ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು

Spread the love

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು. AI Image

ಕೆಲವರು ತರಕಾರಿ ಅಂಗಡಿಯಲ್ಲಿ ಒಂದು ತರಕಾರಿಯನ್ನು ಕಂಡೊಡನೆ ಒಮ್ಮೆ ಅಯ್ಯಬ್ಬಾ ಕಹಿ!!! ಎಂದೆನೆಸಿ ಮನೆಗೆ ತರಲು ಆಲೋಚಿಸುವ ತರಕಾರಿಯೆ ಹಾಗಲಕಾಯಿ. ಕಡು ಕಹಿ ಸ್ವಾದದ, ಹಸಿರು ಬಣ್ಣದ ತರಕಾರಿ. ತಿನ್ನಲು ಮಾತ್ರ ಕಹಿ ಆದರೆ ಉದರದ ಆರೋಗ್ಯಕ್ಕೆ ತುಂಬಾ ಉತ್ತಮವಾದ ತರಕಾರಿ. ಇದು ಬಳ್ಳಿಗಳಲ್ಲಿ ಹಬ್ಬುತ್ತದೆ, ದೊಡ್ಡ ಕೈ ಆಕಾರದ ಎಲೆಗಳು, ಹಸಿರು ಬಣ್ಣದ ಕಾಯಿ ಹಾಗೂ ಹಳದಿ ಬಣ್ಣದ ಹಣ್ಣುಗಳನ್ನು ಹೊಂದಿರುತ್ತದೆ. ಅನೇಕ ಔಷಧಿಕ ಗುಣಗಳನ್ನು ತನ್ನಲಿರಿಸಿಕೊಂಡಿರುವ ಹಾಗಲಕಾಯಿಯ ಪರಿಚಯ, ವೈಜ್ಞಾನಿಕ ಹಿನ್ನಲೆಗಳು ಹಾಗೂ ಆರೋಗ್ಯಕರ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ನಾವು ಇಂದಿನ ಲೇಖನದಲ್ಲಿ ವಿಶ್ಲೇಷಿಸೋಣ.

ಹಾಗಲಕಾಯಿಯ ವೈಜ್ಞಾನಿಕ ವಿಚಾರಗಳು

ವೈಜ್ಞಾನಿಕ ಹೆಸರು- ಮೊಮೊರ್ಡಿಕಾ ಚರಂತಿಯಾ (Momordica Charantia)
ಆಂಗ್ಲ ಹೆಸರು – ಬಿಟ್ಟರ್ ಗಾರ್ಡ್ (Bitter Gourd)

ಹಾಗಲಕಾಯಿಯಲ್ಲಿ ಅನೇಕ ಖನಿಜಗಳು ಇದ್ದು, ಮುಖ್ಯವಾಗಿ ವಿಟಮಿನ್ ಎ, ಬಿ, ಸಿ, ಬಿ2 ಜೊತೆಗೆ ಕಾರ್ಬೋಹೈಡ್ರೈ ಟ್, ಮ್ಯಾಂಗನೀಸ್, ಕಾಪ್ಪರ್, ಗಂಧಕ, ಕ್ಯಾಲ್ಸಿಯಂ, ಕಬ್ಬಿಣ, ನಾರು ಹಾಗೂ ತೇವಾಂಶ ಕೂಡ ಇವೆ. ಹಾಗಲಕಾಯಿಯ ಕಹಿ ರುಚಿಗೆ ಕಾರಣವೆಂದರೆ ಇದರಲ್ಲಿರುವ ಕ್ವಿನೋಲಿನ್ ಆಲ್ಕಲಾಯ್ಡ್‌ಗಳು ಮತ್ತು ಮೊಮೊರ್ಡಿನ್‌ನಂತಹ ಅಂಶಗಳು.

