ಪುದೀನಾ ಎಲೆಗಳ ಅದ್ಭುತ ಆರೋಗ್ಯಕರ ಮನೆಮದ್ದು ಮತ್ತು ಪ್ರಯೋಜನಗಳು (Mint amazing health benefits)

Spread the love

ಪುದೀನಾ ಎಲೆಗಳ ಅದ್ಭುತ ಆರೋಗ್ಯಕರ ಮನೆಮದ್ದು ಮತ್ತು ಪ್ರಯೋಜನಗಳು (Mint amazing health benefits)
ಪುದೀನಾ ಎಲೆಗಳ ಅದ್ಭುತ ಆರೋಗ್ಯಕರ ಮನೆಮದ್ದು ಮತ್ತು ಪ್ರಯೋಜನಗಳು (Mint amazing health benefits). AI Image

ಅಡುಗೆಯಲ್ಲಿ ಉಪಯೋಗಿಸಲಾಗುವ ಹಸಿರು ಸೊಪ್ಪಿನ ಪಟ್ಟಿಯಲ್ಲಿ ಉತ್ತಮ ಸ್ಥಾನವನ್ನು ಹೊಂದಿರುವ ಸೊಪ್ಪುಗಳಲ್ಲಿ ಒಂದು ಪುದೀನಾ ಸೊಪ್ಪು. ತನ್ನ ವಿಭಿನ್ನ ಪರಿಮಳ ಹಾಗೂ ರುಚಿಯಿಂದ ಎಲ್ಲರ ಮನಸ್ಸನ್ನು ಸೆಳೆಯುವ ಈ ಪುದೀನಾ ಅರೋಗ್ಯಕ್ಕೂ ಕೂಡ ಉತ್ತಮವಾಗಿದೆ. ಸಾರು, ಚಟ್ನಿ, ಪಕೋಡ, ಪಲಾವ್ ಇನ್ನೂ ಅನೇಕ ಖಾದ್ಯಗಳಲ್ಲಿ ಪುದೀನಾ ಸೊಪ್ಪು ಹೆಚ್ಚಾಗಿ ಬಳಕೆಯಾಗುತ್ತದೆ. ನಿತ್ಯ ನಾವು ತಯಾರಿಸುವ ಅನ್ನಕ್ಕೂ ಕೂಡ ಒಂದು ಎಲೆ ಪುದೀನಾ ಸೇರಿಸಿ, ತಯಾರಿಸುವುದರಿಂದ ಅನ್ನವು ಪರಿಮಳಯುಕ್ತವಾಗಿ, ಪುದೀನಾ ಸತ್ವಗಳು ಕೂಡ ಅನ್ನದ ಜೊತೆ ನಮ್ಮ ದೇಹವನ್ನು ಸೇರಿಕೊಳ್ಳುತ್ತದೆ. ಇಂದಿನ ಲೇಖನದಲ್ಲಿ ಪುದೀನಾ ಸೊಪ್ಪಿನ ಪರಿಚಯ, ವೈಜ್ಞಾನಿಕ ವಿಚಾರಗಳು ಹಾಗೂ ಆರೋಗ್ಯಕರ ಮನೆಮದ್ದುಗಳ ಬಗ್ಗೆ ವಿಶ್ಲೇಷಿಸೋಣ.

ಪುದೀನಾ ಸೊಪ್ಪಿನ ವೈಜ್ಞಾನಿಕ ವಿಚಾರಗಳು

ವೈಜ್ಞಾನಿಕ ಹೆಸರು –  ಮೆಂಥಾ ಆರ್ವೆನ್ಸಿಸ್ ( Mentha Arvensis )
ಆಂಗ್ಲ ಹೆಸರು – ಮಿಂಟ್ ಲೀವ್ಸ್ ( Mint Leaves )

