
ಬಿಳಿಯ ಮೈ, ಹಸಿರು ಜುಟ್ಟು ಎಂಬಂತೆ ಮೂಲಂಗಿಯು ಕಾಣುತ್ತದೆ. ಬಿಳಿಯ ಗಡ್ಡೆಗೆ ಹಸಿರು ಎಲೆಗಳು. ಎರಡು ಸಹ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಕೆಲವರಿಗೆ ಮೂಲಂಗಿಯ ವಾಸನೆ ಅಷ್ಟಾಗಿ ಆಗುವುದಿಲ್ಲ, ಕೆಲವರು ಮೂಲಂಗಿಯನ್ನು ಸ್ವಾದದ ಕಾರಣದಿಂದ ಇಷ್ಟ ಪಡದೆ ಇರಬಹುದು. ಆದರೆ ಮೂಲಂಗಿ ದೇಹದ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಎಲೆ, ಗಡ್ಡೆ, ಬೀಜ, ಬೇರು ಇವೆಲ್ಲವೂ ಆರೋಗ್ಯಕ್ಕೆ ಉತ್ತಮವಾಗಿದ್ದು, ಅನೇಕ ಸಮಸ್ಯೆಗಳಿಗೆ ಮನೆಮದ್ದಾಗಿ ಪರಿಹಾರಗಳನ್ನು ನೀಡುತ್ತದೆ.
ಮೂಲಂಗಿಯ ಕೆಲವು ವೈಜ್ಞಾನಿಕ ವಿಚಾರಗಳು
ವೈಜ್ಞಾನಿಕ ಹೆಸರು – ರ್‍ಯಾಫ಼್ಯಾನಸ್ ಸ್ಯಾಟೀವಸ್ (Raphanus Sativus)
ಆಂಗ್ಲ ಹೆಸರು – ರಾಡಿಷ್ (Radish)
ಮೂಲಂಗಿಯು ಅನೇಕ ರೀತಿಯ ಖನಿಜಗಳನ್ನು ತನ್ನಲ್ಲಿ ಒಳಗೊಂಡಿದ್ದು, ಮುಖ್ಯವಾಗಿ ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಎ ಮತ್ತು ವಿಟಮಿನ್ ಸಿ, ಆಕ್ಸಲಿಕ್ ಆಮ್ಲ, ಸೋಡಿಯಂ, ಪೊಟ್ಯಾಸಿಯಂ, ನಾರು, ರಂಜಕ, ಪಿಷ್ಠ, ಮೇದಸ್ಸು ಹಾಗೂ ಸಸಾರಜನಕ ಇವೆಲ್ಲವನ್ನೂ ಹೊಂದಿದೆ.
ಮೂಲಂಗಿಯೂ ಕೆಂಪು ಬಣ್ಣದಲ್ಲಿಯೂ ಲಭ್ಯವಿದ್ದು, ಅನೇಕ ಔಷಧಿಕ ಉಪಯೋಗಗಳಲ್ಲಿ ಕೆಲಸಕ್ಕೆ ಬರುತ್ತದೆ. ಮೂಲಂಗಿಯು ತನ್ನ ಆಕಾರದಿಂದ ಎರಡು ವಿಧಾದಲ್ಲಿ ಗುರುತಿಸಿಕೊಂಡಿದೆ. ಒಂದು ದೊಡ್ಡ ಮೂಲಂಗಿ ಮತ್ತೊಂದು ಸಣ್ಣ ಮೂಲಂಗಿ. ಸಣ್ಣ ಮೂಲಂಗಿಯು ಆರೋಗ್ಯಕ್ಕೆ ಅತಿ ಉತ್ತಮವಾಗಿದೆ.
