
ತರಕಾರಿ ಹಾಗೂ ಹಣ್ಣುಗಳಿಂದ ಅನೇಕ ಖಾದ್ಯಗಳನ್ನು ತಯಾರಿಸಬಹುದು. ಅಂತೆಯೇ ಇಂದು ನಾವು ತರಕಾರಿ ಹಾಗೂ ಹಣ್ಣುಗಳನ್ನು ಬಳಸಿ ಸಿಹಿಯನ್ನು ತಯಾರಿಸುವ ಬಗೆಯನ್ನು ಅರಿಯೋಣ. ತರಕಾರಿ ಹಾಗೂ ಹಣ್ಣುಗಳ ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳ ಬಗೆಗಿನ ಮಾಹಿತಿಗಳನ್ನು ವಿಶ್ಲೇಷಿಸೋಣ.
ಸೌತೆಕಾಯಿ ಹಲ್ವಾ
ಬೇಕಾಗುವ ಪದಾರ್ಥಗಳು
- ತುರಿದ ಸೌತೆಕಾಯಿ 2 ಕಪ್
- ಅಕ್ಕಿ 1 ಕಪ್
- ಬೆಲ್ಲ 1 ಕಪ್
- ತೆಂಗಿನ ತುರಿ 1 ಕಪ್
ಮಾಡುವ ವಿಧಾನ
ಮೊದಲಿಗೆ ಅಕ್ಕಿಯನ್ನು ತೊಳೆದು ಒಣಗಿಸಬೇಕು. ಒಣಗಿದ ರವೆಯನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಪುಡಿಮಾಡಿಕೊಳ್ಳಬೇಕು. ಅಕ್ಕಿ ರವೆಯು ಸಿದ್ದವಾಗುತ್ತದೆ. ಇನ್ನೊಂದು ಕಡೆ ತುರಿಯ ಸೌತೆಕಾಯಿಯನ್ನು ಜೊತೆ ಬೆಲ್ಲ, ಅಕ್ಕಿಯ ರವೆ, ತೆಂಗಿನ ತುರಿ ಎಲ್ಲವನ್ನು ಸೇರಿಸಿ ಒಂದು ಬಟ್ಟಲಲ್ಲಿ ಹರಡಬೇಕು. ನಂತರ ಕುಕ್ಕರ್ ನಲ್ಲಿ ಇಟ್ಟು ಬೇಯಿಸಬೇಕು. ಸರಿಯಾಗಿ ಬೆಂದ ನಂತರ ನಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಬೇಕು. ಅಲ್ಲಿಗೆ ಸೌತೆಕಾಯಿ ಹಲ್ವಾ ಸವಿಯಲು ಸಿದ್ದವಾಗುತ್ತದೆ.
ಟೊಮೆಟೊ ಹಲ್ವಾ
ಬೇಕಾಗುವ ಪದಾರ್ಥಗಳು
- ಟೊಮೆಟೊ 4
- ತೆಂಗಿನ ತುರಿ 1 ಕಪ್
- ಸಕ್ಕರೆ 3 ಕಪ್
- ಗೋಡಂಬಿ
ಮಾಡುವ ವಿಧಾನ
ಮೊದಲಿಗೆ ಟೊಮೆಟೊವನ್ನು ರುಬ್ಬಿಕೊಂಡು ರಸವನ್ನು ಹಿಂಡಿಕೊಳ್ಳಬೇಕು. 2 ಕಪ್ ಆಗುವಷ್ಟು ರಸವನ್ನು ಸಿದ್ದಪಡಿಸಿಕೊಳ್ಳಬೇಕು. ಮೊದಲು 3 ಕಪ್ ಸಕ್ಕರೆಗೆ ಒಂದು ಲೋಟ ನೀರು ಹಾಕಿ ಪಾಕವನ್ನು ಸಿದ್ದಗೊಳಿಸಿಕೊಳ್ಳಬೇಕು. ಪಾಕ ಸಿದ್ದವಾದ ನಂತರ ತೆಂಗಿನ ತುರಿ, ಗೋಡಂಬಿಯನ್ನು ಹಾಕಿ, ಜೊತೆಗೆ ಟೊಮೆಟೊ ರಸವನ್ನು ಹಾಕಿ, ತಳ ತಾಕದಂತೆ ಕೈ ಆಡಿಸಬೇಕು. ಮಿಶ್ರಣವು ಗಟ್ಟಿಯಾಗುತ್ತಾ ಹದಕ್ಕೆ ಬಂದ ನಂತರ ತುಪ್ಪ ಸವರಿದ ತಟ್ಟೆಗೆ ಹಾಕಬೇಕು. ಸ್ವಲ್ಪ ಹೊತ್ತಿನ ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿ, ಸವಿಯಬೇಕು. ಅಲ್ಲಿಗೆ ರುಚಿಯಾದ ಟೊಮೆಟೊ ಹಲ್ವಾ ಸವಿಯಲು ಸಿದ್ದವಾಗುತ್ತದೆ.