ಹಾಗಲಕಾಯಿ ಮಾತ್ರವಲ್ಲದೆ ಅದರ ಎಲೆಗಳು ಹಾಗೂ ಬೀಜಗಳು ಸಹ ಅನೇಕ ಔಷಧಿ ಗುಣಗಳನ್ನು ಹೊಂದಿದೆ. ಹಾಗಲಕಾಯಿ ದೇಹಕ್ಕೆ ತಂಪನ್ನು ನೀಡುವ ತರಕಾರಿಯಾಗಿದ್ದು, ಬೇಸಿಗೆಗೆ ಇದರ ಸೇವನೆ ಅತಿ ಉತ್ತಮವಾಗಿದೆ. ಕಣ್ಣಿನ ಉತ್ತಮ ಆರೋಗ್ಯಕ್ಕೆ, ಜ್ವರ, ನೆಗಡಿ, ಪಿತ್ತ ಹಾಗೂ ಅನೇಕ ಹೊಟ್ಟೆಗೆ ಸಂಬಂಧಪಟ್ಟ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ನಮ್ಮ ದೇಹಕ್ಕೆ ನೀಡುತ್ತದೆ. ಅನೇಕ ಸಮಸ್ಯೆಗಳು ಒಂದೇ ಪರಿಹಾರ ಎಂಬಂತೆ ಕೆಲವು ಸಮಸ್ಯೆಗಳಿಗೆ ಹಾಗಲಕಾಯಿ ಸೂಕ್ತ ಮದ್ದಾಗುತ್ತದೆ. ಇಂತಹ ಅನೇಕ ಮದ್ದುಗಳ ಬಗೆಗಿನ ಮಾಹಿತಿಗಳು ಕೆಳಕಂಡತಿವೆ.

ಹಾಗಲಕಾಯಿಯ ಆರೋಗ್ಯಕರ ಮನೆಮದ್ದುಗಳು

ಮಧುಮೇಹಿಗಳಿಗೆ ಹಾಗಲಕಾಯಿ ಉತ್ತಮ ಆಹಾರವಾಗಿದೆ.

ದೇಹದಲ್ಲಿನ ಸಕ್ಕರೆ ಖಾಯಿಲೆಯನ್ನು ನಿಯಂತ್ರಿಸಲು ಹಾಗಲಕಾಯಿ ಉತ್ತಮ ಮದ್ದಾಗಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ನೈಸರ್ಗಿಕ ಇನ್ಸೂಲಿನ್ ನಂತೆ ಕೆಲಸ ಮಾಡುತ್ತದೆ. ಸಕ್ಕರೆ ಖಾಯಿಲೆ ಇರುವವರು ಪ್ರತಿದಿನ ಬೆಳಿಗ್ಗೆ ಹಾಗಲಕಾಯಿಯ ಜ್ಯೂಸ್ ಕುಡಿಯುವುದು ಉತ್ತಮವಾಗಿದೆ. ಹಾಗಲಕಾಯಿಯ ರಸ ಸೇವನೆಯಿಂದ ರಕ್ತವು ಕೂಡ ಶುದ್ಧವಾಗಿರುತ್ತದೆ. ಪ್ರತಿದಿನ ಸಕ್ಕರೆ ಖಾಯಿಲೆಯ ಮಾತ್ರೆಯ ಜೊತೆಯಲ್ಲಿ ಈ ಹಾಗಲಕಾಯಿ ರಸವನ್ನು ಸೇವಿಸಿದರೆ ಮಧುಮೇಹ ತ್ವರಿತವಾಗಿ ನಿಯಂತ್ರಣಗೊಳುತ್ತದೆ.

ಮಧುಮೇಹಿಗಳಿಗೆ ಇನ್ನೊಂದು ಉತ್ತಮ ಮನೆಮದ್ದು ಎಂದರೆ ಹಾಗಲಕಾಯಿ ಹಾಗೂ ಬಾಳೆಕಾಯಿ ಎರಡನ್ನು ಸಣ್ಣಗೆ ಕತ್ತರಿಸಿಕೊಂಡು ನೀರಿನಲ್ಲಿ ಹಾಕಿ ಬೇಯಿಸಬೇಕು. ಚೆನ್ನಾಗಿ ಬೇಯಿಸಿ, ಆ ಬೇಯಿಸಿದ ನೀರನ್ನು ಶೋಧಿಸಿಕೊಂಡು ಪ್ರತಿದಿನ ಕುಡಿಯಬೇಕು. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಉತ್ತಮ ಆಹಾರವಾಗಿದೆ.

