
ಬಾಯಿ ಚಪ್ಪರಿಸಿ ಕುಡಿಯುವ ರಸಂ ಎಷ್ಟು ಸೊಗಸು ಅಲ್ಲವೇ..?? ಉಪ್ಪು, ಖಾರ, ಹುಳಿ ಸರಿಯಾಗಿ ಬೆರೆತು ನಾಲಿಗೆ ಮೇಲೆ ನೃತ್ಯ ಮಾಡುವಾಗ ಅದರ ಖುಷಿಯೇ ಬೇರೆ!! ದೇಹಕ್ಕೆ ಸೌಖ್ಯವಿಲ್ಲದ ಸಮಯದಲ್ಲಿ, ನಾಲಿಗೆ ರುಚಿಯನ್ನು ಕಳೆದುಕೊಂಡಾಗ ಅನ್ನದ ಜೊತೆ ರಸಂ ಕಲಸಿ ತಿಂದರೆ ಹೊಟ್ಟೆಗೂ ಉತ್ತಮವಾಗಿ, ನಾಲಿಗೆಗೂ ಹಿತವಾಗಿರುತ್ತದೆ. ಇನ್ನೂ ಇಂದಿನ ಧಿಡಿರ್ ಕಲಿಯುಗದಲ್ಲಿ ರಸಂ ಪುಡಿಗಳ ಪ್ಯಾಕೆಟ್ ಗಳು ಸಿಗುತ್ತದೆ. ಆದರೆ ಮನೆಯಲ್ಲಿ ತಯಾರಿಸಿದ ರುಚಿ ಬರುವುದು ಬಲು ಕಷ್ಟ. ಅದಕ್ಕಾಗಿ ಒಮ್ಮೆ ಮನೆಯಲ್ಲೇ ರಸಂ ಪುಡಿಗಳನ್ನು ತಯಾರಿಸಿ ಹೊಸ ರುಚಿಯನ್ನು ಸವಿಯಬೇಕು. ಅಂತಹ ಕೆಲವು ಶೈಲಿಯ ರಸಂ ಪುಡಿಗಳ ವಿಧಾನವನ್ನು ಈ ಲೇಖನದಲ್ಲಿ ಪ್ರಸ್ತುತಪಡಿಸಲಾಗಿದೆ.
ಉಡುಪಿ ರಸಂ ಪುಡಿ
ಬೇಕಾಗುವ ಪದಾರ್ಥಗಳು
- ಕೊತ್ತಂಬರಿ – 2 ದೊಡ್ಡ ಚಮಚ
- ಜೀರಿಗೆ – 2 ದೊಡ್ಡ ಚಮಚ
- ಮೆಂತ್ಯೆ ಕಾಳು – 1 ಸಣ್ಣ ಚಮಚ
- ಉದ್ದಿನ ಬೇಳೆ – 1 ದೊಡ್ಡ ಚಮಚ
- ಕರಿಬೇವು – ಒಂದು ಮುಷ್ಠಿ
- ಬ್ಯಾಡಗಿ ಮೆಣಸು – 30
- ಇಂಗು
- ತೆಂಗಿನ ಎಣ್ಣೆ
ಮಾಡುವ ವಿಧಾನ
ಬಾಣಲೆಗೆ ತೆಂಗಿನೆಣ್ಣೆ ಹಾಕಿ ಕ್ರಮವಾಗಿ ಕೊತ್ತಂಬರಿ, ಮೆಂತ್ಯೆ, ಜೀರಿಗೆ, ಉದ್ದಿನಬೇಳೆ ಎಲ್ಲವನ್ನು ಪ್ರತ್ಯೇಕವಾಗಿ ಚೆನ್ನಾಗಿ ಹುರಿದುಕೊಳ್ಳಬೇಕು. ಒಣ ಮೆಣಸು ಹಾಗು ಕರಿಬೇವನ್ನು ಎರಡು ಒಟ್ಟಿಗೆ ಚೆನ್ನಾಗಿ ಹುರಿದುಕೊಂಡು ಎಲ್ಲವನ್ನು ಆರಲು ಬಿಡಬೇಕು. ಆರಿದ ನಂತರ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ಜೊತೆಗೆ ಚಿಟಿಕೆ ಹಿಂಗು ಹಾಕಿ ಚೆನ್ನಾಗಿ ಪುಡಿಮಾಡಿಕೊಳ್ಳಬೇಕು. ಅಲ್ಲಿಗೆ ಉಡುಪಿ ರಸಂ ಪುಡಿ ಸಿದ್ಧವಾಗುತ್ತದೆ.
