
ಪ್ರಸ್ತುತ ದಿನಮಾನದಲ್ಲಿ ಹಲವಾರು ಕಾರಣಗಳಿಂದ ಕೆಮ್ಮು ಕಾಣಿಸಿಕೊಳ್ಳುತ್ತದೆ. ಹಸಿ ಕೆಮ್ಮು ಕಫದಿಂದ ಹಾಗು ಒಣ ಕೆಮ್ಮು ಕಫ ಗಟ್ಟಿಯಾದ ಮೇಲೆ, ಇನ್ನು ಅನೇಕ ಕಾರಣಗಳಿಂದ ಬರುವುದು. ಅದಕ್ಕೆ ನಮ್ಮ ದಿನನಿತ್ಯ ಬಳಸುವ ಸಾಮಗ್ರಿಗಳಿಂದ ಕೆಮ್ಮಿನ ಉತ್ತಮ ಔಷಧಿಯನ್ನು ತಯಾರಿಸಬಹುದು.
ಶುಂಠಿ ಮತ್ತು ಜೇನುತುಪ್ಪ
ಒಂದಿಂಚು ಶುಂಠಿಯನ್ನು ಚೆನ್ನಾಗಿ ಜಜ್ಜಿ ರಸ ತೆಗೆದುಕೊಳ್ಳಬೇಕು. ಶುಂಠಿ ರಸದೊಂದಿಗೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ನಿತ್ಯ ಕುಡಿಯುದರಿಂದ ಕೆಮ್ಮಿನ ನಿವಾರಣೆಯಾಗುತ್ತದೆ.
ಕೆಂಪು ಕಲ್ಲುಸಕ್ಕರೆ ಮತ್ತು ಲಿಂಬು
ಕೆಂಪು ಕಲ್ಲುಸಕ್ಕರೆ ಒಂದು 100 ಗ್ರಾಂ ನಷ್ಟು ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಒಂದು ವೇಳೆ ಕೆಂಪು ಕಲ್ಲುಸಕ್ಕರೆ ಸಿಗದಿದ್ದರೆ ಬಿಳಿ ಕಲ್ಲುಸಕ್ಕರೆ ಉಪಯೋಗ ಮಾಡಿಕೊಳ್ಳಬಹುದು. ನುಣ್ಣಗೆ ಪುಡಿ ಮಾಡಿದ ಕಲ್ಲುಸಕ್ಕರೆ ಪುಡಿಯನ್ನು ಲಿಂಬು ಹಣ್ಣಿನ ರಸದಲ್ಲಿ ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ಆ ಮಿಶ್ರಣವನ್ನು ಬಿಸಿ ಮಾಡಿ ಒಂದು ಕುದಿ ಬರುವವರೆಗೂ ಚೆನ್ನಾಗಿ ಕುದಿಸಿ ಆರಿಸಬೇಕು. ನಂತರ ಒಂದು ಚಮಚ ಪ್ರತಿ ದಿನ ತಿಂದರೆ ಕಫ ಕರಗಿ ಕೆಮ್ಮು ಕಡಿಮೆಯಾಗುತ್ತದೆ
ವೀಳ್ಯದೆಲೆ ಮತ್ತು ಉಪ್ಪು
ವೀಳ್ಯದೆಲೆಯನ್ನೂ ಚೆನ್ನಾಗಿ ತೊಳೆದು ಸಣ್ಣ ಸಣ್ಣ ಚೂರಾಗಿ ಮಾಡಿಕೊಂಡು ದಿನಕ್ಕೆ ಎರಡು ಭಾರಿ ವೀಳ್ಯದೆಲೆ ಚೂರು ಮತ್ತು ಉಪ್ಪುನ್ನು ಒಟ್ಟಿಗೆ ತಿನ್ನುವುದರಿಂದ ಕೆಮ್ಮು ತ್ವರಿತವಾಗಿ ಕಡಿಮೆ ಆಗುತ್ತದೆ.
