ಬೆಲ್ಲ: ಆರೋಗ್ಯಕರ ಮನೆಮದ್ದುಗಳು ಮತ್ತು ಪ್ರಯೋಜನಗಳು (Best Health Benefits of Jaggery)

Spread the love

ಬೆಲ್ಲ: ಆರೋಗ್ಯಕರ ಮನೆಮದ್ದುಗಳು ಮತ್ತು ಪ್ರಯೋಜನಗಳು (Best Health Benefits of Jaggery)
ಬೆಲ್ಲ: ಆರೋಗ್ಯಕರ ಮನೆಮದ್ದುಗಳು ಮತ್ತು ಪ್ರಯೋಜನಗಳು (Best Health Benefits of Jaggery)

ಬೇವಿನೊಡನೆ ಬೆಲ್ಲವನ್ನು ಇಟ್ಟು ಪೂಜೆ ಮಾಡಿ ಹೊಸ ವರ್ಷವನ್ನು ಪ್ರಾರಂಭಿಸುವ ಸಂಸ್ಕೃತಿ ನಮ್ಮದು. ಸಿಹಿಯ ಕಣಜವಾಗಿರುವ ಬೆಲ್ಲವು ಅನೇಕ ಶುಭಕಾರ್ಯಗಳಲ್ಲಿ ಉಪಯುಕ್ತವಾಗುತ್ತದೆ. ಹಾಗೆಯೇ ದೇವರಿಗೆ ನೈವೇದ್ಯವಾಗಿಡುವ ಮಹಾಪ್ರಸಾದಕ್ಕೂ ಬೆಲ್ಲವೇ ಶ್ರೇಷ್ಠವಾಗಿದೆ. ಒಳ್ಳೆಯ ಕೆಲಸಕ್ಕೆ ಹೊರಡುವ ಸಮಯಕ್ಕೆ ಬೆಲ್ಲವನ್ನು ತಿಂದು ಹೋಗುವ ರೂಢಿಯೂ ಕೂಡ ಇದೆ. ಪ್ರಾಚೀನ ಕಾಲದಲ್ಲಿ ಮನೆಗೆ ಅಥಿತಿಗಳು ಬಂದಾಕ್ಷಣ ಕಾಲು ತೊಳೆಯಲು ನೀರನ್ನು ನೀಡಿ, ಒಳ ಬರಮಾಡಿಕೊಂಡು ಕುಡಿಯಲು ನೀರು ಹಾಗೂ ತುಂಡು ಬೆಲ್ಲವನ್ನು ನೀಡುವುದು ಚಾಲ್ತಿಯಲ್ಲಿತ್ತು. ಇದು ಅಥಿತಿಗಳ ಆಯಾಸವನ್ನು ದೂರಮಾಡಿಕೊಳ್ಳಲು ಉತ್ತಮವಾಗಿರುತಿತ್ತು. ಇಂತಹ ಬೆಲ್ಲವು ನಮಗೆ ಪ್ರಕೃತಿಯಿಂದ ನೇರವಾಗಿ ಸಿಗುವುದಿಲ್ಲ.  