
ಬಿಳಿಯ ಬಣ್ಣದ, ಹಲವು ಎಸಳುಗಳು ಒಟ್ಟಿಗೆ ಹುಟ್ಟಿ ಬೆಳೆಯುವ ಬೆಳ್ಳುಳ್ಳಿ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ!! ಅನೇಕ ದೇಶಗಳಲ್ಲಿ ಅನೇಕ ರೀತಿಯಲ್ಲಿ ಕರೆಸಿಕೊಂಡು ಪ್ರಖ್ಯಾತವಾಗಿರುವ ಬೆಳ್ಳುಳ್ಳಿಯು ಎಲ್ಲಾ ರೀತಿಯ ಅಡುಗೆಗಳಲ್ಲಿ ಬಳಕೆಯಾಗುತ್ತದೆ. ಅನೇಕ ಮನೆಮದ್ದಗಳನ್ನು ತಯಾರಿಸಲು ಕೂಡ ಬೆಳ್ಳುಳ್ಳಿ ಸಹಾಯಕವಾಗಿದೆ. ಅದಕ್ಕೆ ಆಯುರ್ವೇದದಲ್ಲಿ ಕೂಡ ಬೆಳ್ಳುಳ್ಳಿಗೆ ವಿಶೇಷ ಸ್ಥಾನವಿದೆ. ಇಂತಹ ಬೆಳ್ಳುಳ್ಳಿಯ ವೈಜ್ಞಾನಿಕ ವಿಚಾರಗಳು ಹಾಗೂ ಆರೋಗ್ಯಕರ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ನಾವು ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ವಿಶ್ಲೇಷಿಸೋಣ.
ಕೆಲವು ವೈಜ್ಞಾನಿಕ ವಿಚಾರಗಳು
ವೈಜ್ಞಾನಿಕ ಹೆಸರು – ಅಲಿಯಮ್ ಸ್ಯಾಟಿವಮ್ (Allium Sativum)
ಆಂಗ್ಲ ಹೆಸರು – ಗಾರ್ಲಿಕ್ (Garlic)
ಬೆಳ್ಳುಳಿಯು ದೇಹವನ್ನು ಬೆಚ್ಚಗಿಡಲು ಅಂದರೆ ದೇಹದ ಉಷ್ಣವನ್ನು ಕಾಪಾಡಲು ಬಲು ಉತ್ತಮ ಆಹಾರವಾಗಿದೆ. ಇದು ದೇಹದ ಶುದ್ಧಿಕರಣ ಅಂಗಗಳನ್ನು ಅರೋಗ್ಯವಾಗಿರಿಸಲು ಉಪಯುಕ್ತವಾಗಿದೆ. ಬೆಳ್ಳುಳ್ಳಿಯಲ್ಲಿ ಎಲೀಲ್ ಸಲ್ಫಯಿಡ್ ಎಂಬ ಅಂಶವಿದ್ದು, ಇದು ದೇಹದಲ್ಲಿನ ಕ್ರಿಮಿಗಳ ವಿರುದ್ಧ ಹೊರಡುವ ಸಾಮರ್ಥ್ಯ ನೀಡುವ ಕ್ರಿಮಿನಾಶಕವಾಗಿದೆ. ಜೊತೆಗೆ ಕ್ಯಾಲ್ಸಿಯಂ, ರಂಜಕ, ಪಿಷ್ಠ, ಸಾರಜನಕ, ಮೇದಸ್ಸು ಹಾಗೂ ವಿಟಮಿನ್ ಸಿ ಇದ್ದು, ಅರೋಗ್ಯವರ್ಧಕವಾಗಿದೆ.