ಮೂಲಂಗಿಯು ಆರೋಗ್ಯಕ್ಕೆ ಅತಿ ಉತ್ತಮವಾದ ಆಹಾರವಾಗಿದ್ದು, ಎಲ್ಲಾ ರೀತಿಯ ಸಮಸ್ಯೆಗಳಿಗೆ, ಉದಾಹರಣೆಗೆ ಜ್ವರ, ನೆಗಡಿ, ಉಬ್ಬಸ, ಮೂಗಿನ ಸಮಸ್ಯೆಗಳು, ಗಂಟಲಿನ ಸಮಸ್ಯೆಗಳು ಹಾಗೂ ಕಣ್ಣಿನ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಮೂಲಂಗಿ ಮಾತ್ರವಲ್ಲದೆ ಅದರ ಬೀಜ ಹಾಗೂ ಎಲೆಗಳು ಕೂಡ ಅತಿ ಉತ್ತಮವಾದ ಆರೋಗ್ಯಕರ ಗುಣಗಳನ್ನು ಹೊಂದಿದೆ. ಇಂತಹ ಮೂಲಂಗಿಯನ್ನು ನಾವು ನಿತ್ಯ ನಮ್ಮ ಆಹಾರದಲ್ಲಿ ಬಳಸುವುದು ಅತಿ ಉತ್ತಮವಾಗಿದೆ. ಮೂಲಂಗಿಯನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುವಾಗ ಅನೇಕ ಖಾದ್ಯಗಳನ್ನು ತಯಾರಿಸುತ್ತಾರೆ. ಇಂತಹ ಮೂಲಂಗಿಯ ಕೆಲವು ಆರೋಗ್ಯಕರ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ಈ ಲೇಖನದಲ್ಲಿ ವಿಶ್ಲೇಷಿಸೋಣ.
ಮೂಲಂಗಿಯ ಆರೋಗ್ಯಕರ ಮನೆಮದ್ದುಗಳು
ಮೂಲಂಗಿಯು ಉತ್ತಮ ಜೀರ್ಣಕಾರಕ ಗುಣಗಳನ್ನು ಹೊಂದಿದೆ.
- ಮೂಲಂಗಿಯು ಉತ್ತಮ ಜೀರ್ಣಕಾರಕವಾಗಿದೆ. ತಿಂದ ಆಹಾರದ ಸುಲಭ ಜೀರ್ಣಕ್ರಿಯೆಯಲ್ಲಿ ಮೂಲಂಗಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರತಿದಿನ ಹಸಿ ಮೂಲಂಗಿಯ ಸಲಾಡ್ ನ್ನು ಅಂದರೆ ಮೂಲಂಗಿಯನ್ನು ಹಸಿಯಾಗಿ ತಿನ್ನುವುದನ್ನು ರೂಢಿಸಿಕೊಂಡರೆ ಯಾವುದೇ ರೀತಿಯ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳು ನಮ್ಮನ್ನು ಭಾದಿಸುವುದಿಲ್ಲ.
ಮಲಬದ್ಧತೆ ಹಾಗೂ ಮೂಲವ್ಯಾಧಿಗೆ ಉತ್ತಮ ಪರಿಹಾರವಾಗಿರುವ ಮೂಲಂಗಿ.
- ದೇಹದಲ್ಲಿನ ಅನೇಕ ಸಮಸ್ಯೆಗಳಿಗೆ ಒಂದು ಉತ್ತಮ ಪರಿಹಾರವೆಂದರೆ ಮೂಲಂಗಿ ಎನ್ನಬಹುದು. ಮಲಬದ್ಧತೆ ಹಾಗೂ ಮೂಲವ್ಯಾಧಿಗೆ ಉತ್ತಮ ಪರಿಹಾರವನ್ನು ಮೂಲಂಗಿಯಿಂದ ಪಡೆಯಬಹುದು. ಮೂಲಂಗಿಯನ್ನು ಸಣ್ಣ ಹೋಳುಗಳಾಗಿ ಕತ್ತರಿಸಿ, ಉಪ್ಪು, ಮೆಣಸಿನ ಪುಡಿ ಹಾಗೂ ನಿಂಬೆ ರಸ ಹಿಂಡಿ ಕುಡಿಯುವುದು ಉತ್ತಮವಾಗಿದೆ. ಇದು ಮಲಬದ್ಧತೆ, ಮೂಲವ್ಯಾಧಿ ಅಷ್ಟೇ ಅಲ್ಲದೇ ಅಜೀರ್ಣ, ದೃಷ್ಠಿ ಸಮಸ್ಯೆಗಳಿಗೂ ಉತ್ತಮವಾಗಿದೆ.
