ಬೆಳಗ್ಗೆ ತಿಂಡಿಗೆ ಮಾಡಬಹುದಾದ ಸುಲಭದ ದೋಸೆ ರೆಸಿಪಿಗಳು (Easy dosa recipes for morning breakfast)

Spread the love

ಬೆಳಗ್ಗೆ ತಿಂಡಿಗೆ ಮಾಡಬಹುದಾದ ಸುಲಭದ ದೋಸೆ ರೆಸಿಪಿಗಳು (Easy dosa recipes for morning breakfast)
ಬೆಳಗ್ಗೆ ತಿಂಡಿಗೆ ಮಾಡಬಹುದಾದ ಸುಲಭದ ದೋಸೆ ರೆಸಿಪಿಗಳು (Easy dosa recipes for morning breakfast). AI Image

ಎಲ್ಲರ ಮನೆಗಳಲ್ಲಿ ಹೆಚ್ಚಾಗಿ ಮಾಡುವ ತಿಂಡಿಯೆಂದರೆ ದೋಸೆ, ಇಡ್ಲಿ ಜೊತೆಯಲ್ಲಿ ಚಟ್ನಿ ಹಾಗೂ ಸಾಂಬಾರ್. ಮುಂಜಾನೆಯ ತಿಂಡಿಗೆ ಏನು ಮಾಡುವ ಚಿಂತೆಯನ್ನು ಇನ್ನೂ ಬಿಟ್ಟುಬಿಡಿ, ಮನೆಯವರೆಲ್ಲರೂ ಇಷ್ಟಪಡುವ ರುಚಿಯಾದ ಹಾಗೂ ಆರೋಗ್ಯಕ್ಕೆ ಉತ್ತಮವಾಗಿರುವ ದೋಸೆಗಳ ತಯಾರಿಕಾ ವಿಧಾನಗಳನ್ನು ಇಂದಿನ ಲೇಖನದಲ್ಲಿ ವಿಶ್ಲೇಷಿಸೋಣ.

ಓಟ್ಸ್ ದೋಸೆ

ಬೇಕಾಗುವ ಪದಾರ್ಥಗಳು

  • ಓಟ್ಸ್ 1 ಕಪ್
  • ಚಿರೋಟಿ ರವೆ 1 ಕಪ್
  • ಅಕ್ಕಿಹಿಟ್ಟು 1 ಕಪ್
  • ಈರುಳ್ಳಿ 1
  • ಹಸಿಮೆಣಸಿನಕಾಯಿ 1
  • ಜೀರಿಗೆ 1 ಚಮಚ
  • ಕರಿಮೆಣಸಿನ ಪುಡಿ ¼ ಚಮಚ
  • ತೆಂಗಿನಕಾಯಿ ತುಂಡುಗಳು
  • ಕೊತ್ತಂಬರಿ ಸೊಪ್ಪು
  • ತುಪ್ಪ
  • ಉಪ್ಪು

ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲೆಗೆ ಓಟ್ಸ್ ಹಾಕಿ, ಸ್ವಲ್ಪ ಬಣ್ಣ ಬದಲಾಗುವ ತನಕ ಸಣ್ಣ ಉರಿಯಲ್ಲಿ ಹುರಿಯಬೇಕು. ಹುರಿದ ಓಟ್ಸ್ ತಣ್ಣಗಾದ ನಂತರ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ಒಂದು ಪಾತ್ರೆಗೆ ಹುರಿದು ಪುಡಿಮಾಡಿಕೊಂಡ ಓಟ್ಸ್, ಚಿರೋಟಿ ರವೆ ಹಾಗೂ ಅಕ್ಕಿಹಿಟ್ಟನ್ನು ಹಾಕಬೇಕು. ನಂತರ ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ತೆಂಗಿನ ಕಾಯಿಯ ತುಂಡುಗಳನ್ನು ಸೇರಿಸಬೇಕು. ಕೊನೆಯಲ್ಲಿ ಜೀರಿಗೆ, ಕರಿಮೆಣಸಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಬೇಕು. ನಂತರ ದೋಸೆಹಿಟ್ಟಿನ ಹದಕ್ಕೆ ಬರುವಷ್ಟು  ನೀರನ್ನು ಸೇರಿಸಿಕೊಳ್ಳಬೇಕು. ಒಂದು ಗಂಟೆ ಹಿಟ್ಟನ್ನು ಹಾಗೆಯೇ ಮುಚ್ಚಿಡಬೇಕು. ಒಂದು ಗಂಟೆಯ ನಂತರ ಕಾದ ತವಾದ ಮೇಲೆ ತುಪ್ಪ ಸವರಿ ತೆಳುವಾಗಿ ದೋಸೆಯನ್ನು ಹುಯ್ದು, ಕಾಯಿಸಬೇಕು. ಅಲ್ಲಿಗೆ ಗರಿಗರಿಯಾದ ಓಟ್ಸ್ ದೋಸೆ ಸವಿಯಲು ಸಿದ್ದವಾಗುತ್ತದೆ.

