ಆರೋಗ್ಯಕ್ಕೆ ಉತ್ತಮವಾಗಿರುವ ತರಕಾರಿ ಹಾಗೂ ಸೊಪ್ಪಿನ ರುಚಿಯಾದ ಗೊಜ್ಜುಗಳ ರೆಸಿಪಿ (Healthy Vegetable & Greens Gojju Recipes)

Spread the love

ಆರೋಗ್ಯಕ್ಕೆ ಉತ್ತಮವಾಗಿರುವ ತರಕಾರಿ ಹಾಗೂ ಸೊಪ್ಪಿನ ರುಚಿಯಾದ ಗೊಜ್ಜುಗಳ ರೆಸಿಪಿ (Healthy Vegetable & Greens Gojju Recipes)
ಆರೋಗ್ಯಕ್ಕೆ ಉತ್ತಮವಾಗಿರುವ ತರಕಾರಿ ಹಾಗೂ ಸೊಪ್ಪಿನ ರುಚಿಯಾದ ಗೊಜ್ಜುಗಳ ರೆಸಿಪಿ (Healthy Vegetable & Greens Gojju Recipes). AI Image

ತರಕಾರಿ ಹಾಗೂ ಸೊಪ್ಪಿನ ಸೇವನೆಯು ಆರೋಗ್ಯಕ್ಕೆ ಅತಿ ಮುಖ್ಯವಾಗಿದೆ. ಹಾಗಾಗಿ ದಿನನಿತ್ಯ ತರಕಾರಿ ಹಾಗೂ ಸೊಪ್ಪುಗಳನ್ನು ವಿವಿಧ ರೂಪದಲ್ಲಿ ಸೇವಿಸುವುದು ಅವಶ್ಯಕ. ಹಾಗಾಗಿ ತರಕಾರಿಗಳಿಂದ ತಯಾರಿಸಬಹುದಾದ ವಿವಿಧ ಖಾದ್ಯಗಳಲ್ಲಿ ಗೊಜ್ಜುಗಳು ಕೂಡ ಒಂದು. ಅನ್ನದ ಜೊತೆ ಗೊಜ್ಜು ಇದ್ದರೆ ಊಟವು ಬಹು ರುಚಿಯಾಗಿರುತ್ತದೆ. ಅಂತಹ ತರಕಾರಿ ಹಾಗೂ ಸೊಪ್ಪಿನ ಗೊಜ್ಜುಗಳ ತಯಾರಿಕಾ ವಿಧಾನ ಹಾಗೂ ಸೇವನೆಯ ಆರೋಗ್ಯಕರ ಉಪಯೋಗಗಳ ಬಗ್ಗೆ ಇಂದಿನ ಲೇಖನದಲ್ಲಿ ವಿಶ್ಲೇಷಿಸೋಣ.

ಹಾಗಲಕಾಯಿ ಗೊಜ್ಜು

ಬೇಕಾಗುವ ಪದಾರ್ಥಗಳು

  • ಹಾಗಲಕಾಯಿ 1
  • ಸಾರಿನ ಪುಡಿ 2 ಚಮಚ
  • ಉದ್ದಿನಬೇಳೆ 1 ಚಮಚ
  • ಕಡ್ಲೆಬೇಳೆ 1 ಚಮಚ
  • ಅರಿಶಿಣ ಪುಡಿ ¼ ಚಮಚ
  • ಬೆಲ್ಲ 1 ಚಮಚ
  • ಕಾಯಿತುರಿ 1 ಕಪ್
  • ಹುರಿಗಡಲೆ 2 ಚಮಚ
  • ಸಾಸಿವೆ ½ ಚಮಚ
  • ಇಂಗು ಸ್ವಲ್ಪ
  • ಕರಿಬೇವು
  • ಹುಣಸೆ ರಸ 2 ಚಮಚ
  • ಒಣ ಮೆಣಸಿನಕಾಯಿ 1
  • ಉಪ್ಪು

