
ನಮ್ಮ ನಾಡನ್ನು ಗಂಧದ ಗುಡಿ ಎಂದೇ ಕರೆಯುತ್ತಾರೆ. ಹೆಚ್ಚು ಗಂಧದ ಮರಗಳನ್ನು ಹೊಂದಿರುವ ನಮ್ಮ ನಾಡು, ಗಂಧವನ್ನು ಉಪಯೋಗಿಸಿ ಹಲವು ವಸ್ತುಗಳನ್ನು ತಯಾರಿಸುತ್ತಾರೆ. ಉದಾಹರಣೆಗೆ ಗಂಧದ ಮೂರ್ತಿಗಳು, ಗಂಧದ ಮಾಲೆಗಳು, ಗಂಧದ ಅನೇಕ ಸುಗಂಧ ದ್ರವ್ಯಗಳು ಮತ್ತು ವಿಶ್ವ ವಿಖ್ಯಾತ ಸಾಬೂನುಗಳ ತಯಾರಿಕೆಯಲ್ಲೂ ಬಳಸುತ್ತಾರೆ.
ಕೆಲವು ಧಾರ್ಮಿಕ ವಿಚಾರಗಳು
ಅತಿ ಹೆಚ್ಚು ಗಂಧವನ್ನು ದೇವಸ್ಥಾನದಲ್ಲಿ ನಿತ್ಯ ಬಳಸುತ್ತಾರೆ. ನಿತ್ಯ ಮಂತ್ರ ಉಚ್ಚರಣೆಯೊಂದಿಗೆ ಗಂಧ ತೇಯುವ ಕೆಲಸ ದೇವಾಲಯಗಳಲ್ಲಿ ಕಾಣಬಹುದಾಗಿದೆ. ಅಷ್ಟೇ ಅಲ್ಲದೇ ಶ್ರೀಗಂಧದ ಕಟ್ಟಿಗೆಯಲ್ಲಿ ದೇವರ ಮೂರ್ತಿಯನ್ನು ಸಹ ತಯಾರಿಸುತ್ತಾರೆ. ಶ್ರೀಗಂಧವು ಅತಿ ಮೌಲ್ಯವುಳ್ಳ ಮರವಾಗಿದ್ದು, ತನ್ನದೇ ಆದ ಸುವಾಸನೆಯೊಂದಿಗೆ ಅತಿ ಉತ್ತಮವಾದ ಸ್ಥಾನವನ್ನು ಪಡೆದುಕೊಂಡಿದೆ.
ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಗಂಧವನ್ನು ಸ್ವಲ್ಪ ನೀರಿನೊಂದಿಗೆ ಮಿಶ್ರಣ ಮಾಡಿ ಸೇವಿಸಿದರೆ ಶರೀರದ ಆಯಾಸ, ಹಾಗೂ ಗಂಟಲು ಒಣಗುವಿಕೆ, ಕೆಮ್ಮನ್ನು ಕೂಡ ಕಡಿಮೆ ಮಾಡಿಸುತ್ತದೆ.
ಹಾಗೆಯೇ ವ್ಯಕ್ತಿಯ ಮರಣದ ನಂತರ ಶವ ಸಂಸ್ಕಾರದ ಅಂತಿಮ ವಿಧಿ ವಿಧಾನಗಳಲ್ಲಿ ಗಂಧದ ಕಟ್ಟಿಗೆಯನ್ನು ಬಳಸುತ್ತಾರೆ. ಇದಕ್ಕೆ ಒಂದು ವೈಜ್ಞಾನಿಕ ಹಿನ್ನಲೆ ಕೂಡ ಇದೆ, ಏನಂದರೆ ಊರಿನ ಆಚೆ ಹೆಣವನ್ನು ಸುಟ್ಟರೆ, ಊರಿನ ಸೂತ್ತಲೂ ವಾಸನೆ ಹಬ್ಬಿ ಪರಿಸರವು ಹಾಳಾಗುತ್ತಿತ್ತು. ಆದರೆ ಶವ ಸಂಸ್ಕಾರದಲ್ಲಿ ಗಂಧವನ್ನು ಉಪಯೋಗಿಸಿದರೆ ಗಂಧದ ಪರಿಮಳಕ್ಕೆ ವಾಸನೆ ಕೂಡ ಮಾಯವಾಗಿ, ವಾಯುಮಾಲಿನ್ಯ ಕೂಡ ಕಡಿಮೆಯಾಗುತಿತ್ತು. ನಮ್ಮ ಪೂರ್ವಜರ ಪ್ರತಿ ಆಚರಣೆಯ ಹಿಂದೆ ಹಲವು ಕಾರಣಗಳಿರುತ್ತವೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ.
