ಸಂಜೆ ಚಹಾ ಸಮಯದ ತಿಂಡಿಗೆ ರುಚಿಕರವಾದ ಸಸ್ಯಾಹಾರಿ ಕಟ್ಲೆಟ್ ಪಾಕವಿಧಾನಗಳು (Easy veg cutlet recipe for evening tea time snacks)

Spread the love

ಸಂಜೆ ಚಹಾ ಸಮಯದ ತಿಂಡಿಗೆ ರುಚಿಕರವಾದ ಸಸ್ಯಾಹಾರಿ ಕಟ್ಲೆಟ್ ಪಾಕವಿಧಾನಗಳು

ಸಂಜೆಯ ತಿಂಡಿಗೆ ಏನಿದೆ? ಎಂದು ಕೇಳುವುದು ಸಹಜ, ಅಂತಹ ಸಮಯದಲ್ಲಿ ಅರೋಗ್ಯಕರವಾಗಿ ಹಾಗೂ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಕೆಲವು ತಿಂಡಿಗಳಲ್ಲಿ ಕಟ್ಲೆಟ್ ಕೂಡ ಒಂದು. ವಿವಿಧ ಪದಾರ್ಥಗಳನ್ನು ಬಳಸಿ, ರುಚಿಕರ ಕಟ್ಲೆಟ್ ಗಳನ್ನು ತಯಾರಿಸುವ ಬಗೆಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಯೋಣ.

ತರಕಾರಿ ಕಟ್ಲೆಟ್

ಬೇಕಾಗುವ ಪದಾರ್ಥಗಳು

  • ಬೀನ್ಸ್ ½ ಕಪ್
  • ಹುಕೋಸು ½ ಕಪ್
  • ನೆನೆಸಿದ ಹಸಿರು ಬಟಾಣಿ ½ ಕಪ್
  • ಹಸಿಮೆಣಸು 2
  • ಶುಂಠಿ 1 ಇಂಚು
  • ಕೊತ್ತಂಬರಿ ಸೊಪ್ಪು
  • ಗರಂ ಮಸಾಲೆ ಪುಡಿ ½ ಚಮಚ
  • ಉಪ್ಪು
  • ಬ್ರೆಡ್ ಪುಡಿ
  • ಕಾರ್ನ್ ಫ್ಲೋರ್ 1 ಚಮಚ
  • ಎಣ್ಣೆ

ಮಾಡುವ ವಿಧಾನ
ಮೊದಲಿಗೆ ತರಕಾರಿಗಳಾದ ಹುಕೋಸು, ಬೀನ್ಸ್ ಎರಡನ್ನು ಬೇಯಿಸಿಕೊಳ್ಳಬೇಕು. ಹಾಗೆಯೇ ನೆನೆಸಿದ  ಬಟಾಣಿಯನ್ನು ಸಹ ಬೇಯಿಸಿಕೊಳ್ಳಬೇಕು. ಎಲ್ಲವೂ ಬೆಂದ ನಂತರ ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಕಿವುಚಬೇಕು. ನಂತರ ಕಿವುಚಿದ ತರಕಾರಿ ಹಾಗೂ ಬಟಾಣಿ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಗರಂ ಮಸಾಲಾ ಪುಡಿ, ಸಣ್ಣಗೆ ಹೆಚ್ಚಿದ ಹಸಿಮೆಣಸು, ಸಣ್ಣಗೆ ಹೆಚ್ಚಿದ ಶುಂಠಿ, ಕೊತ್ತಂಬರಿ ಸೊಪ್ಪನ್ನು ಹಾಕಿ ಕಲಸಿಕೊಳ್ಳಬೇಕು. ನಂತರ ಬೇಕಾದ ಆಕಾರದಲ್ಲಿ ಕಟ್ಲೆಟ್ ಗಳನ್ನು ಸಿದ್ದಪಡಿಸಿಕೊಳ್ಳಬೇಕು. ಇನ್ನೊಂದು ಕಡೆಯಲ್ಲಿ ಕಾರ್ನ್ ಫ್ಲೋರ್ ಅನ್ನು ನೀರಲ್ಲಿ ಗಂಟಾಗದಂತೆ ಬೆರೆಸಿಕೊಳ್ಳಬೇಕು. ಈಗ ಒಂದೊಂದೇ ಕಟ್ಲೆಟ್ ಗಳನ್ನು ಕಾರ್ನ್ ಫ್ಲೋರ್ ನೀರಿನಲ್ಲಿ ಅದ್ದಿಕೊಂಡು, ಬ್ರೆಡ್ ಹುಡಿಯ ಮೇಲೆ ಹೊರಲಾಡಿಸಬೇಕು. ಒಂದು ಕಾವಲಿಗೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಲು ಇಡಬೇಕು. ಎಣ್ಣೆ ಬಿಸಿಯಾದ ನಂತರ ಕಟ್ಲೆಟ್ ಅನ್ನು ಕಂದು ಬಣ್ಣ ಬರುವ ತನಕ ಎರಡು ಬದಿಯಲ್ಲಿ ಚೆನ್ನಾಗಿ ಕರಿಯಬೇಕು. ಅಲ್ಲಿಗೆ ರುಚಿಕರ ತರಕಾರಿ ಕಟ್ಲೆಟ್ ಸವಿಯಲು ಸಿದ್ದವಾಗುತ್ತದೆ.