ಮೂಲವ್ಯಾಧಿ ಸಮಸ್ಯೆಗೆ ಹಾಗಲಕಾಯಿಯ ಮದ್ದುಗಳು

ಮೂಲವ್ಯಾಧಿ ಸಮಸ್ಯೆಯು ನಮ್ಮ ಆಹಾರ ಪದ್ದತಿಯ ನಿಯಂತ್ರಣದಿಂದ ಮಾತ್ರ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಂತಹ ಆಹಾರ ಪದ್ಧತಿಯಲ್ಲಿ ಹಾಗಲಕಾಯಿಯನ್ನು ಉಪಯೋಗಿಸುವುದು ಮೂಲವ್ಯಾಧಿ ಸಮಸ್ಯೆಯ ಪರಿಹಾರಕ್ಕೆ ಅತಿ ಉತ್ತಮವಾಗಿರುತ್ತದೆ. ಹಾಗಲಕಾಯಿ ಎಲೆಗಳು ಮೂಲವ್ಯಾಧಿಯ ಚಿಕಿತ್ಸೆಗೆ ಬಲು ಉತ್ತಮವಾಗಿದೆ. ಮೂಲವ್ಯಾಧಿಗೆ ಒಂದು ಉತ್ತಮ ಮನೆಮದ್ದು ಎಂದರೆ ಹಾಗಲಕಾಯಿ ಎಲೆಗಳು ಅಥವಾ ಹಾಗಲಕಾಯಿಯನ್ನು ರುಬ್ಬಿಕೊಂಡು ರಸವನ್ನು ಹಿಂಡಿಕೊಳ್ಳಬೇಕು. ಹಿಂಡಿಕೊಂಡ ರಸಕ್ಕೆ ಕಲ್ಲುಸಕ್ಕರೆಯನ್ನು ಸೇರಿಸಿ ಒಂದು ವಾರಗಳ ಕಾಲ ಪ್ರತಿದಿನ ಕುಡಿಯಬೇಕು. ಇದು ಮೂಲವ್ಯಾಧಿ ಮತ್ತು ರಕ್ತ ಮೂಲವ್ಯಾಧಿಗಳ ಸಮಸ್ಯೆಗಳನ್ನು ಶೀಘ್ರವಾಗಿ ಗುಣಪಡಿಸುತ್ತದೆ.

ಅನೇಕ ಚರ್ಮ ರೋಗಗಳಿಗೆ ಹಾಗಲಕಾಯಿಯ ಉತ್ತಮ ಪರಿಹಾರಗಳು

ಚರ್ಮದಲ್ಲಿ ಕಜ್ಜಿ, ತುರಿಕೆ, ಹುಳಕಡ್ಡಿ, ಗಜಕರ್ಣ, ಇಸುಬು ಹಾಗೂ ಬಿಳಿ ಕಲೆಗಳಿಗೆ ಹಾಗಲಕಾಯಿ ಉತ್ತಮ ಪರಿಹಾರವನ್ನು ನೀಡುತ್ತದೆ.