ಮಾಡುವ ವಿಧಾನ
ಮೊದಲಿಗೆ ಹಾಗಲಕಾಯಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಒಂದು ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಇಂಗು ಹಾಕಬೇಕು, ಸಾಸಿವೆ ಸಿಡಿಯುವಾಗ ಕರಿಬೇವು, ಒಂದು ಒಣಮೆಣಸು, ಕಡ್ಲೆಬೇಳೆ ಹಾಗೂ ಉದ್ದಿನಬೇಳೆಯನ್ನು ಹಾಕಿ ಕೈ ಆಡಿಸಬೇಕು. ಈಗ ಸಣ್ಣಗೆ ಹೆಚ್ಚಿದ ಹಾಗಲಕಾಯಿಯನ್ನು ಹಾಕಿ ಚೆನ್ನಾಗಿ ಕರಿಯಬೇಕು. ಚೆನ್ನಾಗಿ ಕರಿದ ನಂತರ ಬೇರೆ ಪಾತ್ರೆಗೆ ವರ್ಗಾಯಿಸಿಕೊಳ್ಳಬೇಕು. ಈಗ ಒಂದು ಮಿಕ್ಸಿ ಜಾರಿಗೆ ಕಾಯಿತುರಿ, ಹುರಿಗಡಲೆ, ಸ್ವಲ್ಪ ಸಾಸಿವೆ ಹಾಗೂ ಸಾರಿನ ಪುಡಿಯನ್ನು ಹಾಕಿ ರುಬ್ಬಿಕೊಳ್ಳಬೇಕು. ನಂತರ ಬಾಣಲೆಗೆ ರುಬ್ಬಿದ ಮಿಶ್ರಣ, ಹುಣಸೆ ರಸ, ಸ್ವಲ್ಪ ಅರಿಶಿಣ, ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ಉಪ್ಪನ್ನು ಸೇರಿಸಿಕೊಂಡು ಕುದಿಸಬೇಕು. ಕುದಿಯುವಾಗ ಹುರಿದ ಹಾಗಲಕಾಯಿ ಮಿಶ್ರಣವನ್ನು ಸೇರಿಸಬೇಕು. ಮತ್ತೆ ಒಂದು ಕುದಿ ಬಂದ ನಂತರ ಒಲೆಯನ್ನು ಆರಿಸಬೇಕು. ಅಲ್ಲಿಗೆ ಹಾಗಲಕಾಯಿ ಗೊಜ್ಜು ಸವಿಯಲು ಸಿದ್ದವಾಗುತ್ತದೆ.