ಕಾಳುಮೆಣಸಿನ ಕಷಾಯ
ಒಂದು ಚಮಚ ಕಾಳುಮೆಣಸು ಹಾಗು 2 ಏಲಕ್ಕಿ ಎನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡೊಳ್ಳಬೇಕು. ಒಂದು ಪಾತ್ರೆಯಲ್ಲಿ ನೀರನ್ನು ಬಿಸಿಗೆ ಇಟ್ಟುಕೊಂಡು ಕುಡ್ಡಿ ಪುಡಿ ಮಾಡಿದ ಕಾಳುಮೆಣಸು ಹಾಗು ಏಲಕ್ಕಿಯನ್ನು ಸೇರಿಸಿ ಕುದಿಸಬೇಕು. ಕುದಿಯುವಾಗ ಸ್ವಲ್ಪ ಬೆಲ್ಲ ಹಾಕಿ 2 ನಿಮಿಷ ಮತ್ತೆ ಕುದಿಸಬೇಕು. ಕೊನೆಯಲ್ಲಿ ಹಾಲನ್ನು ಸೇರಿಸಿ ಮತ್ತೆ ಶೋಧಿಸಿ ಬಿಸಿ ಬಿಸಿ ಕಷಾಯ ಕುಡಿಯುವುದರಿಂದ ಗಂಟಲಿನ ಹುಣ್ಣು ಕಡಿಮೆಯಾಗಿ ಕೆಮ್ಮು ಬೇಗನೆ ಕಡಿಮೆಯಾಗುತ್ತದೆ.
ಸಾಲ್ಟ್ ವಾಟರ್ ಗಾರ್ಗೇಲಿಂಗ್
ಉಪ್ಪುನೀರಿನಿಂದ ಬಾಯಿ ಮುಕ್ಕಳಿಸುತ್ತಾ ಇರುವುದರಿಂದ ಬಾಯಿಯಲ್ಲಿನ ಹುಣ್ಣು ಹಾಗೂ ಗಂಟಲಿನ ಕಫ ಕರಗಿ ಕೆಮ್ಮು ಆದಷ್ಟು ಬೇಗ ಕಡಿಮೆ ಆಗುತ್ತದೆ. ದಿನದಲ್ಲಿ 3 ಗಂಟೆಗೊಮ್ಮೆ ಮಾಡಿದರೆ ತ್ವರಿತ ಪರಿಹಾರವನ್ನು ಕಾಣಬಹುದು. ಹಾಗೆಯೇ ಸ್ಟೀಮ್ ತೆಗೆದುಕೊಳ್ಳುವುದರಿಂದ ಗಂಟಲಿಗೆ ಆರಾಮ ಸಿಗುತ್ತದೆ.
ಈರುಳ್ಳಿ ಸಿರಪ್
ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ರಸತೆಗೆದು ಆ ರಸದೊಂದಿಗೆ ಜೇನುತುಪ್ಪ ಬೆರೆಸಿ ಮಿಶ್ರಣವನ್ನು ಚೆನ್ನಾಗಿ ಕಲಸಿ ಸ್ವಲ್ಪ ಹೊತ್ತು ಬಿಟ್ಟು ಸ್ವಲ್ಪ ಸೇವಿಸಬೇಕು.ಇದು ಕಫ ಕರಗಲು ಉತ್ತಮವಾಗಿದೆ.
ಬಾದಾಮಿ ಹಾಗು ಬೆಣ್ಣೆ
ಬಾದಾಮಿ ಕೆಮ್ಮಿಗೆ ಉತ್ತಮವಾಗಿದ್ದು, ಸುಮಾರು 8 ಕಾಳುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಬೇಕು. ಸಿಪ್ಪೆಯನ್ನು ತೆಗೆದ ನಂತರ, ಬಾದಾಮಿಗಳನ್ನು ನುಣ್ಣಗೆ ಪುಡಿಮಾಡಿ ಪೇಸ್ಟ್ ಮಾಡಬೇಕು. ಈ ಮಿಶ್ರಣಕ್ಕೆ ಸ್ವಲ್ಪ ಬೆಣ್ಣೆ ಮತ್ತು ಸಕ್ಕರೆ ಸೇರಿಸಬೇಕು. ಬೆಳಿಗ್ಗೆ ಮತ್ತು ಸಂಜೆ ತಿನ್ನುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ. ಒಣ ಕೆಮ್ಮಿಗೆ ಇದು ಒಳ್ಳೆಯ ಮದ್ದಾಗಿದೆ.
