
ಹಸಿ ತರಕಾರಿಗಳು, ಕಾಳು ಬೇಳೆಗಳು ಅರೋಗ್ಯಕ್ಕೆ ತುಂಬಾ ಹಿತಕರವಾಗಿದೆ. ಅನೇಕ ರೋಗ ರುಜಿನಗಳ ವಿರುದ್ಧ ಹೊರಡಲು ನಮಗೆ ಬೇಕಾದ ರೋಗ ನಿರೋಧಕ ಶಕ್ತಿಯನ್ನು ನೀಡುವ ಅನೇಕ ಖನಿಜದ ಅಂಶಗಳು, ವಿಟಮಿನ್ ಗಳು ಹೇರಳವಾಗಿ ನಮಗೆ ತರಕಾರಿ, ಕಾಳುಗಳಲ್ಲಿ ಸಿಗುತ್ತದೆ. ಅಂತಹ ಹಸಿ ತರಕಾರಿ, ಕಾಳುಗಳ ವಿವಿಧ ಸಲಾಡ್ ಗಳು ಹಾಗೂ ಕೋಸಂಬರಿಗಳನ್ನು ತಯಾರಿಸುವ ವಿಧಾನಗಳನ್ನು ಇಂದಿನ ಲೇಖನದಲ್ಲಿ ವಿಶ್ಲೇಷಿಸೋಣ.
ಬೀಟ್ ರೂಟ್ ಸಿಹಿ ಸಲಾಡ್
ಬೇಕಾಗುವ ಸಾಮಗ್ರಿಗಳು
- ಬೀಟ್ ರೂಟ್ ತುರಿದದ್ದು 1 ಕಪ್
- ಬಾಳೆ ಹಣ್ಣು 1
- ಕಿತ್ತಳೆ ಹಣ್ಣು 3 ಎಸಳು
- ಕಾಯಿ ತುರಿ ¼ ಕಪ್
- ಬೆಲ್ಲದ ಪುಡಿ ½ ಕಪ್
- ಜೇನುತುಪ್ಪ 1 ಚಮಚ
- ಏಲಕ್ಕಿ ಪುಡಿ ಸ್ವಲ್ಪ
ಮಾಡುವ ವಿಧಾನ
ಒಂದು ಪಾತ್ರೆಗೆ ತುರಿದ ಬೀಟ್ ರೂಟ್, ಸಣ್ಣಗೆ ಕತ್ತರಿಸಿದ ಬಾಳೆಹಣ್ಣಿನ ಹೋಳುಗಳು, ಕಿತ್ತಳೆ ಹಣ್ಣನ್ನು ಬಿಡಿಸಿ ಸೇರಿಸಬೇಕು. ನಂತರ ತೆಂಗಿನ ತುರಿಯನ್ನು ಸೇರಿಸಬೇಕು. ಬೆಲ್ಲವನ್ನು ಮತ್ತು ಜೇನುತುಪ್ಪವನ್ನು ಸೇರಿಸಿ, ಮೇಲಿಂದ ಏಲಕ್ಕಿ ಪುಡಿಯನ್ನು ಹಾಕಿ ಕಲಸಿದರೆ ಬೀಟ್ ರೂಟ್ ಸಲಾಡ್ ಸವಿಯಲು ಸಿದ್ದವಾಗುತ್ತದೆ
ಸೇವನೆಯ ಕೆಲವು ಪ್ರಯೋಜನಗಳು
- ವಿಟಮಿನ್ ಎ, ಬಿ, ಸಿ ಗಳು ಇದ್ದು, ಮ್ಯಾಂಗನೀಸ್, ಪೊಟ್ಯಾಸಿಯಂ, ನಿಯಾಸಿನ್, ರೈಬೋಫ್ಲೇವಿನ್, ಕಬ್ಬಿಣ ಇನ್ನೂ ಅನೇಕ ಖನಿಜಗಳು ಬೀಟ್ ರೂಟ್ ನಲ್ಲಿದೆ.
- ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
- ರಕ್ತದ ಒತ್ತಡವನ್ನು ನಿಯಂತ್ರಿಸುವ ಶಕ್ತಿಯನ್ನು ಒದಗಿಸುತ್ತದೆ.