ಹಾಗಲಕಾಯಿಯ ಸೇವನೆಯ ಉಪಯೋಗಗಳು

  • ಹಾಗಲಕಾಯಿಯಲ್ಲಿ ವಿಟಮಿನ್ ಎ, ಬಿ, ಬಿ2, ಸಿ, ಗಂಧಕ, ತಾಮ್ರ, ಮೆಗ್ನಿಶಿಯಂ, ಸೋಡಿಯಂ, ಕಬ್ಬಿಣ, ರಂಜಕ, ಕ್ಯಾಲ್ಸಿಯಂ, ಪಿಷ್ಠ ಹಾಗೂ ಸಸಾರಜನಕದಂತಹ ಅನೇಕ ಖನಿಜಗಳು ಹಾಗಲಕಾಯಿಯಲ್ಲಿದೆ. ಹಾಗಾಗಿ ಹಾಗಲಕಾಯಿ ಸೇವನೆಯು ಆರೋಗ್ಯಕ್ಕೆ ಉತ್ತಮವಾಗಿದೆ.
  • ಶರೀರದಲ್ಲಿನ ಅನೇಕ ವಿಷಕಾರಿ ವಸ್ತುಗಳನ್ನು ದೇಹದಿಂದ ಹೊರಕಳಿಸಲು ಹಾಗಲಕಾಯಿ ಸೇವನೆಯು ಉತ್ತಮವಾಗಿದೆ.
  • ಹಾಗಲಕಾಯಿಯ ಸೇವನೆಯು ಮೊಡವೆಗಳ ನಿವಾರಣೆಗೂ ಕೂಡ ಉಪಯುಕ್ತವಾಗಿದೆ.
  • ಚರ್ಮರೋಗಗಳ ನಿವಾರಣೆಗೂ ಕೂಡ ಹಾಗಲಕಾಯಿ ಉತ್ತಮ ಆಹಾರವಾಗಿದೆ.
  • ಲಿವರ್ ನ ಅರೋಗ್ಯಕ್ಕೂ ಕೂಡ ಹಾಗಲಕಾಯಿ ಸೇವನೆಯು ಅತಿ ಉತ್ತಮವಾಗಿದೆ.
  • ಹಾಗಲಕಾಯಿ ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಜ್ವರ, ಪಿತ್ತ, ಕಫ ಹಾಗೂ ಕೆಮ್ಮು ಇನ್ನೂ ಅನೇಕ ಸಮಸ್ಯೆಗಳನ್ನು ದೂರಗೊಳಿಸಲು ಹಾಗಲಕಾಯಿ ಸೇವನೆಯು ಉತ್ತಮವಾಗಿದೆ.
  • ಹಾಗಲಕಾಯಿಯ ಸೇವನೆಯು ಅರೋಗ್ಯವರ್ಧಕವು ಕೂಡ ಹೌದು.

(->ಹಾಗಲಕಾಯಿಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಹಿಂದಿನ ಲೇಖನಗಳನ್ನು ಓದಿರಿ)

ನಿಂಬೆ ಕಾಯಿ ಗೊಜ್ಜು

ಬೇಕಾಗುವ ಪದಾರ್ಥಗಳು

  • ನಿಂಬೆ ಕಾಯಿ 2
  • ಬ್ಯಾಡಗಿ ಮೆಣಸಿನಕಾಯಿ 5
  • ಕೊತ್ತಂಬರಿ ಕಾಳು 1 ಚಮಚ
  • ಮೆಂತ್ಯ ¼ ಚಮಚ
  • ಉದ್ದಿನಬೇಳೆ 1 ಚಮಚ
  • ಎಳ್ಳು ½ ಚಮಚ
  • ಬೆಲ್ಲ 2 ಚಮಚ
  • ಜೀರಿಗೆ ½ ಚಮಚ
  • ಕರಿಮೆಣಸು ¼ ಚಮಚ
  • ಒಣಕೊಬ್ಬರಿ 1 ಕಪ್
  • ಒಗ್ಗರಣೆಗೆ ಉದ್ದಿನಬೇಳೆ ½ ಚಮಚ
  • ಕಡ್ಲೆಬೇಳೆ ½ ಚಮಚ
  • ಇಂಗು ಸ್ವಲ್ಪ
  • ಕರಿಬೇವು
  • ಉಪ್ಪು