ಇನ್ನೂ ಹೆಚ್ಚಿನ ಚುಟುಕು ಹಾಗೂ ಸುಲಭ ಮನೆಮದ್ದುಗಳ ಮಾಹಿತಿಗಳು
- ಸಣ್ಣ ಮಕ್ಕಳಿಗೆ ಈರುಳ್ಳಿಯನ್ನು ಹಿಂಡಿ ರಸವನ್ನು ಎದೆಗೆ ಹಚ್ಚುವುದರಿಂದ ಕಫ ಕರಗುತ್ತದೆ ಹಾಗೂ ಕೆಮ್ಮು ಕರಗುತ್ತದೆ.
- ಹತ್ತು ದಳ ತುಳಸಿಯನ್ನು ಹಾಗೂ ನಾಲ್ಕು ಲವಂಗವನ್ನು ಅರೆದು ರಸವನ್ನು ಹಿಂಡಿಕೊಳ್ಳಬೇಕು. ಈ ರಸವನ್ನು ಜೇನುತುಪ್ಪಡೊಡನೆ ಸೇವಿಸಿದರೆ ಕೆಮ್ಮು ಬೇಗನೆ ಗುಣವಾಗುತ್ತದೆ.
(ತುಳಸಿ ಬಗೆಗಿನ ಹಲವು ಮಾಹಿತಿಗಾಗಿ ಓದಿರಿ)
- ಗಂಟಲ ಕೆರೆತ ಹಾಗೂ ಕಿರು ನಾಲಿಗೆಯ ಸಮಸ್ಯೆಯಿಂದ ಬರುವ ಕೆಮ್ಮಿಗೆ ಒಂದು ಮುಷ್ಠಿ ತುಳಸಿ ಹಾಗೂ ಒಂದು ಇಂಚು ಶುಂಠಿಯನ್ನು ಸೇರಿಸಿ ಜಜ್ಜಿಕೊಂಡು ರಸ ತೆಗೆಯಬೇಕು. ಈ ರಸವನ್ನು ಜೇನುತುಪ್ಪಡೊಡನೆ ಬೆರೆಸಿ ನಾಲಿಗೆಯಿಂದ ನೆಕ್ಕಿ ತಿನ್ನಬೇಕು. ಇದು ಗಂಟಲ ಕೆರೆತ, ಕಿರು ನಾಲಿಗೆ ಸಮಸ್ಯೆ ಹಾಗೂ ಕೆಮ್ಮು ಕೂಡ ಕಡಿಮೆಯಾಗುತ್ತದೆ.
- ಮೆಂತ್ಯ ಸೊಪ್ಪು ಹಾಗೂ ಹಸಿ ಶುಂಠಿಯನ್ನು ಸೇರಿಸಿ ಜಜ್ಜಿಕೊಂಡು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಶೋಧಿಸಿಕೊಂಡು ಜೇನುತುಪ್ಪದ ಜೊತೆ ಸೇವಿಸಬೇಕು. ಇದರಿಂದ ಕೆಮ್ಮು ತ್ವರಿತವಾಗಿ ಕಡಿಮೆಯಾಗುತ್ತದೆ. ದಮ್ಮಿನ ಸಮಸ್ಯೆಗೂ ಇದು ಉತ್ತಮವಾಗಿದೆ.
- ಉಬ್ಬಸ ಹಾಗೂ ಕೆಮ್ಮಿಗೆ ಇನ್ನೊಂದು ಉತ್ತಮ ಔಷಧಿ, ಲವಂಗ, ಸಕ್ಕರೆ ಹಾಗೂ ಏಲಕ್ಕಿಯನ್ನು ಸೇರಿಸಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಕೆಮ್ಮು ಹಾಗೂ ದಮ್ಮು ಹೆಚ್ಚಾಗುವ ಸಮಯದಲ್ಲಿ ಅರ್ಧ ಚಮಚ ಸೇವಿಸಬೇಕು. ಇದು ಅತಿ ಉತ್ತಮವಾದ ಮನೆಮದ್ದಾಗಿದೆ. (ಏಲಕ್ಕಿಯಬಗೆಗಿನ ಸಂಪೂರ್ಣ ಮಾಹಿತಿಗಾಗಿ ಓದಿರಿ)
- ಕೆಮ್ಮಿಗೆ ಇನ್ನೊಂದು ಉತ್ತಮ ಪರಿಹಾರವೆಂದರೆ ತುಳಸಿ, ವೀಳ್ಯದೆಲೆ, ಲವಂಗ ಹಾಗೂ ಪಚ್ಚಕರ್ಪೂರವನ್ನು ಚಿಟಿಕೆ ಸೇರಿಸಿ ಚೆನ್ನಾಗಿ ಅರೆಯಬೇಕು. ಅನಂತರ ಹಿಂಡಿ ರಸವನ್ನು ತೆಗೆದು, ಜೇನುತುಪ್ಪವನ್ನು ಬೆರೆಸಿ ಸೇವಿಸಬೇಕು. ಇದು ಕೂಡ ಕೆಮ್ಮು, ದಮ್ಮಿಗೆ ಉತ್ತಮ ಪರಿಹಾರವಾಗಿದೆ.