- ಮೂಲವ್ಯಾಧಿ ಹಾಗೂ ಮಲಬದ್ಧತೆಗೆ ಉತ್ತಮ ಪರಿಹಾರವೆಂದರೆ ಸುವರ್ಣಗಡ್ಡೆಯನ್ನು ಚೆನ್ನಾಗಿ ತೊಳೆದು, ಸಣ್ಣ ತುಂಡುಗಳಾಗಿ ಕತ್ತರಿಸಿ, ಒಣಗಿಸಿಕೊಳ್ಳಬೇಕು. ಒಣಗಿದ ಸುವರ್ಣಗಡ್ಡೆಯನ್ನು ಪುಡಿ ಮಾಡಿಕೊಂಡು ಶೇಖರಿಸಿ ಇಟ್ಟುಕೊಳ್ಳಬೇಕು. ಮೂಲಂಗಿಯನ್ನು ಸಣ್ಣಗೆ ಕತ್ತರಿಸಿ, ಜಜ್ಜಿಕೊಂಡು ರಸವನ್ನು ಹಿಂಡಿಕೊಳ್ಳಬೇಕು. ಹಿಂಡಿಕೊಂಡ ಮೂಲಂಗಿ ರಸದೊಂದಿಗೆ ಅರ್ಧ ಚಮಚ ಸುವರ್ಣಗಡ್ಡೆಯ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ಮೂಲವ್ಯಾಧಿ ಹಾಗೂ ಮಲಬದ್ಧತೆ ಎರಡು ಕೂಡ ಕಡಿಮೆಯಾಗುತ್ತದೆ.
- ಮೂಲವ್ಯಾಧಿಗೆ ಮೂಲಂಗಿಯೇ ಮದ್ದು ಎಂಬಂತೆ ಮೂಲವ್ಯಾಧಿ ಸಮಸ್ಯೆ ಇರುವವರು ಪ್ರತಿದಿನ ಮೂಲಂಗಿಯನ್ನು ಹಸಿಯಾಗಿ ತಿನ್ನುವುದರಿಂದ ತ್ವರಿತವಾಗಿ ಮೂಲವ್ಯಾಧಿಯನ್ನು ಕಡಿಮೆ ಮಾಡಿಕೊಳ್ಳಬಹುದು.
- ಮೂಲವ್ಯಾಧಿಗೆ ಕೆಂಪು ಮೂಲಂಗಿ ಕೂಡ ಉತ್ತಮ ಆಹಾರವಾಗಿದೆ. ಕೆಂಪು ಮೂಲಂಗಿಯನ್ನು ಚೆನ್ನಾಗಿ ಶುಚಿಗೊಳಿಸಿ, ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು. ಈ ತುಂಡುಗಳನ್ನು ಜೇನುತುಪ್ಪದಲ್ಲಿ ಹಾಕಿ ಕೆಲವು ದಿನಗಳು ಹಾಗೆಯೇ ಬಿಡಬೇಕು. ಕೆಲವು ದಿನಗಳ ನಂತರ ರುಚಿಕರವಾದ ನೆಲ್ಲಿಕಾಯಿ ಮೊರಬ್ಬ ಸಿದ್ದವಾಗುತ್ತದೆ. ಈ ಕೆಂಪು ಮೂಲಂಗಿ ಮೊರಬ್ಬವನ್ನು ಸೇವಿಸುವುದರಿಂದ ಮೂಲವ್ಯಾಧಿ ಸಮಸ್ಯೆಗಳು ಕಡಿಮೆಯಾಗುತ್ತದೆ. ಹಾಗೂ ಬಾಯಿ, ಮೂಗು ಹಾಗೂ ಇತರ ಕಡೆಗಳಿಂದ ಸೋರುವ ರಕ್ತವನ್ನು ಕೂಡ ನಿಯಂತ್ರಿಸುತ್ತದೆ. ಅರೋಗ್ಯಕ್ಕೂ ಇದು ಉತ್ತಮವಾಗಿದೆ.