ಹಲಸಿನ ಹಣ್ಣಿನ ಹಲ್ವಾ
ಬೇಕಾಗುವ ಪದಾರ್ಥಗಳು
- ಹಲಸಿನ ತೊಳೆಗಳು 20
- ಸಕ್ಕರೆ 1 ಕಪ್
- ತುಪ್ಪ
ಮಾಡುವ ವಿಧಾನ
ಮೊದಲಿಗೆ ಹಲಸಿನ ತೊಳೆಗಳನ್ನು ಸಣ್ಣಗೆ ಕತ್ತರಿಸಿಕೊಂಡು ಸ್ವಲ್ಪ ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಚೆನ್ನಾಗಿ ಬೆಂದ ನಂತರ ಅದಕ್ಕೆ ಸಕ್ಕರೆಯನ್ನು ಸೇರಿಸಿ, ತಳ ಹಿಡಿಯದಂತೆ ಕೈ ಆಡಿಸುತ್ತಾ ಇರಬೇಕು. ಹಲಸಿನ ಹಣ್ಣು ಮತ್ತು ಸಕ್ಕರೆಯ ಮಿಶ್ರಣ ಪಾತ್ರೆಯ ತಳ ಬಿಡುತ್ತಿದ್ದಂತೆ ತುಪ್ಪವನ್ನು ಹಾಕಿ, ಮತ್ತೆ ಕಲಸಬೇಕು. ಚೆನ್ನಾಗಿ ಮಗುಚಿದ ನಂತರ ಸ್ವಲ್ಪ ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿಕೊಂಡು ಹಲ್ವಾದ ಮಿಶ್ರಣವನ್ನು ತಟ್ಟೆಗೆ ಹಾಕಬೇಕು. ಸ್ವಲ್ಪ ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು ಸವಿಯಬೇಕು.
ಬಾಳೆಹಣ್ಣಿನ ಹಲ್ವಾ
ಬೇಕಾಗುವ ಪದಾರ್ಥಗಳು
- ಬಾಳೆ ಹಣ್ಣು 3
- ಗೋಧಿ ರವೆ ½ ಕಪ್
- ಸಕ್ಕರೆ 1 ಕಪ್
- ತುಪ್ಪ
- ಹಾಲು 1 ಕಪ್
ಮಾಡುವ ವಿಧಾನ
ಒಂದು ಬಾಣಲೆಗೆ ರವೆಯನ್ನು ಹಾಕಿ ಚೆನ್ನಾಗಿ ಹುರಿದಿಟ್ಟು ಕೊಳ್ಳಬೇಕು. ಬಾಳೆಹಣ್ಣನ್ನು ಸಿಪ್ಪೆ ಸುಲಿದು ಕಿವುಚಿ ಇಟ್ಟುಕೊಳ್ಳಬೇಕು. ಇನ್ನೊಂದೆಡೆ ಬಾಣಲೆಗೆ ಹಾಲು ಹಾಕಿ, ಹಾಲು ಬಿಸಿಯಾದ ನಂತರ ಕಿವುಚಿದ ಬಾಳೆಹಣ್ಣನ್ನು ಸೇರಿಸಿ, ಹುರಿದ ರವೆಯನ್ನು ಕೂಡ ಸೇರಿಸಬೇಕು. ರವೆ ಬೇಯುತ್ತಿದಂತೆ ಸಕ್ಕರೆ ಬೆರೆಸಿ ಬೇಯಿಸಬೇಕು. ಸ್ವಲ್ಪ ತುಪ್ಪವನ್ನು ಬೆರೆಸಿ ತಳ ಹಿಡಿಯದಂತೆ ಕೈ ಆಡಿಸುತ್ತಾ ಇರಬೇಕು. ಹಲ್ವಾ ಪೂರ್ಣವಾಗಿ ತಳ ಬಿಟ್ಟ ನಂತರ ಓಲೆ ಅರಿಸಬೇಕು. ಅಲ್ಲಿಗೆ ಬಾಳೆಹಣ್ಣಿನ ರುಚಿಕರ ಹಲ್ವಾ ಸವಿಯಲು ಸಿದ್ದವಾಗುತ್ತದೆ.
