
ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ ಮಾಡುತ್ತೇವೆ. ಹೆಚ್ಚಾಗಿ ಹಣ್ಣಿನ ಜ್ಯೂಸ್ ಮಾಡಿ ಕುಡಿಯುವುದು ನೋಡಿದ್ದೇವೆ. ಆದರೆ ಹಣ್ಣುಗಳ ಸಲಾಡ್ ಗಳ ಪರಿಚಯ ನಿಮಗೆ ಇದೆಯೇ? ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು, ಅರೋಗ್ಯನ್ನು ಉತ್ತಮವಾಗಿರಿಸಲು ಈ ಸಲಾಡ್ ಗಳು ಅತಿ ಉತ್ತಮವಾಗಿದೆ. ಹಣ್ಣಿನ ಮೂಲತ್ವವನ್ನು ಕಾಪಾಡಿಕೊಂಡು ಆಹಾರದಲ್ಲಿ ಸ್ವೀಕರಿಸುವ ಸುಲಭ ಮಾರ್ಗವೆಂದರೆ ಸಲಾಡ್ ಗಳು. ಇಂದಿನ ಲೇಖನದಲ್ಲಿ ವಿವಿಧ ಹಣ್ಣುಗಳ ರುಚಿಕರ ಸಲಾಡ್ ಗಳ ಪರಿಚಯ, ತಯಾರಿಕಾ ವಿಧಾನಗಳು ಹಾಗೂ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಮಾಹಿತಿಗಳನ್ನು ಪಡೆಯೋಣ.
ಬೇಸಿಗೆಗೆ ಉತ್ತಮವಾಗಿರುವ ಪನ್ನೇರಳೆ ಹಣ್ಣಿನ ಸಲಾಡ್
ಬೇಕಾಗುವ ಪದಾರ್ಥಗಳು
- ಪನ್ನೇರಳೆ ಹಣ್ಣು 6
- ಪೇರಲೆ ಹಣ್ಣು ಅಥವಾ ಸೀಬೆ ಹಣ್ಣು 1
- ದಾಳಿಂಬೆ ಹಣ್ಣು
- ಕರಿಮೆಣಸಿನ ಪುಡಿ ½ ಚಮಚ
- ಜೇನುತುಪ್ಪ
ಮಾಡುವ ವಿಧಾನ
ಹಣ್ಣುಗಳನ್ನು ಚೆನ್ನಾಗಿ ತೊಳೆದುಕೊಂಡು, ಪನ್ನೇರಳೆ ಹಾಗೂ ಪೇರಲೆ ಹಣ್ಣುಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ನಂತರ ದಾಳಿಂಬೆ ಹಣ್ಣುಗಳನ್ನು ಬಿಡಿಸಿಕೊಂಡು, ಅರ್ಧ ಕಪ್ ಆಗುವಷ್ಟು ದಾಳಿಂಬೆ ಹಣ್ಣುಗಳನ್ನು, ಸಣ್ಣಗೆ ಹೆಚ್ಚಿದ ಪನ್ನೇರಳೆ ಮತ್ತು ಪೇರಲೆ ಹಣ್ಣಿಗೆ ಸೇರಿಸಬೇಕು. ನಂತರ ಕರಿಮೆಣಸಿನ ಪುಡಿ ಹಾಕಿ, ಮೇಲೆ ಜೇನುತುಪ್ಪವನ್ನು ಹಾಕಬೇಕು. ನಂತರ ಚೆನ್ನಾಗಿ ಕಲಸಬೇಕು. ಅಲ್ಲಿಗೆ ಪನ್ನೇರಳೆ ಹಣ್ಣಿನ ಸಲಾಡ್ ಸವಿಯಲು ಸಿದ್ದವಾಗುತ್ತದೆ.