ಚರ್ಮ ರೋಗಗಳಿಗೆ ಮೂಲಂಗಿಯ ಉತ್ತಮ ಪರಿಹಾರಗಳು
- ಚರ್ಮದ ಸಮಸ್ಯೆಗಳಾದ ತುರಿಕೆ, ಕಜ್ಜಿ, ಹುಳಕಡ್ಡಿ, ಗಜಕರ್ಣಗಳಂತ ಸಮಸ್ಯೆಗಳಿಗೆ ಮೂಲಂಗಿಯು ಉತ್ತಮ ಪರಿಹಾರವನ್ನು ನೀಡುತ್ತದೆ. ಮೂಲಂಗಿಯ ಬೀಜಗಳು ಚರ್ಮ ರೋಗ ಪರಿಹಾರಕ್ಕೆ ಸೂಕ್ತ ಮದ್ದಾಗಿ ಕಾರ್ಯನಿರ್ವಹಿಸುತ್ತದೆ. ಮೂಲಂಗಿ ಬೀಜಗಳನ್ನು ನಿಂಬೆ ಹಣ್ಣಿನ ರಸದಲ್ಲಿ ಬೆರೆಸಬೇಕು. ನಂತರ ಚೆನ್ನಾಗಿ ಅರೆದುಕೊಂಡು ಚರ್ಮದ ಸಮಸ್ಯೆಗಳಿರುವ ಕಜ್ಜಿ, ತುರಿಕೆ, ಗಜಕರ್ಣ, ಹುಳಕಡ್ಡಿಗಳು ಇರುವ ಕಡೆ ಹಚ್ಚಬೇಕು. ಇದನ್ನು ನಿತ್ಯ ಮಾಡುವುದರಿಂದ ಚರ್ಮದ ಅನೇಕ ಸಮಸ್ಯೆಗಳು ಪರಿಹಾರವಾಗುತ್ತದೆ.
ಹೆಣ್ಣು ಮಕ್ಕಳ ಋತುಚಕ್ರದ ಕ್ರಮಬದ್ಧತೆಗೂ ಮೂಲಂಗಿ ಸಹಾಯಕವಾಗಿದೆ
- ಹೆಣ್ಣು ಮಕ್ಕಳ ಋತು ಚಕ್ರವು ಅನೇಕ ಕಾರಣಗಳಿಂದ ಕ್ರಮ ಬದ್ದವಾಗಿ ಸಗದೆ ಇರಬಹುದು. ಅಂತಹ ಸಮಯದಲ್ಲಿ ಮೂಲಂಗಿಯ ಸಹಾಯವನ್ನು ನಾವು ಪಡೆದುಕೊಳ್ಳಬಹುದು. ಹೆಣ್ಣು ಮಕ್ಕಳ ಮುಟ್ಟು ತಡವಾಗುತ್ತಿದ್ದರೆ ಒಂದು ಚಮಚದಷ್ಟು ಮೂಲಂಗಿ ಬೀಜವನ್ನು ನೀರಿನಲ್ಲಿ ಚೆನ್ನಾಗಿ ಅರೆಯಬೇಕು. ನಂತರ ಅದನ್ನು ಕಡೆದ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು. ಇದು ಋತುಚಕ್ರವನ್ನು ಕ್ರಮಬದ್ಧವಾಗಿರಿಸಲು ಸಹಾಯ ಮಾಡುತ್ತದೆ. ಅರೋಗ್ಯಕ್ಕೂ ಉತ್ತಮವಾಗಿದೆ.
ನೆಗಡಿಗೆ ಮೂಲಂಗಿಯ ಉತ್ತಮ ಪರಿಹಾರಗಳು
ಪದೇ ಪದೇ ನೆಗಡಿ ಮರುಕಳಿಸಿದರೆ, ನಿತ್ಯ ಆಹಾರದಲ್ಲಿ ಹಸಿ ಮೂಲಂಗಿಯನ್ನು ಸೇವಿಸಬೇಕು. ಮೂಲಂಗಿಯನ್ನು ತುರಿದುಕೊಂಡು ಸಲಾಡ್ ನ ರೂಪದಲ್ಲಿ ಸೇವಿಸುವುದು ಅತಿ ಉತ್ತಮವಾಗಿದೆ. ಇದು ಕಟ್ಟಿದ ಮೂಗಿನ ಸಮಸ್ಯೆಗಳನ್ನು ಕಡಿಮೆಯಾಗಿಸುತ್ತದೆ. ನೆಗಡಿಗೆ ಉತ್ತಮ ಪರಿಹಾರವಾಗಿದೆ.