ಮಾಡುವ ವಿಧಾನ
ನಿಂಬೆ ಹಣ್ಣಿನ ರಸವನ್ನು ಪೂರ್ಣವಾಗಿ ಹಿಂಡಬೇಕು. ಅನಂತರ ಸಿಪ್ಪೆಯನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿಕೊಳ್ಳಬೇಕು. ಒಂದು ಬಾಣಲೆಗೆ, ಮೇಲೆ ಹೇಳಿದ ಪ್ರಮಾಣದಲ್ಲಿ ಕೊತ್ತಂಬರಿ ಕಾಳು, ಬ್ಯಾಡಗಿ ಮೆಣಸಿನಕಾಯಿ, ಜೀರಿಗೆ, ಕರಿಮೆಣಸು, ಉದ್ದಿನಬೇಳೆ, ಎಳ್ಳು, ಮೆಂತ್ಯ ಹಾಗೂ ಒಣಕೊಬ್ಬರಿ ಎಲ್ಲವನ್ನು ಚೆನ್ನಾಗಿ ಹುರಿದುಕೊಂಡು, ತಣಿದ ನಂತರ ಪುಡಿಮಾಡಿಕೊಳ್ಳಬೇಕು. ಒಂದು ಬಾಣಲೆಗೆ ಸ್ವಲ್ಪ ತುಪ್ಪವನ್ನು ಹಾಕಿ, ಬಿಸಿಯಾದ ನಂತರ ಕತ್ತರಿಸಿದ ಲಿಂಬುವಿನ ಸಿಪ್ಪೆಯನ್ನು ಹಾಕಿ ಚೆನ್ನಾಗಿ ಹುರಿಯಬೇಕು. ಸ್ವಲ್ಪ ಬೆಂದ ನಂತರ ರುಬ್ಬಿದ ಮಿಶ್ರಣ, ರುಚಿಗೆ ತಕ್ಕಷ್ಟು ಬೆಲ್ಲ ಹಾಗೂ ಉಪ್ಪನ್ನು ಸೇರಿಸಬೇಕು. ಕೊನೆಯಲ್ಲಿ ಎಣ್ಣೆಯ ಜೊತೆಗೆ ಉದ್ದಿನಬೇಳೆ, ಕಡ್ಲೆಬೇಳೆ, ಹಿಂಗು ಹಾಗೂ ಕರಿಬೇವನ್ನು ಹಾಕಿ ಒಗ್ಗರಣೆಯನ್ನು ಹಾಕಬೇಕು.

ಅಲ್ಲಿಗೆ ಲಿಂಬೆ ಕಾಯಿ ಸವಿಯಲು ಸಿದ್ದವಾಗುತ್ತದೆ.

ನಿಂಬೆಕಾಯಿ ಸೇವನೆಯ ಉಪಯೋಗಗಳು

  • ಇದು ಸುಲಭ ಜೀರ್ಣಕ್ರಿಯೆಗೆ ಉತ್ತಮವಾಗಿದ್ದು, ಅರೋಗ್ಯವರ್ಧಕವಾಗಿದೆ.
  • ಬಾಯಾರಿಕೆ ಹಾಗೂ ವಾಕರಿಕೆ ಇನ್ನೂ ಹಲವು ಸಮಸ್ಯೆಗಳಿಗೆ ಇದು ಉತ್ತಮ ಆಹಾರವಾಗಿದೆ.
  • ಮಲಮೂತ್ರಗಳಲ್ಲಿ ಕೆಲವೊಮ್ಮೆ ರಕ್ತ ಹೋಗುವುದನ್ನು ನಿಲ್ಲಿಸಲು ಇದು ಉತ್ತಮ ಆಹಾರವಾಗಿದೆ.
  • ಮುಖದ ಕಾಂತಿಯನ್ನು ವೃದ್ಧಿಸಲು ಹಾಗೂ ಚರ್ಮದ ಉತ್ತಮ ಅರೋಗ್ಯಕ್ಕೂ ಕೂಡ ಲಿಂಬೆ ಗೊಜ್ಜು ಉತ್ತಮವಾಗಿದೆ.
  • ಕೆಲವೊಮ್ಮೆ ತಕ್ಷಣಕ್ಕೆ ಆಗುವ ಗಾಯಗಳ ಬೇಗ ಒಣಗುವಿಕೆಗಾಗಿ ಕೂಡ ಲಿಂಬೆ ಗೊಜ್ಜು ಉತ್ತಮ ಆಹಾರವಾಗಿದೆ.
  • ಮಲೇರಿಯಾ ಜ್ವರದ ಸಮಯದಲ್ಲಿ, ತ್ವರಿತವಾಗಿ ಜ್ವರವನ್ನು ನಿವಾರಿಸಲು ಈ ಆಹಾರ ಉತ್ತಮವಾಗಿದೆ.
  • ಹಸಿವಿಲ್ಲದಿರುವ ಸಮಯದಲ್ಲಿ ಹಾಗೂ ಹೊಟ್ಟೆ ಉಬ್ಬರವಾದಾಗ ಈ ನಿಂಬೆ ಗೊಜ್ಜುನ್ನು ಅನ್ನದ ಜೊತೆಗೆ ಸೇವಿಸುವುದು ಉತ್ತಮವಾಗಿದೆ.

