
ಹಿಂಗು ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡುತ್ತದೆ ಎನ್ನುವ ಮಾತನ್ನು ನಾವು ಕೇಳಿದ್ದೇವೆ. ಅಡುಗೆಯಲ್ಲಿ ಕೆಲವು ವಸ್ತುಗಳನ್ನು ರುಚಿಗಾಗಿ ಬಳಸುತ್ತೇವೆ, ಇನ್ನೂ ಕೆಲವನ್ನು ಬಣ್ಣಕ್ಕಾಗಿ ಬಳಸುತ್ತೇವೆ ಹಾಗೆಯೇ ಕೆಲವನ್ನು ಸುವಾಸನೆಗೆ ಬಳಸುತ್ತೇವೆ. ಅಂತಹ ಉತ್ತಮ ಸುವಾಸನೆವುಳ್ಳ ಒಂದು ಪದಾರ್ಥವೇ ಹಿಂಗು. ನಿತ್ಯ ನಾವು ಅಡುಗೆಯಲ್ಲಿ ಖಾಡ್ಡಾಯವಾಗಿ ಬಳಸುವ ಒಂದು ಪದಾರ್ಥ. ಹಿಂಗು ಕಹಿ ರಸದ ಸ್ವಾದವನ್ನು ಹೊಂದಿದ್ದು, ಉಷ್ಣ ಸ್ವಭಾವ ಉಳ್ಳ ಪದಾರ್ಥವಾಗಿದೆ.
ಹಿಂಗನ್ನು ಬಳಸುವ ಕಾರಣ ಸುವಾಸನೆ ಮಾತ್ರವಲ್ಲ, ಹಿಂಗಿನ ಬಳಕೆಯು ಆರೋಗ್ಯದ ದೃಷ್ಠಿಯಿಂದಲೂ ಸಹ ಉತ್ತಮವಾಗಿದೆ. ಹಿಂಗು ಜೀರ್ಣಕರಕವಾಗಿದ್ದು, ಹೊಟ್ಟೆಯಲ್ಲಿ ವಾಯುವಿನ ಉತ್ಪತ್ತಿಯನ್ನು ಕಡಿಮೆಗೊಳಿಸುತ್ತದೆ. ಹೆಚ್ಚಾಗಿ ಸೊಪ್ಪು, ತರಕಾರಿ ಹಾಗೂ ಬೇಳೆಗಳು ಬೇಯುವಾಗ ವಾಯುವನ್ನು ಬಿಡುಗಡೆ ಮಾಡುತ್ತದೆ. ಅದೇ ರೀತಿ ಶರೀರದಲ್ಲಿ ಕೂಡ ಬೇಯಿಸಿದ ತರಕಾರಿ, ಸೊಪ್ಪು ಹಾಗೂ ಬೇಳೆಗಳು ಜೀರ್ಣಕ್ರಿಯೆಯ ಸಮಯದಲ್ಲಿ ವಾಯುವನ್ನು ಬಿಡುಗಡೆಗೊಳಿಸುತ್ತದೆ. ಹಾಗಾಗಿ ಸ್ವಲ್ಪ ಹಿಂಗನ್ನು ಅಡುಗೆಗೆ ಸೇರಿಸುವುದರಿಂದ ವಾಯುವು ಶರೀರದಿಂದ ಹೊರಹಾಕಲ್ಪಪಡುತ್ತದೆ. ಹಾಗೆಯೇ ಅಡುಗೆಗೆ ಉತ್ತಮ ರುಚಿ ಹಾಗೂ ಸುವಾಸನೆಯನ್ನು ಕೂಡ ನೀಡುತ್ತದೆ.
ಹಿಂಗಿನಲ್ಲಿ ಜೀರ್ಣಕಾರಕ ಗುಣಗಳು ಮಾತ್ರವಲ್ಲದೆ ಇನ್ನೂ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಇಂದಿನ ಲೇಖನದಲ್ಲಿ ಹಿಂಗಿನ ಕೆಲವುವೈಜ್ಞಾನಿಕ ವಿಚಾರಗಳು ಹಾಗೂ ಆರೋಗ್ಯಕರ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ವಿಶ್ಲೇಷಿಸೋಣ.
