
ಮಗು ಹುಟ್ಟಿದ ನಂತರ ಮಗುವಿಗೆ ಎಷ್ಟು ಆರೈಕೆ ಬೇಕೋ ಅಷ್ಟೇ ಅಥವಾ ಅದಕ್ಕಿಂತ ಜಾಸ್ತಿ ಹೆತ್ತ ತಾಯಿಯ ಆರೈಕೆ ಮುಖ್ಯ. ದೇಹವು ಸಂಪೂರ್ಣ ಬದಲಾವಣೆ ಆಗಿ, ಎಲ್ಲ ಅಂಗಗಳು ಹೊಸತನವನ್ನು ಕಂಡುಕೊಳ್ಳುತ್ತದೆ. ನವಮಾಸ ಮಗುವನ್ನು ಹೊತ್ತು ಹೆರುವ ತಾಯಿಯ ಆರೈಕೆಯ ಪ್ರಾಮುಖ್ಯತೆ ಬಗ್ಗೆ, ಪ್ರಸವದ ನಂತರ ತಾಯಿಯು ಏನನ್ನು ತಿನ್ನಬಹುದು?? ತಿನ್ನಬಾರದು?? ಎನ್ನುವುದು ಎಲ್ಲರಿಗೂ ಇರುವ ಪ್ರಶ್ನೆಗಳು. ಅದಕ್ಕಾಗಿ ಈ ಲೇಖನದಲ್ಲಿ ಅದರ ಉತ್ತರವನ್ನು ಪ್ರಸ್ತುತ ಪಡಿಸಲಾಗಿದೆ. ಕೆಲವು ಬಾಣಂತಿ ಆಹಾರ ಪದ್ಧತಿಗಳ ಬಗ್ಗೆ ವಿವರಿಸಲಾಗಿದೆ. ಬಾಣಂತಿಯರಿಗೆ ಗರ್ಭಕೋಶ ಕುಗ್ಗಿಸಲು, ಮರಳಿ ಮೊದಲಿನ ಸ್ಥಿತಿಗೆ ಬರಲು ಮತ್ತು ಗರ್ಭಕೋಶಕ್ಕೆ ಶಕ್ತಿ ಒದಗಿಸುವ ಆಹಾರ ಹಾಗೂ ಆರೈಕೆಗಳ ಬಗ್ಗೆ ಕೆಲವು ಮಾಹಿತಿಗಳನ್ನು ಸಹ ಈ ಲೇಖನದಲ್ಲಿ ಪ್ರಸ್ತುತಪಡಿಸಲಾಗಿದೆ.
ಬಾಣಂತಿಯ ಆರೈಕೆಗೆ ಸಹಾಯಕವಾಗಿರುವ ಕೆಲವು ಉಪಯುಕ್ತ ಮನೆಮದ್ದುಗಳು
- ಬಾಣಂತಿಯರಿಗೆ ಆಹಾರದಲ್ಲಿ ಹುರಳಿ ತುಂಬಾ ಉತ್ತಮವಾಗಿದ್ದು, ಹುರಳಿ ಖಾದ್ಯಗಳನ್ನು ನೀಡುವುದು ಉತ್ತಮವಾಗಿದೆ. ಡೆಲಿವರಿ ನಂತರ ತಾಯಿಗೆ ಅಂತರ್ಮಲವು ಸಂಪೂರ್ಣವಾಗಿ ಹೊರಬರಲು ಹಾಗು ಗರ್ಭಾಶಯದ ನೋವನ್ನು ಕಡಿಮೆ ಮಾಡಿಸಲು ಹುರುಳಿಯನ್ನು ಚೆನ್ನಾಗಿ ಬೇಯಿಸಿ , ಅದಕ್ಕೆ ಚಿಟಿಕೆ ಉಪ್ಪು ಹಾಗು ಕರಿ ಮೆಣಸಿನ ಪುಡಿ ಸೇರಿಸಿ ಕುಡಿಯಲು ಕೊಡಬೇಕು.
- ಹುರುಳಿ ಸಾರು ಮಾಡಿ ಕೊಡುವುದರಿಂದ ಗರ್ಭಾಶಯದ ನೋವು ಕಡಿಮೆ ಆಗುತ್ತದೆ. ಹಾಗೆಯೇ ನಂಜು ಏರುವ ಅಥವಾ ಸೋಂಕು ತಗುಲುವಿಕೆಯನ್ನು ತಡೆಯುತ್ತದೆ. ಹುರುಳಿಯು ಉತ್ತಮ ಪೋಷ್ಠಿಕಾಂಶವನ್ನು ಹೊಂದಿದ್ದು, ಮಗುವಿನ ಆರೋಗ್ಯಕ್ಕೂ ಉತ್ತಮವಾಗಿದೆ.
- ಒಣ ಶುಂಠಿ ಪುಡಿಯನ್ನು ಬೆಲ್ಲ ಮತ್ತು ತುಪ್ಪದಲ್ಲಿ ಕಲಸಿ ಸಣ್ಣ ಉಂಡೆ ಮಾಡಿಟ್ಟುಕೊಳ್ಳಬೇಕು. ಈ ಉಂಡೆಯನ್ನು ಎರಡು ದಿನಕ್ಕೆ ಒಮ್ಮೆ ಬೆಳಿಗ್ಗಿನ ಉಪಹಾರದ ಮುಂಚೆ ಸೇವಿಸಬೇಕು. ಇದರಿಂದ ಹೊಟ್ಟೆಯಲ್ಲಿನ ಗ್ಯಾಸ್ಟ್ರಿಕ್ ಸಮಸ್ಯೆ ಹಾಗು ಮೈಯಲ್ಲಿನ ನೀರಿನ ಅಂಶ ಇಂಗಲು ಸಹಾಯಕವಾಗಿದೆ.
- ಬಾಣಂತಿಯರಿಗೆ ಜ್ವರ ಬಂದಾಗ ತುಂಬಾ ಜಾಗರೂಕರಾಗಿ ಔಷಧಿಯನ್ನು ತೆಗೆದುಕೊಳ್ಳಬೇಕು. ಏಕೆಂದರೆ ಅದು ತಾಯಿಹಾಲು ಕುಡಿಯುವ ಮಗುವಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಾಗಾಗಿ ಜ್ವರಕ್ಕೆ ಉತ್ತಮ ಮದ್ದು ಎಂದರೆ ಆಡಿನ ಹಾಲಿಗೆ ಒಣ ಶುಂಠಿ ಪುಡಿಯನ್ನು ಹಾಕಿ ಕುದಿಸಬೇಕು. ನಂತರ ಶೋಧಿಸಿ ಸ್ವಲ್ಪ ಸಕ್ಕರೆಯೊಂದಿಗೆ ಕಷಾಯವನ್ನು ಕುಡಿಯಬೇಕು. ಹೀಗೆ ಮಾಡುವುದರಿಂದ ಜ್ವರವು ಕಡಿಮೆ ಆಗುತ್ತದೆ.
- ಹಸಿರು ಸೊಪ್ಪುಗಳು ಬಾಣಂತಿಯರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಬ್ಬಸಿಗೆ ಸೊಪ್ಪು,ಮೆಂತ್ಯೆ ಸೊಪ್ಪು, ಮೂಲಂಗಿ ಸೊಪ್ಪು, ಪಾಲಕ್ ಸೊಪ್ಪು, ಹೊನೆಗೊನೆ ಸೊಪ್ಪು, ಬಸಳೆ ಸೊಪ್ಪು, ಅಗಸೆ ಸೊಪ್ಪು, ಕರಿಬೇವು, ಹಾಗು ಕೊತ್ತಂಬರಿ ಸೊಪ್ಪು ಇವೆಲ್ಲವನ್ನೂ ಆಹಾರದಲ್ಲಿ ಸ್ವೀಕರಿಸಬಹುದು.
- ತರಕಾರಿ ಹಣ್ಣುಗಳೆಂದರೆ, ಕ್ಯಾರೆಟ್,ಸೋರೆಕಾಯಿ,ಬೀಟ್ರೂಟ್,ಸುವರ್ಣ ಗಡ್ಡೆ,ನುಗ್ಗೆಕಾಯಿ ಹಾಗು ಬೆಳ್ಳುಳ್ಳಿ ಈ ರೀತಿಯ ತರಕಾರಿಗಳು. ಸೇಬು ಹಣ್ಣು, ಪಪ್ಪಾಯ, ಸಪೋಟ, ಮಾವಿನ ಹಣ್ಣು ಇತ್ಯಾದಿ ಬಾಣಂತಿಯರು ಸೇವಿಸಬಹುದಾದ ಹಣ್ಣುಗಳು.