ಬೆಂಡೆ ಮೊಸರು ಸಲಾಡ್
ಬೇಕಾಗುವ ಸಾಮಗ್ರಿಗಳು
- ಎಳೆಯ ಬೆಂಡೆಕಾಯಿ 1 ಕಪ್
- ಗಟ್ಟಿ ಮೊಸರು 1 ಕಪ್
- ತೆಂಗಿನ ತುರಿ 1 ಕಪ್
- ಸಕ್ಕರೆ 1 ಚಮಚ
- ಜೀರಿಗೆ ಪುಡಿ ½ ಚಮಚ
- ಕರಿ ಮೆಣಸಿನ ಪುಡಿ ½ ಚಮಚ
- ಖಾರದ ಪುಡಿ ½ ಚಮಚ
- ಆಮ್ ಚೂರ್ ಪುಡಿ ½ ಚಮಚ
- ಗರಂ ಮಸಾಲಾ ಪುಡಿ ½ ಚಮಚ
- ಒಣ ಶುಂಠಿ ಪುಡಿ ¼ ಚಮಚ
- ಕೊತ್ತಂಬರಿ ಸೊಪ್ಪು
- ಎಣ್ಣೆ
- ಉಪ್ಪು
ಮಾಡುವ ವಿಧಾನ
ಬೆಂಡೆಕಾಯಿಯನ್ನು ತೊಳೆದು ಚೆನ್ನಾಗಿ ಒರೆಸಿಕೊಳ್ಳಬೇಕು. ನಂತರ ಬೆಂಡೆಕಾಯಿಯನ್ನು ನಾಲ್ಕು ಭಾಗವಾಗಿ ಸೀಳಿ, ಕತ್ತರಿಸಿಕೊಳ್ಳಬೇಕು. ಕತ್ತರಿಸಿಕೊಂಡ ಬೆಂಡೆಕಾಯಿಯನ್ನು ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಹುರಿದುಕೊಂಡು, ನಂತರ ಮೇಲೆ ತಿಳಿಸಿದ ಪ್ರಮಾಣದಲ್ಲಿ ಜೀರಿಗೆ ಪುಡಿ, ಕರಿ ಮೆಣಸಿನ ಪುಡಿ, ಖಾರದ ಪುಡಿ, ಆಮ್ ಚೂರ್ ಪುಡಿ, ಗರಂ ಮಸಾಲಾ ಪುಡಿ, ಒಣ ಶುಂಠಿ ಪುಡಿ ಎಲ್ಲವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಮತ್ತೊಂದೆಡೆ ತೆಂಗಿನ ತುರಿಯನ್ನು ರುಬ್ಬಿಕೊಂಡು, ಅದರ ಹಾಲನ್ನು ತೆಗೆಯಬೇಕು. ಒಂದು ಕಪ್ ಗಟ್ಟಿ ಮೊಸರಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಚಮಚ ಸಕ್ಕರೆ ಹಾಕಿ ಕಲಸಬೇಕು. ಅನಂತರ ತೆಂಗಿನ ಹಾಲು ಹಾಗೂ ಕೊತ್ತಂಬರಿ ಸೊಪ್ಪನ್ನು ಬೆರೆಸಿ ಸಲಾಡ್ ಅನ್ನು ತಯಾರಿಸಬೇಕು. ಹುರಿದ ಬೆಂಡೆ ಮಿಶ್ರಣದ ಮೇಲೆ ಈಗ ತಯಾರಿಸಿದ ಸಲಾಡ್ ಅನ್ನು ಹಾಕಿ ಕಲಸಿದರೆ ಬೆಂಡೆ ಮೊಸರು ಸಲಾಡ್ ಸವಿಯಲು ಸಿದ್ದವಾಗುತ್ತದೆ.
ಸೇವನೆಯ ಕೆಲವು ಪ್ರಯೋಜನಗಳು
- ಕಾಮಾಲೆ ರೋಗಕ್ಕೆ ಬೆಂಡೆಕಾಯಿಯ ರಸ ಉತ್ತಮ ಪರಿಹಾರವನ್ನು ನೀಡುತ್ತದೆ.
- ಹೃದಯದ ಆರೋಗ್ಯಕ್ಕೆ ಉತ್ತಮವಾಗಿದ್ದು, ಆರೋಗ್ಯ ವರ್ಧಕವಾಗಿದೆ.