ಪುದೀನಾ ವಿಟಮಿನ್ ಎ, ವಿಟಮಿನ್ ಬಿ ಹಾಗೂ ವಿಟಮಿನ್ ಸಿ ಯನ್ನು ಹೊಂದಿದ್ದು, ತೇವ, ಸಸಾರಜನಕ, ನಾರು, ಕೊಬ್ಬು, ಕಬ್ಬಿಣ, ರಂಜಕ, ಆಕ್ಸಲಿಕ್ ಆಸಿಡ್, ಮ್ಯಾಂಗನೀಸ್ ಹಾಗೂ ಫೋಲೇಟ್ ಅಂಶಗಳನ್ನು ಹೊಂದಿದೆ. ಇನ್ನೂ ಪುದೀನಾ ಸೇವನೆಯು ಅತಿ ಉಪಯುಕ್ತವಾಗಿದ್ದು, ಬಿಕ್ಕಳಿಕೆ, ಆಜೀರ್ಣ, ಹೊಟ್ಟೆ ಉಬ್ಬರ ಇನ್ನೂ ಅನೇಕ ಸಮಸ್ಯೆಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಇದು ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವಾಗಿದ್ದು, ಆರೋಗ್ಯಕ್ಕೆ ಅತಿ ಅವಶ್ಯಕವಾಗಿದೆ. ಇನ್ನೂ ಈಗ ಪುದೀನಾ ಸೊಪ್ಪಿನ ಆರೋಗ್ಯಕರ ಮನೆಮದ್ದುಗಳ ಬಗ್ಗೆ ತಿಳಿಯೋಣ.

ಪುದೀನಾ ಸೊಪ್ಪಿನ ಆರೋಗ್ಯಕರ ಮನೆಮದ್ದುಗಳು

ನೆಗಡಿ, ಕೆಮ್ಮು ಹಾಗೂ ಜ್ವರಕ್ಕೆ ಪುದೀನಾ ಸೊಪ್ಪಿನ ಉತ್ತಮ ಪರಿಹಾರಗಳು

  • ನೆಗಡಿ ಹಾಗೂ ಕೆಮ್ಮು ಇರುವ ಸಮಯದಲ್ಲಿ ಪುದೀನಾ ಟೀ ಮಾಡಿ ಕುಡಿಯುವುದು ಅತಿ ಉತ್ತಮವಾಗಿದೆ. ಪುದೀನಾ ಎಲೆಗಳು, ಶುಂಠಿ, ನಿಂಬೆರಸ ಹಾಗೂ ಜೇನುತುಪ್ಪ ಬಳಸಿ ಪುದೀನಾ ಟೀ ತಯಾರಿಸಬೇಕು. ಈ ಪುದೀನಾ ಟೀ ತಯಾರಿಕಾ ವಿಧಾನವನ್ನು ನಮ್ಮ ಹಿಂದಿನ ಲೇಖನದಲ್ಲಿ ವಿವರಿಸಲಾಗಿದೆ. ಈ ಪುದೀನಾ ಟೀ ಕುಡಿಯುವುದರಿಂದ ನೆಗಡಿ, ಕೆಮ್ಮು ತ್ವರಿತವಾಗಿ ನಿವಾರಣೆಯಾಗುತ್ತದೆ.
    (->ಉತ್ತಮ ಆರೋಗ್ಯಕ್ಕೆ ಉಪಯುಕ್ತವಾಗಿರುವ ಸಾಂಪ್ರದಾಯಿಕ ವಿಶೇಷ ಟೀಗಳು)
  • ಪುದೀನಾ ಸೊಪ್ಪು ಜ್ವರಕ್ಕೂ ಕೂಡ ಉತ್ತಮ ಪರಿಹಾರವನ್ನು ನೀಡುತ್ತದೆ. ಪುದೀನಾ ಸೊಪ್ಪಿನ ಕಷಾಯ ಮಾಡಿ ಕುಡಿಯುವುದು, ಜ್ವರಕ್ಕೆ ಉತ್ತಮ ಮದ್ದಾಗಿದೆ. ಒಂದು ಲೋಟ ನೀರಿಗೆ 5 ಪುದೀನಾ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಇಟ್ಟ ನೀರು ಅರ್ಧದಷ್ಟು ಇಂಗಿದ ಮೇಲೆ ಓಲೆ ಆರಿಸಿ, ಸೋಸಿ ಕುಡಿಯಬೇಕು. ಅಲ್ಲಿಗೆ ಪುದೀನಾ ಕಷಾಯ ಸವಿಯಲು ಸಿದ್ದವಾಗುತ್ತದೆ. ಸ್ವಲ್ಪ ಜೇನುತುಪ್ಪವನ್ನು ಬೇಕಾದಲ್ಲಿ ಸೇರಿಸಿಕೊಂಡು ಕುಡಿಯಬಹುದು. ದಿನಕ್ಕೆ ಎರಡು ಬಾರಿಯಂತೆ ಕುಡಿದರೆ ಜ್ವರವು ಕಡಿಮೆಯಾಗುತ್ತದೆ.