ಬದಲಾಗಿ ಬೇರೆ ಪ್ರಕೃತಿದತ್ತ ವಸ್ತುಗಳ ಸಹಾಯದಿಂದ ನಾವು ಬೆಲ್ಲವನ್ನು ಸಿದ್ದಪಡಿಸುತ್ತೇವೆ. ಮಹಾರಾಷ್ಟ್ರ ರಾಜ್ಯವು ಅತಿ ಹೆಚ್ಚು ಬೆಲ್ಲವನ್ನು ಉತ್ಪಾದಿಸುವ ರಾಜ್ಯವಾಗಿದೆ. ಇನ್ನೂ ಬೆಲ್ಲವನ್ನು ಕರ್ನಾಟಕದಲ್ಲಿ ಹೆಚ್ಚಾಗಿ ಕಬ್ಬಿನ ರಸವನ್ನು ಹಿಂಡಿ, ತಯಾರಿಸುತ್ತಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ನಾವು ಆಲೆಮನೆ ಹಬ್ಬವನ್ನು ನೋಡಬಹುದು. ಆಲೆಮನೆ ಹಬ್ಬವೆಂದರೆ ದೊಡ್ಡ ಪ್ರಮಾಣದಲ್ಲಿ ಕಬ್ಬುಗಳನ್ನು ಸೇರಿಸಿ, ಎತ್ತಿನ ಸಹಾಯದಿಂದ ಗಾಣವನ್ನು ತಿರುಗಿಸಿ, ಕಬ್ಬಿನ ಹಾಲನ್ನು ಹಿಂಡುವುದು, ನಂತರ ಕಾಯಿಸಿ ಬೆಲ್ಲವನ್ನು ತಯಾರಿಸುತ್ತಾರೆ. ಇದನ್ನು ವೀಕ್ಷಿಸಲು, ಕಬ್ಬಿನ ಹಾಲು ಹಾಗೂ ಬೆಲ್ಲವನ್ನು ಸವಿಯಲು ಅನೇಕ ಜನರು ಕೂಡ ಸೇರುತ್ತಾರೆ. ಹೀಗೆ ಬೆಲ್ಲವನ್ನು ಕಬ್ಬಿನಿಂದ ತಯಾರಿಸುತ್ತಾರೆ. ಬೆಲ್ಲವು ಅನೇಕ ಅರೋಗ್ಯವರ್ಧಕ ಗುಣಗಳನ್ನು ಹೊಂದಿದೆ. ಇಂತಹ ಬೆಲ್ಲದ ಬಗೆಗಿನ ಅನೇಕ ವೈಜ್ಞಾನಿಕ ಮಾಹಿತಿಗಳು ಹಾಗೂ ಅರೋಗ್ಯವರ್ಧಕ ಗುಣಗಳ ಬಗ್ಗೆ ಇಂದಿನ ಲೇಖನದಲ್ಲಿ ವಿಶ್ಲೇಷಿಸೋಣ.