- ಬೆಂಡೆ ಮೊಸರು ಸಲಾಡ್ ಒಂದು ವಾರ ನಿರಂತವಾಗಿ ತಿನ್ನುವುದು, ಹೊಟ್ಟೆ ಉರಿ ಇಂತಹ ಸಮಸ್ಯೆಗಳಿಗೆ ಉತ್ತಮವಾಗಿದೆ.
- ರಕ್ತ ಹೀನತೆಯ ಸಮಸ್ಯೆಗಳು ಇದ್ದರೆ ಇದು ಉತ್ತಮ ಆಹಾರವಾಗಿದೆ.
- ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಉತ್ತಮವಾಗಿದೆ. ಮಧುಮೇಹವನ್ನು ನಿಯಂತ್ರಿಸುತ್ತದೆ.
- ಗರ್ಭಿಣಿ ಸ್ತ್ರೀಯರ ಅರೋಗ್ಯಕ್ಕೂ ಬಲು ಉತ್ತಮವಾಗಿದೆ.
- ಕಣ್ಣಿನ ಉತ್ತಮ ಅರೋಗ್ಯಕ್ಕೂ ಇದು ಪೂರಕವಾಗಿದೆ.
ದೊಣ್ಣೆ ಮೆಣಸಿನಕಾಯಿ ಮೊಸರು ಸಲಾಡ್
ಬೇಕಾಗುವ ಸಾಮಗ್ರಿಗಳು
- ದೊಣ್ಣೆ ಮೆಣಸಿನಕಾಯಿ 1
- ಹೀರೆಕಾಯಿ 1
- ಗಟ್ಟಿ ಮೊಸರು 1 ಕಪ್
- ಎಣ್ಣೆ 4 ಚಮಚ
- ಕೊತ್ತಂಬರಿ ಸೊಪ್ಪು
- ಎಣ್ಣೆ
- ಹಸಿಮೆಣಸು 2
- ಸಕ್ಕರೆ ½ ಚಮಚ
- ಸಾಸಿವೆ ¼ ಚಮಚ
- ಜೇರಿಗೆ ¼ ಚಮಚ
- ತೆಂಗಿನ ಕಾಯಿ ತುರಿ 2 ಚಮಚ
- ಹಿಂಗು ಸ್ವಲ್ಪ
- ಉಪ್ಪು
ಮಾಡುವ ವಿಧಾನ
ಹಿರೇಕಾಯಿಯನ್ನು ಹೋಳುಗಳಾಗಿ ಕತ್ತರಿಸಿ ಹಸಿ ಮೆಣಸಿನ ಜೊತೆಯಲ್ಲಿ ಬೇಯಿಸಿಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ಮೇಲೆ ಹೇಳಿದ ಪ್ರಮಾಣದಲ್ಲಿ ಕಾಯಿತುರಿ, ಸಕ್ಕರೆ, ಸಾಸಿವೆ, ಜೀರಿಗೆ, ಬೇಯಿಸಿದ ಹಿರೇಕಾಯಿ ಹಾಗೂ ಹಸಿ ಮೆಣಸಿನ್ನು ಸ್ವಲ್ಪ ಹಿಂಗಿನೊಂದಿಗೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಮತ್ತೊಂದೆಡೆ ದೊಣ್ಣೆ ಮೆಣಸಿನಕಾಯಿಯನ್ನು ಉದ್ದಗೆ ಹೆಚ್ಚಿಕೊಂಡು ಸ್ವಲ್ಪ ಎಣ್ಣೆಯಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ಈಗ ರುಬ್ಬಿದ ಮಿಶ್ರಣವನ್ನು ಸೇರಿಸಬೇಕು. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕೈ ಆಡಿಸಬೇಕು. ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ, ಓಲೆ ಅರಿಸಬೇಕು. ಸ್ವಲ್ಪ ಬಿಸಿ ಆರಿದ ನಂತರ ಗಟ್ಟಿ ಮೊಸರನ್ನು ಸೇರಿಸಿ ಕಲಸಬೇಕು. ಅಲ್ಲಿಗೆ ದೊಣ್ಣೆ ಮೆಣಸು ಮೊಸರು ಸಲಾಡ್ ಸವಿಯಲು ಸಿದ್ದವಾಗುತ್ತದೆ.
ಸೇವನೆಯ ಕೆಲವು ಪ್ರಯೋಜನಗಳು
- ಹೊಟ್ಟೆಯಲ್ಲಿ ಆಗುವ ಒಳ ಹುಣ್ಣಗಳು ಆಗದಂತೆ ತಡೆಯುತ್ತದೆ.
