
ಬೇಸಿಗೆ ಬಂತೆಂದರೆ ಸಾಕು ಉಪ್ಪಿನ ಕಾಯನ್ನು ಮಾಡುವುದು ಹೆಂಗಸರ ಹೊಸ ಕಾಯಕವಾಗುತ್ತದೆ. ಉಪ್ಪಿನ ಕಾಯಿಗೆ ಬೇಕಾಗುವ ಖಾರದ ಪುಡಿ, ಹೋಳುಗಳು, ಭರಣಿಗಳ ಶುದ್ಧತೆ ಇನ್ನೂ ಇತ್ಯಾದಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುತ್ತಾರೆ. ಇಂತಹ ಹೆಂಗಸರಿಗೆ ಉಪಯುಕ್ತವಾಗಲು ವಿವಿಧ ರೀತಿಯ ಉಪ್ಪಿನಕಾಯಿಯ ತಯಾರಿಕಾ ವಿಧಾನವನ್ನು ಈ ಲೇಖನದಲ್ಲಿ ವಿಶ್ಲೇಷಿಸೋಣ.
ಮಾವಿನ ಮಿಡಿ ಉಪ್ಪಿನಕಾಯಿ
ಬೇಕಾಗುವ ಪದಾರ್ಥಗಳು
- ಮಾವಿನ ಮಿಡಿಗಳು 100
- ಸಾಸಿವೆ 250 ಗ್ರಾಂ
- ಬ್ಯಾಡಗಿ ಮೆಣಸು 400 ಗ್ರಾಂ
- ಇಂಗು 1 ದೊಡ್ಡ ಚಮಚ
- ಅರಸಿನ ಪುಡಿ 1 ದೊಡ್ಡ ಚಮಚ
- ಉಪ್ಪು 1 ಕಿಲೋ ಗ್ರಾಂ
- ಜೀರಿಗೆ 2 ಚಿಕ್ಕ ಚಮಚ
- ಮೆಂತೆ 2 ಚಿಕ್ಕ ಚಮಚ
- ಕರಿ ಮೆಣಸು 1 ದೊಡ್ಡ ಚಮಚ
ಮಾಡುವ ವಿಧಾನ:
ಮಾವಿನ ಮಿಡಿಯ ಉಪ್ಪಿನಕಾಯಿಯನ್ನು ಮಾಡಲು ಮೊದಲು ಉಪ್ಪನ್ನು ನೀರಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು, ನಂತರ ತಣಿಸಿ, ಶೋಧಿಸಿಕೊಳ್ಳಬೇಕು. ಮಿಡಿಗಳನ್ನು ತೊಳೆದು, ನೀರಿನ ಅಂಶ ಹೋಗುವವರೆಗೆ ಬಟ್ಟೆಯಿಂದ ಚೆನ್ನಾಗಿ ಒರೆಸಿ ಒರಸಿ, ತಯಾರಿಸಿದ ಉಪ್ಪು ನೀರಲ್ಲಿ ಎರಡು ವಾರ ನೆನೆಯಲು ಇಡಬೇಕು.. ದಿನಕ್ಕೆ ಒಮ್ಮೆಯಾದರೂ ಕೈಯಾಡಿಸಬೇಕು. ಎರಡು ವಾರದ ಬಳಿಕ ಮಿಡಿಯನ್ನು ಸೋಸಿಕೊಂಡು, ಉಪ್ಪು ನೀರಲ್ಲಿ ಬ್ಯಾಡಗಿ ಮೆಣಸು, ಸಾಸಿವೆ, ಕರಿ ಮೆಣಸನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ಉಪ್ಪು ನೀರನ್ನು ಸೇರಿಸಿ ಮಸಾಲೆಯನ್ನು ಹದ ಮಾಡಿಕೊಳ್ಳಬೇಕು. ಮಸಾಲೆ ದಪ್ಪ ಇರಬೇಕು. ಜೇರಿಗೆ, ಮೆಂತ್ಯೆಯನ್ನು ಹುರಿದು, ಪುಡಿ ಮಾಡಿ ಮಸಾಲೆಗೆ ಇಂಗಿನ ಜೊತೆ ಸೇರಿಸಬೇಕು. ಮಿಡಿಗಳನ್ನು ಮಸಾಲೆಗೆ ಸೇರಿಸಿ ಭರಣಿಯಲ್ಲಿ ತುಂಬಿಸಿ, ಶೇಖರಿಸಿಡಬೇಕು. ಉಪ್ಪಿನ ಕಾಯಿಯನ್ನು ಶೇಖರಿಸಲು ಉಪ್ಪಿನ ಕಾಯಿ ಭರಣಿಗಳು ತುಂಬಾ ಉಪಯುಕ್ತವಾಗುತ್ತದೆ.