ಕ್ಯಾರೆಟ್ ಹಲ್ವಾ
ಬೇಕಾಗುವ ಪದಾರ್ಥಗಳು
- ಕ್ಯಾರೆಟ್ 3
- ಹಾಲು 1 ಕಪ್
- ಸಕ್ಕರೆ ½ ಕಪ್
- ತುಪ್ಪ ¼ ಕಪ್
- ಏಲಕ್ಕಿ ಪುಡಿ ಸ್ವಲ್ಪ
- ಗೋಡಂಬಿ
- ಒಣದ್ರಾಕ್ಷಿ
ಮಾಡುವ ವಿಧಾನ
ಮೊದಲಿಗೆ ಕ್ಯಾರೆಟ್ ಅನ್ನು ಚೆನ್ನಾಗಿ ತುರಿದುಕೊಳ್ಳಬೇಕು. ಅನಂತರ ಒಂದು ಕುಕ್ಕರ್ ಗೆ ನಾಲ್ಕು ಚಮಚ ತುಪ್ಪವನ್ನು ಸೇರಿಸಿಕೊಳ್ಳಬೇಕು. ತುರಿದ ಕ್ಯಾರೆಟ್ ತುರಿಯನ್ನು ತುಪ್ಪಕ್ಕೆ ಸೇರಿಸಿ ಹುರಿದುಕೊಳ್ಳಬೇಕು. ಸ್ವಲ್ಪ ಕ್ಯಾರೆಟ್ ನ ಹಸಿ ವಾಸನೆ ಹೋಗುವ ತನಕ ಹುರಿದುಕೊಳ್ಳಬೇಕು. ನಂತರ ಹಾಲನ್ನು ಸೇರಿಸಿ ಕೂಕರ್ ಮುಚ್ಚಳ ಮುಚ್ಚಿ 3 ವಿಸಿಲ್ ಕೂಗಿಸಬೇಕು. ನಂತರ ಕುಕ್ಕರ್ ತಣಿದ ನಂತರ ಮುಚ್ಚಳ ತೆಗೆದು ಸಕ್ಕರೆ ಸೇರಿಸಿ ಕೈ ಆಡಿಸುತ್ತಾ ಇರಬೇಕು. ಕ್ಯಾರೆಟ್ ಹಲ್ವಾದ ಮಿಶ್ರಣ ತಳ ಬಿಟ್ಟು ಸಂಪೂರ್ಣ ಸಿದ್ಧವಾದ ನಂತರ ಏಲಕ್ಕಿ ಪುಡಿ ಹಾಗೂ ತುಪ್ಪದಲ್ಲಿ ಹುರಿದ ಗೋಡಂಬಿ, ಒಣದ್ರಾಕ್ಷಿಯನ್ನು ಬೆರೆಸಿ ಕಲಸಬೇಕು. ಅಲ್ಲಿಗೆ ರುಚಿಯಾದ ಕ್ಯಾರೆಟ್ ಹಲ್ವಾ ಸವಿಯಲು ಸಿದ್ದವಾಗುತ್ತದೆ.