- ಕೆಲವೊಮ್ಮೆ ಮುಗಿನಿಂದ ರಕ್ತ ಸೋರುತ್ತದೆ. ಈ ಮುಗಿನಿಂದ ರಕ್ತ ಸೋರುವುದನ್ನು ತಡೆಯುತ್ತದೆ.
- ದೇಹದಲ್ಲಿನ ಅಧಿಕ ಕೊಬ್ಬಿನ ಅಂಶವನ್ನು ಕರಗಿಸಲು ಇದು ಉತ್ತಮವಾಗಿದೆ.
- ಅಧಿಕ ನಾರಿನ ಅಂಶವುಳ್ಳ ಆಹಾರ ಇದಾಗಿದೆ.
- ವಿಟಮಿನ್ ಎ, ಬಿ, ಸಿ, ಜಿ, ಕೆ ಜೊತೆಗೆ ಕಬ್ಬಿಣ, ಮೆಗ್ನಿಶಿಯಂ, ಪೊಟ್ಯಾಸಿಯಂ ಹಾಗೂ ನಾರಿನ ಅಂಶಗಳು ಜಾಸ್ತಿ ಪ್ರಮಾಣದಲ್ಲಿ ಲಭ್ಯವಿದೆ.
- ಗಂಟಲು ಕೆರೆತಾವಾದಾಗ ಸಹ ಇದು ಉತ್ತಮ ಆಹಾರವಾಗಿದೆ.
- ರಕ್ತದ ಒತ್ತಡದ ನಿಯಂತ್ರಣಕ್ಕೆ ಇದು ಉತ್ತಮ ಸಲಾಡ್ ಆಗಿದೆ. ಮಾನಸಿಕ ಒತ್ತಡವನ್ನು ಕೂಡ ನಿಯಂತ್ರಿಸುತ್ತದೆ.
- ಉತ್ತಮ ಹೃದಯದ ಕಾರ್ಯದಲ್ಲಿ ಕೂಡ ಸಹಾಯಕವಾಗಿದೆ. ಹೃದಯದ ಬಡಿತದಲ್ಲಿ ಏರುಪೇರಾಗದಂತೆ ನೋಡಿಕೊಳ್ಳುತ್ತದೆ.
- ಇನ್ನೂ ಅಧಿಕ ಆರೋಗ್ಯ ವರ್ಧಕ ಗುಣಗಳನ್ನು ಹೊಂದಿದ್ದು, ಇದರ ಸೇವನೆಯೂ ಅತಿ ಉತ್ತಮವಾಗಿದೆ.
ಬ್ರೊಕೋಲಿ ಸಲಾಡ್
ಬೇಕಾಗುವ ಸಾಮಗ್ರಿಗಳು
- ಬ್ರೊಕೋಲಿ 1
- ಬಟಾಟೆ 1
- ಕ್ಯಾರೆಟ್ 1
- ಟೊಮೆಟೊ 1
- ಪುದಿನ ಎಲೆಗಳು ಸ್ವಲ್ಪ
- ಬೆಣ್ಣೆ 2 ಚಮಚ
- ಎಣ್ಣೆ
- ಮೆಣಸಿನ ಪುಡಿ ( ಖಾರಕ್ಕೆ ಅನುಗುಣವಾಗಿ )
- ಹಸಿ ಮೆಣಸು 1
- ಕೊತ್ತಂಬರಿ ಸೊಪ್ಪು
- ಸಕ್ಕರೆ 1 ಚಮಚ
- ಲಿಂಬೆ ರಸ
- ಉಪ್ಪು
ಮಾಡುವ ವಿಧಾನ
ಕ್ಯಾರೆಟ್ ಹಾಗೂ ಆಲೂಗಡ್ಡೆಯನ್ನು ಸಣ್ಣಗೆ ಹೆಚ್ಚಿಕೊಂಡು ಬೇಯಿಸಿಕೊಳ್ಳಬೇಕು. ಇವೆರಡು ಬೆಂದ ಮೇಲೆ ಸಣ್ಣಗೆ ಹೆಚ್ಚಿಕೊಂಡ ಬ್ರೊಕೋಲಿಯನ್ನು ಕೂಡ ಸೇರಿಸಿಕೊಂಡು ಸ್ವಲ್ಪ ಬೇಯಿಸಬೇಕು. ಇನ್ನೊಂದು ಕಡೆಯಲ್ಲಿ ಮಿಕ್ಸಿ ಜಾರಿಗೆ ಟೊಮೇಟೊ, ಪುದೀನ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಸಕ್ಕರೆ, ನಿಂಬೆ ರಸ, ಮೆಣಸಿನ ಪುಡಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ಒಂದು ಬಾಣಲೆಗೆ ಎಣ್ಣೆ ಹಾಗೂ ಬೆಣ್ಣೆಯನ್ನು ಸೇರಿಸಿ, ಕಾದ ನಂತರ ಬೇಯಿಸಿದ ತರಕಾರಿಯನ್ನು ಸೇರಿಸಿ, ರುಬ್ಬಿದ ಮಿಶ್ರಣವನ್ನು ಸೇರಿಸಬೇಕು. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕೈ ಆಡಿಸಿ ಓಲೆ ಆರಿಸಬೇಕು. ಅಲ್ಲಿಗೆ ಬ್ರೊಕೋಲಿ ಸಲಾಡ್ ಸವಿಯಲು ಸಿದ್ದವಾಗುತ್ತದೆ.
