
ಪ್ರತಿನಿತ್ಯ ಮನೆಯಲ್ಲಿ ತಯಾರಿಸುವ ಆಹಾರಕ್ಕೆ ಉಪ್ಪು, ಖಾರದ ಜೊತೆ ಹುಳಿಯ ರುಚಿಯು ತುಂಬಾ ಮುಖ್ಯವಾಗುತ್ತದೆ. ಅಡುಗೆಯಲ್ಲಿ ಹುಳಿಯೂ ತುಂಬಾ ಮುಖ್ಯ ಪತ್ರವನ್ನು ವಹಿಸುತ್ತದೆ. ಹುಣಸೆಹಣ್ಣು ಮರದಲ್ಲಿ ಬೆಳೆಯುವುದು, ಹಾಗೆಯೇ ಹುಣಸೆ ಹಣ್ಣನ್ನು ತೆಗೆದು ಶುದ್ಧಿಕರಿಸಿ ವರ್ಷವಿಡೀ ಶೇಖರಿಸುತ್ತಾರೆ. ಹೀಗೆ ಶೇಖರಿಸಿದ ಹಳೆಯ ಹುಣಸೆಹಣ್ಣು ಸ್ವಲ್ಪ ಸಿಹಿ ಹುಳಿ ರುಚಿಯಿಂದ, ದೇಹಕ್ಕೆ ಉತ್ತಮ ಹಾಗೂ ಹೃದಯದ ಅರೋಗ್ಯಕ್ಕೂ ಒಳ್ಳೆಯದು. ಇನ್ನೂ ಹೊಸ ಹುಣಸೆಹಣ್ಣು ಹುಳಿ ಯಾಗಿರುತ್ತದೆ ಹಾಗೂ ಅರೋಗ್ಯಕ್ಕೂ ಸ್ವಲ್ಪ ಇರುಸು-ಮುರುಸಾಗುತ್ತದೆ.
ವೈಜ್ಞಾನಿಕ ವಿಚಾರಗಳು
ಆಂಗ್ಲ ಹೆಸರು– ಟಮರಿಂಡ (Tamarind)
ವೈಜ್ಞಾನಿಕ ಹೆಸರು – ಟಮರಿಂಡಸ್ ಇಂಡಿಕ (Tamarindus Indica),
ಹುಣಸೆ ಹಣ್ಣಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಗಂಧಕ, ನಿಯಾಸಿನ್, ಫಾಸ್ಫರಸ್, ಕಾಪ್ಪರ್, ವಿಟಮಿನ್ ಸಿ, ಬಿ ಹಾಗೂ ಮ್ಯಾಗ್ನಿಸಿಯಂ ಇನ್ನೂ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ.
ಹುಣಸೆ ಹಣ್ಣಿನ ಪ್ರಯೋಜನಗಳು
ತಲೆ ಸುತ್ತು ಹಾಗೂ ವಾಂತಿಗೆ ಹುಣಸೆ ಹಣ್ಣಿನಿಂದ ಪರಿಹಾರಗಳು
- ಒಂದು ಎಸಳಿನ ಹುಣಸೆಹಣ್ಣನ್ನು, ಸ್ವಲ್ಪ ಬೆಲ್ಲ ಮತ್ತು ಜೀರಿಗೆಯೊಡನೆ ಸೇರಿಸಿ, ಮೂರನ್ನು ಚೆನ್ನಾಗಿ ಕುಟ್ಟಿ ಉಂಡೆ ಕಟ್ಟಿಕೊಂಡು ಸೇವಿಸಬೇಕು. ಹೀಗೆ ಸೇವಿಸುವುದರಿಂದ ತಲೆ ಸುತ್ತು ಹಾಗೂ ವಾಂತಿ ಕಡಿಮೆಯಾಗುತ್ತದೆ.