  • ಚರ್ಮದ ಮೇಲೆ ಹುಳಕಡ್ಡಿ, ಕಜ್ಜಿ, ತುರಿಕೆಗಳು ಕಂಡು ಬಂದರೆ ಹಾಗಲಕಾಯಿ, ಅರಿಶಿಣದ ಕೊಂಬು ಹಾಗೂ ದೊಡ್ಡಪತ್ರೆ ಎಲೆಗಳನ್ನು ಮೊಸರು ಹಾಗೂ ಗೋಮೂತ್ರದಲ್ಲಿ ಚೆನ್ನಾಗಿ ಅರೆದು ಮಿಶ್ರಣವನ್ನು ತಯಾರಿಸಬೇಕು. ಈ ಮಿಶ್ರಣವನ್ನು ಕಜ್ಜಿ, ತುರಿಕೆ, ಹುಳಕಡ್ಡಿಗಳು ಇರುವ ಜಾಗಕ್ಕೆ ಹಚ್ಚಿಕೊಳ್ಳಬೇಕು. ಇದು ಚರ್ಮದ ಎಲ್ಲಾ ಸಮಸ್ಯೆಗಳನ್ನು ಕಡಿಮೆಗೊಳಿಸುತ್ತದೆ.
  • ಚರ್ಮದ ಸಮಸ್ಯೆಗಳಿಗೆ ಹಾಗಲಕಾಯಿ ಹೇಗೇ ಉತ್ತಮವಾಗಿದೆಯೋ ಹಾಗೆಯೇ ಬೇವಿನ ಎಲೆಗಳು ಹಾಗೂ ಅರಿಶಿಣ ಕೂಡ ಒಳ್ಳೆಯದಾಗಿದೆ. ಚರ್ಮದ ಅನೇಕ ಸಮಸ್ಯೆಗಳಿಗೆ ಇವುಗಳೆಲ್ಲ ಸೇರಿಸಿ ಒಂದು ಪಾರಿಣಾಮಕಾರಿ ಮನೆಮದ್ದನ್ನು ತಯಾರಿಸಬಹುದು. ಮೊದಲಿಗೆ ಹಾಗಲಕಾಯಿ ಎಲೆಗಳು, ಬೇವಿನ ಎಲೆಗಳು ಎರಡನ್ನು ಚೆನ್ನಾಗಿ ಅರೆದು ರಸ ಹಿಂಡಿಕೊಳ್ಳಬೇಕು. ಈಗ ಒಂದು ಪಾತ್ರೆಗೆ ಹಾಗಲಕಾಯಿ ಎಲೆಯ ರಸ, ಬೇವಿನ ಎಲೆಯ ರಸ, ಗಟ್ಟಿ ಮೊಸರು, ಸ್ವಲ್ಪ ಕುಟ್ಟಿದ ಅರಿಶಿಣದ ಕೊಂಬು ಹಾಗೂ ಶುದ್ಧವಾದ ಎಳ್ಳೆಣ್ಣೆಯನ್ನು ಸೇರಿಸಿ, ಓಲೆಯ ಮೇಲೆ ಸಣ್ಣ ಉರಿಯಲ್ಲಿ ಕುದಿಸಬೇಕು. ಇದನ್ನು ತನಿದ ಮೇಲೆ ಶೋಧಿಸಿಕೊಂಡು, ಶೇಖರಿಸಿ ಇಡಬೇಕು. ಇದು ಚರ್ಮದ ಯಾವುದೇ ರೀತಿಯ ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.
  • ಚರ್ಮದ ಕೆಲವು ಮುಖ್ಯ ಸಮಸ್ಯೆಗಳೆಂದರೆ ಗಜಕರ್ಣ ಇಸುಬು, ಕಜ್ಜಿ, ತುರಿಕೆ ಇವುಗಳಿಗೆ ಉತ್ತಮ ಮದ್ದಿನ ಬಗ್ಗೆ ಈಗ ತಿಳಿಯೋಣ. ಹಾಗಲಕಾಯಿಯ ರಸವನ್ನು ತಯಾರಿಸಿಕೊಳ್ಳಬೇಕು. ಹಾಗಲಕಾಯಿಯನ್ನು ರುಬ್ಬಿಕೊಂಡು, ಶೋಧಿಸಿ, ರಸ ಹಿಂಡಬೇಕು. ಅದೇ ರೀತಿಯಲ್ಲಿ ಬೇವಿನ ಎಲೆಗಳನ್ನು ಚೆನ್ನಾಗಿ ಅರೆದು ರಸ ಹಿಂಡಿಕೊಳ್ಳಬೇಕು. ಒಂದು ಪಾತ್ರೆಗೆ ಹಾಗಲಕಾಯಿ ರಸ, ಬೇವಿನ ಎಲೆಗಳ ರಸ ಹಾಗೂ ತೆಂಗಿನ ಎಣ್ಣೆಯನ್ನು ಹಾಕಿ ಸಣ್ಣ ಉರಿಯಲ್ಲಿ ಕುದಿಸಬೇಕು. ನೀರಿನ ಅಂಶ ಸಂಪೂರ್ಣ ಇಂಗಿದ ಮೇಲೆ ಎಣ್ಣೆಯನ್ನು ತಣಿಸಿ, ಶೇಖರಿಸಿ ಇಡಬೇಕು. ಗಜಕರ್ಣ, ಇಸುಬಿನಂತಹ ಯಾವುದೇ ಚರ್ಮ ಸಮಸ್ಯೆಗಳಿಗೆ ಇದು ಉತ್ತಮ ಪರಿಹಾರವಾಗಿದೆ.

ಹಾಗಲಕಾಯಿಯಿಂದ ಇರುಳುಗಣ್ಣಿನ ಸಮಸ್ಯೆಗೆ ಉತ್ತಮ ಪರಿಹಾರಗಳಿವೆ.