ಬಾಯಿಯ ದುರ್ಗಂಧ ನಿವಾರಣೆಗೆ ಪುದೀನಾ ಸೊಪ್ಪು ಸಹಾಯಕವಾಗಿದೆ.

  • ಕೆಲವರ ಬಾಯಿ ಬಾಯಿ ತೆರೆಯುತ್ತಿದ್ದಂತೆ ಕೆಟ್ಟ ವಾಸನೆಯು ಹೊರ ಬರುತ್ತದೆ, ಇನ್ನೂ ಕೆಲವರು ಮಾತನಾಡುವಾಗಲೇ ದುರ್ವಾಸನೆ ಬರುತ್ತದೆ. ಅಂತಹ ಸಮಯದಲ್ಲಿ ನಾವು ಪುದೀನಾ ಸೊಪ್ಪಿನ ಸಹಾಯವನ್ನು ಪಡೆದುಕೊಳ್ಳಬಹುದು. ಪುದೀನಾ ಎಲೆಗಳನ್ನು ತಿಂದು ಜಗಿಯಬೇಕು, ಅದರ ರಸವನ್ನು ಹೀರಬೇಕು. ಇದು ಬಾಯಲ್ಲಿನ ಕೆಟ್ಟ ಬ್ಯಾಕ್ಟೀರಿಯಗಳನ್ನು ಕೊಲ್ಲುತ್ತದೆ. ಆಗ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ಬಾಯಿಗೆ ಒಂದು ತಾಜಾತನದ ಅನುಭವ ಕೂಡ ಸಿಗುತ್ತದೆ.

ಉತ್ತಮ ಜೀರ್ಣಕ್ರಿಯೆಗೂ ಪುದೀನಾ ಸಹಕಾರಿಯಾಗಿದೆ.

  • ಸುಲಭ ಜೀರ್ಣಕ್ರಿಯೆಗೆ ಪುದೀನಾ ಉತ್ತಮ ಆಹಾರವಾಗಿದೆ. ನಾರಿನ ಅಂಶವುಳ್ಳ ಈ ಸೊಪ್ಪು, ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಹಾಗೆಯೇ ಅಜೀರ್ಣದ ಸಮಸ್ಯೆಗಳು ಜಾಸ್ತಿಯಾಗಿದ್ದರೆ, ಒಂದು ಮುಷ್ಠಿ ಪುದೀನಾ ಎಲೆಗಳು, ಒಂದು ಇಂಚು ಜಜ್ಜಿಕೊಂಡ ಹಸಿ ಶುಂಠಿ ಹಾಗೂ ½ ಚಮಚ ಓಂಕಾಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು. ಇಟ್ಟ ನೀರು ಅರ್ಧದಷ್ಟು ಇಂಗಿದ ಮೇಲೆ, ಸೋಸಿಕೊಂಡು ಕುಡಿಯಬೇಕು. ಇದು ಅಜೀರ್ಣಕ್ಕೆ ಉತ್ತಮ ಪರಿಹಾರವನ್ನು ನೀಡುತ್ತದೆ.