ಮಾವಿನಕಾಯಿ ಉಪ್ಪಿನಕಾಯಿ
ಬೇಕಾಗುವ ಪದಾರ್ಥಗಳು
- ಮಾವಿನಕಾಯಿ 2 ಕಿಲೊ ಗ್ರಾಂ
- ಉಪ್ಪು 1/4 ಕಿಲೊ ಗ್ರಾಂ
- ಸಾಸಿವೆ 200 ಗ್ರಾಂ
- ಖಾರದ ಪುಡಿ 250 ಗ್ರಾಂ
- ಅರಸಿನ ಪುಡಿ 1 ಚಮಚ
- ಇಂಗು 1 ಚಮಚ
- ಎಣ್ಣೆ 1/4 ಲೀಟರ್
- ಸಾಸಿವೆ 1 ಚಮಚ
- ಕರಿಬೇವು 10 ಎಲೆಗಳು
ಮಾಡುವ ವಿಧಾನ:
ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ನೀರಿನ ಅಂಶ ಒಣಗುವ ತನಕ ಒಣಗಿಸಿ, ನಂತರ ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಬೇಕು. ಕತ್ತರಿಸಿದ ಮಾವಿನ ಹೋಳುಗಳನ್ನು ಉಪ್ಪಿನಲ್ಲಿ ಮೂರು ದಿನಗಳ ಕಾಲ ನೆನೆಸಬೇಕು. ಪ್ರತಿದಿನ ಒಮ್ಮೆ ಕೈಯಾಡಿಸಬೇಕು. ಮರುದಿನ ಹೋಳುಗಳನ್ನು ಸೋಸಿಕೊಂಡು ತೆಳು ಬಟ್ಟೆಯ ಮೇಲೆ ಹರಡಿ ಎರಡು ತಾಸು ಹಾಗೆಯೇ ಬಿಡಬೇಕು. ಒಂದು ಲೀಟರ್ ನೀರಿಗೆ ಅರ್ಧ ಕಪ್ ಉಪ್ಪು ಸೇರಿಸಿ ಕುದಿಸಿ ತಣಿಸಿ ಶೋಧಿಸಿಕೊಳ್ಳಬೇಕು. ಉಪ್ಪು ನೀರಲ್ಲಿ ಸಾಸಿವೆಯನ್ನು ರುಬ್ಬಿ, ಖಾರದ ಪುಡಿಯನ್ನು ಸೇರಿಸಿ ಮಸಾಲೆಯನ್ನು ಹದ ಮಾಡಿಕೊಂಡು ಮಾವಿನ ಹೋಳುಗಳನ್ನು ಸೇರಿಸಿಸಬೇಕು. ನಂತರ ಎಣ್ಣೆಯನ್ನು ಕಾಯಿಸಿ, ಸಾಸಿವೆ ಸಿಡಿಸಿ, ಕರಿಬೇವು, ಇಂಗು, ಅರಸಿನ ಪುಡಿ ಹಾಕಿ, ಎಣ್ಣೆಯನ್ನು ಓಲೆಯಿಂದ ಕೆಳಗಿಳಿಸಿ, ತಣಿಸಿ, ತಯಾರಿಸಿದ್ದ ಉಪ್ಪಿನಕಾಯಿ ಹಾಕಿ ಕಲಸಬೇಕು. ಶುದ್ಧ ಭರಣಿಯಲ್ಲಿ ಉಪ್ಪಿನಕಾಯಿಯನ್ನು ತುಂಬಿಸಿ, ಶೇಖರಿಸಬೇಕು.
