ಏಲಕ್ಕಿ ತಿನ್ನುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು!

Spread the love

ಏಲಕ್ಕಿ ತಿನ್ನುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು!
ಏಲಕ್ಕಿ ತಿನ್ನುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು! AI Image

ಸಣ್ಣ ಏಲಕ್ಕಿಯನ್ನು ನೋಡಿ ಕಂಡುಹಿಡಿಯುವ ಮೊದಲು ಅದರ ಸುವಾಸನೆಯೇ ಮೂಗನ್ನು ತುಂಬಿಕೊಂಡು ಹೊಸ ಸ್ವಾದದ ಮಜವನ್ನು ನೀಡುತ್ತದೆ. ಸಾಮಾನ್ಯವಾಗಿ ಅಡುಗೆಯಲ್ಲಿ ಏಲಕ್ಕಿಯನ್ನು ಬಳಸುತ್ತಾರೆ. ಮನೆಯಲ್ಲಿ ಮಾಡುವ ಸಿಹಿ ಪದಾರ್ಥಗಳಿಗೆ ಏಲಕ್ಕಿಯ ರುಚಿ ಸೇರಿದಾಗಲೇ ಹೊಸ ರುಚಿ ನಾಲಿಗೆಯಲ್ಲಿ ಅರಳುತ್ತದೆ. ಅಂತಹ ಏಲಕ್ಕಿ ಅಡುಗೆಗೆ ಮಾತ್ರವಲ್ಲದೆ ಔಷಧ ತಯಾರಿಕೆಗೂ ಬಳಕೆಯಾಗುತ್ತದೆ.

ಏಲಕ್ಕಿಯಲ್ಲಿ ಎರಡು ವಿಧಗಳಿದ್ದು, ಒಂದು ದೊಡ್ಡ ಏಲಕ್ಕಿ (ಕಪ್ಪು ಏಲಕ್ಕಿ) ಇನ್ನೊಂದು ಸಣ್ಣ ಏಲಕ್ಕಿ (ಹಸಿರು ಏಲಕ್ಕಿ). ಹೆಚ್ಚಾಗಿ ನಾವು ಅಡುಗೆಗೆ ಬಳಸುವುದು ಸಣ್ಣ ಏಲಕ್ಕಿಯನ್ನು, ದೊಡ್ಡ ಏಲಕ್ಕಿಯ ಪ್ರಯೋಜನಗಳು ಸಾಕಷ್ಟು ಇದೆ.

ಏಲಕ್ಕಿಯ ಮೌಲ್ಯವು ಬಹಳ ಉನ್ನತವಾಗಿದ್ದು, ಮಾರುಕಟ್ಟೆಯಲ್ಲಿ ದುಬಾರಿಯಾಗಿದೆ. ವಿವಿಧ ತಳಿಗಳಲ್ಲಿ ನಾವು ಏಲಕ್ಕಿಯ ಪರಿಚಯ ಪಡೆದುಕೊಳ್ಳಬಹುದು. ಇಂತಹ ಏಲಕ್ಕಿಯನ್ನು ವೈಜ್ಞಾನಿಕ ವಿಚಾರಗಳ ಜೊತೆಗೆ ಮನೆಮದ್ದಾಗಿ ಹೇಗೇ ಬಳಸುವುದು, ಎಂಬ ವಿಷಯಗಳನ್ನು ಈಗ ತಿಳಿಯೋಣ.

ಏಲಕ್ಕಿಯ ವೈಜ್ಞಾನಿಕ ವಿಚಾರಗಳು

ವೈಜ್ಞಾನಿಕ ಹೆಸರು- ಎಲೆಟ್ಟೇರಿಯ ಕಾರ್ಡಮೋಮಮ್ (Elettaria cardamomum or True cardamom)
ಆಂಗ್ಲ ಹೆಸರು- ಕಾರ್ಡಮೋಮ್ (Cardamom)