ಪ್ರಯೋಜನಗಳು
- ಪನ್ನೇರಳೆ ಹಣ್ಣಿನಲ್ಲಿ ಅಧಿಕವಾದ ನಾರು, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಷಿಯಂ ಹಾಗೂ ವಿಟಮಿನ್ ಎ ಮತ್ತು ವಿಟಮಿನ್ ಸಿ ಗಳು ಇವೆ. ಇದು ದೇಹಕ್ಕೆ ಅತಿ ಉತ್ತಮವಾಗಿದೆ.
- ಪನ್ನೇರಳೆ ಹಣ್ಣಿನ ಸಲಾಡ್ ದೇಹಕ್ಕೆ ತಂಪಾಗಿದ್ದು, ಲಿವರ್ ನ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ.
- ದೇಹದಲ್ಲಿನ ಕೊಲೆಸ್ಟ್ರೋಲ್ ಮಟ್ಟವನ್ನು ನಿಯಂತ್ರಿಸಿ, ಹೃದಯದ ಉತ್ತಮ ಅರೋಗ್ಯವನ್ನು ಕಾಪಾಡುತ್ತದೆ.
- ಕ್ಯಾನ್ಸೆರಿಕೃತ ಜೀವಾಣುಗಳ ವಿರುದ್ಧ ಹೊರಾಡುವ ಶಕ್ತಿ ಈ ಸಲಾಡ್ ಗೆ ಇದೆ.
- ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿ ಇರುವುದರಿಂದ ಮೂಳೆಗಳ ಅರೋಗ್ಯಕ್ಕೂ ಉತ್ತಮವಾಗಿದೆ.
- ಪನ್ನೇರಳೆ ಹಣ್ಣಿನ ಸಲಾಡ್ ಆರೋಗ್ಯವರ್ಧಕವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಸಹ ಹೊಂದಿದೆ.
ರಕ್ತದ ಶುದ್ಧಿಕಾರಣಕ್ಕಾಗಿ ದಾಳಿಂಬೆ ಹಣ್ಣಿನ ಸಲಾಡ್
ಬೇಕಾಗುವ ಪದಾರ್ಥಗಳು
- ದಾಳಿಂಬೆ ಹಣ್ಣು – 1 ಕಪ್
- ಸಾರಿನ ಪುಡಿ – ¼ ಚಮಚ
- ಕಿತ್ತಳೆ ಹಣ್ಣು – 2 ಎಸಳು
- ಕಾಯಿತುರಿ
- ಉಪ್ಪು
- ಸಕ್ಕರೆ
ಮಾಡುವ ವಿಧಾನ
ಕಿತ್ತಳೆ ಹಣ್ಣು ಹಾಗೂ ದಾಳಿಂಬೆ ಹಣ್ಣುಗಳನ್ನು ಚೆನ್ನಾಗಿ ತೊಳೆದು ಬಿಡಿಸಿಕೊಳ್ಳಬೇಕು. ಕಿತ್ತಳೆಯ ಸಿಹಿ ತಿರುಳಿನ ಜೊತೆ ದಾಳಿಂಬೆ ಬೇಜಗಳನ್ನು ಸೇರಿಸಿ, ಸಾರಿನ ಪುಡಿ ಕಾಲು ಚಮಚ ಸೇರಿಸಬೇಕು. ಒಂದು ಚಮಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ಮೇಲಿಂದ ಕಾಯಿತುರಿ ಉದುರಿ ಕಲಸಬೇಕು. ಸ್ವಲ್ಪ ಹೊತ್ತು ಬಿಟ್ಟ ನಂತರ ದಾಳಿಂಬೆ ಸಲಾಡ್ ಸವಿಯಲು ಸಿದ್ದವಾಗುತ್ತದೆ. ಕಿತ್ತಳೆ ಹಣ್ಣು ಹಾಗೂ ದಾಳಿಂಬೆ ಎರಡು ದೇಹದ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ.
ಪ್ರಯೋಜನಗಳು
- ದಾಳಿಂಬೆಯು ಆರೋಗ್ಯ ವರ್ಧಕ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಇದೆ ಕಾರಣಕ್ಕೆ ದಾಳಿಂಬೆ ಸಲಾಡ್ ಕೂಡ ಅದೇ ಗುಣಗಳನ್ನು ಹೊಂದಿದ್ದು, ಶಕ್ತಿ ವರ್ಧಕವಾಗಿದೆ.