ವೈಜ್ಞಾನಿಕ ವಿಚಾರಗಳು
ವೈಜ್ಞಾನಿಕ ಹೆಸರು – ಸಂಟಲಮ್ ಅಲ್ಬಮ್ ( Santalum album)
ಆಂಗ್ಲ ಹೆಸರು – ಸ್ಯಾಂಡಲ್ ವುಡ್ ( sandal wood )
ಶ್ರೀಗಂಧದ ಮರದಲ್ಲಿ ಸ್ಯಾಂಟಲೋಲ್ (Santalol) ಎಂಬ ರಾಸಾಯನಿಕ ಅಂಶವಿದ್ದು, ಇದು ಶ್ರೀಗಂಧದ ಅದ್ಭುತ ಸುವಾಸನೆಗೆ ಕಾರಣವಾಗಿದೆ. ಹಾಗೆಯೇ ಸ್ಯಾಂಟಲಿಲ್ ಅಸಿಟೇಟ್ (Santalyl acetate) ಎಂಬ ಮತ್ತೊಂದು ರಾಸಾಯನಿಕ ಅಂಶಗಳು ಸಹ ಇವೆ.
ಶ್ರೀಗಂಧದ ಆರೋಗ್ಯಕರ ಉಪಯೋಗಗಳು
1. ಚರ್ಮದ ಅರೋಗ್ಯ ಹಾಗೂ ಸಮಸ್ಯೆಗಳಿಗೆ ಶ್ರೀಗಂಧದ ಉಪಯೋಗಗಳು
- ಶ್ರೀಗಂಧದ ಒಂದು ತುಂಡನ್ನು ಹಾಕಿ ಕಾಯಿಸಿದ ನೀರಿನಿಂದ ಸ್ನಾನ ಮಾಡಿದರೆ, ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ, ಹಾಗೆಯೇ ಯಾವುದೇ ನವೆ, ಕಜ್ಜಿ, ಬಿಳಿ ಕಲೆಗಳ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ.
- ಕಜ್ಜಿ, ನವೆ, ಗುಳ್ಳೆಗಳು ಮತ್ತು ಬಿಳಿ ಕಲೆ ಅಥವಾ ಚಿಬ್ಬಲಗಳು ಇರುವ ಜಾಗಕ್ಕೆ ಗಂಧವನ್ನು ತೇಯ್ದು ಹಚ್ಚಿದರೆ, ಎಲ್ಲವೂ ಕ್ರಮೇಣ ಕಡಿಮೆಯಾಗುತ್ತದೆ. ಇದು ಚರ್ಮಕ್ಕೆ ತಂಪನ್ನು ಸಹ ನೀಡುತ್ತದೆ.
- ಕಜ್ಜಿ, ನವೆ, ಗುಳ್ಳೆ ಹಾಗೂ ಚಿಬ್ಬಲಗಳಿಗೆ ಗಂಧವನ್ನು ಸ್ವಲ್ಪ ಮೊಸರಿನಲ್ಲಿ ತೇಯ್ದು ಹಚ್ಚಿದರೆ ಸಮಸ್ಯೆಗಳು ತ್ವರಿತವಾಗಿ ಗುಣವಾಗುತ್ತದೆ.
- ಚರ್ಮ ಒಡೆಯುವ ಸಮಸ್ಯೆಯು ಚಳಿಗಾಲಕ್ಕೆ ಸಾಮಾನ್ಯವಾಗಿದೆ. ಆ ಸಮಯದಲ್ಲಿ ಶ್ರೀಗಂಧದ ಚಕ್ಕೆಯನ್ನು ಒಣಗಿಸಿ ಕುಟ್ಟಿ ಪುಡಿ ಮಾಡಿ, ಬೆಣ್ಣೆಯಲ್ಲಿ ಬೆರೆಸಿ ಚರ್ಮಕ್ಕೆ ಹಚ್ಚಬೇಕು. ಇದರಿಂದ ಚರ್ಮ ಒಡೆಯುವ ಸಮಸ್ಯೆ ಕಡಿಮೆಯಾಗಿ, ಉತ್ತಮ ಕಾಂತಿ ಕೂಡ ಬರುತ್ತದೆ.