ಏಲಕ್ಕಿಯಲ್ಲಿ ಏನೇಕ ಅವಶ್ಯಕ ಖನಿಜಗಳು ಇದ್ದು ಮುಖ್ಯವಾಗಿ ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಸೋಡಿಯಂ ಗಳನ್ನು ಹೊಂದಿದೆ. ಏಲಕ್ಕಿಯ ವಿಭಿನ್ನ ಸುವಾಸನೆಗೆ ಎಸೆಂಶಿಯಲ್ ಆಯಿಲ್ ಗಳು ಕಾರಣವಾಗಿದ್ದು, ಮುಖ್ಯವಾಗಿ  β-ಪಿನೀನ್ (β-pinene), α-ಟರ್ಪಿನೈಲ್ ಅಸಿಟೇಟ್ (α-terpinyl acetate), 1,8-ಸಿನಿಯೋಲ್ (1,8-cineole),  ಸ್ಯಾಬಿನೀನ್ (sabinene), ಮತ್ತು ಲಿಮೋನೀನ್ (limonene) ಗಳು ಕಂಡುಬರುತ್ತವೆ. ಇದು ಆಂಟಿ ಆಕ್ಸಿಡೆಂಟ್ ಹಾಗೂ ಆಂಟಿ ಇನ್ಫ್ಲಾಮೆಟರಿ ಗುಣಗಳನ್ನು ಹೊಂದಿದೆ. ಏಲಕ್ಕಿಯು ಅರೋಗ್ಯವರ್ಧಕ ಹಾಗೂ ರೋಗ ನಿರೋಧಕ ಗುಣಗಳನ್ನು ಹೊಂದಿರುವ ಕಾರಣಕ್ಕೆ ಅನೇಕ ಮನೆಮದ್ದುಗಳಲ್ಲಿ ಬಳಕೆಯಾಗುತ್ತದೆ.

ಏಲಕ್ಕಿಯ ಆರೋಗ್ಯಕರ ಮನೆಮದ್ದುಗಳು

1. ತಲೆ ನೋವು ಹಾಗೂ ವಾಂತಿ ನಿಲ್ಲಿಸಲು ಏಲಕ್ಕಿಯು ಸಹಕಾರಿಯಾಗಿದೆ.

  • ಏಲಕ್ಕಿಯು ಪರಿಮಳಯುಕ್ತವಾದ ಪದಾರ್ಥವಾಗಿದ್ದು, ತಲೆ ನೋವು, ತಲೆ ತಿರುಗುವಿಕೆ ಹಾಗೂ ವಾಂತಿ ಸಮಸ್ಯೆಗಳಿಗೆ ಉತ್ತಮ ಪರಿಹಾರಗಳನ್ನು ನೀಡುತ್ತದೆ. ಮೊದಲನೆಯದಾಗಿ ತಲೆ ತಿರುಗಿ ಜೊತೆಗೆ ವಾಂತಿಯಾದಾಗ ದಾಳಿಂಬೆ ಹಣ್ಣಿನ ರಸದೊಂದಿಗೆ ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿಯಬೇಕು. ಇದು ತ್ವರಿತವಾಗಿ ವಾಂತಿಯನ್ನು ನಿಲ್ಲಿಸಲು ಸಹಕಾರಿಯಾಗಿದೆ.
  • ಏಲಕ್ಕಿಯನ್ನು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ನಶ್ಯದ ತರಹ ಮೂಗಿನ ಹೊಳ್ಳೆಗಳಿಗೆ ಹಾಕುವುದರಿಂದ ತಲೆ ನೋವು ಕಡಿಮೆಯಾಗುತ್ತದೆ.
  • ಏಲಕ್ಕಿಯನ್ನು ಸಿಪ್ಪೆ ಸುಲಿದು ಒಳಗಿನ ತಿರುಳನ್ನು ಒಟ್ಟುಗೊಳಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಒಂದು ಲೋಟ ನೀರಿಗೆ ಒಂದು ಚಮಚ ಪುಡಿಯನ್ನು ಬೆರೆಸಿ, ತೆಗೆದಿಟ್ಟ ಸಿಪ್ಪೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ಇಟ್ಟ ನೀರು ಅರ್ಧದಷ್ಟು ಇಂಗಿದ ನಂತರ ಓಲೆ ಆರಿಸಿ, ಶೋಧಿಸಿ ಕುಡಿಯಬೇಕು. ಈ ಏಲಕ್ಕಿ ಕಷಾಯ ವಾಂತಿಯನ್ನು ನಿಲ್ಲಿಸಲು ಅತಿ ಉತ್ತಮ ಟಾನಿಕ್ ಆಗಿದೆ.
  • ಒಂದು ಲೋಟ ನೀರಿಗೆ ಅರ್ಧ ಲಿಂಬೆ ಹಣ್ಣು, ಎರಡು ಚಮಚ ಸಕ್ಕರೆ, ಅರ್ಧ ಚಮಚ ಉಪ್ಪು ಬೆರೆಸಿ ಲಿಂಬು ಹಣ್ಣಿನ ಶರಬತ್ತನ್ನು ತಯಾರಿಸಬೇಕು. ಈ ಪಾನಕಕ್ಕೆ ಕಾಲು ಚಮಚ ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿಯುವುದು ತಲೆ ಸುತ್ತುವಿಕೆಯನ್ನು ಶೀಘ್ರವಾಗಿ ಗುಣಪಡಿಸಿ, ವಾಕರಿಕೆ ತರಹದ ಸಮಸ್ಯೆಗಳನ್ನು ಕೂಡ ದೂರ ಮಾಡುತ್ತದೆ.
  • ಏಲಕ್ಕಿಯ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡಿದರೆ ತಲೆ ನೋವು ಕಡಿಮೆಯಾಗುತ್ತದೆ.