- ಕೆಮ್ಮು, ನೆಗಡಿ, ಕಫಕ್ಕೆ ಒಂದು ಉತ್ತಮ ಪರಿಹಾರವೆಂದರೆ ಹುರಳಿ ಕಾಳು 2 ಚಮಚ, ಬೆಟ್ಟದ ನೆಲ್ಲಿಕಾಯಿಯ ಹೋಳುಗಳು 1 ಚಮಚ, ಹಿಪ್ಪಲಿ 1/2 ಚಮಚ, ಇದು ಮೂರನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ಇಟ್ಟ ನೀರು ಅರ್ಧದಷ್ಟು ಇಂಗಿದ ಮೇಲೆ ಶೋಧಿಸಿ ಕುಡಿಯಬೇಕು. ಇದು ಶೀತ, ಕೆಮ್ಮು, ನೆಗಡಿಗೆ ಉತ್ತಮ ಪರಿಹಾರವಾಗಿದೆ.
- ಹಿಪ್ಪಲಿ ಪುಡಿಯನ್ನು ಮತ್ತು ಅರಳನ್ನು ಸೇರಿಸಿ ಚೆನ್ನಾಗಿ ಪುಡಿಮಾಡಿಕೊಂಡು ಜೇನುತುಪ್ಪದ ಜೊತೆ ಬೆರೆಸಿ ಸೇವಿಸುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ.
- ಬೆಟ್ಟದ ನೆಲ್ಲಿಕಾಯಿಯನ್ನು ಜಜ್ಜಿ ರಸ ಹಿಂದುಕೊಳ್ಳಬೇಕು. ಒಂದು ಚಮಚ ನೆಲ್ಲಿಕಾಯಿ ರಸಕ್ಕೆ ಒಂದು ಚಮಚ ಶುದ್ಧ ಎಳ್ಳೆಣ್ಣೆಯನ್ನು ಸೇರಿಸಿ ಸೇವಿಸಬೇಕು. ಇದು ಎಲ್ಲಾ ವಿಧದ ಕೆಮ್ಮಿಗೆ ಉಪಯುಕ್ತವಾಗುತ್ತದೆ.
- ಉತ್ತತ್ತಿಯನ್ನು ಬೀಜ ತೆಗೆದು ಅತಿ ಮಧುರ ಹಾಗೂ ಹಿಪ್ಪಲಿಯ ಜೊತೆ ಸೇರಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಒಂದು ಚಮಚ ಪುಡಿಗೆ, 1/2 ಚಮಚ ದನದ ತುಪ್ಪ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ, ಸವಿಯಬೇಕು. ಇದು ಉಷ್ಣದಿಂದ ಬರುವ ಕೆಮ್ಮಿಗೆ ಅತಿ ಉತ್ತಮವಾದ ಮದ್ದಾಗಿದೆ.
- ಅಮೃತ ಬಳ್ಳಿಯ ರಸವನ್ನು ಎಲೆಗಳನ್ನು ಜಜ್ಜಿ, ಹಿಂಡಿ ತೆಗೆದುಕೊಳ್ಳಬೇಕು. ಒಂದು ಚಮಚ ರಸವನ್ನು ಕೆಮ್ಮು ಬರುವ ಸಮಯದಲ್ಲಿ ಜೇನುತುಪ್ಪದೊಡನೆ ಸೇವಿಸಬೇಕು. ಇದು ಕಫ, ಕೆಮ್ಮು ಹಾಗೂ ದಮ್ಮಿನ ಸಮಸ್ಯೆಗೂ ಉತ್ತಮ ಪರಿಹಾರವನ್ನು ನೀಡುತ್ತದೆ.