ಹಿಂಗಿನ ಕೆಲವು ವೈಜ್ಞಾನಿಕ ವಿಚಾರಗಳು
ಹಿಂಗನ್ನು ಫೆರುಲಾ ಅಸಾಫೋಟಿಡಾ (Ferula assa-foetida) ಎಂಬ ಸಸ್ಯದಿಂದ ತಯಾರಿಸುತ್ತಾರೆ. ಹಾಗೆಯೇ ಹಿಂಗಿನ ಆಂಗ್ಲ ಹೆಸರು ಅಸಾಫೋಟಿಡಾ (Asafoetida) ಆಗಿದೆ.
ಹಿಂಗಿನಲ್ಲಿ ಅನೇಕ ವೈಜ್ಞಾನಿಕ ಅಂಶಗಳಿದ್ದು, ಅನೇಕ ಫಿನಾಲಿಕ್ ಸಂಯುಕ್ತಗಳು, ಸಲ್ಫರ್ ಸಂಯುಕ್ತಗಳು ಹಾಗೆಯೇ ಫೇರುಲಿಕ್ ಆಮ್ಲಗಳು ಇನ್ನೂ ಅನೇಕ ಅಂಶಗಳನ್ನು ಒಳಗೊಂಡಿದೆ. ಮುಖ್ಯವಾದ ಸಲ್ಫರ್ ಸಂಯುಕ್ತವೆಂದರೆ ಡೈ-ಸೆಕೆಂಡರಿ ಬ್ಯುಟೈಲ್ ಟ್ರೈಸಲ್ಫೈಡ್ (di-secondary butyl trisulfide) ಇದು ಹಿಂಗಿನ ವಿಶಿಷ್ಟ ವಾಸನೆ ಹಾಗೂ ರುಚಿಗೆ ಮುಖ್ಯ ಕಾರಣವಾಗಿದೆ.
ಹಿಂಗನ್ನು ಬಳಸುವ ಮುನ್ನ ಅದರ ಪರಿಶುದ್ಧತೆಯನ್ನು ಪರೀಕ್ಷಿಸುವುದು ಉತ್ತಮವಾಗಿದೆ, ಇಂದಿನ ದಿನಮಾನದಲ್ಲಿ ಎಲ್ಲವನ್ನು ಹೆಚ್ಚಾಗಿ ಕಲಬೆರಕೆಯನ್ನು ಮಾಡಿ, ವಸ್ತುವಿನ ಶುದ್ಧತೆಯನ್ನು ಹಾಳು ಮಾಡುತ್ತಾರೆ. ಹಾಗಾಗಿ ಹಿಂಗಿನ ಪರಿಶುದ್ಧತೆಯನ್ನು ನಾವು ಪರೀಕ್ಷಿಸಿ ಬಳಸುವುದು ಉತ್ತಮ. ಏಕೆಂದರೆ ನಾವು ಕಲಬೆರಿಕೆಯ ವಸ್ತುಗಳಿಂದ ಉತ್ತಮ ಆರೋಗ್ಯಕರ ಲಾಭಗಳನ್ನು ಪಡೆಯುವುದು ಅಸಾಧ್ಯ.
ಹಿಂಗಿನ ಪರಿಶುದ್ಧತೆಯನ್ನು ಪರೀಕ್ಷಿಸುವ ಒಂದು ವಿಧಾನವನ್ನು ಈಗ ಅರಿಯೋಣ:
ಒಂದು ಬಟ್ಟಲಿಗೆ ಸ್ವಲ್ಪ ಹಿಂಗನ್ನು ಹಾಕಬೇಕು. ಸ್ವಲ್ಪ ಸ್ವಲ್ಪ ಹಿಂಗು ಕರಗಿದಂತೆಲ್ಲ ನೀರು ಬೆಳ್ಳಗಾಗುತ್ತದೆ. ಪೂರ್ಣ ಹಿಂಗು ಕರಗಿದ ಮೇಲೆ ಪೂರ್ತಿ ನೀರು ಬೆಳ್ಳಗಾಗುತ್ತದೆ. ಹಾಗೆಯೇ ನೀರಿನ ತಳದಲ್ಲಿ ಯಾವುದೇ ರೀತಿಯ ಮಿಶ್ರಣವು ಸಂಗ್ರಹವಾಗುವುದಿಲ್ಲ. ಹಿಂಗು ನೀರಿನಲ್ಲಿ ಪೂರ್ತಿ ಕರಗಿ, ನೀರು ಬೆಳ್ಳಗಾದರೆ ಅದು ಶುದ್ಧ ಹಿಂಗು.