ಪನ್ನೀರ್ ಕಟ್ಲೆಟ್

ಬೇಕಾಗುವ ಪದಾರ್ಥಗಳು

  • ತುರಿದ ಪನ್ನೀರ್ ½ ಕಪ್
  • ಎಲೆಕೋಸು  1 ಕಪ್
  • ಓಂಕಾಳು ½ ಚಮಚ
  • ಪಾಲಕ್ ಸೊಪ್ಪು ¼ ಕಪ್
  • ಜೀರಿಗೆ ½ ಚಮಚ
  • ಖಾರದ ಪುಡಿ ½ ಚಮಚ
  • ಈರುಳ್ಳಿ 1
  • ಕಾರ್ನ್ ಫ್ಲೋರ್ ¼ ಕಪ್
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ
  • ಬ್ರೆಡ್ ಪುಡಿ  1 ಕಪ್
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಸಣ್ಣಗೆ ಹೆಚ್ಚಿದ ಎಲೆಕೋಸನ್ನು ಬೇಯಿಸಿಕೊಳ್ಳಬೇಕು. ನಂತರ ಒಂದು ಪಾತ್ರೆಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಬೇಯಿಸಿದ ಎಲೆಕೋಸು, ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು, ತುರಿದುಕೊಂಡ ಪನ್ನೀರ್, ಜೀರಿಗೆ, ಓಂಕಾಳು, ಖಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾರ್ನ ಫ್ಲೋರ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಕಲಸಬೇಕು. ಈಗ ಬೇಕಾದ ಆಕಾರದಲ್ಲಿ ಕಟ್ಲೆಟ್ ಗಳನ್ನು ತಯಾರಿಸಿಕೊಳ್ಳಬೇಕು. ಎಣ್ಣೆಯನ್ನು ಕಾಯಿಸಲು ಇಡಬೇಕು. ಸಿದ್ದಪಡಿಸಿದ ಕಟ್ಲೆಟ್ ಗಳನ್ನು ಬ್ರೆಡ್ ಪುಡಿಯಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಎರಡು ಬದಿ ಕರಿಯಬೇಕು. ಅಲ್ಲಿಗೆ ಪನ್ನೀರ್ ಕಟ್ಲೆಟ್ ಸವಿಯಲು ಸಿದ್ದವಾಗುತ್ತದೆ.

