
ಅನ್ನದ ಜೊತೆ ಉತ್ತಮವಾಗಿ ಜೊತೆಯಾಗುವ ಸಾರು ಹಾಗೂ ರಸಂಗಳು ನಮ್ಮ ದಿನನಿತ್ಯದ ಅಡುಗೆಯಲ್ಲಿ ತಯಾರಿಸುತ್ತೇವೆ. ಅಂತಹ ಸಾರು ಹಾಗೂ ರಸಂಗಳ ತಯಾರಿಕಾ ವಿಧಾನಗಳು ಹಾಗೂ ವಿಭಿನ್ನ ರೀತಿಯ ರುಚಿಯನ್ನು ಹೊಂದಲು ಬಳಸಬೇಕಾದ ಸಾಮಗ್ರಿಗಳ ಬಗ್ಗೆ ಅರಿಯಲು, ರಸಂ ಹಾಗೂ ಸಾರುಗಳ ಕೆಲವು ವಿಚಾರಗಳು ಹಾಗೂ ತಯಾರಿಕಾ ವಿಧಾನಗಳ ಬಗ್ಗೆ ಇಂದಿನ ಲೇಖನದಲ್ಲಿ ವಿಶ್ಲೇಷಿಸೋಣ.
ಟೊಮೆಟೊ ರಸಂ
ಬೇಕಾಗುವ ಪದಾರ್ಥಗಳು
- ಟೊಮೆಟೊ 4
- ಒಣ ಮೆಣಸು 3
- ಜೀರಿಗೆ ½ ಚಮಚ
- ಕರಿಮೆಣಸು ½ ಚಮಚ
- ಈರುಳ್ಳಿ 1
- ಬೆಳ್ಳುಳ್ಳಿ 4 ಎಸಳು
- ಕೊತ್ತಂಬರಿ ಸೊಪ್ಪು
- ಬೆಲ್ಲ 1 ಚಮಚ
- ಇಂಗು
- ಉಪ್ಪು
- ಹುಣಸೆ ರಸ 3 ಚಮಚ
- ಎಣ್ಣೆ
- ಸಾಸಿವೆ ½ ಚಮಚ
- ಕರಿಬೇವು
ಮಾಡುವ ವಿಧಾನ
ಮೊದಲಿಗೆ ಟೊಮೆಟೊಗಳನ್ನು ಬೇಯಿಸಿಕೊಂಡು, ಸಿಪ್ಪೆಯನ್ನು ತೆಗೆದುಕೊಳ್ಳಬೇಕು. ಹಾಗೆಯೇ ಟೊಮೆಟೊಗಳನ್ನು ಕಿವುಚಿ ಇಟ್ಟುಕೊಳ್ಳಬೇಕು. ಇನ್ನೊಂದು ಕಡೆಯಲ್ಲಿ ಒಂದು ಕಾವಲಿಗೆ ಒಣಮೆಣಸು, ಕರಿಮೆಣಸು ಹಾಗೂ ಜೀರಿಗೆಯನ್ನು ಸೇರಿಸಿ ಕ್ರಮವಾಗಿ ಸ್ವಲ್ಪ ಎಣ್ಣೆಯ ಜೊತೆಗೆ ಹುರಿದುಕೊಳ್ಳಬೇಕು. ಹುರಿದ ವಸ್ತುಗಳನ್ನು ಮಿಕ್ಸಿ ಜಾರಿಗೆ ಹಾಕಿ ಜೊತೆಗೆ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಸೇರಿಸಿಕೊಂಡು ರುಬ್ಬಿಕೊಳ್ಳಬೇಕು. ಈಗ ಒಂದು ಪಾತ್ರೆಯಲ್ಲಿ ಬೇಯಿಸಿ, ಕಿವುಚಿಕೊಂಡ ಟೊಮೆಟೊ, 2 ಕಪ್ ನೀರು ಹಾಗೂ ಹುಣಸೆ ರಸವನ್ನು ಸೇರಿಸಿ ಕುದಿಸಬೇಕು. ನಂತರ ರುಬ್ಬಿಕೊಂಡ ಮಿಶ್ರಣವನ್ನು ಜೊತೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ, ಕಲಸಿ, ಕುದಿಸಬೇಕು. ಸರಿಯಾಗಿ ಕುದಿ ಬಂದ ನಂತರ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಓಲೆ ಆರಿಸಬೇಕು. ಕೊನೆಯಲ್ಲಿ ಎಣ್ಣೆ, ಸಾಸಿವೆ, ಇಂಗು ಹಾಗೂ ಕರಿಬೇವಿನ ಒಗ್ಗರಣೆ ನೀಡಿದರೆ ರುಚಿಯಾದ ಟೊಮೆಟೊ ರಸಂ ಸವಿಯಲು ಸಿದ್ದವಾಗುತ್ತದೆ.