- ಬಾಣಂತಿಯರಿಗೆ ಅಧಿಕ ರಕ್ತ ಸ್ರಾವ ಆಗುತ್ತಿದ್ದರೆ ರಸ ಬಾಳೆ ಗಿಡದ ಗಡ್ಡೆಯನ್ನು, 1 ಚಮಚ ಕೊತ್ತಂಬರಿ, 5 ಲವಂಗ ಹಾಗು 1 ಚಮಚ ದನಿಯ ಎಲ್ಲವನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ನಂತರ ಶೋಧಿಸಿಕೊಂಡು ಗುಟುಕು ಗುಟುಕಾಗಿ ಕುಡಿಯಬೇಕು.
- ಬಾಣಂತಿಯ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಜಾಸ್ತಿಯಾಗಿರುವುದರಿಂದ ಜಾಸ್ತಿ ಹಾಲು ಹಾಗು ತುಪ್ಪವನ್ನು ಸೇವಿಸಬೇಕು. ಮಗುವಿನ ಬೆಳವಣಿಗೆಗೆ ಕೂಡ ಕ್ಯಾಲ್ಸಿಯಂ ತುಂಬಾ ಅವಶ್ಯಕ ವಾಗಿದೆ.
- ಊಟದ ನಂತರ ಎಲೆ ಅಡಿಕೆ ಸುಣ್ಣ ಬೆರೆಸಿ ತಿನ್ನುವುದರಿಂದ ಮಗುವು ಹಾಲನ್ನು ಕಕ್ಕುವುದಿಲ್ಲ. ಹಾಗೆಯೇ ಇದು ಜೀರ್ಣಕ್ರಿಯೆಗೆ ಕೂಡ ಸಹಾಯಕವಾಗಿದೆ.
- ಶುದ್ಧ ಅರಿಶಿನ ಅಥವಾ ಅರಿಶಿಣದ ಕೊಂಬನ್ನು ಒಣಗಿಸಿ ಕುಟ್ಟಿ ಪುಡಿ ಮಾಡಿಕೊಂಡಿರಬೇಕು. ಇಂತಹ ಅರಿಶಿನವನ್ನು ಮೈಯಿಗೆ ಹಚ್ಚಲು ಅಥವಾ ಆಹಾರದ ಜೊತೆ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಯಾವುದೇ ರೀತಿಯ ಸೋಂಕು ತಗಲುವುದಿಲ್ಲ. ಹಾಗು ದೇಹದಲ್ಲಿನ ನೀರು ಇಂಗಲು ಸಹಾಯಕವಾಗಿದೆ.
- ತಾಯಿಯ ಎದೆ ಹಾಲು ಹೆಚ್ಚಿಸಲು ಮುಸುಕಿನ ಜೋಳದ ಕಾಳುಗಳನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು. ಜೋಳದ ಪುಡಿ 1 ಚಮಚ ಹಾಲು ಸ್ವಲ್ಪ ಕಲ್ಲುಸಕ್ಕರೆ ಪುಡಿಯನ್ನು ಸೇರಿಸಿ ಸವಿದರೆ ಎದೆ ಹಾಲು ಹೆಚ್ಚಾಗುತ್ತದೆ.
- ನಂಜಿನ ಯಾವುದೇ ಪದಾರ್ಥಗಳು ತಿನ್ನಲು ಯೋಗ್ಯವಲ್ಲ. ಯಾವುದೇ ಆಹಾರವನ್ನು ಸ್ವಲ್ಪ ಬಿಸಿ ಬಿಸಿ ಬಿಸಿಯಾಗಿ ಸ್ವೀಕರಿಸುವುದು ಉತ್ತಮ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಕೂಡ ಒಳ್ಳೆಯದು.
ಹಣ್ಣುಗಳು, ತರಕಾರಿಗಳು,ಸೊಪ್ಪುಗಳು, ಧಾನ್ಯಗಳು, ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಭರಿತ ಆಹಾರವನ್ನು ಸೇವಿಸುವುದು ಉತ್ತಮ. ಹೆಚ್ಚಿನ ನೀರು ಕುಡಿಯುವುದು ಬಹಳ ಮುಖ್ಯ. ಹಾಗೆಯೇ ಕೆಲವು ಬಾಣಂತಿ ಆರೋಗ್ಯಕರ ಖಾದ್ಯಗಳ ಬಗ್ಗೆ ವಿವರಣೆ ಕೆಳಕಂಡಂತಿದೆ.
