ಇಲ್ಲಿವೆ ವಿವಿಧ ರೀತಿಯ ರುಚಿಕರ ಚಟ್ನಿಗಳು ಮಾಡಬಹುದಾದ ಸುಲಭ ವಿಧಾನಗಳು!

Spread the love

ಇಲ್ಲಿವೆ ವಿವಿಧ ರೀತಿಯ ರುಚಿಕರ ಚಟ್ನಿಗಳು ಮಾಡಬಹುದಾದ ಸುಲಭ ವಿಧಾನಗಳು!
ಇಲ್ಲಿವೆ ವಿವಿಧ ರೀತಿಯ ರುಚಿಕರ ಚಟ್ನಿಗಳು ಮಾಡಬಹುದಾದ ಸುಲಭ ವಿಧಾನಗಳು!

ದೋಸೆ, ಇಡ್ಲಿ, ವಡ ಎಲ್ಲದರ ಜೊತೆ ಇರಲೇಬೇಕಾದ ಒಂದು ಖಾದ್ಯವೆಂದರೆ ಅದು ಚಟ್ನಿ. ಕೆಲವೊಂದು ಚಟ್ನಿಯನ್ನು ಅನ್ನದ ಜೊತೆ ಕೂಡ ಕಲಸಿ ತಿನ್ನಬಹುದು. ಚಟ್ನಿಯು ಆಹಾರದ ಸ್ವಾದವನ್ನು ಹೆಚ್ಚಿಸುತ್ತದೆ. ಹಾಗೆಯೇ ಆರೋಗ್ಯಕ್ಕೆ ಉತ್ತಮವಾಗಿರುವ ತರಕಾರಿಗಳು, ಸೊಪ್ಪು ಹಾಗೂ ಕಾಳುಗಳ ಸಹಾಯದಿಂದ ರುಚಿಕರ ಚಟ್ನಿಯನ್ನು ತಯಾರಿಸಬಹುದು. ಇಂದಿನ ಲೇಖನದಲ್ಲಿ ವಿವಿಧ ರೀತಿಯ ರುಚಿಕರ ಚಟ್ನಿಗಳನ್ನು ತಯಾರಿಸುವ ವಿಧಾನಗಳನ್ನು ಅರಿಯೋಣ.

ಕರಿಬೇವಿನ ಚಟ್ನಿ

ಬೇಕಾಗುವ ಪದಾರ್ಥಗಳು

  • ಕರಿಬೇವಿನ ಸೊಪ್ಪು 1 ಕಪ್
  • ಒಣಮೆಣಸು 3
  • ಶುಂಠಿ ½ ಇಂಚು
  • ಬೆಳ್ಳುಳ್ಳಿ 2 ಎಸಲು
  • ತೆಂಗಿನಕಾಯಿ ತುರಿ ½ ಕಪ್
  • ಲಿಂಬೆ ರಸ ½ ಚಮಚ
  • ಎಣ್ಣೆ
  • ಉಪ್ಪು

ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಬಿಸಿಯಾದ ನಂತರ ಕರಿಬೇವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಹುರಿದ ಕರಿಬೇವನ್ನು ಒಂದು ಮಿಕ್ಸಿ ಜಾರಿಗೆ ಹಾಕಿ, ಜೊತೆಗೆ ಕಾಯಿತುರಿ, ಒಣಮೆಣಸು, ಶುಂಠಿ, ಬೆಳ್ಳುಳ್ಳಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಪಾತ್ರೆಗೆ ವರ್ಗಾಯಿಸಿಕೊಂಡು ಮೇಲೆ ಸ್ವಲ್ಪ ಲಿಂಬೆ ರಸವನ್ನು ಹಿಂಡಿದರೆ ಕರಿಬೇವಿನ ಚಟ್ನಿ ಸವಿಯಲು ಸಿದ್ದವಾಗುತ್ತದೆ. ಈ ಚಟ್ನಿಯು ದೋಸೆ ಹಾಗೂ ಇಡ್ಲಿಯ ಜೊತೆ ಉತ್ತಮ ಜೋಡಿಯಾಗುತ್ತದೆ.