ಅರ್ಧ ತಲೆನೋವಿನ ಸಮಸ್ಯೆಗೆ ಮೂಲಂಗಿಯ ಉತ್ತಮ ಪರಿಹಾರಗಳು
ಮೂಲಂಗಿಯ ಒಂದು ವಿಧವಾದ ಕೆಂಪು ಮೂಲಂಗಿಯನ್ನು ನಾವಿಲ್ಲಿ ಅರ್ಧ ತಲೆನೋವಿನ ಸಮಸ್ಯೆಗೆ ಪರಿಹಾರವಾಗಿ ಬಳಸಬೇಕು. ಕೆಂಪು ಮೂಲಂಗಿಯ ಎಲೆಗಳನ್ನು ತಂದು ಶುಚಿಗೊಳಿಸಬೇಕು. ಎಲೆಗಳ ಕೆಳ ಭಾಗಕ್ಕೆ ತುಪ್ಪವನ್ನು ಹಚ್ಚಿ, ಓಲೆಯ ಮೇಲೆ ದೂರ ಹಿಡಿದು, ಖಾಲಿ ಬಿಸಿಯನ್ನು ತಾಗಿಸಬೇಕು. ನಂತರ ಎಲೆಯನ್ನು ಹಿಂಡಿದರೆ ರಸ ಬರುತ್ತದೆ. ಈ ರಸವನ್ನು ದಿನಕ್ಕೆ ಇರಡು ಭಾರಿ ಎರಡು ಹನಿ ಕಿವಿಗೆ ಹಾಗೂ ಮೂಗಿಗೆ ಹಾಕಬೇಕು. ಇದು ಅರ್ಧ ತಲೆ ನೋವನ್ನು ಸಂಪೂರ್ಣವಾಗಿ ಗುಣಪಡಿಸುತ್ತದೆ.
ಹೃದಯದ ಉತ್ತಮ ಆರೋಗ್ಯಕ್ಕೆ ಕೂಡ ಮೂಲಂಗಿ ಉತ್ತಮವಾಗಿದೆ.
ಮಕ್ಕಳ ಉತ್ತಮ ಬೆಳವಣಿಗೆ ಹಾಗೂ ಎಲ್ಲರ ಹೃದಯದ ಉತ್ತಮ ಆರೋಗ್ಯಕ್ಕೆ ಕೂಡ ಕೆಂಪು ಮೂಲಂಗಿ ಅತಿ ಉತ್ತಮವಾಗಿದೆ. ಕೆಂಪು ಮೂಲಂಗಿಯನ್ನು ಸಣ್ಣದಾಗಿ ಕತ್ತರಿಸಿಕೊಂಡು, ಸಕ್ಕರೆ ಪಾಕದಲ್ಲಿ ಸೇರಿಸಬೇಕು. ಈ ಮಿಶ್ರಣಕ್ಕೆ ಕೇಸರಿ ಪಚ್ಚಕರ್ಪುರ ಸೇರಿಸಿ, ಶೇಖರಿಸಿಕೊಳ್ಳಬೇಕು. ಈ ಮೂಲಂಗಿ ಸಕ್ಕರೆ ಪಾನಕವನ್ನು ಮಕ್ಕಳಿಗೆ ಕುಡಿಸಿದರೆ ಅವರ ಬೆಳವಣಿಗೆ ಉತ್ತಮವಾಗಿರುತ್ತದೆ. ಹಾಗೆಯೇ ಪ್ರತಿ ಒಬ್ಬರು ಈ ಪಾನಕವನ್ನು ಹೃದಯದ ಅರೋಗ್ಯವನ್ನು ಉತ್ತಮವಾಗಿರಿಸಲು ಕುಡಿಯಬೇಕು. ಇದು ಹೃದಯದ ಬಲವನ್ನು ವೃದ್ಧಿಸುತ್ತದೆ. ಇದು ಸುಲಭ ಜೀರ್ಣಕ್ರಿಯೆಗೆ ಕೂಡ ಉತ್ತಮವಾಗಿದೆ, ಮಲಬದ್ಧತೆಯನ್ನು ಕೂಡ ಕಡಿಮೆಗೊಳಿಸುತ್ತದೆ.