- ಆಡುಸೋಗೆ ಸೊಪ್ಪನ್ನು ತೆಗೆದುಕೊಂಡು ಶುದ್ಧಿಕರಿಸಬೇಕು. ಸೊಪ್ಪನ್ನು ಚೆನ್ನಾಗಿ ಅರೆದು ರಸವನ್ನು ಹಿಂಡಿಕೊಳ್ಳಬೇಕು. ಈ ರಸಕ್ಕೆ ಜೇನುತುಪ್ಪವನ್ನು ಬೆರೆಸಿ ಸೇವಿಸಬೇಕು. ಇದು ಯಾವುದೇ ರೀತಿಯ ಕೆಮ್ಮಿಗೂ ಉಪಶಮನವನ್ನು ನೀಡುತ್ತದೆ.
- ಕೆಮ್ಮಿಗೆ, ಕಪ್ಪು ಕೆಸುವಿನ ಗಿಡದ ಗೆಡ್ಡೆಯನ್ನು ಹಾಗೂ ಬಿಳಿ ಈರುಳ್ಳಿ ಇವೆರಡನ್ನು ಸಣ್ಣಗೆ ಕತ್ತರಿಸಿ ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು. ಇಟ್ಟ ನೀರು ಅರ್ಧದಷ್ಟು ಇಂಗಿದ ಮೇಲೆ ಶೋಧಿಸಿ, ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯಬೇಕು. ಇದು ಕೂಡ ಕೆಮ್ಮಿಗೆ ಉತ್ತಮ ಪರಿಹಾರವಾಗಿದೆ.
- ಹುಳಿ ಹುಣಸೆಯನ್ನು ಹಾಗೂ ಸ್ವಲ್ಪ ಕೆನೆ ಸುಣ್ಣವನ್ನು ಸೇರಿಸಿ ಚೆನ್ನಾಗಿ ಬೆರೆಯುವಂತೆ ಕಲಸಬೇಕು. ಚೆನ್ನಾಗಿ ಕಲಸಿದ ನಂತರ ಒಂದು ಬಟಾಣಿ ಗಾತ್ರದ ಮಾತ್ರೆಗಳಾಗಿ ಮಾಡಿ, ಒಂದು ಮಾತ್ರೆಯನ್ನು ಸೇವಿಸಿ, ಬೆಚ್ಚಗಿನ ನೀರನ್ನು ಕುಡಿಯಬೇಕು. ಇದು ಕೆಮ್ಮಿಗೆ ತ್ವರಿತ ಪರಿಹಾರವನ್ನು ನೀಡುತ್ತದೆ.
- ಪ್ರತಿದಿನ ನಮ್ಮ ಮನೆಗಳಲ್ಲಿ ತಯಾರಿಸುವ ಚಹಾಕ್ಕೆ ಸ್ವಲ್ಪ ತುಳಸಿ ದಳಗಳು ಹಾಗೂ ಅಜ್ವಾನವನ್ನು ಸೇರಿಸಿ ಕುದಿಸಬೇಕು. ನಂತರ ಶೋಧಿಸಿ ಕುಡಿಯುವುದರಿಂದ ಕೆಮ್ಮು, ದಮ್ಮಿನ ಸಮಸ್ಯೆ ತ್ವರಿತವಾಗಿ ಕಡಿಮೆಯಾಗುತ್ತದೆ.
- ಅತಿ ಸುಲಭವಾಗಿ ಕೆಮ್ಮನ್ನು ದೂರಗೊಳಿಸುವ ವಿಧಾನವೆಂದರೆ ಅತಿ ಮಧುರವನ್ನು ಪುಡಿ ಮಾಡಿಕೊಂಡು, ಒಂದು ಚಮಚ ಪುಡಿಯನ್ನು ಜೇನುತುಪ್ಪದೊಡನೆ ಸೇವಿಸಬೇಕು. ಇದು ಉಬ್ಬಸ ಹಾಗೂ ಕೆಮ್ಮು ಎರಡಕ್ಕೂ ಉಪಯುಕ್ತವಾಗಿದೆ.
