
ಎಲ್ಲರಿಗೂ ಹೆಚ್ಚಾಗಿ ಪ್ರಿಯವಾಗಿರುವ, ರುಚಿಕರ ಹಾಗೂ ದೇಹಕ್ಕೆ ತಂಪನ್ನು ನೀಡುವ ಉತ್ತಮ ಒಣ ಹಣ್ಣುಗಳಲ್ಲಿ ಒಂದಾದ ಒಣದ್ರಾಕ್ಷಿಯು ನಿತ್ಯ ನಮ್ಮ ಜೀವನದಲ್ಲಿ ಹೆಚ್ಚಾಗಿ ಬಳಸುವ ಆಹಾರ ವಸ್ತುವಾಗಿದೆ. ಒಣದ್ರಾಕ್ಷಿಯಲ್ಲಿ ಅನೇಕ ವಿಧಗಳಿದ್ದು ಮುಖ್ಯವಾಗಿ ಬೀಜ ರಹಿತ, ಬೀಜ ಸಹಿತ ಹಾಗೆಯೇ ಕಪ್ಪು ಒಣದ್ರಾಕ್ಷಿಗಳನ್ನು ನಾವು ನೋಡಬಹುದು. ಸಣ್ಣ ಮಕ್ಕಳಿಂದ ವಯೋವೃದ್ಧರ ತನಕ ಎಲ್ಲರಿಗೂ ತಿನ್ನಲು ಇಷ್ಟವಾಗುವ ಈ ಒಣದ್ರಾಕ್ಷಿಯ ಪರಿಚಯ, ಕೆಲವು ವೈಜ್ಞಾನಿಕ ವಿಚಾರಗಳು ಹಾಗೂ ಆರೋಗ್ಯಕರ ಮನೆಮದ್ದುಗಳ ಬಗೆಗಿನ ಅನೇಕ ಮಾಹಿತಿಗಳನ್ನು ನಾವು ಇಂದಿನ ಲೇಖನದಲ್ಲಿ ವಿಶ್ಲೇಷಿಸೋಣ.
ಒಣದ್ರಾಕ್ಷಿಯ ಕೆಲವು ವೈಜ್ಞಾನಿಕ ವಿಚಾರಗಳು
ಒಣದ್ರಾಕ್ಷಿಯಲ್ಲಿ ಅನೇಕ ಪೋಷಕಾಂಶಗಳು ಇದ್ದು, ಇದರ ಸೇವನೆಯು ಆರೋಗ್ಯಕ್ಕೆ ಉತ್ತಮವಾಗಿದೆ. ಮುಖ್ಯವಾಗಿ ಒಣದ್ರಾಕ್ಷಿಯಲ್ಲಿ ವಿಟಮಿನ್ ಎ ಹಾಗೂ ವಿಟಮಿನ್ ಸಿ ಇದ್ದು, ಜೊತೆಗೆ ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಶರ್ಕರ ಪಿಷ್ಠ, ತೇವ ಹಾಗೂ ಸಸಾರಜನಕ ಸೇರಿದಂತೆ ಅನೇಕ ಖನಿಜಗಳನ್ನು ಇದು ಒಳಗೊಂಡಿದೆ. ಇಂತಹ ಉತ್ತಮ ಹಾಗೂ ಆರೋಗ್ಯಕರ ಗುಣಗಳುಳ್ಳ ಒಣದ್ರಾಕ್ಷಿಯಿಂದ ತಯಾರಿಸಬಹುದುದಾದ ಆರೋಗ್ಯಕರ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ಈಗ ಅರಿಯೋಣ.
ಕೆಲವು ಒಣದ್ರಾಕ್ಷಿಯ ಆರೋಗ್ಯಕರ ಮನೆಮದ್ದುಗಳು
ನಿಶ್ಯಕ್ತಿಗೆ ಒಣದ್ರಾಕ್ಷಿ ಉತ್ತಮ ಪರಿಹಾರವನ್ನು ನೀಡುತ್ತದೆ.