2. ಅಧಿಕ ಪಿತ್ತದಿಂದ ಉಂಟಾಗುವ ಸಮಸ್ಯೆಗಳಿಗೆ ಸೂಕ್ತ ಏಲಕ್ಕಿಯ ಪರಿಹಾರಗಳು

  • ಅಧಿಕ ಪಿತ್ತದಿಂದ ಹಲವಾರು ಸಮಸ್ಯೆಗಳನ್ನು ನಾವು ಅನುಭವಿಸುತ್ತೇವೆ. ಹುಳಿ ತೇಗು, ಹುಳಿಯಾದ ವಾಂತಿ ಹೊಟ್ಟೆ ತೊಳೆಸುವಿಕೆ, ಕಣ್ಣ ಮುಂದೆ ಕತ್ತಲೆ ಕವಿದಂತೆ ಆಗುವುದು, ವಾಕರಿಕೆ ಹಾಗೂ ತಲೆ ಸುತ್ತುವಿಕೆ ಇವೆಲ್ಲವೂ ಕೆಲವು ಪ್ರಮುಖ ಲಕ್ಷಣಗಳಾಗಿವೆ. ಈ ಸಮಯದಲ್ಲಿ ಏಲಕ್ಕಿ ಬಹಳ ಉಪಯುಕ್ತವಾಗುತ್ತದೆ. ಅದರಲ್ಲಿ ಒಂದು ಪಿತ್ತಕ್ಕೆ ಉಪಯುಕ್ತ ಮದ್ದಿನ ಬಗ್ಗೆ ಈಗ ತಿಳಿಯೋಣ. ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಅರ್ಧದಷ್ಟು ನೀರು ಇಂಗಿದ ನಂತರ ಕಾಲು ಚಮಚ ಏಲಕ್ಕಿ ಪುಡಿಯನ್ನು ಬೆರೆಸಿ, ಕುಡಿಯುವುದರಿಂದ ಅಧಿಕ ಪಿತ್ತದಿಂದ ಬರುವ ಎಲ್ಲ ರೀತಿಯ ಸಂಕಟಗಳಿಂದ ನಾವು ಪಾರಾಗಬಹುದು.