ಸೇವನೆಯ ಕೆಲವು ಪ್ರಯೋಜನಗಳು
- ವಿಟಮಿನ್ ಸಿ ಮತ್ತು ಕೆ ಒಳಗೊಂಡಿದ್ದು, ಝಿಂಕ್, ಫೋಲಿಕ್ ಆಸಿಡ್, ಫೈಬರ್, ಪೊಟ್ಯಾಸಿಯಂ ಅಂಶಗಳು ಹೇರಳವಾಗಿರುತ್ತದೆ.
- ಸ್ತನಗಳ ಕ್ಯಾನರ್ ಗಳನ್ನು ಕೂಡ ಕಡಿಮೆ ಮಾಡಿಸುತ್ತದೆ.
- ಅನೇಕ ಅಲರ್ಜಿ ಸಮಸ್ಯೆಗಳನ್ನು ಕೂಡ ತ್ವರಿತವಾಗಿ ಕಡಿಮೆ ಮಾಡಿಸುತ್ತದೆ.
- ಹೃದಯದ ಆರೋಗ್ಯಕ್ಕೆ ಅತಿ ಉತ್ತಮವಾಗಿದ್ದು, ರಕ್ತದ ಒತ್ತಡವನ್ನು ಕೂಡ ನಿಯಂತ್ರಣದಲ್ಲಿರುತ್ತದೆ.
- ಮೂಳೆಗಳ ಆರೋಗ್ಯಕ್ಕೆ ಕೂಡ ಬ್ರೊಕೋಲಿ ಸಲಾಡ್ ಅತಿ ಉತ್ತಮವಾಗಿದೆ.
- ಅಧಿಕ ಕ್ಯಾಲ್ಸಿಯಂ ವಿದ್ದು ಅತಿ ಉತ್ತಮ ಆಹಾರವಾಗಿದೆ.
- ಸಕ್ಕರೆ ಖಾಯಿಲೆ ಇರುವವರಿಗೂ ಇದು ಉತ್ತಮ ಆಹಾರವಾಗಿದೆ.
