
ಬೇಸಿಗೆಯ ಬಿಸಿಲ ನಡುವೆ ಮಾರುಕಟ್ಟೆಯಲ್ಲಿ ಹಸಿರಾಗಿ ಕಾಣುವ ಹುಳಿ ಹುಳಿ ಮಾವಿನಕಾಯಿಯನ್ನು ಕಂಡೊಡನೆ ಕಣ್ಣು ಅರಳಿ, ಬಾಯಲ್ಲಿ ನೀರು ಬರುವುದು ಸಹಜ. ಸುಮ್ಮನೆ ಮಾವಿನ ಕಾಯನ್ನು ಕತ್ತರಿಸಿ, ಮೇಲೆ ಉಪ್ಪು, ಖಾರ ಹಾಕಿ ತಿಂದರೆ…ಆಹಾ!!! ಸ್ವರ್ಗ ರುಚಿ. ಇಂತಹ ಮಾವಿನ ಕಾಯಿಯ ಕೆಲವು ಖಾದ್ಯಗಳ ತಯಾರಿಕಾ ವಿಧಾನವನ್ನು ಈ ಲೇಖನದಲ್ಲಿ ವಿಶ್ಲೇಶಿಸೋಣ.
ಮಾವಿನ ಕಾಯಿಯ ತಂಬುಳಿ
ಬೇಕಾಗುವ ಪದಾರ್ಥಗಳು
- ಮಾವಿನ ಕಾಯಿ 1
- ಹಸಿ ಮೆಣಸು 2
- ತೆಂಗಿನ ತುರಿ 1/2 ಕಪ್
- ಜೀರಿಗೆ 1/2 ಚಮಚ
- ಸಾಸಿವೆ 1/2 ಚಮಚ
- ಉಪ್ಪು
- ಇಂಗು
- ಕರಿಬೇವು
- ಎಣ್ಣೆ
ಮಾಡುವ ವಿಧಾನ
ಮಾವಿನ ಕಾಯಿಯನ್ನು ಚೆನ್ನಾಗಿ ತೊಳೆದು, ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ಮಾವಿನಕಾಯಿಯ ಹೋಳುಗಳು, ಹಸಿಮೆಣಸು ಹಾಗೂ ತೆಂಗಿನ ತುರಿಯನ್ನು ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣಕ್ಕೆ ನೀರು ಹಾಕಿ ತೆಳು ಮಾಡಿ ತಂಬುಳಿ ಹದಕ್ಕೆ ತರಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು. ಕೊನೆಯಲ್ಲಿ ಎಣ್ಣೆಯ ಜೊತೆಗೆ ಸಾಸಿವೆ, ಜೀರಿಗೆ, ಇಂಗು, ಮತ್ತು ಕರಿಬೇವು ಹಾಕಿ ಒಗ್ಗರಣೆ ಕೊಡಬೇಕು. ಅಲ್ಲಿಗೆ ರುಚಿಯಾದ ಮಾವಿನ ಕಾಯಿ ತಂಬುಳಿ ಸವಿಯಲು ಸಿದ್ದವಾಗುತ್ತದೆ.
ಮಾವಿನಕಾಯಿ ಸಾರು
ಬೇಕಾಗುವ ಪದಾರ್ಥಗಳು
- ಮಾವಿನಕಾಯಿ 2
- ಒಣಮೆಣಸಿನ ಕಾಯಿ 4
- ಈರುಳ್ಳಿ 1
- ಹುಣಸೆ ಹಣ್ಣು – (ಮಾವಿನ ಕಾಯಿಯ ಹುಳಿ ಮೇಲೆ ಅಧರಿತವಾಗುತ್ತದೆ) ಸ್ವಲ್ಪ
- ತೆಂಗಿನ ತುರಿ 1 ಕಪ್
- ಜೀರಿಗೆ 1/4 ಚಮಚ
- ಬೆಲ್ಲ 1/2 ಚಮಚ
- ಅರಿಶಿಣ ಪುಡಿ 1/4 ಚಮಚ
- ಎಣ್ಣೆ
- ಉಪ್ಪು
ಮಾಡುವ ವಿಧಾನ
ಮಾವಿನ ಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ಮೇಲೆ ಹೇಳಿದ ಪ್ರಮಾಣದಲ್ಲಿ ಮೆಣಸಿನ ಕಾಯಿ, ಜೀರಿಗೆ, ತೆಂಗಿನ ಕಾಯಿ ತುರಿ, ಹುಣಸೆ ಹಣ್ಣು ಮತ್ತು ಅರಿಶಿಣ ಹಾಗಿ ನುಣ್ಣಗೆ ರುಬ್ಬಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ, ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿಯಬೇಕು. ಅದಕ್ಕೆ ಮಾವಿನ ಹೋಳುಗಳನ್ನು ಹಾಕಿ, ರುಬ್ಬಿದ ಮಿಶ್ರಣವನ್ನು ಸೇರಿಸಬೇಕು. ನಂತರ ಸ್ವಲ್ಪ ನೀರನ್ನು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಬೇಕು. ಅಲ್ಲಿಗೆ ಊಟದಲ್ಲಿ ಅನ್ನದ ಜೊತೆಗೆ ಹಿತವಾಗುವ ರುಚಿಯಾದ ಮಾವಿನ ಕಾಯಿ ಸಾರು ಸಿದ್ದವಾಗುತ್ತದೆ.