ಪುದಿನ ರಸಂ
ಬೇಕಾಗುವ ಪದಾರ್ಥಗಳು
- ಪುದಿನ ಸೊಪ್ಪು 1 ಕಟ್ಟು
- ಬೆಳ್ಳುಳ್ಳಿ 3 ಎಸಳು
- ಜೀರಿಗೆ ½ ಚಮಚ
- ಒಣಮೆಣಸು 3
- ಕರಿಮೆಣಸು 6 ಕಾಳು
- ಬೆಲ್ಲ 1 ಚಮಚ
- ಇಂಗು
- ಉಪ್ಪು
- ಹುಣಸೆ ರಸ 1 ಕಪ್
- ಸಾಸಿವೆ
- ಕರಿಬೇವು
- ಎಣ್ಣೆ
ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲೆಯಲ್ಲಿ ಒಣಮೆಣಸು, ಕರಿಮೆಣಸು ಹಾಗೂ ಜೀರಿಗೆಯನ್ನು ಸ್ವಲ್ಪ ಎಣ್ಣೆಯೊಂದಿಗೆ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಒಂದು ಮಿಕ್ಸಿ ಜಾರಿಗೆ ಹುರಿದ ವಸ್ತುಗಳು, ಜೊತೆಗೆ ಬೆಳ್ಳುಳ್ಳಿ ಹಾಗೂ ಶುಚಿಗೊಳಿಸಿದ ಪುದಿನ ಎಲೆಗಳನ್ನು ದಂಟಿನ ಸಮೇತ ಹಾಕಿಕೊಂಡು, ರುಬ್ಬಿಕೊಳ್ಳಬೇಕು. ಇನ್ನೊಂದು ಕಡೆಯಲ್ಲಿ ಒಂದು ಪಾತ್ರೆಗೆ ಒಂದು ಕಪ್ ಹುಣಸೆಹಣ್ಣಿನ ರಸ, ಎರಡು ಕಪ್ ನೀರು, ಇಂಗು, ರುಚಿಗೆ ತಕ್ಕಷ್ಟು ಬೆಲ್ಲ ಹಾಗೂ ಉಪ್ಪನ್ನು ಬೆರೆಸಿ ಕುದಿಸಬೇಕು. ಚೆನ್ನಾಗಿ ಕುದಿ ಬಂದ ಮೇಲೆ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ, ಬೇಕೇನಿಸಿದರೆ ಸ್ವಲ್ಪ ನೀರನ್ನು ಮತ್ತೆ ಸೇರಿಸಿಕೊಂಡು ಕುದಿಸಬೇಕು. ಕೊನೆಯಲ್ಲಿ ಎಣ್ಣೆ, ಸಾಸಿವೆ, ಕರಿಬೇವಿನ ಒಗ್ಗರಣೆಯನ್ನು ನೀಡಿದರೆ ಪುದಿನ ರಸಂ ಸವಿಯಲು ಸಿದ್ದವಾಗುತ್ತದೆ.