- ದೇಹಕ್ಕೆ ಶಕ್ತಿಯೇ ಇಲ್ಲದಂತೆ ಎನಿಸಿದಾಗ, ಇಲ್ಲವೇ ದೀರ್ಘ ಕಾಲದ ಖಾಯಿಲೆ ಅಥವಾ ಸಾಮಾನ್ಯ ಜ್ವರದಿಂದ ಚೇತರಿಸಿಕೊಂಡ ತಕ್ಷಣ ನಮ್ಮ ಶರೀರವು ಹೆಚ್ಚು ಶಕ್ತಿಯನ್ನು ಬೇಡುತ್ತದೆ. ಅಂತಹ ಸಮಯದಲ್ಲಿ ಈ ಒಣದ್ರಾಕ್ಷಿಯ ಸೇವನೆಯು ಉತ್ತಮವಾಗಿದೆ. ಪ್ರತಿದಿನ ನೆನೆಸಿದ ಒಣದ್ರಾಕ್ಷಿಯನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಸಕಲ ಶಕ್ತಿಯು ಕೂಡ ನಮಗೆ ಸಿಗುತ್ತದೆ. ಹಾಗಾಗಿ ನಿಶ್ಯಕ್ತಿಗೆ ಒಣದ್ರಾಕ್ಷಿ ಸೇವನೆಯು ಉತ್ತಮವಾಗಿದೆ.
ಹೃದಯದ ಉತ್ತಮ ಆರೋಗ್ಯಕ್ಕೆ ಒಣದ್ರಾಕ್ಷಿ ಸೇವನೆಯು ಉತ್ತಮವಾಗಿದೆ.
- ಹೃದಯದಲ್ಲಿನ ರಕ್ತ ಸಂಚಲನೆಯು ಏರುಪೇರಾಗಿ ಹೃದಯದ ಬಡಿತವು ನಿಯಂತ್ರಣ ತಪ್ಪಿದ್ದರೆ, ಅದನ್ನು ನಿಯಂತ್ರಿಸಲು ಒಣದ್ರಾಕ್ಷಿ ಸೇವನೆಯು ಸಹಾಯಕವಾಗಿದೆ. ಸ್ವಲ್ಪ ಸಿಹಿಯಾದ ಒಣದ್ರಾಕ್ಷಿಯನ್ನು ಪ್ರತಿನಿತ್ಯ ಸೇವಿಸುವುದು, ಹೃದಯದ ಅರೋಗ್ಯಕ್ಕೆ ಅತಿ ಉತ್ತಮವಾಗಿದೆ ಹಾಗೂ ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಿಸಲು ಕೂಡ ಒಣದ್ರಾಕ್ಷಿ ಸೇವನೆಯು ಸಹಾಯಕವಾಗಿದೆ.
ಲಿವರ್ ನ ಉತ್ತಮ ಆರೋಗ್ಯಕ್ಕೆ ಕೂಡ ಒಣದ್ರಾಕ್ಷಿಯ ಸೇವನೆಯು ಉತ್ತಮವಾಗಿದೆ.
- ಲಿವರ್ ನ ಆರೋಗ್ಯ ಹಾಗೂ ಉತ್ತಮ ಜೀರ್ಣಕ್ರಿಯೆಗೂ ಕೂಡ ಒಣದ್ರಾಕ್ಷಿಯ ಸೇವನೆಯು ಉತ್ತಮವಾಗಿದೆ. ಪ್ರತಿದಿನ ನೆನೆಸಿದ ಒಣದ್ರಾಕ್ಷಿಗಳನ್ನು ಸೇವಿಸುವುದರಿಂದ ತಿಂದ ಆಹಾರದ ಜೀರ್ಣಕ್ರಿಯೆಯು ಸುಲಭವಾಗಿ, ಲಿವರ್ ನ ಆರೋಗ್ಯ ಉತ್ತಮವಾಗಿರುತ್ತದೆ.
ಮೂತ್ರ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಲು ಕೂಡ ಒಣದ್ರಾಕ್ಷಿ ಸೇವನೆಯು ಉತ್ತಮವಾಗಿದೆ.