ಆಮಶಂಕೆ, ಅತಿಸಾರ, ಬೇಧಿ ಮತ್ತು ವಾಂತಿಗೆ ಹುಣಸೆ ಹಣ್ಣಿನಿಂದ ಪರಿಹಾರಗಳು
- ಸ್ವಲ್ಪ ಹುಣಸೆಹಣ್ಣನ್ನು ಕಡೆದ ಮಜ್ಜಿಗೆಯಲ್ಲಿ ನೆನೆಸಿ ಇಡಬೇಕು. ನಂತರ ಹುಣಸೆಹಣ್ಣನ್ನು ಚೆನ್ನಾಗಿ ಕಿವುಚಿ, ಆ ಮಜ್ಜಿಗೆ ಮಿಶ್ರಣವನ್ನು ದಿನಕ್ಕೆ 3 ಬಾರಿ ಕುಡಿಯುತ್ತ ಬಂದರೆ ಅಮಶಂಕೆ ಹಾಗೂ ಅತಿಸಾರದ ಸಮಸ್ಯೆಗಳು ಕಡಿಮೆಯಾಗುತ್ತದೆ.
- ಹುಣಸೆಹಣ್ಣು, ಕರಿ ಮೆಣಸು, ಏಲಕ್ಕಿ, ಪುದೀನ ಹಾಗೂ ಕಲ್ಲುಪ್ಪನ್ನು ಚೆನ್ನಾಗಿ ಅರೆದುಕೊಂಡು ಒಂದು ಚಮಚ ಸೇವಿಸುವುದರಿಂದ ವಾಂತಿ, ಬೇಧಿ ಹಾಗೂ ಹೊಟ್ಟೆ ನೋವು ಎಲ್ಲವೂ ಕಡಿಮೆಯಾಗುತ್ತದೆ.
- ಹುಣಸೆ ಮರದ ಚಕ್ಕೆಯನ್ನು ಅರೆದು ಕಡೆದ ಮಜ್ಜಿಗೆಯೊಂದಿಗೆ ಕುಡಿಯಬೇಕು. ಇದರಿಂದ ಅತಿಸಾರ ನಿಲ್ಲುತ್ತದೆ.
ಮೂಳೆ ಮುರಿತ ಹಾಗೂ ನೋವಿಗೂ ಹುಣಸೆ ಹಣ್ಣಿನ ಪರಿಹಾರಗಳು
- ಮೂಳೆ ಮುರಿದಿದ್ದರೆ ಅಥವಾ ಬಿದ್ದಾಗ ಉಂಟಾಗುವ ನೋವಿಗೂ ಅಥವಾ ಬಿರುಕಿಗೂ, ಹುಣಸೆ ಮರದ ಎಲೆಗಳನ್ನು ಉಪ್ಪು ಸೇರಿಸಿ ಚೆನ್ನಾಗಿ ಅರೆದುಕೊಳ್ಳಬೇಕು. ಅದನ್ನು ಮೂಳೆ ಮುರಿದಲ್ಲಿ ಅಥವಾ ಬಿರುಕು ಬಿದ್ದಲ್ಲಿ ಹಚ್ಚಿದರೆ ನಿಧಾನವಾಗಿ ನೋವು ಕಡಿಮೆಯಾಗಿ, ಕ್ರಮೇಣ ಗುಣವಾಗುತ್ತದೆ.
- ಹುಣಸೆ ಮರದ ಎಲೆಗಳನ್ನು ಬಾಣಲೆಗೆ ಹಾಕಿ ಚೆನ್ನಾಗಿ ಬಿಸಿ ಮಾಡಿ, ಒಂದು ಬಟ್ಟೆಯಲ್ಲಿ ಕಟ್ಟಬೇಕು. ನೋವು ಇರುವ ಕಡೆ ಶಾಖ ಕೊಡುವುದರಿಂದ ಸಂಧಿವಾತದ ನೋವು ನಿವಾರಣೆಯಗುತ್ತದೆ.