- ದಾಳಿಂಬೆ ಸಲಾಡ್ ನಲ್ಲಿ ವಿಟಮಿನ್ ಸಿ ಸಮೃದ್ಧಿವಾಗಿದ್ದು, ಆರೋಗ್ಯಕ್ಕೆ ಅತಿ ಉತ್ತಮವಾಗಿದೆ.
- ಸುಲಭ ಜೀರ್ಣಕ್ರಿಯೆಗೆ ಇದು ಉತ್ತಮ ಮದ್ದಾಗಿದೆ.
- ದೇಹದಲ್ಲಿನ ಸುಸ್ತು, ಆಯಾಸ, ಬಳಲಿಕೆಯನ್ನು ಕಡಿಮೆಗೊಳಿಸುವ ಸಾಮರ್ಥ್ಯ ಈ ಸಲಾಡ್ ನಲ್ಲಿದೆ.
- ಹೃದಯದ ಅರೋಗ್ಯಕ್ಕೂ ತುಂಬಾ ಒಳ್ಳೆಯದು ಈ ಸಲಾಡ್.
- ರಕ್ತವನ್ನು ಶುದ್ಧಗೊಳಿಸುವ ಕಾರ್ಯವನ್ನು ಈ ಸಲಾಡ್ ಮಾಡುತ್ತದೆ.
ಕಣ್ಣಿನ ಉತ್ತಮ ಆರೋಗ್ಯಕ್ಕೆ ಕರಬೂಜ ಹಣ್ಣಿನ ಸಲಾಡ್
ಬೇಕಾಗುವ ಪದಾರ್ಥಗಳು
- ಕರಬೂಜ ಹಣ್ಣಿನ ಹೋಳುಗಳು 1 ಕಪ್
- ಶೇಂಗಾ ಬೀಜ ½ ಕಪ್
- ಬಿಳಿ ಎಳ್ಳು 1 ಚಮಚ
- ಕರಿಮೆಣಸಿನ ಪುಡಿ ½ ಚಮಚ
- ಬೆಲ್ಲ 2 ಚಮಚ
- ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲಿಗೆ ಬಾಣಲೆಯಲ್ಲಿ ಶೇಂಗಾ ಬೀಜವನ್ನು ಹುರಿದು, ತರಿ ತರಿಯಾಗಿ ಪುಡಿ ಮಾಡಿಕೊಳ್ಳಬೇಕು. ನಂತರ ಎಳ್ಳನ್ನು ಹುರಿದುಕೊಳ್ಳಬೇಕು. ಕತ್ತರಿಸಿದ ಕರಬೂಜ ಹಣ್ಣಿಗೆ 2 ಚಮಚ ಬೆಲ್ಲ ಸೇರಿಸಿ, ಪುಡಿ ಮಾಡಿಕೊಂಡ ಶೇಂಗಾ ಹಾಗೂ ಹುರಿದ ಎಳ್ಳನ್ನು ಸೇರಿಸಬೇಕು. ಕೊನೆಯಲ್ಲಿ ಉಪ್ಪನ್ನು ಬೆರೆಸಿ, ಕಲಸಬೇಕು. ಸ್ವಲ್ಪ ಹೊತ್ತಿನ ನಂತರ ಕರಬೂಜ ಹಣ್ಣಿನ ಸಲಾಡ್ ಸವಿಯಲು ಸಿದ್ದವಾಗುತ್ತದೆ.
ಪ್ರಯೋಜನಗಳು
- ವಿಟಮಿನ್ ಎ ಅಧಿಕವಾಗಿ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಬಹು ಉತ್ತಮವಾಗಿದೆ.
- ಗರ್ಭಿಣಿ ಮಹಿಳೆಯರಿಗೆ ಇದು ಒಳ್ಳೆಯ ಆಹಾರವಾಗಿದೆ.