ಇರುಳುಗಣ್ಣು ಸಮಸ್ಯೆ ಇರುವವರು ಜಾಸ್ತಿಯಾಗಿ ವಿಟಮಿನ್ ಎ ಇರುವ ಆಹಾರವನ್ನು ಸ್ವೀಕರಿಸುವುದು ಉತ್ತಮವಾಗಿದೆ. ರಾತ್ರಿ ಹೊತ್ತಿಗೆ ಕಣ್ಣು ಮಂಜಾಗಿ ಕಾಣುವುದು, ಕೆಲವರಿಗೆ ಕತ್ತಲಾದ ಮೇಲೆ ಕಣ್ಣು ಕಾಣುವುದೇ ಇಲ್ಲ. ಅಂತಹವರು ಹಾಗಲಕಾಯಿಯನ್ನು ಉಪಯೋಗಿಸಿ ಒಂದು ಮನೆಮದ್ದನ್ನು ತಯಾರಿಸಬೇಕು. ಹಾಗಲಕಾಯಿಯ ಗಿಡದ ಎಲೆಗಳನ್ನು ಚೆನ್ನಾಗಿ ತೊಳೆದು, ಅರೆಯಬೇಕು. ಅರೆದ ನಂತರ ರಸ ಹಿಂಡಿಕೊಳ್ಳಬೇಕು. ಈ ಹಾಗಲಕಾಯಿಯ ರಸಕ್ಕೆ ಶುದ್ಧ ಜೇನುತುಪ್ಪವನ್ನು ಬೆರೆಸಿ ಕಣ್ಣಿಗೆ ಎರಡು ಹನಿ ಹಾಕುವುದರಿಂದ, ಕಣ್ಣಿನ ದೃಷ್ಠಿ ಉತ್ತಮವಾಗುತ್ತದೆ. ಕತ್ತಲಾದ ಮೇಲೆ ಕಣ್ಣು ಮಂಜಾಗುವ ಸಮಸ್ಯೆಯು ಕೂಡ ದೂರವಾಗುತ್ತದೆ. ಇದನ್ನು ನಿತ್ಯ ಕಣ್ಣಿಗೆ ಹಾಕುವುದರಿಂದ ಕಣ್ಣಿನ ಆರೋಗ್ಯ ಕೂಡ ವೃದ್ಧಿಸುತ್ತದೆ.

ಪಿತ್ತದ ಅನೇಕ ಸಮಸ್ಯೆಗಳಿಗೆ ಹಾಗಲಕಾಯಿಯ ಮದ್ದುಗಳು

ಅತಿಯಾದ ಪಿತ್ತದ ಸಮಸ್ಯೆಗಳಿಂದ ವಾಂತಿ, ತಲೆ ನೋವು, ತಲೆ ತಿರುಗುವಿಕೆ, ಹುಳಿ ತೇಗು ಹಾಗೆಯೇ ಮೈ ಮೇಲೆ ಆಗುವ ಕೆಂಪು ಗಂಧೆಗಳು. ಇವುಗಳಿಗೆ ಹಾಗಲಕಾಯಿ ಉತ್ತಮ ಮದ್ದಾಗುತ್ತದೆ. ಹಾಗಲಕಾಯಿಯನ್ನು ರುಬ್ಬಿಕೊಂಡು ರಸವನ್ನು ಹಿಂಡಿ ಕುಡಿಯುವುದು ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಇದರಿಂದ ಪಿತ್ತದ ಸಮಸ್ಯೆಗಳು ಬೇಗನೆ ಕಡಿಮೆಯಾಗುತ್ತದೆ. ಹಾಗೆಯೇ ಪಿತ್ತದ ಕೆಂಪು ಗಂಧೆಗಳಿಗೆ ಹಾಗಲಕಾಯಿ ಅಥವಾ ಹಾಗಲಕಾಯಿಯ ಎಲೆಗಳನ್ನು ಜಜ್ಜಿಕೊಂಡು ರಸ ಹಿಂಡಿಕೊಳ್ಳಬೇಕು. ಈ ರಸವನ್ನು ಮೊಸರಿನೊಂದಿಗೆ ಬೆರೆಸಿ ಮೈ ಮೇಲೆ ಹಚ್ಚಿಕೊಂಡು ಒಣಗಿದ ನಂತರ ಅಥವಾ ಒಂದು ಗಂಟೆಯ ನಂತರ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಪಿತ್ತದ ಗಂಧೆಗಳು ಬೇಗನೆ ಕಡಿಮೆಯಾಗುತ್ತದೆ.