ಬಿಟ್ರೂಟ್ ಕಟ್ಲೆಟ್

ಬೇಕಾಗುವ ಪದಾರ್ಥಗಳು

  • ಬಿಟ್ರೂಟ್ 1
  • ಬಟಾಟೆ 3
  • ಹಸಿಮೆಣಸಿನಕಾಯಿ 3
  • ಶುಂಠಿ 1 ಇಂಚು
  • ಕೊತ್ತಂಬರಿ ಸೊಪ್ಪು
  • ಬ್ರೆಡ್ ಪುಡಿ ½ ಕಪ್
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಬಿಟ್ರೂಟ್ ಹಾಗೂ ಬಟಾಟೆಯನ್ನು ಶುಚಿಗೊಳಿಸಿ ಬೇಯಿಸಿಕೊಳ್ಳಬೇಕು. ಕುಕ್ಕರ್ ನಲ್ಲಿ ಒಂದು ವಿಸಿಲ್ ಕೂಗಿಸಿದರೆ ಸಾಕು. ನಂತರ ಬೇಯಿಸಿದ ಬಿಟ್ರೂಟ್ ಹಾಗೂ ಬಟಾಟೆಯ ಸಿಪ್ಪೆಯನ್ನು ಸುಲಿದು, ತುರಿದುಕೊಳ್ಳಬೇಕು. ಒಂದು ಪಾತ್ರೆಗೆ ತುರಿದ ಬಟಾಟೆ, ತುರಿದ ಬಿಟ್ರೂಟ್, ಸಣ್ಣಗೆ ಹೆಚ್ಚಿದ ಹಸಿಮೆಣಸು, ಶುಂಠಿ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಕಲಸಿಕೊಳ್ಳಬೇಕು. ನಂತರ ಬೇಕಾದ ಆಕಾರದಲ್ಲಿ ಕಟ್ಲೆಟ್ ಗಳನ್ನು ತಯಾರಿಸಿಕೊಳ್ಳಬೇಕು. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಲು ಇಡಬೇಕು, ಎಣ್ಣೆ ಕಾದ ನಂತರ ಕಟ್ಲೆಟ್ ಗಳನ್ನು ಬ್ರೆಡ್ ಹುಡಿಯಲ್ಲಿ ಹೊರಲಾಡಿಸಿ, ಕಾದ ಎಣ್ಣೆಯಲ್ಲಿ ಕರಿಯಬೇಕು. ಎರಡು ಬದಿ ಚೆನ್ನಾಗಿ ಕರೆದ ನಂತರ ತಟ್ಟೆಗೆ ವರ್ಗಾಯಿಸಿದರೆ ಬಿಟ್ರೂಟ್ ಕಟ್ಲೆಟ್ ಸವಿಯಲು ಸಿದ್ದವಾಗುತ್ತದೆ.

ಚೀಸ್ ಕಟ್ಲೆಟ್

ಬೇಕಾಗುವ ಪದಾರ್ಥಗಳು

  • ತುರಿದ ಚೀಸ್ 1 ಕಪ್
  • ನೆನೆಸಿದ ಬಟಾಣಿ 3 ಕಪ್
  • ಈರುಳ್ಳಿ 1
  • ಹಸಿಮೆಣಸು 2
  • ಕಾರ್ನ್ ಫ್ಲೋರ್ ½ ಕಪ್
  • ಗರಂಮಸಾಲ ಪುಡಿ 1 ಚಮಚ
  • ಬ್ರೆಡ್ ಪುಡಿ 1 ಕಪ್
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಮೊದಲಿಗೆ ನೆನೆಸಿದ ಬಟಾಣಿಯನ್ನು ಚೆನ್ನಾಗಿ ಬೇಯಿಸಿಕೊಂಡು, ಕಿವುಚಬೇಕು. ಒಂದು ಪಾತ್ರೆಗೆ ತುರಿದ ಚೀಸ್, ಕಿವುಚಿದ ಬಟಾಣಿ, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗೂ ಹಸಿಮೆಣಸು, ಕಾರ್ನ್ ಫ್ಲೋರ್, ಗರಂಮಸಾಲ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಕಲಸಿಕೊಳ್ಳಬೇಕು. ನಂತರ ಬೇಕಾದ ಆಕಾರದಲ್ಲಿ ಕಟ್ಲೆಟ್ ಗಳನ್ನು ತಯಾರಿಸಿಟ್ಟುಕೊಳ್ಳಬೇಕು. ಒಂದು ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಬೇಕು. ಎಣ್ಣೆ ಕಾದ ನಂತರ ಕಟ್ಲೆಟ್ ಗಳನ್ನು ಬ್ರೆಡ್ ಪುಡಿಯಲ್ಲಿ ಹೊರಲಾಡಿಸಿ, ಕಾದ ಎಣ್ಣೆಯಲ್ಲಿ ಕರಿಯಬೇಕು. ಚೆನ್ನಾಗಿ ಹುರಿದ ನಂತರ ಚೀಸ್ ಕಟ್ಲೆಟ್ ಸವಿಯಲು ಸಿದ್ದವಾಗುತ್ತದೆ.