ಬೆಳ್ಳುಳ್ಳಿಯ ಕೆಲವು ಆರೋಗ್ಯಕರ ಮನೆಮದ್ದುಗಳು
ಕೀಲುಗಳಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಬೆಳ್ಳುಳಿಯ ಪರಿಹಾರಗಳು
- ವಾತ ಸಂಬಂಧಿ ಸಮಸ್ಯೆಗಳಿಗೆ ಬೆಳ್ಳುಳ್ಳಿ ಅತಿ ಉತ್ತಮವಾಗಿದ್ದು, ನಿತ್ಯ ಬೆಳ್ಳುಳ್ಳಿ ಎಸಳನ್ನು ತಿನ್ನುವುದು ಅತಿ ಉತ್ತಮವಾಗಿದೆ. ಹಾಗೆಯೇ ಬೆಳ್ಳುಳಿಯ ಎಸಳನ್ನು ತುಪ್ಪಡೊಡನೆ ಅರೆದು ಸ್ವೀಕರಿಸಿದರೆ ವಾತಕ್ಕೆ ಸಂಬಂಧಿಸಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ.
- ವಾತ ಸಂಬಂಧಿ ಸಮಸ್ಯೆಗಳಿಗೆ ಉತ್ತಮವಾಗಿರುವ ಬೆಳ್ಳುಳ್ಳಿ ಮಾತ್ರೆ, ಈ ಮಾತ್ರೆಯನ್ನು ತಯಾರಿಸಲು ಬೆಳ್ಳುಳ್ಳಿ 50 ಗ್ರಾಂ, ಕಪ್ಪು ಉಪ್ಪು 12 ಗ್ರಾಂ, ಜೀರಿಗೆ 12 ಗ್ರಾಂ, ಶುಂಠಿ 12 ಗ್ರಾಂ, ಕರಿಮೆಣಸು 12 ಗ್ರಾಂ, ಹಿಪ್ಪಲಿ 12 ಗ್ರಾಂ, ಹುರಿದ ಹಿಂಗು, ಸೈಂಧವ ಲವಣ 12 ಗ್ರಾಂ ಎಲ್ಲವನ್ನು ಸೇರಿಸಿ ಚೆನ್ನಾಗಿ ಅರೆಯಬೇಕು. ಚೆನ್ನಾಗಿ ಅರೆದುಕೊಂಡು ಸಣ್ಣ ಮಾತ್ರೆಗಳಾಗಿ ಮಾಡಬೇಕು. ದಿನಕ್ಕೆ ಎರಡು ಬಾರಿ ಎರಡು ಮಾತ್ರೆ ಸ್ವೀಕರಿಸುವುದರಿಂದ ವಾತ ಸಮಸ್ಯೆಯು ಬಹಳ ಬೇಗ ಕಡಿಮೆಯಾಗುತ್ತದೆ.
- ಕೀಲು ನೋವಿಗೂ ಉತ್ತಮ ಪರಿಹಾರವನ್ನು ಬೆಳ್ಳುಳ್ಳಿ ನೀಡುತ್ತದೆ. ಬೆಳ್ಳುಳ್ಳಿ 6 ಎಸಳು, 2 ಇಂಚು ಶುಂಠಿ ಹಾಗೂ ಒಂದು ಮುಷ್ಠಿ ಲಕ್ಕಿ ಸೊಪ್ಪನ್ನು ಸೇರಿಸಿ, ನೀರಿನಲ್ಲಿ ಕುದಿಸಬೇಕು. ನೀರು ಅರ್ಧದಷ್ಟು ಇಂಗಿದ ಮೇಲೆ ಒಲೆಯನ್ನು ಆರಿಸಿ, ಶೋಧಿಸಿ ಕುಡಿಯಬೇಕು. ಈ ಕಷಾಯವನ್ನು ಕುಡಿಯುವುದರಿಂದ ಕೀಲು ನೋವು ಬಹಳ ಬೇಗ ಕಡಿಮೆಯಾಗುತ್ತದೆ. ಇದು ಅತ್ಯಂತ ಪರಿಣಾಮಕಾರಿ ಕಷಾಯ.