- ಮೂತ್ರದಲ್ಲಿನ ಕಲ್ಲಿನ ನಿವಾರಣೆಗೆ ನಾವು ಒಣದ್ರಾಕ್ಷಿ ಹಾಗೂ ದ್ರಾಕ್ಷಿಯ ಎಲೆಗಳಿಂದ ಉತ್ತಮ ಪರಿಹಾರವನ್ನು ಪಡೆದುಕೊಳ್ಳಬಹುದು. ಒಣದ್ರಾಕ್ಷಿ ಹಾಗೂ ದ್ರಾಕ್ಷಿ ಗಿಡದ ಚಿಗುರೆಲೆಗಳನ್ನು ಎರಡನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ಇಟ್ಟ ನೀರು ಅರ್ಧದಷ್ಟು ಇಂಗಿದ ನಂತರ ಒಲೆಯನ್ನು ಆರಿಸಿಬೇಕು. ನಂತರ ಶೋಧಿಸಿಕೊಂಡು ಕುಡಿಯಬೇಕು. ಇದು ಮೂತ್ರದಲ್ಲಿನ ಕಲ್ಲುಗಳನ್ನು ನಿವಾರಿಸುತ್ತದೆ. ಹಾಗೆಯೇ ಕಟ್ಟು ಮೂತ್ರ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗೆಯೇ ಇದು ಉರಿಮೂತ್ರ ಸಮಸ್ಯೆಗಳಿಗೂ ಉತ್ತಮ ಪರಿಹಾರವನ್ನು ನೀಡುತ್ತದೆ.
- ಮೂತ್ರಕೋಶದ ಕಲ್ಲುಗಳನ್ನು ಕರಗಿಸಲು ಇನ್ನೊಂದು ಉತ್ತಮ ಮನೆಮದ್ದಿನ ಬಗ್ಗೆ ತಿಳಿಯೋಣ. ದ್ರಾಕ್ಷಿ ಗಿಡದ ಎಲೆಗಳು, ಸೌತೆಕಾಯಿ ಬೀಜ ಹಾಗೂ ಬಾಲಮೆಣಸನ್ನು ಎರಡು ಲೋಟ ನೀರಿಗೆ ಹಾಕಿ ಕುದಿಸಬೇಕು. ಅರ್ಧದಷ್ಟು ನೀರು ಇಂಗಿದ ಮೇಲೆ ಒಲೆ ಆರಿಸಿ, ಶೋಧಿಸಿ ಕುಡಿಯಬೇಕು. ಇದು ಮೂತ್ರಕೋಶದಲ್ಲಿ ಉಂಟಾಗುವ ಕಲ್ಲನ್ನು ಕರಗಿಸುತ್ತದೆ. ಹಾಗೆಯೇ ಮೂತ್ರವಿಸರ್ಜನೆಯು ಸುಲಭವಾಗುವಂತೆ ನೋಡುಕೊಳ್ಳುತ್ತದೆ.
ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾಗಿದ್ದರೆ, ಒಣದ್ರಾಕ್ಷಿ ಸೇವನೆಯು ಉತ್ತಮವಾಗಿದೆ.
- ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, ದೇಹದಲ್ಲಿ ರಕ್ತವನ್ನು ವೃದ್ಧಿಸಲು ಒಣದ್ರಾಕ್ಷಿಯನ್ನು ನೆನೆಸಿ, ಅದರ ರಸವನ್ನು ಹಿಂಡಿಕೊಳ್ಳಬೇಕು. ಈ ರಸದೊಂದಿಗೆ ಜೇನುತುಪ್ಪವನ್ನು ಬೆರೆಸಿ, ಸೇವಿಸಬೇಕು. ಇದು ರಕ್ತವೃದ್ಧಿಗೆ ಅತಿ ಉತ್ತಮವಾದ ಮನೆಮದ್ದಾಗಿದೆ. ರಕ್ತಹೀನತೆಯ ಸಮಸ್ಯೆಯು ತ್ವರಿತವಾಗಿ ನಿವಾರಣೆಯಾಗುತ್ತದೆ.
ಮೂಳೆಗಳ ಉತ್ತಮ ಆರೋಗ್ಯಕ್ಕೆ ಒಣದ್ರಾಕ್ಷಿಯ ಸೇವನೆಯು ಉತ್ತಮವಾಗಿದೆ.
- ಪ್ರತಿದಿನ ಆಹಾರವಾಗಿ ನೆನೆಸಿದ ಒಣದ್ರಾಕ್ಷಿಯನ್ನು ಸೇವಿಸುವುದು ಮೂಳೆಗಳ ಆರೋಗ್ಯಕ್ಕೆ ಉತ್ತಮವಾಗಿದೆ. ಇದು ಮೂಳೆಗಳಿಗೆ ಉತ್ತಮ ಬಲವನ್ನು ನೀಡಿ, ದೃಢಗೊಳಿಸುತ್ತದೆ.
ಮಗುವಿನ ಕೆಮ್ಮು ನಿವಾರಣೆಗೆ ಒಣದ್ರಾಕ್ಷಿಯು ಉತ್ತಮ ಪರಿಹಾರವನ್ನು ನೀಡುತ್ತದೆ.