ಬೆಲ್ಲದ ವೈಜ್ಞಾನಿಕ ವಿಚಾರಗಳು

ಆಂಗ್ಲ ಹೆಸರು – ಜಾಗ್ಗರಿ ( Jaggary )

ಬೆಲ್ಲಕ್ಕೆ ವೈಜ್ಞಾನಿಕ ಹೆಸರು ನೀಡಲಾಗುವುದಿಲ್ಲ, ಏಕೆಂದರೆ ಬೆಲ್ಲವು ಮನುಷ್ಯನು ತಯಾರಿಸುವ ಒಂದು ಆಹಾರ ಪದಾರ್ಥವಾಗಿದೆ. ಬೆಲ್ಲದಲ್ಲಿ ಹೇರಳವಾದ ಕಬ್ಬಿಣ, ಪ್ರೊಟೀನ್, ಪೊಟ್ಯಾಸಿಯಂ, ಮ್ಯಾಗ್ನಿಸಿಯಂ, ಸೋಡಿಯಂ ಹಾಗೂ ಕಾರ್ಬೋಹೈಡ್ರೆಟ್ಸ್ ಗಳಿವೆ.

ಬೆಲ್ಲವನ್ನು ಸೇವಿಸುವುದರಿಂದ ದೇಹದಲ್ಲಿ ತೇಜಸ್ಸು ಹೆಚ್ಚಾಗುತ್ತದೆ ಹಾಗೂ ಅರೋಗ್ಯವು ವೃದ್ಧಿಸುತ್ತದೆ. ಆಯಾಸ, ಸುಸ್ತು, ಬಳಲಿಕೆಗಯ ನಿವಾರಣೆಗೆ ಬೆಲ್ಲದ ಸೇವನೆ ಅತ್ಯುತ್ತಮವಾಗಿದೆ. ಹಳೆ ಬೆಲ್ಲದ ಸೇವನೆಯು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಹಳೆ ಬೆಲ್ಲವೆಂದರೆ ತಯಾರಿಸಿದ ಒಂದು ವರ್ಷದ ಬಳಿಕ ಬಳಸಬಹುದಾದ ಬೆಲ್ಲ. ಇನ್ನೂ ಹೊಸ ಬೆಲ್ಲದ ಸೇವನೆಯು ಸ್ವಲ್ಪ ಕಫದ ಸಮಸ್ಯೆಗಳನ್ನು ವೃದ್ಧಿಸುತ್ತದೆ. ಶಕ್ತಿವರ್ಧಕವಾದ ಬೆಲ್ಲದ ಅನೇಕ ಉಪಯುಕ್ತ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ಈಗ ಅರಿಯೋಣ.

ಬೆಲ್ಲದ ಆರೋಗ್ಯಕರ ಮನೆಮದ್ದುಗಳು

ನೆಗಡಿಯ ನಿವಾರಣೆಗೆ ಉಪಯುಕ್ತವಾಗಿರುವ ಬೆಲ್ಲದ ಮನೆಮದ್ದು

  • ವಿಪರೀತ ನೆಗಡಿಯಾಗಿ ಮೂಗು ಸೋರುತ್ತಿದ್ದರೆ ಬೆಲ್ಲದ ಸಹಾಯದಿಂದ ಸೋರುತ್ತಿರುವ ಮೂಗು ಹಾಗೂ ನೆಗಡಿಯನ್ನು ಕಡಿಮೆಗೊಳಿಸಬಹುದು. ಅರ್ಧ ಲೋಟ ಮೊಸರಿಗೆ ಒಂದು ಚಮಚ ಬೆಲ್ಲದ ಪುಡಿಯನ್ನು ಹಾಗೂ ಚಿಟಿಕೆ ಕರಿಮೆಣಸಿನ ಪುಡಿಯನ್ನು ಸೇರಿಸಿ ಕುಡಿಯಬೇಕು. ಇದು ಅತ್ಯಂತ ಪರಿಣಾಮಕಾರಿಯಾದಂತಹ ಮನೆಮದ್ದಾಗಿದೆ.

ತಲೆನೋವಿನ ಸಮಸ್ಯೆಗೆ ಉಪಯುಕ್ತವಾಗಿರುವ ಬೆಲ್ಲದ ಮನೆಮದ್ದುಗಳು

  • ತಲೆನೋವಿನ ನಿವಾರಣೆಗೆ ಉತ್ತಮ ಮದ್ದು ಎಂದರೆ ಒಣಶುಂಠಿ ಪುಡಿಗೆ ಬೆಲ್ಲದ ಪುಡಿಯನ್ನು ಬೆರೆಸಿ ನಶ್ಯದ ತರಹ ಏರಿಸಿದರೆ ತಲೆನೋವು ಕಡಿಮೆಯಾಗುತ್ತದೆ.
  • ಬೆಳಿಗ್ಗೆ ಎದ್ದಾಕ್ಷಣ ಬರುವ ತಲೆನೋವಿನ ನಿವಾರಣೆಗೆ ಒಂದು ಉತ್ತಮ ಪರಿಹಾರವೆಂದರೆ ಒಂದು ಚಮಚ ಬೆಲ್ಲ ಹಾಗೂ ಅರ್ಧ ಚಮಚ ಕರಿ ಎಳ್ಳನ್ನು ಹಾಲಿನಲ್ಲಿ ಅರೆಯಬೇಕು. ನಂತರ ಸ್ವಲ್ಪ ಬಿಸಿ ಮಾಡಿ ಹಣೆಗೆ ಲೇಪಿಸಬೇಕು. ಇದರಿಂದ ತಲೆನೋವು ಕಡಿಮೆಯಾಗುತ್ತದೆ. ಮುಂಜಾನೆಯ ತಲೆನೋವಿಗೆ ಇದು ಉತ್ತಮ ಪರಿಹಾರವಾಗಿದೆ.

