
ಖರ್ಜೂರವು ಅತ್ಯಂತ ರುಚಿಯಾದ ಹಾಗೂ ಸಿಹಿಯಾದ ಆಹಾರ ಪದಾರ್ಥವಾಗಿದೆ. ಖರ್ಜೂರದ ಸೇವನೆಯು ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಖರ್ಜೂರವನ್ನು ನಾವು ಹಸಿಯಾಗಿ ಹಾಗೂ ಒಣಗಿಸಿ ಕೂಡ ತಿನ್ನಬಹುದು. ಹಸಿ ಖರ್ಜೂರ ಹಾಗೂ ಒಣ ಖರ್ಜೂರ ಎರಡು ಕೂಡ ತಿನ್ನಲು ರುಚಿಯಾಗಿರುತ್ತದೆ. ಇಂತಹ ಖರ್ಜೂರಗಳ ಪರಿಚಯ, ವೈಜ್ಞಾನಿಕ ವಿಚಾರಗಳು ಹಾಗೂ ಆರೋಗ್ಯವರ್ಧಕ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ವಿಶ್ಲೇಷಿಸೋಣ.
ಖರ್ಜೂರದ ಕೆಲವು ವೈಜ್ಞಾನಿಕ ವಿಚಾರಗಳು
ವೈಜ್ಞಾನಿಕ ಹೆಸರು – ಫೀನಿಕ್ಸ್ ಡಾಕ್ಟಿಲಿಫೆರಾ (Phoenix Dactylifera)
ಆಂಗ್ಲ ಹೆಸರು – ಡೇಟ್ಸ್ (Dates)
ಖರ್ಜೂರವು ಮುಖ್ಯವಾಗಿ ವಿಟಮಿನ್ ಕೆ, ವಿಟಮಿನ್ ಬಿ6, ಕಾರ್ಬೋಹೈಡ್ರೈಟ್ಸ್, ಪ್ರೊಟೀನ್, ಫೈಬರ್ ಹಾಗೂ ಖಾನಿಜಾಗಳಾದ ತಾಮ್ರ, ಕಬ್ಬಿಣ, ಸತು, ಕ್ಯಾಲ್ಸಿಯಂ, ಪೊಟ್ಯಾಸಿಯಂ, ಇನ್ನೂ ಅನೇಕ ಖನಿಜಗಳನ್ನು ಹೊಂದಿದೆ.
ಇಷ್ಟೆಲ್ಲ ಉತ್ತಮ ಅರೋಗ್ಯವರ್ಧಕ ಅಂಶಗಳನ್ನು ಒಳಗೊಂಡ ಖರ್ಜೂರದ ಸೇವನೆಯು ಆರೋಗ್ಯಕ್ಕೆ ಉತ್ತಮವಾಗಿದೆ. ಈಗ ನಾವು ಖರ್ಜೂರದ ಆರೋಗ್ಯಕರ ಮನೆಮದ್ದುಗಳ ಬಗ್ಗೆ ಅರಿಯೋಣ.