ಹಿಂಗಿನ ಆರೋಗ್ಯಕರ ಮನೆಮದ್ದುಗಳು
ಸಂಧಿವಾತದ ಸಮಸ್ಯೆಗೆ ಹಿಂಗಿನ ಪ್ರಯೋಜನಗಳು
- ಸಂಧಿವಾತದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಒಂದು ನೋವು ನಿವಾರಕ ಎಣ್ಣೆಯನ್ನು ನಾವು ಹಿಂಗನ್ನು ಬಳಸಿ ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಮೊದಲಿಗೆ ಬೆಳ್ಳುಳ್ಳಿ, ಶುಂಠಿ ಹಾಗೂ ಹಿಂಗನ್ನು ಸಮ ಪ್ರಮಾಣದಲ್ಲಿ ಎಳ್ಳೆಣ್ಣೆಯಲ್ಲಿ ಹಾಕಿ ಕುದಿಸಬೇಕು. ಚೆನ್ನಾಗಿ ಕುದಿ ಬಂದ ನಂತರ ಶೋಧಿಸಿಕೊಂಡು, ಒಂದು ಗಾಜಿನ ಪಾತ್ರೆಯಲ್ಲಿ ಹಾಕಿಕೊಳ್ಳಬೇಕು. ನೋವಿರುವ ಜಾಗದಲ್ಲಿ ಈ ತಯಾರಿಸಿದ ಎಣ್ಣೆಯನ್ನು ಹಚ್ಚಿಕೊಂಡು, ಅರ್ಧ ಗಂಟೆಗಳ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡಿಕೊಳ್ಳಬೇಕು. ಹೀಗೆ ನಿತ್ಯ ಮಾಡುವುದರಿಂದ ನೋವು ಕ್ರಮೇಣವಾಗಿ ಕಡಿಮೆಯಾಗುತ್ತದೆ.
ಬಾಣಂತಿಯರ ಎದೆಹಾಲು ಉತ್ಪತ್ತಿಗೆ ಹಿಂಗು ಸಹಾಯಕವಾಗಿದೆ.
- ಬಾಣಂತಿಯರಿಗೆ ದೇಹವನ್ನು ಉಷ್ಣವಾಗಿಡುವುದು ಅತಿ ಮುಖ್ಯ. ಕೆಲವರಲ್ಲಿ ಹಾಲಿನ ಉತ್ಪತ್ತಿಯು ಕಡಿಮೆ ಇರುವ ಕಾರಣ ಹೆಚ್ಚಿನ ಹಾಲು ಉತ್ಪತ್ತಿಗಾಗಿ ಲವಂಗ ಹಾಗೂ ಹಿಂಗನ್ನು ಒಂದು ಲೋಟ ನೀರಿಗೆ ಸೇರಿಸಿ, ಕುದಿಸಿಕೊಳ್ಳಬೇಕು. ಇಟ್ಟ ನೀರು ಅರ್ಧದಷ್ಟು ಇಂಗಿದ ಮೇಲೆ ಸೋಸಿಕೊಂಡು, ಬಾಣಂತಿಯರಿಗೆ ನೀಡಬೇಕು. ಇದು ಎದೆಹಾಲಿನ ಉತ್ಪತ್ತಿಯನ್ನು ಜಾಸ್ತಿ ಮಾಡಲು ಉತ್ತಮವಾಗಿದೆ. ಹಾಗೆಯೇ ದೇಹದ ಉಷ್ಣಕ್ಕೂ ಉತ್ತಮವಾಗಿದೆ.