(->ತಲೆ ನೋವಿನ ಉತ್ತಮ ಪರಿಹಾರಗಳ ಬಗೆಗಿನ ನಮ್ಮ ಹಿಂದಿನ ಲೇಖನಗಳನ್ನು ಒಮ್ಮೆ ಓದಿರಿ)

ಹೆಣ್ಣು ಮಕ್ಕಳ ಮುಟ್ಟಿನ ಸಮಯದಲ್ಲಿನ ಹೊಟ್ಟೆ ನೋವು ನಿವಾರಣೆಗೆ ಬೆಲ್ಲದ ಸೇವನೆ ಉಪಯುಕ್ತವಾಗಿದೆ.

  • ಮುಟ್ಟಿನ ಸಮಯದಲ್ಲಿ ಬರುವ ಹೊಟ್ಟೆ ನೋವು ಬಹಳ ತೊಂದರೆಯನ್ನು ಉಂಟುಮಾಡುತ್ತದೆ. ಈ ಹೊಟ್ಟೆ ನೋವನ್ನು ಕಡಿಮೆ ಮಾಡಿಸಲು, ನೋವು ಶುರುವಾದ ಸಮಯದಲ್ಲಿ ಒಂದು ತುಂಡು ಬೆಲ್ಲವನ್ನು ತಿನ್ನಬೇಕು. ಇದು ನೋವನ್ನು ಕಡಿಮೆ ಮಾಡಲು ಉಪಯುಕ್ತವಾಗಿದೆ.

ಮೂಳೆಗಳ ಆರೋಗ್ಯಕ್ಕೆ ಬೆಲ್ಲದ ಸೇವನೆ ಉತ್ತಮವಾಗಿದೆ.

  • ಮೂಳೆಗಳ ಉತ್ತಮ ಆರೋಗ್ಯ ಹಾಗೂ ಸಂಧಿವಾತ ಸಮಸ್ಯೆಗಳಿಗೆ ಉತ್ತಮ ಪರಿಹಾರವನ್ನು ಬೆಲ್ಲವು ನೀಡುತ್ತದೆ. ಶುಂಠಿಯ ಜೊತೆ ಬೆಲ್ಲವನ್ನು ಸೇರಿಸಿ, ತಿನ್ನುವುದರಿಂದ ಸಂಧಿವಾತದ ಸಮಸ್ಯೆಗಳಿಗೆ ಉತ್ತಮ ಪರಿಹಾರಗಳು ಸಿಗುತ್ತದೆ.
  • ಸಂಧಿವಾತದ ಸಮಸ್ಯೆಗಳು ಇದ್ದಾಗ ಸ್ವಲ್ಪ ಸುಣ್ಣ, ಸ್ವಲ್ಪ ಬೆಲ್ಲ ಹಾಗೂ ಸ್ವಲ್ಪ ಶುಂಠಿ, ಇವು ಮೂರನ್ನು ಅರೆದು ನೋವಿದ್ದಲ್ಲಿ ಲೇಪಿಸಬೇಕು. ಆಗ ನೋವು ಕ್ರಮೇಣ ಕಡಿಮೆಯಾಗುತ್ತದೆ.

ದೇಹದಲ್ಲಿನ ತೂಕ ಇಳಿಸಲು ಕೂಡ ಬೆಲ್ಲ ಉತ್ತಮ ಆಹಾರವಾಗಿದೆ.