ಕರಿಬೇವು ದೇಹದ ಆರೋಗ್ಯಕ್ಕೆ ಅತಿ ಉತ್ತಮವಾಗಿದ್ದು, ಕೂದಲಿನ ಅರೋಗ್ಯಕ್ಕೂ ಉತ್ತಮವಾಗಿದೆ. ಕೂದಲು ಕಪ್ಪಾಗಿ, ಸೊಂಪಾಗಿ ಬೆಳೆಯಲು ಕರಿಬೇವಿನ ಸೇವನೆ ಉತ್ತಮವಾಗಿದೆ. ಹಾಗೆಯೇ ರಕ್ತದಲ್ಲಿನ ಸಕ್ಕರೆ ಅಂಶಗಳು ನಿಯಂತ್ರಿಸಲು, ರಕ್ತದ ಚಲನೆಯನ್ನು ನಿಯಂತ್ರಿಸಲು, ಮಲಬದ್ಧತೆಯನ್ನು ಗುಣಪಡಿಸಲು ಕರಿಬೇವಿನ ಸೇವನೆ ಉತ್ತಮವಾಗಿದೆ.

ಟೊಮೆಟೊ ಚಟ್ನಿ

ಬೇಕಾಗುವ ಪದಾರ್ಥಗಳು

  • ಟೊಮೆಟೊ 3
  • ಖಾರದ ಪುಡಿ 2 ಚಮಚ
  • ಸೋಂಪು ಕಾಳು ½ ಚಮಚ
  • ಈರುಳ್ಳಿ 1
  • ಉದ್ದಿನಬೇಳೆ ½ ಚಮಚ
  • ಸಾಸಿವೆ ½ ಚಮಚ
  • ಕರಿಬೇವು
  • ಎಣ್ಣೆ 
  • ಉಪ್ಪು

ಮಾಡುವ ವಿಧಾನ
ಮೊದಲಿಗೆ ಸೋಂಪು ಕಾಳನ್ನು ಸ್ವಲ್ಪ ಹುರಿದುಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ಹೆಚ್ಚಿಕೊಂಡ ಈರುಳ್ಳಿ, ಹುರಿದ ಸೋಂಪು ಕಾಳು, ಹಾಗೂ ರುಚಿಗೆ ಬೇಕಾದಷ್ಟು ಉಪ್ಪನ್ನು ಸೇರಿಸಿಕೊಂಡು ರುಬ್ಬಿಕೊಳ್ಳಬೇಕು. ಅನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಕಾದ ನಂತರ ಸಾಸಿವೆ, ಉದ್ದಿನಬೇಳೆ ಹಾಗೂ ಕರಿಬೇವನ್ನು ಹಾಕಬೇಕು. ಈ ಒಗ್ಗರಣೆಗೆ ಸಣ್ಣಗೆ ಹೆಚ್ಚಿದ ಟೊಮೆಟೊಗಳನ್ನು ಹಾಕಿ ಚೆನ್ನಾಗಿ ಹುರುದುಕೊಳ್ಳಬೇಕು. ನಂತರ ಖಾರದಪುಡಿಯನ್ನು ಸೇರಿಸಬೇಕು. ಕೊನೆಯಲ್ಲಿ ರುಬ್ಬಿಕೊಂಡ ಮಸಾಲೆಯನ್ನು ಸೇರಿಸಿ, ಕುದಿಸಬೇಕು. ಅಲ್ಲಿಗೆ ರುಚಿಯಾದ ಟೊಮೆಟೊ ಚಟ್ನಿ ಸಿದ್ದವಾಗುತ್ತದೆ. ಇದನ್ನು ಟೊಮೆಟೊ ಗೊಜ್ಜು ಕೂಡ ಎನ್ನಬಹುದು, ಇದು ಅನ್ನದ ಜೊತೆಯಲ್ಲಿ ಉತ್ತಮವಾಗಿರುತ್ತದೆ. ಟೊಮೆಟೊ ಸೇವನೆಯು ಅರೋಗ್ಯಕರವಾಗಿದ್ದು, ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ. ಹಾಗೆಯೇ ಚರ್ಮದ ಕಾಂತಿಗೂ ಟೊಮೆಟೊ ಉಪಯುಕ್ತವಾಗಿದೆ.