ಮಾವಿನಕಾಯಿ ರೈಸ್ ಬಾತ್
ಬೇಕಾಗುವ ಪದಾರ್ಥಗಳು
- ಬಾಸ್ಮತಿ ಅಕ್ಕಿ 1 ಕಪ್
- ಮಾವಿನ ಕಾಯಿ ತುಂಡುಗಳು 1 ಕಪ್
- ತುಪ್ಪ 4 ಚಮಚ
- ಹಾಲು 1 ಕಪ್
- ನೀರು 1 ಕಪ್
- ಗಟ್ಟಿ ಮೊಸರು 1/2 ಕಪ್
- ಹಸಿ ಮೆಣಸು 2
- ಶುಂಠಿ ತುರಿ 1 ಚಮಚ
- ಕ್ಯಾರೆಟ್ 1
- ಸಾಸಿವೆ
- ಕರಿಬೇವು
- ಉಪ್ಪು
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಹಾಲು ಮತ್ತು ನೀರನ್ನು ಹಾಕಿ, ಜೊತೆಗೆ ಅಕ್ಕಿ ಮತ್ತು ಮಾವಿನಕಾಯಿ ಹೋಳುಗಳನ್ನು ಹಾಕಿ, ರುಚಿಗೆ ಉಪ್ಪನ್ನು ಸೇರಿಸಿ ಬೇಯಿಸಬೇಕು. ಬಾತ್ ಗಳಿಗೆ ಅನ್ನ ಸ್ವಲ್ಪ ಗಟ್ಟಿಯಾಗಿದ್ದರೆ ಒಳ್ಳೆಯದಾಗುತ್ತದೆ. ಅನ್ನವು ಮೆತ್ತಗಾದರೆ ಕಲಿಸುವಾಗ ಅದು ಪಾಯಸದ ತರಹ ಆಗುತ್ತದೆ. ಆದ್ದರಿಂದ ಸ್ವಲ್ಪ ಅನ್ನವನ್ನು ಗಟ್ಟಿಯಾಗಿ ಉದುರು ಉದುರಾಗಿ ತಯಾರಿಸಬೇಕು. ಇನ್ನೊಂದು ಪಾತ್ರೆಯಲ್ಲಿ ತುಪ್ಪ ಹಾಕಿ ಸಾಸಿವೆ, ಕರಿಬೇವಿನ ಸೊಪ್ಪು ಹಾಕಬೇಕು. ನಂತರ ತುರಿದ ಶುಂಠಿ ಹಾಗೂ ಸಣ್ಣಗೆ ಹೆಚ್ಚಿಕೊಂಡ ಹಸಿಮೆಣಸನ್ನು ಹಾಕಬೇಕು. ನಂತರ ಮೊಸರನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ನಂತರ ಬೇಯಿಸದ ಅನ್ನವನ್ನು ಸೇರಿಸಿ ಚೆನ್ನಾಗಿ ಕಲಸಬೇಕು. ಮೇಲೆ ಕ್ಯಾರೆಟ್ ಅನ್ನು ತುರಿದು ಹಾಕಿ ಅಲಂಕರಿಸಿದರೆ ರುಚಿಯಾದ ಮಾವಿನಕಾಯಿ ರೈಸ್ ಬಾತ್ ಸವಿಯಲು ಸಿದ್ದವಾಗುತ್ತದೆ.