  • ತೂಕ ಇಳಿಸಲು ಸಿಹಿ ಹೇಗೆ ಕಾರಣವಾಗಬಹುದು ಎಂದು ಆಲೋಚಿಸುತ್ತಿದ್ದೀರಾ? ಕೆಲವೊಮ್ಮೆ ನೀರಿನ ಅಂಶ ಹೆಚ್ಚಾಗಿ, ದೇಹದ ತೂಕವು ಜಾಸ್ತಿಯಾಗುತ್ತದೆ. ಈ ಸಮಯದಲ್ಲಿ ಬೆಲ್ಲವನ್ನು ಸೇವಿಸುವುದರಿಂದ, ದೇಹದಲ್ಲಿನ ನೀರಿನ ಅಂಶವನ್ನು ಬೆಲ್ಲವು ಕಡಿಮೆ ಮಾಡಿ, ತೂಕವನ್ನು ಇಳಿಸುತ್ತದೆ. ಬೆಲ್ಲದಲ್ಲಿ ಅಧಿಕ ಪ್ರಮಾಣದಲ್ಲಿ ಪೊಟ್ಯಾಸಿಯಂ ಅಂಶವಿದ್ದು, ಈ ಕಾರಣಕ್ಕೆ ತೂಕ ಇಳಿಕೆ ಸಾಧ್ಯವಾಗುತ್ತದೆ.

ರಕ್ತದ ಅರೋಗ್ಯಕ್ಕೂ ಕೂಡ ಬೆಲ್ಲ ಉತ್ತಮವಾಗಿದೆ.

  • ಬೆಲ್ಲವು ರಕ್ತವನ್ನು ಶುದ್ಧಗೊಳಿಸುವ ಕಾರ್ಯವನ್ನು ಮಾಡುತ್ತದೆ. ಪ್ರತಿನಿತ್ಯ ನಮ್ಮ ಆಹಾರದಲ್ಲಿ ಸ್ವಲ್ಪ ಬೆಲ್ಲವನ್ನು ಬಳಸುವುದರಿಂದ ಅಥವಾ ಒಂದು ಸಣ್ಣ ತುಂಡು ಬೆಲ್ಲವನ್ನು ತಿಂದು ನೀರನ್ನು ಕುಡಿಯುವುದರಿಂದ, ಬೆಲ್ಲವು ನಮ್ಮ ದೇಹವನ್ನು ಸೇರಿ, ರಕ್ತವನ್ನು ಶುದ್ಧಿಗೊಳಿಸುತ್ತದೆ. ಇದು ಅರೋಗ್ಯವರ್ಧಕವಾಗಿದೆ.
  • ಇನ್ನೂ ಕೆಲವರಲ್ಲಿ ರಕ್ತಹೀನತೆಯ ಸಮಸ್ಯೆಗಳು ಕಂಡುಬರುತ್ತದೆ. ರಕ್ತ ಹೀನತೆಯ ಸಮಸ್ಯೆಗಳಿದ್ದಾಗ ನಿತ್ಯ ಬೆಲ್ಲವನ್ನು ಸೇರಿಸಿ, ನೀರನ್ನು ಕುಡಿಯಬೇಕು. ಬೆಲ್ಲದ ಸೇವನೆಯು ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವನ್ನು ವೃದ್ಧಿಸುತ್ತದೆ. ಹಾಗೆಯೇ ರಕ್ತ ಹೀನತೆಯ ಸಮಸ್ಯೆಯು ಕೂಡ ನಿವಾರಣೆಯಾಗುತ್ತದೆ.

ಶ್ವಾಸಕೋಶ ಹಾಗೂ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಬೆಲ್ಲದ ಉತ್ತಮ ಪರಿಹಾರಗಳು.