ಖರ್ಜೂರದ ಆರೋಗ್ಯಕರ ಮನೆಮದ್ದುಗಳು
ನರಗಳ ಉತ್ತಮ ಆರೋಗ್ಯಕ್ಕೆ ಕುಡಿಯಲೇ ಬೇಕಾದ ಖರ್ಜೂರದ ರಾಸಾಯನ
- ನರಗಳ ಆರೋಗ್ಯಕ್ಕೆ ಖರ್ಜೂರವು ಅತಿ ಉತ್ತಮವಾಗಿದೆ. ಖರ್ಜೂರದಿಂದ ತಯಾರಿಸುವ ರಸಾಯನವನ್ನು ಕುಡಿಯುವುದು ನರಗಳ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಈಗ ಖರ್ಜೂರದ ರಸಾಯನವನ್ನು ತಯಾರಿಸುವ ಬಗೆಯನ್ನು ಅರಿಯೋಣ. ಒಂದು ಮುಷ್ಠಿ ಖರ್ಜೂರವನ್ನು ರಾತ್ರಿಯೆ ಹಾಲಿನಲ್ಲಿ ನೆನೆಸಿ ಇಡಬೇಕು. ಮರುದಿನ ಬೆಳಿಗ್ಗೆ ಹಾಲಿನಲ್ಲಿ ನೆನೆಸಿದ ಖರ್ಜೂರವನ್ನು ಹಾಲಿನ ಸಮೇತ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ರುಬ್ಬಿಕೊಂಡ ಮಿಶ್ರಣಕ್ಕೆ ಸ್ವಲ್ಪ ಏಲಕ್ಕಿ ಪುಡಿ ಹಾಗೂ ಜೇನುತುಪ್ಪವನ್ನು ಸೇರಿಸಿಕೊಳ್ಳಬೇಕು. ಈ ತಯಾರಿಸಿದ ಖರ್ಜೂರದ ರಸಾಯನವನ್ನು ಬೆಳಿಗ್ಗೆ ಹಾಗೂ ರಾತ್ರಿ ಆಹಾರದ ನಂತರ ಒಂದು ಚಮಚ ಸೇವಿಸಬೇಕು. ಇದು ನರ ದೌರ್ಬಲ್ಯವನ್ನು ನಿವಾರಿಸುತ್ತದೆ, ಹಾಗೆಯೇ ರಕ್ತಹೀನತೆಯ ಸಮಸ್ಯೆಗಳು ಇದ್ದವರು ಇದನ್ನು ಸೇವಿಸುವುದರಿಂದ ರಕ್ತ ವೃದ್ಧಿಯಾಗುತ್ತದೆ. ಈ ಖರ್ಜೂರದ ರಸಾಯನವನ್ನು ಮಕ್ಕಳಿಗೆ ನೀಡುವುದರಿಂದ ಅವರ ಬೆಳವಣಿಗೆಯೂ ಕೂಡ ಉತ್ತಮವಾಗಿ ಆಗುತ್ತದೆ. ಈ ರಸಾಯನ ಆರೋಗ್ಯವರ್ಧಕವಾಗಿದ್ದು, ಇದರ ಸೇವನೆಯು ನಮ್ಮ ಸಮಸ್ಯೆಗಳಿಗೆ ಬಹಳ ಉತ್ತಮ ಫಲಿತಾಂಶವನ್ನು ನೀಡುತ್ತದೆ.
-> ಏಲಕ್ಕಿ ಬಗೆಗಿನ ಮಾಹಿತಿಗಳನ್ನು ಓದಿರಿ
-> ಜೇನುತುಪ್ಪದ ಬಗೆಗಿನ ಮಾಹಿತಿಗಳನ್ನು ಓದಿರಿ
ಮಧುಮೇಹಿಗಳು ಕೂಡ ಖರ್ಜೂರವನ್ನು ನಿರ್ಭಯವಾಗಿ ಸೇವಿಸಬಹುದು ಆದರೆ ಮಿತವಾಗಿ
- ಸಕ್ಕರೆ ಖಾಯಿಲೆ ಇದ್ದವರು ಸಿಹಿ ಪದಾರ್ಥಗಳನ್ನು ಸೇವಿಸುವುದು ನಿಶಿದ್ಧವಾಗಿದೆ. ಆದರೆ ಖರ್ಜೂರವನ್ನು ಯಾವುದೇ ರೀತಿಯ ಅಂಜಿಕೆ ಇಲ್ಲದೆ ಅಲ್ಪ ಪ್ರಮಾಣದಲ್ಲಿ ಸೇವಿಸಬಹುದು. ಖರ್ಜೂರದ ಶರಬತ್ತನ್ನು ಮಧುಮೇಹಿಗಳು ಸೇವಿಸಬಹುದು. ಖರ್ಜೂರದ ಶರಬತ್ತನ್ನು ತಯಾರಿಸುವ ವಿಧಾನವನ್ನು ನಾವೀಗ ಅರಿಯೋಣ. ಮೊದಲಿಗೆ ಅರ್ಧ ಕಿಲೋಗ್ರಾಮ್ ಖರ್ಜೂರವನ್ನು ಬೀಜವನ್ನು ತೆಗೆದುಕೊಂಡು, ನೀರಿನಿಂದ ಶುಚಿಗೊಳಿಸಬೇಕು. ನಂತರ ತೊಳೆದ ಖರ್ಜೂರಗಳನ್ನು ಜಜ್ಜಿಕೊಳ್ಳಬೇಕು. ಈಗ ಜಜ್ಜಿಕೊಂಡ ಖರ್ಜೂರಗಳನ್ನು ಒಂದು ಪಾತ್ರೆಗೆ ವರ್ಗಾಯಿಸಿಕೊಂಡು ಅದಕ್ಕೆ ಒಂದು ಲೀಟರ್ ನಷ್ಟು ನೀರನ್ನು ಸೇರಿಸಿಕೊಳ್ಳಬೇಕು. ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು. ಇಟ್ಟ ನೀರು ಅರ್ಧದಷ್ಟು ಇಂಗಿದ ಮೇಲೆ ಒಲೆಯನ್ನು ಆರಿಸಿಕೊಂಡು, ಸ್ವಲ್ಪ ತಣಿದ ನಂತರ ಖರ್ಜೂರವನ್ನು ಕಿವುಚಿಕೊಂಡು, ಶೋಧಿಸಿಕೊಳ್ಳಬೇಕು. ಈಗ ಶೋಧಿಸಿದ್ದನ್ನು ಮತ್ತೆ ಓಲೆಯ ಮೇಲಿಟ್ಟು ಕಾಯಿಸಿಕೊಳ್ಳಬೇಕು. ಚೆನ್ನಾಗಿ ಕುದಿ ಬಂದ ಮೇಲೆ ಒಲೆಯನ್ನು ಆರಿಸಬೇಕು. ಹಾಗೆಯೇ ಮಿಶ್ರಣವನ್ನು ತಣಿಸಿ ಒಂದು ಗಾಜಿನ ಪಾತ್ರೆಗೆ ಹಾಕಿ ಶೇಖರಿಸಿಕೊಳ್ಳಬೇಕು. ಅಲ್ಲಿಗೆ ಖರ್ಜೂರದ ಶರಬತ್ತು ಸಿದ್ದವಾಗುತ್ತದೆ. ಈ ಖರ್ಜೂರದ ಶರಬತ್ತನ್ನು ಮಧುಮೇಹಿಗಳು ನಿತ್ಯ ಎರಡು ಚಮಚ ಸೇವಿಸಬೇಕು. ಇದು ಮಧುಮೇಹಿಗಳಿಗೆ ಬೇಕಾದ ಸಕಲ ಪೋಷಕಾಂಶಗಳನ್ನು ಒದಗಿಸುತ್ತದೆ. ಇನ್ನೂ ಮಧುಮೇಹಿಗಳಿಗೆ ಅಷ್ಟೇ ಅಲ್ಲದೇ ಮಕ್ಕಳಿಗೆ ಒಂದು ಚಮಚ ಖರ್ಜೂರದ ಶರಬತ್ತನ್ನು ಹಾಲಿನಲ್ಲಿ ಬೆರೆಸಿ ಕುಡಿಸಬೇಕು. ಇದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಉತ್ತಮವಾಗಿದ್ದು, ರಕ್ತವೃದ್ಧಿಯಲ್ಲೂ ಕೂಡ ಸಹಾಯಕವಾಗಿದೆ.
ಉಷ್ಣದ ಕೆಮ್ಮಿನ ನಿವಾರಣೆಗೂ ಕೂಡ ಖರ್ಜೂರ ಉತ್ತಮವಾಗಿದೆ.
- ಉಷ್ಣದ ಕಾರಣದಿಂದ ಬರುವ ಕೆಮ್ಮನ್ನು ನಿವಾರಿಸಲು ಖರ್ಜೂರದ ಬೀಜವನ್ನು ತೆಗೆದು, ಹಿಪ್ಪಲಿ ಹಾಗೂ ಅತಿ ಮಧುರ ಇವು ಮೂರನ್ನು ಕುಟ್ಟಿ ಪುಡಿಮಾಡಿಕೊಳ್ಳಬೇಕು. ಈ ಪುಡಿಯನ್ನು 1/2 ಚಮಚ ತುಪ್ಪ ಹಾಗೂ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ, ಪ್ರತಿನಿತ್ಯ ಒಂದು ಚಮಚ ಸೇವಿಸಬೇಕು. ಇದು ಎಲ್ಲಾ ರೀತಿಯ ಕೆಮ್ಮಿಗೂ ಕೂಡ ಉತ್ತಮ ಪರಿಹಾರವನ್ನು ನೀಡುತ್ತದೆ.