1. ಬಾಣಂತಿ ಚೂರ್ಣ
ಬೇಕಾಗುವ ಸಾಮಾಗ್ರಿಗಳು
- ತೊಗರಿ ಬೇಳೆ 1 ಕಪ್
- ಕಡಲೆ ಬೇಳೆ 1 ಕಪ್
- ಉದ್ದು 1 ಕಪ್
- ಕರಿಬೇವು 2 ಮುಷ್ಠಿ
- ಕೊಬ್ಬರಿ ತುರಿ 1 ಕಪ್
- ಕರಿ ಮೆಣಸು 1 ಚಮಚ
- ಜೀರಿಗೆ 1 ಚಮಚ
- ದನಿಯ 4 ಚಮಚ
- ಓಂ ಕಾಳು 1/2 ಚಮಚ
- ಬ್ಯಾಡಗಿ ಮೆಣಸಿನ ಕಾಯಿ 6
- ಹುಣಸೆ ಹಣ್ಣು
- ಇಂಗು
- ಉಪ್ಪು
ಮಾಡುವ ವಿಧಾನ
ಮೊದಲು ತೊಗರಿ ಬೇಳೆ, ಕಡಲೆ ಬೇಳೆ ಹಾಗು ಉದ್ದನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಹಾಗೆಯೇ ಅದನ್ನು ಆರಲು ಬಿಡಬೇಕು. ನಂತರ ಕರಿ ಮೆಣಸು, ಜೀರಿಗೆ, ದನಿಯ, ಓಂ ಕಾಳು ಹಾಗು ಬ್ಯಾಡಗಿ ಮೆಣಸಿನ ಕಾಯಿಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಅದನ್ನು ಆರಲು ಬಿಡಬೇಕು. ಹುಣಸೆ ಹಣ್ಣು ಕೂಡ ಹುರಿದುಕೊಂಡು ಇಟ್ಟಿರಬೇಕು. ಕರಿಬೇವನ್ನು ಚೆನ್ನಾಗಿ ಹುರಿದು, ಕೊಬ್ಬರಿಯನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು. ಕೊನೆಯಲ್ಲಿ ಎಲ್ಲವನ್ನು ಆರಿದ ನಂತರ ಉಪ್ಪು ಮತ್ತು ಇಂಗಿನೊಂದಿಗೆ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಅಲ್ಲಿಗೆ ಚೂರ್ಣ ಸಿದ್ಧವಾಗುತ್ತದೆ.
ಪ್ರಯೋಜನಗಳು
- ಗರ್ಭಕೋಶವನ್ನು ದೃಢಗೊಳಿಸಿ ಶಕ್ತಿಯನ್ನು ಒದಗಿಸುತ್ತದೆ. ಹಾಗೆಯೇ ಸೊಂಟಕ್ಕೆ ಉತ್ತಮ ಬಲವನ್ನು ಕೊಡುತ್ತದೆ.
- ವಾಯು ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ.
2. ಅಂಟಿನ ಉಂಡೆ
ಬೇಕಾಗುವ ಸಾಮಾಗ್ರಿಗಳು
- ಒಣ ಕೊಬ್ಬರಿ ತುರಿ 1 ಕಪ್
- ಖರ್ಜೂರ 5-6
- ಗಸಗಸೆ 1 ಚಮಚ
- ಲವಂಗ 4
- ಬಿಳಿ ಗೊಂದು ಅಥವಾ ಅಂಟು 1 ಚಮಚ
- ಬಾದಾಮಿ
- ಪಿಸ್ತಾ
- ಬೆಲ್ಲ 3/4 ಕಪ್
- ತುಪ್ಪ
ಮಾಡುವ ವಿಧಾನ
ಒಂದು ಬಾಣಲೆಗೆ ತುಪ್ಪವನ್ನು ಹಾಕಿ ಒಣ ಕೊಬ್ಬರಿ, ಖರ್ಜೂರ, ಬಾದಾಮಿ, ಪಿಸ್ತಾ, ಅಂಟು, ಲವಂಗ, ಗಸಗಸೆ ಇವೆಲ್ಲವನ್ನೂ ಕ್ರಮವಾಗಿ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಬೆಲ್ಲವನ್ನು ಕರಗಿಸಿ ಪಾಕ ಮಾಡಿಕೊಳ್ಳಬೇಕು. ಒಂದು ಎಳೆಯ ಪಾಕ ಬಂದಾಕ್ಷಣ ಹುರಿದ ಎಲ್ಲ ಸಾಮಗ್ರಿಗಳನ್ನು ಪಾಕಕ್ಕೆ ಹಾಕಿ ಹಾಗೂ ತಳ ಹಿಡಿಯದಂತೆ ತಿರುವಬೇಕು. ಚೆನ್ನಾಗಿ ಬೆರೆಸಿದ ನಂತರ ಉಂಡೆ ಕಟ್ಟಬೇಕು. ಉಂಡೆ ಕಟ್ಟಿ ತಟ್ಟೆಯಲ್ಲಿ ಇಟ್ಟರೆ ಪೋಷ್ಠಿಕಾಂಶಯುತ ಬಾಣಂತಿ ಅಂಟಿನ ಉಂಡೆ ಸಿದ್ಧವಾಗುತ್ತದೆ.