3. ಮೂತ್ರ ಸಂಬಂಧಿ ಸಮಸ್ಯೆಗಳಿಗೆ ಏಲಕ್ಕಿಯ ಪರಿಹಾರಗಳು

  • ಕಟ್ಟು ಮೂತ್ರ ನಿವಾರಣೆಗೆ ಒಂದೊಳ್ಳೆ ಪರಿಹಾರ ಇಲ್ಲಿದೆ. ಬಾಳೆ ದಿಂಡನ್ನು ಸಣ್ಣಗೆ ತುಂಡಾಗಿ ಕತ್ತರಿಸಿ, ರುಬ್ಬಿಕೊಳ್ಳಬೇಕು. ನಂತರ ರಸವನ್ನು ಶೋಧಿಸಿಕೊಂಡು, ಆ ಒಂದು ಲೋಟ ರಸಕ್ಕೆ ಕಾಲು ಚಮಚ ಏಲಕ್ಕಿ ಪುಡಿಯನ್ನು ಬೆರೆಸಿ ಸೇವಿಸಬೇಕು. ಇದು ಒಂದು ಉತ್ತಮ ಪರಿಹಾರವಾಗಿದೆ.
  • ಉರಿ ಮೂತ್ರ ನಿವಾರಣೆಗೆ ಒಂದು ಲೋಟ ಹಾಲಿಗೆ ಕಾಲು ಚಮಚ ಏಲಕ್ಕಿ ಪುಡಿಯನ್ನು ಸೇರಿಸಿ ಕುದಿಸಬೇಕು. ಚೆನ್ನಾಗಿ ಕುದಿಸಿದ ನಂತರ ಓಲೆ ಆರಿಸಿ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಹಾಲನ್ನು ಕುಡಿಯಬೇಕು. ಇದು ಉರಿ ಮೂತ್ರ ನಿವಾರಣೆಗೆ ಉತ್ತಮ ಪಾನೀಯವಾಗಿದೆ.
  • ಕಟ್ಟು ಮೂತ್ರ ನಿವಾರಣೆಗೆ ಹಾಗೂ ಉರಿ ಮೂತ್ರದ ಏಲಕ್ಕಿಯು ಉತ್ತಮ ಪರಿಹಾರಗಳನ್ನು ನೀಡುತ್ತದೆ. ಅದರಲ್ಲಿ ಒಂದು ಏಲಕ್ಕಿ ಟೀ. ಕಟ್ಟು ಮೂತ್ರ ಸಮಸ್ಯೆ ಹೊಂದಿದವರು ಏಲಕ್ಕಿಯ ಚಹಾ ಮಾಡಿ ಕುಡಿಯುವುದು ಅತಿ ಉತ್ತಮವಾಗಿದೆ. ಎಲ್ಲರ ಮನೆಯಲ್ಲಿ ಮಾಡುವ ಹಾಗೆ ಒಂದು ಲೋಟ ಚಹಾವನ್ನು ತಯಾರಿಸಲು ಅರ್ಧ ಲೋಟ ನೀರನ್ನು ಓಲೆಯ ಮೇಲೆ ಇಟ್ಟು, ಒಂದು ಚಮಚ ಸಕ್ಕರೆ ಮತ್ತು ಚಹಾ ಪುಡಿಯನ್ನು ಬೆರೆಸಿ ಚೆನ್ನಾಗಿ ಕುದಿಸಬೇಕು. ಕುದಿಯುವಾಗ ಕಾಲು ಚಮಚ ಏಲಕ್ಕಿ ಪುಡಿಯನ್ನು ಬೆರೆಸಬೇಕು. ಕೊನೆಯಲ್ಲಿ ಹಾಲನ್ನು ಬೆರೆಸಿ ಕುದಿಸಿದರೆ ಏಲಕ್ಕಿ ಚಹಾ ಸಿದ್ದವಾಗುತ್ತದೆ. ಇದು ಮೂತ್ರ ಸಂಬಂಧಿ ಸಮಸ್ಯೆಗಳಿಗೆ ಅತಿ ಉತ್ತಮವಾಗಿದೆ.
  • ಏಲಕ್ಕಿಯ ಸಿಪ್ಪೆಗಳನ್ನು ಕಸವೆಂದು ಬಿಸಾಡದೆ ಉಪಯೋಗಿಸಿಕೊಳ್ಳಬಹುದು. ಏಲಕ್ಕಿಯ ಸಿಪ್ಪೆಗಳನ್ನು ಚಹಾ ಪುಡಿಯ ಡಬ್ಬದಲ್ಲಿ ಚಹಾ ಪುದಿಯೊಂದಿಗೆ ಹಾಕಿಡಬೇಕು. ಇದರಿಂದ ನಿತ್ಯ ಮಾಡುವ ಚಹಾ ಏಲಕ್ಕಿಯ ಸ್ವಾದದ ಜೊತೆಗೆ ಪರಿಮಳವನ್ನು ನೀಡುತ್ತದೆ.
  • ಏಲಕ್ಕಿಯ ಸಿಪ್ಪೆಯನ್ನು ಅಕ್ಕಿಯನ್ನು ಸಂಗ್ರಹಿಸಿಡುವ ಡಬ್ಬದಲ್ಲಿ ಶೇಖರಿಸಿ ಇಡಬೇಕು. ಇದರಿಂದ ಏಲಕ್ಕಿಯ ಸುವಾಸನೆಗೆ ಯಾವುದೇ ರೀತಿಯ ಹುಳಗಳ ಬೆಳವಣಿಗೆ ಅಕ್ಕಿಯಲ್ಲಿ ಆಗುವುದಿಲ್ಲ. )