ಕಟ್ಟು ಮೂತ್ರ ಸಮಸ್ಯೆಗೆ ಮೂಲಂಗಿಯ ಪರಿಹಾರಗಳು
ಕಟ್ಟು ಮೂತ್ರ ಸಮಸ್ಯೆ ನಿವಾರಣೆಗೆ ಮೂಲಂಗಿಯ ಸೊಪ್ಪು ಅತಿ ಉತ್ತಮ ಆಹಾರವಾಗಿದೆ. ಮೂಲಂಗಿ ಸೊಪ್ಪನ್ನು ಅರೆದು ರಸವನ್ನು ಹಿಂಡಿಕೊಳ್ಳಬೇಕು. ಈ ಮೂಲಂಗಿ ಎಲೆಯ ರಸವನ್ನು ಕುಡಿಯುವುದರಿಂದ ಕಟ್ಟು ಮೂತ್ರ ಸಮಸ್ಯೆ ಕಡಿಮೆಯಾಗುತ್ತದೆ. ಮೂಲಂಗಿ ಎಲೆಗಳಲ್ಲಿ ಅಧಿಕ ಪೋಷಕಾಂಶವಿದ್ದು ಆರೋಗ್ಯಕ್ಕೆ ಉತ್ತಮವಾಗಿದೆ. ಮೂಲಂಗಿ ಸೊಪ್ಪನ್ನು ರೊಟ್ಟಿ ಮಾಡಿ ಸೇವಿಸಬಹುದು, ಇಲ್ಲವೇ ಪಲ್ಯ ಮಾಡಿ ಸೇವಿಸಬಹುದು. ಇದು ಬಲು ರುಚಿಯಾಗಿರುತ್ತದೆ.
ಮನೆಯಲ್ಲಿ ಅಕಸ್ಮಾತ್ ಚೇಳು ಕಚ್ಚಿದರೆ, ಪ್ರಥಮ ಚಿಕಿತ್ಸೆಗಾಗಿ ಮೂಲಂಗಿ ಅತಿ ಉತ್ತಮವಾಗಿದೆ.
ಚೇಳು ಕಡಿದಾಗ ಮೊದಲು ಪ್ರಥಮ ಚಿಕಿತ್ಸೆಗಾಗಿ ಮೂಲಂಗಿ ಹಾಗೂ ಉಪ್ಪನ್ನು, ಎರಡನ್ನು ಸೇರಿಸಿ ಚೆನ್ನಾಗಿ ಅರೆದುಕೊಳ್ಳಬೇಕು. ಚೇಳು ಕಚ್ಚಿದ ಸ್ಥಳದಲ್ಲಿ ಈ ಮೂಲಂಗಿ ಉಪ್ಪಿನ ಮಿಶ್ರಣವನ್ನು ಹಚ್ಚಬೇಕು. ಇದರಿಂದ ವಿಷ ಇರುವುದಿಲ್ಲ ಹಾಗೆಯೇ ಕಡಿತದ ಉರಿ ಕಡಿಮೆಯಾಗುತ್ತದೆ.
ಕಿವಿ ಸೋರುವ ಸಮಸ್ಯೆಗೂ ಮೂಲಂಗಿ ಉತ್ತಮವಾಗಿದೆ.
ಮೂಲಂಗಿಯು ಎಲ್ಲಾ ಸಮಸ್ಯೆಗೂ ಪರಿಹಾರ ನೀಡುವಂತೆ ಕಿವಿಯ ಅರೋಗ್ಯಕ್ಕೂ ತನ್ನ ಕೊಡುಗೆಯನ್ನು ನೀಡಿದೆ. ಕಿವಿ ಸೋರುವ ಸಮಸ್ಯೆಗಳು ಇದ್ದರೆ ಮೂಲಂಗಿಯನ್ನು ಸುಟ್ಟು, ನಂತರ ಸುಟ್ಟ ಮೂಲಂಗಿಯನ್ನು ಕುಟ್ಟಿ ರಸವನ್ನು ತೆಗೆಯಬೇಕು. ಈ ರಸವನ್ನು ಸೋರುವ ಕಿವಿಗಳಿಗೆ ಎರಡು ಹನಿ ಹಾಕುವುದರಿಂದ ಕಿವಿ ಸೋರುವ ಸಮಸ್ಯೆ ಕಡಿಮೆಯಾಗುತ್ತದೆ.