ಪುದೀನ ಚಟ್ನಿ

ಬೇಕಾಗುವ ಪದಾರ್ಥಗಳು

  • ಪುದೀನ ಸೊಪ್ಪು 2 ಕಪ್
  • ಹಸಿಮೆಣಸು 4
  • ಹುಣಸೆಹಣ್ಣು ಸ್ವಲ್ಪ
  • ಶುಂಠಿ 1 ಇಂಚು
  • ಹುರಿಗಡಲೆ ½ ಕಪ್
  • ಉಪ್ಪು

ಮಾಡುವ ವಿಧಾನ
ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಪುದೀನ ಸೊಪ್ಪು, ಹುರಿಗಡಲೆ, ಹಸಿಮೆಣಸು, ಶುಂಠಿ, ಹುಣಸೆ ಹಣ್ಣು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ರುಬ್ಬಿಕೊಳ್ಳಬೇಕು. ಈ ಮಿಶ್ರಣವನ್ನು ಪಾತ್ರೆಗೆ ವರ್ಗಾಯಿಸಿ, ಸ್ವಲ್ಪ ನೀರನ್ನು ಸೇರಿಸಿ ತೆಳು ಮಾಡಿಕೊಳ್ಳಬೇಕು. ಇದು ಸಮೋಸದಂತಹ ಚಾಟ್ಸ್ ಗಳೊಂದಿಗೆ ಸೇವಿಸಲು ಬಲು ಉತ್ತಮವಾಗಿರುತ್ತದೆ. ಇನ್ನೂ ಪುದೀನ ಸೊಪ್ಪು ಕೂಡ ಆರೋಗ್ಯಕ್ಕೆ ಉತ್ತಮವಾಗಿದ್ದು, ಸುಲಭ ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ. ಹಾಗೆಯೇ ತೂಕ ನಿರ್ವಹಣೆಗೂ ಪುದೀನ ಉತ್ತಮ ಆಹಾರವಾಗಿದೆ.

ಖರ್ಜುರ ಹಾಗೂ ಒಣದ್ರಾಕ್ಷಿಯ ಚಟ್ನಿ

ಬೇಕಾಗುವ ಪದಾರ್ಥಗಳು

  • ಖರ್ಜುರ 1 ಕಪ್ ( ಬೀಜವನ್ನು ತೆಗೆದುಕೊಳ್ಳಬೇಕು )
  • ಒಣದ್ರಾಕ್ಷಿ ½ ಕಪ್
  • ಹುಣಸೆ ಹಣ್ಣು ½ ಕಪ್
  • ಉಪ್ಪು ಸ್ವಲ್ಪ

