವೆಲ್ಲವೂ ಕೂಡ ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ ಪ್ರಥಮವಾಗಿ ಕಾಣಿಸಿಕೊಳ್ಳುವುದು ತಲೆನೋವು. ಬೆಳಿಗ್ಗೆ ಎದ್ದ ತಕ್ಷಣ ಕೆಲವರಿಗೆ ತಲೆನೋವು ಪ್ರಾರಂಭವಾದರೆ, ಇನ್ನೂ ಕೆಲವರಿಗೆ ಬಿಸಿಲಿಗೆ ಹೋದಾಕ್ಷಣ ತಲೆ ನೋವು ಬರುತ್ತದೆ. ಇನ್ನೂ ಕೆಲವರಿಗೆ ಪಿತ್ತದಿಂದ ತಲೆನೋವು ಬಂದರೆ, ಇನ್ನೂ ಕೆಲವರಿಗೆ ಅರ್ಧ ತಲೆ ನೋವು ಮಾತ್ರ ಇರುತ್ತದೆ. ಹೀಗೆ ಅನೇಕ ರೀತಿಯಲ್ಲಿ ತಲೆನೋವುಗಳು ಭಾದಿಸುತ್ತದೆ. ಆ ಸಮಯದಲ್ಲಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸುವ ಬದಲು ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ಉತ್ತಮ ಮನೆಮದ್ದುಗಳನ್ನು ತಯಾರಿಸಿ, ಉಪಯೋಗಿಸುವುದು ಉತ್ತಮವಾಗಿದೆ. ಅಂತಹ ಸುಲಭ ಹಾಗೂ ಪರಿಣಾಮಕಾರಿ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ವಿಶ್ಲೇಷಿಸೋಣ.
ತಲೆನೋವು ನಿವಾರಣೆಗೆ ಉಪಯುಕ್ತವಾಗಿರುವ ಮನೆಮದ್ದುಗಳು
- ವಿಪರೀತ ತಲೆನೋವು ಇದ್ದಾಗ, ಕರ್ಪೂರವನ್ನು ಹಸುವಿನ ತುಪ್ಪದಲ್ಲಿ ತೇಯ್ದು ತಲೆಗೆ ಹಚ್ಚುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಇದು ತಲೆನೋವನ್ನು ತ್ವರಿತವಾಗಿ ನಿವಾರಿಸುತ್ತದೆ.
- ತಲೆನೋವು ಇದ್ದಾಗ ಔಡಲದ ಬೇರು ಹಾಗೂ ಶುಂಠಿ ಇವೆರಡನ್ನು ಮಜ್ಜಿಗೆಯಲ್ಲಿ ತೇಯ್ದು ತಲೆಗೆ ಹಚ್ಚಿಕೊಳ್ಳಬೇಕು. ಇದು ಅತಿ ಉತ್ತಮವಾದ ಮದ್ದಾಗಿದೆ.
- ಉಷ್ಣದ ಕಾರಣದಿಂದ ಬರುವ ತಲೆನೋವಿಗೆ ಒಂದು ಉತ್ತಮ ಪರಿಹಾರವೆಂದರೆ ಸ್ವಲ್ಪ ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿ ಇಡಬೇಕು. ಸ್ವಲ್ಪ ಹೊತ್ತಿನ ಬಳಿಕ ಹುಣಸೆಹಣ್ಣನ್ನು ಕಿವುಚಿ, ಸ್ವಲ್ಪ ಬೆಲ್ಲವನ್ನು ಸೇರಿಸಿ ಕುಡಿಯಬೇಕು. ಇದು ತಲೆನೋವು ನಿವಾರಣೆಗೆ ಉತ್ತಮ ಪರಿಹಾರವನ್ನು ನೀಡುತ್ತದೆ.
( ->ಹುಣಸೆಹಣ್ಣಿನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ನಮ್ಮ ಹಿಂದಿನ ಲೇಖನವನ್ನು ಓದಿರಿ )
- ತಲೆನೋವಿನ ನಿವಾರಣೆಗೆ ಕಾಳುಮೆಣಸು ಕೂಡ ಉತ್ತಮ ಪರಿಹಾರವನ್ನು ನೀಡುತ್ತದೆ. ಕಾಳುಮೆಣಸನ್ನು ಗರಗದ ಸೊಪ್ಪಿನ ರಸದಲ್ಲಿ ಅರೆಯಬೇಕು. ಈ ಅರೆದ ಮಿಶ್ರಣವನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ತಲೆನೋವು ಕಡಿಮೆಯಾಗುತ್ತದೆ.
