ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?

Spread the love

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?
ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?. AI Image

ತುಂಬೆ ಗಿಡಗಳು ಗಾತ್ರದಲ್ಲಿ ಅತಿ ಚಿಕ್ಕದಾಗಿದ್ದು, ಪರಿಸರದಲ್ಲಿ ಎಲ್ಲೆಂದರಲ್ಲಿ ಯಾವುದೇ ಆರೈಕೆ ಇಲ್ಲದೆ ಉತ್ತಮವಾಗಿ ಬೆಳೆಯುತ್ತದೆ. ಸಣ್ಣ ಗಿಡ, ಪುಟ್ಟ ಹೂವುಗಳು ನೋಡಲು ಬಲು ಸುಂದರ. ಇಂಥ ಹೂವು ನೋಡಲು ಪುಟ್ಟದಾಗಿದ್ದರೂ, ನಮ್ಮ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡಲು ತುಂಬೆ ಸಸಿಯು ಸಹಾಯಕವಾಗಿದೆ. ಇಂತಹ ತುಂಬೆಯ ಅನೇಕ ಉಪಯೋಗಗಳ ಬಗ್ಗೆ ಈ ಲೇಖನದಲ್ಲಿ ನಾವು ವಿಶ್ಲೇಶಿಸೋಣ.

ತುಂಬೆಯ ಕೆಲವು ಧಾರ್ಮಿಕ ವಿಚಾರಗಳು

ತುಂಬೆ ಗಿಡವು ಕೂಡ ಕೆಲವು ಧಾರ್ಮಿಕ ಹಿನ್ನಲೆಯನ್ನು ಹೊಂದಿದ್ದು, ಹಬ್ಬದ ಸಮಯದಲ್ಲಿ ಉಪಯೋಗಿಸುತ್ತಾರೆ. ಧಾರ್ಮಿಕ ಹಿನ್ನಲೆಗಳ ಪ್ರಕಾರ ಬಿಳಿ ತುಂಬೆ ಹೂವು ಶಿವನಿಗೆ ಅತ್ಯಂತ ಪ್ರಿಯವಾಗಿದ್ದು, ಶಿವನಿಗೆ ನಿತ್ಯ ಅರ್ಪಿಸುವ ಪದ್ದತಿಯು ಕೂಡ ಇದೆ. ಶಿವ ಪ್ರಿಯವಾದ ಈ ಪುಟ್ಟ ತುಂಬೆ ಗಿಡವು ಅನೇಕ ಪೂಜೆಗಳಲ್ಲೂ ಬಳಸಲಾಗುತ್ತದೆ.

