
ಸೌತೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಮತ್ತು ಫೈಬರ್ ಇದ್ದು ಇದು ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಸೌತೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ಕೆ ಇದ್ದು, ಇದು ಆರೋಗ್ಯವರ್ಧಕವಾಗಿದೆ. ಸೌತೆಕಾಯಿಯಲ್ಲಿ ಪೊಟ್ಯಾಸಿಯಮ್ ಹಾಗು ಆಂಟಿ ಆಕ್ಸಿಡೆಂಟ್ ಗಳಿದ್ದು, ದೇಹದ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸೌತೆಕಾಯಿಯನ್ನು ತಿನ್ನುವುದರಿಂದ ದೇಹವು ತಂಪಾಗಿರುತ್ತದೆ. ಇಂತಹ ಸೌತೆಕಾಯಿಯ ತಂಬುಳಿ ಮತ್ತು ಪಾನಕ ತಯಾರಿಸುವ ವಿಧಾನವನ್ನು ಈ ಲೇಖನದಲ್ಲಿ ಪ್ರಸ್ತುತ ಪಡಿಸಲಾಗಿದೆ.
ಸೌತೆಕಾಯಿ(Cucumber) ತಂಬುಳಿ
ಬೇಕಾಗುವ ಪದಾರ್ಥಗಳು
- ಸೌತೆಕಾಯಿ ಬೀಜದ ಸಮೇತ 1ಕಪ್
- ಕಾಯಿ ತುರಿ 1 ಕಪ್
- ಜೀರಿಗೆ 1 ಚಮಚ
- ಕರಿ ಮೆಣಸು 4
- ಹಸಿ ಮೆಣಸು 2
- ಮೊಸರು 1 ಕಪ್
- ಸಾಸಿವೆ
- ಕರಿಬೇವು
- ತುಪ್ಪ ಹಾಗು ಉಪ್ಪು
ಮಾಡುವ ವಿಧಾನ
ಒಂದು ಪಾತ್ರೆಗೆ ಜೀಜ ಸಹಿತ ಸೌತೆಕಾಯಿಯನ್ನು ಹಾಕಿ ಸ್ವಲ್ಪ ಹುರಿದುಕೊಳ್ಳಬೇಕು. ಇದನ್ನು ಮಿಕ್ಸಿ ಜಾರಿಗೆ ಹಾಕಿ ಕಾಯಿತುರಿ, ಜೀರಿಗೆ, ಕರಿಮೆಣಸು, ಹಸಿ ಮೆಣಸು ಹಾಗೂ ಉಪ್ಪನ್ನು ರುಚಿಗೆ ತಕ್ಕಷ್ಟು ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವನ್ನು ಮೊಸರಿಗೆ ಹಾಕಿ, ಹಿಂಗು ಹಾಕಿ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಟ್ಟರೆ ಸೌತೆಕಾಯಿ ತಂಬುಳಿ ಸಿದ್ಧವಾಗುತ್ತದೆ.
ಪ್ರಯೋಜನಗಳು
- ಜೀರ್ಣಕ್ರಿಯೆಗೆ ಪೂರಕವಾಗಿದ್ದು, ತೂಕ ಇಳಿಸಲು ಪೂರಕವಾಗಿದೆ.
- ಹೆಚ್ಚು ಪೌಷ್ಟಿಕ ಸತ್ವ ಹೊಂದಿದ್ದು ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿವೆ.
- ಸೌತೆಕಾಯಿ ಬೀಜಗಳು ಮೂತ್ರದ ಕಲ್ಲುಗಳನ್ನು ಕರಗಿಸುವ ಶಕ್ತಿ ಹೊಂದಿದ್ದು, ಮೂತ್ರವನ್ನು ಶುದ್ಧಗೊಳಿಸುತ್ತದೆ.
- ಸಕ್ಕರೆ ಅಂಶವನ್ನು ಕೂಡ ರಕ್ತದಲ್ಲಿ ನಿಯಂತ್ರಿಸುತ್ತದೆ.