ಟೊಮೆಟೊ ರಸಂ ಪುಡಿ
ಬೇಕಾಗುವ ಪದಾರ್ಥಗಳು
- ಕಡಲೆ ಬೇಳೆ – 2 ಚಮಚ
- ತೊಗರಿಬೇಳೆ – 2 ಚಮಚ
- ಕೊತ್ತಂಬರಿ -2 ಚಮಚ
- ಕರಿಮೆಣಸು – 1 ಚಮಚ
- ಕರಿಬೇವಿನ ಎಲೆ – 20
ಮಾಡುವ ವಿಧಾನ
ಕೊತ್ತಂಬರಿ, ತೊಗರಿಬೇಳೆ, ಕಡಲೆ ಬೇಳೆ, ಕರಿಮೆಣಸು, ಕರಿಬೇವು ಎಲ್ಲವನ್ನು ಹಾಗೆಯೇ ಎಣ್ಣೆ ಬಳಸದೆ ಚೆನ್ನಾಗಿ ಹುರಿದುಕೊಳ್ಳಬೇಕು. ಬಿಸಿ ತಣಿದ ನಂತರ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ಅಲ್ಲಿಗೆ ಟೊಮೆಟೊ ರಸಂ ಪುಡಿ ಸಿದ್ಧವಾಗುತ್ತದೆ.
ಮೈಸೂರು ರಸಂ ಪುಡಿ
ಬೇಕಾಗುವ ಪದಾರ್ಥಗಳು
- ಕೊತ್ತಂಬರಿ – 2 ದೊಡ್ಡ ಚಮಚ
- ಜೀರಿಗೆ – 2 ದೊಡ್ಡ ಚಮಚ
- ಮೆಂತ್ಯೆ ಕಾಳು – 1 ದೊಡ್ಡ ಚಮಚ
- ಕರಿಮೆಣಸು – 1 ಸಣ್ಣ ಚಮಚ
- ಸಾಸಿವೆ – 1 ಸಣ್ಣ ಚಮಚ
- ಕರಿಬೇವು – 1 ಮುಷ್ಠಿ
- ಬ್ಯಾಡಗಿ ಮೆಣಸು – 30
ಮಾಡುವ ವಿಧಾನ
ಕೊತ್ತಂಬರಿ, ಜೀರಿಗೆ ,ಮೆಂತ್ಯೆ, ಸಾಸಿವೆ, ಕರಿಮೆಣಸು, ಬ್ಯಾಡಗಿ ಮೆಣಸು, ಕರಿಬೇವು ಎಲ್ಲವನ್ನು ಹಾಗೆಯೇ ಎಣ್ಣೆ ಬಳಸದೆ ಚೆನ್ನಾಗಿ ಹುರಿದುಕೊಳ್ಳಬೇಕು. ಬಿಸಿ ಆರಿದ ನಂತರ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ಅಲ್ಲಿಗೆ ಮೈಸೂರು ರಸಂ ಪುಡಿ ಸಿದ್ಧವಾಗುತ್ತದೆ.