ತುಂಬೆಯ ಆರೋಗ್ಯಕರ ಮನೆಮದ್ದುಗಳು

ನೆಗಡಿ, ಕೆಮ್ಮು ಹಾಗೂ ಉಬ್ಬಸಕ್ಕೆ ತುಂಬೆ ಹೂವಿನಿಂದ ಆಗುವ ಪರಿಹಾರಗಳು

  • ತುಂಬೆ ಸೊಪ್ಪಿನ ಗಿಡವನ್ನು ಚೆನ್ನಾಗಿ ಶುಚಿ ಮಾಡಿ, ಅರೆದು ರಸ ತೆಗೆದುಕೊಳ್ಳಬೇಕು. ಹೀಗೆ ಅರ್ಧ ಲೋಟದಷ್ಟು ಅರೆದು ರಸ ತೆಗೆದುಕೊಳ್ಳಬೇಕು. ಈ ರಸಕ್ಕೆ ಒಂದು ಚಮಚ ಶುಂಠಿ ರಸ ಸೇರಿಸಿ ಬಿಸಿ ಮಾಡಿಕೊಳ್ಳಬೇಕು. ಇವೆರಡರ ಮಿಶ್ರಣಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಬೇಕು. ಇದನ್ನು ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಉಬ್ಬಸ, ನೆಗಡಿ ಹಾಗೂ ಕೆಮ್ಮಿನಿಂದ ಮುಕ್ತಿ ಪಡೆಯಬಹುದು.
  • ತುಂಬೆ ಸೊಪ್ಪನ್ನು ಒಣಗಿಸಿ ಪುಡಿ ಮಾಡಿಕೊಳ್ಳಬೇಕು, ಒಂದು ಚಮಚ ತುಂಬೆ ಪುಡಿಯ ಜೊತೆಗೆ ಒಂದು ಚಮಚ ಅತಿಮಧುರ ಚೂರ್ಣವನ್ನು ಬೆರೆಸಿ, ಜೇನುತುಪ್ಪದೊಂದಿಗೆ ಮೂರು ದಿನಗಳ ಕಾಲ ಎರಡು ಬಾರಿ ಸೇವಿಸಬೇಕು. ಇದು ವಿಪರೀತ ನೆಗಡಿಯಾಗಿ ತಲೆ ಭಾರವಾದಗ ತುಂಬಾ ಉಪಯುಕ್ತವಾಗಿದೆ.
  • ತುಂಬೆ ಎಲೆಗಳನ್ನು ಅರ್ಧ ಚಮಚ ಅಕ್ಕಿಯ ಜೊತೆಗೆ ಚೆನ್ನಾಗಿ ಅರೆದು ಮಿಶ್ರಣ ತಯಾರಿಸಬೇಕು. ಈ ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿಕೊಂಡು ಜೇನುತುಪ್ಪ ಬೆರೆಸಿ ಸೇವಿಸಬೇಕು. ಇದು ನೆಗಡಿ, ಕೆಮ್ಮಿಗೆ ಅತಿ ಉತ್ತಮ ಪರಿಹಾರವಾಗಿದೆ.

ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ತುಂಬೆಯ ಪರಿಹಾರಗಳು

  • ವಿಪರೀತ ಹೊಟ್ಟೆ ನೋವು ಇದ್ದಲ್ಲಿ ತುಂಬೆ ಸೊಪ್ಪಿನ ರಸವನ್ನು ತೆಗೆದುಕೊಂಡು, ಆ ರಸದಲ್ಲಿ ಖರ್ಜುರವನ್ನು ಅರೆಯಬೇಕು. ಈ ರೀತಿ ತುಂಬೆ ಸೊಪ್ಪಿನ ರಸದಲ್ಲಿ ಖರ್ಜುರವನ್ನು ಅರೆದು ಸೇವಿಸುವುದರಿಂದ ಹೊಟ್ಟೆ ನೋವು ಶೀಘ್ರವಾಗಿ ಗುಣವಾಗುತ್ತದೆ.
  • ಹೊಟ್ಟೆಯಲ್ಲಿ ಆಹಾರವು ಸರಿಯಾಗಿ ಜೀರ್ಣವಾಗದಿದ್ದಲ್ಲಿ, ಅಂದರೆ ಅಜೀರ್ಣ ಸಮಸ್ಯೆಗಳು ಎದುರಾದಾಗ, ಇಲ್ಲವೇ ಹೊಟ್ಟೆ ಹಸಿವು ಆಗದಿದ್ದಾಗ ಕೂಡ ತುಂಬೆ ಗಿಡ ಉತ್ತಮ ಪರಿಹಾರವನ್ನು ನೀಡುತ್ತದೆ. ತುಂಬೆ ಎಲೆಗಳನ್ನು ಸಂಗ್ರಹಿಸಿ, ಶುಚಿಗೋಳಿಸಿಕೊಳ್ಳಬೇಕು. ಈ ಎಲೆಗಳನ್ನು ಬಾಳೆ ಎಲೆಯಲ್ಲಿ ಸುತ್ತಿಕೊಂಡು ಬೆಂಕಿ ಆರಿದ ಬೂದಿಯಲ್ಲಿ ಮುಚ್ಚಿಡಬೇಕು. ಸ್ವಲ್ಪ ಹೊತ್ತಿನ ನಂತರ ತೆಗೆದು, ಒಳಗಿರುವ ಅರ್ಧ ಬೆಂದಿರುವ ತುಂಬೆ ಎಲೆಗಳಿಗೆ ಸೈಂದವ ಲವಣವನ್ನು ಸೇರಿಸಿ ಸವಿಯಬೇಕು. ಇದು ಅಜೀರ್ಣತೆಯನ್ನು ನಿವಾರಿಸಿ, ಹಸಿವನ್ನು ಹೆಚ್ಚಿಸುತ್ತದೆ.
  • ಹೆಣ್ಣು ಮಕ್ಕಳಿಗೆ ಕಾಣಿಸುವ ಋತುಚಕ್ರದ ಸಮಯದ ಹೊಟ್ಟೆ ನೋವನ್ನು ನಿವಾರಿಸಲು ಕೂಡ ತುಂಬೆ ಸಹಾಯಕರಿಯಾಗಿದೆ. ಹೊಟ್ಟೆ ನೋವನ್ನು ನಿವಾರಿಸಲು ತುಂಬೆ ಗಿಡವನ್ನು ಚೆನ್ನಾಗಿ ಜಜ್ಜಿ ರಸ ತೆಗೆದುಕೊಳ್ಳಬೇಕು. ಒಂದು ಚಮಚ ತುಂಬೆ ರಸಕ್ಕೆ ಒಂದು ಚಮಚ ನಿಂಬೆ ರಸ ಹಾಗೂ ಕಾಲು ಚಮಚ ಉಪ್ಪನ್ನು ಸೇರಿಸಿ ತಿಂಗಳ ಮೂರು ದಿನಗಳು, ದಿನಕ್ಕೆ ಎರಡು ಬಾರಿಯಂತೆ ಕುಡಿಯಬೇಕು. ಇದು ಹೊಟ್ಟೆ ನೋವನ್ನು ಮಾಯವಾಗಿಸಲು ಅತಿ ಉತ್ತಮ ಮದ್ದಾಗಿದೆ.