ಹುಣಸೆ ಸಾರು
ಬೇಕಾಗುವ ಪದಾರ್ಥಗಳು
- ಹುಣಸೆ ರಸ 2 ಕಪ್
- ಟೊಮೆಟೊ 1
- ಈರುಳ್ಳಿ 1
- ಬೆಳ್ಳುಳ್ಳಿ 5 ಎಸಳು
- ಸಾಸಿವೆ ½ ಚಮಚ
- ಜೀರಿಗೆ ½ ಚಮಚ
- ಮೆಂತೆ ½ ಚಮಚ
- ಒಣಮೆಣಸು 4
- ಬೆಲ್ಲ 2 ಚಮಚ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಎಣ್ಣೆ
- ಉಪ್ಪು
ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲೆಯಲ್ಲಿ ಒಣಮೆಣಸು, ಜೀರಿಗೆ, ಮೆಂತೆಯನ್ನು ಸ್ವಲ್ಪ ಎಣ್ಣೆಯೊಂದಿಗೆ ಚೆನ್ನಾಗಿ ಹುರಿದುಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ಹುರಿದ ವಸ್ತುಗಳನ್ನು ಹಾಕಿ, ಜೊತೆಗೆ ಬೆಳ್ಳುಳ್ಳಿ ಸೇರಿಸಿಕೊಂಡು ನುಣ್ಣನೆ ರುಬ್ಬಿಕೊಳ್ಳಬೇಕು. ಇನ್ನೊಂದು ಕಡೆಯಲ್ಲಿ ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಕರಿಬೇವಿನ ಒಗ್ಗರಣೆಯನ್ನು ನೀಡಿ, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗೂ ಟೊಮೆಟೊಗಳನ್ನು ಸೇರಿಸಿ ಹುರಿದುಕೊಳ್ಳಬೇಕು. ನಂತರ ಹುಣಸೆ ರಸವನ್ನು, ರುಬ್ಬಿಕೊಂಡ ಮಸಾಲೆಯನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ ಕುದಿಸಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಹಾಕಿದರೆ ಹುಣಸೆ ಸಾರು ಸವಿಯಲು ಸಿದ್ದವಾಗುತ್ತದೆ.
ಶುಂಠಿ ಸಾರು
ಬೇಕಾಗುವ ಪದಾರ್ಥಗಳು
- ಶುಂಠಿ 2
- ಒಣ ಮೆಣಸು 3
- ಕರಿಮೆಣಸು ½ ಚಮಚ
- ಜೀರಿಗೆ ½ ಚಮಚ
- ಹುಣಸೆ ರಸ 1 ಕಪ್
- ಬೆಲ್ಲ 1 ಚಮಚ
- ಉಪ್ಪು
- ಇಂಗು
- ಕೊತ್ತಂಬರಿ ಸೊಪ್ಪು
- ಎಣ್ಣೆ
- ಕರಿಬೇವು 10
ಮಾಡುವ ವಿಧಾನ
ಮೊದಲಿಗೆ ಒಣಮೆಣಸು, ಕರಿಮೆಣಸು, ಜೀರಿಗೆ ಹಾಗೂ ಕರಿಬೇವನ್ನು ಚೆನ್ನಾಗಿ ಸ್ವಲ್ಪ ಎಣ್ಣೆಯ ಜೊತೆಗೆ ಹುರಿದುಕೊಳ್ಳಬೇಕು. ಅನಂತರ ಮಿಕ್ಸಿ ಜಾರಿಗೆ ಹುರಿದ ವಸ್ತುಗಳನ್ನು ಸೇರಿಸಿ ಪುಡಿ ಮಾಡಿಕೊಳ್ಳಬೇಕು. ಜೊತೆಗೆ ಶುಂಠಿಯನ್ನು ಸೇರಿಸಿ ರುಬ್ಬಿಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ ಒಂದು ಕಪ್ ಹುಣಸೆ ರಸ, ಎರಡು ಕಪ್ ನೀರು, ಸ್ವಲ್ಪ ಇಂಗು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ ಕುದಿಸಬೇಕು. ಕುದಿಯುವಾಗ ರುಬ್ಬಿಕೊಂಡ ಮಿಶ್ರಣವನ್ನು ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ಅಲ್ಲಿಗೆ ರುಚಿಯಾದ ಹಾಗೂ ಆರೋಗ್ಯಕರವಾದ ಶುಂಠಿ ಸಾರು ಸವಿಯಲು ಸಿದ್ದವಾಗುತ್ತದೆ.