ತರಕಾರಿಗಳ ಕೋಸಂಬರಿ
ಬೇಕಾಗುವ ಸಾಮಗ್ರಿಗಳು
- ಬಿಳಿ ಈರುಳ್ಳಿ 1
- ಕ್ಯಾರೆಟ್ 1
- ನವಿಲು ಕೋಸು 1
- ಸೌತೆಕಾಯಿ 1
- ಮಾವಿನ ಕಾಯಿ ½
- ದೊಣ್ಣೆ ಮೆಣಸಿನಕಾಯಿ ½
- ಹೆಸರು ಬೇಳೆ ½ ಕಪ್
- ಸ್ವೀಟ್ ಕಾರ್ನ್ ½ ಕಪ್
- ಕೊತ್ತಂಬರಿ ಸೊಪ್ಪು
- ನಿಂಬೆ ರಸ
- ಹಿಂಗು ಸ್ವಲ್ಪ
- ಕಾಯಿ ತುರಿ ½ ಕಪ್
- ಹಸಿ ಮೆಣಸಿನಕಾಯಿ 1
- ಶುಂಠಿ 1 ಇಂಚು
- ಸಾಸಿವೆ ½ ಚಮಚ
- ಎಣ್ಣೆ
- ಉಪ್ಪು
ಮಾಡುವ ವಿಧಾನ
ಉದ್ದುದ್ದಕ್ಕೆ ಸೀಳಿದ ಬಿಳಿ ಈರುಳ್ಳಿ, ದೊಣ್ಣೆ ಮೆಣಸಿನಕಾಯಿ, ತುರಿದ ಕ್ಯಾರೆಟ್, ಮಾವಿನ ಕಾಯಿ, ನವಿಲು ಕೋಸು, ಸಣ್ಣಗೇ ಹೆಚ್ಚಿದ ಸೌತೆಕಾಯಿ ಎಲ್ಲವನ್ನು ಸೇರಿಸಿ ಕಲಸಬೇಕು. ನೆನಸಿದ ಹೆಸರು ಬೇಳೆ, ಸ್ವೀಟ್ ಕಾರ್ನ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕಾಯಿ ತುರಿ, ನಿಂಬೆ ರಸ, ಹಿಂಗು, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ಶುಂಠಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಒಟ್ಟಿಗೆ ಕಲಸಬೇಕು. ಮತ್ತೊಂದೆಡೆ ಎಣ್ಣೆಯಲ್ಲಿ ಸಾಸಿವೆಯನ್ನು ಹಾಕಿ ಒಗ್ಗರಣೆ ಕೊಟ್ಟರೆ ತರಕಾರಿಗಳ ಕೋಸಂಬರಿ ಸಿದ್ದವಾಗುತ್ತದೆ.
ಸೇವನೆಯ ಕೆಲವು ಪ್ರಯೋಜನಗಳು
- ಜೀರ್ಣಕ್ರಿಯೆಗೆ ಅತಿ ಉತ್ತಮವಾದ ಆಹಾರವಾಗಿದೆ.
- ಮಲಬದ್ಧತೆ ಸಮಸ್ಯೆಗಳಿಗೆ ಉತ್ತಮ ಆಹಾರವಾಗಿದೆ.
- ಹಸಿ ತರಕಾರಿಗಳ ಸೇವನೆಯೂ ಅತಿ ಪೌಷ್ಠಿಕವಾಗಿದ್ದು, ಅರೋಗ್ಯವರ್ಧಕವಾಗಿದೆ.
- ಅನೇಕ ವಿಟಮಿನ್ ಗಳು, ನಾರು ಹಾಗೂ ಖನಿಜಗಳು ಹೇರಳವಾಗಿ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಕೂಡ ವೃದ್ಧಿಸುತ್ತದೆ.
- ಇದೊಂದು ಡಿಟೋಕ್ಸ್ ಆಹಾರವೆಂದೆ ಹೇಳಬಹುದು.
- ಹೃದಯದ ಆರೋಗ್ಯ ಹಾಗೂ ರಕ್ತದ ಒತ್ತಡ ನಿಯಂತ್ರಣಕ್ಕೆ ಬಲು ಉತ್ತಮ ಆಹಾರವಾಗಿದೆ.
- ಮಧುಮೇಹಿಗಳಿಗೂ ಉತ್ತಮ ಆಹಾರವಾಗಿದೆ.