ಅರಿಶಿನ ಕಾಮಾಲೆಗೆ ತುಂಬೆಯ ಉತ್ತಮ ಪರಿಹಾರಗಳು

ಅರಿಶಿನ ಕಾಮಾಲೆಯು ದೇಹದಲ್ಲಿ ಅನೇಕ ತೊಂದರೆಗಳನ್ನು ಉಂಟುಮಾಡುತ್ತದೆ. ನಮ್ಮ ಆಹಾರ ಪದ್ದತಿಯನ್ನು ಸುಧಾರಿಸಿಕೊಂಡು ನಾವು ಬಂದ ಸಮಸ್ಯೆಗಳಿಂದ ಪರಾಗುವುದು ಅತಿ ಮುಖ್ಯ. ಆಹಾರದ ಜೊತೆಗೆ ಕೆಲವು ಮನೆಮದ್ದುಗಳು ಕೂಡ ಅವಶ್ಯಕವಾಗುತ್ತದೆ. ಅದರಲ್ಲಿ ಒಂದು ಅರಿಶಿನ ಕಾಮಾಲೆಯಿಂದ ಮುಕ್ತಿ ನೀಡುವ ಮನೆಮದ್ದಿನ ಬಗ್ಗೆ ಇಲ್ಲಿದೆ ಕೆಲವು ಮಾಹಿತಿಗಳು. ಒಂದು ಮುಷ್ಠಿ ತುಂಬೆ ಸೊಪ್ಪನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಈ ಸೊಪ್ಪನ್ನು ಚೆನ್ನಾಗಿ ಅರೆದು, ಹಿಂಡಿಕೊಂಡು ರಸ ತೆಗೆದುಕೊಳ್ಳಬೇಕು. ಈ ರಸಕ್ಕೆ ಕಾಲು ಚಮಚ ಕರಿಮೆಣಸಿನ ಪುಡಿ ಹಾಗೂ ಕಾಲು ಚಮಚ ಸೈಂದವ ಲವಣವನ್ನು ಸೇರಿಸಿ ದಿನಕ್ಕೆ ಮೂರು ಹೊತ್ತು ಕುಡಿಯಬೇಕು. ಇದು ಅರಿಶಿನ ಕಾಮಾಲೆಯನ್ನು ಕ್ರಮೇಣವಾಗಿ ಕಡಿಮೆಯಾಗಿಸುತ್ತದೆ.