- ದೇಹದಲ್ಲಿ ಲಕ್ವದಂತಹ ಸಮಸ್ಯೆಗಳ ಸೂಚನೆಗಳು ಕಂಡುಬಂದರೆ ಪ್ರತಿದಿನ ರಾತ್ರಿ ಸಮಯದಲ್ಲಿ ಮಲಗುವಾಗ ಅರ್ಧ ಲೋಟ ಹಾಲು ಹಾಗೂ ಅರ್ಧ ಲೋಟ ನೀರನ್ನು ಬೆರೆಸಿ, ಐದು ಎಸಳು ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಹಾಲಿಗೆ ಹಾಕಿ ಸಣ್ಣ ಬೆಂಕಿಯಲ್ಲಿ ಕುದಿಸಬೇಕು. ನಂತರ ಶೋಧಿಸಿಕೊಂಡು ಕುಡಿಯಬೇಕು. ಇದು ಲಕ್ವದ ನಿರ್ಮೂಲನೆಗೆ ಅತಿ ಉತ್ತಮವಾಗಿದೆ.
ಕಿವಿಯ ನೋವು ಹಾಗೂ ಅದರ ಉಪಶಮನಕ್ಕೆ ಬೆಳ್ಳುಳ್ಳಿಯ ಪರಿಹಾರಗಳು
- ಕಿವಿಯ ನೋವಿಗೆ ಬೆಳ್ಳುಳ್ಳಿ ಉತ್ತಮ ಮದ್ದಾಗಿದೆ. ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿಕೊಂಡು ರಸವನ್ನು ಹಿಂಡಿಕೊಳ್ಳಬೇಕು. ಈ ರಸಕ್ಕೆ ಸೈಂಧವ ಲವಣವನ್ನು ಬೆರೆಸಿ, ನೋವಿದ್ದ ಕಿವಿಗೆ ಎರಡು ಹನಿಗಳನ್ನು ಬಿಡುವುದರಿಂದ ಕಿವಿಯ ನೋವು ತ್ವರಿತವಾಗಿ ಕಡಿಮೆಯಾಗುತ್ತದೆ.
- ಕಿವಿ ನೋವಿಗೆ ಸ್ವಲ್ಪ ತೆಂಗಿನ ಎಣ್ಣೆಯಲ್ಲಿ ಒಂದು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ ಸ್ವಲ್ಪ ಬಿಸಿ ಮಾಡಿ, ತಣಿದ ನಂತರ ಕಿವಿಗೆ ಎರಡು ಹನಿ ಹಾಕುವುದರಿಂದ ಕಿವಿ ನೋವು ಕಡಿಮೆಯಾಗುತ್ತದೆ.
- ಕಿವಿಯು ಮಂದವಾಗಿ ಕೇಳುತ್ತಿದ್ದರೆ ಬೆಳ್ಳುಳ್ಳಿಯ ಈ ಪರಿಹಾರ ಆಗತಾನೆ ಪ್ರಾರಂಭವಾಗುತ್ತಿರುವ ಕಿವುಡುತನಕ್ಕೆ ಉತ್ತಮ ಪರಿಹಾರವಾಗುತ್ತದೆ. ಶುದ್ಧ ಎಳ್ಳೆಣ್ಣೆಯಲ್ಲಿ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ ಕುದಿಸಬೇಕು. ಬೆಳ್ಳುಳ್ಳಿಯು ಕಪ್ಪಾಗುವ ತನಕ ಕುದಿಸಿ ಓಲೆ ಆರಿಸಬೇಕು. ನಂತರ ಶೋಧಿಸಿಕೊಂಡು ಪ್ರತಿದಿನ ಕಿವಿಗೆ ಎರಡು ಹನಿ ಹಾಕಿದರೆ, ಕಿವುಡುತನ ಕಡಿಮೆಯಾಗಿ, ಕೇಳುವಿಕೆ ಸ್ಪಷ್ಟವಾಗುತ್ತದೆ.