- ಮಗುವಿನ ಎದೆಯಲ್ಲಿ ಗೊರ ಗೊರ ಎಂದು ಬರುವ ಕೆಮ್ಮಿಗೆ ಒಣದ್ರಾಕ್ಷಿಯಿಂದ ನಾವು ಪರಿಹಾರವನ್ನು ಪಡೆದುಕೊಳ್ಳಬಹುದು. ಬೀಜ ಇರುವ ಒಣದ್ರಾಕ್ಷಿಯನ್ನು ತೆಗೆದುಕೊಳ್ಳಬೇಕು. ಒಣದ್ರಾಕ್ಷಿಯ ಬೀಜವನ್ನು ತೆಗೆದು ಚಿಟಿಕೆ ದಾಲ್ಚಿನ್ನಿ ಚಕ್ಕೆಯ ಪುಡಿಯನ್ನು ತುಂಬಿಸಿ, ತಿನ್ನಿಸಬೇಕು. ಇದು ಕಫವನ್ನು ನಿವಾರಿಸಿ, ಎಲ್ಲಾ ರೀತಿಯ ಕೆಮ್ಮಿಗೂ ನಿವಾರಣೆಯನ್ನು ನೀಡುತ್ತದೆ.
ಜ್ವರದ ನಿವಾರಣೆಗೆ ಕುಡಿಯಲೇ ಬೇಕಾದ ಒಣದ್ರಾಕ್ಷಿ ಕಷಾಯ
- ಜ್ವರ ಬಂದಾಗ ನಾವು ಈ ಒಣದ್ರಾಕ್ಷಿ ಕಷಾಯವನ್ನು ಕುಡಿಯಲೇ ಬೇಕು. ಬೀಜ ಇರುವ ಒಣದ್ರಾಕ್ಷಿ, ಅಮೃತಬಳ್ಳಿ, ಶುಂಠಿ, ಬೆಟ್ಟದ ನೆಲ್ಲಿಕಾಯಿ ಇವೆಲ್ಲವನ್ನೂ ಎರಡು ಲೋಟ ನೀರಿಗೆ ಹಾಕಿ ಕುದಿಸಬೇಕು. ನೀರು ಅರ್ಧದಷ್ಟು ಇಂಗಿದ ಮೇಲೆ ಒಲೆ ಆರಿಸಿ, ಶೋಧಿಸಿ ಕುಡಿಯಬೇಕು. ಇದು ಎಲ್ಲಾ ರೀತಿಯ ಜ್ವರಕ್ಕೂ ಉತ್ತಮ ಮದ್ದಾಗಿದೆ. ಪಿತ್ತದಿಂದ ಬರುವ ಜ್ವರ, ಚಳಿ ಜ್ವರ, ಹಾಗೆಯೇ ಜ್ವರದ ಪರಿಣಾಮಗಳಾದ ಬಾಯಾರಿಕೆ, ವಾಕರಿಕೆ ಅಥವಾ ವಾಂತಿ ಮತ್ತು ಕೆಮ್ಮಿಗೂ ಸಹ ಈ ಕಷಾಯದ ಸೇವನೆ ಉಪಯುಕ್ತವಾಗಿದೆ.
(-> ಅಮೃತಬಳ್ಳಿ, ಶುಂಠಿ ಇದರ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ನಮ್ಮ ಹಿಂದಿನ ಲೇಖನಗಳನ್ನು ಓದಿರಿ)
ನೆಗಡಿ, ಕೆಮ್ಮಿನಿಂದ ಮುಕ್ತಿ ಪಡೆಯಲು ಒಣದ್ರಾಕ್ಷಿ ಸಹಾಯಕವಾಗಿದೆ.
- ನೆಗಡಿ, ಕೆಮ್ಮು ಹಾಗೂ ಕಫ ನಿವಾರಣೆಗೆ ಕೂಡ ಒಣದ್ರಾಕ್ಷಿ ಉಪಯುಕ್ತವಾಗಿದೆ. ಒಣದ್ರಾಕ್ಷಿ, ಕಾಳುಮೆಣಸು ಹಾಗೂ ಅತಿಮಧುರ ಇವು ಮೂರನ್ನು ಚೆನ್ನಾಗಿ ಕುಟ್ಟಿ ಪುಡಿಮಾಡಿಕೊಳ್ಳಬೇಕು. ನಂತರ ಶೇಂಗಾ ಬೀಜದಷ್ಟು ಸಣ್ಣ ಉಂಡೆಗಳಾಗಿ ತಯಾರಿಸಿಕೊಳ್ಳಬೇಕು. ಈ ಪುಟ್ಟ ಉಂಡೆಗಳನ್ನು ದಿನಕ್ಕೆ ಮೂರು ಬಾರಿ ಸೇವಿಸಿದರೆ ನೆಗಡಿ, ಕೆಮ್ಮು ಎರಡು ನಿವಾರಣೆಯಾಗುತ್ತದೆ.