ಮಧುಮೇಹ ಸಮಸ್ಯೆಗೂ ಕೂಡ ತುಂಬೆ ಸಹಾಯಕಾರಿಯಾಗಿದೆ

  • ಮಧುಮೇಹ ಇಂದಿನ ದಿನಮಾನದಲ್ಲಿ ಸರ್ವೇ ಸಾಮಾನ್ಯವಾಗಿ ಜನರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಅನೇಕ ಮಾತ್ರೆಗಳನ್ನು ಸೇವಿಸಿ ಹತೋಟಿಗೆ ತರುವ ಪ್ರಯತ್ನ ನಿತ್ಯ ಇದ್ದೇ ಇರುತ್ತದೆ. ಅದರ ಜೊತೆಗೆ ನಮ್ಮ ಆಹಾರ ಪದ್ಧತಿಯಲ್ಲಿ ಕೂಡ ಸ್ವಲ್ಪ ಬದಲಾವಣೆ ತಂದುಕೊಂಡರೆ ಸಮಸ್ಯೆಗಳಿಂದ ಬೇಗನೆ ಹೊರಬರಬಹುದು ಅಲ್ಲವೇ? ಇಂತಹ ಮಧುಮೇಹವನ್ನು ನಿಯಂತ್ರಿಸಲು ಒಂದು ಮುಷ್ಠಿ ತುಂಬೆ ಸೊಪ್ಪನ್ನು ಮೂರು ಕರಿಮೆಣಸಿನ ಜೊತೆಗೆ ಚೆನ್ನಾಗಿ ಅರೆದುಕೊಂಡು, ಬೆಳಿಗ್ಗಿನ ಆಹಾರದ ಮುನ್ನ ಸ್ವೀಕರಿಸಬೇಕು. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿ, ಮಧುಮೇಹವನ್ನು ಸಂಪೂರ್ಣ ಹತೋಟಿಗೆ ಬರುವಂತೆ ಮಾಡುತ್ತದೆ.

ತಲೆ ನೋವಿನ ಸಮಸ್ಯೆಗೆ ತುಂಬೆಯ ಮನೆಮದ್ದುಗಳು

  • ತುಂಬೆಯ ಒಂದು ಲೇಪನವನ್ನು ಸಿದ್ದಪಡಿಸಿ ತಲೆ ಅಥವಾ ಗಂಟಲು ನೋವು ಇದ್ದಲ್ಲಿ ಹಚ್ಚಿದರೆ ನೋವು ತ್ವರಿತವಾಗಿ ಕಡಿಮೆಯಾಗುತ್ತದೆ. ಆ ಲೇಪನವನ್ನು ತಯಾರಿಸುವ ಬಗೆಯನ್ನು ಈಗ ತಿಳಿಯೋಣ. ತುಂಬೆ ರಸವನ್ನು ಚೆನ್ನಾಗಿ ಅರೆದು ರಸ ಹಿಂಡಿಕೊಳ್ಳಬೇಕು. ಈ ರಸಕ್ಕೆ ಕಾಲು ಚಮಚ ಬೆಲ್ಲ ಹಾಗೂ ಒಂದು ಸಾಸಿವೆ ಕಾಳು ಅಳತೆಯ ಸುಣ್ಣವನ್ನು ಬೆರೆಸಿ ಚೆನ್ನಾಗಿ ನೋವಿರುವ ಕಡೆ ಹಚ್ಚಬೇಕು. ಗಂಟಲು ನೋವಿದ್ದರೆ ಗಂಟಲಿನ ಭಾಗಕ್ಕೆ, ತಲೆ ನೋವಿದ್ದರೆ ಹಣೆಗೆ ಲೆಪಿಸಬೇಕು. ಇನ್ನೂ ದೇಹದ ಯಾವುದೇ ಭಾಗದಲ್ಲಿ ಊತ ಉಂಟಾದರೆ ಬಾಹ್ಯವಾಗಿ ಈ ಲೇಪನವನ್ನು ಹಚ್ಚಿದರೆ ನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
  • ಮೈಗ್ರೆನ್ ಅಥವಾ ಅರ್ಧ ತಲೆನೋವಿನ ಸಮಸ್ಯೆಗಳು ಇದ್ದಾಗ ತುಂಬೆ ಸೊಪ್ಪಿನ ರಸವನ್ನು ತೆಗೆದು, ಚೆನ್ನಾಗಿ ಶೋಧಿಸಿಕೊಳ್ಳಬೇಕು. ಈ ರಸವನ್ನು ಎರಡು ಹನಿ ಮೂಗಿನ ಹೊಳ್ಳೆಗಳಿಗೆ ಹಾಕುವುದರಿಂದ ಅರ್ಧ ತಲೆನೋವಿನ ಸಮಸ್ಯೆ ಕಡಿಮೆಯಾಗುತ್ತದೆ.