- ಅತಿಯಾದ ತಲೆನೋವು ಬಹುದಿನಗಳಿಂದ ಇದ್ದರೆ, ಅರ್ಧ ಚಮಚ ಹಸುವಿನ ತುಪ್ಪಕ್ಕೆ ಅರ್ಧ ಚಮಚ ಬೆಲ್ಲವನ್ನು ಬೆರೆಸಿ ಒಂದು ವಾರದ ತನಕ ನಿತ್ಯ ಸೇವಿಸಬೇಕು. ಇದು ಅತಿಯಾದ ತಲೆನೋವನ್ನು ನಿವಾರಿಸಿ, ಉತ್ತಮ ಪರಿಹಾರವನ್ನು ನೀಡುತ್ತದೆ.
- ನುಗ್ಗೆಸೊಪ್ಪನ್ನು ಸ್ವಚ್ಛಗೊಳಿಸಿ, ಜಜ್ಜಿಕೊಂಡು ರಸಹಿಂಡಿಕೊಳ್ಳಬೇಕು. ಈ ನುಗ್ಗೆಸೊಪ್ಪಿನ ರಸದಲ್ಲಿ ಕಾಳುಮೆಣಸನ್ನು ಅರೆದು ಹಣೆಗೆ ಹಚ್ಚಿಕೊಳ್ಳಬೇಕು. ಇದು ಕೂಡ ತಲೆ ನೋವಿಗೆ ಉತ್ತಮ ಮದ್ದಾಗಿದೆ.
- ಅಡುಗೆಗೆ ಬಳಸುವ ಚಕ್ಕೆಯನ್ನು ನಿಂಬೆ ರಸದಲ್ಲಿ ತೇಯ್ದು ಹಣೆಗೆ ಹಚ್ಚುವುದು ಕೂಡ ತಲೆನೋವಿನ ನಿವಾರಣೆಗೆ ಉತ್ತಮ ಪರಿಹಾರವನ್ನು ನೀಡುತ್ತದೆ.
- ಹಸಿ ಶುಂಠಿಯನ್ನು ನೀರಿನಲ್ಲಿ ತೇಯ್ದು ಹಣೆಗೆ ಹಚ್ಚುವುದು ಕೂಡ ತಲೆನೋವಿನ ನಿವಾರಣೆಗೆ ಉತ್ತಮ ಮನೆಮದ್ದಾಗಿದೆ
- ಹಸಿ ಈರುಳ್ಳಿಯ ಸುವಾಸನೆಯನ್ನು ಗ್ರಹಿಸುವುದರಿಂದ ಕೂಡ ತಲೆನೋವು ನಿವಾರಣೆಯಾಗುತ್ತದೆ. ಹಸಿ ಈರುಳ್ಳಿಯ ಸೇವನೆಯು ಕೂಡ ಉತ್ತಮ ಫಲಿತಾಂಶವನ್ನು ನೀಡುತ್ತದೆ.
- ಹಸಿ ಈರುಳ್ಳಿಯನ್ನು ಜಜ್ಜಿಕೊಂಡು, ಆ ಮಿಶ್ರಣವನ್ನು ಹಣೆಯ ಮೇಲೆ ಇಟ್ಟು, ಪಟ್ಟಿ ಕಟ್ಟಿಕೊಳ್ಳುವುದರಿಂದ ಕೂಡ ತಲೆನೋವು ಕಡಿಮೆಯಾಗುತ್ತದೆ. ತಲೆ ನೋವು ವಿಪರೀತವಾಗಿದ್ದರೆ 4-5 ಗಂಟೆಗಳಿಗೊಮ್ಮೆ ಜಜ್ಜಿದ ಈರುಳ್ಳಿಯನ್ನು ಹಣೆಗೆ ಹಚ್ಚಿ, ಪಟ್ಟಿ ಕಟ್ಟಿಕೊಳ್ಳುವುದು ಉತ್ತಮವಾಗಿದೆ.