ಯುಕೃತ್ತಿನ ಉತ್ತಮ ಆರೋಗ್ಯಕ್ಕೆ ಹಾಗಲಕಾಯಿಯ ಮನೆಮದ್ದುಗಳು

ನಮ್ಮ ಜೀರ್ಣಕ್ರಿಯೆಯಲ್ಲಿ ಅನೇಕ ಘಟ್ಟಗಳಿದ್ದು, ಎಲ್ಲವೂ ಸುಲಭವಾಗಿ ಸಾಗಿದರೆ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಜೀರ್ಣ ಕ್ರಿಯೆಯ ಕಾರ್ಯದಲ್ಲಿ ಭಾಗಿಯಾಗುವ ಒಂದು ಮುಖ್ಯ ಭಾಗವೆಂದರೆ ಅದು ಯಕೃತ. ನಮ್ಮ ಯುಕೃತ್ ನ ಆರೋಗ್ಯ ಬಹು ಮುಖ್ಯವಾಗಿದೆ. ಯಕೃತ್ತಿನ ಉತ್ತಮ ಆರೋಗ್ಯಕ್ಕೆ ಹಾಗಲಕಾಯಿಯ ಎಲೆಗಳನ್ನು ಜಜ್ಜಿ, ರಸ ಹಿಂಡಿಕೊಳ್ಳಬೇಕು. ಈ ಹಾಗಲಕಾಯಿ ಎಲೆಯ ರಸಕ್ಕೆ ಜೇನುತುಪ್ಪವನ್ನು ಬೆರೆಸಿ ಸೇವಿಸುವುದು ಯಕೃತ್ತಿನ ಆರೋಗ್ಯಕ್ಕೆ ಉತ್ತಮವಾಗಿದೆ. ಹಾಗಲಕಾಯಿಯ ಎಲೆಗಳು ಸಿಗದಿದ್ದರೆ ಹಾಗಲಕಾಯಿಯನ್ನು ರುಬ್ಬಿಕೊಂಡು, ರಸ ಹಿಂಡಿ, ಜೇನುತುಪ್ಪಡೊಡನೆ ಸೇವಿಸಬೇಕು. ಇದು ಕೂಡ ಯಕೃತ್ತಿನ ಆರೋಗ್ಯಕ್ಕೆ ಉತ್ತಮವಾಗಿದೆ.

ದೇಹದಲ್ಲಿ ವಿಷ ಪ್ರವೇಶವಾದಗ ಪಥಮ ಚಿಕಿತ್ಸೆಗಾಗಿ ಹಾಗಲಕಾಯಿಯನ್ನು ಉಪಯೋಗಿಸಬಹುದು.

ದೇಹದಲ್ಲಿ ವಿಷ ಹೊಕ್ಕಿದಾಗ, ಅನೇಕ ವಿಷ ಜಂತುಗಳ ಕಡಿತವಾದಗ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಬಹು ಮುಖ್ಯ. ಆದರೆ ಅದಕ್ಕೆ ಅವಕಾಶಗಳು ಇಲ್ಲದಿದ್ದಾಗ ಪ್ರಥಮ ಚಿಕಿತ್ಸೆಗಾಗಿ ಹಾಗಲಕಾಯಿಯ ರಸವನ್ನು ಕುಡಿಸಬೇಕು. ಹಾಗಲಕಾಯಿಯ ರಸ ಕುಡಿದು ವಾಂತಿಯಾದರೆ ವಿಷವು ಕೂಡ ದೇಹದಿಂದ ಹೊರಬರುತ್ತದೆ. ಸ್ವಲ್ಪ ಪ್ರಮಾಣದಲ್ಲಿ ಚೇತರಿಕೆಯನ್ನು ಕಾಣಬಹುದು.