- ಬಿಳಿಯ ಕಲೆಗಳು ಅಥವಾ ಚಿಬ್ಬಲಗಳನ್ನು ನೀವಾರಿಸಲು ಶ್ರೀಗಂಧ ಮತ್ತು ಬಜೆಯನ್ನು ಮಜ್ಜಿಗೆಯಲ್ಲಿ ತೇಯ್ದು ಕಲೆಗಳ ಮೇಲೆ ಹಚ್ಚಬೇಕು. ಇದನ್ನು ದಿನ ನಿತ್ಯ ಕಲೆಗಳು ಕಡಿಮೆಯಾಗುವವರೆಗೂ ಮಾಡಬೇಕು.
- ಸಿಡುಬು ಬಂದಾಗ ಅದರ ನವೆ, ಕೆರೆತ ಮತ್ತು ಉರಿಯನ್ನು ಕಡಿಮೆ ಮಾಡಲು ಗಂಧವನ್ನು ತೇಯ್ದು ಹಚ್ಚಬೇಕು.
- ಮೊಡವೆಗಳ ನಿವಾರಣೆಗೂ ಶ್ರೀಗಂಧ ಉತ್ತಮ ಮದ್ದಾಗಿದೆ. ಶ್ರೀಗಂಧ ಮತ್ತು ಅರಿಶಿಣದ ಕೊಂಬನ್ನು ಸ್ವಲ್ಪ ಹಸಿ ಹಾಲಿನಲ್ಲಿ ತೇಯ್ದು ಮೊಡವೆಗಳ ಮೇಲೆ ಹಚ್ಚಬೇಕು. ಕ್ರಮೇಣ ಪ್ರತಿನಿತ್ಯ ಮಾಡುವುದರಿಂದ ಮೊಡವೆಗಳು ಕಡಿಮೆಯಾಗುತ್ತದೆ.
2. ಗಂಟಲು ಒಣಗುವಿಕೆ ಅಥವಾ ಬಾಯಾರಿಕೆ ನಿವಾರಣೆಗೆ ಶ್ರೀಗಂಧದ ಪರಿಹಾರಗಳು
- ಎಷ್ಟೇ ನೀರು ಕುಡಿದರು ತಣಿಯದ ಬಾಯಾರಿಕೆಗೆ ಸ್ವಲ್ಪ ಶ್ರೀಗಂಧವನ್ನು ತೇಯ್ದು ಎಳೆನೀರಿಗೆ ಬೆರೆಸಿ ಕುಡಿಯುವುದರಿಂದ ಬಾಯಾರಿಕೆ ನೀಗಿ, ದೇಹವು ತಂಪಾಗುತ್ತದೆ.
- ಕುದಿಸಿದ ಬಿಸಿ ಹಾಲಿಗೆ ಸ್ವಲ್ಪ ಗಂಧವನ್ನು ತೇಯ್ದು ಹಾಕಿ ಕಲಸಿ, ಕುಡಿಯುವುದರಿಂದ ಬಾಯಾರಿಕೆ ನಿವಾರಣೆಯಗುತ್ತದೆ.
3. ಜ್ವರದ ನಿವಾರಣೆಗೆ ಶ್ರೀಗಂಧದ ಪರಿಹಾರಗಳು
- ಜ್ವರ ಬಂದಾಗ ಅಥವಾ ಜ್ವರ ಬಂದು ಹೋದ ಮೇಲೆ ಇರುವ ಸುಸ್ತಿಗೆ ಒಂದು ಸುಲಭ ಪರಿಹಾರವೆಂದರೆ ಒಂದು ಲೋಟ ಬಿಸಿ ನೀರಿಗೆ, ಸ್ವಲ್ಪ ತೇಯ್ದ ಗಂಧ ಹಾಗೂ ಸ್ವಲ್ಪ ಜೀರಿಗೆ ಪುಡಿಯನ್ನು ಬೆರೆಸಬೇಕು. ಇದನ್ನು ಅರ್ಧ ಲೋಟ ಗಂಟೆಗೊಮ್ಮೆ ಕುಡಿದರೆ, ಜ್ವರದ ಕಾವು ಬೇಗ ಕಡಿಮೆಯಾಗುತ್ತದೆ.