ಅಪ್ಪೆ ಮಿಡಿ ಉಪ್ಪಿನಕಾಯಿ
ಬೇಕಾಗುವ ಪದಾರ್ಥಗಳು
- ಅಪ್ಪೆ ಮಿಡಿ 1 ಕಿಲೋ ಗ್ರಾಂ
- ಕಲ್ಲುಪ್ಪು 1/2 ಕೆಜಿ
- ಒಣಮೆಣಸು 250 ಗ್ರಾಂ
- ಸಾಸಿವೆ 150 ಗ್ರಾಂ
- ಇಂಗು 5 ಗ್ರಾಂ (1 ಚಿಕ್ಕ ಚಮಚ )
- ಅರಸಿನ ಪುಡಿ 5 ಗ್ರಾಂ
- ಎಳ್ಳೆಣ್ಣೆ 2 ಕಪ್
- ಜೇರಿಗೆ 1 ದೊಡ್ಡ ಚಮಚ
- ಮೆಂತೆ 1 ಚಿಕ್ಕ ಚಮಚ
- ಬೆಳ್ಳುಳ್ಳಿ ಎಸಳು 8
ಮಾಡುವ ವಿಧಾನ:
ಅಪ್ಪೆ ಮಿಡಿಯನ್ನು ಚೆನ್ನಾಗಿ ತೊಳೆದು ಒದ್ದೆ ಬಟ್ಟೆಯಲ್ಲಿ ಒರಸಿಕೊಳ್ಳಬೇಕು. ಉಪ್ಪು ಮತ್ತು ಮಿಡಿಯನ್ನು ಒಂದು ಶುದ್ಧ ಭರಣಿಗೆ ತುಂಬಿಸಿ, ಗಟ್ಟಿಯಾಗಿ ಮುಚ್ಚಿಡಬೇಕು. ಮರುದಿನ ಕುದಿಸಿ ತಣಿದ ನೀರನ್ನು ಹಾಕಿ ಸರಿಯಾಗಿ ಕಲಸಬೇಕು. ದಿನಕ್ಕೆ ಎರಡು ಬಾರಿ ಕಲಸುತ್ತ ಇರಬೇಕು. ಮಾವಿನ ಮಿಡಿಗಳು ನೀರಲ್ಲಿ ಮುಳಗಿರಬೇಕು. ಆಗ ಮಿಡಿಗಳು ಸುರುಟುವುದಿಲ್ಲ. ಮೂರನೇ ವಾರ ಮಿಡಿಗಳನ್ನು ಸಾಯಂಕಾಲ ಹೊತ್ತಿಗೆ ಉಪ್ಪು ನೀರಿನಿಂದ ತೆಗೆದು ಚೆನ್ನಾಗಿ ಒಣಗಲು ಇಡಬೇಕು.
ಈಗ ಇನ್ನೊಂದೆಡೆ ಉಪ್ಪು ನೀರನ್ನು ಕುದಿಸಿ ಸೋಸಿ ತಣಿಯಲು ಇಡಬೇಕು. ಮೆಣಸು ಮತ್ತು ಸಾಸಿವೆಯನ್ನು ಬಾಣಲೆಯಲ್ಲಿ ಹಾಕಿ ಹುರಿದು, ಬೇರೆ ಬೇರೆಯಾಗಿ ಪುಡಿ ಮಾಡಿಕೊಳ್ಳಬೇಕು. ಎರಡು ಪುಡಿಯನ್ನು ಸೇರಿಸಿ ಮಿಕ್ಸ್ ಯಲ್ಲಿ ಉಪ್ಪು ನೀರು ಹಾಕಿ ನುಣ್ಣಗೆ ರುಬ್ಬಬೇಕು.
ಮತ್ತೆ ಈಗ ಮೆಂತೆ ಮತ್ತು ಜೇರಿಗೆಯನ್ನು ತವಾದಲ್ಲಿ ಹುರಿದು, ಪುಡಿ ಮಾಡಿಕೊಳ್ಳಬೇಕು. ಇಂಗನ್ನು ಉಪ್ಪು ನೀರಲ್ಲಿ ಕದಡಿಸಿ ನೀರು ಮಾಡಿ. ಒಂದುವೆರೆ ಕಪ್ ಎಣ್ಣೆಯನ್ನು ಬಿಸಿ ಮಾಡಿ ತಣಿಸಿ (ಕುದಿಸಬಾರದು). ಅರ್ಧ ಕಪ್ ಎಣ್ಣೆಯನ್ನು ಬಿಸಿಮಾಡಿ ಜಜ್ಜಿದ ಬೆಳ್ಳುಳ್ಳಿಗಳನ್ನು ಹುರಿದು ಅರಸಿಣ ಪುಡಿ ಮತ್ತು ಇಂಗಿನ ನೀರು ಹುಯ್ದು ಓಲೆ ಆರಿಸಿ ಬೇಕು.
ಉಪ್ಪಿನ ಕಾಯಿ ಹಾಕುವ ಭರಣಿಯನ್ನು ಚೆನ್ನಾಗಿ ಬಿಸಿಲಿಗೆ ಇಟ್ಟು ಒಣಗಿಸಿಕೊಳ್ಳಬೇಕು.