ಸ್ಪೆಷಲ್ ಬಟಾಣಿ ಕಟ್ಲೆಟ್

ಬೇಕಾಗುವ ಪದಾರ್ಥಗಳು

  • ಬಟಾಟೆ 1 ಕಪ್
  • ಕ್ಯಾರೆಟ್ 2
  • ಬೀನ್ಸ್ 15
  • ನೆನೆಸಿದ ಬಟಾಣಿ 1 ಕಪ್
  • ಈರುಳ್ಳಿ 1
  • ಹಸಿ ಮೆಣಸಿನಕಾಯಿ 4
  • ಗರಂ ಮಸಾಲ ಪುಡಿ 1 ಚಮಚ
  • ಚಿರೋಟಿ ರವೆ ½ ಕಪ್
  • ಕಸೂರಿ ಮೇತಿ
  • ಬ್ರೆಡ್ ಪುಡಿ ½ ಕಪ್
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಬಟಾಟೆ, ಕ್ಯಾರೆಟ್, ಬೀನ್ಸ್ ಮೂರನ್ನು ಸಣ್ಣಗೆ ಹೆಚ್ಚಿಕೊಂಡು ಬೇಯಿಸಿಕೊಳ್ಳಬೇಕು. ಹಾಗೆಯೇ ನೆನಸಿದ ಬಟಾಣಿಯನ್ನು ಕೂಡ ಬೇಯಿಸಿಕೊಳ್ಳಬೇಕು. ನಂತರ ಒಂದು ಪಾತ್ರೆಗೆ ಬೇಯಿಸಿದ ತರಕಾರಿಗಳು ಹಾಗೂ ಬಟಾಣಿಯನ್ನು ಹಾಕಿ ಕಿವುಚಿಕೊಳ್ಳಬೇಕು. ಅನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸು ಸೇರಿಸಬೇಕು. ಜೊತೆಗೆ ಗರಂಮಸಾಲ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕಲಸಬೇಕು. ಕೊನೆಯಲ್ಲಿ ಚಿರೋಟಿ ರವೆ ಹಾಗೂ ಕಸೂರಿ ಮೇತಿಯನ್ನು ಸೇರಿಸಿ ಕಲಸಬೇಕು. ಈಗ ಬೇಕಾದ ಆಕಾರದಲ್ಲಿ ಕಟ್ಲೆಟ್ ಗಳನ್ನು ತಯಾರಿಸಿಕೊಳ್ಳಬೇಕು. ಎಣ್ಣೆಯನ್ನು ಕಾಯಲು ಇಡಬೇಕು. ಕಟ್ಲೆಟ್ ಗಳನ್ನು ಬ್ರೆಡ್ ಪುಡಿಯಲ್ಲಿ ಹೊರಲಾಡಿಸಿ, ಕಾದ ಎಣ್ಣೆಯಲ್ಲಿ ಕರಿಯಬೇಕು. ಅಲ್ಲಿಗೆ ಸ್ಪೆಷಲ್ ಬಟಾಣಿ ಕಟ್ಲೆಟ್ ಸಿದ್ದವಾಗುತ್ತದೆ.