4. ತಲೆನೋವಿನ ಪರಿಹಾರದಲ್ಲಿ ಶ್ರೀಗಂಧದ ಪಾತ್ರ
- ಸ್ವಲ್ಪ ನೀರು ಹಾಗೂ ಕರ್ಪೂರದ ಜೊತೆಗೆ ಗಂಧವನ್ನು ತೇಯ್ದು ಹಣೆ ಭಾಗಕ್ಕೆ ಹಚ್ಚಿದರೆ ತಲೆ ನೋವು ಬೇಗ ಕಡಿಮೆಯಾಗುತ್ತದೆ. ಹಾಗೆಯೇ ತಲೆ ತಂಪಾಗಿರುತ್ತದೆ.
- ಅತಿ ಗಾಢವಾದ ಬಹು ದಿನದ ತಲೆನೋವಿಗೆ ನಿಂಬೆ ರಸದಲ್ಲಿ ಗಂಧವನ್ನು ತೇಯ್ದು ಹಣೆಗೆ ಹಚ್ಚಿದರೆ ತಲೆನೋವು ಕ್ರಮೇಣ ಕಡಿಮೆಯಾಗುತ್ತದೆ.
5. ಋತುಚಕ್ರ ಸಮಯದ ಹೊಟ್ಟೆ ನೋವಿಗೆ ಶ್ರೀಗಂಧದ ಮದ್ದು.
- ಮುಟ್ಟಿನ ಸಮಯದ ಹೊಟ್ಟೆನೋವಿಗೆ ಇಲ್ಲಿದೆ ಉತ್ತಮ ಪರಿಹಾರ. ತೇಯ್ದ ಶ್ರೀಗಂಧ, ಕೆನ್ನೆಸುಣ್ಣ ಹಾಗೂ ತುಪ್ಪದಲ್ಲಿ ಹುರಿದ ಹಿಂಗು, ಇವು ಮೂರನ್ನು ಚೆನ್ನಾಗಿ ಬೆರೆಸಿ ಋತುಚಕ್ರದ ಮೂರು ದಿನಗಳವರೆಗೆ ಸೇವಿಸಬೇಕು. ಇದು ಅತಿ ಉತ್ತಮ ಮದ್ದಾಗಿದೆ.
6. ಉರಿ ಮೂತ್ರದ ಸಮಸ್ಯೆಗೆ ಉತ್ತಮ ಪರಿಹಾರ ಶ್ರೀಗಂಧದಿಂದ ದೊರೆಯುತ್ತದೆ.
- ಶ್ರೀಗಂಧವನ್ನು ನೀರಿಗೆ ಬೆರೆಸಿ ಕುಡಿಯುವುದರಿಂದ ದೇಹವು ತಂಪಾಗಿ ಉರಿ ಮೂತ್ರದ ಸಮಸ್ಯೆ ಕಡಿಮೆಯಾಗುತ್ತದೆ.
- ಇನ್ನೊಂದು ಮಾರ್ಗವೆಂದರೆ ತೇಯ್ದ ಗಂಧವನ್ನು ಮಜ್ಜಿಗೆಯಲ್ಲಿ ಬೆರೆಸಿ, ಒಂದು ಚಮಚ ಸಕ್ಕರೆ ಸೇರಿಸಿ ಕುಡಿದರೆ ಉರಿಮೂತ್ರವು ಕಡಿಮೆಯಾಗುತ್ತದೆ.