- ಹುಣಸೆ ಗೊಜ್ಜು 1 ಚಮಚ, ಒಂದು ಚಮಚ ಉಪ್ಪು, ಒಂದು ಚಮಚ ಬೆಲ್ಲದ ಪುಡಿ ಹಾಕಿ ಕುದಿಸಬೇಕು. ಉಗುರು ಬೆಚ್ಚಗಿನ ಬಿಸಿ ಇರುವಾಗಲೇ ಉಳುಕಿದ ನೋವಿರುವ ಕಡೆ ಹಚ್ಚಬೇಕು. ಒಂದು ಮೂರು ದಿನ ಸತತವಾಗಿ ಮಾಡಿದರೆ ಉಳುಕಿದ ನೋವು ಹಾಗೂ ಊತ ಕಡಿಮೆ ಆಗುತ್ತದೆ.
ನಾಲಿಗೆಗೆ ರುಚಿ ಇಲ್ಲದಿದ್ದರೆ ಹುಣಸೆ ಹಣ್ಣಿನಿಂದ ಮಾಡಬಹುದಾದ ಪರಿಹಾರಗಳು.
- ನಾಲಿಗೆಯ ರುಚಿಯನ್ನು ಮರಳಿ ಪಡೆಯಲು ಹುಣಸೆ ಹಣ್ಣು, ಪುದಿನ, ಕರಿ ಮೆಣಸು ಹಾಗೂ ಸೈಂದವ ಲವಣ ಎಲ್ಲವನ್ನು ಚೆನ್ನಾಗಿ ಅರೆದು ಸೇವಿಸಬೇಕು. ಇದು ಉತ್ತಮ ರುಚಿಯಾದ ಜೊತೆಗೆ ಜೀರ್ಣಕ್ರಿಯೆಗೂ ಉತ್ತಮವಾಗಿದೆ.
ಕಣ್ಣಿನ ಸೌರಕ್ಷಣೆಯಲ್ಲಿ ಹುಣಸೆ ಹಣ್ಣಿನ ಪಾತ್ರ
- ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಹಾಕಬೇಕು. ನಂತರ ಕಿವುಚಿ, ಸೋಸಿಕೊಳ್ಳಬೇಕು. ಅದಕ್ಕೆ ಕಲ್ಲುಸಕ್ಕರೆ ಹಾಕಿ ಕುಡಿಯಬೇಕು. ಇದನ್ನು ಸತತವಾಗಿ ಒಂದು ವಾರಗಳ ಕಾಲ ಕುಡಿಯಬೇಕು. ಇದು ಅತಿ ಉಷ್ಣತೆಯಿಂದ ಅಥವಾ ವಿಪರೀತ ಬಿಸಿಲಿನಿಂದ ಕಣ್ಣು ಕೆಂಪಾಗುವಿಕೆಯು ಕಡಿಮೆಯಾಗಿ, ಕಣ್ಣಲ್ಲಿ ನೀರು ಸೋರುವುದು ಕಡಿಮೆಯಾಗುತ್ತದೆ. ಹೀಗೆ ಕುಡಿಯುವುದು ಉಷ್ಣದಿಂದ ಬರುವ ತಲೆ ನೋವನ್ನು ಕೂಡ ಕಡಿಮೆ ಮಾಡುತ್ತದೆ.
ವೀರ್ಯಾಣುಗಳ ಕೊರತೆಯನ್ನು ನೀಗಿಸಲು ಹುಣಸೆ ಬೀಜಗಳು ಉತ್ತಮ ಮದ್ದಾಗಿದೆ.