( ->ಈರುಳ್ಳಿಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನಮ್ಮ ಹಿಂದಿನ ಲೇಖನಗಳನ್ನು ಓದಿರಿ )
- ನಿತ್ಯ ಹಸಿ ಮೂಲಂಗಿಯನ್ನು ತಿನ್ನುವುದರಿಂದ ನಿತ್ಯ ಅಥವಾ ಸಾಮಾನ್ಯವಾಗಿ ಎಡೆಬಿಡದೆ ಬರುವ ತಲೆನೋವನ್ನು ಕಡಿಮೆಗೊಳಿಸುತ್ತದೆ.
( ->ಮೂಲಂಗಿಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನಮ್ಮ ಹಿಂದಿನ ಲೇಖನಗಳನ್ನು ಓದಿರಿ )
- ಗರಗದ ಸೊಪ್ಪನ್ನು ಶುಚಿಗೊಳಿಸಿ, ಜಜ್ಜಿಕೊಂಡು ರಸ ಹಿಂಡಿಕೊಳ್ಳಬೇಕು. ಈ ಗರಗದ ಸೊಪ್ಪಿನ ರಸದೊಡನೆ ಶುದ್ಧ ಎಳ್ಳೆಣ್ಣೆಯನ್ನು ಸೇರಿಸಿಕೊಂಡು, ಸೋಸಿಕೊಳ್ಳಬೇಕು. ಈ ತಯಾರಿಸಿದ ಎಣ್ಣೆಯನ್ನು ತಲೆಗೆ ಹಾಕುವುದರಿಂದ ಪದೇ ಪದೇ ಬರುವ ತಲೆನೋವು ಕಡಿಮೆಯಾಗುತ್ತದೆ. ಇದು ಅತ್ಯಂತ ಪರಿಣಾಮಕಾರಿಯಾದಂತಹ ಮನೆಮದ್ದಾಗಿದೆ.
- ಒಂದು ಲೋಟ ನೀರನ್ನು ಕುದಿಸಿಕೊಂಡು, ಕಾಫಿ ಪುಡಿಯನ್ನು ಸೇರಿಸಿಕೊಳ್ಳಬೇಕು. ನಂತರ ಕೊನೆಯಲ್ಲಿ ಲಿಂಬೆ ರಸವನ್ನು ಹಿಂಡಿಕೊಂಡು ಕುಡಿಯಬೇಕು. ಇದು ಕೂಡ ತಲೆನೋವಿಗೆ ಉತ್ತಮ ಪರಿಹಾರವನ್ನು ನೀಡುತ್ತದೆ.
- ನಿಂಬೆಹಣ್ಣಿನ ಹೋಳನ್ನು ಹಣೆಗೆ ಉಜ್ಜಿಕೊಳ್ಳುವುದರಿಂದ ತಲೆನೋವು ಕ್ರಮೇಣ ಕಡಿಮೆಯಾಗುತ್ತದೆ.
( ಲಿಂಬು ಹಣ್ಣಿನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನಮ್ಮ ಹಿಂದಿನ ಲೇಖನಗಳನ್ನು ಓದಿರಿ )
- ಪಿತ್ತದ ಕಾರಣದಿಂದ ಉಂಟಾಗುವ ತಲೆನೋವು, ವಾಕರಿಕೆ, ವಾಂತಿ ಇವೆಲ್ಲ ಸಮಸ್ಯೆಗಳು ಎದುರಾಗುವ ಸಂದರ್ಭದಲ್ಲಿ ಬಿಳಿ ದ್ರಾಕ್ಷಿಯನ್ನು ರುಬ್ಬಿಕೊಂಡು ಅದರ ರಸವನ್ನು ಸೋಸಿಕೊಳ್ಳಬೇಕು. ಈ ಬಿಳಿ ದ್ರಾಕ್ಷಿಯ ರಸದೊಂದಿಗೆ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಪಿತ್ತದ ತಲೆನೋವು ತ್ವರಿತವಾಗಿ ವಾಸಿಯಾಗುತ್ತದೆ.