ಓಟ್ಸ್ ದೋಸೆಯು ಆರೋಗ್ಯಕ್ಕೆ ಅತಿ ಉತ್ತಮವಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಕೊಲೆಸ್ಟ್ರೋಲ್ ಮಟ್ಟವನ್ನು ತಗ್ಗಿಸುತ್ತದೆ. ತೂಕ ಇಳಿಸಲು ಇದು ಉತ್ತಮ ಆಹಾರವಾಗಿದೆ. ಸುಲಭ ಜೀರ್ಣಕ್ರಿಯೆಗೂ ಇದು ಉತ್ತಮ ಆಹಾರವಾಗಿದೆ.

ನೀರು ದೋಸೆ

ಬೇಕಾಗುವ ಪದಾರ್ಥಗಳು

  • ದೋಸೆ ಅಕ್ಕಿ 2 ಕಪ್
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಮುಂಚಿನ ದಿನ ರಾತ್ರಿಯೆ ಅಕ್ಕಿಯನ್ನು ನೆನೆಸಿಡಬೇಕು. ಮರುದಿನ ಬೆಳಿಗ್ಗೆ ನೆನೆಸಿದ ಅಕ್ಕಿಯನ್ನು ನೀರು ಸೇರಿಸಿ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಬೇಕಾದರೆ ಮತ್ತೆ ನೀರನ್ನು ಸೇರಿಸಿ ತೆಳು ಮಾಡಿಕೊಂಡು, ಬಿಸಿಯಾದ ದೋಸೆ ಕಾವಲಿಗೆಯ ಮೇಲೆ ಎಣ್ಣೆ ಸವರಿ ತೆಳುವಾಗಿ ಹುಯ್ಯಬೇಕು. ಅಲ್ಲಿಗೆ ಗರಿಗರಿಯಾದ ತೆಳು ದೋಸೆ ಸವಿಯಲು ಸಿದ್ದವಾಗುತ್ತದೆ. ಇದು ಮಾಡಲು ಬಲು ಸುಲಭವಾದ ದೋಸೆಯಾಗಿದೆ. ಇದು ಅರೋಗ್ಯಕ್ಕೂ ಉತ್ತಮವಾದ ಆಹಾರವಾಗಿದೆ.

ಸೌತೆಕಾಯಿ ದೋಸೆ

ಬೇಕಾಗುವ ಪದಾರ್ಥಗಳು

  • ಸೌತೆಕಾಯಿ 2
  • ದೋಸೆ ಅಕ್ಕಿ 1 ಕಪ್
  • ತೆಂಗಿನಕಾಯಿ ತುರಿ ½ ಕಪ್
  • ಉಪ್ಪು 
  • ಬೆಲ್ಲ ½ ಕಪ್
  • ಎಣ್ಣೆ