ಉಪ್ಪಿನಕಾಯಿ ಮಸಾಲೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ಬೇಕಾದಷ್ಟು ಉಪ್ಪು ನೀರು ಹಾಕಿಕೊಂಡು ಹದ ಮಾಡಿಕೊಳ್ಳಬೇಕು. ಮಿಡಿಯಲ್ಲಿ ಒಳ್ಳೆದನ್ನು ಹೆಕ್ಕಿ ಮಸಾಲೆಗೆ ಹಾಕಿ, ಮೆಂತೆ ಮತ್ತು ಜೇರಿಗೆ ಹುಡಿಯನ್ನು ಸೇರಿಸಬೇಕು. ಮೇಲೆ ಹೇಳಿದಂತೆ ಮಾಡಿ ತಣಿಸಿದ ಎಣ್ಣೆಯ ಮಿಶ್ರಣವನ್ನು ಸೇರಿಸಿ ಕಲಸಬೇಕು. ಅದರ ಮೇಲೆ ಬೆಳ್ಳುಳ್ಳಿ ಒಗ್ಗರಣೆ ಹಾಕಿ, ಬಾಯಿ ಸಡಿಲವಾಗಿ ಮುಚ್ಚಬೇಕು. ಎರಡು ದಿನಗಳ ಬಳಿಕ ಮುಚ್ಚಳ ಗಟ್ಟಿಯಾಗಿ ಹಾಕಿ, ಗಾಳಿ ಹಾಗೂ ನೀರಿನ ಅಂಶ ತಗಲದಂತೆ ಸ್ವಚ್ಛ ವಾದ ಜಾಗದಲ್ಲಿ ಇಡಬೇಕು. ಸುತ್ತಲೂ ಕ್ರಿಮಿಗಳು ಹರಡದ ಹಾಗೆ ನೋಡಿಕೊಂಡರೆ ಉತ್ತಮ. ಈ ಉಪ್ಪಿನಕಾಯಿ ಆರು ತಿಂಗಳ ನಂತರ ಉಪಯೋಗಿಸಿದರೆ ರುಚಿಯು ಉತ್ತಮವಾಗಿರುತ್ತದೆ.
ನೆಲ್ಲಿಕಾಯಿ ಉಪ್ಪಿನಕಾಯಿ
ಬೇಕಾಗುವ ಪದಾರ್ಥಗಳು
- ಬೆಟ್ಟದ ನೆಲ್ಲಿಕಾಯಿ 1/2 ಕಿಲೋ ಗ್ರಾಂ
- ಉಪ್ಪು 1/2 ಕಪ್
- ಒಣಮೆಣಸು 150 ಗ್ರಾಂ
- ಅರಸಿಣ ಪುಡಿ 1 ದೊಡ್ಡ ಚಮಚ
- ಇಂಗು 1 ಚಿಕ್ಕ ಚಮಚ
- ಸಾಸಿವೆ 75 ಗ್ರಾಂ
- ವಿನೆಗರ್ 1 ಚಮಚ
- ಸಕ್ಕರೆ 2 ದೊಡ್ಡ ಚಮಚ
ಮಾಡುವ ವಿಧಾನ:
ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ನೀರಿನ ಆವಿಯಲ್ಲಿ ಮೂವತ್ತು ನಿಮಿಷಗಳ ಕಾಲ ಬೇಯಿಸಬೇಕು. ನಂತರ ನೆಲ್ಲಿಕಾಯಿಯನ್ನು ಸಂಪೂರ್ಣ ತಣಿಸಬೇಕು. ಅನಂತರ ನೆಲ್ಲಿಕಾಯಿಯ ಬೀಜವನ್ನು ತೆಗೆದು, ಉಪ್ಪಿನಲ್ಲಿ ಬೆರೆಸಿ ಒಂದು ರಾತ್ರಿ ಪೂರ್ತಿ ಇಡಬೇಕು. ಮೆಣಸು ಮತ್ತು ಸಾಸಿವೆಯನ್ನು ಬೇರೆ ಬೇರೆಯಾಗಿ ಹುರಿದು ಪುಡಿ ಮಾಡಿಕೊಳ್ಳಬೇಕು. ಉಪ್ಪಿನ ನೆಲ್ಲಿಕಾಯಿ ಮಿಶ್ರಣಕ್ಕೆ ವಿನೆಗರ್, ಸಕ್ಕರೆ, ಅರಿಶಿಣ ಪುಡಿ, ಇಂಗನ್ನು ಸೇರಿಸಬೇಕು. ನಂತರ ಮೆಣಸು ಹಾಗೂ ಸಾಸಿವೆಯ ಪುಡಿಯನ್ನು ಸೇರಿಸಿ, ಎಲ್ಲವನ್ನು ಚೆನ್ನಾಗಿ ಕಲಸಿ ಒಂದು ಭರಣಿಯಲ್ಲಿ ತುಂಬಬೇಕು. ಅತ್ಯಂತ ರುಚಿಕರವಾದ ನೆಲ್ಲಿಕಾಯಿ ಉಪ್ಪಿನಕಾಯಿ ಸವಿಯಲು ಸಿದ್ದವಾಗುತ್ತದೆ.