ಮಲಬದ್ಧತೆ ಹಾಗೂ ಮೂಲವ್ಯಾಧಿ ಸಮಸ್ಯೆಗಳಿಗೂ ಖರ್ಜೂರ ಉತ್ತಮ ಪರಿಹಾರಗಳನ್ನು ನೀಡುತ್ತದೆ.
- ಒಣಖರ್ಜೂರ ಹಾಗೂ ಒಣದ್ರಾಕ್ಷಿ ಎರಡನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ಇಟ್ಟ ನೀರು ಅರ್ಧದಷ್ಟು ಇಂಗಿದ ನಂತರ ಶೋಧಿಸಿಕೊಳ್ಳಬೇಕು. ಈ ಕಷಾಯವನ್ನು ಪ್ರತಿದಿನ ಒಂದು ಸಲ, ಒಂದು ತಿಂಗಳು ಕುಡಿದರೆ ಮಲಬದ್ಧತೆ ಹಾಗೆಯೇ ಮೂಲವ್ಯಾಧಿ ಸಮಸ್ಯೆಗಳನ್ನು ನಾವು ನಿವಾರಿಸಿಕೊಳ್ಳಬಹುದು.
ಬೇದಿಯ ಸಮಸ್ಯೆಗಳನ್ನು ನಿವಾರಿಸಲು ಖರ್ಜೂರದ ಸೇವನೆಯು ಉತ್ತಮವಾಗಿದೆ
- ಅತಿಸಾರಕ್ಕೆ ಉತ್ತಮ ಪರಿಹಾರವನ್ನು ನಾವು ಖರ್ಜೂರದಿಂದ ಪಡೆದುಕೊಳ್ಳಬಹುದು. ಖರ್ಜೂರ ಹಾಗೂ ಜಾಯಿಕಾಯಿಯನ್ನು ಎರಡು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿಕೊಳ್ಳಬೇಕು. ಇನ್ನೊಂದೆಡೆ ವೀಳ್ಯದೆಲೆಯನ್ನು ಜಜ್ಜಿ ರಸವನ್ನು ಹಿಂಡಿಕೊಳ್ಳಬೇಕು. ತಯಾರಿಸಿದ ಪುಡಿಯನ್ನು ವೀಳ್ಯದೆಲೆಯ ರಸದ ಜೊತೆ ಬೆರೆಸಿ ಒಂದು ವಾರದ ಕಾಲ ಸತತವಾಗಿ ಸೇವಿಸಿದರೆ ಅತಿಸಾರದ ಸಮಸ್ಯೆಗಳು ಬೇಗನೆ ಗುಣವಾಗುತ್ತದೆ.
-> ವೀಳ್ಯದೆಲೆಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನಮ್ಮ ಲೇಖನಗಳನ್ನು ಓದಿರಿ
ಹೆಣ್ಣು ಮಕ್ಕಳ ಬಿಳಿ ಮುಟ್ಟಿನ ಸಮಸ್ಯೆಗಳಿಗೂ ಕೂಡ ಖರ್ಜೂರದ ಬೀಜಗಳು ಉತ್ತಮ ಪರಿಹಾರಗಳನ್ನು ನೀಡುತ್ತದೆ.
- ಮೊದಲಿಗೆ ಖರ್ಜೂರದ ಬೀಜಗಳನ್ನು ತೊಳೆದು ಒಣಗಿಸಿಕೊಳ್ಳಬೇಕು. ನಂತರ ಬೀಜಗಳನ್ನು ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ನಂತರ ಅಕ್ಕಿಯನ್ನು ತೊಳೆದ ನೀರಿನಲ್ಲಿ ಈ ಹುರಿದ ಮಿಶ್ರಣವನ್ನು ಒಂದು ಚಮಚ ಬೆರೆಸಿ ಸೇವಿಸಬೇಕು. ಇದು ಬಿಳಿ ಮುಟ್ಟಿನ ಸಮಸ್ಯೆಗಳನ್ನು ತ್ವರಿತವಾಗಿ ನಿವಾರಿಸುತ್ತದೆ, ಹಾಗೆಯೇ ಋತುಚಕ್ರದ ಸಮಯದಲ್ಲಿ ಬರಬಹುದಾದ ಅನೇಕ ಸಮಸ್ಯೆಗಳನ್ನು ಕೂಡ ತಡೆಯುತ್ತದೆ.