- ಕಿವಿಯ ನೋವಿಗೆ ಬೆಳ್ಳುಳ್ಳಿಯ ಇನ್ನೊಂದು ಅತ್ಯುತ್ತಮ ಮದ್ದು ಎಂದರೆ ಬೆಳ್ಳುಳ್ಳಿ, ಲಕ್ಕಿಸೊಪ್ಪು ಹಾಗೂ ಶುಂಠಿ ಇವು ಮೂರನ್ನು ಜಜ್ಜಿಕೊಂಡು, ನೀರಿನಲ್ಲಿ ಕುದಿಸಿ ಕಷಾಯ ಮಾಡಿಕೊಂಡು ಕುಡಿಯಬೇಕು. ಇದು ಕಿವಿ ನೋವಿಗೆ ಉತ್ತಮ ಟಾನಿಕ್ ಆಗಿದೆ. ಇದಲ್ಲದೆ ಬೆಳ್ಳುಳ್ಳಿಯ ಒಂದು ಎಸಳನ್ನು ಹತ್ತಿಯಲ್ಲಿ ಸುತ್ತಿ ಕಿವಿಯ ಮೇಲೆ ಇಟ್ಟರು ಸಾಕು ಕಿವಿ ನೋವು ಬೇಗನೆ ಕಡಿಮೆಯಾಗುತ್ತದೆ.
ಕೂದಲು ಉದರುವಿಕೆ ಸಮಸ್ಯೆಗೆ ಬೆಳ್ಳುಳ್ಳಿಯಿಂದ ಸಿಗುವ ಪರಿಹಾರಗಳು
- ಕೂದಲು ಜಾಸ್ತಿ ಉದುರುತ್ತಿದ್ದರೆ, ಬೆಳ್ಳುಳ್ಳಿಯನ್ನು ಒಂದೆಲಗದ ಸೊಪ್ಪು ಮತ್ತು ಸೈಂಧವ ಲವಣದ ಜೊತೆ ಸೇರಿಸಿ ಚೆನ್ನಾಗಿ ಅರೆದು ಕೂದಲಿನ ಬುಡಕ್ಕೆ ಹಚ್ಚಬೇಕು. ಇದರಿಂದ ಕೂದಲು ಉದುರುವಿಕೆ ಸಮಸ್ಯೆಗಳು ಕಡಿಮೆಯಾಗುತ್ತದೆ.
ನೆಗಡಿಗೆ ಬೆಳ್ಳುಳ್ಳಿಯ ಸಿಪ್ಪೆಗಳಿಂದ ಸಿಗುವ ಪರಿಹಾರಗಳು
- ಬೆಳ್ಳುಳ್ಳಿಯ ಸಿಪ್ಪೆಗಳನ್ನು ಕೆಂಡದ ಮೇಲೆ ಹಾಕಿ ಅದರ ಹೊಗೆಯನ್ನು ತೆಗೆದುಕೊಂಡರೆ ಕಟ್ಟಿದ ಮೂಗಿನ ಸಮಸ್ಯೆಗಳು ಕಡಿಮೆಯಾಗಿ, ಉಸಿರಾಟ ಸುಲಭವಾಗುತ್ತದೆ. ಹಾಗೆಯೇ ನೆಗಡಿ ಕೂಡ ಕಡಿಮೆಯಾಗುತ್ತದೆ.
- ಬೆಳ್ಳುಳ್ಳಿಯನ್ನು ನಿತ್ಯ ಬೆಳಿಗ್ಗೆ ಅಗೆದು ತಿನ್ನುವುದು ಅತಿ ಉತ್ತಮವಾಗಿದ್ದು ನೆಗಡಿ, ಕೆಮ್ಮು ಇವುಗಳನ್ನು ಬರದಂತೆ ನೋಡಿಕೊಳ್ಳುತ್ತದೆ.