ಬೂದುಗುಂಬಳ ಕಾಯಿ ಹಲ್ವಾ
ಬೇಕಾಗುವ ಪದಾರ್ಥಗಳು
- ತುರಿದ ಬೂದುಗುಂಬಳ ಕಾಯಿ 3 ಕಪ್
- ಸಕ್ಕರೆ 1.5 ಕಪ್
- ತುಪ್ಪ ½ ಕಪ್
- ಏಲಕ್ಕಿ ಪುಡಿ ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ತುರಿದ ಬೂದುಗುಂಬಳ ಕಾಯಿಯನ್ನು ತುಪ್ಪದಲ್ಲಿ ಹುರುದು ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ಸಕ್ಕರೆಯನ್ನು ಸೇರಿಸಿ, ಕೈ ಆಡಿಸುತ್ತಾ ಇರಬೇಕು. ಸಂಪೂರ್ಣ ಪಾಕ ಬಂದು ಇಂಗಿದ ನಂತರ ಹಲ್ವಾದ ಮಿಶ್ರಣವು ಪಾತ್ರೆಯ ತಳವನ್ನು ಬಿಡುತ್ತದೆ. ಆ ಸಮಯದಲ್ಲಿ ಏಲಕ್ಕಿ ಪುಡಿಯನ್ನು ಬೆರೆಸಿ ಕಲಸಬೇಕು. ಅಲ್ಲಿಗೆ ಬೂದುಗುಂಬಳ ಕಾಯಿ ಹಲ್ವಾ ಸವಿಯಲು ಸಿದ್ದವಾಗುತ್ತದೆ.
ಬಾದಾಮಿ ಹಲ್ವಾ
ಬೇಕಾಗುವ ಪದಾರ್ಥಗಳು
- ಬಾದಾಮಿ 1 ಕಪ್
- ಸಕ್ಕರೆ 1 ಕಪ್
- ತುಪ್ಪ ½ ಕಪ್
- ಕೇಸರಿ ಸ್ವಲ್ಪ
- ಏಲಕ್ಕಿ ಪುಡಿ ಸ್ವಲ್ಪ
- ಹಾಲು ಸ್ವಲ್ಪ
ಮಾಡುವ ವಿಧಾನ
ಬಾದಾಮಿಯನ್ನು ರಾತ್ರಿಯೆ ನೆನೆಸಿ ಇಡಬೇಕು. ಮರುದಿನ ಬಾದಾಮಿಯ ಸಿಪ್ಪೆಯನ್ನು ಸುಲಿದುಕೊಂಡು ರುಬ್ಬಿಕೊಳ್ಳಬೇಕು. ಒಂದು ಬಾಣಲೆಗೆ ತುಪ್ಪವನ್ನು ಸೇರಿಸಿ, ಬಿಸಿಯಾದ ನಂತರ ಸಕ್ಕರೆಯನ್ನು ಸೇರಿಸಬೇಕು. ಹಾಗೆಯೇ ರುಬ್ಬಿದ ಬಾದಾಮಿ ಮಿಶ್ರಣವನ್ನು ಸೇರಿಸಿ ಕೈ ಆಡಿಸುತ್ತಾ ಇರಬೇಕು. ಸ್ವಲ್ಪ ಕೇಸರಿ ದಳಗಳನ್ನು ಹಾಲಿನಲ್ಲಿ ಬೆರೆಸಿ, ಆ ಕೇಸರಿ ಹಾಲನ್ನು ಬಾದಾಮಿ ಮಿಶ್ರಣಕ್ಕೆ ಸೇರಿಸಿ ಕೈ ಆಡಿಸುತ್ತಾ ಇರಬೇಕು. ಮಿಶ್ರಣವು ಪಾತ್ರೆಯ ತಳ ಬಿಡುವವರೆಗೂ ಕೈ ಆಡಿಸುತ್ತಾ ಇರಬೇಕು. ನಂತರ ಏಲಕ್ಕಿ ಪುಡಿಯನ್ನು ಬೆರೆಸಿ ಕಲಸಬೇಕು. ಕೊನೆಯಲ್ಲಿ ತುಪ್ಪ ಸವರಿದ ತಟ್ಟೆಯಲ್ಲಿ ಬಾದಾಮಿ ಮಿಶ್ರಣವನ್ನು ಹಾಕಿ ಬೇಕಾದ ಆಕಾರದಲ್ಲಿ ಕತ್ತರಿಸಿಕೊಂಡು ಸವಿಯಬೇಕು. ಅಲ್ಲಿಗೆ ರುಚಿಕರವಾದ ಬಾದಾಮಿ ಹಲ್ವಾ ಸವಿಯಲು ಸಿದ್ದವಾಗುತ್ತದೆ.