ಎಲೆಕೋಸಿನ ಕೋಸಂಬರಿ
ಬೇಕಾಗುವ ಸಾಮಗ್ರಿಗಳು
- ಎಲೆಕೂಸು 1 ಕಪ್ ( ತುರಿದದ್ದು)
- ನೆನೆಸಿದ ಹೆಸರು ಬೇಳೆ ½ ಕಪ್
- ಹಸಿ ಮೆಣಸಿನಕಾಯಿ 1 ( ಸಣ್ಣಗೆ ಹೆಚ್ಚಿಕೊಳ್ಳಬೇಕು )
- ಕಾಯಿ ತುರಿ 2 ಚಮಚ
- ನಿಂಬೆ ರಸ
- ಕೊತ್ತಂಬರಿ ಸೊಪ್ಪು
- ಸಾಸಿವೆ
- ಹಿಂಗು
- ಉಪ್ಪು
ಮಾಡುವ ವಿಧಾನ
ಎಲೆಕೋಸನ್ನು ತುರಿದುಕೊಂಡು, ನೆನೆಸಿದ ಹೆಸರು ಬೇಳೆಯ ಜೊತೆಗೆ ಸೇರಿಸಬೇಕು. ನಂತರ ಮೇಲೆ ಹೇಳಿದ ಪ್ರಮಾಣದಲ್ಲಿ ಕಾಯಿ ತುರಿ, ನಿಂಬೆ ಹಣ್ಣು, ಕೊತ್ತಂಬರಿ ಸೊಪ್ಪು ಹಾಗೂ ಹಸಿ ಮೆಣಸಿನಕಾಯಿಯನ್ನು ಸೇರಿಸಿ ಕಲಸಬೇಕು. ಅನಂತರ ಸ್ವಲ್ಪ ಹಿಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಸಾಸಿವೆಯ ಒಗ್ಗರಣೆ ಕೊಡಬೇಕು. ಅಲ್ಲಿಗೆ ಎಲೆಕೋಸಿನ ಕೋಸಂಬರಿ ಸವಿಯಲು ಸಿದ್ದವಾಗುತ್ತದೆ.
ಸೇವನೆಯ ಕೆಲವು ಪ್ರಯೋಜನಗಳು
- ಕೇರೋಟಿನ, ಥ್ಯಾಂಮೀನ್, ನಿಯಾಸಿನ್, ಪ್ರೊಟೀನ್, ವಿಟಮಿನ್ ಎ, ನಾರು, ಕ್ಯಾಲ್ಸಿಯಂ, ಕಬ್ಬಿಣ ಇನ್ನೂ ಅನೇಕ ಉಪಯುಕ್ತ ಖನಿಜಗಳ ಗಣಿಯಾಗಿದೆ.
- ತೂಕ ಇಳಿಸಲು ಇದು ಉತ್ತಮ ಆಹಾರವಾಗಿದೆ.
- ಕಡಿಮೆ ಕ್ಯಾಲೋರಿ ಹೊಂದಿರುವ ಉತ್ತಮ ಆಹಾರ ಇದಾಗಿದೆ.
- ಮೂತ್ರ ಕೋಶದಲ್ಲಿನ ಕಲ್ಲುಗಳನ್ನು ಕೂಡ ನಿವಾರಿಸುತ್ತದೆ.
- ಉತ್ತಮ ಜೀರ್ಣಕಾರಿಯಾಗಿದ್ದು, ಮಲಬದ್ಧತೆಯನ್ನು ಕೂಡ ಕಡಿಮೆಯಾಗಿಸುತ್ತದೆ.
- ಇದು ಅರೋಗ್ಯವರ್ಧಕವಾಗಿದ್ದು, ದೇಹಕ್ಕೆ ಅತಿ ಉತ್ತಮವಾಗಿದೆ.
- ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.
ಹಸಿ ತರಕಾರಿಗಳನ್ನು ಹಾಗೆಯೇ ತಿನ್ನುವುದಕ್ಕಿಂತ ಇಂತಹ ಉತ್ತಮ ಆಹಾರಗಳನ್ನು ಸ್ವೀಕರಿಸಿ, ಅರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ನಮ್ಮ ದಿನನಿತ್ಯದ ಆಹಾರ ಪದ್ದತಿಯನ್ನು ಸುಧಾರಿಸಿಕೊಂಡು ನಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕೀಟನಾಶಕ ಅಥವಾ ರಾಸಾಯನಿಕಗಳ ಬಳಕೆ ಇರುವ ಕಾರಣ ತರಕಾರಿಗಳನ್ನು ಬಳಸುವುದಕ್ಕಿಂತ ಮೊದಲು ಒಮ್ಮೆ ಉಪ್ಪು ಹಾಗೂ ಅರಿಶಿಣದ ನೀರಿನಲ್ಲಿ ನೆನೆಸಿ ತೊಳೆಯುವುದು ಉತ್ತಮವಾಗಿರುತ್ತದೆ. ಈ ಮೇಲಿನ ಎಲ್ಲಾ ಸಲಾಡ್ ಗಳನ್ನು ಒಮ್ಮೆ ತಯಾರಿಸಿ, ನಿಮ್ಮ ಸ್ವಾಸ್ತ್ಯವನ್ನು ಕಾಪಾಡಿಕೊಳ್ಳಬೇಕು ಎಂಬುದು ನಮ್ಮ ಆಶಯ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.