4. ಬಾಯಿಯ ಉತ್ತಮ ಆರೋಗ್ಯಕ್ಕೆ ಏಲಕ್ಕಿಯ ಕೊಡುಗೆಗಳು

  • ಬಾಯಿಯ ದುರ್ಗಂಧ ನಿವಾರಣೆ ಕೆಲವರಿಗೆ ಅತಿ ದೊಡ್ಡ ಸಮಸ್ಯೆಯಾಗಿರುತ್ತದೆ. ಬಾಯಿಯ ದುರ್ವಾಸನೆಯನ್ನು ದೂರ ಮಾಡಲು ಏಲಕ್ಕಿ ಬಹಳ ಸಹಕಾರಿಯಾಗಿದೆ. ಏಲಕ್ಕಿಯನ್ನು ಚೆನ್ನಾಗಿ ಅಗೆದು ತಿನ್ನುವುದರಿಂದ ಬಾಯಿಯ ವಾಸನೆ ದೂರವಾಗುತ್ತದೆ. ಹಾಗೆಯೇ ಬಿಸಿಲಿನ ಸಮಯದಲ್ಲಿ ಗಂಟಲು ಒಣಗಿ, ಬಾಯಾರಿಕೆ ಆಗುವುದು ಕೂಡ ಕಡಿಮೆಯಾಗುತ್ತದೆ. ಇದು ಉತ್ತಮ ಜೀರ್ಣಕ್ರಿಯೆಗೂ ಒಳ್ಳೆಯದು.
  • ಬಾಯಲ್ಲಿ ಕಜ್ಜಿ, ತುರಿಕೆಗಳು ಕಂಡು ಬಂದರೂ ಏಲಕ್ಕಿಯ ಸಹಾಯವನ್ನು ಪಡೆದುಕೊಳ್ಳಬೇಕು. ಲಿಂಬುವಿನ ಪಾನಕದ ಜೊತೆಯಲ್ಲಿ ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಬಾಯಿ ತುರಿಕೆಯ ಸಮಸ್ಯೆ ಕಡಿಮೆಯಾಗುತ್ತದೆ. ಹಾಗೆಯೇ ಕೆಲವರಿಗೆ ಬಾಯಲ್ಲಿ ನೀರೂರುವ ಸಮಸ್ಯೆ ಇರುತ್ತದೆ. ಅಂತವರಿಗೂ ಇದು ಉತ್ತಮ ಪರಿಹಾರವಾಗಿದೆ.
  • ಬಾಯಿಯಲ್ಲಿರುವ ಹಲ್ಲುಗಳ ರಕ್ಷಣೆಗೂ ಏಲಕ್ಕಿ ಉತ್ತಮ ಪರಿಹಾರವನ್ನು ನೀಡುತ್ತದೆ.
  • ಹಲ್ಲು ನೋವು ಬಂದಾಗ ಏಲಕ್ಕಿ ಕಷಾಯವನ್ನು ತಯಾರಿಸಿ, ಅದರಿಂದ ಬಾಯಿ ಮುಕ್ಕಳಿಸಬೇಕು. ಏಲಕ್ಕಿಯ ಅನೇಕ ಉತ್ತಮ ಗುಣಗಳಿಂದ ಹಲ್ಲು ನೀವು ತ್ವರಿತವಾಗಿ ಗುಣವಾಗುತ್ತದೆ.

5. ಸೇವಿಸಿದ ಆಹಾರದ ಉತ್ತಮ ಜೀರ್ಣಕ್ರಿಯೆಗೂ ಏಲಕ್ಕಿ ಉತ್ತಮವಾಗಿದೆ.