ಗಂಟಲು ನೋವು ಅಥವಾ ಗಂಟಲು ಕೆರೆತಕ್ಕೆ ಕೂಡ ಪುದೀನಾ ಉತ್ತಮ ಪರಿಹಾರಗಳನ್ನು ನೀಡುತ್ತದೆ.

  • ಗಂಟಲಿಗೆ ಸಂಬಂಧಪಟ್ಟ ಸಮಸ್ಯೆಗಳು ಇದ್ದಾಗ, 10 ಪುದೀನಾ ಎಲೆಗಳನ್ನು ಒಂದು ಲೋಟ ನೀರಿನಲ್ಲಿ ಕುದಿಸಿ, ನೀರು ಅರ್ಧದಷ್ಟು ಇಂಗಿದ ಮೇಲೆ, ಓಲೆ ಅರಿಸಿಕೊಂಡು, ಸೋಸಿಕೊಳ್ಳಬೇಕು. ಈ ಪುದೀನಾ ಕಷಾಯಕ್ಕೆ ಒಂದು ಚಮಚ ಕಲ್ಲುಪ್ಪನ್ನು ಸೇರಿಸಿಕೊಂಡು, ಬಾಯಿಗೆ ಹಾಕಿ, ಗಂಟಲಿನಲ್ಲಿ ಮುಕ್ಕಳಿಸಬೇಕು. ಹೀಗೆ ದಿನಕ್ಕೆ 5 ಸಲ ಮಾಡುವುದರಿಂದ ಗಂಟಲಿನ ನೋವು ಹಾಗೂ ಗಂಟಲಿನ ಕೆರೆತ ಎರಡು ಕೂಡ ಕಡಿಮೆಯಾಗುತ್ತದೆ.

ಪದೇ ಪದೇ ಬರುವ ಬಿಕ್ಕಳಿಕೆಯನ್ನು ನಿಲ್ಲಿಸಲು ಪುದೀನಾ ಉತ್ತಮ ಮದ್ದಾಗಿದೆ.

  • ಪದೇ ಪದೇ ಬಿಕ್ಕಳಿಕೆ ಬರುವುದನ್ನು ನಿಲ್ಲಿಸಲು ಪುದೀನಾ ಉಪಯುಕ್ತವಾಗಿದೆ. ಪುದೀನಾ ಎಲೆಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿಕೊಂಡು, ಸೋಸಿಕೊಳ್ಳಬೇಕು. ಈ ನೀರನ್ನು ಅರ್ಧ ತಾಸಿಗೊಮ್ಮೆ ಎರಡು ಚಮಚ ಕುಡಿಯಬೇಕು. ಹೀಗೆ ಮಾಡುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ. ಶರೀರದಲ್ಲಿ ವಾಯು ಶೇಖರಣೆಯಾದಾಗ ಮೇಲಿಂದ ಮೇಲೆ ಬಿಕ್ಕಳಿಕೆಯು ಬರುತ್ತದೆ. ಈ ಬಿಕ್ಕಳಿಕೆಯನ್ನು ನಿಲ್ಲಿಸಲು ಪುದೀನಾ ಉತ್ತಮ ಮದ್ದಾಗಿದೆ.

ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪುದೀನಾ ಉತ್ತಮ ಪರಿಹಾರಗಳನ್ನು ನೀಡುತ್ತದೆ.