ಮಾವಿನಕಾಯಿ ಮೊಸರು ಚಟ್ನಿ
ಬೇಕಾಗುವ ಪದಾರ್ಥಗಳು
- ಮಾವಿನಕಾಯಿ 1
- ಹಸಿಮೆಣಸು 3
- ಕೊಬ್ಬರಿ ತುರಿ 1/2 ಕಪ್
- ಬೆಳ್ಳುಳ್ಳಿ 3 ಎಸಳು
- ಈರುಳ್ಳಿ 1
- ಗಟ್ಟಿ ಮೊಸರು 1 ಕಪ್
- ಉದ್ದಿನಬೇಳೆ 1/2 ಚಮಚ
- ಸಾಸಿವೆ 1/2 ಚಮಚ
- ಕರಿಬೇವು
- ಎಣ್ಣೆ
- ಉಪ್ಪು
ಮಾಡುವ ವಿಧಾನ
ಮಾವಿನ ಕಾಯಿಯನ್ನು ತುಂಡಾಗಿ ಕತ್ತರಿಸಿ ಮಿಕ್ಸಿಯಲ್ಲಿ ಉಪ್ಪಿನ ಜೊತೆ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಮೊಸರಿಗೆ ಮಾವಿನಕಾಯಿ ಮಿಶ್ರಣವನ್ನು ಸೇರಿಸಬೇಕು. ಇನ್ನೊಂದೆಡೆ ಕೊಬ್ಬರಿ ತುರಿ, ಬೆಳ್ಳುಳ್ಳಿ, ಈರುಳ್ಳಿ ಹಾಗೂ ಹಸಿಮೆಣಸಿನಕಾಯನ್ನು ಕೂಡ ನುಣ್ಣಗೆ ರುಬ್ಬಿಕೊಂಡು, ಮೊಸರು ಹಾಗೂ ಮಾವಿನಕಾಯಿಯ ಮಿಶ್ರಣಕ್ಕೆ ಸೇರಿಸಬೇಕು. ಕೊನೆಯಲ್ಲಿ ಎಣ್ಣೆಯಲ್ಲಿ ಸಾಸಿವೆ, ಉದ್ದಿನಬೇಳೆ ಹಾಗೂ ಕರಿಬೇವಿನ ಒಗ್ಗರಣೆ ಕೊಟ್ಟರೆ ಮಾವಿನಕಾಯಿ ಮೊಸರು ಚಟ್ನಿ ಸವಿಯಲು ಸಿದ್ದವಾಗುತ್ತದೆ.
ಮಾವಿನಕಾಯಿ ಶರಬತ್ತು
ಬೇಕಾಗುವ ಪದಾರ್ಥಗಳು
- ಮಾವಿನಕಾಯಿ 2
- ಬೆಲ್ಲ 2 ಚಮಚ ( ಮಾವಿನ ಕಾಯಿಯ ಹುಳಿಗೆ ಅನುಸಾರವಾಗಿ)
- ಏಲಕ್ಕಿ ಪುಡಿ
ಮಾಡುವ ವಿಧಾನ
ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಬೇಯಿಸಿಕೊಳ್ಳಬೇಕು. ನಂತರ ಮಾವಿನ ಹಣ್ಣನ್ನು ಕುದಿಸಿದ ನೀರಲ್ಲಿಯೇ ಕಿವುಚಿ, ಅದಕ್ಕೆ ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯಬೇಕು. ಅಲ್ಲಿಗೆ ಮಾವಿನಕಾಯಿ ಶರಬತ್ತು ಸಿದ್ದವಾಗುತ್ತದೆ.