ಕಾಲರ ರೋಗಕ್ಕೆ ಹಾಗಲಕಾಯಿಯ ಉತ್ತಮ ಪರಿಹಾರಗಳು

ಕಾಲರ ರೋಗವು ಕಲುಷಿತ ನೀರು ಹಾಗೂ ಅನೇಕ ಬ್ಯಾಕ್ಟಿರಿಯಗಳಿಂದ ಹರಡುತ್ತದೆ. ಇಂತಹ ಸಮಯದಲ್ಲಿ ಹೊಟ್ಟೆ ನೋವು, ವಾಂತಿ, ಸುಸ್ತು, ಬೇಧಿ ಇನ್ನೂ ಅನೇಕ ಲಕ್ಷಣಗಳು ಕಂಡು ಬರುತ್ತದೆ. ಇಂತಹ ಕಾಲರವನ್ನು ನಾವು ಹಾಗಲಕಾಯಿಯನ್ನು ಆಹಾರದಲ್ಲಿ ಬಳಸಿಕೊಂಡು ಕಡಿಮೆ ಮಾಡಿಕೊಳ್ಳಬಹುದು. ದಿನ ನಿತ್ಯ ಆಹಾರದಲ್ಲಿ ಹಾಗಲಕಾಯಿಯನ್ನು ಬಳಸುವುದು ಕಾಲರ ಸಮಸ್ಯೆಯನ್ನು ದೂರಪಡಿಸಲು ಬಹು ಉತ್ತಮವಾಗಿರುತ್ತದೆ. ಕಾಲರ ರೋಗಕ್ಕೆ ಒಂದು ಉತ್ತಮ ಮನೆಮದ್ದು ಎಂದರೆ ಹಾಗಲಕಾಯಿ ಮತ್ತು ಈರುಳ್ಳಿಯನ್ನು ಸಮಾನವಾಗಿ ತೆಗೆದುಕೊಂಡು ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಹಿಂಡಿ, ರಸ ತೆಗೆದುಕೊಳ್ಳಬೇಕು. ಈ ರಸಕ್ಕೆ ಜೇನುತುಪ್ಪವನ್ನು ಬೆರೆಸಿ, ಪ್ರತಿ ಅರ್ಧ ತಾಸಿಗೆ ಒಮ್ಮೆ ಒಂದು ಚಮಚ ಸೇವಿಸುವುದರಿಂದ ಕಾಲರಾ ರೋಗದ ಪರಿಣಾಮ ಕಡಿಮೆಯಾಗಿ, ಬೇಗನೆ ಗುಣಮುಖರಾಗಬಹುದು. ಇದು ಅತ್ಯಂತ ಉತ್ತಮ ಪರಿಹಾರವಾಗಿದೆ.

ಚಾಕು, ಕತ್ತಿಗಳು ತಾಗಿ ರಕ್ತ ಸೋರುತ್ತಿದ್ದರೆ, ಹಾಗಲಕಾಯಿಂದ ಆಗುವ ಪ್ರಯೋಜನಗಳು.

ಕೈಗೆ ಅಚಾನಕ್ಕಾಗಿ ಕತ್ತಿ, ಚಾಕು ತಗುಲಿ ಗಾಯವಾದಾಗ ರಕ್ತವನ್ನು ನಿಲ್ಲಿಸಲು ಹಾಗಲಕಾಯಿಯ ಎಲೆಯ ರಸ ಇಲ್ಲವೇ ಹಾಗಲಕಾಯಿ ರಸವನ್ನು ಸ್ವಲ್ಪ ಸುಣ್ಣದೊಂದಿಗೆ ಬೆರೆಸಿ ಹಚ್ಚುವುದರಿಂದ ರಕ್ತ ಸೋರಿಕೆ ನಿಲ್ಲುತ್ತದೆ. ಹಾಗೆಯೇ ಕಬ್ಬಿಣದ ನಂಜು ಕೂಡ ಮೈಗೆ ತಗುವುದಿಲ್ಲ.

ಅಶುದ್ಧ ರಕ್ತವನ್ನು ಶುದ್ಧಗೊಳಿಸಲು ಹಾಗಲಕಾಯಿ ಉತ್ತಮ ಆಹಾರವಾಗಿದೆ.

ಹಾಗಲಕಾಯಿಯನ್ನು ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ ಅಗೆದು ತಿನ್ನುವುದರಿಂದ ರಕ್ತ ಶುದ್ಧಿಯಾಗುತ್ತದೆ. ಹಾಗೆಯೇ ಅರೋಗ್ಯಕ್ಕೆ ಅದು ಅತಿ ಉತ್ತಮವಾಗಿದೆ. ರಕ್ತದ ಅಶುದ್ಧತೆಯಿಂದ ಆಗುವ ಅನೇಕ ಸಮಸ್ಯೆಗಳು ಉದಾಹರಣೆಗೆ ಕರುಳು ಹುಣ್ಣು, ಹೊಟ್ಟೆ ಹುಣ್ಣು ಇಂತಹ ಅನೇಕ ಸಮಸ್ಯೆಗಳನ್ನು  ದೂರಪಡಿಸಲು ಹಾಗಲಕಾಯಿ ಉತ್ತಮ ಆಹಾರವಾಗಿದೆ.