ಕಾಲರ ರೋಗಕ್ಕೆ ಮೂಲಂಗಿಯ ಕಷಾಯ ಉತ್ತಮವಾಗಿದೆ.
ಮೂಲಂಗಿಯು ಕಾಲರ ಸಮಸ್ಯೆಗೂ ಪರಿಹಾರವನ್ನು ನೀಡುತ್ತದೆ. ಒಣಗಿದ ಮೂಲಂಗಿಯ ತುಂಡನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಕಷಾಯವನ್ನು ತಯಾರಿಸಿಕೊಳ್ಳಬೇಕು. ಪ್ರತಿ ಅರ್ಧ ತಾಸಿಗೆ ಒಮ್ಮೆ ಈ ಕಷಾಯವನ್ನು ಕುಡಿಯಬೇಕು. ಇದು ಕಾಲರ ಸಮಸ್ಯೆ ಇದ್ದವರಿಗೆ ಸಾಕಷ್ಟು ಗುಣಮುಖರಾಗುವ ಭರವಸೆಯನ್ನು ನೀಡುತ್ತದೆ.
ಮೂಲಂಗಿ ಹಾಗೂ ಅದರ ಎಲೆಗಳು, ಬೀಜಗಳ ಅನೇಕ ಉಪಯೋಗಗಳನ್ನು ನಾವು ಇಂದಿನ ಲೇಖನದ ಮೂಲಕ ತಿಳಿದುಕೊಂಡಿದ್ದೇವೆ. ಇನ್ನೂ ಇಂದಿನ ಕಾಲದಲ್ಲಿ ಮಾರುಕಟ್ಟೆಯಲ್ಲಿ ಬರಿ ಮೂಲಂಗಿ ಗಡ್ಡೆಗಳು ಮಾತ್ರ ಕಾಣಸಿಗುತ್ತದೆ. ಮೂಲಂಗಿಯ ಜೊತೆಗೆ ಅದರ ಸೊಪ್ಪನ್ನು ಕೂಡ ನಾವು ಆಹಾರವಾಗಿ ಬಳಸಬೇಕು. ಮೂಲಂಗಿ ಹಾಗೂ ಅದರ ಸೊಪ್ಪು, ಎರಡು ಕೂಡ ನಮ್ಮ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಮೂಲಂಗಿಯನ್ನು ಹಸಿಯಾಗಿ ತಿನ್ನುವುದು ಅತಿ ಉತ್ತಮವಾಗಿದೆ. ಮೂಲಂಗಿಯನ್ನು ಬೇಯಿಸಿ ತಿನ್ನುವುದು, ಹೊಟ್ಟೆಯಲ್ಲಿ ವಾಯು ಉತ್ಪತ್ತಿಗೆ ಕಾರಣವಾಗುತ್ತದೆ. ಮೂಲಂಗಿ ಇಂದ ಕೂಡಲೇ ಮೂಗು ಮುರಿಯುವವರು ಒಮ್ಮೆ ಮೂಲಂಗಿಯ ಪ್ರಯೋಜನಗಳು ಹಾಗೂ ಅರೋಗ್ಯವರ್ಧಕ ಗುಣಗಳ ಬಗ್ಗೆ ತಿಳಿದು, ಮೂಲಂಗಿಯನ್ನು ಆಹಾರದಲ್ಲಿ ಬಳಸುವುದು ಅತಿ ಉತ್ತಮವಾಗಿದೆ. ಮೂಲಂಗಿಯ ಈ ಎಲ್ಲ ಪ್ರಯೋಜನಗಳನ್ನು ಬಳಸಿಕೊಳ್ಳಲಿ ಎಂಬುದು ನಮ್ಮ ಲೇಖನದ ಆಶಯ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.