- ಮಕ್ಕಳಿಗೆ ಅಥವಾ ವಯಸ್ಕರಿಗೆ ರುಚಿಯಾದ ಕೆಮ್ಮಿನ ಟಾನಿಕ್ ಮಾಡುವುದರ ವಿಧಾನವನ್ನು ಈಗ ತಿಳಿಯೋಣ. ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಸಣ್ಣಗೆ ಹೆಚ್ಚಿಕೊಳ್ಳಬೇಕು. ಇನ್ನೊಂದೆಡೆ ಒಂದು ಕಪ್ ಸಕ್ಕರೆಗೆ ಅರ್ಧ ಕಪ್ ನೀರು ಹಾಕಿ ಪಾಕವನ್ನು ಸಿದ್ಧಗೊಳಿಸಬೇಕು. ಚೆನ್ನಾಗಿ ಕುದಿ ಬಂದ ಮೇಲೆ ಸಕ್ಕರೆ ಪಾಕಕ್ಕೆ ಬೆಳ್ಳುಳ್ಳಿಯನ್ನು ಸೇರಿಸಬೇಕು. ಈ ರೀತಿಯ ಕೆಮ್ಮಿನ ಪಾನಕವನ್ನು ಸೇವಿಸುವುದು ಸುಲಭವಾಗಿದೆ.
- ಹಿಂಗನ್ನು ಬಳಸಿ ತಯಾರಿಸುವ ಕೆಮ್ಮಿನ ಮನೆಮದ್ದಿನ ಬಗ್ಗೆ ಈಗ ತಿಳಿಯೋಣ. ಹುಣಸೆ ಮರದ ಎಲೆಗಳನ್ನು ಒಂದು ಕಪ್ ನಷ್ಟು ತೆಗೆದುಕೊಳ್ಳಬೇಕು. ಸ್ವಲ್ಪ ಹಿಂಗು ಹಾಗೂ ಸೈಂದವ ಲವಣ, ಇವು ಮೂರನ್ನು ನೀರಿನಲ್ಲಿ ಹಾಕಿ ಕುದಿಸಿ ಕಷಾಯವನ್ನು ತಯಾರಿಸಬೇಕು. ನಂತರ ಶೋಧಿಸಿಕೊಂಡು ಕಷಾಯವನ್ನು ಕುಡಿದರೆ ಕೆಮ್ಮು ಕಡಿಮೆಯಾಗುತ್ತದೆ.
- ಕೆಮ್ಮು ಹಾಗೂ ದಮ್ಮಿನ ನಿಯಂತ್ರಣಕ್ಕೆ ಲಿಂಬೆ ಗಿಡದ ಎಲೆಗಳು ಹಾಗೂ ಹೆರಳೆ ಗಿಡದ ಎಲೆಗಳನ್ನು ಚೆನ್ನಾಗಿ ಅರೆದು ರಸ ಹಿಂಡಿಕೊಂಡು, ಜೇನುತುಪ್ಪವನ್ನು ಬೆರೆಸಿ ಕುಡಿಯುವುದು ಅತಿ ಉತ್ತಮವಾಗಿದೆ.
(ಲಿಂಬೆ ಗಿಡದ ಸಂಪೂರ್ಣ ಮಾಹಿತಿಗಾಗಿ ನಮ್ಮ ಹಿಂದಿನ ಲೇಖನಗಳನ್ನು ಒಮ್ಮೆ ಓದಿ)
- ಜಾಸ್ತಿ ಕಫದ ಪರಿಣಾಮವಾಗಿ ಬರುವ ಕೆಮ್ಮಿಗೆ ಒಂದು ಉತ್ತಮ ಮನೆಮದ್ದು ಎಂದರೆ ಬದನೆಗಿಡದ ಬೇರು, ಹಾಗಲಕಾಯಿ ಗಿಡದ ಬೇರು, ಆಡುಸೋಗೆ ಬೇರು, ಶುಂಠಿ ಎಲ್ಲವನ್ನು ಸ್ವಲ್ಪ ಜಜ್ಜಿ ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು. ನೀರು ಅರ್ಧದಷ್ಟು ಇಂಗಿದ ಮೇಲೆ ಓಲೆ ಆರಿಸಿ, ಶೋಧಿಸಿಕೊಂಡು ಕುಡಿಯಬೇಕು.