ಕೀಲು ಹಾಗೂ ಮೈ ಕೈ ನೋವಿನ ಸಮಸ್ಯೆಗಳಿಗೆ ತುಂಬೆಯ ಕಷಾಯ ಉತ್ತಮವಾಗಿದೆ.

  • ತುಂಬೆ ಎಲೆಗಳನ್ನು ನೆರಳಿನಲ್ಲಿ ಚೆನ್ನಾಗಿ ಒಣಗಿಸಿಕೊಂಡು ಪುಡಿ ಮಾಡಿಕೊಳ್ಳಬೇಕು. ಒಂದು ಲೋಟ ನೀರಿಗೆ ಒಂದು ಚಮಚ ತುಂಬೆ ಎಲೆಗಳ ಪುಡಿ ಹಾಗೂ ಅರ್ಧ ಚಮಚ ಹಿಪ್ಪಲಿಯ ಪುಡಿಯನ್ನು ಸೇರಿಸಿ ಕುದಿಸಬೇಕು. ನೀರು ಅರ್ಧದಷ್ಟು ಇಂಗಿದ ಮೇಲೆ ಶೋಧಿಸಿಕೊಂಡು ಒಂದು ಚಮಚ ಜೇನುತುಪ್ಪ ಬೆರೆಸಿ ಸೇವಿಸಬೇಕು. ಇದರಿಂದ ಮೈಕೈ ನೋವು, ಸುಸ್ತು, ಹಾಗೂ ಕೀಲು ನೋವು ಕಡಿಮೆಯಾಗುತ್ತದೆ.

ಮೂಗಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಕೂಡ ತುಂಬೆಯಿಂದ ಪರಿಹಾರವಿದೆ.

  • ಕೆಲವರಲ್ಲಿ ಬೆಳಿಗ್ಗೆ ಎದ್ದ ನಂತರ ಅನೇಕ ಬಾರಿ ಸೀನುವುದು ಕಂಡುಬಂದರೆ ತುಂಬೆ ಸೊಪ್ಪನ್ನು ಶುದ್ಧಗೊಳಿಸಿ, ಅರೆದು ರಸ ಹಿಂಡಿಕೊಳ್ಳಬೇಕು. ಈ ರಸವನ್ನು ಎರಡು ಬಾರಿ ಶೋಧಿಸಿಕೊಂಡು, ಎರಡು ಹನಿ ಮೂಗಿನ ಹೊಳ್ಳೆಗಳಿಗೆ ಬಿಡುವುದರಿಂದ ಬೆಳಿಗ್ಗಿನ ಸೀನುವಿಕೆ ಕಡಿಮೆಯಾಗುತ್ತದೆ.
  • ಸ್ವಲ್ಪ ಜನರಿಗೆ ಎಡೆ ಬಿಡದೆ ಕಾಡುವ ಮೂಗಿನ ಸಮಸ್ಯೆ ಎಂದರೆ ಪೀನಸ್ ಸಮಸ್ಯೆ. ಇದಕ್ಕೆ ತುಂಬೆಯೂ ಅತಿ ಉತ್ತಮವಾದ ಪರಿಹಾರವನ್ನು ನೀಡುತ್ತದೆ. ತುಂಬೆಯ ಎಲೆಗಳನ್ನು ಚೆನ್ನಾಗಿ ತೊಳೆದು, ನೆರಳಲ್ಲಿ ಒಣಗಿಸಬೇಕು. ನಂತರ ಒಣಗಿದ ಎಲೆಗಳನ್ನು ಪುಡಿ ಮಾಡಿ ಶೋಧಿಸಿಕೊಳ್ಳಬೇಕು. ಈ ಪುಡಿಯನ್ನು ಮುಗಿನಿಂದ ನಶ್ಯದ ತರಹ ಎಳೆದುಕೊಳ್ಳುವುದರಿಂದ ಪೀನಸ್ ಸಮಸ್ಯೆ ಕಡಿಮೆಯಾಗುತ್ತದೆ.