ಮಾಡುವ ವಿಧಾನ
ಮೊದಲಿಗೆ ಒಂದು ಕಪ್ ನೀರಿಗೆ ಹುಣಸೆಹಣ್ಣನ್ನು ಸೇರಿಸಿ, ಕುದಿಸಬೇಕು. ಬಿಸಿ ಆರಿದ ನಂತರ ಹುಣಸೆಹಣ್ಣನ್ನು ಕಿವುಚಿಕೊಳ್ಳಬೇಕು. ಇನ್ನೊಂದು ಕಡೆಯಲ್ಲಿ ಖರ್ಜುರವನ್ನು ನೆನೆಸಿ ಇಡಬೇಕು. ಅರ್ಧ ಗಂಟೆಯ ನಂತರ ಒಂದು ಮಿಕ್ಸಿ ಜಾರಿಗೆ ಕಿವುಚಿದ ಹುಣಸೆ ಹಣ್ಣು, ನೆನೆಸಿದ ಖರ್ಜುರ, ಒಣದ್ರಾಕ್ಷಿ ಹಾಗೂ ಸ್ವಲ್ಪ ಉಪ್ಪನ್ನು ಬೆರೆಸಿ ರುಬ್ಬಿಕೊಳ್ಳಬೇಕು. ನಂತರ ರುಬ್ಬಿದ ಮಿಶ್ರಣವನ್ನು ಪಾತ್ರೆಗೆ ವರ್ಗಾಯಿಸಿಕೊಂಡು ಸ್ವಲ್ಪ ನೀರನ್ನು ಸೇರಿಸಿ ತೆಳುಮಾಡಿಕೊಳ್ಳಬೇಕು. ಈ ಚಟ್ನಿಯು ಸಮೋಸ ಸೋಸ್ ಆಗಿ, ಹಾಗೆಯೇ ಚಾಟ್ಸ್ ಗಳ ಜೊತೆ ಉತ್ತಮ ಜೊತೆಯಾಗುತ್ತದೆ. ಖರ್ಜುರ ಹಾಗೂ ಒಣದ್ರಾಕ್ಷಿಯು ಆರೋಗ್ಯಕ್ಕೆ ಅತಿ ಉತ್ತಮವಾಗಿದ್ದು, ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಆರೋಗ್ಯಕ್ಕೆ ಉತ್ತಮ ಶಕ್ತಿಯನ್ನು ಕೂಡ ನೀಡುತ್ತದೆ.

ಕೆಂಪು ಮೆಣಸಿನ ಚಟ್ನಿ

ಬೇಕಾಗುವ ಪದಾರ್ಥಗಳು

  • ಬ್ಯಾಡಗಿ ಮೆಣಸಿನ ಕಾಯಿ 15
  • ಹುಣಸೆಹಣ್ಣು ಸ್ವಲ್ಪ
  • ಬೆಳ್ಳುಳ್ಳಿ – 5 ಎಸಳುಗಳು
  • ಸೋಂಪು – ½ ಚಮಚ
  • ಉಪ್ಪು

ಮಾಡುವ ವಿಧಾನ
ಇದು ಸುಲಭವಾಗಿ ಮಾಡಬಹುದಾದ ಚಟ್ನಿಯಾಗಿದೆ. ಒಂದು ಮಿಕ್ಸಿ ಜಾರಿಗೆ ಬ್ಯಾಡಗಿ ಮೆಣಸು, ಹುಣಸೆಹಣ್ಣು, ಬೆಳ್ಳುಳ್ಳಿ, ಸೋಂಪು ಕಾಳು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ನೀರಿನೊಂದಿಗೆ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವನ್ನು ಪಾತ್ರೆಗೆ ವರ್ಗಾಯಿಸಿಕೊಂಡರೆ ಕೆಂಪು ಮೆಣಸಿನಕಾಯಿ ಚಟ್ನಿ ಸವಿಯಲು ಸಿದ್ದವಾಗುತ್ತದೆ. ಇದು ದೋಸೆಯ ಜೊತೆಗೆ ಉತ್ತಮವಾಗಿರುತ್ತದೆ.

ಹಸಿರು ಚಟ್ನಿ

ಬೇಕಾಗುವ ಪದಾರ್ಥಗಳು

  • ಕೊತ್ತಂಬರಿ ಸೊಪ್ಪು 1 ಕಪ್
  • ಪುದೀನ ಸೊಪ್ಪು ½ ಕಪ್
  • ಹಸಿ ಮೆಣಸು 5
  • ಬೆಳ್ಳುಳ್ಳಿ 4 ಎಸಳು
  • ತೆಂಗಿನ ತುರಿ ½ ಕಪ್
  • ಉಪ್ಪು

ಮಾಡುವ ವಿಧಾನ
ಒಂದು ಮಿಕ್ಸಿ ಜಾರಿಗೆ ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು, ಹಸಿಮೆಣಸು, ಬೆಳ್ಳುಳ್ಳಿ, ತೆಂಗಿನ ತುರಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವನ್ನು ಪಾತ್ರೆಗೆ ವರ್ಗಾಯಿಸಿಕೊಂಡು, ಬೇಕಾದರೆ ಸ್ವಲ್ಪ ನೀರನ್ನು ಸೇರಿಸಿ ತೆಳು ಮಾಡಿಕೊಳ್ಳಬಹುದು. ಅಲ್ಲಿಗೆ ಹಸಿರು ಚಟ್ನಿ ಸಿದ್ದವಾಗುತ್ತದೆ. ಈ ಚಟ್ನಿಯು ಇಡ್ಲಿ, ದೋಸೆ, ಚಪಾತಿ ಎಲ್ಲದರ ಜೊತೆಗೆ ಉತ್ತಮವಾಗಿರುತ್ತದೆ.