ಅವಲಕ್ಕಿ ಕಟ್ಲೆಟ್

ಬೇಕಾಗುವ ಪದಾರ್ಥಗಳು

  • ದಪ್ಪ ಅವಲಕ್ಕಿ 2 ಕಪ್
  • ಬಟಾಟೆ 1
  • ಹಸಿಮೆಣಸು 2
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ
  • ಕಡಲೆ ಹಿಟ್ಟು ½ ಕಪ್
  • ಲಿಂಬು ರಸ 1 ಚಮಚ
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಬಟಾಟೆಯನ್ನು ಬೇಯಿಸಿಕೊಂಡು, ಕಿವುಚಿಕೊಳ್ಳಬೇಕು. ದಪ್ಪ ಅವಲಕ್ಕಿಯನ್ನು ನೀರನಲ್ಲಿ ನೆನೆಸಿಕೊಂಡು, ಹಿಂಡಿ ತೆಗೆದುಕೊಳ್ಳಬೇಕು. ಒಂದು ಪಾತ್ರೆಗೆ ನೆನೆಸಿ ಹಿಂಡಿಕೊಂಡ ಅವಲಕ್ಕಿ, ಕಿವುಚಿಕೊಂಡ ಬಟಾಟೆ, ಸಣ್ಣಗೆ ಹೆಚ್ಚಿಕೊಂಡ ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಡಲೆ ಹಿಟ್ಟು, ಲಿಂಬು ರಸ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ, ಕಲಸಬೇಕು. ಬೇಕಾದ ಆಕಾರದಲ್ಲಿ ಕಟ್ಲೆಟ್ ಗಳನ್ನು ತಯಾರಿಸಿಕೊಂಡು ಕಾದ ಎಣ್ಣೆಯಲ್ಲಿ ಕರಿಯಬೇಕು. ಅಲ್ಲಿಗೆ ರುಚಿಯಾದ ಅವಲಕ್ಕಿ ಕಟ್ಲೆಟ್ ಸವಿಯಲು ಸಿದ್ದವಾಗುತ್ತದೆ.

ಬಾಳೆಹಣ್ಣಿನ ಕಟ್ಲೆಟ್

ಬೇಕಾಗುವ ಪದಾರ್ಥಗಳು

  • ನೇಂದ್ರ ಬಾಳೆ 2
  • ಈರುಳ್ಳಿ 2
  • ಕಡ್ಲೆ ಹಿಟ್ಟು 2 ಚಮಚ
  • ಅಕ್ಕಿ ಹಿಟ್ಟು ½ ಕಪ್
  • ಖಾರದ ಪುಡಿ 2 ಚಮಚ
  • ಕೊತ್ತಂಬರಿ ಸೊಪ್ಪು
  • ಬ್ರೆಡ್ ಪುಡಿ ½ ಕಪ್
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಮೊದಲಿಗೆ ನೇಂದ್ರ ಬಾಳೆಹಣ್ಣನ್ನು ಬೇಯಿಸಿಕೊಂಡು, ತಣ್ಣಗಾದ ಮೇಲೆ ಹಿಚುಕಬೇಕು. ಒಂದು ಪಾತ್ರೆಗೆ ಕಿವುಚಿದ ಬಾಳೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಖಾರದ ಪುಡಿ, ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕಲಸಿಕೊಳ್ಳಬೇಕು. ಬೇಕಾದ ಆಕಾರದಲ್ಲಿ ಕಟ್ಲೆಟ್ ಗಳನ್ನು ತಯಾರಿಸಿ, ಬ್ರೆಡ್ ಪುಡಿಯಲ್ಲಿ ಹೊರಲಾಡಿಸಿ, ಕಾದ ಎಣ್ಣೆಯಲ್ಲಿ ಕಟ್ಲೆಟ್ ಗಳನ್ನು ಕರಿಯಬೇಕು. ಅಲ್ಲಿಗೆ ಬಾಳೆಹಣ್ಣಿನ ಕಟ್ಲೆಟ್ ಸವಿಯಲು ಸಿದ್ದವಾಗುತ್ತದೆ.