(->ನಿಂಬೆಹಣ್ಣಿನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಹಿಂದಿನ ಲೇಖನಗಳನ್ನು ಓದಿರಿ)

ತೊಂಡೆಕಾಯಿ ಗೊಜ್ಜು

ಬೇಕಾಗುವ ಪದಾರ್ಥಗಳು

  • ತೊಂಡೆಕಾಯಿ 10
  • ಹಸಿಮೆಣಸು 3
  • ತೆಂಗಿನ ತುರಿ 1 ಕಪ್
  • ಜೀರಿಗೆ ½ ಚಮಚ
  • ಹುಣಸೆಹಣ್ಣು ಸ್ವಲ್ಪ
  • ಬೆಲ್ಲ 2 ಚಮಚ
  • ಉಪ್ಪು
  • ಇಂಗು ಸ್ವಲ್ಪ
  • ಸಾಸಿವೆ ½ ಚಮಚ
  • ಎಣ್ಣೆ
  • ಒಣಮೆಣಸು 1
  • ಕರಿಬೇವು

ಮಾಡುವ ವಿಧಾನ
ಮೊದಲಿಗೆ ತೊಂಡೆಕಾಯಿ ಹಾಗೂ ಹಸಿಮೆಣಸನ್ನು ಕತ್ತರಿಸಿಕೊಂಡು ಬೇಯಿಸಿಕೊಳ್ಳಬೇಕು. ನಂತರ ಒಂದು ಮಿಕ್ಸಿ ಜಾರಿಗೆ ಬೇಯಿಸಿದ ತೊಂಡೆಕಾಯಿ ಹಾಗೂ ಹಸಿ ಮೆಣಸಿನಕಾಯಿಯನ್ನು ಜೊತೆಗೆ ತೆಂಗಿನತುರಿ, ಜೀರಿಗೆ, ಹುಣಸೆಹಣ್ಣು, ಬೆಲ್ಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ರುಬ್ಬಿಕೊಳ್ಳಬೇಕು. ನಂತರ ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ, ಬಿಸಿಯಾದ ನಂತರ ಸಾಸಿವೆ ಹಾಗೂ ಸ್ವಲ್ಪ ಇಂಗನ್ನು ಸೇರಿಸಬೇಕು. ಸಾಸಿವೆ ಸಿಡಿದ ನಂತರ ಒಣಮೆಣಸು ಹಾಗೂ ಕರಿಬೇವನ್ನು ಹಾಕಬೇಕು. ನಂತರ ರುಬ್ಬಿದ ಮಿಶ್ರಣವನ್ನು ಸೇರಿಸಿ ಕಲಸಬೇಕು. ಅಲ್ಲಿಗೆ ತೊಂಡೆಕಾಯಿ ಗೊಜ್ಜು ಸವಿಯಲು ಸಿದ್ದವಾಗುತ್ತದೆ. ಅನ್ನದ ಜೊತೆ ಇದು ರುಚಿಯಾಗಿರುತ್ತದೆ.