ಹುರಳಿಕಾಳಿನ ಚಟ್ನಿ

ಬೇಕಾಗುವ ಪದಾರ್ಥಗಳು

  • ಹುರುಳಿ ಕಾಳು 1 ಕಪ್
  • ಒಣ ಮೆಣಸು 3
  • ಕಾಯಿತುರಿ ½ ಕಪ್
  • ಹುಣಸೆಹಣ್ಣು ಸ್ವಲ್ಪ 
  • ಈರುಳ್ಳಿ 1
  • ಬೆಳ್ಳುಳ್ಳಿ 3 ಎಸಳು 
  • ಎಣ್ಣೆ
  • ಸಾಸಿವೆ ½ ಚಮಚ
  • ಕರಿಬೇವು
  • ಉಪ್ಪು

ಮಾಡುವ ವಿಧಾನ
ಮೊದಲಿಗೆ ಹುರಳಿಕಾಳನ್ನು ಕೆಂಪಗೆ ಹುರಿದುಕೊಳ್ಳಬೇಕು. ನಂತರ ಅದೇ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಒಣಮೆಣಸು ಹಾಗೂ ಕಾಯಿತುರಿಯನ್ನು ಹುರಿದುಕೊಳ್ಳಬೇಕು. ಹುರಿದ ಎಲ್ಲಾ ಪದಾರ್ಥಗಳು ತಣ್ಣಗಾದ ಮೇಲೆ, ಒಂದು ಮಿಕ್ಸಿ ಜಾರಿಗೆ ಹುರಿದ ಪದಾರ್ಥಗಳು, ಹೆಚ್ಚಿಕೊಂಡ ಈರುಳ್ಳಿ, ಬೆಳ್ಳುಳ್ಳಿ, ಹುಣಸೆಹಣ್ಣು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ನೀರಿನೊಂದಿಗೆ ರುಬ್ಬಿಕೊಳ್ಳಬೇಕು. ನಂತರ ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿಕೊಂಡು, ಸ್ವಲ್ಪ ನೀರನ್ನು ಸೇರಿಸಿಕೊಂಡು ತೆಳು ಮಾಡಿಕೊಳ್ಳಬೇಕು. ಕೊನೆಯಲ್ಲಿ ಎಣ್ಣೆ, ಸಾಸಿವೆ ಹಾಗೂ ಕರಿಬೇವಿನ ಒಗ್ಗರಣೆಯನ್ನು ನೀಡಬೇಕು. ಹುರಳಿಕಾಳು ಚಟ್ನಿಯು ಅನ್ನದ ಜೊತೆಗೆ ಬಹಳ ಉತ್ತಮವಾಗಿರುತ್ತದೆ. ರೊಟ್ಟಿಯ ಜೊತೆಗೂ ಕೂಡ ರುಚಿಯಾಗಿರುತ್ತದೆ. ಹುರಳಿಯು ಆರೋಗ್ಯಕ್ಕೆ ಬಲು ಉತ್ತಮವಾಗಿದ್ದು, ದೇಹಕ್ಕೆ ಬೇಕಾದ ಉಷ್ಣವನ್ನು ಒದಗಿಸುತ್ತದೆ. 