  • ಬೆಲ್ಲವು ದೇಹದ ಎಲ್ಲಾ ಭಾಗಗಳನ್ನು ಶುದ್ಧಿಗೊಳಿಸುವ ಕೆಲಸವನ್ನು ಉತ್ತಮವಾಗಿ ನಿರ್ವಹಿಸುತ್ತದೆ. ನಗರ ಪ್ರದೇಶದಲ್ಲಿ ವಾಸಿಸುವ ಜನರು, ನಿತ್ಯ ಅಶುದ್ಧ ಗಾಳಿಯಲ್ಲಿ ಉಸಿರಾಡುವ ಜನರು, ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುವ ಕಾರ್ಮಿಕರು, ಪ್ರತಿದಿನ ಒಂದು ತುಂಡು ಬೆಲ್ಲವನ್ನು ತಿಂದು, ಬಿಸಿ ನೀರನ್ನು ಕುಡಿಯಬೇಕು. ಇದು ಶ್ವಾಸಕೋಶದಲ್ಲಿನ ಗಾಳಿಯನ್ನು ಶುದ್ಧಗೊಳಿಸಿ, ಉತ್ತಮ ಅರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಹಾಗೆಯೇ ಬೆಲ್ಲವು ಹೊಟ್ಟೆಗೆ ಸಂಬಂಧಪಟ್ಟ ಮುಖ್ಯ ಅಂಗಾಂಗಳಾದ ಕರುಳು, ಯಕೃತ್ತು ಹಾಗೂ ಅನ್ನನಾಳದ ಶುದ್ಧತೆಯನ್ನು ಕೂಡ ಕಾಪಾಡುತ್ತದೆ. ಒಟ್ಟಿನಲ್ಲಿ ಬೆಲ್ಲದ ಸೇವನೆಯು ಆರೋಗ್ಯಕ್ಕೆ ಅತಿ ಉತ್ತಮವಾಗಿದೆ.

ಅತಿಯಾದ ಜ್ವರ ಬಂದಾಗ ಉಪಯುಕ್ತವಾಗುವ ಬೆಲ್ಲದ ಮದ್ದು.

  • ಅತಿಯಾದ ಜ್ವರ ಬಂದ ಸಮಯದಲ್ಲಿ ಕೂಡ ಬೆಲ್ಲದ ಸೇವನೆಯು ಸಹಾಯಕಾರಿಯಾಗಿದೆ. ಜ್ವರದ ತಾಪ ಹೆಚ್ಚಾದ ಸಮಯದಲ್ಲಿ ಬೆಲ್ಲವನ್ನು ನೀರಿನಲ್ಲಿ ಕರಗಿಸಿ, ಶೋಧಿಸಿಕೊಂಡು ಕುಡಿಯಬೇಕು. ಇದನ್ನು ಒಂದು ದಿನಕ್ಕೆ 7-8 ಬಾರಿ ಕುಡಿಯಬೇಕು. ಇದರಿಂದ ಜ್ವರದ ತಾಪ ಕ್ರಮೇಣ ಕಡಿಮೆಯಾಗಿ, ಜ್ವರದಿಂದ ಬರುವ ಬಾಯಾರಿಕೆಯು ಕೂಡ ಕಡಿಮೆಯಾಗುತ್ತದೆ.