ತರಕಾರಿ ಉಪ್ಪಿನಕಾಯಿ
ಬೇಕಾಗುವ ಪದಾರ್ಥಗಳು
- ಕ್ಯಾರೆಟ್ 2
- ನವಿಲು ಕೋಸು 2
- ತೊಂಡೆಕಾಯಿ 5
- ನೀರು 4 ಕಪ್
- ಉಪ್ಪು 1/2 ಕಪ್ + 1/4 ಕಪ್
- ಸಕ್ಕರೆ 1/2 ಕಪ್
- ವಿನಿಗರ್ 1/2 ಕಪ್
- ಒಣಮೆಣಸು 100 ಗ್ರಾಂ
- ಸಾಸಿವೆ 2 ದೊಡ್ಡ ಚಮಚ
- ಜೇರಿಗೆ 1 ಚಿಕ್ಕ ಚಮಚ
- ಉದ್ದಿನಬೇಳೆ 1 ದೊಡ್ಡ ಚಮಚ
- ಎಳ್ಳೆಣ್ಣೆ 1/4 ಕಪ್
- ಸಾಸಿವೆ 1 ಚಿಕ್ಕ ಚಮಚ
- ಕರಿಬೇವು 10 ಎಲೆ
ಮಾಡುವ ವಿಧಾನ:
ಕ್ಯಾರೆಟ್, ನವಿಲು ಕೋಸು ಎರಡರ ಸಿಪ್ಪೆ ತೆಗೆದು ತುಂಡುಗಳಾನ್ನಾಗಿ ಕತ್ತರಸಿ, ತೊಂಡೆಕಾಯಿಗಳನ್ನು ಕತ್ತರಸಿ, ಎಲ್ಲವನ್ನು ಒಂದು ದಿನ ಉಪ್ಪು ಹಾಕಿ ಇಡಬೇಕು. ನೀರಿನಲ್ಲಿ ವಿನೆಗರ್,ಸಕ್ಕರೆ, ಸ್ವಲ್ಪ ಉಪ್ಪು ಹಾಕಿ ಕುದಿಸಿ, ತಣಿಸಿಬೇಕು. ಸೋಸಿದ ತರಕಾರಿಗಳನ್ನು ಹಾಕಿ ಒಂದು ವಾರ ನೆನೆಯಲು ಇಡಿ. ದಿನಕ್ಕೆ ಒಂದು ಬಾರಿ ಕೈಯಾಡಿಸಿ. ಮೆಣಸು, ಸಾಸಿವೆ, ಜೇರಿಗೆ ಮತ್ತು ಉದ್ದಿನಬೇಳೆಯನ್ನು ಹುರಿದು ಹುಡಿಮಾಡಿ ತರಕಾರಿಗಳಿಗೆ ಸೇರಿಸಿಬೇಕು. ಎಣ್ಣೆ, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಎರಡು ದಿನಗಳ ಬಳಿಕ ಫ್ರಿಡ್ಜ್ ನಲ್ಲಿಟ್ಟು ಕೊಳ್ಳಿ. ಬೇಕಾದಾಗ ಸ್ವಲ್ಪ ತೆಗೆದು ಉಪಯೋಗಿಸಿ. ಉಪ್ಪಿನಕಾಯಿ ಸಿಹಿ ಬೇಕಿದ್ದರೆ ಅರ್ಧ ಕಪ್ ಸಕ್ಕರೆಯನ್ನು ಪಾಕ ಆಗುವವರೆಗೆ ಕುದಿಸಿಬೇಕು.
ಟೊಮೆಟೊ ಉಪ್ಪಿನಕಾಯಿ
ಬೇಕಾಗುವ ಪದಾರ್ಥಗಳು
- ಹಣ್ಣಾದ ಟೊಮೆಟೊ 1/2 ಕಿಲೊ ಗ್ರಾಂ
- ಉಪ್ಪು 4 ದೊಡ್ಡ ಚಮಚ
- ಎಣ್ಣೆ 3/4 ಕಪ್
- ವಿನೆಗರ್ 1/4 ಕಪ್
- ಅರಸಿನ ಹುಡಿ 1 ಚಿಕ್ಕ ಚಮಚ
- ಸಾಸಿವೆ 1 ಚಿಕ್ಕ ಚಮಚ
- ಮೆಂತೆ 1 ಚಿಕ್ಕ ಚಮಚ
- ಕರಿಬೇವು ಸೊಪ್ಪು 10
- ಖಾರದ ಹುಡಿ 3 ದೊಡ್ಡ ಚಮಚ
- ಸಾಸಿವೆ ಹುಡಿ 2 ದೊಡ್ಡ ಚಮಚ
- ಹಿಂಗಿನ ಹುಡಿ 1/2 ಚಿಕ್ಕ ಚಮಚ
- ಸಕ್ಕರೆ 2 ದೊಡ್ಡ ಚಮಚ
ಮಾಡುವ ವಿಧಾನ:
ಟೊಮೆಟೊವನ್ನು ಚಿಕ್ಕದಾಗಿ ಹೆಚ್ಚಿಕೊಂಡು ಉಪ್ಪು, ವಿನೆಗರ್, ಅರಸಿನ ಹಾಕಿ ಒಂದು ನಿಮಿಷ ತಣಿಸಿಬೇಕು, ಮಸಾಲೆ ಹುಡಿಗಳನ್ನು ಸೇರಿಸಿ ಸಣ್ಣ ಬೆಂಕಿಯಲ್ಲಿ ಹುರಿದು ಹೆಚ್ಚಿದ ಟೊಮೆಟೊವನ್ನು ಸೇರಿಸಿ, ಸಕ್ಕರೆಯನ್ನು ಸೇರಿಸಿ ಅರ್ಧ ತಾಸು ಸಣ್ಣ ಬೆಂಕಿಯಲ್ಲಿ ಬೇಯಿಸಿಬೇಕು, ಪಲಾವು, ಅನ್ನ, ದೋಸೆ ಜತೆ ಬಡಿಸಿ.