(ಬೇರಿನ ಟೀ ಗಳ ಬಗೆಗಿನ ಲೇಖನಗಳನ್ನು ಕೂಡ ಒಮ್ಮೆ ಓದಿ)
- ಕಫ ಕರಗಿಸಲು ಒಂದು ಉತ್ತಮ ಮನೆಮದ್ದು, ಕರಿಮೆಣಸು, ಅಳಲೆ ಕಾಯಿ ಹಾಗೂ ಶುಂಠಿಯನ್ನು ಚೆನ್ನಾಗಿ ಹುರಿದು ಪುಡಿ ಮಾಡಿಕೊಳ್ಳಬೇಕು. ಒಂದು ಚಮಚ ತಯಾರಿಸಿದ ಪುಡಿಯನ್ನು ಜೇನುತುಪ್ಪಡೊಡನೆ ಸೇವಿಸುವುದರಿಂದ ಕಫವು ತ್ವರಿತವಾಗಿ ಕಡಿಮೆಯಾಗುತ್ತದೆ.
- ಕಫ ಉತ್ಪತ್ತಿ ಜಾಸ್ತಿ ಇರುವವರಿಗೆ ಒಂದು ಉತ್ತಮ ಮನೆಮದ್ದು ಎಂದರೆ ವೀಳ್ಯದೆಲೆಯನ್ನು ಚೆನ್ನಾಗಿ ಜಜ್ಜಿ ರಸ ಹಿಂಡಿಕೊಳ್ಳಬೇಕು. ಹಾಗೆ ಬಿಳಿ ಈರುಳ್ಳಿಯನ್ನು ಕೂಡ ಜಜ್ಜಿ ರಸ ಹಿಂಡಿಕೊಳ್ಳಬೇಕು. ಒಂದು ಚಮಚ ವೀಳ್ಯದೆಲೆ, ಒಂದು ಚಮಚ ಬಿಳಿ ಈರುಳ್ಳಿ ರಸ ಹಾಗೂ 1 ಚಮಚ ಜೇನುತುಪ್ಪವನ್ನು ಮೂರನ್ನು ಬೆರೆಸಿ ಸವಿಯಬೇಕು. ಇದು ಕಫದ ಕರಾಗುವಿಕೆಗೂ ಉತ್ತಮವಾಗಿದೆ.
(ಜೇನುತುಪ್ಪ ಹಾಗೂ ವೀಳ್ಯದೆಲೆಗಳ ಬಗೆಗಿನ ಲೇಖನಗಳನ್ನು ಒಮ್ಮೆ ಓದಿರಿ)
- ಕಫದ ಕರುಗುವಿಕೆಗೆ ಬಜೆಯ ಉಪಯೋಗ ಅತಿ ಉತ್ತಮವಾಗಿದೆ. ಬಜೆಯ ಬೇರನ್ನು ಸುಟ್ಟು ಬೂದಿಯಾಗಿಸಿ, ಆ ಭಸ್ಮವನ್ನು ಒಮ್ಮೆ ಶೋಧಿಸಿಕೊಳ್ಳಬೇಕು. ಈ ಭಸ್ಮವನ್ನು ಜೇನುತುಪ್ಪಡೊಡನೆ ಬೆರೆಸಿ ಒಂದು ಚಮಚ ಸೇವಿಸಬೇಕು.
- ಎಕ್ಕದ ಗಿಡದ ಎಲೆಗಳನ್ನು ನಾವು ದಮ್ಮಿನ ಖಾಯಿಲೆಗೆ ಉತ್ತಮ ಮದ್ದಾಗಿ ಬಳಸಬಹುದು. ಎಕ್ಕದ ಚಿಗುರೆಲೆಯನ್ನು ಒಂದು ವೀಳ್ಯದೆಲೆಯ ಜೊತೆ ಸೇರಿಸಿ ಒಂದು ತಿಂಗಳು ಕಾಲ ಪ್ರತಿದಿನ ಜಗಿದು ತಿನ್ನುವುದು ದಮ್ಮಿನ ಖಾಯಿಲೆ ನಿಯಂತ್ರಣಕ್ಕೆ ಅತಿ ಉತ್ತಮವಾಗಿದೆ.