ಬಾಣಂತಿಯರ ಆರೋಗ್ಯ ರಕ್ಷಣೆಯಲ್ಲಿ ಬೆಳ್ಳುಳಿಯ ಪಾತ್ರ
- ಬಾಣಂತಿಯರ ಮೈ ಹಸಿಯಾಗಿರುವುದರಿಂದ, ಅವರನ್ನು ಬೆಚ್ಚಗಿಡಿಸುವುದು ಅವಶ್ಯಕವಾಗಿದೆ. ಅಂತಹುದರಲ್ಲಿ ಬೆಳ್ಳುಳ್ಳಿ ಉತ್ತಮ ಆಹಾರವಾಗಿದೆ. ಬೆಳ್ಳುಳ್ಳಿಯನ್ನು ಆಹಾರದಲ್ಲಿ ಬಳಸುವುದು ಬಲು ಉತ್ತಮವಾಗಿದೆ. ಅದು ದೇಹವನ್ನು ಬೆಚ್ಚಗಿಡಲು ಉತ್ತಮವಾಗುತ್ತದೆ. ಜೊತೆಗೆ ಕಿವಿಯ ಅರೋಗ್ಯಕ್ಕೂ ಉತ್ತಮವಾಗಿದೆ. ಬೆಳ್ಳುಳ್ಳಿಯಿಂದ ತಯಾರಿಸುವ ಚಟ್ನಿಪುಡಿಗಳು, ಬೆಳ್ಳುಳ್ಳಿಯ ಸಾಂಬಾರ್ ಇನ್ನೂ ಅನೇಕ ಖಾದ್ಯಗಳನ್ನು ತಯಾರಿಸಬಹುದಾಗಿದೆ.
ಹೆಣ್ಣು ಮಕ್ಕಳ ಗರ್ಭಕೋಶದ ಆರೋಗ್ಯಕ್ಕೆ ಬೆಳ್ಳುಳ್ಳಿಯ ಉತ್ತಮ ಪರಿಹಾರಗಳು
- ಗರ್ಭಕೋಶದ ಸಂಪೂರ್ಣ ಉತ್ತಮ ಆರೋಗ್ಯಕ್ಕೆ ಹಾಗೂ ಗರ್ಭ ನಿರೋಧಕ ಶಕ್ತಿಯನ್ನು ವೃದ್ಧಿಸಲು ಬೆಳ್ಳುಳ್ಳಿಯನ್ನು ನಲವತ್ತಾ ಎಂಟು ದಿನಗಳ ಕಾಲ ಮದ್ದಿನ ರೂಪದಲ್ಲಿ ಸೇವಿಸುವುದು ಅತಿ ಉತ್ತಮವಾಗಿದೆ. ಇದು ಗರ್ಭದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
- ಹೆಣ್ಣು ಮಕ್ಕಳ ಋತು ಚಕ್ರವು ನಿಯಮಿತವಾಗಿ ಆಗದ್ದಿದ್ದರೆ, ಅದರ ದೋಷದಿಂದ ಗರ್ಭಕೋಷದಲ್ಲಿ ನೋವು ಉಂಟಾದರೆ ಬೆಳ್ಳುಳ್ಳಿಯನ್ನು ಒಂದು ಲೋಟ ನೀರಿನಲ್ಲಿ ಬೇಯಿಸಿಕೊಂಡು, ಅದನ್ನು ಸೋಸಿಕೊಂಡು ದಿನಕ್ಕೆ ಮೂರು ಬಾರಿ ಈ ಬೆಳ್ಳುಳ್ಳಿ ನೀರನ್ನು ಕುಡಿಯಬೇಕು. ಇದು ಗರ್ಭಕೋಷದ ನೋವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.