- ಹೆರಿಗೆಯ ನಂತರ ಎದೆಯ ಹಾಲನ್ನು ಹೆಚ್ಚಿಸಲು ಕೂಡ ಈ ಸಲಾಡ್ ಉಪಯುಕ್ತವಾಗಿದೆ.
- ಈ ಬೇಸಿಗೆಯ ಬಿಸಿಲಿನ ತಾಪಕ್ಕೆ ದೇಹವನ್ನು ತಂಪಾಗಿರಿಸಲು ಇದು ಉತ್ತಮ ಆಹಾರವಾಗಿದೆ.
- ಬ್ಲಡ್ ಪ್ರೆಷರ್ ಅಥವಾ ರಕ್ತದ ಒತ್ತಡ ಸಮಸ್ಯೆಗೆ ಒಳ್ಳೆಯ ಆಹಾರವಾಗಿದೆ.
- ಆಹಾರದ ಜೀರ್ಣ ಕ್ರಿಯೆಯಲ್ಲೂ ಉತ್ತಮವಾಗಿದ್ದು, ಮಲಬದ್ಧತೆ, ಕಟ್ಟು ಮೂತ್ರದ ಸಮಸ್ಯೆಗಳನ್ನು ಕೂಡ ದೂರಗೊಳಿಸುತ್ತದೆ.
- ಚರ್ಮದ ಅರೋಗ್ಯಕ್ಕೂ ಉತ್ತಮವಾಗಿದ್ದು, ಹಲವು ಚರ್ಮ ರೋಗಗಳ ನಿವಾರಣೆಗೆ ಉಪಯುಕ್ತವಾಗಿದೆ.
- ಅರೋಗ್ಯವರ್ಧಕ ಈ ಸಲಾಡ್ ಅನ್ನು ಎಲ್ಲರೂ ಸ್ವೀಕರಿಸಲು ಉತ್ತಮವಾಗಿದೆ.
- ಸಲಾಡ್ ಮಾತ್ರವಲ್ಲದೆ ಕರಬೂಜ ಹಣ್ಣಿನ ಸಿಪ್ಪೆ ಮತ್ತು ಬೀಜ, ಚರ್ಮದ ಕಲೆಗಳನ್ನು ಹೋಗಲಾಡಿಸಲು ಉತ್ತಮ ಔಷಧಿಯಾಗಿದೆ.
- ಕರಬೂಜ ಹಣ್ಣಿನ ಬೀಜದ ಜ್ಯೂಸ್ ಮೂತ್ರದ ಕಲ್ಲುಗಳನ್ನು ಕರಗಿಸಲು ಅತಿ ಉತ್ತಮವಾದ ಆಹಾರವಾಗಿದೆ.
ಬಿಳಿ ರಕ್ತ ಕಣಗಳ ಅಭಿವೃದ್ಧಿಗೆ ಉತ್ತಮವಾಗಿರುವ ಕಿವಿ ಹಣ್ಣಿನ ಸಲಾಡ್
ಬೇಕಾಗುವ ಪದಾರ್ಥಗಳು
- ಕಿವಿ ಹಣ್ಣು 3
- ಮಿಟ್ಲಿ ಬಾಳೆ ಹಣ್ಣು 2
- ಏಲಕ್ಕಿ ಪುಡಿ ¼ ಚಮಚ
- ಜೇನುತುಪ್ಪ
ಮಾಡುವ ವಿಧಾನ
ಕಿವಿ ಹಣ್ಣುಗಳನ್ನು ಸಿಪ್ಪೆ ಸುಲಿದು ಸಣ್ಣಗೆ ಹೆಚ್ಚಿಕೊಳ್ಳಬೇಕು. ಜೊತೆಗೆ ಬಾಳೆಹಣ್ಣನ್ನು ಸಣ್ಣಗೆ ಹೆಚ್ಚಿಕೊಂಡು, ಎರಡನ್ನು ಮಿಶ್ರಣ ಮಾಡಬೇಕು. ಸ್ವಲ್ಪ ಏಲಕ್ಕಿ ಪುಡಿ ಬೆರೆಸಿ, ಮೇಲಿನಿಂದ ಜೇನುತುಪ್ಪವನ್ನು ಹಾಕಿ ಕಲಸಿದರೆ, ಕಿವಿ ಹಣ್ಣಿನ ಸಲಾಡ್ ಸವಿಯಲು ಸಿದ್ದವಾಗುತ್ತದೆ.