7. ಬಾಯಿಯ ಸಂಪೂರ್ಣ ಆರೋಗ್ಯಕ್ಕೆ ಶ್ರೀಗಂಧ ಬಲು ಉತ್ತಮವಾಗಿದೆ
- ಗಂಧವನ್ನು ತೇಯ್ದು ನೀರಿನಲ್ಲಿ ಕಲಸಬೇಕು. ಇಲ್ಲವೇ ಗಂಧದ ತುಂಡನ್ನು ನೀರಿನಲ್ಲಿ ನೆನೆಸಿ, ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ, ಬಾಯಿಯಲ್ಲಿನ ಹುಣ್ಣು, ದುರ್ಗಂಧ, ಗಂಟಲಿನ ಹುಣ್ಣು ಹಾಗೂ ಕೆರೆತ, ಹಲ್ಲಿನ ಅರೋಗ್ಯಕ್ಕೂ ಉತ್ತಮವಾಗಿದೆ
ಶ್ರೀಗಂಧದ ಇನ್ನೂ ಅನೇಕ ಉಪಯೋಗಗಳ ಬಗೆಗೆ ತಿಯುವುದಾದರೆ….
ಶ್ರೀಗಂಧವನ್ನು ಚೆನ್ನಾಗಿ ತೇಯ್ದು ಒಂದು ಲೋಟ ಹಾಲಿನ ಜೊತೆಗೆ ಬೆರೆಸಿ ತಲೆಗೆ ಹಚ್ಚುವುದರಿಂದ ತಲೆಯ ಮೆದುಳು ತಂಪಾಗುತ್ತದೆ. ಹಾಗೆಯೇ ಅತಿಯಾಗಿ ವಾಂತಿಯಾಗುತ್ತಿದ್ದರೆ ನೆಲ್ಲಿಕಾಯಿ ಜಜ್ಜಿ ರಸ ತೆಗೆದು, ಆ ರಸದೊಡನೆ ಗಂಧವನ್ನು ತೇಯಬೇಕು. ನಂತರ ಜೇನುತುಪ್ಪಡೊಡನೆ ಸೇವಿಡಬೇಕು. ಹೀಗೆ ಮಾಡಿದರೆ ವಾಂತಿ ತ್ವರಿತವಾಗಿ ಕಡಿಮೆಯಾಗುತ್ತದೆ. ಮತ್ತೆ ಕೆಮ್ಮು ಬಂದಾಗ ಶ್ರೀಗಂಧವನ್ನು ಜೇನುತುಪ್ಪದಲ್ಲಿ ತೇಯ್ದು ಸೇವಿಸಬೇಕು. ಕಿವಿಯಿಂದ ರಸ ಬರುತಿದ್ದರೆ ಗಂಧದ ಎಣ್ಣೆಯನ್ನು ಎರಡು ಹನಿ ಕಿವಿಗೆ ಹಾಕುವುದರಿಂದ ಎಲ್ಲವೂ ಕಡಿಮೆಯಾಗುತ್ತದೆ.
ಶ್ರೀಗಂಧ ಎಂಬ ಹೆಸರು ಕೇಳಲು ಎಷ್ಟು ಆನಂದಕರ, ಹಾಗೆಯೇ ಅದರ ಪರಿಮಳ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. ಸುಗಂಧ ದ್ರವ್ಯಗಳಲ್ಲಿ, ಊದುಬತ್ತಿ ಹಾಗೂ ಹಲವು ಲೋಬಾನಗಳಲ್ಲಿ, ಸೋಪುಗಳಲ್ಲಿ ಕೂಡ ಬಳಸಲಾಗುತ್ತದೆ. ಶ್ರೀಗಂಧದ ಎಣ್ಣೆಯನ್ನು ಕೂಡ ತಯಾರಿಸುತ್ತಾರೆ. ಶ್ರೀಗಂಧಕ್ಕೆ ಮಾರುಕಟ್ಟೆಯಲ್ಲಿ ಅಧಿಕ ಮೌಲ್ಯವುಳ್ಳದಾಗಿದ್ದು, ಅತಿ ಬೇಡಿಕೆಯಲ್ಲಿ ಸಹ ಇದೆ. ಇಂತಹ ಶ್ರೀಗಂಧದ ನಾಡು ನಮ್ಮದು ಎಂಬ ಹೆಮ್ಮೆ ನಮಗೆ. ಶ್ರೀಗಂಧದ ಪರಿಚಯ ಹಾಗೂ ಹಲವು ಉಪಯೋಗಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ, ಒಮ್ಮೆ ಅರಿತುಕೊಂಡು ಉಪಯೋಗ ಪಡೆದುಕೊಳ್ಳಬೇಕು ಎಂಬುದು ನಮ್ಮ ಆಶಯ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.