ಜ್ವರ ಬಂದಾಗ ಕೂಡ ಒಮ್ಮೆ ನಾವು ತುಂಬೆ ಎಲೆಗಳನ್ನು ನೆನೆಸಿಕೊಳ್ಳಬೇಕು.

  • ಜ್ವರ ಬಂದಾಗ ತಾಪ ಕಡಿಮೆಯಾಗಲು ಹಾಗೂ ಜ್ವರದ ತಿವ್ರತೆಯನ್ನು ನಿಯಂತ್ರಿಸಲು, ನಿಶ್ಯಕ್ತಿಯನ್ನು ದೂರ ಮಾಡಲು ತುಂಬೆ ಸೊಪ್ಪಿನ ಗೊಜ್ಜು ಉತ್ತಮವಾಗಿದೆ. ತುಂಬೆ ಸೊಪ್ಪನ್ನು ನೀರಿನ ಅವಿಯಲ್ಲಿ ಚೆನ್ನಾಗಿ ಬೇಯಿಸಿಕೊಂಡು, ಅರ್ಧ ಚಮಚ ಕರಿಮೆಣಸಿನ ಪುಡಿ ಹಾಗೂ ಚಿಟಿಕೆ ಉಪ್ಪನ್ನು ಬೆರೆಸಿ, ಒಗ್ಗರಣೆ ಕೊಡಬೇಕು. ಈ ಗೊಜ್ಜುನ್ನು ಅನ್ನಕ್ಕೆ ಕಲಸಿ ತಿನ್ನುವುದು ಜ್ವರಕ್ಕೆ ಉತ್ತಮ ಆಹಾರವಾಗಿದೆ.

ಮೂಲವ್ಯಾಧಿಗೆ ತುಂಬೆಯ ಪರಿಹಾರಗಳು

  • ತುಂಬೆ ಸೊಪ್ಪನ್ನು ಚೆನ್ನಾಗಿ ತೊಳೆದು, ಅರೆದು ರಸ ಹಿಂಡಿಕೊಳ್ಳಬೇಕು. ಈ ರಸಕ್ಕೆ ಸುಣ್ಣದ ತಿಳಿ ನೀರನ್ನು ಬೆರೆಸಿ ಕುಡಿಯುವುದು ಮೂಲವ್ಯಾಧಿ ಸಮಸ್ಯೆಗೆ ಉತ್ತಮವಾಗಿದೆ.

ಇನ್ನೂ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ತುಂಬೆ ಗಿಡಗಳು ನಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಹೇರಳವಾಗಿ ಸಿಗುತ್ತದೆ. ಇಂದಿನ ಲೇಖನವನ್ನು ಓದಿ, ಒಮ್ಮೆ ತುಂಬೆಯ ಉಪಯೋಗಗಳನ್ನು ಪಡೆಯುವುದು ಉತ್ತಮವಾಗಿದೆ. ಅನೇಕ ಸಮಸ್ಯೆಗಳಿಗೆ ಒಂದೇ ಪರಿಹಾರದಂತೆ ಇರುವ ತುಂಬೆಯ ಪ್ರಯೋಜನಗಳನ್ನು ಪಡೆದುಕೊಳ್ಳುವ ಎಂಬುದು ಈ ಲೇಖನದ ಹಿಂದಿನ ಆಶಯ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

1 thought on “ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?”

Leave a Comment

Your email address will not be published. Required fields are marked *

Scroll to Top