  • ಆಹಾರವನ್ನು ಉತ್ತಮವಾಗಿ ಜೀರ್ಣಗೊಳಿಸಲು ಊಟದ ನಂತರ ಬಾಳೆಹಣ್ಣನ್ನು ತಿನ್ನುವುದು ಸರ್ವೇ ಸಾಮಾನ್ಯ. ಬಾಳೆ ಹಣ್ಣಿನ ಸೇವನೆಯ ನಂತರವೂ ಜೀರ್ಣಕ್ರಿಯೆ ಸುಲಭವಾಗದಿದ್ದಾಗ ಒಂದು ಏಲಕ್ಕಿಯನ್ನು ಜಗಿದು ತಿನ್ನಬೇಕು. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ, ಅರೋಗ್ಯವನ್ನು ಕಾಪಾಡುತ್ತದೆ.
  • ಮಲಬದ್ಧತೆ, ಆಜೀರ್ಣ ಹಾಗೂ ಪೈಲ್ಸ್ ಸಮಸ್ಯೆಗಳಿಗೂ ಏಲಕ್ಕಿಯು ಉತ್ತಮವಾಗಿದೆ. ಚೆನ್ನಾಗಿ ಹಣ್ಣಾಗಿರುವ ಬಾಳೆ ಹಣ್ಣನ್ನು ಸಿಪ್ಪೆಯ ಜೊತೆಗೆ ಏಲಕ್ಕಿ ಪುದಿಯೊಂದಿಗೆ ಸೇವಿಸಬೇಕು. ಇದು ಅಜೀರ್ನದಂತಹ ಸಮಸ್ಯೆಗಳಿಗೆ ಶೀಘ್ರ ಪರಿಹಾರವನ್ನು ನೀಡುತ್ತದೆ. ಹಾಗೆಯೇ ಮಲವನ್ನು ಸಡಿಲಗೊಳಿಸಿ ಮಲಬದ್ಧತೆ ಹಾಗೂ ಮೂಲವ್ಯಾಧಿಗೂ ಪರಿಹಾರವನ್ನು ನೀಡುತ್ತದೆ.

6. ಕಿವಿಯ ಆರೋಗ್ಯದಲ್ಲಿ ಏಲಕ್ಕಿಯ ಪರಿಹಾರಗಳು

  • ಕಿವಿಯ ನೋವು ಕಂಡು ಬಂದಲ್ಲಿ ಏಲಕ್ಕಿಯ ಎಣ್ಣೆಯನ್ನು ನೋವಿರುವ ಕಿವಿಗೆ ಎರಡು ಹನಿ ಬಿಡುವುದರಿಂದ ಕಿವಿ ನೋವು ಕಡಿಮೆಯಾಗುತ್ತದೆ.

ಏಲಕ್ಕಿಯ ಎಣ್ಣೆಯೂ ಕೂಡ ಬಹಳ ದುಬಾರಿಯಾಗಿದ್ದು, ಆದರೆ ಔಷಧಿಕ ಉಪಯೋಗಕ್ಕೆ ಬಲು ಉತ್ತಮವಾಗಿದೆ.

7. ಕಣ್ಣಿನ ಆರೋಗ್ಯಕ್ಕೆ ಏಲಕ್ಕಿಯ ಪರಿಹಾರಗಳು

  • ಏಲಕ್ಕಿಯಿಂದ ಕಣ್ಣುಗಳ ಅರೋಗ್ಯಕ್ಕೂ ತುಂಬಾ ಉತ್ತಮವಾಗಿದೆ. ಏಲಕ್ಕಿಯ ಎಣ್ಣೆಯನ್ನು ಕಣ್ಣುಗಳಿಗೆ ಹಚ್ಚುವುದರಿಂದ ಇರುಳುಗಣ್ಣಿನ ಸಮಸ್ಯೆ ದೂರವಾಗುತ್ತದೆ. ಇದು ಬಹಳ ಪ್ರಯೋಜನಕಾರಿ ಪರಿಹಾರವಾಗಿದೆ.

8. ಚಿಕ್ಕ ಮಕ್ಕಳಿಗೆ ಜ್ಞಾಪಕ ಶಕ್ತಿಯನ್ನು ವೃದ್ಧಿಸಲು ನೀಡಲೇ ಬೇಕಾದ ಏಲಕ್ಕಿ ಕ್ಷೀರ.