- ಹುಣಸೆ ಬೀಜಗಳನ್ನು ನೀರಿನಲ್ಲಿ ನೆನೆಸಿ ಇಡಬೇಕು. ಒಂದು 5 ದಿನಗಳ ನಂತರ ಹುಣಸೆ ಬೀಜದ ಕಪ್ಪು ಸಿಪ್ಪೆಗಳನ್ನು ತೆಗೆದು ಮತ್ತೆ ಬೀಜಗಳನ್ನು ಒಣಗಿಸಬೇಕು. ಬೀಜಗಳು ಒಣಗಿದ ನಂತರ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಅದನ್ನು ಬಟ್ಟೆಯಲ್ಲಿ ಒಮ್ಮೆ ಶೋಧಿಸಿಕೊಂಡು ಅದಕ್ಕೆ ಸಮ ಪ್ರಮಾಣದಲ್ಲಿ ಸಕ್ಕರೆಯನ್ನು ಸೇರಿಸಬೇಕು. ಇದನ್ನು ಚೆನ್ನಾಗಿ ಗಾಜಿನ ಬಾಟಲಿಯಲ್ಲಿ ಶೇಖರಿಸಬೇಕು. ಪ್ರತಿದಿನ ಮುಂಜಾನೆ ಒಂದು ಚಮಚ ಹುಣಸೆ ಬೀಜದ ಪುಡಿ, ಒಂದು ಚಮಚ ತುಪ್ಪ, ½ ಚಮಚ ಜೇನುತುಪ್ಪ ಎಲ್ಲವನ್ನು ಸೇರಿಸಿ ತಿನ್ನಬೇಕು. ಇದರಿಂದ ವೀರ್ಯಾಣುಗಳ ಕೊರತೆ ನೀಗಿ, ವೀರ್ಯವು ಗಟ್ಟಿಯಾಗುತ್ತದೆ.
ಕಜ್ಜಿ, ತುರಿಕೆ ಹಾಗೂ ಹುಳಕಡ್ಡಿ ಸಮಸ್ಯೆಗೆ ಹುಣಸೆ ಹಣ್ಣಿನ ಪರಿಹಾರಗಳು
- ಹುಣಸೆ ಹಣ್ಣಿನ ಬೀಜವನ್ನು ನಿಂಬೆ ಹಣ್ಣಿನ ರಸದಲ್ಲಿ ತೇಯ್ದು ಕಜ್ಜಿ, ತುರಿಕೆ ಇರುವ ಜಾಗದಲ್ಲಿ ಹಚ್ಚಿದರೆ ತ್ವರಿತ ಪರಿಹಾರಗಳನ್ನು ಕಂಡುಕೊಳ್ಳಬಹುದು.
ಸುಟ್ಟ ಗಾಯದ ಕಲೆಗಳಿಗೆ ಹುಣಸೆ ಮರದಿಂದ ಸಿಗುವ ಪರಿಹಾರಗಳು
- ಹುಣಸೆ ಮರದ ತೊಗಟೆಯನ್ನು ಸುಡಬೇಕು. ಬಂದ ಬೂದಿಯನ್ನು ತೆಂಗಿನ ಎಣ್ಣೆಯಲ್ಲಿ ಕಳಸಿ ಸುಟ್ಟ ಗಾಯದ ಮೇಲೆ ಹಚ್ಚಿದರೆ ಗಾಯವು ಕಡಿಮೆಯಾಗಿ, ಕಲೆಗಳು ಮಾಸುತ್ತದೆ.
ಸುಲಭ ಮೂತ್ರ ವಿಸರ್ಜನೆಗೆ ಹುಣಸೆಯ ಪರಿಹಾರಗಳು ( ಕಟ್ಟು ಮೂತ್ರ )
- ಹುಣಸೆ ಎಲೆಗಳನ್ನು ಚೆನ್ನಾಗಿ ತೊಳೆದು ಶುದ್ಧ ಮಾಡಿ, ಅರೆಯಬೇಕು. ಬಂದ ರಸವನ್ನು ಮಜ್ಜಿಗೆಯಲ್ಲಿ ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಮೂತ್ರ ವಿಸರ್ಜನೆ ಸುಲಭ ರೀತಿಯಲ್ಲಿ ಆಗುತ್ತದೆ.