(-> ಕಾಳುಮೆಣಸು ಅಥವಾ ಕರಿಮೆಣಸಿನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನಮ್ಮ ಹಿಂದಿನ ಲೇಖನಗಳನ್ನು ಓದಿರಿ)
ಮಲೇರಿಯಾ ಸಮಸ್ಯೆಗೂ ಕೂಡ ಒಣದ್ರಾಕ್ಷಿ ಸೇವನೆಯು ಉತ್ತಮವಾಗಿದೆ.
- ಮಲೇರಿಯಾ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ವೈದ್ಯರ ಆರೋಗ್ಯ ಸಲಹೆಗಳ ಜೊತೆಗೆ ಆಹಾರದಲ್ಲಿ ಈ ಒಣದ್ರಾಕ್ಷಿಯನ್ನು ಸ್ವೀಕರಿಸುವುದು ಉತ್ತಮವಾಗಿದೆ. ಸ್ವಲ್ಪ ಸುಣ್ಣವನ್ನು ನೀರಿನಲ್ಲಿ ಕರಗಿಸಬೇಕು. ಅದೇ ನೀರಿನಲ್ಲಿ ಒಣದ್ರಾಕ್ಷಿಯನ್ನು ನೆನೆಸಬೇಕು. ನಂತರ ಅದನ್ನು ಚೆನ್ನಾಗಿ ಅಗೆದು ತಿನ್ನಬೇಕು. ಇದು ಮಲೇರಿಯಾ ರೋಗಿಗಳಿಗೆ ಅತ್ಯಂತ ಸಹಾಯಕವಾಗುತ್ತದೆ.
ಹೊಟ್ಟೆ ಭಾರವಾದಾಗ ಕೂಡ ಒಣದ್ರಾಕ್ಷಿ ಸೇವನೆಯು ಉತ್ತಮವಾಗಿದೆ.
- ತಿಂದ ಆಹಾರವು ಜಾಸ್ತಿಯಾಗಿ ಹೊಟ್ಟೆ ಭಾರವೆನಿಸಿದಾಗ ಸ್ವಲ್ಪ ಒಣದ್ರಾಕ್ಷಿಯನ್ನು ತಿನ್ನಬೇಕು. ಇದರಿಂದ ಕೂಡಲೇ ಹೊಟ್ಟೆ ಭಾರದ ಸಮಸ್ಯೆಯು ದೂರವಾಗಿ, ತಿಂದ ಆಹಾರವು ಸುಲಭವಾಗಿ ಜೀರ್ಣವಾಗಿಸುತ್ತದೆ. ಹಾಗೆಯೇ ಹೊಟ್ಟೆಯು ಕೂಡ ಹಗುರವಾಗುತ್ತದೆ.
ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಗಳು ಎದುರಾದಾಗ ಕೂಡ ಒಣದ್ರಾಕ್ಷಿ ಸಹಾಯಕವಾಗಿದೆ.
- ವಿಪರೀತ ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೊಂದಿರುವವರು ಒಣದ್ರಾಕ್ಷಿಯ ಟೀಯನ್ನು ಸೇವಿಸುವುದು ಅತಿ ಉತ್ತಮವಾಗಿದೆ. ಇಲ್ಲವೇ ಒಣದ್ರಾಕ್ಷಿಯನ್ನು ನೆನೆಸಿ ಸೇವಿಸುವುದು ಕೂಡ ಉತ್ತಮವಾಗಿದೆ. ಹಾಗೆಯೇ ಹೊಟ್ಟೆಯಲ್ಲಿ ವಾಯುವು ತುಂಬಿದ ಸಮಯದಲ್ಲಿ ಹಾಲು, ಕಾಫಿ ಹಾಗೂ ಟೀಗಳ ಸೇವನೆಯನ್ನು ಮಾಡದೇ ಇರುವುದು ಉತ್ತಮ. ಒಮ್ಮೆ ಈ ದ್ರಾಕ್ಷಿ ಟೀಯನ್ನು ತಯಾರಿಸಿ, ಕುಡಿಯಿರಿ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ಮುಕ್ತರಾಗಿರಿ.