ಹಲಸಿನಕಾಯಿ ಉಪ್ಪಿನಕಾಯಿ
ಬೇಕಾಗುವ ಪದಾರ್ಥಗಳು
- ಎಳತು ಹಲಸಿನಕಾಯಿ 1
- ಉಪ್ಪು 1/2 ಕಪ್
- ಒಣಮೆಣಸು 100 ಗ್ರಾಂ
- ಸಾಸಿವೆ 30 ಗ್ರಾಂ
- ಅರಸಿನ ಹುಡಿ 1 ಚಿಕ್ಕ ಚಮಚ
- ವಿನೆಗರ್ 1 ಕಪ್
- ತೆಂಗಿನಣ್ಣೆ 2 ದೊಡ್ಡ ಚಮಚ
- ಹಿಂಗು ಚಿಟಿಕೆ
- ಸಾಸಿವೆ 1 ಚಿಕ್ಕ ಚಮಚ
- ಕರಿಬೇವು 5 ಎಲೆ
ಮಾಡುವ ವಿಧಾನ:
ಹಲಸಿನಕಾಯಿ ಸಿಪ್ಪೆ, ಗೂಂಜಿ (ಕೋರ್ ) ತೆಗೆದು ಚಿಕ್ಕ ಹೋಳುಗಳನ್ನಾಗಿ ಹೆಚ್ಚಿಕೊಳ್ಳಬೇಕು (ಹಲಸಿನಲ್ಲಿ ಬೀಜ ಆಗಿರಬಾರದು). ನೀರನ್ನು ಕುದಿಸಿ ಅರಸಿನ ಮತ್ತು ಸ್ವಲ್ಪ ಉಪ್ಪು, ಹೆಚ್ಚಿದ ಹಲಸು ಹಾಕಿ. ಎರಡು ನಿಮಿಷ ಕುದಿಸಿ ಸೋಸಿಕೊಳ್ಳಿ. ಕುದಿಸಿ ತಣಿಸಿದ ನೀರಲ್ಲಿ ಮೆಣಸು, ಸಾಸಿವೆ, ಉಪ್ಪು ಹಾಕಿ ಮಿಕ್ಸಿಯಲ್ಲಿ ಅರೆದು ಹಲಸಿನ ಹೋಳುಗಳಿಗೆ ಮಿಕ್ಸ್ ಮಾಡಿ. ವಿನೆಗರ್ ಅನ್ನು ಸೇರಿಸಿ ಬೇಕಾದಷ್ಟು ನೀರು ಹಾಕಿ ಉಪ್ಪಿನಕಾಯಿ ಹದ ಮಾಡಿ. ಎಣ್ಣೆ ಕಾಯಿಸಿ, ಸಾಸಿವೆ, ಇಂಗು ಕರಿಬೇವು ಎಲೆಗಳಿಂದ ಒಗ್ಗರಣೆ ಕೊಡಿ. ಫ್ರಿಜ್ಜಿ ನಲ್ಲಿಟ್ಟು ಉಪಯೋಗಿಸಿ.