ಮಾಡುವ ವಿಧಾನ
ಅಕ್ಕಿಯನ್ನು ನಾಲ್ಕರಿಂದ ಐದು ಗಂಟೆಗಳ ಕಾಲ ನೆನೆಸಬೇಕು. ಸೌತೆಕಾಯಿಯನ್ನು ಚೆನ್ನಾಗಿ ತುರಿದುಕೊಳ್ಳಬೇಕು. ನಂತರ ಒಂದು ಮಿಕ್ಸಿ ಜಾರಿಗೆ ನೆನೆಸಿದ ಅಕ್ಕಿ, ಕಾಯಿತುರಿ, ಬೆಲ್ಲವನ್ನು ಸೇರಿಸಿ, ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ರುಬ್ಬಿದ ಮಿಶ್ರಣಕ್ಕೆ ಸೌತೆಕಾಯಿ ತುರಿಯನ್ನು ಸೇರಿಸಿ, ಕಲಸಿಕೊಂಡು ಹಾಗೆಯೇ ಬಿಡಬೇಕು. ಕನಿಷ್ಠ ಐದು ಗಂಟೆಗಳು ಕಳೆದ ನಂತರ ಹಿಟ್ಟನ್ನು ಬಳಸಬಹುದು. ದೋಸೆ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಕಲಸಿಕೊಂಡು, ಬಿಸಿ ಕಾವಲಿಗೆಗೆ ಎಣ್ಣೆಯನ್ನು ಸವರಿ, ದೋಸೆಯನ್ನು ಹಾಕಬೇಕು. ಎರಡು ಬದಿಯಲ್ಲಿ ಚೆನ್ನಾಗಿ ಹುರಿಯಬೇಕು. ಅಲ್ಲಿಗೆ ಬಿಸಿ ಬಿಸಿಯಾದ ಸೌತೆಕಾಯಿ ದೋಸೆ ಸವಿಯಲು ಸಿದ್ದವಾಗುತ್ತದೆ.

ತ್ರಿ ಇನ್ ಒನ್ ದೋಸೆ

ಬೇಕಾಗುವ ಪದಾರ್ಥಗಳು

  • ಅಕ್ಕಿ ಹಿಟ್ಟು 1 ಕಪ್
  • ಗೋಧಿ ಹಿಟ್ಟು 1 ಕಪ್
  • ಮೈದಾ ಹಿಟ್ಟು 1 ಕಪ್
  • ರವೆ ¼ ಕಪ್
  • ಉಪ್ಪು 
  • ಎಣ್ಣೆ

ಮಾಡುವ ವಿಧಾನ
ಒಂದು ಪಾತ್ರೆಗೆ ಮೇಲೆ ಹೇಳಿದ ಪ್ರಮಾಣದಲ್ಲಿ ಅಕ್ಕಿ ಹಿಟ್ಟು, ಗೋಧಿ ಹಿಟ್ಟು ಹಾಗೂ ಮೈದಾ ಹಿಟ್ಟು ಮೂರನ್ನು ಬೆರೆಸಿ, ನೀರುದೋಸೆಯ ಹದದಷ್ಟು ತೆಳು ಮಾಡಿಕೊಳ್ಳಬೇಕು. ನಂತರ ರವೆಯನ್ನು ಸೇರಿಸಿಕೊಳ್ಳಬೇಕು. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಬಿಸಿ ಕಾವಲಿಗೆ ಮೇಲೆ ಎಣ್ಣೆ ಸವರಿ ದೋಸೆಯನ್ನು ಹುಯ್ಯಬೇಕು. ನೀರುದೋಸೆಯ ತರಹ ದೋಸೆಯನ್ನು ಹುಯ್ಯಬೇಕು. ಅಲ್ಲಿಗೆ ತ್ರಿ ಇನ್ ಒನ್ ದೋಸೆ ಸವಿಯಲು ಸಿದ್ದವಾಗುತ್ತದೆ. ರವೆ ಹಾಕುವುದರಿಂದ ದೋಸೆಯು ಗರಿಗರಿಯಾಗುವುದು. ತಕ್ಷಣಕ್ಕೆ ತಯಾರಿಸಬಲ್ಲ ದೋಸೆ ಇದಾಗಿದ್ದು, ಬಹಳ ರುಚಿಕರವಾಗಿರುತ್ತದೆ.