  • ಹೊಟ್ಟೆ ನೋವು ಅಥವಾ ಗ್ಯಾಸ್ಟ್ರಿಕ್, ಆಸಿಡಿಟಿ, ಹೊಟ್ಟೆ ಉಬ್ಬರದಂತಹ ಸಮಸ್ಯೆಗಳಿಗೆ ಪುದೀನಾ ಉತ್ತಮ ಪರಿಹಾರಗಳನ್ನು ನೀಡುತ್ತದೆ. ಒಂದು ಹಿಡಿ ಪುದೀನಾ ಸೊಪ್ಪನ್ನು ಜಜ್ಜಿಕೊಂಡು, ರಸ ಹಿಂಡಿಕೊಳ್ಳಬೇಕು. ಈ ರಸಕ್ಕೆ ಸ್ವಲ್ಪ ಸಕ್ಕರೆಯನ್ನು ಸೇರಿಸಿಕೊಂಡು ಕುಡಿಯಬೇಕು. ಇದು ಹೊಟ್ಟೆ ಉಬ್ಬರ, ಹೊಟ್ಟೆನೋವು ಇಂತಹ ಎಲ್ಲಾ ಸಮಸ್ಯೆಗಳಿಗೂ ಉತ್ತಮ ಪರಿಹಾರವನ್ನು ನೀಡುತ್ತದೆ.

ಹಲ್ಲುಗಳ ಉತ್ತಮ ಆರೋಗ್ಯಕ್ಕೆ ಪುದೀನಾ ಸಹಕಾರಿಯಾಗಿದೆ.

  • ಹಲ್ಲು ಹಾಗೂ ವಸಡಿನ ಅರೋಗ್ಯಕ್ಕೂ ಕೂಡ ಪುದೀನಾ ಎಲೆಗಳ ಸೇವನೆ ಉತ್ತಮವಾಗಿದೆ. ಹಲ್ಲು ಹುಳಗಳಿಂದ ಹಾಳಾಗಿದ್ದರೆ, ಇಲ್ಲವೇ ಹಲ್ಲುಗಳು ದುರ್ಬಲವಾಗಿದ್ದರೆ, ಪ್ರತಿದಿನ ಪುದೀನಾ ಎಲೆಗಳನ್ನು ಜಗಿದು ತಿನ್ನಬೇಕು. ಇದರ ಸೇವನೆಯಿಂದ ಹಲ್ಲುಗಳು ದೃಢವಾಗಿ, ಅರೋಗ್ಯಯುತವಾಗಿರುತ್ತದೆ. ಹಾಗೆಯೇ ಇದು ವಸಡಿನ ಅರೋಗ್ಯಕ್ಕೂ ಕೂಡ ಉತ್ತಮವಾಗಿದೆ. ಬಾಯಿಯಿಂದ ಬರುವ ದುರ್ವಾಸನೆಯನ್ನು ತಡೆಯಲು ಕೂಡ ಇದು ಸಹಕಾರಿಯಾಗಿದೆ. ಬಾಯಿಯ ಆರೋಗ್ಯಕ್ಕೆ ಪುದೀನಾ ಬಹಳ ಉಪಯುಕ್ತವಾಗಿದೆ.

ಉರಿ ಮೂತ್ರ ಸಮಸ್ಯೆಗೂ ಕೂಡ ಪುದೀನಾ ಸಹಕಾರಿಯಾಗಿದೆ.

  • ಹೆಚ್ಚಾಗಿ ನೀರು ಕುಡಿಯುವುದು ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಕಡಿಮೆ ನೀರು ಕುಡಿದಾಗಲೇ ಹೆಚ್ಚಾಗಿ ನಾವು ಈ ಉರಿ ಮೂತ್ರ, ಕಟ್ಟು ಮೂತ್ರದ ಸಮಸ್ಯೆಗಳನ್ನು ಅನುಭವಿಸುತ್ತೇವೆ. ಈ ಉರಿ ಮೂತ್ರದ ನಿವಾರಣೆಗೆ ಪುದೀನಾ ಸೊಪ್ಪಿನ ಮದ್ದು ಉತ್ತಮವಾಗಿದೆ. 10 ಪುದೀನಾ ಎಲೆಗಳು, 1 ಇಂಚು ಹಸಿ ಶುಂಠಿ ಎರಡನ್ನು ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ನಂತರ ಸೋಸಿಕೊಂಡು, ಒಂದು ಚಮಚ ನಿಂಬೆ ರಸ ಹಾಗೂ ಜೇನುತುಪ್ಪವನ್ನು ಬೆರೆಸಿ ಕುಡಿಯಬೇಕು. ಇದು ಉರಿ ಮೂತ್ರ ನಿವಾರಣೆಗೆ ಅತಿ ಉತ್ತಮವಾಗಿದೆ. ಹಾಗೆಯೇ ಇದು ಆರೋಗ್ಯಕ್ಕೆ ಕೂಡ ಒಳ್ಳೆಯದು.