ಕೆಮ್ಮು ಹಾಗೂ ದಮ್ಮಿನ ಸಮಸ್ಯೆಗಳಿಗೆ ಹಿಂಗಿನ ಉತ್ತಮ ಪರಿಹಾರಗಳು.
- ಉಬ್ಬಸ, ದಮ್ಮು ಹಾಗೆಯೇ ಹಲವು ದಿನಗಳಿಂದ ಇರುವ ನಾಯಿ ಕೆಮ್ಮಿಗೆ ಕೂಡ ಹಿಂಗಿನಿಂದ ನಾವು ಪರಿಹಾರವನ್ನು ಪಡೆದುಕೊಳ್ಳಬಹುದು. ಒಂದು ಕಡಲೆ ಕಾಳು ಗಾತ್ರದ ಹಿಂಗನ್ನು, ವೀಳ್ಯದೆಲೆ ಹಾಗೂ ಬಿಳಿ ಈರುಳ್ಳಿಯ ಜೊತೆಗೆ ಸೇರಿಸಿ ಅರೆದುಕೊಳ್ಳಬೇಕು. ಅರೆದುಕೊಂಡ ಮಿಶ್ರಣವನ್ನು ಹಿಂಡಿ ರಸವನ್ನು ತೆಗೆದುಕೊಳ್ಳಬೇಕು. ಈ ರಸಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ, ಪ್ರತಿದಿನ ಎರಡು ಬಾರಿ ಸೇವಿಸುವುದರಿಂದ ದಮ್ಮಿನ ಸಮಸ್ಯೆಗಳು ಹಾಗೂ ನಾಯಿ ಕೆಮ್ಮು ಇವೆಲ್ಲವೂ ಕಡಿಮೆಯಾಗುತ್ತದೆ.
ಕೈ, ಕಾಲು ನೋವಿಗೆ ಹಿಂಗಿನ ಉತ್ತಮ ಪರಿಹಾರಗಳು
- ಕೈ ಹಾಗೂ ಕಾಲು ನೋವಿದ್ದರೆ, ಈ ಹಿಂಗಿನ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಬೇಕು. ಹಿಂಗಿನ ಎಣ್ಣೆಯನ್ನು ಮಾಡಲು ಮೊದಲಿಗೆ ಒಂದು ಸಣ್ಣ ಲೋಟ ತೆಂಗಿನ ಎಣ್ಣೆಗೆ ಹಿಂಗಿನ ಪುಡಿಯನ್ನು ಸೇರಿಸಿ, ಬಿಸಿ ಮಾಡಿಕೊಳ್ಳಬೇಕು. ಈ ಎಣ್ಣೆಯನ್ನು ಆರಿದ ನಂತರ ಕೈ ಹಾಗೂ ಕಾಲು ನೋವಿದ್ದಲ್ಲಿ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು.
ಮಲಬದ್ಧತೆಯ ನಿವಾರಣೆಗೂ ಕೂಡ ಹಿಂಗಿನ ಸೇವನೆಯು ಉಪಯುಕ್ತವಾಗಿದೆ.
- ಮಲಬದ್ಧತೆಯ ಸಮಸ್ಯೆ ಇರುವವರು ಒಂದು ಲೋಟ ನೀರಿನಲ್ಲಿ ಹಿಂಗನ್ನು ಕರಗಿಸಿ, ಆ ಹಿಂಗಿನ ನೀರನ್ನು ಕುಡಿಯಬೇಕು. ಇದು ತ್ವರಿತವಾಗಿ ಮಲಬದ್ಧತೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.
ಹೆಣ್ಣು ಮಕ್ಕಳ ಋತುಚಕ್ರವು ಕ್ರಮಬದ್ಧವಾಗಿ ಆಗದಿದ್ದರೆ ಕೂಡ ಹಿಂಗಿನ ಸಹಾಯವನ್ನು ಪಡೆದುಕೊಳ್ಳಬಹುದು.