ಉದ್ದಿನಬೇಳೆಯ ದೋಸೆ

ಬೇಕಾಗುವ ಪದಾರ್ಥಗಳು

  • ಉದ್ದಿನಬೇಳೆ 1 ಕಪ್
  • ದೋಸೆ ಅಕ್ಕಿ 2 ½ ಕಪ್
  • ಮೆಂತ್ಯ ಕಾಳು ¼ ಚಮಚ
  • ಉಪ್ಪು 
  • ಎಣ್ಣೆ

ಮಾಡುವ ವಿಧಾನ
ಉದ್ದಿನಬೇಳೆಯನ್ನು ಮೆಂತ್ಯ ಕಾಳಿನ ಜೊತೆಗೆ ಸೇರಿಸಿ ನೆನೆಸಬೇಕು. ಹಾಗೆಯೇ ಅಕ್ಕಿಯನ್ನು ಕೂಡ ನೆನೆಸಬೇಕು. ನಾಲ್ಕು ಗಂಟೆ ನೆಂದ ಮೇಲೆ ಎರಡನ್ನು ಬೇರೆ ಬೇರೆಯಾಗಿ ದೋಸೆ ಹಿಟ್ಟಿನ ಹದಕ್ಕೆ ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಂಡು ಒಂದು ಪಾತ್ರೆಗೆ ವರ್ಗಯಿಸಿಕೊಳ್ಳಬೇಕು. ಹಾಗೆಯೇ ಕಲಸಿ ಒಂದು ರಾತ್ರಿಯಿಡಿ ಬಿಡಬೇಕು. ಮರುದಿನ ಬೆಳಿಗ್ಗೆ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ, ಬಿಸಿ ಕಾವಲಿಗೆ ಮೇಲೆ ದೋಸೆಯನ್ನು ಕಾಯಿಸಬೇಕು, ಅಲ್ಲಿಗೆ ಗರಿಗರಿಯಾಗಿ ಉದ್ದಿನದೋಸೆ ಸವಿಯಲು ಸಿದ್ದವಾಗುತ್ತದೆ.

ಹೆಸರುಬೇಳೆ ದೋಸೆ

ಬೇಕಾಗುವ ಪದಾರ್ಥಗಳು

  • ದೋಸೆ ಅಕ್ಕಿ 2 ಕಪ್
  • ಹೆಸರುಬೇಳೆ ¾ ಕಪ್
  • ಮೆಂತ್ಯ ಕಾಳು 1 ಚಮಚ
  • ಹಸಿ ಮೆಣಸಿನಕಾಯಿ 1
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ದೋಸೆ ಅಕ್ಕಿ, ಹೆಸರುಬೇಳೆ ಹಾಗೂ ಮೆಂತ್ಯಕಾಳು ಇವು ಮೂರನ್ನು ಐದು ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ನಂತರ ಮೂರನ್ನು ಮಿಕ್ಸಿ ಜಾರಿಗೆ ಹಾಕಿ ದೋಸೆ ಹಿಟ್ಟಿನ ಹದಕ್ಕೆ ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಬೇಕು. ಒಂದು ಪಾತ್ರೆಗೆ ವರ್ಗಾಯಿಸಿಕೊಂಡು, ಆರು ಗಂಟೆಗಳ ಹಾಗೆಯೇ ಬಿಡಬೇಕು. ಅನಂತರ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ದೋಸೆ ಹಿಟ್ಟಿಗೆ ಸೇರಿಸಿಕೊಂಡು, ಕಲಸಬೇಕು. ಚೆನ್ನಾಗಿ ಕಾದ ಕಾವಲಿಗೆ ಮೇಲೆ ದೋಸೆಯನ್ನು ಕಾಯಿಸಿದರೆ, ಬಿಸಿ ಬಿಸಿಯಾದ ಹೆಸರುಬೇಳೆ ದೋಸೆ ಸವಿಯಲು ಸಿದ್ದವಾಗುತ್ತದೆ.