ಹಲವು ಸಮಸ್ಯೆಗಳಿಗೆ ರಾಮಬಾನವಾಗಿರುವ ಹುಣಸೆ ಹಣ್ಣಿನ ಶರಬತ್ತು
- ಒಂದು ಕಪ್ ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿ ಇಡಬೇಕು. ನೆನೆಸಿದ ಹುಣಸೆಹಣ್ಣನ್ನು ಕಿವುಚಿ, ರಸವನ್ನು ಹಿಂಡಬೇಕು. ಆ ರಸವನ್ನು ಒಳೆಯ ಮೇಲೆ ಇಟ್ಟು ಕುದಿಸಬೇಕು. ಕುದಿಯುವಾಗ ಒಂದು ಕಪ್ ಸಕ್ಕೆರೆ ಸೇರಿಸಿ ( ಇಲ್ಲವೇ ಬೆಲ್ಲ ಕೂಡ ಸೇರಿಸಬಹುದು ) ಕಲಕುತ್ತಿರಬೇಕು. ಪಾಕ ಬಂದ ಮೇಲೆ ಓಲೆ ಆರಿಸಿ, ತಣಿದ ಮೇಲೆ ಒಂದು ಗಾಜಿನ ಬಾಟಲಿಯಲ್ಲಿ ಶೇಖರಿಸಬೇಕು. ಈ ಶರಬತ್ತನ್ನು ಹೊಟ್ಟೆ ತೊಳೆಸುವ ರೀತಿಯಾದಾಗ ಸ್ವೀಕರಿಸಬೇಕು. ಹಾಗೆಯೇ ಮೂಗಿನಿಂದ ಬರುವ ರಕ್ತವನ್ನು ನಿಲ್ಲಿಸಲು ಕೂಡ ಈ ಶರಬತ್ತು ಉತ್ತಮವಾಗಿದೆ.
ಹುಣಸೆ ಹಣ್ಣು ಆರೋಗ್ಯಕ್ಕೆ ಉತ್ತಮ ಹೌದು, ಆದರೆ ಅತಿಯಾದರೆ ಒಳೆಯದಲ್ಲ. ಹೆಚ್ಚು ಹುಳಿಯನ್ನು ತಿನ್ನುವುದು ಪಿತ್ತದ ಸಮಸ್ಯೆಗಳಿಗೆ ಕಾರಣವಾಗಬಹುದು. ಇನ್ನೂ ಅನೇಕ ಸಮಸ್ಯೆಗಳನ್ನು ಹುಟ್ಟು ಹಾಕಬಹುದು. ಅತಿಯಾದರೆ ಅಮೃತವು ವಿಷ ಎನ್ನುವ ಹಾಗೆ ಅತಿಯಾದ ಬಳಕೆ ಒಳ್ಳೆಯದಲ್ಲ.
ಆದರೂ ಹಲವು ಉಪಯೋಗಗಳು ಹುಣಸೆ ಹಣ್ಣಿನಿಂದ ನಾವು ಪಡೆದುಕೊಳ್ಳಬಹುದು. ಹುಣಸೆ ಹಣ್ಣು, ಕರಿಮೆಣಸು ಮತ್ತು ಉಪ್ಪನ್ನು ಸೇರಿಸಿ ಉಂಡೆಮಾಡಿ ಚೆನ್ನಾಗಿ ಅಗೆದು ತಿನ್ನುವುದರಿಂದ ಅಜೀರ್ಣ ಸಮಸ್ಯೆಯು ಸಹ ದೂರವಾಗುತ್ತದೆ. ನಿತ್ಯ ಅಡುಗೆಯ ಸಂಗಾತಿ, ಅಲ್ಲದೇ ಅನೇಕ ಸಮಸ್ಯೆಗಳ ಪರಿಹರಿಸುವ ಹುಣಸೆ ಹಣ್ಣಿನ ಬಗ್ಗೆ ಈ ಲೇಖನದಲ್ಲಿ ವಿಸ್ತರವಾಗಿ ತಿಳಿಸಲಾಗಿದೆ. ವಿಷಯಗಳನ್ನು ಅರಿತುಕೊಂಡು ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂಬುವುದು ನಮ್ಮ ಹಂಬಲ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.