ಅಮೆಟೇಕಾಯಿ ಉಪ್ಪಿನಕಾಯಿ
ಬೇಕಾಗುವ ಪದಾರ್ಥಗಳು
- ಅಮೆಟೇಕಾಯಿ (ಅಂಬಡೆ ) 10
- ಒಣಮೆಣಸು 20
- ಸಾಸಿವೆ 3 ದೊಡ್ಡ ಚಮಚ
- ಉಪ್ಪು 4 ದೊಡ್ಡ ಚಮಚ
- ಮೆಂತೆ 1/2 ಚಿಕ್ಕ ಚಮಚ
- ಜೇರಿಗೆ 1 ಚಿಕ್ಕ ಚಮಚ
- ಅರಸಿನ ಪುಡಿ 1 ಚಿಕ್ಕ ಚಮಚ
- ಇಂಗು ಪುಡಿ 1 ಚಿಕ್ಕ ಚಮಚ
ಮಾಡುವ ವಿಧಾನ:
ಅಮಟೇ ಕಾಯಿಯನ್ನು ನಾಲ್ಕು ತಾಸು ಬಿಸಿಲಲ್ಲಿ ಒಣಗಿಸಿ, ಒರಳಲ್ಲಿ ಹಾಕಿ ಗುದ್ದಿ. ಗೊರಟು ಬೇರ್ಪಡಿಸಿ ಎಸೆಯಿರಿ. ಸಿಪ್ಪೆ ಚಿಕ್ಕ ತುಂಡುಗಳನ್ನಾಗಿ ಕತ್ತರಸಿ ಒಂದು ದಿನ ಉಪ್ಪಲ್ಲಿ ಹಾಕಿ ಇಡಿ. ಮೆಣಸು, ಸಾಸಿವೆ, ಜೀರಿಗೆ ಮೆಂತೆ -ಬಿಸಿಲಲ್ಲಿ ಒಣಗಿಸಿ ಹುಡಿ ಮಾಡಿಕೊಳ್ಳಬೇಕು. ಅರಸಿಣ ಪುಡಿಯನ್ನು ಸೇರಿಸಿ ಒಂದು ದಿನ ನೆನೆಯಲು ಇಟ್ಟು ನಂತರ ಉಪಯೋಗಿಸಿ.
ಲಿಂಬೆ ಉಪ್ಪಿನಕಾಯಿ
ಬೇಕಾಗುವ ಪದಾರ್ಥಗಳು
- ಲಿಂಬೆ 10
- ಉಪ್ಪು 1 ಕಪ್
- ಒಣಮೆಣಸು 40
- ಸಾಸಿವೆ 1/4 ಕಪ್
- ಅರಸಿನ ಹುಡಿ 1 ಚಿಕ್ಕ ಚಮಚ
- ಎಣ್ಣೆ 1 ದೊಡ್ಡ ಚಮಚ
- ಮೆಂತೆ 1ಚಿಕ್ಕ ಚಮಚ
- ಹಿಂಗು 1/2 ಚಿಕ್ಕ ಚಮಚ
- ಕರಿಬೇವಿನ ಎಲೆ 10
ಮಾಡುವ ವಿಧಾನ:
ಲಿಂಬೆಯನ್ನು ಕುದಿಯುವ ನೀರಲ್ಲಿ ಹಾಕಿ ಮುಚ್ಚಿಡಿ (ಬೇಯಿಸಬೇಡಿ ). ತಣಿದ ಮೇಲೆ ನಾಲ್ಕು ಹೋಳುಗಳನ್ನಾಗಿ ಕತ್ತರಸಿ ಉಪ್ಪನ್ನು ಸೇರಿಸಿ ಭರಣಿಯಲ್ಲಿ ಹಾಕಿ ಎರಡು ದಿನ ಇಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಮೆಣಸು, ಸಾಸಿವೆ, ಮೆಂತೆ, ಕರಿಬೇವು ಹುರಿದು ಪುಡಿ ಮಾಡಿಕೊಳ್ಳಬೇಕು. ಇಂಗು ಮತ್ತು ಅರಸಿಣ ಪುಡಿಯನ್ನು ಸೇರಿಸಿ ನೆನೆಸಿಟ್ಟ ಲಿಂಬೆ ಹೋಳಿಗೆ ಮಿಕ್ಸ್ ಮಾಡಿ ಎರಡು ದಿನ ಬಳಿಕ ಉಪಯೋಗಿಸಿರಿ.