ಮೈದಾ ದೋಸೆ

ಬೇಕಾಗುವ ಪದಾರ್ಥಗಳು

  • ಉದ್ದಿನಬೇಳೆ ½ ಕಪ್
  • ಮೆಂತ್ಯ ಕಾಳು 1 ಚಮಚ
  • ಮೈದಾ ಹಿಟ್ಟು 1½  ಕಪ್
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಉದ್ದಿನಬೇಳೆ ಹಾಗೂ ಮೆಂತ್ಯ ಕಾಳನ್ನು ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ಅನಂತರ ಮಿಕ್ಸಿ ಜಾರಿಗೆ ನೆನೆಸಿದ ಉದ್ದಿನಬೇಳೆ ಹಾಗೂ ಮೆಂತ್ಯಕಾಳನ್ನು ಹಾಕಿ, ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಯಿಸಿಕೊಳ್ಳಬೇಕು. ಮೈದಾಹಿಟ್ಟನ್ನು ರುಬ್ಬಿದ ಮಿಶ್ರಣಕ್ಕೆ ಸೇರಿಸಿ ದೋಸೆ ಹಿಟ್ಟಿನ ಹದ ಬರುವಂತೆ ಕಲಸಬೇಕು. ಈ ಮಿಶ್ರಣವನ್ನು ಆರು ಗಂಟೆಗಳ ಕಾಲ ಹಾಗೆಯೇ ಮುಚ್ಚಿಡಬೇಕು. ಅನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕಲಸಿಕೊಳ್ಳಬೇಕು. ಕಾದ ಕಾವಲಿಗೆಯ ಮೇಲೆ ದೋಸೆಯನ್ನು ಹುಯ್ದು ಕಾಯಿಸಿದರೆ, ಬಿಸಿ ಬಿಸಿಯಾದ ಮೈದಾ ದೋಸೆ ಸವಿಯಲು ಸಿದ್ದವಾಗುತ್ತದೆ.

ಮಸಾಲಾ ದೋಸೆ

ದೋಸೆ ಹಿಟ್ಟಿಗೆ ಬೇಕಾಗುವ ಪದಾರ್ಥಗಳು

  • ದೋಸೆ ಅಕ್ಕಿ 3 ಕಪ್
  • ಮೆಂತ್ಯ ಕಾಳು ½ ಚಮಚ
  • ಉದ್ದಿನಬೇಳೆ 1 ಕಪ್
  • ತೊಗರಿಬೇಳೆ 2 ಚಮಚ
  • ಕಡ್ಲೆ ಬೇಳೆ 2 ಚಮಚ
  • ಅವಲಕ್ಕಿ 1 ಕಪ್
  • ಉಪ್ಪು

ಬಟಾಟೆ ಪಲ್ಯಕ್ಕೆ ಬೇಕಾಗುವ ಪದಾರ್ಥಗಳು

  • ಸಾಸಿವೆ 1 ಚಮಚ
  • ಉದ್ದಿನಬೇಳೆ 1
  • ಕರಿಬೇವು 
  • ಎಣ್ಣೆ
  • ಹಸಿಮಣಸಿನ ಕಾಯಿ 3
  • ಈರುಳ್ಳಿ 2
  • ಅರಿಶಿಣ ಪುಡಿ ¼ ಚಮಚ
  • ಉಪ್ಪು
  • ಬಟಾಟೆ 3
  • ಕೊತ್ತಂಬರಿ ಸೊಪ್ಪು