( ->ಹುರುಳಿಯ ಬಗೆಗಿನ ನಮ್ಮ ಹಿಂದಿನ ಲೇಖನವನ್ನು ಒಮ್ಮೆ ಓದಿರಿ. )

ಶುಂಠಿಯ ಚಟ್ನಿ

ಬೇಕಾಗುವ ಪದಾರ್ಥಗಳು

  • ಶುಂಠಿ ಒಂದು ದೊಡ್ಡ ತುಂಡು
  • ಬೆಳ್ಳುಳ್ಳಿ 6 ಎಸಳು
  • ಹಸಿಮೆಣಸು 4
  • ಕಾಯಿತುರಿ ½ ಕಪ್
  • ಹುಣಸೆಹಣ್ಣು ಸ್ವಲ್ಪ
  • ಉಪ್ಪು

ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ಕಾಯಿತುರಿಯನ್ನು ಹಾಕಿ ಸ್ವಲ್ಪ ಬೆಚ್ಚಗಾಗುವವರೆಗೆ ಹುರಿಯಬೇಕು. ನಂತರ ಒಂದು ಮಿಕ್ಸಿ ಜಾರಿಗೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಹುರಿದ ಕಾಯಿತುರಿ, ಹುಣಸೆಹಣ್ಣು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿದರೆ, ಶುಂಠಿ ಚಟ್ನಿ ಸವಿಯಲು ಸಿದ್ದವಾಗುತ್ತದೆ. ಶುಂಠಿಯು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದ್ದು, ವಾಯು ನಿವಾರಕ ಹಾಗೂ ಜೀರ್ಣಕಾರಕವಾಗಿದೆ. 

( -> ಶುಂಠಿಯ ಬಗೆಗಿನ ಇನ್ನೂ ಅನೇಕ ಮಾಹಿತಿಗಳನ್ನು ಅರಿಯಲು ಒಮ್ಮೆ ನಮ್ಮ ಹಿಂದಿನ ಲೇಖನಗಳನ್ನು ಓದಿರಿ )

ಬಾಳೆಹಣ್ಣು ಹಾಗೂ ಖರ್ಜುರದ ಚಟ್ನಿ

ಬೇಕಾಗುವ ಪದಾರ್ಥಗಳು

  • ಖರ್ಜುರ 10
  • ಒಣಮೆಣಸು 3
  • ಹುಣಸೆ ಹಣ್ಣು ಸ್ವಲ್ಪ
  • ಬೆಲ್ಲ ಸ್ವಲ್ಪ
  • ಬಾಳೆಹಣ್ಣು 1
  • ಉಪ್ಪು

ಮಾಡುವ ವಿಧಾನ
ಖರ್ಜುರವನ್ನು ಬೀಜ ಬಿಡಿಸಿಕೊಂಡು ಬಿಸಿ ನೀರಿನಲ್ಲಿ ಕಾಲು ಗಂಟೆ ನೆನೆಸಿ ಇಡಬೇಕು. ನಂತರ ಒಂದು ಮಿಕ್ಸಿ ಜಾರಿಗೆ ನೆನೆಸಿದ ಖರ್ಜುರ, ಒಣಮೆಣಸು, ಬೆಲ್ಲ, ಹುಣಸೆಹಣ್ಣು, ಸಿಪ್ಪೆ ಸುಲಿದು ಹೆಚ್ಚಿಕೊಂಡ ಬಾಳೆಹಣ್ಣು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿಕೊಂಡರೆ ಖರ್ಜುರದ ಚಟ್ನಿ ಸವಿಯಲು ಸಿದ್ದವಾಗುತ್ತದೆ. ಈ ಖರ್ಜುರದ ಚಟ್ನಿಯು ಅನ್ನದ ಜೊತೆಗೆ ರುಚಿಯಾಗಿರುತ್ತದೆ. ನಾಲಿಗೆಗೆ ರುಚಿ ಇಲ್ಲದ ಸಮಯದಲ್ಲಿ ಅನ್ನದ ಜೊತೆ ಖರ್ಜುರದ ಚಟ್ನಿಯನ್ನು ಕಲಸಿ ಸೇವಿಸುವುದು ಉತ್ತಮವಾಗಿದೆ. ಇದು ಉಪ್ಪು, ಖಾರ, ಸಿಹಿ, ಹುಳಿ ನಾಲ್ಕು ರೀತಿಯ ಸ್ವಾದವುಳ್ಳ ರುಚಿಕರ ಚಟ್ನಿಯಾಗಿದೆ.