- ಬೇಸಿಗೆಯಲ್ಲಿನ ಬಿಸಿಲನ ತಾಪಕ್ಕೆ ಬರುವ ತಲೆನೋವನ್ನು ನಿವಾರಿಸಲು ½ ಕಪ್ ತೆಂಗಿನ ಎಣ್ಣೆಗೆ ಒಂದು ಇಡೀ ನಿಂಬೆರಸವನ್ನು ಹಿಂಡಿ ಕಲಸಿ, ತಲೆಗೆ ಚೆನ್ನಾಗಿ ಹಚ್ಚಿ, ಮಸಾಜ್ ಮಾಡಿ, ಸ್ವಲ್ಪ ಹೊತ್ತಿನ ನಂತರ ತಲೆಯನ್ನು ಶುಚಿಗೊಳಿಸಬೇಕು. ಇದು ತಲೆಯನ್ನು ತಂಪಾಗಿಸಲು ಸಹಾಯಕವಾಗಿದೆ.
- ತುಳಸಿ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆ ನೋವು ಎಂದಿಗೂ ಬರುವುದಿಲ್ಲ. ಇಲ್ಲವೇ ತುಳಸಿ ಎಲೆಗಳನ್ನು ಶುಚಿಮಾಡಿಕೊಂಡು, ಜಜ್ಜಿಕೊಂಡು ರಸ ಹಿಂಡಿಕೊಳ್ಳಬೇಕು. ಈ ರಸವನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ, ತಲೆಗೆ ಹಚ್ಚಿಕೊಳ್ಳಬೇಕು. ಇದು ಪದೇ ಪದೇ ಬರುವ ತಲೆನೋವಿಗೆ ಉತ್ತಮ ಮದ್ದಾಗಿದೆ.
- ತುಳಸಿ ಸೊಪ್ಪನ್ನು ಶುಚಿಗೊಳಿಸಿಕೊಂಡು, ಜಜ್ಜಿ ರಸ ಹಿಂಡಿಕೊಳ್ಳಬೇಕು. ಈ ತುಳಸಿ ರಸದಲ್ಲಿ ಏಲಕ್ಕಿಯನ್ನು ಅರೆದು ಹಣೆಯ ಭಾಗಕ್ಕೆ ಹಚ್ಚುವುದರಿಂದ ತಲೆನೋವು ಕಡಿಮೆಯಾಗುತ್ತದೆ.
( ->ತುಳಸಿ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನಮ್ಮ ಹಿಂದಿನ ಲೇಖನಗಳನ್ನು ಓದಿರಿ )
- ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ರಸ ಹಿಂಡಿಕೊಳ್ಳಬೇಕು. ಈ ರಸವನ್ನು 2 ಹನಿ ಮೂಗಿನಲ್ಲಿ ಹಾಕಿಕೊಳ್ಳುವುದರಿಂದ ತಲೆನೋವು ಕಡಿಮೆಯಾಗುತ್ತದೆ.
- ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿಕೊಂಡು ರಸವನ್ನು ಹಿಂಡಿಕೊಳ್ಳಬೇಕು. ಹಾಗೆಯೇ ಹಸಿಶುಂಠಿಯನ್ನು ಜಜ್ಜಿಕೊಂಡು ರಸವನ್ನು ಹಿಂಡಿಕೊಳ್ಳಬೇಕು. ಈ ಎರಡು ರಸವನ್ನು ಮಿಶ್ರಣ ಮಾಡಿ, ಹತ್ತಿಯಲ್ಲಿ ಅದ್ದಿ ಹಣೆಗೆ ಹಚ್ಚಿಕೊಳ್ಳಬೇಕು. ಇದು ಅತಿ ಉತ್ತಮವಾದ ಮನೆಮದ್ದಾಗಿದೆ.
( ->ಬೆಳ್ಳುಳ್ಳಿ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನಮ್ಮ ಹಿಂದಿನ ಲೇಖನಗಳನ್ನು ಓದಿರಿ )
- ತಲೆನೋವಿಗೆ ಹಸುವಿನ ತುಪ್ಪದಿಂದ ಅನೇಕ ಪರಿಹಾರಗಳಿದ್ದು, ಒಂದು ಚಮಚ ಹಸುವಿನ ತುಪ್ಪವನ್ನು, ಒಂದು ಚಮಚ ಗಟ್ಟಿ ಮೊಸರಿನಲ್ಲಿ ಬೆರೆಸಿ ಹಣೆಗೆ ಹಚ್ಚಿಕೊಳ್ಳಬೇಕು, ಇದರಿಂದ ತಲೆನೋವು ಕಡಿಮೆಯಾಗುತ್ತದೆ.