ಈರುಳ್ಳಿ ಟೊಮೆಟೊ ಸಾರು
ಬೇಕಾಗುವ ಪದಾರ್ಥಗಳು
- ಈರುಳ್ಳಿ 2
- ಟೊಮೆಟೊ 3
- ಶುಂಠಿ ½ ತುಂಡು
- ಹಸಿಮೆಣಸು 2
- ಬೆಳ್ಳುಳ್ಳಿ 6 ಎಸಳು
- ಖಾರದ ಪುಡಿ ½ ಚಮಚ
- ದನಿಯ ಪುಡಿ ¼ ಚಮಚ
- ಸಾಸಿವೆ ½ ಚಮಚ
- ಜೀರಿಗೆ ½ ಚಮಚ
- ಹುಣಸೆ ರಸ 2 ಚಮಚ
- ಎಣ್ಣೆ
- ಕರಿಬೇವು
- ಇಂಗು
- ಕೊತ್ತಂಬರಿ ಸೊಪ್ಪು
- ಉಪ್ಪು
ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ, ಎಣ್ಣೆ ಕಾದ ನಂತರ, ಸಾಸಿವೆ, ಕರಿಬೇವು, ಹಿಂಗು ಹಾಕಬೇಕು. ನಂತರ ಸಣ್ಣಗೆ ಹೆಚ್ಚಿದ ಟೊಮೆಟೊ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು ಎಲ್ಲವನ್ನು ಹಾಕಿ ಕೈ ಆಡಿಸಿ, ಸಣ್ಣ ಉರಿಯಲ್ಲಿ ಬೇಯಿಸಬೇಕು. ತರಕಾರಿಗಳು ಚೆನ್ನಾಗಿ ಬೆಂದ ನಂತರ ದನಿಯ ಪುಡಿ ಹಾಗೂ ಖಾರದ ಪುಡಿಗಳನ್ನು ಸೇರಿಸಬೇಕು. ನಂತರ ನೀರನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ಕೊನೆಯಲ್ಲಿ ಹುಣಸೆರಸ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಕುದಿಸಬೇಕು. ಸರಿಯಾಗಿ ಕುಡಿ ಬಂದ ನಂತರ ಓಲೆ ಅರಿಸಿದರೆ ಈರುಳ್ಳಿ ಟೊಮೆಟೊ ಸಾರು ಸವಿಯಲು ಸಿದ್ದವಾಗುತ್ತದೆ.
ಬೆಳ್ಳುಳ್ಳಿ ಸಾರು
ಬೇಕಾಗುವ ಪದಾರ್ಥಗಳು
- ಬೆಳ್ಳುಳ್ಳಿ 15 ಎಸಳು
- ಒಣ ಮೆಣಸು 3
- ಕರಿಮೆಣಸು ½ ಚಮಚ
- ಜೀರಿಗೆ ½ ಚಮಚ
- ಹುಣಸೆ ರಸ 1 ಕಪ್
- ಬೆಲ್ಲ 1 ಚಮಚ
- ಉಪ್ಪು
- ಇಂಗು
- ಕೊತ್ತಂಬರಿ ಸೊಪ್ಪು
- ಎಣ್ಣೆ
- ಕರಿಬೇವು 10
ಮಾಡುವ ವಿಧಾನ
ಮೊದಲಿಗೆ ಒಣಮೆಣಸು, ಕರಿಮೆಣಸು, ಜೀರಿಗೆ ಹಾಗೂ ಕರಿಬೇವನ್ನು ಚೆನ್ನಾಗಿ ಸ್ವಲ್ಪ ಎಣ್ಣೆಯ ಜೊತೆಗೆ ಹುರಿದುಕೊಳ್ಳಬೇಕು. ಅನಂತರ ಮಿಕ್ಸಿ ಜಾರಿಗೆ ಹುರಿದ ವಸ್ತುಗಳನ್ನು ಸೇರಿಸಿ ಪುಡಿ ಮಾಡಿಕೊಳ್ಳಬೇಕು. ಜೊತೆಗೆ ಬೆಳ್ಳುಳ್ಳಿಯನ್ನು ಸೇರಿಸಿ ರುಬ್ಬಿಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ ಒಂದು ಕಪ್ ಹುಣಸೆ ರಸ, ಎರಡು ಕಪ್ ನೀರು, ಸ್ವಲ್ಪ ಇಂಗು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ ಕುದಿಸಬೇಕು. ಕುದಿಯುವಾಗ ರುಬ್ಬಿಕೊಂಡ ಮಿಶ್ರಣವನ್ನು ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ಅಲ್ಲಿಗೆ ರುಚಿಯಾದ ಹಾಗೂ ಆರೋಗ್ಯಕರವಾದ ಬೆಳ್ಳುಳ್ಳಿ ಸಾರು ಸವಿಯಲು ಸಿದ್ದವಾಗುತ್ತದೆ.