ಅನೇಕ ಆರೋಗ್ಯಕರ ಉಪಯೋಗಗಳನ್ನು ನೀಡುವ ಒಣದ್ರಾಕ್ಷಿ ಟೀಯ ತಯಾರಿಕಾ ವಿಧಾನವನ್ನು ಅರಿಯೋಣ.
ಬೇಕಾಗುವ ಪದಾರ್ಥಗಳು
- ಒಣದ್ರಾಕ್ಷಿ ½ ಕಪ್
- ನಿಂಬೆ ರಸ ½ ಹೋಳು
- ಏಲಕ್ಕಿ ಪುಡಿ ½ ಚಮಚ
- ನೀರು 2 ಕಪ್
ಮಾಡುವ ವಿಧಾನ
ಮೊದಲಿಗೆ ಒಣದ್ರಾಕ್ಷಿಗಳನ್ನು ಎರಡರಿಂದ ಮೂರು ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಬೇಕು. ಎರಡು ಕಪ್ ನೀರನ್ನು ಒಲೆಯ ಮೇಲೆ ಕುದಿಯಲು ಇಡಬೇಕು. ಈ ಶುಚಿಗೊಳಿಸಿದ ಒಣದ್ರಾಕ್ಷಿಯನ್ನು ಸ್ವಲ್ಪ ಜಜ್ಜಿಕೊಂಡು ಕುದಿಯುವ ನೀರಿಗೆ ಸೇರಿಸಬೇಕು. ಇಟ್ಟ ನೀರು ಅರ್ಧದಷ್ಟು ಇಂಗುವವರೆಗೂ ಕುದಿಸಬೇಕು. ತಣಿದ ನಂತರ ಕಿವುಚಿಕೊಂಡು, ಶೋಧಿಸಿಕೊಳ್ಳಬೇಕು. ಇದಕ್ಕೆ ಲಿಂಬೆರಸ ಹಾಗೂ ಏಲಕ್ಕಿ ಪುಡಿಯನ್ನು ಬೆರೆಸಿದರೆ ಒಣದ್ರಾಕ್ಷಿ ಟೀ ಕುಡಿಯಲು ಸಿದ್ದವಾಗುತ್ತದೆ.
ಒಣದ್ರಾಕ್ಷಿ ಟೀ ಸೇವನೆಯ ಪ್ರಯೋಜನಗಳು
- ಒಣದ್ರಾಕ್ಷಿ ಟೀ ಸೇವನೆಯು ದೇಹಕ್ಕೆ ಅವಶ್ಯಕವಾದ ಪೋಷಕಾಂಶಗಳನ್ನು ದೊರಕಿಸಿ, ದೇಹಕ್ಕೆ ಹೊಸ ಪುಷ್ಠಿ ಹಾಗೂ ಚೈತನ್ಯವನ್ನು ಒದಗಿಸುತ್ತದೆ.
- ಒಣದ್ರಾಕ್ಷಿ ಟೀಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯು ಸುಲಭವಾಗುತ್ತದೆ. ಹಾಗೆಯೇ ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನು ದೂರಗೊಳಿಸುತ್ತದೆ.
- ಮೇಲೆ ಹೇಳಿದಂತೆ ಗ್ಯಾಸ್ಟ್ರಿಕ್ ಸಮಸ್ಯೆಗಳ ನಿವಾರಣೆಗೆ ಒಣದ್ರಾಕ್ಷಿ ಟೀ ಅತಿ ಉತ್ತಮವಾಗಿದ್ದು, ತ್ವರಿತವಾಗಿ ಪರಿಹಾರವನ್ನು ನೀಡುತ್ತದೆ.
- ಜ್ವರದ ಸಮಯದಲ್ಲಿನ ಬಾಯಾರಿಕೆಯನ್ನು ನಿವಾರಿಸಲು ನಾವು ಒಣದ್ರಾಕ್ಷಿ ಟೀಯನ್ನು ಸೇವಿಸುವುದು ಉತ್ತಮವಾಗಿದೆ.