- ಹೆಣ್ಣು ಮಕ್ಕಳ ಋತುಚಕ್ರದಲ್ಲಿ ಏರುಪೇರಾದಾಗ, ಅದನ್ನು ಕ್ರಮಬದ್ಧವಾಗಿಸಲು ಸ್ವಲ್ಪ ಹಿಂಗನ್ನು ನುಂಗಿ ಒಂದು ಲೋಟ ಬಿಸಿ ನೀರನ್ನು ಕುಡಿಯಬೇಕು. ಹೀಗೆ ಮೂರು ದಿನಗಳ ಕಾಲ ಮಾಡಿದರೆ ತ್ವರಿತವಾಗಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಹಿಂಗು ಉಯುಕ್ತವಾಗಿದೆ.
- ಅಜೀರ್ಣದ ಕಾರಣವೋ, ಇಲ್ಲವೇ ವಾಯುವಿನ ಕಾರಣದಿಂದ ಹೊಟ್ಟೆ ನೋವಾಗುತ್ತಿದ್ದರೆ, ಬಾಳೆಹಣ್ಣಿನಲ್ಲಿ ಹಿಂಗನ್ನು ಇಟ್ಟು, ನುಂಗಬೇಕು. ಇದು ಹೊಟ್ಟೆ ನೋವನ್ನು ತ್ವರಿತವಾಗಿ ಪರಿಹರಿಸುತ್ತದೆ.
- ತಿಂದ ಆಹಾರದ ಸುಲಭ ಜೀರ್ಣಕ್ರಿಯೆಗೆ, ಹಾಗೆಯೇ ಹೊಟ್ಟೆಯಲ್ಲಿ ವಾಯು ಶೇಖರಣೆಯಾಗಿ ಹೊಟ್ಟೆ ಭಾರವಾಗಿದ್ದರೆ ಒಂದು ಲೋಟ ಕಡೆದ ಮಜ್ಜಿಗೆಗೆ ಹಿಂಗನ್ನು ಸೇರಿಸಿ, ಕುಡಿಯಬೇಕು. ಇದು ಹೊಟ್ಟೆ ಉಬ್ಬರವನ್ನು ಕಡಿಮೆಗೊಳಿಸಿ, ಜೀರ್ಣಕ್ರಿಯೆಯನ್ನು ಕೂಡ ಸುಲಭಗೊಳಿಸುತ್ತದೆ.
ಮೊಡವೆಗಳ ನಿವಾರಣೆಗೂ ಕೂಡ ಹಿಂಗು ಉಪಯುಕ್ತವಾಗಿದೆ.
- ಮೊಡವೆಗಳ ನಿವಾರಣೆಗೆ ಉತ್ತಮ ಮದ್ದನ್ನು ನಾವು ಹಿಂಗಿನಿಂದ ತಯಾರಿಸಬಹುದು. ಹಿಂಗನ್ನು ನೀರಿನಲ್ಲಿ ತೇಯ್ದು, ಅದನ್ನು ಮೊಡವೆಗಳ ಮೇಲೆ ಮಾತ್ರ ಹಚ್ಚಬೇಕು. ಇದು ಮೊಡವೆಗಳನ್ನು ಕಡಿಮೆಗೊಳಿಸಿ, ಅದರ ಕಲೆಗಳನ್ನು ಕೂಡ ಹೋಗಲಾಡಿಸುತ್ತದೆ. ಇದು ಮೊಡವೆಗಳ ನಿವಾರಣೆಗೆ ಉತ್ತಮ ಪರಿಹಾರವಾಗಿದೆ.
ರಕ್ತದ ಒತ್ತಡ ನಿಯಂತ್ರಣಕ್ಕೂ ಕೂಡ ಹಿಂಗಿನ ಸೇವನೆಯು ಉತ್ತಮವಾಗಿದೆ.
- ಆಹಾರದಲ್ಲಿ ಹಿಂಗನ್ನು ಬಳಸುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ. ಹಿಂಗು ನಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರೋಲ್ ಗಳನ್ನು ಕಡಿಮೆಗೊಳಿಸಿ, ರಕ್ತದ ಸುಲಭ ಚಲನೆಗೆ ಸಹಕಾರಿಯಾಗಿದೆ. ಹಾಗಾಗಿ ಇದು ರಕ್ತದ ಒತ್ತಡವನ್ನು ಕೂಡ ನಿಯಂತ್ರಿಸಿ, ಹೃದಯದ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ. ಹಿಂಗಿನ ಸೇವನೆಯು ಕೂಡ ಅರೋಗ್ಯವರ್ಧಕವಾಗಿದೆ.