ಪ್ರಯೋಜನಗಳು
- ವಿಟಮಿನ್ ಸಿ ಅಧಿಕವಾಗಿರುವುದರಿಂದ ಈ ಸಲಾಡ್ ನಿಶ್ಯಕ್ತಿ, ಬಳಲಿಕೆ ಹಾಗೂ ಆಯಾಸವಾದಾಗ ಅತಿ ಉತ್ತಮ ಆಹಾರವಾಗುತ್ತದೆ.
- ನಿದ್ರಾ ಹೀನತೆಗೆ ಇದು ಉತ್ತಮ ಆಹಾರವಾಗಿದೆ.
- ಅಧಿಕ ಖನಿಜಗಳು, ನಾರು ಹಾಗೂ ವಿಟಮಿನ್ ಇ ಹಾಗೂ ಕೆ ಇವೆಲ್ಲದರ ಗಣಿಯಾಗಿರುವ ಈ ಸಲಾಡ್ ರಕ್ತದಲ್ಲಿನ ಬಿಳಿ ರಕ್ತ ಕಣಗಳನ್ನು ವೃದ್ಧಿಸಲು ಸಹಕಾರಿಯಾಗಿದೆ.
- ನಾರಿನ ಅಂಶ ಅಧಿಕವಾಗಿರುವುದರಿಂದ ದೇಹದಲ್ಲಿನ ಕೊಬ್ಬನ್ನು ಕರಗಿಸಿ, ತೂಕ ಇಳಿಸಲು ಉಪಕಾರಿಯಾಗಿದೆ.
- ಉಬ್ಬಸ, ದಮ್ಮು ಹಾಗೂ ಇನ್ನಿತರ ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಗೂ ಇದು ಉತ್ತಮ ಪರಿಹಾರವಾಗಿದೆ.
- ಕಿವಿ ಹಣ್ಣಿನ ಸಲಾಡ್ ಮೂಳೆಗಳ ಆರೋಗ್ಯಕ್ಕೆ ಉತ್ತಮವಾಗಿದ್ದು, ಬಲವರ್ಧಕವಾಗಿದೆ.
- ರಕ್ತದ ಒತ್ತಡವನ್ನು ನಿಯಂತ್ರಿಸಿ, ಹೃದಯದ ಅರೋಗ್ಯವನ್ನು ಉತ್ತಮವಾಗಿರಿಸುತ್ತದೆ.
- ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಆಹಾರ ಇದಾಗಿದೆ. ಆರೋಗ್ಯ ವರ್ಧಕವೂ ಕೂಡ ಆಗಿದೆ.