ಕಾಬುಲ್ ಕಡ್ಲೆ ಕಟ್ಲೆಟ್

ಬೇಕಾಗುವ ಪದಾರ್ಥಗಳು

  • ಕಾಬುಲ್ ಕಡ್ಲೆ 1 ಕಪ್
  • ಕಡ್ಲೆ ಹಿಟ್ಟು ¼ ಕಪ್
  • ಹಸಿಮೆಣಸು 2
  • ಖಾರದ ಪುಡಿ ½ ಚಮಚ
  • ತುರಿದ ಪನ್ನೀರ್ 2 ಚಮಚ
  • ಜೀರಿಗೆ ಪುಡಿ ½ ಚಮಚ
  • ಲಿಂಬು ರಸ 1 ಚಮಚ
  • ಕೊಬ್ಬರಿ ತುರಿ 1 ಚಮಚ
  • ಗರಂ ಮಸಾಲ ಪುಡಿ 1 ಚಮಚ
  • ಕೊತ್ತಂಬರಿ ಸೊಪ್ಪು
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಕಾಬುಲ್ ಕಡ್ಲೆಯನ್ನು ಚೆನ್ನಾಗಿ ಬೇಯಿಸಿಕೊಂಡು, ರುಬ್ಬಿಕೊಳ್ಳಬೇಕು. ಈಗ ಒಂದು ಪಾತ್ರೆಗೆ ರುಬ್ಬಿದ ಕಾಬುಲ್ ಕಡ್ಲೆ, ಸಣ್ಣಗೆ ಹೆಚ್ಚಿದ ಹಸಿಮೆಣಸು, ಪನ್ನೀರ್ ತುರಿ, ಖಾರದ ಪುಡಿ, ಕಡ್ಲೆ ಹಿಟ್ಟು, ಜೀರಿಗೆ ಪುಡಿ, ಲಿಂಬೆ ರಸ, ತುರಿದ ಕೊಬ್ಬರಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಗರಂ ಮಸಾಲ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಕಲಸಿಕೊಳ್ಳಬೇಕು. ಬೇಕಾದ ಆಕಾರದಲ್ಲಿ ಕಟ್ಲೆಟ್ ಗಳನ್ನು ತಯಾರಿಸಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಬೇಕು. ಅಲ್ಲಿಗೆ ಕಾಬುಲ್ ಕಡ್ಲೆ ಕಟ್ಲೆಟ್ ಸವಿಯಲು ಸಿದ್ದವಾಗುತ್ತದೆ.

ಅವರೇಕಾಳು ಕಟ್ಲೆಟ್

ಬೇಕಾಗುವ ಪದಾರ್ಥಗಳು

  • ಅವರೇಕಾಳು 1 ಕಪ್
  • ಬಟಾಟೆ 2 ಕಪ್
  • ಕೊತ್ತಂಬರಿ ಸೊಪ್ಪು
  • ಹಸಿಮೆಣಸು 3
  • ಪುಟಾಣಿ ¼ ಕಪ್
  • ಈರುಳ್ಳಿ 1
  • ಶುಂಠಿ 1 ಇಂಚು
  • ಟೊಮೆಟೊ 1
  • ಬ್ರೆಡ್ ಪುಡಿ 1 ಕಪ್
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಅವರೇಕಾಳು ಹಾಗೂ ಬಟಾಟೆಯನ್ನು ಬೇರೆ ಬೇರೆಯಾಗಿ ಬೇಯಿಸಿಕೊಳ್ಳಬೇಕು. ನಂತರ ಬೇಯಿಸಿದ ಅವರೇಕಾಳು ಹಾಗೂ ಬಟಾಟೆಯನ್ನು ಚೆನ್ನಾಗಿ ಕಿವುಚಿಕೊಳ್ಳಬೇಕು. ಇನ್ನೊಂದೆಡೆ ಒಂದು ಮಿಕ್ಸಿ ಜಾರಿಗೆ ಕೊತ್ತಂಬರಿ ಸೊಪ್ಪು, ಹಸಿಮೆಣಸು, ಪುಟಾಣಿ, ಈರುಳ್ಳಿ, ಶುಂಠಿ, ಟೊಮೆಟೊ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಈಗ ಒಂದು ಬಾಣಲೆಗೆ 2 ಚಮಚ ಎಣ್ಣೆಯನ್ನು ಹಾಕಿ, ಕಾದ ನಂತರ ರುಬ್ಬಿದ ಮಿಶ್ರಣವನ್ನು ಸೇರಿಸಿ, ಹುರಿಯಬೇಕು. ನಂತರ ಅದಕ್ಕೆ ಅವರೇಕಾಳು, ಬಟಾಟೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಚೆನ್ನಾಗಿ ಮೂರು ನಿಮಿಷಗಳ ಕಾಲ ಹುರಿಯಬೇಕು. ಮಿಶ್ರಣವು ತಣ್ಣಗಾದ ಮೇಲೆ ಬೇಕಾದ ಆಕಾರದಲ್ಲಿ ಕಟ್ಲೆಟ್ ಗಳನ್ನು ತಯಾರಿಸಿ, ಬ್ರೆಡ್ ಪುಡಿಯಲ್ಲಿ ಹೊರಲಾಡಿಸಿ, ಕಾದ ಎಣ್ಣೆಯಲ್ಲಿ ಕರಿಯಬೇಕು. ಅಲ್ಲಿಗೆ ಅವರೇಕಾಳು ಕಟ್ಲೆಟ್ ಸವಿಯಲು ಸಿದ್ದವಾಗುತ್ತದೆ.