ಸುವರ್ಣ ಗಡ್ಡೆಯ ಸಾರು
ಬೇಕಾಗುವ ಪದಾರ್ಥಗಳು
- ಸುವರ್ಣ ಗಡ್ಡೆ 1 ಕಪ್
- ಕಡ್ಲೆಬೇಳೆ 1 ಕಪ್
- ಈರುಳ್ಳಿ 2
- ಟೊಮೆಟೊ 1
- ಹಸಿಮೆಣಸು 2
- ಖಾರದ ಪುಡಿ ½ ಚಮಚ
- ದನಿಯ ಪುಡಿ ½ ಚಮಚ
- ಜೀರಿಗೆ ಪುಡಿ ¼ ಚಮಚ
- ಹುಣಸೆ ರಸ 2 ಚಮಚ
- ಎಣ್ಣೆ
- ಉಪ್ಪು
- ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಕಡಲೆ ಬೇಳೆಯನ್ನು ಮೊದಲು ಚೆನ್ನಾಗಿ ಬೇಯಿಸಿಕೊಳ್ಳಬೇಕು. ಹಾಗೆಯೇ ಸುವರ್ಣ ಗಡ್ಡೆಯನ್ನು ಕೂಡ ಬೇಯಿಸಿ ತೆಗೆದಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗೂ ಟೊಮೆಟೊವನ್ನು ಸೇರಿಸಿ ಕೈ ಆಡಿಸಬೇಕು. ನಂತರ ಹಸಿಮೆಣಸನ್ನು ಸೇರಿಸಬೇಕು. ಹಾಗೆಯೇ ಖಾರದ ಪುಡಿ, ದನಿಯ ಪುಡಿ ಹಾಗೂ ಜೀರಿಗೆ ಪುಡಿಯನ್ನು ಸೇರಿಸಿಕೊಳ್ಳಬೇಕು. ನಂತರ ಬೇಯಿಸಿದ ಕಡ್ಲೆಬೇಳೆ ಹಾಗೂ ಸುವರ್ಣಗಡ್ಡೆಯನ್ನು ಸೇರಿಸಿ, ಹುಣಸೆರಸವನ್ನು ಸೇರಿಸಬೇಕು. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಕುದಿಸಬೇಕು. ಅಲ್ಲಿಗೆ ಸುವರ್ಣ ಗಡ್ಡೆಯ ಸಾರು ಸವಿಯಲು ಸಿದ್ದವಾಗುತ್ತದೆ.