ಸೌತೆ ಬೀಜದ ಪಾನಕ
ಬೇಕಾಗುವ ಪದಾರ್ಥಗಳು
- ಸೌತೆ ಬೀಜ 4 ಚಮಚ
- ಗುಲಾಬಿ ದಳಗಳು 2 ಚಮಚ
- ಬಿಳಿ ತಾವರೆ ಹೂವಿನ ದಳಗಳು 2 ಚಮಚ
- ಕೆಂಪು ಕಲ್ಲು ಸಕ್ಕರೆ 1 ಚಮಚ
ಮಾಡುವ ವಿಧಾನ
ಗುಲಾಬಿ ಹಾಗು ಬಿಳಿ ತಾವರೆ ಎಲೆಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಸೌತೆ ಬೀಜದ ಒಟ್ಟಿಗೆ ಗುಲಾಬಿ ಹಾಗೂ ಬಿಳಿ ತಾವರೆ ಎಲೆಗಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಶೋಧಿಸಿಕೊಳ್ಳಬೇಕು. ಅದಕ್ಕೆ ಕೆಂಪು ಕಲ್ಲುಸಕ್ಕರೆ ಪುಡಿಯನ್ನು ಬೆರೆಸಬೇಕು. ಅಲ್ಲಿಗೆ ಆರೋಗ್ಯಕರವಾದ ಸೌತೆಕಾಯಿ ಬೀಜದ ಪಾನಕ ಸಿದ್ದವಾಗುತ್ತದೆ.
ಪ್ರಯೋಜನಗಳು
- ಈ ಪಾನಕವನ್ನು ಕುಡಿಯುವುದರಿಂದ ಮೂತ್ರನಾಳದ ಯಾವುದೇ ಸಮಸ್ಯೆ ಕೂಡ ಪರಿಹಾರವಾಗುತ್ತದೆ.
- ಮೂತ್ರಕೋಶದಲ್ಲಿ ಹುಟ್ಟುವ ಕಲ್ಲನ್ನು ಕರಗಿಸಲು ಕೂಡ ಈ ಪಾನಕ ಸಹಾಯಕವಾಗಿದೆ.
- ಉರಿ ಮೂತ್ರ, ಕಟ್ಟು ಮೂತ್ರ ಎಲ್ಲದರಿಂದ ಮುಕ್ತಿ ಕೊಡಿಸುತ್ತದೆ.
- ಪಿತ್ತನಾಶಕ ಕೂಡ ಆಗಿದೆ
- ಹೆಣ್ಣು ಮಕ್ಕಳಲ್ಲಿ ಜಾಸ್ತಿ ಬಿಳಿ ಮುಟ್ಟು ಹೋಗುವಿಕೆಯನ್ನು ನಿಲ್ಲಿಸಲು ಸಹಕಾರಿಯಾಗಿದೆ.
- ಉತ್ತಮ ಜೀರ್ಣ ಕ್ರಿಯೆಗೂ ಉಪಯುಕ್ತವಾಗಿದೆ.
ಸೌತೆಕಾಯಿ ಜ್ಯೂಸ್
ಬೇಕಾಗುವ ಪದಾರ್ಥಗಳು
- ಸೌತೆಕಾಯಿ 1
- ಶುಂಠಿ 2 ತುಂಡು
- ಲಿಂಬು ½ ಹೋಳು
- ಪುದಿನ 5 ಎಲೆಗಳು
- ಉಪ್ಪು
ಮಾಡುವ ವಿಧಾನ
ಒಂದು ಮಿಕ್ಸಿ ಜಾರಿಗೆ ಸಿಪ್ಪೆ ತೆಗೆದು ಹೆಚ್ಚಿಕೊಂಡ ಸೌತೆಕಾಯಿ, 2 ತುಂಡು ಶುಂಠಿ, ಪುದಿನ ಎಲೆಗಳನ್ನು ಹಾಕಿ ಲಿಂಬು ರಸವನ್ನು ಹಿಂಡಬೇಕು. ಆಮೇಲೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ರುಬ್ಬಿಕೊಂಡು ಜ್ಯೂಸ್ ತಯಾರಿಸಬೇಕು. ಇದು ದೇಹಕ್ಕೆ ಅತಿ ತಂಪಾಗಿದ್ದು ನಿತ್ಯ ಒಂದು ಲೋಟ ಕುಡಿಯುವುದು ಈ ಬೇಸಿಗೆಗೆ ಅತಿ ಉತ್ತಮವಾಗಿದೆ.