ಜಂತು ಹುಳಗಳ ನಾಶಕ್ಕೆ ಕೂಡ ಪುದೀನಾ ಉತ್ತಮವಾಗಿದೆ.

  • ಹೊಟ್ಟೆಯಲ್ಲಿನ ಜಂತು ಹುಳಗಳ ನಿವಾರಣೆಗೆ ಪುದೀನಾ ಸೊಪ್ಪು ಉತ್ತಮವಾಗಿದೆ. ಪುದೀನಾ ಸೊಪ್ಪನ್ನು ಅಗೆದು ತಿನ್ನುವುದರಿಂದ, ಪುದೀನಾ ರಸವು ಹೊಟ್ಟೆಯನ್ನು ಸೇರಿ, ಜಂತು ಹುಳಗಳು ನಾಶವಾಗುತ್ತದೆ. ಏಕೆಂದರೆ ಪುದೀನಾ ಸೊಪ್ಪಿನಲ್ಲಿ ಕ್ರಿಮಿನಾಶಕ ಗುಣವಿದೆ. ಪುದೀನಾ ಸೊಪ್ಪನ್ನು ಸೇವಿಸುವುದರಿಂದ, ಆಹಾರದ ಮುಖಾಂತರ ದೇಹವನ್ನು ಪ್ರವೇಶಿಸುವ ಕ್ರಿಮಿಗಳನ್ನು ಕೂಡ ಇದು ನಾಶ ಮಾಡುತ್ತದೆ. ಈ ಸೊಪ್ಪಿನಲ್ಲಿ ಪ್ರೊಟೀನ್, ಖನಿಜಾಂಶಗಳು ಹೆಚ್ಚಾಗಿ ಇರುವುದರಿಂದ ಈ ಪುದೀನಾ ಸೊಪ್ಪು ರೋಗ ನಿರೋಧಕ ಶಕ್ತಿಯನ್ನು ಕೂಡ ನಮ್ಮ ದೇಹಕ್ಕೆ ಒದಗಿಸುತ್ತದೆ.

ಪುದೀನದ ಸೌಂದರ್ಯವರ್ಧಕ ಉಪಯೋಗಗಳು

  • ಪುದೀನಾ ಸೊಪ್ಪು ಸೌಂದರ್ಯವರ್ಧಕ ಗುಣಗಳನ್ನು ಹೊಂದಿದ್ದು, ಮೊಡವೆಗಳ ನಿವಾರಣೆಗೆ ಉತ್ತಮವಾಗಿದೆ. ಪುದೀನಾ ಸೊಪ್ಪನ್ನು ಶುಚಿಗೊಳಿಸಿ, ಶುದ್ಧ ಅರಿಶಿಣದ ಜೊತೆ ಸೇರಿಸಿಕೊಂಡು ಅರೆಯಬೇಕು. ಈ ಅರೆದ ಮಿಶ್ರಣವನ್ನು ಮೊಡವೆಗಳ ಮೇಲೆ ಹಚ್ಚಿ, ಒಣಗಿದ ನಂತರ ತೊಳೆಯಬೇಕು. ಇದು ಮೊಡವೆಗಳ ನಿವಾರಣೆಗೆ ಅತಿ ಉತ್ತಮವಾಗಿದೆ.