ಅಲಸಂದೆ ಬೀಜದ ತಿಳಿಸಾರು
ಬೇಕಾಗುವ ಪದಾರ್ಥಗಳು
- ಅಲಸಂದೆ ಬೀಜ 1 ಕಪ್
- ಹುಣಸೆ ರಸ 2 ಚಮಚ
- ಒಣಮೆಣಸು 2
- ಇಂಗು ಸ್ವಲ್ಪ
- ಕರಿಬೇವು
- ಸಾಸಿವೆ
- ಎಣ್ಣೆ
- ಉಪ್ಪು
ಮಾಡುವ ವಿಧಾನ
ಅಲಸಂದೆ ಬೀಜವನ್ನು ರಾತ್ರಿ ನೆನೆಸಿ ಇಡಬೇಕು. ಬೆಳಿಗ್ಗೆ ಅಲಸಂದೆ ಬೀಜವನ್ನು ಕುಕ್ಕರ್ ನಲ್ಲಿ 2 ಕಪ್ ನೀರಿನೊಂದಿಗೆ 2 ವಿಸಿಲ್ ತೆಗೆಯಬೇಕು. ನಂತರ ಎಲ್ಲವನ್ನು ಒಂದು ಪಾತ್ರೆಗೆ ವರ್ಗಾಯಿಸಿ ಹುಣಸೆರಸ, ಉಪ್ಪನ್ನು ಸೇರಿಸಿ ಕುದಿಸಬೇಕು. ಕೊನೆಯಲ್ಲಿ ಎಣ್ಣೆ, ಒಣಮೆಣಸು, ಸಾಸಿವೆ, ಇಂಗು ಹಾಗೂ ಕರಿಬೇವಿನ ಒಗ್ಗರಣೆಯನ್ನು ನೀಡಬೇಕು. ಅಲ್ಲಿಗೆ ಅಲಸಂದೆ ಬೀಜದ ತಿಳಿಸಾರು ಸವಿಯಲು ಸಿದ್ದವಾಗುತ್ತದೆ.
ಕೆಂಪುಕಡ್ಲೆ ಸಾರು
ಬೇಕಾಗುವ ಪದಾರ್ಥಗಳು
- ಕೆಂಪು ಕಡ್ಲೆ 1 ಕಪ್
- ಈರುಳ್ಳಿ 1
- ಟೊಮೆಟೊ 1
- ಎಣ್ಣೆ
- ಖಾರದ ಪುಡಿ 1 ಚಮಚ
- ದನಿಯ ಪುಡಿ ½ ಚಮಚ
- ತೆಂಗಿನ ತುರಿ 1 ಕಪ್
- ಉಪ್ಪು
- ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಕೆಂಪುಕಡ್ಲೆಯನ್ನು ರಾತ್ರಿಯೆ ನೆನೆಸಿ ಬೆಳಗ್ಗೆ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಕುಕ್ಕರ್ ನಲ್ಲಿ ಹಾಕಿ 2 ವಿಸಿಲ್ ತೆಗೆದರೆ ಕಡ್ಲೆ ಚೆನ್ನಾಗಿ ಬೇಯುತ್ತದೆ. ಮೊದಲಿಗೆ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ತೆಂಗಿನ ಕಾಯಿ ತುರಿಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಮಿಕ್ಸಿಯಲ್ಲಿ ಒಂದು ಸುತ್ತು ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ನಂತರ ಅದೇ ಬಾಣಲೆಗೆ ಎಣ್ಣೆ ಹಾಕಿ, ಬಿಸಿಯಾದ ನಂತರ ಹೆಚ್ಚಿದ ಈರುಳ್ಳಿ ಹಾಗೂ ಟೊಮೆಟೊವನ್ನು ಸೇರಿಸಿ ಬೇಯುವ ತನಕ ಹುರಿಯಬೇಕು. ನಂತರ ಖಾರದ ಪುಡಿ ಹಾಗೂ ದನಿಯ ಪುಡಿಯನ್ನು ಸೇರಿಸಿ ಕೈ ಆಡಿಸಬೇಕು. ನಂತರ ರುಬ್ಬಿದ ತೆಂಗಿನ ಕಾಯಿ ತುರಿಯ ಮಿಶ್ರಣ, ಬೇಯಿಸಿದ ಕಡ್ಲೆ ಎಲ್ಲವನ್ನು ಸೇರಿಸಿ ಕೈ ಆಡಿಸಬೇಕು. ಈಗ ಸ್ವಲ್ಪ ಬೇಕಾದಲ್ಲಿ ನೀರನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ, ಮೇಲೆ ಕೊತ್ತಂಬರಿ ಸೊಪ್ಪನ್ನು ಹಾಕಿ, ಕುದಿಸಿದರೆ ಕೆಂಪುಕಡ್ಲೆ ಸಾರು ಸವಿಯಲು ಸಿದ್ದವಾಗುತ್ತದೆ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.