ಹುಣ್ಣು, ಹುಳ ಕಡ್ಡಿ ಹಾಗೂ ಜಂತು ಹುಳಗಳ ನಿವಾರಣೆಯಲ್ಲಿ ಬೆಳ್ಳುಳ್ಳಿಯ ಪಾತ್ರ
- ಹುಣ್ಣು ಜಾಸ್ತಿಯಾಗಿ ಕೊಳೆಯುವ ಪರಿಸ್ಥಿತಿ ಇದ್ದರೂ ಸಹ ಬೆಳ್ಳುಳ್ಳಿ ಉತ್ತಮ ಪರಿಹಾರವನ್ನು ನೀಡುತ್ತದೆ. ಬೆಳ್ಳುಳ್ಳಿಯನ್ನು ಬೆಣ್ಣೆಯೊಂದಿಗೆ ಬೆರೆಸಿ ಜಜ್ಜಿಕೊಂಡು ಮಿಶ್ರಣ ತಯಾರಿಸಿಕೊಳ್ಳಬೇಕು. ಈ ಮಿಶ್ರಣವನ್ನು ವಾಸನೆ ಬರುವ ಹುಣ್ಣಿರುವ ಜಾಗದಲ್ಲಿ ಹಚ್ಚಬೇಕು. ಕೆಲವು ಸಮಯದ ನಂತರ ವಾಸನೆ ನಿವಾರಣೆಯಾಗಿ ಹುಣ್ಣು ಕೂಡ ಕಡಿಮೆಯಾಗುತ್ತದೆ.
- ಹುಳಕಡ್ಡಿ ಸಮಸ್ಯೆಗೆ ಬೆಳ್ಳುಳ್ಳಿ ಉತ್ತಮ ಪರಿಹಾರವನ್ನು ನೀಡುತ್ತದೆ. ತುಳಸಿ ಎಲೆಗಳೊಂದಿಗೆ ಬೆಳ್ಳುಳ್ಳಿಯ 2 ಎಸಳನ್ನು ಸೇರಿಸಿ ಜಜ್ಜಿಕೊಂಡು ಹುಳಕಡ್ಡಿ ಇರುವ ಜಾಗದಲ್ಲಿ ಹಚ್ಚಬೇಕು. ಇದನ್ನು ಪ್ರತಿದಿನ ಕಡಿಮೆಯಾಗುವವರೆಗೂ ಮಾಡಿದರೆ ಉತ್ತಮವಾಗಿರುತ್ತದೆ.
- ಹೊಟ್ಟೆಯಲ್ಲಿ ಜಂತು ಹುಳಗಳ ಸಮಸ್ಯೆಯಿಂದ ಹೊಟ್ಟೆ ನೋವು ಬರುತ್ತಿದ್ದರೆ 3 ಎಸಳು ಬೆಳ್ಳುಳ್ಳಿಯನ್ನು ಸುಟ್ಟು, ತಿನ್ನಬೇಕು. ಇದು ಜಂತುಗಳ ಉಪದ್ರವವನ್ನು ಕಡಿಮೆ ಮಾಡಿಸುತ್ತದೆ. ಮಕ್ಕಳಿಗೂ ಈ ಮದ್ದನ್ನು ಮಾಡಿ ಕೊಡಬಹುದಾಗಿದೆ.
ದಮ್ಮು, ಉಬ್ಬಸ ಸಮಸ್ಯೆಗಳಿಗೆ ಬೆಳ್ಳುಳ್ಳಿಯ ಉತ್ತಮ ಪರಿಹಾರಗಳು
- ಬೆಳ್ಳುಳ್ಳಿ ಎಲ್ಲಾ ಸಮಸ್ಯೆಗಳಿಗೂ ಉತ್ತಮ ಪರಿಹಾರವನ್ನು ನೀಡುತ್ತದೆ, ಹಾಗೆಯೇ ಉಬ್ಬಸಕ್ಕೂ ಕೂಡ. ಉಬ್ಬಸ ಇರುವವರು ನಾಲ್ಕು ಎಸಳು ಬೆಳ್ಳುಳ್ಳಿಯನ್ನು ಹಾಲಿನಲ್ಲಿ ಬೇಯಿಸಿಕೊಳ್ಳಬೇಕು. ಈ ಹಾಲಿನಲ್ಲಿ ಬೇಯಿಸಿದ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಉಬ್ಬಸ ನಿಯಂತ್ರಣದಲ್ಲಿ ಇರುತ್ತದೆ.