ಹಾಗಲಕಾಯಿ ಉಪ್ಪಿನಕಾಯಿ
ಬೇಕಾಗುವ ಪದಾರ್ಥಗಳು
- ಹಾಗಲಕಾಯಿ 1/4 ಕಿಲೊ ಗ್ರಾಂ
- ಉಪ್ಪು 1/4 ಕಪ್
- ಒಣಮೆಣಸು 10
- ಸಾಸಿವೆ 1 ಚಿಕ್ಕ ಚಮಚ
- ಜೀರಿಗೆ 1 ಚಿಕ್ಕ ಚಮಚ
- ಕೊತ್ತಂಬರಿ 1 ದೊಡ್ಡ ಚಮಚ
- ಎಣ್ಣೆ 4 ದೊಡ್ಡ ಚಮಚ
- ಲಿಂಬೆರಸ 2 ದೊಡ್ಡ ಚಮಚ
ಮಾಡುವ ವಿಧಾನ:
ಹಾಗಲಕಾಯಿಯನ್ನು ಗೋಲಾಕಾರದ ಬಿಲ್ಲೆಗಳನ್ನಾಗಿ ಕತ್ತರಸಿ, ಬೀಜ ತಿರುಳನ್ನು ತೆಗೆದು ಉಪ್ಪನ್ನು ಹಾಕಿ ಎರಡು ತಾಸು ಇಡಬೇಕು, ಸೋಸಿಕೊಳ್ಳಬೇಕು. ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಕಾಯಿಸಿ, ಬಿಲ್ಲೆಗಳನ್ನು ಎರಡು ನಿಮಿಷ ಹುರಿಯಿರಿ. ಮೇಲೆ ತಿಳಿಸಿದ ಎಲ್ಲಾ ಮಸಾಲೆ ಸಾಮಗ್ರಿಗಳನ್ನು ಎಣ್ಣೆಯಲ್ಲಿ ಹುರಿದು ಹುಡಿ ಮಾಡಿ, ಹುರಿದ ಬಿಲ್ಲೆಗಳಿಗೆ ಸೇರಿಸಿ, ಲಿಂಬೆರಸವನ್ನು ಸಿಂಪಡಿಸಿ, ಸವಿಯಿರಿ.
ಲಿಂಬೆ ಚಟ್ನಿ ಉಪ್ಪಿನಕಾಯಿ
ಬೇಕಾಗುವ ಪದಾರ್ಥಗಳು
- ಲಿಂಬೆ ಹುಳಿ 20
- ಉಪ್ಪು 1/2 ಕಪ್
- ನೀರು 1/2 ಕಪ್
- ಖಾರದ ಹುಡಿ 1/2 ಕಪ್
- ಸಾಸಿವೆ 1 ದೊಡ್ಡ ಚಮಚ
- ಹಿಂಗು 1/2 ಚಿಕ್ಕ ಚಮಚ
- ಎಣ್ಣೆ 1/4 ಕಪ್
- ಕರಿಬೇವು 10 ಎಲೆ
ಮಾಡುವ ವಿಧಾನ:
ಲಿಂಬೆಯನ್ನು ಚಿಕ್ಕದಾಗಿ ಕತ್ತರಸಿ (ಬೀಜ ಎಸೆಯಿರಿ ) ಉಪ್ಪು ನೀರು ಹಾಕಿ ಮೆತ್ತಗೆ ಬೇಯಿಸಬೇಕು. ತಣಿದ ನಂತರ ಲಿಂಬೆ ಹಣ್ಣಿಗೆ ಖಾರದ ಪುಡಿ ಹಾಗೂ ಹಿಂಗು ಸೇರಿಸಬೇಕು. ಮಿಕ್ಸಿಗೆ ಮಾಡಿದ ಲಿಂಬೆ ಮಿಶ್ರಣವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಕೊನೆಯಲ್ಲಿ ಒಂದು ಪಾತ್ರೆಗೆ ವರ್ಗಾಯಿಸಿಕೊಂಡು ಎಣ್ಣೆ, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಬೇಕು. ಅಲ್ಲಿಗೆ ಲಿಂಬೆ ಚಟ್ನಿ ಉಪ್ಪಿನ ಕಾಯಿ ಸವಿಯಲು ಸಿದ್ದವಾಗುತ್ತದೆ.
ಉಪ್ಪಿನ ಕಾಯಿಯನ್ನು ಭರಣಿಯಲ್ಲಿ ತುಂಬಿದ ನಂತರ ಅದನ್ನು ನೀರು ಹಾಗೂ ಗಾಳಿ ತಾಕದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಉಪ್ಪಿನಕಾಯಿ ಕೆಡುವ ಸಾಧ್ಯತೆ ಜಾಸ್ತಿ ಇರುತ್ತದೆ. ಇಷ್ಟೆಲ್ಲ ವಿಧ ವಿಧವಾದ ಉಪ್ಪಿನಕಾಯಿಗಳನ್ನು ಮಾಡಿ, ಒಮ್ಮೆ ಪ್ರಯತ್ನಿಸಿ ಎಂಬುದು ನಮ್ಮ ಆಶಯ.
ಇದರ ಜೊತೆಗೆ ಚಟ್ನಿಪುಡಿಗಳು ಹಾಗೂ ಹಪ್ಪಳಗಳನ್ನು ತಯಾರಿಸುವ ವಿಧಾನಗಳ ಬಗೆಗಿನ ಲೇಖನಗಳನ್ನು ಓದಿರಿ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.