ತೊಂಡೆಕಾಯಿಯ ಸೇವನೆಯ ಉಪಯೋಗಗಳು

  • ತೊಂಡೆಕಾಯಿಯಲ್ಲಿ ನಾರು, ಸಸಾರಜನಕ, ಖನಿಜಗಳು, ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣ ಹಾಗೂ ವಿಟಮಿನ್ ಸಿ ಕೂಡ ಇದೆ. ಹಾಗಾಗಿ ತೊಂಡೆಕಾಯಿಯ ಸೇವನೆ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ.
  • ತೊಂಡೆಕಾಯಿ ದೇಹಕ್ಕೆ ಉಷ್ಣವನ್ನು ಒದಗಿಸುತ್ತದೆ, ಹಾಗಾಗಿ ಪಿತ್ತ ಹಾಗೂ ಕಫವನ್ನು ನಿವಾರಿಸಲು ಇದು ಉತ್ತಮ ಆಹಾರವಾಗಿದೆ.
  • ರಕ್ತದ ಶುದ್ಧತೆಯನ್ನು ಕೂಡ ಕಾಪಾಡುತ್ತದೆ. ರಕ್ತದ ಆರೋಗ್ಯಕ್ಕೆ ಇದು ಉತ್ತಮವಾಗಿದೆ.
  • ಯಕೃತ್ತಿನ ಅರೋಗ್ಯಕ್ಕೂ ಕೂಡ ತೊಂಡೆಕಾಯಿ ಉತ್ತಮವಾಗಿದೆ.
  • ಹಸಿ ತೊಂಡೆಕಾಯಿಯನ್ನು ಕಚ್ಚಿ ತಿನ್ನುವುದರಿಂದ ಬಾಯಿಯ ಹುಣ್ಣುಗಳು ಕಡಿಮೆಯಾಗುತ್ತದೆ.
  • ತೊಂಡೆಕಾಯಿಯ ಎಲೆಗಳು ಕೂಡ ಉತ್ತಮ ಅರೋಗ್ಯವರ್ಧಕ ಗುಣಗಳನ್ನು ಹೊಂದಿದ್ದು, ಮಧುಮೇಹಕ್ಕೆ ಈ ತೊಂಡೆಯ ಎಲೆಗಳ ರಸದ ಸೇವನೆ ಅತಿ ಉತ್ತಮವಾಗಿದೆ.
  • ಹಾಗೆಯೇ ಈ ತೊಂಡೆ ಎಲೆಗಳು ಊತಗಳಿಗೂ ಕೂಡ ಉತ್ತಮವಾಗಿದೆ.

ದೊಡ್ಡಪತ್ರೆ ಗೊಜ್ಜು

ಬೇಕಾಗುವ ಪದಾರ್ಥಗಳು

  • ದೊಡ್ಡಪತ್ರೆ ಎಲೆಗಳು 10
  • ಕಡ್ಲೆಬೇಳೆ 2 ಚಮಚ
  • ಉದ್ದಿನಬೇಳೆ 2 ಚಮಚ
  • ಬ್ಯಾಡಗಿ ಮೆಣಸಿನಕಾಯಿ 5
  • ಎಳ್ಳು ½ ಚಮಚ
  • ಹುಣಸೆ ಹಣ್ಣು ಸ್ವಲ್ಪ
  • ಬೆಲ್ಲ 2 ಚಮಚ
  • ಕಾಯಿತುರಿ 1 ಕಪ್
  • ಸಾಸಿವೆ 1 ಚಮಚ
  • ಎಣ್ಣೆ
  • ಹಿಂಗು ಸ್ವಲ್ಪ
  • ಉಪ್ಪು
  • ಕರಿಬೇವು

ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲೆಯಲ್ಲಿ ಕಡ್ಲೆಬೇಳೆ, ಉದ್ದಿನಬೇಳೆ, ಎಳ್ಳು, ಬ್ಯಾಡಗಿ ಮೆಣಸಿನಕಾಯಿ ಎಲ್ಲವನ್ನು ಹಾಕಿ ಕ್ರಮವಾಗಿ ಹುರಿದುಕೊಳ್ಳಬೇಕು. ಹುರಿದ ಪದಾರ್ಥಗಳು ತಣಿದ ನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ಅನಂತರ ಬಾಣಲೆಗೆ ಸ್ವಲ್ಪ ಎಣ್ಣೆಯೊಂದಿಗೆ ದೊಡ್ಡಪತ್ರೆ ಎಲೆಗಳನ್ನು ಹಾಕಿ ಹುರಿಯಬೇಕು. ಹಾಗೆಯೇ ಮತ್ತೊಮ್ಮೆ ಮಿಕ್ಸಿ ಜಾರಿಗೆ ಕಾಯಿತುರಿ, ಹುರಿದ ದೊಡ್ಡಪತ್ರೆ ಎಲೆಗಳು ಹಾಗೂ ಹುಣಸೆಹಣ್ಣು ಸೇರಿಸಿ ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಬೇಕು. ಈಗ ಒಂದು ಬಾಣಲೆಗೆ ಎಣ್ಣೆಯೊಂದಿಗೆ ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಒಣ ಮೆಣಸು, ಇಂಗು ಹಾಗೂ ಕರಿಬೇವಿನ ಒಗ್ಗರಣೆಯನ್ನು ಸಿದ್ದಪಡಿಸಿ, ಈ ಒಗ್ಗರಣೆಗೆ ರುಬ್ಬಿಕೊಂಡ ಮಿಶ್ರಣ ಹಾಗೂ ಪುಡಿಯನ್ನು ಸೇರಿಸಿಕೊಳ್ಳಬೇಕು. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ ಕುದಿಸಬೇಕು. ಅಲ್ಲಿಗೆ ರುಚಿಯಾದ ದೊಡ್ಡಪತ್ರೆ ಗೊಜ್ಜು ಸವಿಯಲು ಸಿದ್ದವಾಗುತ್ತದೆ.

ದೊಡ್ಡಪತ್ರೆಯ ಸೇವನೆಯ ಉಪಯೋಗಗಳು

  • ಪಿತ್ತದ ಸಮಸ್ಯೆಗಳಿಗೆ ದೊಡ್ಡಪತ್ರೆಯ ಸೇವನೆ ರಾಮಬಾಣವಾಗಿದೆ.
  • ಶೀತ, ಜ್ವರ ಹಾಗೂ ಕೆಮ್ಮಿನ ಸಮಸ್ಯೆಗಳಿಂದ ಮುಕ್ತಿ ಪಡೆಯಲು ದೊಡ್ಡಪತ್ರೆ ಸಹಾಯಕವಾಗಿದೆ.
  • ಟೋನ್ಸಿಲಿಟಿಸ್ ಸಮಸ್ಯೆಗಳು ಇದ್ದಾಗ ದೊಡ್ಡ ಪತ್ರೆಯ ಎಲೆಗಳನ್ನು ಜಗಿದು ತಿನ್ನಬೇಕು.
  • ಸಂಧಿವಾತದ ಸಮಸ್ಯೆಗಳನ್ನು ಹೊಂದಿರುವವರು ದೊಡ್ಡಪತ್ರೆ ಎಲೆಯ ಕಷಾಯವನ್ನು ಕುಡಿಯುವುದು ಉತ್ತಮವಾಗಿದೆ. 
  • ದೊಡ್ಡಪತ್ರೆ ಎಲೆಗಳು ರೋಗನಿರೋಧಕ ಶಕ್ತಿಗಳನ್ನು ದೇಹಕ್ಕೆ ಒದಗಿಸಿ, ಉತ್ತಮ ಅರೋಗ್ಯವನ್ನು ಕಾಪಾಡುತ್ತದೆ.

ಹೀಗೆಯೇ ಅನೇಕ ಉಪಯೋಗಗಳನ್ನು ನೀಡುವ ತರಕಾರಿ ಹಾಗೂ ಸೊಪ್ಪುಗಳ ಗೊಜ್ಜುಗಳ ಸೇವನೆಯು ಅತಿ ಮುಖ್ಯವಾಗಿದೆ. ದಿನನಿತ್ಯ ಆರೋಗ್ಯಕರ ಆಹಾರವನ್ನು ಸೇವಿಸಿ, ಅರೋಗ್ಯವಂತರಾಗಿರಿ ಎಂಬುದು ಇಂದಿನ ಲೇಖನದ ಮುಖ್ಯ ಉದ್ದೇಶ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

Leave a Comment

Your email address will not be published. Required fields are marked *

Scroll to Top