ಸುಲಭ ಜೀರ್ಣಕ್ರಿಯೆಯಲ್ಲಿ ಬೆಳ್ಳುಳ್ಳಿಯ ಉಪಯೋಗ
- ಹೊಟ್ಟೆಯಲ್ಲಿನ ವಾಯು ಸಮಸ್ಯೆ, ಹೊಟ್ಟೆ ಉಬ್ಬರ ಹಾಗೆಯೇ ಆಜೀರ್ಣ ಸಮಸ್ಯೆಗಳಿಗೂ ಬೆಳ್ಳುಳ್ಳಿ ಉತ್ತಮ ಪರಿಹಾರವಾಗಿದೆ. ಪ್ರತಿ ಅಡುಗೆಯಲ್ಲಿ ಸ್ವಲ್ಪ ಬೆಳ್ಳುಳ್ಳಿ ಬಳಸುವುದರಿಂದ ಅದು ವಾಯು ನಿವಾರಕವಾಗಿ ಕೂಡ ಕೆಲಸ ಮಾಡುತ್ತದೆ. ಬೆಳ್ಳುಳ್ಳಿಯನ್ನು ಕೆಂಡದಲ್ಲಿ ಸುಟ್ಟು ತಿನ್ನುವುದರಿಂದ ಆಜೀರ್ಣ, ಹೊಟ್ಟೆ ಉಬ್ಬರದ ಸಮಸ್ಯೆ ತ್ವರಿತವಾಗಿ ಕಡಿಮೆಯಾಗುತ್ತದೆ.
ಬೆಳ್ಳುಳ್ಳಿಯು ಮೂರ್ಛೆ ಹೋಗುವ ಸಮಸ್ಯೆಗೂ ಉತ್ತಮ ಪರಿಹಾರವನ್ನು ನೀಡುತ್ತದೆ.
- ಮೂರ್ಛೆ ರೋಗವನ್ನು ಕಡಿಮೆಗೊಳಿಸಲು ಬೆಳ್ಳುಳ್ಳಿಯನ್ನು ಕರಿಎಳ್ಳಿನ ಜೊತೆ ಸೇರಿಸಿ ಬೆಳಿಗ್ಗೆ ಬ್ರಾಹ್ಮೀ ಕಾಲದಲ್ಲಿ, ಸೂರ್ಯೋದಯಕ್ಕೆ ಮೊದಲೇ ಸ್ವೀಕರಿಸಬೇಕು. ಇದನ್ನು ಒಂದು ತಿಂಗಳುಗಳು ಸತತವಾಗಿ ಮಾಡಿದರೆ ಮೂರ್ಛೆ ರೋಗವು ಶೀಘ್ರವಾಗಿ ನಿಯಂತ್ರಣಕ್ಕೆ ಬಂದು ಕಡಿಮೆಯಾಗುತ್ತದೆ.
ಇನ್ನೂ ಬೆಳ್ಳುಳ್ಳಿಯ ವಿಶೇಷ ಗುಣವೆಂದರೆ ಬೆಳ್ಳುಳ್ಳಿಯನ್ನು ದೇಹದ ಯಾವುದೇ ಭಾಗದಲ್ಲಿ ಚರ್ಮದ ಮೇಲೆ ಲೇಪಿಸಿದರೆ ಸಾಕು ಅದು ಇಡೀ ದೇಹಕ್ಕೆ ತನ್ನ ಅಂಶವನ್ನು ಹಬ್ಬಿ ಅನೇಕ ಸಮಸ್ಯೆಗಳಿಗೆ ತ್ವರಿತ ಪರಿಣಾಮವನ್ನು ಬೀರುತ್ತದೆ. ಚರ್ಮವು ಬೇಗನೆ ಬೆಳ್ಳುಳ್ಳಿಯ ಅಂಶವನ್ನು ತನ್ನೊಳಗೆ ಹೀರಿಕೊಳ್ಳುತ್ತದೆ. ದೇಹದ ಯಾವುದೇ ಭಾಗದಲ್ಲಿ ನೋವಿದ್ದರೂ ಬೆಳ್ಳುಳ್ಳಿಯನ್ನು ಬಳಸುವುದರಿಂದ ಎಲ್ಲಾ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಸತತವಾಗಿ ಮಾಡುವುದು ಬಹು ಮುಖ್ಯವಾಗಿರುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಎರಡು ಬೆಳ್ಳುಳ್ಳಿ ಸೇವನೆ ಮಧುಮೇಹಕ್ಕೂ ಉತ್ತಮ ಮದ್ದಾಗುತ್ತದೆ. ಇದು ಅರೋಗ್ಯವರ್ಧಕವು ಕೂಡ ಹೌದು. ಹಾಗೆಯೇ ಹೊಟ್ಟೆಯಲ್ಲಿನ ವಾಯುವಿನ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡಿಸುತ್ತದೆ. ಮುಖ್ಯವಾಗಿ ಇನ್ನೊಂದು ವಿಷಯವೆಂದರೆ ಬೆಳ್ಳುಳ್ಳಿಯು ತೂಕ ಇಳಿಸಲು ಕೂಡ ಅತಿ ಉತ್ತಮವಾಗಿದೆ. ನಿತ್ಯ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಉಪಯೋಗಿಸುವುದು ತೂಕ ಕಡಿಮೆಗೊಳಿಸಲು ಒಳ್ಳೆಯದು.
ಆಯುರ್ ವೃದ್ಧಿ ಎಂದೇ ಹೇಳಬಹುದಾದ ಬೆಳ್ಳುಳ್ಳಿಯ ಅನೇಕ ಉಪಯೋಗಗಳನ್ನು ನಾವು ಇಂದು ಈ ಲೇಖನದಲ್ಲಿ ತಿಳಿದ್ದಿದ್ದೇವೆ. ಬೆಳ್ಳುಳ್ಳಿ ಹೇಗೇ ಔಷಧಿಗೆ ಉತ್ತಮವೋ ಹಾಗೆಯೇ ಅಡುಗೆಯ ಬಳಕೆಯಲ್ಲೂ ಅಗ್ರಗಣ್ಯವಾಗಿದೆ. ಒಂದು ಬೆಳ್ಳುಳ್ಳಿಯ ಎಸಳು ಇಡೀ ಆಹಾರದ ರುಚಿಯನ್ನು ಬದಲಿಸಿ, ರುಚಿಯನ್ನು ಇಮ್ಮಡಿಗೊಳಿಸುತ್ತದೆ. ಇದು ಅರೋಗ್ಯಕ್ಕೂ ಉತ್ತಮವಾಗಿರುವುದರಿಂದ ಅಡುಗೆಯಲ್ಲಿ ಬಳಸುವುದು ಅಗತ್ಯವಾಗಿದೆ. ಶುಂಠಿ ಮತ್ತು ಬೆಳ್ಳುಳ್ಳಿ ಉತ್ತಮ ಜೋಡಿಯೆಂದೆ ಹೇಳಬಹುದು. ಬೆಳ್ಳುಳ್ಳಿಯನ್ನು ಅಡುಗೆಯ ಒಗ್ಗರಣೆ, ಬೆಳ್ಳುಳ್ಳಿಯ ಚಟ್ನಿ, ಚಟ್ನಿ ಪುಡಿಗಳು, ಬೆಳ್ಳುಳ್ಳಿ ಉಪ್ಪಿನಕಾಯಿ ಹೀಗೆ ಇನ್ನೂ ಅನೇಕ ಆಹಾರ ಖಾದ್ಯಗಳಲ್ಲಿ ಬಳಸಲಾಗುತ್ತದೆ. ಇಂತಹ ಬೆಳ್ಳುಳ್ಳಿಯ ಅನೇಕ ಮನೆಮದ್ದುಗಳನ್ನು ಇಂದಿನ ಲೇಖನದಲ್ಲಿ ವಿಶ್ಲೇಶಿಸಲಾಗಿದೆ. ಒಮ್ಮೆ ಓದಿ, ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಿ ಎಂಬುದೊಂದು ಆಶಯ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.