ಮಲಬದ್ಧತೆ ಹಾಗೂ ಬೇಧಿಯ ಸಮಸ್ಯೆಗಳಿಗೆ ಉತ್ತಮವಾಗಿರುವ ಬೆಲ್ಲದ ಪರಿಹಾರಗಳು

  • ಬೆಲ್ಲದ ಸೇವನೆಯು ಮಲಬದ್ಧತೆಯ ನಿವಾರಣೆಗೆ ಅತಿ ಉತ್ತಮವಾಗಿದೆ. ಏಕೆಂದರೆ ಬೆಲ್ಲದಲ್ಲಿ ನಾರಿನ ಅಂಶವಿದ್ದು, ಇದು ಮಲಬದ್ಧತೆಯ ನಿವಾರಣೆಗೆ ಅತಿ ಉತ್ತಮವಾಗಿದೆ. ಒಂದು ತುಂಡು ಬೆಲ್ಲವನ್ನು ತಿಂದು, ನೀರು ಕುಡಿಯುವುದರಿಂದ ಕ್ರಮೇಣವಾಗಿ ಮಲಬದ್ಧತೆಯ ಸಮಸ್ಯೆಗಳು ಕಡಿಮೆಯಾಗುತ್ತದೆ.
  • ಬೇಧಿಯ ಸಮಸ್ಯೆಗೆ ಹಸಿ ಬಿಲ್ವದ ಹಣ್ಣಿನ ತಿರುಳನ್ನು ಪುಡಿಮಾಡಿಕೊಂಡು, ಬೆಲ್ಲದ ಜೊತೆಗೆ ಸೇರಿಸಿ, ಸೇವಿಸಬೇಕು. ಇದು ಭೇದಿ ಸಮಸ್ಯೆಯನ್ನು ಪರಿಹರಿಸುತ್ತದೆ.

ವೀರ್ಯವೃದ್ಧಿ ಹಾಗೂ ಕಟ್ಟು ಮೂತ್ರ ನಿವಾರಣೆಗೂ ಕೂಡ ಬೆಲ್ಲ ಉತ್ತಮವಾಗಿದೆ.

  • ಬೆಟ್ಟದ ನೆಲ್ಲಿಕಾಯಿಯನ್ನು ಜಜ್ಜಿಕೊಂಡು ಬೆಲ್ಲದ ಜೊತೆ ಬೆರೆಸಿ ತಿನ್ನುವುದರಿಂದ ಕಟ್ಟು ಮೂತ್ರ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗೆಯೇ ಪುರುಷರಲ್ಲಿ ವೀರ್ಯವೃದ್ಧಿಗೂ ಬೆಲ್ಲ ಹಾಗೂ ಬೆಟ್ಟದ ನೆಲ್ಲಿಕಾಯಿ ಮಿಶ್ರಣದ ಸೇವನೆ ಅತಿ ಉತ್ತಮವಾಗಿದೆ.

ಬೆಲ್ಲದ ಸೇವನೆಯು ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿ, ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.

  • ಪ್ರತಿನಿತ್ಯ ಬೆಲ್ಲದ ಸೇವನೆಯು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಇದು ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಹಾಗೆಯೇ ದೇಹಕ್ಕೆ ಜಾಸ್ತಿ ಸುಸ್ತು, ಆಯಾಸ ಹಾಗೂ ಬಳಲಿಕೆ ಉಂಟಾದಾಗ ತುಂಡು ಬೆಲ್ಲವನ್ನು ತಿಂದು ನೀರು ಕುಡಿಯುವುದು ಉತ್ತಮವಾಗಿದೆ. ಇದು ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ. ಬೆಲ್ಲದಲ್ಲಿ ಕಾರ್ಬೋಹೈಡ್ರೆಟ್ ಪ್ರಮಾಣವು ಹೇರಳವಾಗಿ ಇರುವುದರಿಂದ ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಮುಳ್ಳು, ಗಾಜು ಹಾಗೂ ಕಲ್ಲುಗಳು ಚುಚ್ಚಿದಾಗ ಬೆಲ್ಲವು ಸಹಾಯಕವಾಗುತ್ತದೆ.

  • ಕಾಲಿಗೆ ಮುಳ್ಳು, ಕಲ್ಲು ಅಥವಾ ಗಾಜು ಚುಚ್ಚಿದಾಗ, ಚುಚ್ಚಿದ ಸ್ಥಳದಲ್ಲಿ ಬೆಲ್ಲವನ್ನು ಕರಗಿಸಿ ಬಿಸಿ ಮಾಡಿ ಹಚ್ಚಬೇಕು. ಇದರಿಂದ ನಮಗೆ ಉಂಟಾದ ನೋವಿನಿಂದ ಮುಕ್ತಿ ಪಡೆಯಬಹುದು.