(ಎಕ್ಕದ ಗಿಡದ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ನಮ್ಮ ಹಿಂದಿನ ಲೇಖನಗಳನ್ನು ಓದಿರಿ)
- ಕೆಮ್ಮು ದಮ್ಮಿಗೆ, ಅರಳಿ ಮರದ ಉಪಯೋಗಗಳು, ಕೆಂಪಕ್ಕಿಯ ಗಂಜಿಯನ್ನು ತಯಾರಿಸಿಕೊಳ್ಳಬೇಕು. ಹಾಗೆಯೇ ಅರಳಿ ಮರದ ತೊಗಟೆಯನ್ನು ಕುಟ್ಟಿ ಪುಡಿಮಾಡಿಕೊಳ್ಳಬೇಕು. ಕೆಂಪಕ್ಕಿಯ ಗಂಜಿಯ ಜೊತೆಗೆ ಅರಳಿ ಮರದ ತೊಗಟೆಯನ್ನು ಬೆರೆಸಿ ಸೇವಿಸಿದರೆ ಕೆಮ್ಮು, ದಮ್ಮು ತ್ವರಿತವಾಗಿ ಕಡಿಮೆಯಾಗುತ್ತದೆ. ಇದು ಅರೋಗ್ಯವರ್ಧಕವು ಕೂಡ ಹೌದು.
(ಅರಳಿ ಮರದ ಉಪಯೋಗಗಳ ಬಗ್ಗೆ ನಮ್ಮ ಹಿಂದಿನ ಲೇಖನದಲ್ಲಿ ಓದಿರಿ)
- ಆಡುಸೋಗೆ ಗಿಡದಿಂದ ಅನೇಕ ಉಪಯೋಗಗಳಿದ್ದು, ಕೆಮ್ಮು ನಿವಾರಣೆಗೂ ಉತ್ತಮವಾಗಿದೆ. ಆಡುಸೋಗೆ ಗಿಡದ ಎಲೆಗಳನ್ನು ಶುದ್ಧಿಗೊಳಸಿ, ನೀರಲ್ಲಿ ಕುದಿಸಿ ಕಷಾಯ ಮಾಡಿ ಕುಡಿಯುವುದು ಕೆಮ್ಮಿನ ನಿವಾರಣೆಗೆ ಅತಿ ಉತ್ತಮವಾಗಿದೆ. ಹಾಗೆಯೇ ಆಡುಸೋಗೆ ಗಿಡದ ಹೂವುಗಳನ್ನು ಜಜ್ಜಿಕೊಂಡು ರಸ ಹಿಂಡಿಕೊಳ್ಳಬೇಕು. ಈ ಆಡುಸೋಗೆ ಹೂವಿನ ರಸದೊಂದಿಗೆ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಕೆಮ್ಮು, ದಮ್ಮು ಎರಡು ಕೂಡ ಕಡಿಮೆಯಾಗುತ್ತದೆ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಕೆಮ್ಮು ಎಲ್ಲರಲ್ಲೂ ಅತಿ ಸಾಮಾನ್ಯವಾಗಿದ್ದು, ವಿವಿಧ ಪ್ರಕಾರದ ಕೆಮ್ಮುಗಳು ಒಬ್ಬೊಬ್ಬರಲ್ಲಿ ಕಾಣಸಿಗುತ್ತದೆ. ಎಲ್ಲಾ ರೀತಿಯ ಕೆಮ್ಮಿಗೂ ಈ ಪ್ರಸ್ತುತ ಲೇಖನದಲ್ಲಿ ಅನೇಕ ಮನೆಮದ್ದುಗಳ ಬಗೆಗಿನ ವಿವರಣೆಯನ್ನು ನೀಡಲಾಗಿದ್ದು, ಎಲ್ಲಾ ವಸ್ತುಗಳು ನಮ್ಮ ದಿನನಿತ್ಯ ಜೀವನದಲ್ಲಿ ಉಪಯೋಗಿಸುವಂತಹದ್ದೇ!!! ದೀರ್ಘ ಕಾಲದಿಂದ ಕೆಮ್ಮು, ದಮ್ಮಿನಿಂದ ಬಳಲುತ್ತಿದ್ದರೆ, ಈ ಮೇಲಿನ ಸುಲಭ ಮನೆಮದ್ದುಗಳ ಉಪಯೋಗವನ್ನು ಪಡೆದುಕೊಳ್ಳಿ ಎಂಬುದು ನಮ್ಮ ಆಶಯ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.
Very helpful 😋