( -> ಹುಣಸೆಹಣ್ಣಿನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನಮ್ಮ ಹಿಂದಿನ ಲೇಖನಗಳನ್ನು ಓದಿರಿ )

ಶೇಂಗಾ ಚಟ್ನಿ

ಬೇಕಾಗುವ ಪದಾರ್ಥಗಳು

  • ಶೇಂಗಾ 1 ಕಪ್
  • ಜೀರಿಗೆ ½ ಚಮಚ
  • ಈರುಳ್ಳಿ 1
  • ಹುಣಸೆಹಣ್ಣು ಸ್ವಲ್ಪ
  • ಕರಿಬೇವಿನ ಎಲೆಗಳು
  • ಒಣ ಮೆಣಸು 5
  • ತೆಂಗಿನಎಣ್ಣೆ
  • ಉಪ್ಪು

ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲೆಯಲ್ಲಿ ಶೇಂಗಾವನ್ನು ಹಾಕಿಕೊಂಡು ಚೆನ್ನಾಗಿ ಹುರಿಯಬೇಕು. ನಂತರ ಅದೇ ಬಾಣಲೆಗೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಹಾಕಿ ಒಣಮೆಣಸು ಹಾಗೂ ಕರಿಬೇವಿನ ಎಲೆಗಳನ್ನು ಹಾಕಿ ಹುರಿದುಕೊಳ್ಳಬೇಕು. ನಂತರ ಒಂದು ಮಿಕ್ಸಿ ಜಾರಿಗೆ ಹುರಿದ ಒಣಮೆಣಸು, ಕರಿಬೇವಿನ ಎಲೆಗಳು, ಜೀರಿಗೆ ಹಾಗೂ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ರುಬ್ಬಿಕೊಳ್ಳಬೇಕು. ನಂತರ ಹುಣಸೆಹಣ್ಣು, ಹುರಿದ ಶೇಂಗಾ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಬೇರೆ ಪಾತ್ರೆಗೆ ವರ್ಗಾಯಿಸಿಕೊಂಡರೆ ಶೇಂಗಾ ಚಟ್ನಿ ಸವಿಯಲು ಸಿದ್ದವಾಗುತ್ತದೆ. ಇದು ದೋಸೆ, ಇಡ್ಲಿ, ರೊಟ್ಟಿ ಹಾಗೂ ಅನ್ನದ ಜೊತೆಗೂ ಕೂಡ ರುಚಿಯಾಗಿರುತ್ತದೆ.

ಇಂದಿನ ಲೇಖನದಲ್ಲಿ ರುಚಿಕರ ಹಾಗೂ ಆರೋಗ್ಯಕರ ವಿವಿಧ ಬಗೆಯ ಚಟ್ನಿಗಳ ತಯಾರಿಕಾ ವಿಧಾನಗಳನ್ನು ಅರಿತಿದ್ದೇವೆ. ಎಲ್ಲಾ ರೀತಿಯ ಚಟ್ನಿಗಳನ್ನು ಒಮ್ಮೆ ತಯಾರಿಸಿ, ಸವಿಯಿರಿ ಎಂಬುದು ಈ ಲೇಖನದ ಆಶಯವಾಗಿದೆ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

1 thought on “ಇಲ್ಲಿವೆ ವಿವಿಧ ರೀತಿಯ ರುಚಿಕರ ಚಟ್ನಿಗಳು ಮಾಡಬಹುದಾದ ಸುಲಭ ವಿಧಾನಗಳು!”

  1. Pingback: ಬೆಳಗ್ಗೆ ತಿಂಡಿಗೆ ಮಾಡಬಹುದಾದ ಸುಲಭದ ದೊಸೆ ರೆಸಿಪಿಗಳು (Easy dosa recipes for morning breakfast) - ಗೃಹಸ್ನೇಹಿ - ನಿಸರ್ಗದ ಮಡಿಲಲ್ಲಿ ಅ

Leave a Comment

Your email address will not be published. Required fields are marked *

Scroll to Top