- ಹಸುವಿನ ಹಾಲಿನಿಂದ ತಯಾರಿಸಿದ ಶುದ್ಧ ತುಪ್ಪವನ್ನು ನೆತ್ತಿಗೆ ಹಾಕಿ ತಿಕ್ಕುವುದರಿಂದ ತಲೆನೋವು ಮಾಯವಾಗುತ್ತದೆ.
- ಹಸುವಿನ ಹಾಲಿಗೆ ಚಿಟಿಕೆ ಅರಿಶಿಣ, ಏಲಕ್ಕಿ ಪುಡಿ ಹಾಗೂ ತುಪ್ಪವನ್ನು ಬೆರೆಸಿ ಕುಡಿಯುವುದರಿಂದ ತಲೆನೋವು ಕ್ರಮೇಣ ಕಡಿಮೆಯಾಗುತ್ತದೆ. ಗೋವಿನ ಹಾಲು ಆರೋಗ್ಯಕ್ಕೆ ಅತಿ ಉತ್ತಮವಾಗಿದೆ.
- ಕಪ್ಪು ಜೀರಿಗೆಯನ್ನು ಬಿಸಿ ನೀರಿನಲ್ಲಿ ಅರೆಯಬೇಕು. ಈ ಮಿಶ್ರಣವನ್ನು ಹಣೆಗೆ ಲೇಪಿಸುವುದರಿಂದ ತಲೆ ನೋವು ಕಡಿಮೆಯಾಗುತ್ತದೆ.
- ಶ್ರೀಗಂಧ ಹಾಗೂ ಅಷ್ಟಗಂಧವನ್ನು ಹಸುವಿನ ಹಾಲಿನಲ್ಲಿ ತೇಯ್ದು, ಹಣೆಗೆ ದಪ್ಪವಾಗಿ ಲೇಪಿಸಿಕೊಳ್ಳಬೇಕು. ಇದು ತಲೆನೋವಿಗೆ ಉತ್ತಮವಾಗಿದ್ದು, ತ್ವರಿತವಾಗಿ ಪರಿಹಾರವನ್ನು ನೀಡುತ್ತದೆ. ಹೀಗೆ ಹಣೆಗೆ ಹಾಗೂ ಸ್ವಲ್ಪ ನೆತ್ತಿಯ ಭಾಗಕ್ಕೆ ಕೂಡ ಹಚ್ಚಿಕೊಂಡು ಮಲಗಬೇಕು. ಅಲ್ಲಿಗೆ ತಲೆನೋವು ನಿವಾರಣೆಯಾಗುತ್ತದೆ.
ಅರ್ಧ ತಲೆನೋವು ನಿವಾರಣೆಗೆ ಉತ್ತಮವಾಗಿರುವ ಕೆಲವು ಉತ್ತಮ ಮನೆಮದ್ದುಗಳು
- ನುಗ್ಗೆ ಸೊಪ್ಪನ್ನು ಶುಚಿಗೊಳಿಸಿ, ಜಜ್ಜಿಕೊಂಡು ರಸ ತೆಗೆದುಕೊಳ್ಳಬೇಕು. ಬಲ ಭಾಗದ ತಲೆನೋವಿಗೆ ಎಡ ಕಿವಿಗೆ, ಎಡ ಭಾಗದ ತಲೆನೋವಿಗೆ ಬಲ ಕಿವಿಗೆ 4 ಹನಿ ನುಗ್ಗೆ ಸೊಪ್ಪಿನ ರಸವನ್ನು ಹಾಕಬೇಕು. ಹೀಗೆ ದಿನಕ್ಕೆ ಒಂದು ಸಲದಂತೆ ಮೂರು ದಿನ ಮಾಡಬೇಕು. ಇದರಿಂದ ಅರ್ಧ ತಲೆನೋವಿನ ಸಮಸ್ಯೆ ಕಡಿಮೆಯಾಗುತ್ತದೆ.