ರಾತ್ರಿ ವೇಳೆಯಲ್ಲಿ ಮೂತ್ರ ವಿಸರ್ಜನೆ ಮಾಡುವ ಮಕ್ಕಳಿಗೂ ಕೂಡ ಖರ್ಜೂರ ಸೇವನೆಯು ಉತ್ತಮವಾಗಿದೆ.
- ಖರ್ಜೂರದ ಬೀಜಗಳನ್ನು ತೆಗೆದುಕೊಂಡು ಶುಚಿಗೊಳಿಸಿಕೊಳ್ಳಬೇಕು. ಈ ಬೀಜಗಳನ್ನು ತೇಯ್ದು, ಬರುವ ಗಂಧವನ್ನು ಮಲಗುವ ಮುನ್ನ ಮಕ್ಕಳು ಸೇವಿಸಬೇಕು. ಇದರಿಂದ ರಾತ್ರಿ ವೇಳೆಯಲ್ಲಿ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುವುದು ನಿಲ್ಲುತ್ತದೆ. ಇದನ್ನು ಕೆಲವು ದಿನಗಳ ತನಕ ಸತತವಾಗಿ ನೀಡಬೇಕು.
ಮೂತ್ರ ಸಂಬಂಧಿ ಸಮಸ್ಯೆಗಳಿಗೂ ಖರ್ಜೂರ ಸೇವನೆಯು ಉತ್ತಮವಾಗಿದೆ.
- ಖರ್ಜೂರ ಸೇವನೆಯಿಂದ ಕಟ್ಟುಮೂತ್ರ ಸಮಸ್ಯೆಯು ನಿವಾರಣೆಯಾಗುತ್ತದೆ. ಖರ್ಜೂರದಲ್ಲಿ ಹೇರಳವಾಗಿ ವಿಟಮಿನ್ ಸಿ ಇದ್ದು, ಇದು ಮೂತ್ರ ಸಂಬಂಧಿ ಸಮಸ್ಯೆಗಳನ್ನು ತ್ವರಿತವಾಗಿ ನಿವಾರಿಸುತ್ತದೆ.
ಸುಲಭ ಜೀರ್ಣಕ್ರಿಯೆಗೆ ಹಾಗೂ ರಕ್ತ ವೃದ್ಧಿಗೆ ಖರ್ಜೂರದ ಸೇವನೆಯು ಉತ್ತಮವಾಗಿದೆ.
- ಊಟದ ನಂತರ ಖರ್ಜೂರವನ್ನು ಸೇವಿಸುವುದು ಸುಲಭ ಜೀರ್ಣಕ್ರಿಯೆಗೆ ಉತ್ತಮವಾಗಿದೆ. ಹಾಗೆಯೇ ಇದು ರಕ್ತದ ಶುದ್ಧತೆಯನ್ನು ಕಾಪಾಡುತ್ತದೆ. ರಕ್ತ ಹೀನತೆಯ ಸಮಸ್ಯೆಗಳನ್ನು ಹೊಂದಿದವರು ಕೂಡ ಖರ್ಜೂರ ಸೇವನೆಯನ್ನು ಮಾಡಬೇಕು. ರಕ್ತ ಶುದ್ಧತೆಯನ್ನು ಕಾಪಾಡುವುದರ ಜೊತೆಗೆ ಚರ್ಮದ ಆರೋಗ್ಯವನ್ನು ಕೂಡ ಉತ್ತಮವಾಗಿರಿಸುತ್ತದೆ. ಚರ್ಮದ ಅನೇಕ ಸಮಸ್ಯೆಗಳನ್ನು ಕೂಡ ಗುಣಪಡಿಸುತ್ತದೆ. ಒಟ್ಟಿನಲ್ಲಿ ಖರ್ಜೂರದ ಸೇವನೆಯು ಆರೋಗ್ಯವರ್ಧಕವಾಗಿದೆ.