ತಲೆ ನೋವಿನಿಂದ ಪಾರಾಗಲು ಹಿಂಗು ಉತ್ತಮವಾಗಿದೆ.
- ಹಲವು ರೀತಿಯ ತಲೆನೋವಿನ ನಿವಾರಣೆಗೆ ಹಿಂಗಿನ ಸೇವನೆಯು ಉತ್ತಮವಾಗಿದೆ. ಉಷ್ಣದಿಂದ ಬರುವ ತಲೆನೋವು, ಇಲ್ಲವೇ ಪಿತ್ತದ ತಲೆನೋವು ಹಾಗೆಯೇ ಶೀತದ ತಲೆನೋವು ಇವೆಲ್ಲದಕ್ಕೂ ಪರಿಹಾರವನ್ನು ನಾವು ಹಿಂಗಿನ ಸೇವನೆಯಿಂದ ಪಡೆದುಕೊಳ್ಳಬಹುದು. ನೀರಿನಲ್ಲಿ ಹಿಂಗನ್ನು ಕರಗಿಸಿ, ಆ ಹಿಂಗಿನ ನೀರನ್ನು ಕುಡಿಯುವುದರಿಂದ ತಲೆನೋವು ತ್ವರಿತವಾಗಿ ನಿವಾರಣೆಯಾಗುತ್ತದೆ. ಇದು ಎಲ್ಲಾ ರೀತಿಯ ತಲೆನೋವಿಗೂ ಉಪಯುಕ್ತವಾಗಿದೆ.
ಹಿಂಗಿನಿಂದ ನಾವು ಹೀಗೆ ಇನ್ನೂ ಅನೇಕ ಉಪಯೋಗಗಳನ್ನು ಪಡೆದುಕೊಳ್ಳಬಹುದು. ಹಿಂಗಿನಲ್ಲಿ ಬ್ಯಾಕ್ಟೀರಿಯ, ಫಂಗಸ್ ಹಾಗೂ ವೈರಸ್ ಗಳ ಬೆಳವಣಿಗೆಯನ್ನು ತಡೆಯುವ ಶಕ್ತಿಯಿದ್ದು, ಬೇಸಿಗೆಯಲ್ಲಿ ತಯಾರಿಸುವ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ ಇಂತಹ ಪದಾರ್ಥಗಳು ದೀರ್ಘ ಕಾಲ ಕೆಡದಂತೆ ರಕ್ಷಿಸಲು ಹಿಂಗನ್ನು ಬಳಸುತ್ತೇವೆ. ಹಾಗೆಯೇ ಉಪ್ಪಿನಕಾಯಿಯ ಭರಣಿಯಲ್ಲಿ ತಳಭಾಗ ಹಾಗೂ ಮೇಲಿನ ಭಾಗದಲ್ಲಿ ಸ್ವಲ್ಪ ಹಿಂಗನ್ನು ಇಡುವುದರರಿಂದ ಉಪ್ಪಿನಕಾಯಿ ಹಾಳಾಗುವುದಿಲ್ಲ.
ಹಿಂಗು ನಮ್ಮ ದಿನನಿತ್ಯದ ಅಡುಗೆಯಲ್ಲಿ, ಹಾಗೆಯೇ ನಮ್ಮ ಆರೋಗ್ಯ ರಕ್ಷಣೆಯಲ್ಲಿ ಸದಾ ಸಹಾಯಕವಾಗಿದೆ. ಹಿಂಗಿನ ಅನೇಕ ಉಪಯೋಗಗಳನ್ನು ಪಡೆದು, ನಮ್ಮ ಆರೋಗ್ಯವನ್ನು ಉತ್ತಮವಾಗಿರಿಸೋಣ ಎಂಬುದು ಈ ಲೇಖನದ ಉದ್ದೇಶವಾಗಿದೆ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.