  • ಚಿಕ್ಕ ಮಕ್ಕಳಲ್ಲಿ ಬೆಳವಣಿಗೆಯ ಗುಣಗಳು ಜಾಸ್ತಿ ಇರುವುದರಿಂದ ಉತ್ತಮ ಆಹಾರ ಹಾಗೂ ಪೋಷಕಾಂಶಗಳ ಅಗತ್ಯ ಜಾಸ್ತಿಯಾಗಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಏಲಕ್ಕಿಯ ಸಹಾಯ ಅತಿ ಮುಖ್ಯವಾಗಿದೆ. ಮಕ್ಕಳು ಕುದಿಯುವ ಹಾಲಿಗೆ ಏಲಕ್ಕಿ ಪುಡಿ ಹಾಗೂ ಜೇನುತುಪ್ಪ ಬೆರೆಸಿ, ನಿತ್ಯ ಕುಡಿಸುವುದರಿಂದ ಮಕ್ಕಳ ಮೆದುಳಿನ ಆರೋಗ್ಯ ಉತ್ತಮವಾಗಿಸಿ, ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ. ಇದು ವಯಸ್ಸಾದವರಿಗೂ, ಮಧ್ಯಮ ವಯಸ್ಕರು ಹಾಗೂ ಸರ್ವರೂ ಕುಡಿಯಬಹುದು. ಎಲ್ಲರ ಜ್ಞಾಪಕ ಶಕ್ತಿಗೆ ಉತ್ತಮ ಮದ್ದಾಗಿದೆ.

9. ಕಾಲರ ರೋಗಕ್ಕೆ ಏಲಕ್ಕಿಯ ಪರಿಹಾರಗಳು

  • ಏಲಕ್ಕಿಯ ಸಿಪ್ಪೆಯು ಈ ಕಾಲರ ರೋಗಕ್ಕೆ ಉತ್ತಮ ಮದ್ದಾಗಿದೆ. ಒಂದು ಲೋಟ ನೀರಿಗೆ 25 ಗ್ರಾಂ ನಷ್ಟು ಏಲಕ್ಕಿಯ ಸಿಪ್ಪೆಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಇಟ್ಟ ನೀರು ಅರ್ಧದಷ್ಟು ಇಂಗಿದ ಮೇಲೆ ಶೋಧಿಸಿಕೊಳ್ಳಬೇಕು. ಕಾಲರ ಸಮಸ್ಯೆ ಇದ್ದವರಿಗೆ ಪ್ರತಿ ಅರ್ಧ ಗಂಟೆಗೆ ಒಂದು ಸಲ ಈ ನೀರನ್ನು ಕುದಿಸಬೇಕು. ಇದು ಅತಿ ಶೀಘ್ರದಲ್ಲಿ ರೋಗದಿಂದ ಗುಣಮುಖರಾಗಲು ಸಹಕರಿಸುತ್ತದೆ.

10. ಕೆಮ್ಮು, ಉಬ್ಬಸ ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಗೆ ಏಲಕ್ಕಿಯ ಪರಿಹಾರಗಳು

  • ಕೆಮ್ಮು, ಉಬ್ಬಸ ಇಂತಹ ಅನೇಕ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಏಲಕ್ಕಿಯ ಒಂದು ಉತ್ತಮ ಮದ್ದಿನ ವಿವರಣೆ ಇಲ್ಲಿದೆ. ಏಲಕ್ಕಿ ಹಾಗೂ ಲವಂಗವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಎರಡನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ಈ ಕುಟ್ಟಿ ಪುಡಿ ಮಾಡಿದ ಏಲಕ್ಕಿ ಲವಂಗದ ಮಿಶ್ರಣಕ್ಕೆ ಸಕ್ಕರೆಯನ್ನು ಸೇರಿಸಬೇಕು. ಈ ಮೂರರ ಮಿಶ್ರಣವನ್ನು ನೀರಿನೊಂದಿಗೆ ಬೆರೆಸಿ ಕುಡಿಯಬೇಕು. ಇದು ಅತಿ ಉತ್ತಮವಾದ ಪರಿಹಾರವಾಗಿದೆ.