- ರಕ್ತಹೀನತೆಯ ಸಮಸ್ಯೆಗಳನ್ನು ಹೊಂದಿರುವವರು ಕೂಡ ರಕ್ತ ವೃದ್ಧಿಗೆ ಒಣದ್ರಾಕ್ಷಿ ಟೀಯನ್ನು ಸೇವಿಸಿವುದು ಉತ್ತಮವಾಗಿದೆ.
- ಒಣದ್ರಾಕ್ಷಿ ಟೀಯ ಸೇವನೆಯು ಆರೋಗ್ಯವರ್ಧಕವಾಗಿದ್ದು, ಅನೇಕ ಸಮಸ್ಯೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನಮಗೆ ದೈಹಿಕವಾಗಿ ನೀಡುತ್ತದೆ.
ಒಣದ್ರಾಕ್ಷಿಯ ಅನೇಕ ಮಾಹಿತಿಗಳನ್ನು ನಾವು ಅರಿತಿದ್ದೇವೆ. ಇಷ್ಟೇ ಅಲ್ಲದೇ ಮಧುಮೇಹಿಗಳು ಕೂಡ ಒಣದ್ರಾಕ್ಷಿಯನ್ನು ನೆನೆಸಿ ಸೇವಿಸುವುದು ಉತ್ತಮವಾಗಿದೆ. ಅಷ್ಟೇ ಅಲ್ಲದೇ ಸಣ್ಣ ಮಕ್ಕಳಿಗೆ ಒಣದ್ರಾಕ್ಷಿಯ ರಸವನ್ನು ನೀಡುವುದರಿಂದ ಮಕ್ಕಳ ಬೆಳವಣಿಗೆ ಹಾಗೂ ಉತ್ತಮ ಆರೋಗ್ಯಕ್ಕೆ ಉಪಯುಕ್ತವಾಗಿರುತ್ತದೆ. ನರಗಳ ಅರೋಗ್ಯಕ್ಕೂ ಕೂಡ ಒಣದ್ರಾಕ್ಷಿ ಸೇವನೆಯು ಉತ್ತಮವಾಗಿದೆ. ಹೀಗೆ ಒಣದ್ರಾಕ್ಷಿಯು ಅನೇಕ ಅರೋಗ್ಯವರ್ಧಕ ಗುಣಗಳನ್ನು ಹೊಂದಿದೆ. ಒಣದ್ರಾಕ್ಷಿಯು ಮನೆಮದ್ದಿಗೆ ಮಾತ್ರವಲ್ಲದೆ ಅಡುಗೆಯಲ್ಲೂ ಕೂಡ ಹೆಚ್ಚಾಗಿ ಬಳಕೆಯಾಗುತ್ತದೆ. ಎಲ್ಲಾ ರೀತಿಯ ಸಿಹಿ ಪದಾರ್ಥಗಳಲ್ಲಿ ಹೆಚ್ಚಾಗಿ ಒಣದ್ರಾಕ್ಷಿಯನ್ನು ಬಳಸುತ್ತಾರೆ. ತುಪ್ಪದಲ್ಲಿ ಹುರಿದ ಒಣದ್ರಾಕ್ಷಿಯನ್ನು ಪಾಯಸಕ್ಕೆ ಸೇರಿಸಿದರೆ, ಆಹಾ!! ಅದರ ರುಚಿಯೇ ಬೇರೆ!, ಇನ್ನೂ ಅನೇಕ ಐಸ್ ಕ್ರೀಮ್, ಜ್ಯೂಸ್, ಕೇಕ್ ಗಳಲ್ಲಿ ಒಣದ್ರಾಕ್ಷಿಯ ಬಳಕೆ ಇದ್ದೇ ಇರುತ್ತದೆ.
ಇಂದಿನ ಲೇಖನದಲ್ಲಿ ನಾವು ಒಣದ್ರಾಕ್ಷಿಯ ಬಗೆಗಿನ ಹಲವು ಮಾಹಿತಿಗಳನ್ನು ಅರಿತಿದ್ದೇವೆ. ಒಮ್ಮೆ ಓದಿ, ತಿಳಿದು ಒಣದ್ರಾಕ್ಷಿಯ ಆರೋಗ್ಯಕರ ಉಪಯೋಗಗಳನ್ನು ಪಡೆದುಕೊಳ್ಳಿರಿ ಎಂಬುದೇ ಈ ಲೇಖನದ ಉದ್ದೇಶವಾಗಿದೆ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.