ಸಿಂಪಲ್ ಬಟಾಟೆ ಕಟ್ಲೆಟ್

ಬೇಕಾಗುವ ಪದಾರ್ಥಗಳು

  • ಬಟಾಟೆ 3
  • ನೆನೆಸಿದ ಬಟಾಣಿ ½ ಕಪ್
  • ಖಾರದ ಪುಡಿ ½ ಚಮಚ
  • ಗರಂಮಸಾಲ ಪುಡಿ ½ ಚಮಚ
  • ರವೆ ½ ಕಪ್
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಬಟಾಟೆ ಹಾಗೂ ನೆನೆಸಿದ ಬಟಾಣಿಯನ್ನು ಬೇಯಿಸಿಕೊಂಡು, ಕಿವುಚಿಕೊಳ್ಳಬೇಕು. ಒಂದು ಪಾತ್ರೆಗೆ ಬೇಯಿಸಿ, ಕಿವುಚಿದ ಬಟಾಟೆ ಹಾಗೂ ಬಟಾಣಿಯನ್ನು ಸೇರಿಸಿ, ಖಾರದ ಪುಡಿ, ಗರಂಮಸಾಲ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕಲಸಬೇಕು. ನಂತರ ಬೇಕಾದ ಆಕಾರದಲ್ಲಿ ಕಟ್ಲೆಟ್ ಗಳನ್ನು ತಯಾರಿಸಿ, ರವೆಯಲ್ಲಿ ಹೊರಲಾಡಿಸಬೇಕು. ನಂತರ ಕಾದ ತವಾದ ಮೇಲೆ ಎಣ್ಣೆ ಸವರಿ, ಕಟ್ಲೆಟ್ ಗಳನ್ನು ಎರಡು ಬದಿಯಲ್ಲಿ ಚೆನ್ನಾಗಿ ಹುರಿಯಬೇಕು. ಅಲ್ಲಿಗೆ ರುಚಿಯಾದ ಸಿಂಪಲ್ ಬಟಾಟೆ ಕಟ್ಲೆಟ್ ಸವಿಯಲು ಸಿದ್ದವಾಗುತ್ತದೆ.

ಸುಲಭ ವಿಧಾನದಲ್ಲಿ ರುಚಿಕರ ಕಟ್ಲೆಟ್ ಗಳನ್ನು ತಯಾರಿಸುವ ವಿಧಾನಗಳನ್ನು ಇಂದಿನ ಲೇಖನದಲ್ಲಿ ನಾವು ಅರಿತಿದ್ದೇವೆ. ಸಂಜೆಯ ವೇಳೆಯಲ್ಲಿ ರುಚಿ ರುಚಿಯಾದ ಕಟ್ಲೆಟ್ ಗಳನ್ನು ಮನೆಯಲ್ಲೇ ತಯಾರಿಸಿ, ಸವಿದು, ಆನಂದಿಸಿರಿ ಎಂಬುದು ಈ ಲೇಖನದ ಆಶಯ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Share
Published by
GruhaSnehi

Recent Posts

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು. AI Image ಮನೆಮದ್ದುಗಳು ಹಾಗೂ ಕೆಲವು ಪ್ರಾಕೃತಿಕ ಔಷಧಿಗಳ…

1 month ago

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ. AI Image ಬಿಳಿಯ ಮೈ, ಹಸಿರು ಜುಟ್ಟು ಎಂಬಂತೆ ಮೂಲಂಗಿಯು ಕಾಣುತ್ತದೆ. ಬಿಳಿಯ…

1 month ago

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins)

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins). AI Image ಎಲ್ಲರಿಗೂ ಹೆಚ್ಚಾಗಿ…

1 month ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

1 month ago

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು ಮೂಲವ್ಯಾಧಿ ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಆಧುನಿಕ ಯುಗದ ಆಹಾರ ಪದ್ಧತಿ,…

1 month ago

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ – ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ - ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ - AI…

1 month ago

This website uses cookies.