ಹೀಗೆ ಇನ್ನೂ ಅನೇಕ ಏಲಕ್ಕಿಯ ಪ್ರಯೋಜನಗಳನ್ನು ನಾವು ಅರಿಯಬಹುದು. ಆಯುರ್ವೇದದಲ್ಲಿ ಏಲಕ್ಕಿ ಒಂದು ಉತ್ತಮ ಸ್ಥಾನವಿದೆ. ಇದರ ಇನ್ನೊಂದು ವಿಶೇಷವೇನೆಂದರೆ, ಏಲಕ್ಕಿ ವಿಷಾಹರವಾಗಿ ಕಾರ್ಯ ನಿರ್ವಹಿಸುತ್ತದೆ. ಹೊರಗೆ ಆಹಾರವನ್ನು ಸೇವಿಸುವಾಗ ಮದ್ದು ಹಾಕಿರಬಹುದು ಎಂಬ ಅನುಮಾನ ಇದ್ದಲ್ಲಿ, ಆಹಾರವನ್ನು ತಿನ್ನುವ ಮುನ್ನ ಒಂದು ಏಲಕ್ಕಿಯನ್ನು ಜಗಿದು ತಿನ್ನಬೇಕು. ಇದು ಆಹಾರದಲ್ಲಿನ ದೋಷವನ್ನು ನಮ್ಮ ಮೈಗೆ ತಾಗಲು ಬಿಡುವುದಿಲ್ಲ. ಎಷ್ಟು ಸಹಕಾರಿಯಲ್ಲವೇ ನಮ್ಮ ಏಲಕ್ಕಿ! ಇದು ದೇಹಕ್ಕೆ ತಂಪನ್ನು ನೀಡುವ ಆಹಾರ ಪದಾರ್ಥವಾಗಿದ್ದು ಸ್ವಲ್ಪ ಖಾರ ರಸದ ಸ್ವಾದವನ್ನು ನೀಡುತ್ತದೆ.

ದೇಹದಲ್ಲಿ ಬಳಲಿಕೆ ಕಂಡು ಬಂದಾಗ ಏನನ್ನು ಯೋಚಿಸದೆ ಒಮ್ಮೆ ಏಲಕ್ಕಿ ಚಹವನ್ನು ಕುಡಿಯಬೇಕು. ಇದು ಮನಸ್ಸಿನ ಅನೇಕ ದುಗುಡಗಳನ್ನು ದೂರ ಮಾಡಿ, ದೇಹದ ಆಯಾಸವನ್ನು ಕೂಡ ದೂರಗೊಳಿಸುತ್ತದೆ. ಸಿಹಿಯ ಜೊತೆಗೆ ಏಲಕ್ಕಿಯ ಸಮಾಗಮ ಬಹಳ ಅದ್ಭುತವಾದದ್ದು ಎಂದರೆ ತಪ್ಪಾಗಲಾರದು. ಎಲ್ಲ ಸಿಹಿ ತಿಂಡಿಗಳ ಕೊನೆಯಲ್ಲಿ ಏಲಕ್ಕಿ ಪುಡಿಯನ್ನು ಸೇರಿಸಿದರೆ ಅದು ಉತ್ತಮ ಘಮ ಹಾಗೂ ರುಚಿಯನ್ನು ಇಮ್ಮಡಿಗೊಳಿಸುತ್ತದೆ.

ಏಲಕ್ಕಿಯ ಪರಿಚಯ ಹಾಗೂ ಅನೇಕ ಉಪಯೋಗಗಳ ಬಗ್ಗೆ ವಿಸ್ತರವಾಗಿ ಇಂದು ನಾವು ಈ ಲೇಖನದಲ್ಲಿ ಅರಿತಿದ್ದೇವೆ. ಏಲಕ್ಕಿಯ ಉಪಯುಕ್ತ ಮನೆಮದ್ದುಗಳ ಸಹಾಯವನ್ನು ಪಡೆದುಕೊಂಡು ನೀವೆಲ್ಲರೂ ಅರೋಗ್ಯದಿಂದ ಇರಬೇಕು ಎಂಬುದು ನಮ್ಮ ಲೇಖನದ ಆಶಯ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

1 thought on “ಏಲಕ್ಕಿ ತಿನ್ನುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು!”

  1. Pingback: ಕೆಮ್ಮು, ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು - ಗೃಹಸ್ನೇಹಿ - ನಿಸರ್ಗದ ಮಡಿಲಲ್ಲಿ ಅರಳಿದ ಆರೋಗ್ಯದ ಗುಟ್ಟು

Leave a Comment

Your email address will not be published. Required fields are marked *

Scroll to Top