ಖರ್ಜೂರದ ಸೇವನೆಯು ಮೂಳೆಗಳ ಅರೋಗ್ಯಕ್ಕೂ ಕೂಡ ಅತಿ ಉತ್ತಮವಾಗಿದೆ. ಕ್ಯಾಲ್ಸಿಯಂ ಪ್ರಮಾಣವು ಜಾಸ್ತಿಯಾಗಿ ಇರುವುದರಿಂದ ಮೂಳೆಗಳು ಸದೃಢವಾಗಿರುವಂತೆ ನೋಡಿಕೊಳ್ಳುತ್ತದೆ. ಹಾಗೆಯೇ ಫೈಬರ್ ಅಂಶವು ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆಗೆ ಉತ್ತಮವಾಗಿದೆ ಹಾಗೂ ಮಲಬದ್ಧತೆಯ ಸಮಸ್ಯೆಗಳನ್ನು ಕೂಡ ದೂರಗೊಳಿಸುತ್ತದೆ. ಖರ್ಜೂರದ ಸೇವನೆಯು ಮೆದುಳಿನ ಆರೋಗ್ಯಕ್ಕೂ ಕೂಡ ಉತ್ತಮವಾಗಿದೆ. ಮಕ್ಕಳ ಉತ್ತಮ ಬೆಳವಣಿಗೆಗೆ ನಿತ್ಯ ಖರ್ಜೂರವನ್ನು ಮಕ್ಕಳಿಗೆ ತಿನ್ನಿಸಬೇಕು, ಇದು ಮಕ್ಕಳಲ್ಲಿ ಅನೇಕ ರೋಗಗಳ ವಿರುದ್ಧ ಹೋರಾಡಲು ಬೇಕಾಗಿರುವ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಇಷ್ಟೇ ಅಲ್ಲದೇ ರಕ್ತದ ಒತ್ತಡವನ್ನು ನಿಯಂತ್ರಿಸಿ, ಹೃದಯದ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಇನ್ನೂ ಅನೇಕ ಅಡುಗೆಯ ಖಾದ್ಯಗಳ ತಯಾರಿಕೆಯಲ್ಲೂ ಕೂಡ ಖರ್ಜೂರವನ್ನು ಉಪಯೋಗಿಸಲಾಗುತ್ತದೆ. ಸಕ್ಕರೆ ಇಲ್ಲದೆ ಸಿಹಿ ತಯಾರಿಸುವುದಕ್ಕೆ ಖರ್ಜೂರವು ಹೆಚ್ಚಾಗಿ ಬಳಕೆಯಾಗುತ್ತದೆ. ಖರ್ಜೂರದ ಬರ್ಫಿ, ಖರ್ಜೂರದ ಹಲ್ವಾ, ಖರ್ಜೂರದ ಪಾಯಸ, ಖರ್ಜೂರದ ಐಸ್ ಕ್ರಿಮ್ ಹಾಗೆಯೇ ಖರ್ಜೂರದ ಮಿಲ್ಕ್ ಶೇಕ್ ಗಳು ಇನ್ನೂ ಅನೇಕ ರೀತಿಯ ಖಾದ್ಯಗಳನ್ನು ನಾವು ಖರ್ಜೂರದಿಂದ ತಯಾರಿಸಬಹುದು.
ಇಂದಿನ ಲೇಖನದಲ್ಲಿ ಖರ್ಜೂರದ ಆರೋಗ್ಯಕರ ವಿಚಾರಗಳನ್ನು ತಿಳಿದಿದ್ದೇವೆ. ಖರ್ಜೂರವನ್ನು ಸೇವಿಸಿ ಆರೋಗ್ಯಕರ ಉಪಯೋಗಗಳನ್ನು ಪಡೆದುಕೊಳ್ಳಿರಿ ಎಂಬುದು ಈ ಲೇಖನದ ಉದ್ದೇಶ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.