ಪಿತ್ತ ದೋಷ ನಿವಾರಣೆಗೆ ಅನಾನಸ್ ಹಣ್ಣಿನ ಸಲಾಡ್
ಬೇಕಾಗುವ ಪದಾರ್ಥಗಳು
- ಅನಾನಸ್ 1 ಕಪ್
- ಮಾವಿನ ಕಾಯಿ 1 ಕಪ್
- ಕೊತ್ತಂಬರಿ ಸೊಪ್ಪು 1 ಕಪ್
- ಪುದಿನ ಸೊಪ್ಪು ½ ಕಪ್
- ಹಸಿ ಮೆಣಸು 3 ( ಖಾರಕ್ಕೆ ಅನುಗುಣವಾಗಿ)
- ಬೆಲ್ಲ 1 ಚಮಚ
- ಖರ್ಜುರ 4
- ಬ್ಯಾಡಗಿ ಮೆಣಸಿನ ಪುಡಿ ¼ ಚಮಚ
- ಜೀರಿಗೆ ಪುಡಿ ¼ ಚಮಚ
- ಕರಿ ಮೆಣಸಿನ ಪುಡಿ ¼ ಚಮಚ
- ಚಾಟ್ ಮಸಾಲಾ ಪುಡಿ ¼ ಚಮಚ
- ನಿಂಬೆ ಹಣ್ಣು ಅರ್ಧ ಹೋಳು
- ಎಣ್ಣೆ
- ಉಪ್ಪು
ಮಾಡುವ ವಿಧಾನ
ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಮೇಲೆ ಹೇಳಿದ ಪ್ರಮಾಣದಲ್ಲಿ ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು, ಹಸಿ ಮೆಣಸು, ಬೆಲ್ಲ, ಖರ್ಜುರ, ಬ್ಯಾಡಗಿ ಮೆಣಸಿನ ಪುಡಿ, ಜೀರಿಗೆ ಪುಡಿ, ಕರಿಮೆಣಸಿನ ಪುಡಿ, ಚಾಟ್ ಮಸಾಲಾ, ಲಿಂಬೆ ರಸ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಬೇಕು. ನುಣ್ಣಗೆ ರುಬ್ಬಿಕೊಂಡು ಒಂದು ಪಾತ್ರೆಗೆ ವರ್ಗಾಯಿಸಿ ಎರಡು ಚಮಚ ಎಣ್ಣೆಯನ್ನು ಸೇರಿಸಬೇಕು. ಈಗ ಅನಾನಸ್ ಹಾಗೂ ಮಾವಿನ ಕಾಯಿಗಳನ್ನು ಸಣ್ಣ ಹೋಳುಗಳಾಗಿ ಕತ್ತರಿಸಿ ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ನಂತರ ರುಬ್ಬಿದ ಮಿಶ್ರಣವನ್ನು ಅಗತ್ಯಕ್ಕೆ ಅನುಸಾರವಾಗಿ ಒಂದೆರಡು ಚಮಚ ಬೆರೆಸಿ, ಕಲಸಬೇಕು. ಅಲ್ಲಿಗೆ ರುಚಿಕರ ಅನಾನಸ್ ಸಲಾಡ್ ಸವಿಯಲು ಸಿದ್ದವಾಗುತ್ತದೆ.
ಪ್ರಯೋಜನಗಳು
- ಯುಕೃತ್ತಿನ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ ಈ ಅನಾನಸ್ ಹಣ್ಣಿನ ಸಲಾಡ್.
- ಪಿತ್ತ ದೋಷದ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರಗಳನ್ನು ನೀಡಲು ಈ ಆಹಾರ ಅತಿ ಉತ್ತಮವಾಗಿದೆ.
- ಸಿಹಿ ಹಾಗೂ ಹುಳಿ ಸ್ವಾದವನ್ನು ಒಟ್ಟಿಗೆ ನೀಡುವ ಈ ಸಲಾಡ್ ಬಾಯಿಗೆ ರುಚಿಕರವು ಹೌದು.
- ತಿಂದ ಆಹಾರದ ಸುಲಭ ಜೀರ್ಣಕ್ರಿಯೆಗೂ ಉತ್ತಮವಾಗಿದೆ.
- ಮೂತ್ರವು ಜಾಸ್ತಿ ಹಳದಿಯಾಗಿ, ಉರಿಯುತ್ತಿದ್ದರೆ, ಪರಿಹಾರಕ್ಕಾಗಿ ಈ ಸಲಾಡ್ ಒಮ್ಮೆ ಸೇವಿಸಲೇ ಬೇಕು.
- ತಲೆ ತಿರುಗುವಿಕೆ, ಸುಸ್ತು ಇನ್ನೂ ಅನೇಕ ಸಮಸ್ಯೆಗಳಿಗೆ ಈ ಸಲಾಡ್ ಉತ್ತಮ ಆಹಾರವಾಗಿದೆ.