ಇಷ್ಟೆಲ್ಲ ಉತ್ತಮ ಗುಣಗಳನ್ನು ಹೊಂದಿರುವ ಹಾಗಲಕಾಯಿ, ಔಷಧಿಗೆ ಮಾತ್ರವಲ್ಲದೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಲು ಕೂಡ ಬಳಸುತ್ತಾರೆ. ಹಾಗಲಕಾಯಿ ಚಟ್ನಿ, ಹಾಗಲಕಾಯಿ ಸಾರು, ಹಾಗಲಕಾಯಿ ಪಲ್ಯ, ಹಾಗಲಕಾಯಿ ಫ್ರೈ, ಹಾಗಲಕಾಯಿ ಗೊಜ್ಜು, ಹಾಗಲಕಾಯಿ ಉಪ್ಪಿನ ಕಾಯಿ, ಹೀಗೆ ಇನ್ನೂ ಹಲವಾರು ಆರೋಗ್ಯಕರ ಖಾದ್ಯಗಳನ್ನು ಸಹ ತಯಾರಿಸುತ್ತಾರೆ. ಪ್ರತಿದಿನ ಆಹಾರದಲ್ಲಿ ಸ್ವಲ್ಪ ಹಾಗಲಕಾಯಿಯನ್ನು ಬಳಸುವುದು ಅತಿ ಉತ್ತಮವಾಗಿದೆ. ಎಲ್ಲಾ ಸಮಯದಲ್ಲೂ ಸಿಹಿ ತಿಂದು ಹೊಟ್ಟೆಯೊಳಗೆ ಕ್ರೀಮಿಗಳು ಹುಟ್ಟುವಾಗ ಕಹಿಯ ಸ್ವಾದವನ್ನು ಹೊಟ್ಟೆಗೆ ತುಂಬುವ ಹಾಗಲಕಾಯಿ ಉತ್ತಮ ಗೃಹಸ್ನೇಹಿಯಾಗಿದೆ. ಹಾಗೆಯೇ ಇದು ಕಡಿಮೆ ಕ್ಯಾಲೋರಿ ಇರುವ ಆಹಾರವಾಗಿದ್ದು, ತೂಕ ಇಳಿಸುವವರಿಗೂ ಉತ್ತಮ ಆಹಾರವಾಗಿದೆ. ಇದರಲ್ಲಿ ಫೈಬರ್ ಅಂಶಗಳು ಕೂಡ ಇರುವುದರಿಂದ ಅರೋಗ್ಯವರ್ಧಕವಾಗಿದೆ, ಹಾಗೆಯೇ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಇಂತಹ ಹಾಗಲಕಾಯಿಯನ್ನು ಸೇವಿಸಿ ಅದರ ಆರೋಗ್ಯಕರ ಪರಿಹಾರಗಳನ್ನು ಪಡೆದುಕೊಳ್ಳಬೇಕು ಎಂಬುದು ನಮ್ಮ ಆಶಯ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

View Comments

Share
Published by
GruhaSnehi

Recent Posts

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ! (Natural hair care)

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ! ಕೂದಲಿನ ಆರೋಗ್ಯ ಎಂದರೆ ಎಲ್ಲರ ಕಿವಿ ಒಮ್ಮೆ ನೆಟ್ಟಗಾಗುತ್ತದೆ. ಇಂದಿನ…

8 hours ago

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು (Fruit Salad for health)

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು. AI Image ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ…

1 day ago

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು. AI Image ತರಕಾರಿ ಹಾಗೂ ಹಣ್ಣುಗಳಿಂದ ಅನೇಕ ಖಾದ್ಯಗಳನ್ನು ತಯಾರಿಸಬಹುದು.…

3 days ago

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು. AI Image ನಮ್ಮ ಹೃದಯ ನಮ್ಮ ಉಸಿರು. ಒಂದೊಂದು…

4 days ago

ಆರೋಗ್ಯಕರ ತರಕಾರಿಗಳ ಸಲಾಡ್ ಮತ್ತು ಕೋಸಂಬರಿ ರೆಸಿಪಿಗಳು

ಆರೋಗ್ಯಕರ ತರಕಾರಿಗಳ ಸಲಾಡ್ ಮತ್ತು ಕೋಸಂಬರಿ ರೆಸಿಪಿಗಳು. AI Image ಹಸಿ ತರಕಾರಿಗಳು, ಕಾಳು ಬೇಳೆಗಳು ಅರೋಗ್ಯಕ್ಕೆ ತುಂಬಾ ಹಿತಕರವಾಗಿದೆ.…

5 days ago

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?. AI Image ತುಂಬೆ ಗಿಡಗಳು ಗಾತ್ರದಲ್ಲಿ ಅತಿ ಚಿಕ್ಕದಾಗಿದ್ದು, ಪರಿಸರದಲ್ಲಿ…

6 days ago

This website uses cookies.