ಅರೋಗ್ಯವರ್ಧಕ ಪುದೀನಾ ಸೊಪ್ಪು

  • ಪುದೀನಾ ಸೊಪ್ಪನ್ನು ಹಸಿಯಾಗಿ ತಿನ್ನುವುದು ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಸೌತೆಕಾಯಿ, ಈರುಳ್ಳಿ, ಕ್ಯಾರೆಟ್ ಜೊತೆಗೆ ಪುದೀನಾ ಸೊಪ್ಪನ್ನು ಸೇರಿಸಿ ಹಸಿ ತರಕಾರಿ ಸಲಾಡ್ ತಯಾರಿಸಿ ತಿನ್ನುವುದು ಅತಿ ಉತ್ತಮವಾಗಿದೆ. ಈ ಆಹಾರವು ಅರೋಗ್ಯವರ್ಧಕವಾಗಿದ್ದು, ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವಾಗಿದೆ.

ಪುದೀನಾಗಳಿಂದ ಇನ್ನೂ ಅನೇಕ ಉಪಯೋಗಗಳಿದ್ದು, ಚರ್ಮದ ಅರೋಗ್ಯಕ್ಕೂ ಕೂಡ ಪುದೀನಾ ಸೇವನೆ ಉತ್ತಮವಾಗಿದೆ. ಚರ್ಮವ್ಯಾಧಿಗಳಾದ ತುರಿಕೆ, ಕಜ್ಜಿಗಳು ಆದ ಸಮಯದಲ್ಲಿ ಪುದೀನಾ ಸೊಪ್ಪನ್ನು ಆಹಾರವಾಗಿ ಬಳಸುವುದು ಉತ್ತಮವಾಗಿದೆ. ಹಾಗೆಯೇ ತೂಕ ಇಳಿಸಿಕೊಳ್ಳಲು ಕೂಡ ಇದು ಉತ್ತಮ ಆಹಾರವಾಗಿದೆ. ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಕೊಬ್ಬನ್ನು ಕರಗಿಸುವ ಶಕ್ತಿಯನ್ನು ಇದು ಹೊಂದಿದೆ, ಹಾಗಾಗಿ ತೂಕ ಇಳಿಕೆಯಲ್ಲಿ ಇದು ಸಹಾಯಕವಾಗಿದೆ. ಮಧುಮೇಹಿಗಳು ಕೂಡ ಪುದೀನಾ ಸೊಪ್ಪನ್ನು ಸೇವಿಸಬಹುದು. ಪುದೀನಾ ಸೊಪ್ಪನ್ನು ನೋವು ನಿವಾರಕ ತೈಲಗಳ ತಯಾರಿಕೆಯಲ್ಲೂ ಕೂಡ ಬಳಸುತ್ತಾರೆ. ಆರೋಗ್ಯಕ್ಕೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳಿಗೂ ಪುದೀನಾ ಸಹಾಯಕವಾಗಿದೆ. ಈ ಎಲ್ಲಾ ಕಾರಣಗಳಿಂದ ಪುದೀನಾ ಸೇವನೆಯು ಅತಿ ಉತ್ತಮವಾಗಿದೆ. ಅಷ್ಟೇ ಅಲ್ಲದೇ ಅಡುಗೆಯಲ್ಲೂ ಕೂಡ ಪುದೀನಾ ಖಾದ್ಯಗಳು ರುಚಿಕರವಾಗಿರುತ್ತದೆ. ಇಷ್ಟೆಲ್ಲಾ ಉತ್ತಮ ಉಪಯೋಗಗಳನ್ನು ನೀಡುವ ಪುದೀನಾ ಸೇವನೆಯು ಆರೋಗ್ಯಕ್ಕೆ ಉತ್ತಮವಾಗಿದೆ. ಪುದೀನಾ ಸೊಪ್ಪನ್ನು ದಿನನಿತ್ಯ ಬಳಸಿ, ಸೊಪ್ಪಿನ ಉಪಯೋಗಗಳನ್ನು ತಿಳಿದು, ಬಂದ ಸಮಸ್ಯೆಗಳಿಂದ ಪಾರಾಗಿರಿ ಎಂಬುದು ಈ ಲೇಖನದ ಉದ್ದೇಶವಾಗಿದೆ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

Leave a Comment

Your email address will not be published. Required fields are marked *

Scroll to Top