- ಹಸಿ ಶುಂಠಿಯನ್ನು ಜಜ್ಜಿಕೊಂಡು ರಸವನ್ನು ಹಿಂಡಿಕೊಳ್ಳಬೇಕು. ಹಾಗೆಯೇ ನುಗ್ಗೆಸೊಪ್ಪನ್ನು ಕೂಡ ಜಜ್ಜಿಕೊಂಡು ರಸವನ್ನು ಹಿಂಡಿಕೊಳ್ಳಬೇಕು. ಹಸಿ ಶುಂಠಿಯ ರಸ ಹಾಗೂ ನುಗ್ಗೆಸೊಪ್ಪಿನ ರಸವನ್ನು ಸಮಪ್ರಮಾಣದಲ್ಲಿ ಬೆರೆಸಿ, ತಲೆನೋವು ಇರುವ ಭಾಗದ ವಿರುದ್ಧ ಕಿವಿಗೆ 5 ಹನಿ ಹಾಕಬೇಕು. ಇದನ್ನು ಮೂರು ದಿನಗಳ ಕಾಲ ದಿನಕ್ಕೆ ಒಮ್ಮೆ ಮಾಡಬೇಕು. ಇದು ಅರೆ ತಲೆನೋವಿಗೆ ಉತ್ತಮ ಮದ್ದಾಗಿದೆ.
ತಲೆನೋವಿನ ನಿವಾರಣೆಗೆ ಉಪಯುಕ್ತವಾಗಿರುವ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ಇಂದು ನಾವು ಅರಿತಿದ್ದೇವೆ. ಹಾಗೆಯೇ ಇದರ ಜೊತೆಗೆ ಸ್ವಲ್ಪ ಪ್ರಾಣಾಯಾಮ, ಯೋಗ, ದೈಹಿಕ ಚಟುವಟಿಕೆಗಳು ಹಾಗೂ ಪೋಷಕಾಂಶಯುಕ್ತ ಆಹಾರ ಸೇವನೆ ಇವೆಲ್ಲವು ಅವಶ್ಯಕವಾಗಿದೆ. ಅಧಿಕ ಸಮಯ ದೂರದರ್ಶನ, ಮೊಬೈಲ್ ಹಾಗೂ ಕಂಪ್ಯೂಟರ್ ಗಳನ್ನು ಉಪಯೋಗಿಸುವುದು ಕೂಡ ತಲೆನೋವಿಗೆ ಕಾರಣವಾಗಿದೆ. ಒಂದು ದಿನಕ್ಕೆ ಸ್ವಲ್ಪ ಸಮಯ ಪ್ರಕೃತಿಯ ಹಸಿರನ್ನು ನೋಡಿ, ಶುದ್ಧ ಗಾಳಿಯನ್ನು ಆಸ್ವಾದಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ, ಹಾಗೆಯೇ ಚಿಂತೆಗಳಿಂದ ಬರಬಹುದಾದ ತಲೆನೋವು ಕೂಡ ಕಡಿಮೆಯಾಗುತ್ತದೆ. ಹಾಗೆಯೇ ಜಾಸ್ತಿ ನೀರನ್ನು ಕುಡಿಯುವುದು ಕೂಡ ಅವಶ್ಯಕವಾಗಿದೆ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೂ ಕೂಡ ತಲೆನೋವು, ಸುಸ್ತು ಕೂಡ ಪ್ರಾರಂಭವಾಗುತ್ತದೆ. ನಮ್ಮ ಆರೋಗ್ಯ ನಮ್ಮ ಆಹಾರದ ಸೇವನೆಯ ಮೇಲೆ ಅವಲಂಬಿತವಾಗಿದೆ. ಇಂದಿನ ಲೇಖನದಲ್ಲಿ ವಿವರಿಸಲಾದ ಮನೆಮದ್ದುಗಳ ಪ್ರಯೋಜನಗಳನ್ನು ಪಡೆದುಕೊಂಡು ತಲೆನೋವಿನ ಸಮಸ್ಯೆಯನ್ನು ದೂರಗೊಳಿಸಿರಿ, ಎಂಬುದು ಈ ಲೇಖನದ ಉದ್ದೇಶವಾಗಿದೆ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.
Pingback: ಬೆಲ್ಲ: ಆರೋಗ್ಯಕರ ಮನೆಮದ್ದುಗಳು ಮತ್ತು ಪ್ರಯೋಜನಗಳು (Best Health Benefits of Jaggery) - ಗೃಹಸ್ನೇಹಿ - ನಿಸರ್ಗದ ಮಡಿಲಲ್ಲಿ ಅರಳಿದ ಆ