ಮದ್ರಾಸ್ ರಸಂ ಪುಡಿ
ಬೇಕಾಗುವ ಪದಾರ್ಥಗಳು
- ಕೊತ್ತಂಬರಿ – 1 ದೊಡ್ಡ ಚಮಚ
- ಜೀರಿಗೆ – 2 ದೊಡ್ಡ ಚಮಚ
- ಮೆಂತ್ಯೆ ಕಾಳು – 1 ದೊಡ್ಡ ಚಮಚ
- ತೊಗರಿಬೇಳೆ -1 ದೊಡ್ಡ ಚಮಚ
- ಕರಿಮೆಣಸು – 4 ದೊಡ್ಡ ಚಮಚ
- ಹಿಂಗು
ಮಾಡುವ ವಿಧಾನ
ಕೊತ್ತಂಬರಿ, ಜೀರಿಗೆ ,ಮೆಂತ್ಯೆ, ತೊಗರಿಬೇಳೆ, ಕರಿಮೆಣಸು ಎಲ್ಲವನ್ನು ಹಾಗೆಯೇ ಎಣ್ಣೆ ಬಳಸದೆ ಚೆನ್ನಾಗಿ ಹುರಿದುಕೊಳ್ಳಿ. ಬಿಸಿ ಆರಲು ಬಿಡಬೇಕು. ನಂತರ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ಹಿಂಗನ್ನು ಕೂಡ ಸೇರಿಸಿ ಪುಡಿ ಮಾಡಿಕೊಳ್ಳಬೇಕು. ಅಲ್ಲಿಗೆ ಮದ್ರಾಸ್ ರಸಂ ಪುಡಿ ಸಿದ್ಧವಾಗುತ್ತದೆ.
ವಿವಿಧ ಪ್ರದೇಶದ ರಸಂ ಪುಡಿಗಳನ್ನು ಅತ್ಯಂತ ಸುಲಭ ವಿಧಾನಗಳಲ್ಲಿ ಮಾಡಿ ತೋರಿಸಲಾಗಿದೆ. ಸರಿಯಾಗಿ ಹುರಿದು ಮಾಡಿದ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿ ಇಟ್ಟರೆ ಬಲು ದಿನಗಳ ವರೆಗೆ ಉಪಯೋಗಿಸಬಹುದು. ನಿಮ್ಮ ಮನೆಯಲ್ಲಿ ಮಾಡಿ ವಿವಿಧ ರುಚಿಯ ಆನಂದವನ್ನು ಪಡೆದುಕೊಳ್ಳಿ. ರಸಂ ಪುಡಿಗಳ ವಿಧಾನಗಳು ಬಲು ಸುಲಭವಾಗಿದ್ದು, ಒಂದು ವಿಭಿನ್ನ ರುಚಿಯನ್ನು ಸೃಷ್ಟಿಸುತ್ತದೆ. ನಾಲಿಗೆ ಚಪ್ಪರಿಸುವ ರಸಂಗಳು ಕೆಲವೊಮ್ಮೆ ಉತ್ತಮ ಸೂಪ್ ನ ರುಚಿಯನ್ನು ಸಹ ನೀಡುತ್ತದೆ. ಇಂತಹ ರಸಂಗಳು ಕುಡಿಯಲು ಅಷ್ಟೇ ಅಲ್ಲದೇ ಅನ್ನದ ಜೊತೆಗೂ ಉತ್ತಮ ಜೋಡಿಯಾಗುತ್ತದೆ. ಇಂದಿನ ಲೇಖನದಲ್ಲಿ ಕೆಲವು ರಸಂ ಪುಡಿಗಳ ಬಗೆಗಿನ ವಿಚಾರಗಳನ್ನು ತಿಳಿಸಿದ್ದು, ಅತ್ಯಂತ ಸುಲಭ ರೀತಿಯಲ್ಲಿ ವಿಶ್ಲೇಶಿಸಲಾಗಿದೆ.
ಅಂತೆಯೇ ಸಾಂಬಾರು ಪುಡಿಗಳ ತಯಾರಿಕಾ ವಿಧಾನಗಳನ್ನು ಹಿಂದಿನ ಲೇಖನಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಬೇಸಿಗೆಯಲ್ಲಿ ಮಾಡಿ ಇಡಬಹುದಾದ ಸಾಂಬಾರು ಪುಡಿಗಳ ಲಿಂಕ್ ನ್ನು ಇಲ್ಲಿ ನೀಡಲಾಗಿದೆ, ಒಮ್ಮೆ ಸಾಂಬಾರು ಪುಡಿಗಳ ವಿಧಾನಗಳ ಬಗೆಗಿನ ಲೇಖನವನ್ನು ನೀವು ಓದಿ ತಿಳಿದುಕೊಳ್ಳಬಹುದು. ಮನೆಯಲ್ಲೇ ಮಾಡಿ ವಿವಿಧ ಶೈಲಿಯ ಸಾಂಬಾರು ಪುಡಿಗಳು>>
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.