ಹೆಸರುಬೇಳೆ ಹಲ್ವಾ
ಬೇಕಾಗುವ ಪದಾರ್ಥಗಳು
- ಹೆಸರು ಬೇಳೆ 1 ಕಪ್
- ತುಪ್ಪ ¼ ಕಪ್
- ಬೆಲ್ಲ ¾ ಕಪ್
- ಗೋಡಂಬಿ
- ಏಲಕ್ಕಿ ಪುಡಿ
ಮಾಡುವ ವಿಧಾನ
ಮೊದಲಿಗೆ ಹೆಸರುಬೇಳೆಯನ್ನು ಬೇಯಿಸಲು ಇಡಬೇಕು. ಒಂದು ಕಪ್ ಹೆಸರುಬೇಳೆಗೆ 2 ಕಪ್ ನೀರನ್ನು ಸೇರಿಸಿ ಕುಕ್ಕರ್ ನಲ್ಲಿ ಒಂದು 2-3 ವಿಸಿಲ್ ಬೇಯಿಸಬೇಕು. ಹೆಸರುಬೇಳೆ ಬೆಂದ ನಂತರ ಒಂದು ಬಾಣಲೆಗೆ ತುಪ್ಪ ಹಾಕಿ, ಬೇಯಿಸಿದ ಹೆಸರುಬೇಳೆಯನ್ನು ಸೇರಿಸಿ, ಬೆಲ್ಲವನ್ನು ಸೇರಿಸಬೇಕು. ಬೆಲ್ಲವು ಪಾಕವಾಗಿ ಕುಡಿ ಬಂದ ಮೇಲೆ ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಸೇರಿಸಿ, ಕೈ ಆಡಿಸುತ್ತಾ ಇರಬೇಕು. ನಂತರ ಹಲ್ವಾದ ಮಿಶ್ರಣ ಪಾತ್ರಯ ತಳ ಬಿಟ್ಟು ಸಿದ್ಧವಾದ ನಂತರ ಏಲಕ್ಕಿ ಪುಡಿಯನ್ನು ಸೇರಿಸಿ, ಕಲಸಬೇಕು. ತುಪ್ಪ ಸವರಿದ ತಟ್ಟೆಗೆ ಹಲ್ವಾದ ಮಿಶ್ರಣವನ್ನು ವರ್ಗಾಯಿಸಿಕೊಂಡು, ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಬೇಕು. ಅಲ್ಲಿಗೆ ಹೆಸರುಬೇಳೆ ಹಲ್ವಾ ಸವಿಯಲು ಸಿದ್ದವಾಗುತ್ತದೆ.
ಇಂದಿನ ಲೇಖನದಲ್ಲಿ ಎಂಟು ಬಗೆಯ ವಿವಿಧ ತರಕಾರಿ, ಹಣ್ಣು ಹಾಗೂ ಬೇಳೆಗಳ ರುಚಿಯಾದ ಹಲ್ವಾಗಳನ್ನು ಮಾಡುವ ವಿಧಗಳನ್ನು ಅರಿತಿದ್ದೇವೆ. ಕೆಲವರು ಸಿಹಿ ಪದಾರ್ಥಗಳಿಗೆ ಚಿಟಿಕೆ ಉಪ್ಪನ್ನು ಸೇರಿಸಿಕೊಳ್ಳುತ್ತಾರೆ. ರುಚಿಯನ್ನು ಹೆಚ್ಚಿಸಲು ಬೇಕಾದರೆ ಚಿಟಿಕೆ ಉಪ್ಪನ್ನು ಸಹ ನಾವು ಸೇರಿಸಿಕೊಳ್ಳಬಹುದು. ಆರೋಗ್ಯಕರವಾದ, ಮನೆಯಲ್ಲೇ ಮಾಡಿ ತಿನ್ನಬಹುದಾದ ರುಚಿಕರ ಹಲ್ವಾಗಳನ್ನು ತಯಾರಿಸಿ, ಸವಿಯಿರಿ ಎಂಬುದು ನಮ್ಮ ಆಶಯ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.