ಪ್ರಯೋಜನಗಳು
- ಈ ಸೌತೆಕಾಯಿ ಜ್ಯೂಸ್ ಆರೋಗ್ಯವರ್ಧಕವಾಗಿದ್ದು, ದೇಹದ ಉಷ್ಣವನ್ನು ನಿಯಂತ್ರಿಸುತ್ತದೆ.
- ಹಾಗೆಯೇ ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸಿ, ಹೊಸ ಚೈತನ್ಯವನ್ನು ತುಂಬಿಸುತ್ತದೆ.
- ಬೇಸಿಗೆಯ ಬಾಯಾರಿಕೆ, ದಣಿವು, ಆಯಾಸ ಎಲ್ಲವನ್ನು ದೂರಮಾಡಿಸುತ್ತದೆ.
- ಜೀರ್ಣಕ್ರಿಯೆಗೆ ಕೂಡ ಉತ್ತಮವಾಗಿದೆ.
ಸೌತೆಕಾಯಿ ದೋಸೆ
ಬೇಕಾಗುವ ಪದಾರ್ಥಗಳು
- ನೆನೆಸಿದ ಅಕ್ಕಿ 2 ಕಪ್
- ಕಾಯಿತುರಿ ಸ್ವಲ್ಪ
- ತುರಿದ ಸೌತೆಕಾಯಿ 1 ಕಪ್
- ಉಪ್ಪು
ಮಾಡುವ ವಿಧಾನ
ಮೊದಲಿಗೆ ಮಿಕ್ಸಿ ಜಾರಿಗೆ ರಾತ್ರಿಯೆ ನೆನೆಸಿದ ಅಕ್ಕಿ, ಜೊತೆಗೆ ಕಾಯಿತುರಿ ಹಾಗೂ ಸೌತೆಕಾಯಿಯನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ದೋಸೆ ಹಿಟ್ಟು ನೀರುದೋಸೆಯ ಹದಕ್ಕೆ ಬರುವಷ್ಟು ನೀರನ್ನು ಸೇರಿಸಿಸಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ, ಕಾದ ದೋಸೆ ಹೆಂಚಿನ ಮೇಲೆ ನೀರುದೋಸೆಯ ತರಹ ಹುಯ್ಯಬೇಕು. ಅಲ್ಲಿಗೆ ರುಚಿಕರವಾದ ಸೌತೆಕಾಯಿ ದೋಸೆ ಸಿದ್ದವಾಗುತ್ತದೆ.
ಸೌತೆಕಾಯಿಯನ್ನು ಹಸಿಯಾಗಿ ತಿನ್ನಬಹುದು, ಸಲಾಡ್‌ಗಳಲ್ಲಿ ವಿವಿಧ ತರಕಾರಿಗಳೊಂದಿಗೆ ಬಳಸಬಹುದು ಸ್ಯಾಂಡ್‌ವಿಚ್‌ಗಳಲ್ಲಿ, ಉಪ್ಪಿನಕಾಯಿ ಮಾಡಲು, ಜ್ಯೂಸ್ ತಯಾರಿಸಲು, ಮೊಸರು ಬಜ್ಜಿ ಮಾಡಲು ಹೆಚ್ಚಾಗಿ ಬಳಸುತ್ತಾರೆ. ಸೌತೆಕಾಯಿ ಇಡ್ಲಿ ಹಾಗೂ ದೋಸೆ ಕೂಡ ಅತಿ ಉತ್ತಮವಾಗಿರುತ್ತದೆ. ದೇಹಕ್ಕೆ ಅತೀ ಉತ್ತಮವಾಗಿರುವ ಮೇಲಿನ ರೆಸಿಪಿಗಳನ್ನು ಒಮ್ಮೆ ಮಾಡಿ, ತಿಂದು ಸವಿಯಿರಿ, ಎಂಬುದೊಂದು ಆಶಯ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.