ಮಿಕ್ಸಡ್ ಫ್ರೂಟ್ ಸಲಾಡ್
ಬೇಕಾಗುವ ಪದಾರ್ಥಗಳು
- ಪರಂಗಿ ಹಣ್ಣು 1 ಕಪ್
- ಕಲ್ಲಂಗಡಿ ಹಣ್ಣು 1 ಕಪ್
- ದಾಳಿಂಬೆ ಹಣ್ಣು 1 ಕಪ್
- ಅನಾನಸ್ ಹಣ್ಣು 1 ಕಪ್
- ಹಸಿರು ದ್ರಾಕ್ಷಿ ½ ಕಪ್
- ಸೇಬು ಹಣ್ಣು 1 ಕಪ್
- ಬಾಳೆ ಹಣ್ಣು 1
- ಜೇನುತುಪ್ಪ
- ಕರಿಮೆಣಸಿನ ಪುಡಿ 1 ಚಮಚ
ಮಾಡುವ ವಿಧಾನ
ಪರಂಗಿ ಹಣ್ಣು, ಕಲ್ಲಂಗಡಿ ಹಣ್ಣು, ದಾಳಿಂಬೆ ಹಣ್ಣು, ಅನಾನಸ್ ಹಣ್ಣು, ಹಸಿರು ದ್ರಾಕ್ಷಿ, ಸೇಬು ಹಣ್ಣು, ಬಾಳೆ ಹಣ್ಣು ಹಾಗೂ ಇನ್ನೂ ನಿಮಗೆ ಇಷ್ಟವಾದ ಹಣ್ಣುಗಳನ್ನು ಜೊತೆಗೆ ಸೇರಿಸಿಕೊಳ್ಳಬಹುದು. ಎಲ್ಲ ಹಣ್ಣುಗಳನ್ನು ಸಣ್ಣಗೆ ಹೆಚ್ಚಿಕೊಂಡು, ಎಲ್ಲವನ್ನು ಬೆರೆಸಬೇಕು. ಅನಂತರ ಮೇಲಿಂದ ಕರಿಮೆಣಸಿನ ಪುಡಿ ಹಾಗೂ ಜೇನುತುಪ್ಪವನ್ನು ಬೆರೆಸಿ, ಕಲಸಬೇಕು. ಅಲ್ಲಿಗೆ ಮಿಕ್ಸಡ್ ಫ್ರೂಟ್ ಸಲಾಡ್ ಸವಿಯಲು ಸಿದ್ದವಾಗುತ್ತದೆ.
ಪ್ರಯೋಜನಗಳು
- ಇಂದಿನ ದಿನಗಳಲ್ಲಿನ ಬಿಸಿಲಿನ ಬೇಗೆಯನ್ನು ಸಹಿಸಲು ಹಣ್ಣುಗಳ ಮೊರೆ ಹೋಗುವುದು ಅತಿ ಉತ್ತಮವಾಗಿದೆ. ಆದ್ದರಿಂದ ಈ ಮಿಕ್ಸಡ್ ಫ್ರೂಟ್ ಸಲಾಡ್ ಬೇಸಿಗೆಗೆ ಉತ್ತಮ ಆಹಾರವಾಗಿದೆ.
- ಉಪವಾಸಗಳನ್ನು ಮಾಡುವ ಸಮಯದಲ್ಲಿ ಇಂತಹ ಫಲಹಾರಗಳನ್ನು ತಿನ್ನುವುದು ಅತಿ ಉತ್ತಮವಾಗಿದೆ.
- ಡಯಟ್ ಮಾಡುವವರು ತಿನ್ನಲೇ ಬೇಕಾದ ಆಹಾರ ಇದಾಗಿದೆ.
- ಎಲ್ಲ ಹಣ್ಣಿನ ಸತ್ವಗಳು ಒಟ್ಟಿಗೆ ನಮ್ಮ ದೇಹವನ್ನು ಸೇರಿ, ನಮಗೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ.