ಮಸಾಲ ಚಟ್ನಿಗೆ ಬೇಕಾಗುವ ಪದಾರ್ಥಗಳು

  • ಬ್ಯಾಡಗಿ ಮೆಣಸಿನಕಾಯಿ 5
  • ಪುಟಾಣಿ ¼ ಕಪ್
  • ಬೆಳ್ಳುಳ್ಳಿ 8
  • ಉಪ್ಪು

ಮಾಡುವ ವಿಧಾನ
ಮೊದಲಿಗೆ ದೋಸೆ ಅಕ್ಕಿ ಹಾಗೂ ಮೆಂತ್ಯ ಕಾಳನ್ನು ಒಟ್ಟಿಗೆ ನೀರಿನಲ್ಲಿ 4 ಗಂಟೆಗಳ ಕಾಲ ನೆನೆಸಬೇಕು. ಹಾಗೆಯೇ ಉದ್ದಿನಬೇಳೆ, ತೊಗರಿಬೇಳೆ ಹಾಗೂ ಕಡ್ಲೆಬೇಳೆಯನ್ನು ಕೂಡ ನೀರಿನಲ್ಲಿ 4 ಗಂಟೆಗಳ ಕಾಲ ನೆನೆಸಬೇಕು. ಸಂಪೂರ್ಣ ನೆನೆದ ನಂತರ ಮೊದಲಿಗೆ ನೆನೆಸಿದ ಬೇಳೆಗಳನ್ನು ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ನಂತರ ಒಂದು ಕಪ್ ಅವಲಕ್ಕಿಯನ್ನು ನೆನೆಸಿ ತೊಳೆದುಕೊಂಡು, ನೀರನ್ನು ಹಿಂಡಿಕೊಂಡು, ಅಕ್ಕಿ ಹಾಗೂ ಮೆಂತ್ಯ ಕಾಳಿನ ಜೊತೆ ಸೇರಿಸಿ ರುಬ್ಬಿಕೊಳ್ಳಬೇಕು. ಅನಂತರ ಎರಡು ಮಿಶ್ರಣವನ್ನು ಒಂದು ದೊಡ್ಡ ಪಾತ್ರೆಗೆ ವರ್ಗಾಯಿಸಿಕೊಂಡು ಕಲಸಿಕೊಳ್ಳಬೇಕು. ಹಾಗೆಯೇ ಮುಚ್ಚಿಡಬೇಕು. ಎಂಟು ಗಂಟೆಗಳ ಕಾಲ ಹಾಗೆಯೇ ಇಡಬೇಕು. ಅಲ್ಲಿಗೆ ದೋಸೆ ಹಿಟ್ಟಿನ ಮಿಶ್ರಣ ಸಿದ್ದವಾಗುತ್ತದೆ.

ಬಟಾಟೆ ಪಲ್ಯವನ್ನು ತಯಾರಿಸಲು ಮೊದಲು 3 ಬಟಾಟೆಯನ್ನು ಬೇಯಿಸಿಕೊಂಡು ಕಿವುಚಿಕೊಳ್ಳಬೇಕು. ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ, ಬಿಸಿಯಾದ ನಂತರ ಸಾಸಿವೆ ಹಾಗೂ ಉದ್ದಿನಬೇಳೆಯನ್ನು ಹಾಕಿ, ಸ್ವಲ್ಪ ಕೆಂಪಾದ ನಂತರ ಕತ್ತರಿಸಿದ ಹಸಿಮೆಣಸು ಹಾಗೂ ಕರಿಬೇವನ್ನು ಹಾಕಿ ಬಾಡಿಸಿಕೊಳ್ಳಬೇಕು. ನಂತರ ಉದ್ದಕೆ ಹೆಚ್ಚಿಕೊಂಡ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು. ಈರುಳ್ಳಿ ಬೆಂದ ನಂತರ ಅರಿಶಿಣ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಬಾಡಿಸಿಕೊಳ್ಳಬೇಕು. ಅನಂತರ ಬೇಯಿಸಿ, ಕಿವುಚಿಕೊಂಡ ಬಟಾಟೆಯನ್ನು ಹಾಕಿ, ಕೈ ಆಡಿಸಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಮೇಲೆ ಹಾಕಿ ಒಮ್ಮೆ ಕೈ ಆಡಿಸಬೇಕು. ಅಲ್ಲಿಗೆ ಬಟಾಟೆ ಪಲ್ಯ ಸಿದ್ದವಾಗುತ್ತದೆ.

ಮಸಾಲ ಚಟ್ನಿಯನ್ನು ತಯಾರಿಸಲು ಮೊದಲು ಬ್ಯಾಡಗಿ ಮೆಣಸನ್ನು ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಬೇಕು. ನಂತರ ಒಂದು ಮಿಕ್ಸಿ ಜಾರಿಗೆ ನೆನೆಸಿದ ಬ್ಯಾಡಗಿ ಮೆಣಸಿನಕಾಯಿ, ಸ್ವಲ್ಪ ಹುರಿದ ಪುಟಾಣಿ, ಎಣ್ಣೆಯಲ್ಲಿ ಹುರಿದುಕೊಂಡ ಬೆಳ್ಳುಳ್ಳಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ರುಬ್ಬಿಕೊಳ್ಳಬೇಕು. 