ಇನ್ನೂ ಅನೇಕ ಸಮಸ್ಯೆಗಳಿಗೆ ಬೆಲ್ಲ ಉಪಯುಕ್ತವಾಗಿದೆ. ಚಿಕ್ಕ ಮಕ್ಕಳಿಗೆ ದೋಸೆ, ಇಡ್ಲಿಯ ಜೊತೆ ಜೋನಿಬೆಲ್ಲವನ್ನು ನೀಡುವುದು ಉತ್ತಮವಾಗಿದೆ. ಇದು ಮಕ್ಕಳ ಆರೋಗ್ಯಕ್ಕೆ ಉಪಯುಕ್ತವಾಗಿದೆ. ಇಂದಿನ ದಿನದಲ್ಲಿ ಸಿಗುವ ಈ ರೆಡಿಮೇಡ್ ಸೋಸ್ ಗಳ ಬಳಕೆಯ ಬದಲು ಬೆಲ್ಲ, ಜೇನುತುಪ್ಪದ ಉಪಯೋಗಗಳನ್ನು ಮಾಡುವುದು ಆರೋಗ್ಯಕ್ಕೆ ಒಳ್ಳೆಯದಾಗಿರುತ್ತದೆ. ಇನ್ನೂ ನಾವು ಬೆಲ್ಲವನ್ನು ನಿತ್ಯವೂ ಅಡಿಗೆಯಲ್ಲಿ ಬಳಸುತ್ತೇವೆ. ಬೆಲ್ಲದ ಟೀ, ಬೆಲ್ಲದ ದೋಸೆ, ಬೆಲ್ಲದ ಪಾಯಸ, ಬೆಲ್ಲದ ಸಿಹಿ ತಿಂಡಿಗಳು ಹಾಗೆಯೇ ಇನ್ನೂ ಅನೇಕ ಆಹಾರ ಪದಾರ್ಥಗಳಲ್ಲಿ ಬೆಲ್ಲವನ್ನು ಬಳಸುತ್ತೇವೆ. ಸಕ್ಕರೆಯ ಉಪಯೋಗವನ್ನು ಕಡಿಮೆ ಮಾಡಿ, ಬೆಲ್ಲವನ್ನು ಹೆಚ್ಚಾಗಿ ಬಳಸುವುದು ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಸಕ್ಕರೆ ಖಾಯಿಲೆ ಇರುವವರು ಕೂಡ ಅಪರೂಪಕ್ಕೆ ಬೆಲ್ಲವನ್ನು ಕೊಂಚ ಸ್ವೀಕರಿಸಬಹುದು. ಅಡುಗೆಯಲ್ಲಿ ಸಿಹಿಯ ಸ್ವಾದವನ್ನು ನೀಡುವ ಅಂಶವೇ ಬೆಲ್ಲವಾಗಿರುತ್ತದೆ. ಇಂತಹ ಬೆಲ್ಲದ ರುಚಿಯನ್ನು ನಾವೆಲ್ಲರೂ ದಿನನಿತ್ಯ ಸವಿಯುತ್ತೇವೆ, ಆದರೆ ಅದರ ಪ್ರಯೋಜನಗಳ ಅರಿವು ನಮಗಿರಲಿಲ್ಲ. ಇಂದಿನ ಲೇಖನದಲ್ಲಿ ಬೆಲ್ಲದ ಉತ್ತಮ ಪ್ರಯೋಜನಗಳ ಬಗ್ಗೆ ತಿಳಿದಿದ್ದೇವೆ, ಬೆಲ್ಲವನ್ನು ನಿಯಮಿತವಾಗಿ ಸೇವಿಸಿ, ಅರೋಗ್ಯಯುತರಾಗಿರೋಣ ಎಂಬುದು ಇಂದಿನ ಲೇಖನದ ಮುಖ್ಯ ಉದ್ದೇಶ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

Leave a Comment

Your email address will not be published. Required fields are marked *

Scroll to Top