ಎಲ್ಲರ ಫೇವರಿಟ್ ಮಾವಿನಕಾಯಿ ಅಪ್ಪೆಹುಳಿ
ಬೇಕಾಗುವ ಪದಾರ್ಥಗಳು
- ಮಾವಿನ ಕಾಯಿ 1
- ಹಸಿ ಮೆಣಸಿನಕಾಯಿ 2
- ಹಿಂಗು
- ಒಣ ಮೆಣಸಿನಕಾಯಿ 1
- ಸಾಸಿವೆ
- ಕರಿಬೇವು
- ಉಪ್ಪು
- ಬೆಲ್ಲ 1/4 ಚಮಚ
ಮಾಡುವ ವಿಧಾನ
ಮೊದಲಿಗೆ ಸ್ವಲ್ಪ ನೀರಿನೊಂದಿಗೆ ಮಾವಿನಕಾಯಿ, ಹಸಿಮೆಣಸನ್ನು ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ಬೇಯಿಸಿದ ನೀರಿನೊಂದಿಗೆ ಮಾವಿನಕಾಯಿ ಹಾಗೂ ಹಸಿಮೆಣಸನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಒಂದು ಪಾತ್ರೆಗೆ ರುಬ್ಬಿದ ಮಿಶ್ರಣವನ್ನು ಸೋಸಿಕೊಂಡು, ಬೇಕಾದಷ್ಟು ನೀರನ್ನು ಸೇರಿಸಬೇಕು. ನಂತರ ಹುಳಿಗೆ ಅನುಸಾರವಾಗಿ ಉಪ್ಪು ಮತ್ತು ಸ್ವಲ್ಪ ಬೆಲ್ಲವನ್ನು ಸೇರಿಸಬೇಕು. ಕೊನೆಯಲ್ಲಿ ಎಣ್ಣೆಯೊಂದಿಗೆ ಸಾಸಿವೆ, ಕರಿಬೇವು, ಒಣಮೆಣಸಿನಕಾಯಿ ಸ್ವಲ್ಪ ಹಿಂಗನ್ನು ಸೇರಿಸಿ ಒಗ್ಗರಣೆ ಕೊಡಬೇಕು. ಅಲ್ಲಿಗೆ ರುಚಿಕರವಾದ ಮಾವಿನಕಾಯಿ ಅಪ್ಪೆಹುಳಿ ಸಿದ್ದವಾಗುತ್ತದೆ.
ಮಾವಿನ ಕಾಯಿಯ ಆರೋಗ್ಯಕರ ಉಪಯೋಗಗಳು
- ದೇಹಕ್ಕೆ ಉಷ್ಣವಾಗಿ ಬರುವ ಕೆಮ್ಮನ್ನು ಮಾವಿನಕಾಯಿ ನಿಯಂತ್ರಿಸುತ್ತದೆ.
- ಯಕೃತ್ತಿನ ಉತ್ತಮ ಕಾರ್ಯನಿರ್ವಾಹಣೆಗೆ ಮಾವಿನಕಾಯಿ ಸಹಾಯಕವಾಗಿದೆ.
- ಸಂಪೂರ್ಣ ನರಮಂಡಲದ ಆರೋಗ್ಯಕ್ಕೆ ಉತ್ತಮವಾಗಿದೆ.
- ಮೂತ್ರ ಸಂಬಂಧಿ ಸಮಸ್ಯೆಗಳು ಹಾಗೂ ಮೂತ್ರಪಿಂಡದ ಅರೋಗ್ಯಕ್ಕೂ ಉತ್ತಮವಾಗಿದೆ.
- ಕಣ್ಣಿನ ದೃಷ್ಠಿಯ ಆಯುಷ್ಯವನ್ನು ವೃದ್ಧಿಸುತ್ತದೆ.
ಮಾವಿನ ಕಾಯಿಯ ಇನ್ನೂ ಅನೇಕ ಖಾದ್ಯಗಳು ಅತಿ ಜನಪ್ರಿಯವಾಗಿದೆ. ಈ ಬೇಸಿಗೆಯಲ್ಲಿ ಉಪ್ಪಿನಕಾಯಿ ಹಾಕುವುದು ಸರ್ವೇ ಸಾಮಾನ್ಯ. ಅದರಲ್ಲಿ ಮಾವಿನಕಾಯಿ ಉಪ್ಪಿನಕಾಯಿ ಎಂದರೆ ಬಾಯಲ್ಲಿ ನೀರು ಬರುವುದು ಸಹಜ. ಇನ್ನೂ ಮುಂದಿನ ಲೇಖನಗಳಲ್ಲಿ ಉಪ್ಪಿನಕಾಯಿ ಬಗೆಗಿನ ರೆಸಿಪಿಗಳನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ. ಇಂದಿನ ಲೇಖನದಲ್ಲಿ ವಿವರಿಸಲಾದ ಮಾವಿನಕಾಯಿ ರೆಸಿಪಿಗಳನ್ನು ಒಮ್ಮೆ ಪ್ರಯತ್ನಿಸಿ ಹಾಗೂ ಉತ್ತಮ ಅರೋಗ್ಯದೊಂದಿಗೆ ಉತ್ತಮ ರುಚಿಯನ್ನು ಸವಿಯಿರಿ ಎಂಬುದೊಂದು ಆಶಯ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.