ಈಗ ಮೊದಲಿಗೆ ದೋಸೆ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಬಿಸಿಯಾದ ದೋಸೆ ಕಾವಲಿಗೆ ಮೇಲೆ ತೆಳುವಾಗಿ ದೋಸೆ ಹಾಕಿ, ಮೇಲೆ ಮಸಾಲ ಚಟ್ನಿಯನ್ನು ಸವರಿ, ಮಧ್ಯದಲ್ಲಿ ಬಟಾಟೆ ಪಲ್ಯವನ್ನು ಹಾಕಿ ಮಡಚಬೇಕು. ಅಲ್ಲಿಗೆ ಬಿಸಿ ಬಿಸಿಯಾದ, ಗರಿ ಗರಿ ಮಸಾಲ ದೋಸೆ ಸವಿಯಲು ಸಿದ್ದವಾಗುತ್ತದೆ.

ಚೀಸ್ ದೋಸೆ

ಬೇಕಾಗುವ ಪದಾರ್ಥಗಳು

  • ದೋಸೆ ಅಕ್ಕಿ 1 ½ ಕಪ್
  • ಉದ್ದಿನಬೇಳೆ ½ ಕಪ್
  • ಕಡಲೆಬೇಳೆ ½ ಕಪ್
  • ತುರಿದ ಚೀಸ್ ½ ಕಪ್
  • ಚಿಲ್ಲಿ ಫ್ಲೆಕ್ಸ್ ಸ್ವಲ್ಪ
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ದೋಸೆ ಅಕ್ಕಿ, ಕಡ್ಲೆಬೇಳೆ ಹಾಗೂ ಉದ್ದಿನಬೇಳೆಯನ್ನು 6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ನಂತರ ಮೂರನ್ನು ಸೇರಿಸಿ ರುಬ್ಬಿಕೊಂಡು ಕಲಸಬೇಕು. ರಾತ್ರಿ ಪೂರ್ತಿ ಹಾಗೆ ಮುಚ್ಚಿಡಬೇಕು. ಮರುದಿನ ಬೆಳಿಗ್ಗೆ ದೋಸೆ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕಲಸಬೇಕು. ಒಂದು ನೋನ್ ಸ್ಟಿಕ್ ತವಾವನ್ನು ಬಿಸಿಮಾಡಿ, ದೋಸೆಯನ್ನು ತೆಳುವಾಗಿ ಹಾಕಿ, ಮೇಲೆ ಸ್ವಲ್ಪ ಎಣ್ಣೆಯನ್ನು ಹಾಕಬೇಕು. ದೋಸೆ ಬಿಸಿಯಾದ ನಂತರ ತುರಿದ ಚೀಸ್ ಅನ್ನು ಉದುರಿಸಿ, ಚಿಲ್ಲಿ ಫ್ಲೆಕ್ಸ್ ಗಳನ್ನು ಹಾಕಿ ದೋಸೆಯನ್ನು ಕಾಯಿಸಬೇಕು. ನಂತರ ದೋಸೆಯನ್ನು ಮಡಚಿ ಒಂದು ಪ್ಲೇಟ್ ಗೆ ಹಾಕಿ ಟೊಮೆಟೊ ಚಟ್ನಿಯ ಜೊತೆ ಸವಿಯಬೇಕು. ಅಲ್ಲಿಗೆ ರುಚಿಯಾದ ಚೀಸ್ ದೋಸೆ ಸವಿಯಲು ಸಿದ್ದವಾಗುತ್ತದೆ.

ಇಷ್ಟೆಲ್ಲ ವಿವಿಧ ಹಾಗೂ ರುಚಿಕರ ದೋಸೆಗಳನ್ನು ಮಾಡುವ ವಿಧಾನಗಳನ್ನು ಅರಿತು, ಮನೆಯಲ್ಲೇ ತಯಾರಿಸಿ, ಸವಿಯಿರಿ ಎಂಬುದು ಈ ಲೇಖನದ ಉದ್ದೇಶವಾಗಿದೆ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

Leave a Comment

Your email address will not be published. Required fields are marked *

Scroll to Top