ಪ್ರಯೋಜನಗಳು
- ಜಾಸ್ತಿ ಪೋಷಕಾಂಶ ಇರುವ ಪದಾರ್ಥಗಳ ಬಳಕೆ ಮಾಡಿರುವುದರಿಂದ ಅಧಿಕ ಶಕ್ತಿಯನ್ನು ಉಂಡೆ ಒದಗಿಸುತ್ತದೆ.
- ನೋವನ್ನು ಸಹಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಗಾಯವು ಬೇಗ ಒಣಗಲು ಸಹಕಾರಿಯಾಗಿದೆ.
- ಶರೀರವನ್ನು ಬೆಚ್ಚಗೆ ಇಡಲು ಕೂಡ ಉಪಯುಕ್ತವಾಗಿದೆ.
3. ಎದೆ ಹಾಲು ಹೆಚ್ಚಿಸಲು ಒಂದು ಸುಲಭ ಮನೆ ಮದ್ದು
ಬೇಕಾಗುವ ಸಾಮಾಗ್ರಿಗಳು
- ಲವಂಗ
- ಹಿಂಗು
ಮಾಡುವ ವಿಧಾನ
ಮಗುವಿನ ಜನನದ ನಂತರ ಈ ಮನೆ ಮದ್ದನ್ನು ಮಾಡಬೇಕು. ನಿತ್ಯ 5 ಲವಂಗವನ್ನು ಜಜ್ಜಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ನೀರು ಅರ್ಧದಷ್ಟು ಆಗುವವರೆಗೂ ಕುದಿಸಬೇಕು. ಅನಂತರ ತಯಾರಿಸಿದ 2 ಚಮಚದ ಲವಂಗದ ಕಷಾಯಕ್ಕೆ ಒಂದು ಚಿಟಿಕೆ ಹಿಂಗು ಸೇರಿಸಿ ಕುಡಿಯಬೇಕು. ಇದು ಎದೆ ಹಾಲು ಹೆಚ್ಚಿಸಲು ಅತೀ ಉತ್ತಮ ಮನೆ ಮದ್ದಾಗಿದೆ.
ಮನೆಗೆ ಮಗು ಬಂದ ನಂತರ ಖುಷಿ ಮನೆ ತುಂಬಾ ಹಬ್ಬಿರುತ್ತದೆ. ತಾಯಿಯ ಮನಸ್ಥಿತಿಯೂ ತುಂಬಾ ಸೂಕ್ಷ್ಮವಾಗಿರುತ್ತದೆ. ಮೇಲಿನ ಆಹಾರ ಪದ್ಧತಿಗಳ ಜೊತೆಗೆ ಅವಳ ಆರೈಕೆಯೂ ತುಂಬಾ ಮುಖ್ಯವಾಗಿರುತ್ತದೆ. ಮೈಗೆ ನಂಜು ಏರದಂತೆ ನೋಡಿಕೊಳ್ಳಬೇಕು. ಮಾನಸಿಕವಾಗಿ ಅವಳನ್ನು ಸಬಲಗೊಳಿಸಬೇಕು. ಮಗುವಿನ ಆರೈಕೆ ಜೊತೆಗೆ ಬಾಣಂತಿಯ ಆರೈಕೆ ಬಲು ಮುಖ್ಯ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.