- ಮಿಕ್ಸಡ್ ಫ್ರೂಟ್ ಸಲಾಡ್ ಅರೋಗ್ಯವರ್ಧಕವಾಗಿದ್ದು, ಮನುಷ್ಯನು ಸೇವಿಸಬೇಕಾದ ಉತ್ತಮ ಆಹಾರವಾಗಿದೆ.
ಯುವ ಜನತೆಗೆ ಹಣ್ಣುಗಳ ಸೇವನೆ ಈಗಿನ ಕಾಲದಲ್ಲಿ ಬಲು ಕಷ್ಟವಾಗಿದೆ. ಬರಿ ಎಣ್ಣೆಯಲ್ಲಿ ಕರಿದ, ಸಕ್ಕರೆ ಬರಿತ ಅಥವಾ ಕೊಬ್ಬು ಜಾಸ್ತಿ ಇರುವ ಪದಾರ್ಥಗಳು ಆಧುನಿಕ ಪ್ರಪಂಚದ ನೆಚ್ಚಿನ ಆಹಾರಗಳಾಗಿವೆ. ಆದರೆ ಈ ಆಹಾರಗಳ ಕ್ಷಣಿಕ ರುಚಿಗಳನ್ನು ಸವಿದು ನಮ್ಮ ಆರೋಗ್ಯದ ಭವಿಷ್ಯವನ್ನು ಹಾಳು ಮಾಡುತ್ತಿದ್ದೇವೆ. ಇದೆ ಕಾರಣಕ್ಕೆ ನಮ್ಮ ಹಸಿರು ಸಂಪತ್ತು ಅಂದರೆ ನಮ್ಮ ಪೃಕೃತಿಯಲ್ಲಿ ಸಹಜವಾಗಿ ಸಿಗುವ ಹಣ್ಣುಗಳ ಸೇವನೆ ಅತಿ ಒಳ್ಳೆಯದಾಗಿದೆ. ಹಣ್ಣು, ಹಸಿರು ತರಕಾರಿಗಳು ನಮ್ಮ ಅರೋಗ್ಯವನ್ನು ಉತ್ತಮವಾಗಿರಿಸುತ್ತದೆ. ಆದರೆ ದುರ್ವಿಧಿ ಎಂಬಂತೆ ಈಗ ಹಣ್ಣುಗಳಿಗೂ ಹೆಚ್ಚಿನ ಫಸಲು ಹಾಗೂ ಕೀಟನಾಶಕ ಸಿಂಪಡನೆ, ಇನ್ನೂ ಅನೇಕ ಕಾರಣಗಳಿಂದ ರಾಸಾಯನಿಕಗಳ ಉಪಯೋಗ ಹಣ್ಣು, ತರಕಾರಿಗಳ ಮೇಲೆ ಆಗುತ್ತಿದೆ. ಆದ್ದರಿಂದ ನಾವು ಮನೆಗೆ ಹಣ್ಣು ಮತ್ತು ತರಕಾರಿಗಳನ್ನು ತಂದ ನಂತರ ಒಮ್ಮೆ ಉಪ್ಪು ಹಾಗೂ ಅರಿಶಿಣದ ನೀರಿನಲ್ಲಿ ಒಂದು 10 ನಿಮಿಷ ನೆನೆಸಿ, ತೊಳೆಯಬೇಕು. ಇದನ್ನು ಪಾಲಿಸಿ ನಮ್ಮ ಅರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ಒಟ್ಟಿನಲ್ಲಿ ಈ ಬೇಸಿಗೆ ದಿನಕ್ಕೆ ವಿವಿಧ ಹಣ್ಣುಗಳ ರುಚಿಯಾದ ಸಲಾಡ್ ಗಳನ್ನು ತಯಾರಿಸಿ, ಸವಿದು, ನಿಮ್ಮ ಅರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು ಎಂಬುದು ನಮ್ಮ ಆಶಯ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.
Very useful in this summer season.. thank u😋